




ಮೂಲಭೂತ ಸೌಲಭ್ಯಗಳ ಪೂರೈಕೆ ಸೇರಿದಂತೆ ಹಲವು ಬೇಡಿಕೆಗಳನ್ನಿಟ್ಟುಕೊಂಡು ಗ್ರಾಮ ಆಡಳಿತಾಧಿಕಾರಿಗಳು ಮತ್ತೆ ಮುಷ್ಕರ ಪ್ರಾರಂಭಿಸಿದ್ದಾರೆ. ಹಿಂದೆ ಗ್ರಾಮ ಆಡಳಿತಾಧಿಗಳ ಮುಷ್ಕರ ಪ್ರಾರಂಭವಾದಾಗ ಸರ್ಕಾರ ಉಪಸಮೀತಿಯೊಂದನ್ನು ರಚಿಸಿ ಬೇಡಿಕೆ ಪರಿಶೀಲಿಸುವುದಾಗಿ ತಿಳಿಸಿತ್ತು. ಈಗ ಅದೇ ಬೇಡಿಕೆಗಳ ಹಿನ್ನೆಲೆಯಲ್ಲಿ ರಾಜ್ಯಸಂಘ ಕರೆಕೊಟ್ಟಿರುವ ಮುಷ್ಕರಕ್ಕೆ ಸ್ಪಂದಿಸಿರುವ ಗ್ರಾಮ ಆಡಳಿತಾಧಿಕಾರಿಗಳು ಎಲ್ಲಾ ತಾಲೂಕು ಕೆಂದ್ರ, ಜಿಲ್ಲಾ ಕೇಂದ್ರಗಳಲ್ಲಿ ಮುಷ್ಕರ ಪ್ರಾರಂಭಿಸಿದ್ದಾರೆ.


ಸಿದ್ದಾಪುರದಲ್ಲಿ ಕೂಡಾ ಕೆಲಸ ಬಹಿಷ್ಕರಿಸಿರುವ ಗ್ರಾಮ ಆಡಳಿತಾಧಿಕಾರಿಗಳು ಇಂದು ನೆಹರೂ ಮೈದಾನದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ಪ್ರಾರಂಭಿಸಿದರು. ಮುಷ್ಕರ ನಿರತ ಕಂದಾಯ ಇಲಾಖಾ ನೌಕರರನ್ನು ಭೇಟಿ ಮಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕಾ ಅಧ್ಯಕ್ಷ ರಾಜೇಶ್ ನಾಯ್ಕ, ಕಾರ್ಯದರ್ಶಿ ಜಿ.ಎಲ್. ಶ್ಯಾಮಸುಂದರ್, ರಾಜ್ಯ ಪ್ರತಿನಿಧಿ ಡಿ. ಎಂ. ನಾಯ್ಕ ಕಂದಾಯ ಇಲಾಖೆಯ ಕೆಳಹಂತದ ನೌಕರರಿಗೆ ಯಾವುದೇ ಅನುಕೂಲಗಳಿಲ್ಲ. ಹೆಚ್ಚು ಸೇವಾ ಕೆಲಸಮಾಡುವ ಕಂದಾಯ ನೌಕರರಿಗೆ ಮೂಲಭೂತ ಸೌಲಭ್ಯ, ಕನಿಷ್ಟ ಅನುಕೂಲಗಳನ್ನೂ ಪೂರೈಸದೆ ದುಡಿಸಿಕೊಳ್ಳುವುದು ಸರಿಯಲ್ಲ ನಮ್ಮದೇ ಮಾರ್ಗಗಳ ಮೂಲಕ ಸರ್ಕಾರಕ್ಕೆ ಒತ್ತಡ ತಂದು ಅವಶ್ಯ ಕೆಲಸಗಳಾಗಬೇಕೆಂಬ ಬೇಡಿಕೆಗೆ ನಮ್ಮ ಸಹಕಾರವಿದೆ. ಸರ್ಕಾರಕ್ಕೆ ಕೂಡಾ ನಾವು ನಮ್ಮ ಸಂಘದ ಮೂಲಕ ಒತ್ತಡ ಹೇರುವ ಕೆಲಸ ಮಾಡುತ್ತೇವೆ ಎಂದರು.
ಇಂದಿನಿಂದ ಪ್ರಾರಂಭವಾಗಿರುವ ಗ್ರಾಮ ಆಡಳಿತಾಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರದಿಂದ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸರ್ಕಾರ ಗಮನಹರಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಲಿದೆ ಎನ್ನುವ ನಿರೀಕ್ಷೆ ಇದೆ.


