

(ಕರ್ಮಾವಾಲಿ)
ಮೂಲಕತೆ: ಅಮೃತಾ ಪ್ರೀತಮ್
ಅನುವಾದ: ನಿವೇದಿತಾ ಎಚ್.
ತಂದೂರಿ ಒಲೆಯಲ್ಲಿ ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ಉದ್ದೀಪಿಸುವಂತಿದ್ದವು. ಆದರೆ ಪಲ್ಯದಲ್ಲಿ ಅದ್ದಿ ಬಾಯಿಗೆ ಇಟ್ಟರೆ ಮಾತ್ರ ಬಿಸಿತುಪ್ಪದಂತಾಗುತ್ತಿದ್ದವು. ಪಲ್ಯದ ಅತಿಯಾದ ಖಾರ, ಆಸೆಯಿಂದ ಬಾಯಿಗಿಟ್ಟುಕೊಂಡಆ ಒಂದು ಚೂರು ರೊಟ್ಟಿಯನ್ನೂ ತಿನ್ನಲು ಬಿಡುತ್ತಿರಲಿಲ್ಲ. ಅಷ್ಟು ಖಾರವಾಗಿತ್ತು. ನನ್ನ ಎರಡೂ ಮಕ್ಕಳ ಕಣ್ಣಲ್ಲಿ ಖಾರದಿಂದಾಗಿ ನೀರು ಬಳಬಳನೆ ಸುರಿಯುತ್ತಿತ್ತು.
“ಅಕ್ಕ, ಸುತ್ತ ಮುತ್ತ ಹತ್ತಿರದಲ್ಲೆಲ್ಲೂ ಮದ್ಯ ಸಿಗುವ ಮತ್ತೊಂದು ಹೋಟೆಲಾಗಲೀಢಾಬಾ ಆಗಲಿ ಇಲ್ಲ. ಆ ಕಾರಣಕ್ಕೇ ನಮ್ಮ ಈ ಢಾಬಾಗೆ ಎಲ್ಲರೂ ಬರುವುದು. ಮತ್ತೆ ಇಲ್ಲಿಗೆ ಬರುವವರು ಸಾಮಾನ್ಯವಾಗಿ ಮದ್ಯ ಸೇವಿಸಿದ ನಂತರವೇ ಊಟ ಮಾಡುವುದು. ಅವರಿಗೆ ಹೆಚ್ಚು ಖಾರವಿದ್ದರೆ ಮಾತ್ರ ಊಟ ನಾಲಿಗೆಗೆ ಹತ್ತುತ್ತದೆ. ಹಾಗಾಗಿಯೇ ನಮ್ಮಲ್ಲಿ ಸ್ವಲ್ಪ ಖಾರ ಜಾಸ್ತಿ,” ಎಂದು, ನಮ್ಮನ್ನು ಗಮನಿಸುತ್ತಿದ್ದ ಢಾಬಾದ ಮಾಲಿಕ ಹೇಳಿದಾಗ, ನನಗೆ ಒಂದು ನಿಮಿಷ ಗಾಬರಿಯಾಯಿತು. ಮದ್ಯ ಸಿಗುವ ಜಾಗಕ್ಕೆ ಮಕ್ಕಳೊಂದಿಗೆ ಬಂದಿದ್ದೇನಲ್ಲ ಎಂದೆನಿಸಿ ಬೇಸರವಾಗಿ, “ಇಲ್ಲಿ ಮದ್ಯ ದೊರೆಯುತ್ತದೆಯೇ?” ಎಂದು ಕೇಳಿದೆ.
“ಹೌದು ಅಕ್ಕ. ಸಾಮಾನ್ಯವಾಗಿ ಸ್ವಲ್ಪ ಕುಡಿದು ನಂತರ ಊಟ ಮಾಡುತ್ತಾರೆ. ಆದರೆ ಎಂದಾದರೂ ಯಾರಿಗಾದರೂ ಏನಾದರೂ ಜಗಳವಾದರೆ, ಕಂಠಪೂರ್ತಿ ಕುಡಿಯುತ್ತಾರೆ. ಮೊನ್ನೆ ಹಾಗೆಯೇ ಆಯಿತು. ೫-೬ ಜನ ಒಬ್ಬನನ್ನು ಕೊಲೆ ಮಾಡಿಯೇ ಬಿಟ್ಟರು. ಸಣ್ಣ ಮಾತಿಗೆ ಶುರುವಾದ ಜಗಳ ಹೇಗೋ ಹೆಚ್ಚಾಗಿ ಅನಾಹುತವಾಯಿತು. ನೋಡಿ ಅಂದು ಅವರುಗಳು ಮುರಿದು ಹಾಕಿದ ಕುರ್ಚಿಗಳು,” ಎಂದು ಮೂಲೆಯಲ್ಲಿ ಮುರಿದು ಬಿದ್ದಿದ್ದ ಒಂದಷ್ಟು ಕುರ್ಚಿಗಳನ್ನು ತೋರಿಸುತ್ತಾ, “ಸದ್ಯ! ಪೋಲೀಸರು ಸರಿಯಾದ ಸಮಯಕ್ಕೆ ಬಂದು ಅವರೆಲ್ಲರನ್ನೂ ಹಿಡಿದುಕೊಂಡು ಹೋದರು. ಇಲ್ಲದಿದ್ದರೆ ನನ್ನ ಢಾಬಾದ ಪ್ರತಿ ಇಟ್ಟಿಗೆಯನ್ನೂ ಪುಡಿ ಮಾಡಿಯೇ ಅವರು ಹೋಗುತ್ತಿದ್ದುದು. ಆದರೆ ಅಕ್ಕ ಅಂತಹವರಿಂದಲೇ ನನಗೆ ಹೆಚ್ಚು ವ್ಯಾಪಾರ!” ಎಂದು ಒಂದೇ ಉಸಿರಿಗೆ ಹೇಳಿ ಮುಗಿಸಿದನು.
