



ಸಿದ್ಧಾಪುರ ತಾಲೂಕಿನ ಹಸ್ವಂತೆಯ ಗ್ರಾಮ ಈಗ ಶೋಕದಲ್ಲಿ ಮುಳುಗಿದೆ. ಅದ್ಭುತ ಕ್ರೀಡಾಪಟು ಸಂತು ಯಾನೆ ಸಂತೋಷ ಸಿರಿವಂತೆಯಲ್ಲಿ ಮೊನ್ನೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದರೆ ಇಂದು ಮಧ್ಯಾಹ್ನ ಗ್ಯಾಸ್ ತುಂಬಿದ್ದ ಲಾರಿಗೆ ಬೈಕ್ ಢಿಕ್ಕಿ ಹೊಡೆದು ಹನುಮಂತ ಎನ್ನುವ ೫೫ ವರ್ಷದ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗಕ್ಕೆ ರವಾನಿಸಲಾಗಿದೆ.

ಸಿದ್ದಾಪುರ ತಾಲೂಕಿನೊಳಗೆ ನುಸುಳುವ ಏಕೈಕ ರಾಷ್ಟ್ರೀಯ ಹೆದ್ದಾರಿ ಬೆಂಗಳೂರು ಹೊನ್ನಾವರ ಹೆದ್ದಾರಿ. ಈ ಹೆದ್ದಾರಿ ಮನ್ಮನೆ ಮೂಲಕ ಸಾಗಿ ಪಶ್ಚಿಮಕ್ಕೆ ಹೊನ್ನಾವರ ಪೂರ್ವಕ್ಕೆ ಸಾಗರ ಸಂಪರ್ಕಿಸುತ್ತದೆ. ಈ ಹೆದ್ದಾರಿಯ ಮನ್ಮನೆ, ಮಾವಿನಗುಂಡಿ,ಗೇರಸೊಪ್ಪ ಸೇರಿದಂತೆ ಕೆಲವು ಕಡೆ ಕಡಿದಾದ ತಿರುವುಗಳಿವೆ. ಇಲ್ಲಿ ಸಂಚರಿಸುವ ವಾಹನ ಸವಾರರೂ ಈ ಪ್ರದೇಶಕ್ಕೆ ಅಪರಿಚಿತರೇ ಇರುತ್ತಾರೆ. ಹೊಸ ಜನ ಈ ರಸ್ತೆಯಲ್ಲಿ ತಮ್ಮ ವಾಹನಗಳನ್ನು ವೇಗವಾಗಿ ಓಡಿಸಿದಾಗ ಆಗುವ ಅಪಾಯ ಹೆಚ್ಚು.

ಹಸ್ವಂತೆಯ ಜನ ಸಿದ್ಧಾಪುರದ ದಕ್ಷಿಣ ಮೂಲೆಯ ಜನ ಸಾಗರ ಅವಲಂಬಿಸಿದಂತೆ ಸಾಗರ, ಶಿವಮೊಗ್ಗಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಇಂಥವರಲ್ಲಿ ಅಮಾಯಕರು, ವೇಗವಾಗಿ ವಾಹನ ಚಲಾಯಿಸುವವರು ಅಪಘಾತಕ್ಕೊಳಗಾಗುವವರು ಹೆಚ್ಚು. ಇತ್ತೀಚಿನ ನಾಲ್ಕು ದಿನಗಳಲ್ಲಿ ಆದ ಈ ಎರಡು ಅಪಘಾತಗಳು ಜನಮಾನಸದಲ್ಲಿ ಭಯ, ಆತಂಕ ಸೃಷ್ಟಿಸಿವೆ. ಈ ನಡುವೆ ಸಿದ್ಧಾಪುರ ಸೇರಿದಂತೆ ಈ ಭಾಗದಲ್ಲಿ ವೇಗವಾಗಿ ವಾಹನ ಓಡಿಸುವ ಯುವಕರು ಸಾವಿಗೀಡಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

