





ನನ್ನ ಸಹೋದ್ಯೋಗಿಗಳ ಸಹಕಾರ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಪ್ರಾಮಾಣಿಕ ಕೆಲಸಗಳಿಂದ ನನಗೆ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಬಂದಿದೆ. ಇದನ್ನು ನನ್ನ ಇಲಾಖೆಯ ಸಿಬ್ಬಂದಿಗಳಿಗೇ ಅರ್ಪಿಸುತ್ತೇನೆ ಎಂದಿರುವ ಸಿದ್ದಾಪುರ ತಾಲೂಕಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ತಲಕೊಪ್ಪ ಈ ಪ್ರಶಸ್ತಿ ನನ್ನ ಜವಾಬ್ಧಾರಿ ಹೆಚ್ಚಿಸಿದೆ ಎಂದು ವಿನಮ್ರವಾಗಿ ತಿಳಿಸಿದ್ದಾರೆ.

ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪಡೆದಿರುವ ಬಗ್ಗೆ ಸಮಾಜಮುಖಿ ಡಾಟ್ ನೆಟ್ ಪ್ರತಿನಿಧಿ ಜೊತೆ ಮಾತನಾಡಿದ ಅವರು ಸಿಬ್ಬಂದಿಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡಿಸುವುದು ಮುಖ್ಯ ನಾವು ಇಲಾಖೆಯ ಮಾಸಿಕ ಗುರಿಗಳನ್ನು ಮುಟ್ಟಿದ್ದೇವೆ. ವಾರ್ಷಿಕ ಗುರಿಗಳಲ್ಲೂ ನಾವು ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿದ್ದೇವೆ. ನರೇಗಾ, ತೆರಿಗೆ ವಸೂಲಾತಿ ವಸತಿ ಯೋಜನೆ ಹೀಗೆ ಇಲಾಖೆಯ ಕೆಲಸ, ತಾಲೂಕಿನ ಪ್ರಗತಿ ಎಲ್ಲದರಲ್ಲೂ ನಮ್ಮ ಸಾಧನೆ ಮೊದಲ ಸ್ಥಾನದಲ್ಲಿರಲು ನಮ್ಮ ಸಿಬ್ಬಂದಿಗಳೇ ಕಾರಣ ಪ್ರಶಸ್ತಿ ಸಾಂಕೇತಿಕವಾಗಿ ನನಗೆ ದಕ್ಕಿದ್ದರೂ ಅದು ನಮ್ಮ ಸಿಬ್ಬಂದಿಗಳಿಗೇ ಸಲ್ಲಬೇಕು ಎಂದರು.

ಜಿಲ್ಲೆಯ ಕೆಲವೆಡೆ ಕೆಲಸ ಮಾಡಿರುವ ಅನುಭವ ನನಗಿದೆ, ಆದರೆ ಶಿರಸಿ-ಸಿದ್ದಾಪುರದ ಜನತೆ ಇಲಾಖೆಯ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಾರೆ. ಉತ್ತಮ ವ್ಯವಸ್ಥೆ,ಸ್ಫಂದಿಸುವ ಜನತೆ, ನೌಕರರ ಸಹಕಾರ ಇವುಗಳಿಂದ ನನ್ನ ತಾಲೂಕಿಗೆ ಈ ಗೌರವ ಸಿಕ್ಕಿದೆ. ಇದೇ ತಾಲೂಕಿನ ಪ್ರಜೆಯಾಗಿ ನನಗೆ ಜವಾಬ್ಧಾರಿ ಹೆಚ್ಚು ಹುಟ್ಟೂರಲ್ಲೇ ಇರುವುದರಿಂದ ಕೆಲಸ, ಪ್ರಗತಿ ಸಾಧನೆಗೆ ಈ ವಾತಾವರಣ ಪೂರಕವಾಗಿದೆ ಎಂದು ವಿವರಿಸಿದ ಅವರು ಗ್ರಾ.ಪಂ. ಕಾರ್ಯದರ್ಶಿಯಿಂದ ಕಾರ್ಯನಿರ್ವಹಣಾಧಿಕಾರಿವರೆಗೆ ಉತ್ತಮ ಸೇವೆ ಮಾಡುವ ಸಂಕಲ್ಪದಿಂದ ಬಡವರು, ಅಸಹಾಯಕರು, ಅವಶ್ಯವಿದ್ದವರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕೆಲಸಮಾಡಿರುವ ನನ್ನ ಅಳಿಲು ಸೇವೆಯನ್ನು ಗುರುತಿಸಿದ ಹಿರಿಯ ಅಧಿಕಾರಿಗಳು, ಇಲಾಖೆಗೆ ನಾನೂ ಆಬಾರಿಯಾಗಿದ್ದೇನೆ ಎಂದರು.


ಸಿದ್ಧಾಪುರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾಸಿಕ ಪ್ರಗತಿ ಪ್ರತಿಶತ೮೮,ವಾರ್ಷಿಕ ಪ್ರಗತಿ ಗುರಿಯ ಪ್ರತಿಶತ ೯೯ ಇವು ನಮ್ಮ ಕೆಲಸದ ದಾಖಲೆಗಳು ಈಗಿನ ಪ್ರಶಸ್ತಿ ಮುಂದಿನ ದಿನಗಳಲ್ಲಿ ಇನ್ನಷ್ಟು ಆಸಕ್ತಿಯಿಂದ ಕೆಲಸ ಮಾಡುವ ಉತ್ಸಾಹ ತುಂಬಿದೆ ಎಂದ ದೇವರಾಜ್ ಈ ಕೆಲಸ, ಪ್ರಗತಿಗಳ ಹಿಂದಿರುವ ಸಿಬ್ಬಂದಿಗಳ ಕೊಡುಗೆ ಮರೆಯುವಂತಿಲ್ಲ ಎಂದು ಹೇಳುವುದನ್ನು ಮರೆಯಲಿಲ್ಲ. ಈ ವರೆಗೆ ನನಗೆ ಶಿರಸಿ-ಸಿದ್ಧಾಪುರಗಳಲ್ಲಿ ಉತ್ತಮ ಕೆಲಸ ಮಾಡಲು ಮಾರ್ಗದರ್ಶನ ಮಾಡಿದ ಜನಪ್ರತಿನಿಧಿಗಳೂ ಈ ಪ್ರಶಸ್ತಿಯ ಪಾಲುದಾರರು ಎಂದರು.