ಕೌಸಲ್ಯಾ ನದಿಯನ್ನು ನೋಡಲೇಬೇಕೆಂಬ ನನ್ನ ಆಸೆ ನನ್ನನ್ನು ಚಂಡೀಗಢದ ಹತ್ತಿರ ಇರುವ ಈದೂರದ ಊರಿಗೆದೆಹಲಿಯಿಂದ ಕರೆತಂದಿತ್ತು. ಅಡುಗೆಯ ಖಾರದಿಂದ ಶುರುವಾದ ಮಾತು, ಮದ್ಯವನ್ನು ಹಾದು ಇದೀಗ ರಕ್ತಪಾತದವರೆಗೂ ಬಂದಿತ್ತು. ಅದೆಲ್ಲಾ ಕೇಳಿಯಾದ ಮೇಲೆ ನನಗೆ, ಮೊದಲು ಮಕ್ಕಳನ್ನು ಕರೆದುಕೊಂಡು ಅಲ್ಲಿಂದ ಓಡಿ ಬಿಡಬೇಕು ಎನಿಸಿತ್ತು.
ಆ ಢಾಬಾನೋಡುವುದಕ್ಕೆ ದೊಡ್ಡದಾಗಿ, ಅಚ್ಚುಕಟ್ಟಾಗಿ ಶುಭ್ರವಾಗಿ ಇತ್ತು. ಢಾಬಾದ ಒಂದುಬದಿಯನ್ನು ಪರದೆಯನ್ನು ಮರೆಮಾಚಲಾಗಿತ್ತು. ಅದರಾಚೆಗೆ, ಮೂರು ಮಂಚಗಳನ್ನು ಹಾಕಿದುದನ್ನು ಯಾರಾದರೂ ನೋಡಬಹುದಾಗಿತ್ತು. ಅದನ್ನೆಲ್ಲಾ ನೋಡಿದ ಮೇಲೆ, ಡಾಬಾದ ಮಾಲಿಕ ಮತ್ತವನ ಸಂಸಾರದ ಬಿಡಾರ ಅಲ್ಲೇ ಎಂಬುದನ್ನು ಸುಲಭವಾಗಿ ಊಹಿಸಿಬಿಡಬಹುದಿತ್ತು. ಅದು ನನ್ನ ಗಮನಕ್ಕೆ ಬಂದಮೇಲೆ ನನಗೆ ಸ್ವಲ್ಪ ಸಮಾಧಾನವಾಯಿತು. ಹೇಗೂ ಇಲ್ಲಿಯೇ ಒಬ್ಬ ಹೆಂಗಸಿದ್ದಾಳೆ, ಭಯ ಬೀಳುವ ಅಗತ್ಯವಿಲ್ಲ ಎನಿಸಿ ಸ್ವಲ್ಲ ನೆಮ್ಮದಿಯಾಯಿತು. ಆ ಪರದೆಯ ಹಿಂದಿನಿಂದ ಹೆಣ್ಣಿನ ಕೈಯ್ಯೊಂದು ಪರದೆಯನ್ನು ಸ್ವಲ್ಪ ಸರಿಸಿತು. ಅಲ್ಲಿಂದ ಕಂಡ ಮುಖ ನನ್ನನ್ನೊಮ್ಮೆ ದಿಟ್ಟಿಸಿ ಮರೆಯಾಯ್ತು. ನಂತರ ಎರಡೇ ಕ್ಷಣಗಳ ಅಂತರದಲ್ಲಿ ಮತ್ತೆ ಮುಖ ಆಚೆಗೆ ಹಾಕಿದ ಆಕೆ ಖುಷಿಯಿಂದ ಹೊರಬಂದು, “ಅಕ್ಕ ನಿಮಗೆ ನನ್ನ ಗುರುತು ಸಿಗಲಿಲ್ಲ ಎನಿಸುತ್ತದೆ. ನನಗೆ ನೀವು ಯಾರೆಂದು ಗೊತ್ತಾಯಿತು,” ಎಂದು ಹೇಳಿದಳು.
ಗೊಂದಲಕ್ಕೊಳಗಾದ ನಾನು, “ಆ! ಇಲ್ಲ ತಿಳಿಯಲಿಲ್ಲವಲ್ಲ!” ಎಂದು ತಲೆಕೆರೆದುಕೊಳ್ಳುತ್ತಿದ್ದೆ.
ನೋಡಲು ಸರಳವಾಗಿ ಇದ್ದ ಆಕೆ ಇನ್ನೂ ಚಿಕ್ಕ ಹುಡುಗಿಯೇ. ಗುರುತು ಸಿಗುತ್ತದೇನೋ ಎಂದು ನಾನೂ ಮತ್ತೆ ಮತ್ತೆ ಆಕೆಯ ಮುಖವನ್ನು ದಿಟ್ಟಿಸಿ ನೊಡಿದೆ. ಊಹುಂ… ನೆನಪಾಗಲೇ ಇಲ್ಲ.
“ನನಗೆ ನಿಮ್ಮ ಗುರುತು ಸಿಕ್ಕಿತು ಬಿಡಿ ಅಕ್ಕ,” ಎಂದು ಆಕೆ ಮತ್ತೊಮ್ಮೆ ಅಂದಳು.
“ಅಕ್ಕ ನೀವು ಹಿಂದೊಮ್ಮೆ ಇಲ್ಲಿಗೆ ಬಂದಿದ್ದಿರಿ. ನೆನಪಿದೆಯೇ? ನಿನ್ನೆ ಮೊನ್ನೆಯ ಮಾತಲ್ಲ. ನಾನು ಪಲ್ಲಕ್ಕಿಯಲ್ಲಿಯೇ ಕುಳಿತಿದ್ದೆ. ನೀವು ನನ್ನ ಕೈಗೆ ಒಂದು ರೂಪಾಯಿಯ ನೋಟನ್ನು ನೀಡಿದಿರಿ, ನೆನಪಾಯ್ತೇ?
ಈಗ ಸ್ವಲ್ಪ ನನಗೆ ನೆನಪಾಗತೊಡಗಿತು. ಇದಾಗಿದ್ದು ಎರಡು ವರ್ಷಗಳ ಹಿಂದೆ! ಚಂಡೀಗಢದಲ್ಲಿ ಹೊಸದಾಗಿ ಆಕಾಶವಾಣಿ ಕೇಂದ್ರ ಪ್ರಾರಂಭವಾಗಿತ್ತು. ಉದ್ಘಾಟನೆಯ ದಿನದಂದು ಕವನ ಓದಲೆಂದೇ ನನ್ನನ್ನು ದೆಹಲಿ ಕೇಂದ್ರದಿಂದ ಚಂಡೀಗಢದ ಕೇಂದ್ರಕ್ಕೆ ಕಳುಹಿಸಿದ್ದರು. ನನ್ನ ಜೊತೆನಮ್ಮದೇ ಕೇಂದ್ರದ ಮೋಹನ್ ಸಿಂಗ್ ಮತ್ತು ಜಲಂಧರ್ ನಿಂದಮತ್ತೊಬ್ಬ ಕವಿ ಬಂದಿದ್ದರು.
