


ಕರ್ನಾಟಕ ಜಾನಪದ ಪರಿಷತ್ ಸ್ವಾಯತ್ತ ಸಂಸ್ಥೆಯಾಗಿದ್ದು ಜಾನಪದ ಸಂವರ್ಧನೆ ಕೆಲಸ ಮಾಡುತ್ತಾ ರಾಜ್ಯದಾದ್ಯಂತ ಕೆಲಸ ಮಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕೂಡಾ ಎಲ್ಲಾ ತಾಲೂಕುಗಳಲ್ಲಿ ಜಾನಪದ ಪರಿಷತ್ ಘಟಕಗಳು ರಚನೆಯಾಗುತಿದ್ದು ಎಲ್ಲರ ಸಹಕಾರದಿಂದ ಜಾನಪದ ಉಳಿವು ಬೆಳವಣಿಗೆಗಾಗಿ ಶ್ರಮಿಸಲು ಸಂಘಟಿತವಾಗಿ ಸಿದ್ಧವಾಗುತಿದ್ದೇವೆ ಎಂದು ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಡಾ. ವೆಂಕಟೇಶ ನಾಯ್ಕ ಹೇಳಿದರು. ಸಿದ್ಧಾಪುರ ಲಯನ್ಸ್ ಬಾಲಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ ಸಿದ್ಧಾಪುರ ತಾಲೂಕಾ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಜಾನಪದ ಅದರಷ್ಟಕ್ಕೆ ಅದೇ ಬೆಳೆಯುತ್ತಿದೆ. ನಾವು ಆಧುನಿಕ ಅನುಕೂಲಗಳ ಮೂಲಕ ಜಾನಪದ ಉಳಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಾನಪದ ಕಲಾವಿದೆ ಲೀಲಾವತಿ ಕೊಂಡ್ಲಿ ಜಾನಪದ ಹಾಡುಗಳ ಮೂಲಕ ರಂಜಿಸಿದರು.
ಮುಖ್ಯ ಅತಿಥಿಯಾಗಿದ್ದ ಸಾಹಿತಿ ಸುಬ್ರಾಯ ಮತ್ತೀಹಳ್ಳಿ ಮಾತನಾಡಿ ನಾನಾ ಪ್ರದೇಶಗಳ ಜಾನಪದ ವೈಶಿಷ್ಟಯಗಳು ಬಹು ಭಿನ್ನವಾಗಿವೆ. ಅವುಗಳ ದಾಖಲೀಕರಣ ಅಗತ್ಯ ಎಂದರು.
ಇನ್ನೊರ್ವ ಅತಿಥಿ ಪತ್ರಕರ್ತ ಕನ್ನೇಶ್ ಕೋಲಶಿರ್ಸಿ ಮಾತನಾಡಿ ಜಾನಪದದ ಮಹತ್ವ,ಪ್ರಾಮುಖ್ಯತೆಗಳನ್ನು ದೃಷ್ಟಾಂತಗಳೊಂದಿಗೆ ವಿವರಿಸಿದರು.ಅತಿಥಿಗಳಾಗಿದ್ದ ಎ.ಜಿ.ನಾಯ್ಕ ಕುಂಬಾರಕುಳಿ, ರಮೇಶ್ ಹಾರ್ಸಿಮನೆ ಮಾತನಾಡಿದರು. ಜಾನಪದ ಪರಿಷತ್ ತಾಲೂಕಾ ಅಧ್ಯಕ್ಷ ಎಂ.ಕೆ.ನಾಯ್ಕ ಹೊಸಳ್ಳಿ ಪ್ರಾಸ್ಥಾವಿಕವಾಗಿ ಮಾತನಾಡಿದರು. ಗೋಪಾಲ ಕಾನಳ್ಳಿ ತಂಡ ಹಾಡು-ನೃತ್ಯಗಳ ಮೂಲಕ ಮನರಂಜಿಸಿದರೆ ಪ್ರಜ್ಞಾ ಹೆಗಡೆ & ಲೀಲಾವತಿ ಕೊಂಡ್ಲಿ ಜಾನಪದ ಗಾಯನ ಗಮನ ಸೆಳೆಯಿತು. ಕ.ಸಾ.ಪ. ತಾಲೂಕಾ ಅಧ್ಯಕ್ಷ ಚಂದ್ರಶೇಖರ್ ಕುಂಬ್ರಿಗದ್ದೆ ನಿರೂಪಿಸಿದರು. ಜಾನಪದ ಕಲಾ ಪ್ರಕಾರಗಳನ್ನು ಬಳಸಿ ಮಾಡಿದ ವೇದಿಕೆ ಕಾರ್ಯಕ್ರಮದ ಮೆರಗು ಹೆಚ್ಚಿಸುವಂತಿತ್ತು.
