ಐದು ಗ್ಯಾರಂಟಿಗಳಿಗೆ ೫೮ ಸಾವಿರ ಕೋಟಿ ವ್ಯಯವಾಗುತಿದ್ದು ಇದು ಸರ್ಕಾರಕ್ಕೆ ಹೊರೆಯಾಗುತ್ತಿರುವುದರಿಂದ ಅಭಿವೃದ್ಧಿಗೂ ತೊಡಕಾಗುತ್ತಿದೆ. ಅರ್ಹರಿಗೆ ಮಾತ್ರ ಈ ಯೋಜನೆಗಳ ಲಾಭ ತಲುಪುವಂತೆ ಮಾಡಿ ಅನರ್ಹರನ್ನು ಫಲಾನುಭವಿಗಳ ಪಟ್ಟಿಯಿಂದ ಹೊರಗಿಟ್ಟರೆ ಆ ಹಣವನ್ನು ಅಭಿವೃದ್ಧಿಗೆ ಬಳಸಬಹುದು ಎಂದು ಪುನರುಚ್ಚರಿಸಿರುವ ಕಾಂಗ್ರೆಸ್ ಹಿರಿಯ ನಾಯಕ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ.ದೇಶಪಾಂಡೆ ತಾನು ಗ್ಯಾರಂಟಿ ಯೋಜನೆಗಳ ವಿರೋಧಿಯಲ್ಲ ಎಂದು ಹೇಳಿದ್ದಾರೆ.
ಸಿದ್ಧಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಸರ್ಕಾರಕ್ಕೆ ಸವಾಲುಗಳಿವೆ, ಆಡಳಿತ ಸುಧಾರಣಾ ಕ್ರಮಗಳ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದೇನೆ. ನಾನು ಮುಖ್ಯಮಂತ್ರಿ ಅಭ್ಯರ್ಥಿ, ಗ್ಯಾರಂಟಿ ಯೋಜನೆಗಳ ವಿರೋಧಿ ಎಂದು ಬಿಂಬಿಸಲಾಗುತ್ತಿದೆ. ಮುಖ್ಯಮಂತ್ರಿ ಅಭ್ಯರ್ಥಿ ವಿಚಾರದಲ್ಲಿ ವಿವರಣೆ ನೀಡಿದ್ದೇನೆ. ಕೆಲವು ಮಾಧ್ಯಮಗಳು ಒಂದು ಹೇಳಿದರೆ ಮತ್ತೊಂದು ಪ್ರಕಟಿಸುತ್ತಿವೆ. ಎಂದು ಮಾಧ್ಯಮಗಳಿಗೆ ನಯವಾಗಿ ಕುಟುಕಿದ ಅವರು ನಾನು ಬಡವರ ವಿರೋಧಿಯಲ್ಲ, ಅರ್ಹರಿಗೆ ಗ್ಯಾರಂಟಿ ಅಥವಾ ಇತರ ಯೋಜನೆಗಳ ಲಾಭ ಸಿಗಲಿ, ಗ್ಯಾರಂಟಿ, ಬಿ.ಪಿ.ಎಲ್. ಅನರ್ಹರನ್ನು ಹೊರಗಿಟ್ಟರೆ ಆ ಹಣದಲ್ಲಿ ಅಭಿವೃದ್ಧಿ ಮಾಡಬಹುದು ಎನ್ನುವುದು ನನ್ನ ಅನಿಸಿಕೆ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಆಡಳಿತ ಸುಧಾರಣಾ ಆಯೋಗದ ವರದಿಯಲ್ಲಿ ಕೂಡಾ ಈ ಬಗ್ಗೆ ಪ್ರಸ್ಥಾಪಿಸಿದ್ದೇನೆ ಅದರಲ್ಲಿ ತಪ್ಪೇನಿದೆ? ಅನರ್ಹರಿಗೆ ಅನುಕೂಲ ಬೇಡ, ಅರ್ಹರಿಗೆ ಕೊಡಿ ಗ್ಯಾರಂಟಿಗಳ ಪ್ರಮಾಣ ನಿಯಂತ್ರಿಸಿ ಎಂದು ಪ್ರಾಮಾಣಿಕವಾಗಿ ಹೇಳಿದರೆ ಮಾಧ್ಯಮಗಳ್ಯಾಕೆ ನನ್ನನ್ನು ಗುರಿಯಾಗಿಸುತ್ತಿವೆ. ಎಂದು ವಿವರಿಸುತ್ತಾ ಆಕ್ಷೇಪಿಸಿದರು.