ಕಾರ್ಯಕ್ರಮ ಬೇಗ ಮುಗಿದದ್ದರಿಂದ, ಚಂಡೀಗಢದ ಬಳಿ ಇರುವ ಈ ಹಳ್ಳಿಗೆ ಕೌಸಲ್ಯಾ ನದಿ ನೋಡುವ ಸಲುವಾಗಿಯೇ ಬಂದಿದ್ದೆವು. ನದಿಯನ್ನು ನೋಡಲು ನಾವು ಸುಮಾರು ಒಂದೂವರೆ ಮೈಲಿ ನಡೆದಿದ್ದೆವು. ಕಣಿವೆಯಲ್ಲಿ ಹರಿಯುತ್ತಿದ್ದ ನದಿಯನ್ನು ನೋಡಿ ಮತ್ತೆ ಹತ್ತಿ ಮೇಲೆ ಬಂದಾಗ, ಎಲ್ಲರಿಗೂ ವಿಪರೀತ ಸುಸ್ತಾಗಿತ್ತು. ಒಂದು ಲೋಟ ಟೀ ಎಲ್ಲಿಯಾದರೂ ಸಿಗಬಹುದೇ ಎಂದು ಹುಡುಕುತ್ತಿದ್ದಾಗ, ಈ ಢಾಬಾ ಕಣ್ಣಿಗೆ ಬಿದ್ದಿತ್ತು. ಶುಭ್ರವಾಗಿದ್ದ ಜಾಗದಲ್ಲಿ ಆರಾಮವಾಗಿ ಟೀ ಕುಡಿಯಬಹುದು ಎಂದೆನಿಸಿ ಲಗ್ಗೆಯಿಟ್ಟಿದ್ದೆವು. ಬಿಸಿ ಬಿಸಿ ಟೀ ಮಾತ್ರವಲ್ಲದೆ, ಅಂದೂ ಈ ಢಾಬಾದಲ್ಲಿ ಬಿಸಿ ಬಿಸಿ ತಂದೂರಿ ರೋಟಿ ಮತ್ತು ಕೋಳಿಯ ಖಾದ್ಯಗಳು ತಯಾರಾಗುತ್ತಿದ್ದವು. ಒಂದೆಡೆ ರುಚಿಯಾದ ಸಿಹಿ ತಿನಿಸುಗಳನ್ನೂ ತಯಾರಿಸಿ ಇಡಲಾಗಿತ್ತು.ಅದನ್ನೆಲ್ಲಾ ನಾವುಕುತೂಹಲದಿಂದ ಗಮನಿಸಿದ್ದನ್ನು ನೋಡಿ, ಢಾಬಾದ ಮಾಲೀಕ, “ಇನ್ನು ಸ್ವಲ್ಪ ಹೊತ್ತಿನಲ್ಲಿ ನನ್ನ ಸೋದರ ಸೊಸೆಯ ದಿಬ್ಬಣ ಇದೇ ದಾರಿಯಲ್ಲಿ ಬರುತ್ತದೆ. ಅವರ ಸತ್ಕಾರಕ್ಕಾಗಿ ನಾನು ಇಷ್ಟಾದರೂ ಮಾಡಬಾರದೇ?” ಎಂದಿದ್ದ. ಅವನು ಹಾಗಂದ ಸ್ವಲ್ಪ ಹೊತ್ತಿನಲ್ಲಿಯೇ, ಢಾಬಾದ ಎದುರಿಗಿದ್ದ ಮೈದಾನಕ್ಕೆ ದಿಬ್ಬಣ ಬಂದು ತಲುಪಿತು. ಅಲ್ಲಿ ಸಡಗರ ಮತ್ತು ಸಂಭ್ರಮದ ವಾತವಾರಣ ಒಡಮೂಡಿತು. ದಿಬ್ಬಣ ಅಲ್ಲೇ ಪಕ್ಕದ ಹಳ್ಳಿಯಿಂದ ಹೊರಟು ಮುಂದಿನ ಹಳ್ಳಿಯನ್ನು ತಲುಪಲಿತ್ತು. ಢಾಬಾದ ಮಾಲಿಕ ಅತಿಥಿ ಸತ್ಕಾರದಲ್ಲಿ ತೊಡಗಿಕೊಂಡ.
ಬಿಸಿಬಿಸಿಯಾದ ಟೀ ಕುಡಿಯುತ್ತಾ ಅದನ್ನೆಲ್ಲ ನೋಡುತ್ತಿದ್ದ ನಮ್ಮ ಜೊತೆಯವರೊಬ್ಬರು ನಿಟ್ಟುಸಿರು ಬಿಡುತ್ತಾ, “ಮದುವೆಯ ಸಂಭ್ರಮ ಮೊದಲಿಗೆ ಬಾರಿ ಜೋರಿನಲ್ಲಿರುತ್ತದೆ. ನಂತರವೇ…” ಎಂದೇನೋ ತಾತ್ವಿಕವಾದ ಮಾತುಗಳನ್ನಾಡಿದರು. ನನಗೆ ಪಲ್ಲಕ್ಕಿಯಲ್ಲಿ ಕುಳಿತ ನವವಧುವಿನ ಮುಖ ನೋಡುವ ಮನಸ್ಸಾಯಿತು. “ನವವಧುವಿನ ಮುಖ ಹೇಗೆ ಹೊಳೆಯುತ್ತಿದೆ ಎಂದು ನಾನು ನೋಡಬೇಕು,” ಎನ್ನುತ್ತಾ ನಾನು ಪಲ್ಲಕ್ಕಿಯೆಡೆಗೆ ಸಾಗುತ್ತಿದ್ದೆ.
ನನ್ನ ಮಾತುಗಳನ್ನು ಕೇಳಿದ ನನ್ನ ಜೊತೆಇದ್ದವರು, “ನಿಮಗೆ ಹೆಣ್ಣಿನ ಮುಖ ನೋಡಲು ಈಗ ಯಾರು ಬಿಡುತ್ತಾರೆ? ಹಾಗೂ ನೋಡಬೇಕೆಂದು ಅಷ್ಟು ಇಷ್ಟ ಇದ್ದರೆ, ಏನಾದರೂ ಕಾಣಿಕೆ ಕೊಟ್ಟು ವಧುವಿನ ಮುಖ ನೋಡಬೇಕು ನೀವು, ಹಾಗೆಲ್ಲಾ ಬರಿಗೈಲಿ ನೋಡುವ ಹಾಗಿಲ್ಲ,” ಎಂದರು.
ಅವರ ಮಾತುಗಳನ್ನು ಕೇಳಿ ನಾನು ನಗುತ್ತಾ ಪಲ್ಲಕ್ಕಿಯೆಡೆಗೆ ಸಾಗಿದೆ. ಮುಚ್ಚಿದ ಪರದೆಯನ್ನು ಸರಿಸಿದಾಗ ನನಗೆ ಹೆಣ್ಣಿನೊಡನೆ ಬಂದಿದ್ದ ಸಖಿ ಕಾಣಿಸಿದಳು. ನಾನು ಅವಳನ್ನೇ, “ ನಾನು ವಧುವಿನ ಮುಖ ನೋಡಬಹುದೇ?” ಎಂದು ಕೇಳಿದೆ.
ಆಗ ಆಕೆ ಅತ್ಯಂತ ಸಂತಸದಿಂದ, “ ಅಯ್ಯೋ ಅಕ್ಕಾ , ಧಾರಾಳವಾಗಿ ನೋಡಿ. ನೋಡಿದರೆ ಕರಗಿ ಹೋಗಲಿಕ್ಕೆ ಅವಳೇನು ಕರ್ಪೂರದ ಗೊಂಬೆಯೇ? ಎಂದಳು.
ಆದರೆ, ಮುತ್ತಿನ ನತ್ತನ್ನು ಹಾಕಿಕೊಂಡಿದ್ದ ಆ ಹುಡುಗಿನಿಜಕ್ಕೂ ಕರ್ಪೂರದ ಗೊಂಬೆಯಂತೆಯೇ ಸುಂದರವಾಗಿದ್ದಳು.
ನಾನು ನಗುತ್ತಾ ಅವಳನ್ನು ನೋಡಿ, ಅವಳ ಕೈಲಿ ಒಂದು ರೂಪಾಯಿಯನ್ನು ಕಾಣಿಕೆಯಾಗಿ ಕೊಟ್ಟು ಬಂದಿದ್ದೆ.
ನಾನು ಹಿಂತಿರುಗಿದಾಗ ಅವರಿಬ್ಬರೂ, “ ಈಗ ತಾನೆ ಕಾರ್ಯಕ್ರಮದಲ್ಲಿ ಇದ್ದಬದ್ದ ಕಾಲೇಜಿನ ಹುಡುಗ ಹುಡುಗಿಯರು ಒಂದು ರೂಪಾಯಿಯ ನೋಟಿನ ಮೇಲೆ ನಿಮ್ಮ ಹಸ್ತಾಕ್ಷರವನ್ನು ಪಡೆದುಕೊಂಡು ಬೀಗಿದರು. ಇಲ್ಲಿ ನೋಡಿದರೆ ನೀವೇ ಆ ಹುಡುಗಿಯ ಕೈಲಿ ಒಂದು ರೂಪಾಯಿ ಇಟ್ಟು ಅವಳ ಮುಖ ನೋಡಿದಿರಿ. ಆ ಹುಡುಗಿಗೆ ಬಹುಶಃ ಒಂದು ಸಣ್ಣ ಸುಳಿವೂ ಇರಲಾರದೇನೋ, ತಾನು ಯಾರನ್ನು ನೋಡಿದೆ, ಯಾರಿಂದ ಒಂದು ರೂಪಾಯಿಯನ್ನು ಪಡೆದೆ ಎಂದು.” ಎನ್ನುತ್ತಾ ನಕ್ಕರು.
ಈಗ ಅಂದಿನದಿನದ ಪೂರ್ತಿದೃಶ್ಯ ನನ್ನ ಕಣ್ಣ ಮುಂದೆ ಬಂದಿತು.
“ನೀನಾ?!! ನಾನು ಪಲ್ಲಕ್ಕಿಯಲ್ಲಿ ಅಂದು ನೋಡಿದ ಪುಟ್ಟ ಹುಡುಗಿ ನೀನೇನಾ?” ಎಂದು ನಾನು ಆಶ್ಚರ್ಯದಿಂದ ಕೇಳಿದೆ.
“ ಹೌದು ಅಕ್ಕಾ. ಅದು ನಾನೇ.” ಎಂದಳು.
ಕೇವಲ ಎರಡೇ ಎರಡು ವರ್ಷಗಳಲ್ಲಿ, ಪುಟ್ಟ ಹುಡುಗಿಯಾಗಿದ್ದವಳು ಹೆಂಗಸಾಗಿ ಬಿಟ್ಟಿದ್ದಳು. ಅವಳ ಸೊರಗಿದ ಮುಖ ಅವಳ ಕತೆಯನ್ನು ಹೇಳುತ್ತಿತ್ತು. ಏನಾಯಿತೆಂದು ಕೇಳಲು ನನಗೆ ಬಾಯಿ ಬರಲಿಲ್ಲ.
“ಅಕ್ಕಾ ನಿಮ್ಮ ಫೋಟೋ ಅನ್ನು ನಾನು ಹಲವು ಪತ್ರಿಕೆಗಳಲ್ಲಿ ನೋಡಿದ್ದೇನೆ. ಇಲ್ಲಿಗೆ ಬಹಳ ಜನ ಪತ್ರಿಕೆಯೊಂದಿಗೆ ಬರುತ್ತಾರೆ, ಇಲ್ಲೇ ಬಿಟ್ಟು ಹೋಗುತ್ತಾರೆ. ಹಾಗೆ ನಾನು ನಿಮ್ಮ ಫೋಟೋ ನೋಡಿದ್ದು.” ಎಂದಳು.
“ಹೌದಾ? ನಿನಗೆ ಆಗ ನನ್ನ ಗುರುತು ಸಿಕ್ಕಿತೇ?” ಎಂದು ನಾನು ಕೇಳಲು,
ಆಕೆ, “ಅಕ್ಕಾ ಬರೀ ಗುರುತು ಹಿಡಿಯುವುದಾ? ಆದರೆ ಅವರು ಏಕೆ ನಿಮ್ಮ ಫೋಟೋ ಅನ್ನು ಪತ್ರಿಕೆಯಲ್ಲಿ ಹಾಕುತ್ತಾರೆ ಅಕ್ಕಾ?” ಎಂದು ಮುಗ್ಧವಾಗಿ ಕೇಳಿದಳು.
ಇದುವರೆಗೂ ಯಾರೂ ನನ್ನನ್ನು ಈ ಪ್ರಶ್ನೆ ಕೇಳಿರಲಿಲ್ಲವಾದ್ದರಿಂದ ನನಗೆ ಹೇಗೆ ಉತ್ತರಿಸಬೇಕೋ ಎಂದು ತಕ್ಷಣಕ್ಕೆ ಹೊಳೆಯಲಿಲ್ಲ. ನಂತರ, “ ನಾನು ಕತೆ ಕವನ ಬರೆಯುತ್ತೇನಲ್ಲ ಅದಕ್ಕೆ.” ಎಂದೆ.
“ಅಕ್ಕ ಕತೆ ಬರೆಯುತ್ತೀರ? ನಿಜವಾದ ಘಟನೆಗಳನ್ನು ಬರೆಯುತ್ತೀರೋ? ಕಲ್ಪನೆಯೋ? ಎಂದು ಕೇಳಿದಳು.
“ನಿಜವಾದ ಕತೆಗಳನ್ನೇ ಬರೆಯುತ್ತೇನೆ. ಆದರೆ ಪಾತ್ರಗಳ ಹೆಸರು ಬದಲಾಯಿಸುತ್ತೇನೆ. ಅವರ ಗುರುತು ಓದುವವರಿಗೆ ಆಗಬಾರದಲ್ಲ,” ಎಂದೆ.
“ಅಕ್ಕಾ ಅಕ್ಕಾ… ಹಾಗಾದರೆ ನನ್ನ ಕತೆಯನ್ನೂ ಬರೆಯಿರಿ? ಎಂದಳು
“ಆಗಬಹುದು. ಅದಕ್ಕೇನಂತೆ?” ಎಂದು ನಾನುಲೋಕಾಭಿರಾಮವಾಗಿ ಹೇಳಿದ್ದೇ ತಡ, ತನ್ನ ಕತೆಯನ್ನು ನನ್ನ ಮುಂದೆ ಹೇಳಲು ಪ್ರಾರಂಭಿಸಿಯೇ ಬಿಟ್ಟಳು.!
ನನ್ನ ಹೆಸರು ಸೌಭಾಗ್ಯ.ಅಕ್ಕಾ.ನೀವುನನ್ನ ಹೆಸರು ಬದಲಿಸಬೇಕಿಲ್ಲ. ಇದನ್ನೇ ಇಡಿ. ನಿಮಗೆ ನಾನು ನಿಜವನ್ನೇ ಹೇಳುವುದು. ನಾನು ಹೇಳುವುದರಲ್ಲಿ ಲವಲೇಷವೂ ಸುಳ್ಳಿಲ್ಲ. ಆದರೆ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳುವುದಿರಲಿ ಯಾರೂ ಕೇಳಿಸಿಕೊಳ್ಳುವುದೂ ಇಲ್ಲ.”
ನನ್ನ ಕೈಯ್ಯನ್ನು ಹಿಡಿದು ನನ್ನನ್ನು ಪರದೆಯ ಹಿಂದಿದ್ದ ಮಂಚದ ಬಳಿ ಕರೆದೊಯ್ದು ಕೂಡಿಸಿದಳು. ತನ್ನ ಕತೆಯನ್ನು ನನ್ನ ಮುಂದೆ ಹರವಿಕೊಳ್ಳುತ್ತಾ ಹೋದಳು.
“ನನ್ನ ಮದುವೆ ನಿಶ್ಚಯವಾದಾಗ, ನನ್ನ ಅತ್ತೆಮನೆಯಿಂದ ಇಬ್ಬರು ಹುಡುಗಿಯರು ಬಂದರು. ಮದುವೆಗೆ ಹೊಲಿಸಬೇಕಿದ್ದ ಸಲ್ವಾರ ಕಮೀಜಿನ ಅಳತೆ ತೆಗೆದುಕೊಳ್ಳಲು ಬಂದಿದ್ದ ಅವರಿಬ್ಬರಲ್ಲಿ ಒಬ್ಬಳು ನನ್ನ ಭಾವಿ ಪತಿಯ ಸೋದರ ಸಂಬಂಧಿ, ಅಂದರೆ ನನಗೆ ನಾದಿನಿಯಾಗಬೇಕು. ಅಳತೆಯೆಲ್ಲಾ ತೆಗೆದುಕೊಂಡು ಆದಮೇಲೆ, ʼಚಿಂತೆ ಮಾಡಬೇಡಿ ಅತ್ತಿಗೆ. ನಿಮ್ಮ ಬಟ್ಟೆಗಳು ಚೆನ್ನಾಗಿ ಅಳತೆ ಪ್ರಕಾರವೇ ತಯಾರಾಗುತ್ತವೆ. ನಿಮ್ಮ ಬಟ್ಟೆಗಳ ಅಳತೆ ಮತ್ತು ನನ್ನದು ಒಂದೇ.ʼ ಎನ್ನುತ್ತಾ ತೆಗೆದುಕೊಂಡು ಹೋದಳು.
ಅವಳು ಹೇಳಿದ್ದು ಸರಿಯಾಗಿತ್ತು. ಅವಳು ಹೊಲಿದ ಬಟ್ಟೆಗಳೆಲ್ಲವೂ ನನಗೆ ಸರಿಯಾಗಿ ಆಗುತ್ತಿದ್ದವು. ಮದುವೆಯ ನಂತರವೂ ಅವಳುಒಂದಷ್ಟು ತಿಂಗಳುಗಳು ನಮ್ಮ ಜೊತೆಯೇ ಇದ್ದಳು ಮತ್ತುಇನ್ನೂ ಒಂದಷ್ಟು ಬಟ್ಟೆಗಳನ್ನೂ ಹೊಲಿದು ಕೊಟ್ಟಳು. ʼಅತ್ತಿಗೆ ನಾನು ಅಕಸ್ಮಾತ್ ಊರಿಗೆ ಹೋಗಿದ್ದಾಗ ಬರುವುದು ತಡವಾಯಿತೆಂದು ಬೇರೆಯವರ ಬಳಿ ಬಟ್ಟೆ ಹೊಲಿಸಿಕೊಳ್ಳಬೇಡಿ ಮತ್ತೆ. ನಿಮಗೆ ನಾನೇ ಹೊಲಿದು ಕೊಡುತ್ತೇನೆʼ ಎಂದು ಪ್ರೀತಿಯಿಂದ ಹೇಳುತ್ತಿದ್ದಳು.
ನನಗೂ ಅವಳು ಇಷ್ಟವಾಗುತ್ತಿದ್ದಳು. ಸಾಮಾನ್ಯವಾಗಿ ಬಟ್ಟೆ ಹೊಲಿದು ಆದಮೇಲೆ ಅವಳು ತೊಟ್ಟು ನೋಡುತ್ತಿದ್ದಳು. ನಂತರ, “ನೋಡಿ ಅತ್ತಿಗೆ ನನಗೆ ಎಷ್ಟು ಸರಿಯಾಗಿ ಕೂರುತ್ತದೆ. ಅಂದಮೇಲೆ ನಿಮಗೂ ಇದು ಸರಿಯಾದ ಅಳತೆʼ ಎಂದು ಹೇಳುತ್ತಿದ್ದಳು.
ಯಾವಾಗ ನಾನು ಆ ಬಟ್ಟೆಗಳನ್ನು ಹಾಕಿಕೊಂಡರೂ ನನಗೆ ಏಕೋ ಸಮಾಧಾನವೆನಿಸುತ್ತಿರಲಿಲ್ಲ. ಅವು ಹೊಸತಾದರೂ ಒಮ್ಮೆ ಬೇರೆ ಯಾರೋ ಹಾಕಿ ಬಿಟ್ಟವು ಎಂಬ ಭಾವನೆ ಮೂಡಿ, ಹೊಸ ಬಟ್ಟೆ ತೊಟ್ಟ ಖುಷಿಯೇ ಇರುತ್ತಿರಲಿಲ್ಲ. ಸೆಕಂಡ್ ಹ್ಯಾಂಡ್ ಬಟ್ಟೆ ಎನಿಸಿ ಉತ್ಸಹವೆಲ್ಲಾ ಬಸಿದು ಹೋಗುತ್ತಿತ್ತು,” ಎಂದು ಹೇಳಿ ನಿಟ್ಟುಸಿರಿಟ್ಟಳು.
ಏನೂ ಹೇಳಲು ತೋಚದೆ ನಾನು ಹಾಗೆಯೇ ಸುತ್ತಮುತ್ತ ನೋಡಿದೆ, ಹಳೆಯ ಜೀರ್ಣವಾದ ಕಂಬಳಿ, ಹಳತಾದ ಕಾಲೊರಸು, ಮುರುಕು ಮಂಚಗಳುಅಲ್ಲಿದ್ದವು. ಆದರೆ ಅವೆಲ್ಲಕ್ಕಿಂತಾ ಸೂಕ್ಷ್ಮವಾಗಿದ್ದದ್ದು ಆ ಹುಡುಗಿಯ ಭಾವನೆ. ನನಗೆ ಒಮ್ಮೆ ಮೈ ನಡುಕ ಬಂತೆನಿಸಿತು.
ಮುಂದುವರೆಸುತ್ತಾ ಅವಳು, “ಆದರೆಅಕ್ಕಾ ಅವಳಿಗೆ ನಾನು ಎಂದೂ ನನ್ನ ಈ ಅನಿಸಿಕೆ ಯೋಚನೆಯ ಬಗ್ಗೆ ಹೇಳಲೇ ಇಲ್ಲ. ಅವಳಿಗೆ ಬೇಜಾರಾಗಬಾರದೆಂಬ ಕಾಳಜಿಯಿಂದ ಸುಮ್ಮನಾಗುತ್ತಿದ್ದೆ.”
“ಆಮೇಲೆ?”
“ನಂತರ ಸುಮಾರು ಒಂದು ಒಂದೂವರೆ ವರ್ಷಗಳಾದ ಮೇಲೆ, ನನ್ನ ಅಮ್ಮನ ಮನೆಯ ಕಡೆಯವರ್ಯಾರೋ ನನಗೆ ನಿಜಾಂಶವನ್ನು ಹೇಳಿದರು. ನನ್ನ ಪತಿ ಮತ್ತು ಅವಳ ನಡುವೆ ಬಹಳ ಹಿಂದಿನಿಂದಲೂ ಸಂಬಂಧವಿತ್ತು. ನನ್ನ ಗಂಡ ಅವಳ ತಾತನ ಮೊಮ್ಮಕ್ಕಳಲ್ಲಿ ಒಬ್ಬನಂತೆ. ಹಾಗಾಗಿ ವರಸೆಯಲ್ಲಿ ಇವಳು ಅವನಿಗೆ ಸೋದರಸಂಬಂಧಿಯಾಗುತ್ತಿದ್ದಳು. ಅವಳ ಸ್ವಂತ ಅಣ್ಣ ಇವರ ವಿಷಯ ತಿಳಿದಮೇಲೆ ಅವಳನ್ನು ಕೊಂದೇ ಬಿಡಬೇಕೆಂದು ನಿಶ್ಚಯಿಸಿದ್ದನಂತೆ. ಆಮೇಲೆ ಹೇಗೋ ಸಮಾಧಾನ ಮಾಡಿದರಂತೆ. ನನಗೆ ಯಾರೋ ಹೇಳಿದರು, ನಮ್ಮ ಮದುವೆಯಲ್ಲಿ ಸೋದರಿ ಮಾಡಬೇಕಾದ ಶಾಸ್ತ್ರ ಮಾಡಬೇಕಾಗಿ ಬಂದಾಗ ಇವಳು ತಲೆತಿರುಗಿ ಬಿದ್ದಿದ್ದಳಂತೆ. “
ಇಷ್ಟೆಲ್ಲವನ್ನೂ ಹೇಳುವ ಹೊತ್ತಿಗೆ ಭಾಗ್ಯಲಕ್ಷ್ಮಿಯ ಕಣ್ಣುಗಳಿಂದ ಧಾರಾಕಾರವಾಗಿ ನೀರು ಹರಿಯುತ್ತಿತ್ತು. ನನ್ನ ಕೈಯ್ಯನ್ನು ಹಿಡಿದುಕೊಂಡು,
“ಅಕ್ಕಾ ನನಗೆ ನಿಜವಾಗಿಯೂ ಬೇರೆಯವರು ಬಳಸಿ ಬಿಟ್ಟ ಸಾಮಾನನ್ನು ಬಳಸುವುದೆಂದರೆ ಅಸಹ್ಯವೆನಿಸುತ್ತದೆ. ನನ್ನ ಎಲ್ಲ ಬಟ್ಟೆಗಳು, ಜರತಾರಿ ದುಪಟ್ಟಾ, ಕಸೂತಿ ಕೆಲಸದ ಕಮೀಜ಼್ ಎಲ್ಲವನ್ನೂ, ಕೊನೆಗೆ ನನ್ನ ಗಂಡನನ್ನೂ ಆಕೆ ಬಳಸಿದ್ದಳು.”
ಅವಳ ಹರಿತವಾದ ಮಾತುಗಳ ಮುಂದೆ ನನ್ನ ಲೇಖನಿಯೇ ಸತ್ವ ಕಳೆದುಕೊಳ್ಳುತ್ತದೇನೋ ಎಂದೆನಿಸುತ್ತಿತ್ತು ನನಗೆ. ನನ್ನ ಲೇಖನಿಗೆಲ್ಲಿಂದ ಬರಬೇಕು ಆ ಭಾವಾವೇಶ ಆ ಭಾವೋತ್ಕಟತೆ??
“ಅಕ್ಕಾ ನಾನು ಆ ಬಟ್ಟೆಗಳನ್ನು ಮತ್ತು ನನ್ನ ಗಂಡನನ್ನು ತಿರಸ್ಕರಿಸಿ ಬಂದುಬಿಟ್ಟಿದ್ದೇನೆ. ಈ ನನ್ನ ಮಾವನ ಮನೆಯಲ್ಲಿ ಅವರಿಗೆ ಸಹಾಯ ಮಾಡಿಕೊಂಡು ಇದ್ದೇನೆ. ಒಂದು ಹೊಲಿಗೆ ಯಂತ್ರವನ್ನೂ ಇಟ್ಟುಕೊಂಡಿದ್ದೇನೆ. ಕಡಿಮೆಬೆಲೆಯದ್ದಾದರೂ ಸರಿಯೇ, ಹೊಸಬಟ್ಟೆಯನ್ನು ಕೊಂಡುತಂದು ಹೊಲೆದುಕೊಳ್ಳುತ್ತೇನೆ. ಉಟ್ಟು ಬಿಟ್ಟದ್ದು ತೊಡುವ ಮನಸಿಲ್ಲ ನನಗೆ. ಇಲ್ಲಿ ನಾನು ಸಂತೋಷದಿಂದ ಇದ್ದೇನೆ. ನಾನು ಮಾಡುತ್ತಿರುವುದು ಸರಿ ಎಂಬ ನಂಬಿಕೆ ನನಗಿದೆ. ಅಕ್ಕಾ ನನ್ನೆಲ್ಲಾ ಭಾವನೆಗಳನ್ನು ನೀವು ನಿಮ್ಮ ಕತೆಯಲ್ಲಿ ಬರೆಯಿರಿ ದಯವಿಟ್ಟು.”
ಮಾತೆಲ್ಲಾ ಮುಗಿದಮೇಲೆ ಅವಳು ನನ್ನನ್ನುಪ್ರೀತಿಯಿಂದ ತಬ್ಬಿದಳು. ಅವಳ ಆರೋಗ್ಯಕರ ಶರೀರ, ಸ್ವಸ್ಥ ಮತ್ತು ಸ್ವಚ್ಛ ಮನಸ್ಸಿನ ಅನುಭವವಾಯಿತು ನನಗೆ. ಇದೇ ಸ್ವಲ್ಪ ಹೊತ್ತಿನ ಹಿಂದೆ, ಢಾಬಾದಲ್ಲಿನ ಗಲಾಟೆ, ಹೊಡೆದಾಟ ಮತ್ತು ಅಲ್ಲಿ ಆದ ರಕ್ತಪಾತದ ಬಗ್ಗೆ ಕೇಳಿ ನಾನೆಷ್ಟು ಬೆದರಿದ್ದೆ. ಆದರೆ ಅವಳು, ಅದೇ ಜಾಗದಲ್ಲಿ ಧೈರ್ಯವಾಗಿ ಜೀವನ ಮಾಡುತ್ತಿದ್ದಳು.
ಶಿಮ್ಲಾದಿಂದ ಬರುವ ಪ್ರವಾಸಿಗರ ಕಾರುಗಳುಅಲ್ಲಿ ನಿಂತು ಬಿಸಿ ಬಿಸಿ ತಂದೂರಿ ರೋಟಿಯನ್ನೋ, ಚಹಾವನ್ನೋ, ಸಿಗರೇಟನ್ನೋ ಅಲ್ಲಿ ಖರೀದಿಸುತ್ತವೆ. ಆ ಕಾರುಗಳಲ್ಲಿ ಬರುವ ಶ್ರೀಮಂತರು ಉಡುವ ತುಟ್ಟಿಯಾದ ರೇಷ್ಮೆಯ ಬಟ್ಟೆಗಳನ್ನು ಅವರಿಗೂ ಮುಂಚೆ ಯಾರು ತೊಟ್ಟಿದ್ದರೋ ಏನೋ! ಅತ್ಯಂತ ಸೋವಿಯಾದ ಬಟ್ಟೆಯನ್ನು ಉಟ್ಟ ನಮ್ಮ ಭಾಗ್ಯಲಕ್ಷ್ಮಿ ಅದೇ ಢಾಬಾದಲ್ಲಿ, ಧೂಳು ಹೊಡೆಯುತ್ತಾಳೆ, ಕಸ ಗುಡಿಸುತ್ತಾಳೆ, ನೆಲ ಒರೆಸುತ್ತಾಳೆ… ಅವಳಿಗೆ ಬೇರೆಯವರು ಉಟ್ಟುಬಿಟ್ಟ ಬಟ್ಟೆಯನ್ನು ಧರಿಸುವುದು ಸ್ವಲ್ಪವೂ ಇಷ್ಟವಿಲ್ಲ.
“ಅಕ್ಕಾ, ಅಂದು ನೀವು ನೀಡಿದ ಆ ನೋಟು ಇಂದಿಗೂ ನನ್ನ ಬಳಿಯಿದೆ!”
“ಹೌದೇ? ನಿಜವಾಗ್ಲೂ?”
“ಖಂಡಿತವಾಗಿ ಅಕ್ಕ.. ಅಂದು ನನಗೆ ನೀವು ನೀಡಿದ್ದ ಹಣವನ್ನು ನನ್ನ ಜೊತೆಯಲ್ಲಿ ಇದ್ದಾಕೆಗೆ ಇಟ್ಟುಕೊಳ್ಳಲು ನೀಡಿದ್ದೆ. ಮಾರನೆಯ ದಿನ ನಿಮ್ಮ ಫೋಟೋ ಅನ್ನು ಪೇಪರಿನಲ್ಲಿ ನೋಡಿದ ಮೇಲೆ ಅವಳ ಬಳಿಯಿಂದ ಆ ನೋಟನ್ನು ವಾಪಾಸ್ ಪಡೆದು ನನ್ನ ಬಳಿ ಜೋಪಾನವಾಗಿ ಇಟ್ಟುಕೊಂಡೆ. ಅಕ್ಕಾ ನೀವು ಅದರ ಮೇಲೆ ನಿಮ್ಮ ಹೆಸರನ್ನು ಬರೆದುಕೊಡಿ. ಆಮೇಲೆ, ನೀವೇನಾದರೂ ನನ್ನ ಕತೆಯನ್ನು ಬರೆದರೆ ಖಂಡಿತ ನನಗೆ ಕಳಿಸಿಕೊಡಿ. ಅಕ್ಕಾ ನೀವು ಪಂಜಾಬಿಯಲ್ಲಿಯೇ ಬರೆಯಿರಿ. ನಾನು ಪಂಜಾಬಿಯನ್ನು ಚೆನ್ನಾಗಿ ಓದಬಲ್ಲೆ.”
ಇಷ್ಟು ಹೇಳಿ ಅವಳು ಮೇಲೆದ್ದಳು. ಅಲ್ಲೇ ಮಂಚದ ಕೆಳಗಿದ್ದ ಟ್ರಂಕಿನಿಂದ ಆ ಒಂದು ರೂಪಾಯಿಯ ನೋಟನ್ನು ತೆಗೆದಳು. ಅದನ್ನು ಜಾಗ್ರತೆಯಿಂದ ಮರದ ಪುಟ್ಟ ಪೆಟ್ಟಿಗೆಯಲ್ಲಿ ಇಟ್ಟಿದ್ದಳು.
“ಇದರ ಮೇಲೆ ನಾನು ನನ್ನ ಹೆಸರನ್ನು ಬರೆದು ಕೊಡುತ್ತೇನೆ. ನನಗೆ ಇದರ ಅಭ್ಯಾಸ ಚೆನ್ನಾಗಿಯೇ ಇದೆ. ಆದರೆ ನೀನು ನಿನ್ನ ಹೆಸರನ್ನು ಒಂದು ನೋಟಿನ ಮೇಲೆ ನನಗಾಗಿ ಬರೆದುಕೊಡಬೇಕು. ನಾನು ಕೇವಲ ಕಥೆಗಾರ್ತಿ. ಆದರೆ ನೀನು ಕತೆಯನ್ನು ಜೀವಿಸಿದವಳು.”
“ಅಯ್ಯೋ ಅಕ್ಕಾ ನನಗೆ ಸರಿಯಾಗಿ ಬರೆಯಲು ಬರುವುದಿಲ್ಲ.” ಎಂದು ನಾಚುತ್ತಾ ಎಂದ ಅವಳು, ತಕ್ಷಣ “ಆದರೆ ಕತೆಯಲ್ಲಿ ಮಾತ್ರ ನೀವು ನನ್ನ ಹೆಸರನ್ನೇ ಹಾಕಿ.” ಎಂದಳು.
ನನ್ನ ಬ್ಯಾಗಿನಿಂದ ನೋಟು ಮತ್ತು ಪೆನ್ನನ್ನು ತೆಗೆಯುತ್ತಾ, “ಖಂಡಿತ, ಕತೆಯಲ್ಲಿ ನಿನ್ನ ಹೆಸರನ್ನೇ ಬಳಸುವುದಷ್ಟೇ ಅಲ್ಲ, ನಿನ್ನ ಹೆಸರನ್ನೇ ಇಡುತ್ತೇನೆ.” ಎಂದೆ.
ಓಹ್ ನೀನು ನಿಜವಾಗಲೂ ಸೌಭಾಗ್ಯವತಿಯೇ! ಇಂದು ನಿನ್ನ ಕತೆಯನ್ನೇ ಬರೆಯುತ್ತಿದ್ದೇನೆ. ನಿನ್ನ ಹೆಸರು ಹಣೆಬೊಟ್ಟಿನಂತೆ ಮೇಲುಗಡೆ ರಾರಾಜಿಸುತ್ತಿದೆ. ಇದರಿಂದ ನಿನಗೇನೂ ಉಪಯೋಗವಾಗದಿರಬಹುದು. ಆದರೆ ನಿನ್ನ ಹಣೆಬೊಟ್ಟಿನ ಬಣ್ಣದ ರಕ್ತ ಯಾರ್ಯಾರ ಮೈಯ್ಯಲ್ಲಿ ಹರಿಯುತ್ತದೆಯೋ, ಅವರೆಲ್ಲ ನಿನ್ನನ್ನು ಪ್ರಶಂಸಿಸುತ್ತಾರೆ. ಯಾರೋ ತೊಟ್ಟ ಬಟ್ಟೆಯನ್ನು ಯಾರು ಇನ್ನೂ ಧರಿಸುತ್ತಿದ್ದಾರೋ ಅವರ ತಲೆ ನಾಚಿಕೆಯಿಂದ ತಗ್ಗುತ್ತದೆ.
ನಿವೇದಿತಾ ಎಚ್
ಮೈಸೂರು *ಮೂಲ ಪಂಜಾಬಿಯಲ್ಲಿ ಕತೆಯ ಹೆಸರು ʻಕರ್ಮಾವಾಲಿʼ, ಅಂದರೆ ಸೌಭಾಗ್ಯಶಾಲಿ ಎಂದು. ನಾನು ಓದಿದ ಇಂಗ್ಲಿಷ್ ಅನುವಾದದಲ್ಲಿ ʻಲಕ್ಕಿ ಗರ್ಲ್ʼ ಎಂದಿದೆ. ಅದನ್ನು ಕನ್ನಡದಲ್ಲಿ ಸೌಭಾಗ್ಯ ಎಂದು ಬರೆದಿರುವೆ.
