


ಮಲೆನಾಡಿನ ಮೂಲನಿವಾಸಿ ಬಹುಸಂಖ್ಯಾತರು ಆಚರಿಸುವ ಮಲೆನಾಡಿನ ವಿಶಿಷ್ಟ ಹಬ್ಬಗಳಲ್ಲಿ ಆರಿದ್ರಮಳೆ ಹಬ್ಬವೂ ಒಂದು. ಭಾರತೀಯ ಋತುಗಳನುಸಾರ ವರ್ಷ ಋತುವಿನ ಮೊದಲು ಆಚರಿಸುವ ಈ ಆರಿದ್ರಮಳೆ ಹಬ್ಬದ ರೀತಿ-ನೀತಿಗಳು ತುಸು ಭಿನ್ನವಾದರೂ ಆಚರಣೆ ಉದ್ದೇಶ ಒಂದೇ. ಕರಾವಳಿ, ಮಲೆನಾಡಿನ ದೀವರೊಂದಿಗೆ ಈ ನೆಲಮೂಲದ ಮೂಲನಿವಾಸಿಗಳು ಆಚರಿಸುವ ಈ ಆರಿದ್ರಮಳೆ ಹಬ್ಬಕ್ಕೆ ಹನಿ ಹಬ್ಬ ಎಂದೂ ಕರೆಯುತ್ತಾರೆ.

ಕುಮಾರ ರಾಮ-
ಧೀರ ಚಾರಿತ್ರಿಕ ಪುರುಷ ಕುಮಾರರಾಮನನ್ನು ಕರಾವಳಿ, ಮಲೆನಾಡು, ಬಯಲುಸೀಮೆ ಎನ್ನದೆ ರಾಜ್ಯದಾದ್ಯಂತ ವಿಭಿನ್ನವಾಗಿ ನಾನಾ ಸಂದರ್ಭಗಳಲ್ಲಿ ಪೂಜಿಸಿ- ಆರಾಧಿಸುತ್ತಾರೆ. ಕರಾವಳಿಯ ಹೊನ್ನಾವರದ ಅನಿಲಗೋಡು ಕುಮಾರರಾಮ ದೇವಾಲಯದಿಂದ ಹಿಡಿದು ಕೊಪ್ಪಳ ಜಿಲ್ಲೆಯ ಕೆಲವೆಡೆ ಇರುವ ಕುಮಾರರಾಮನ ದೇವಾಲಯಗಳ ವರೆಗೆ ಪ್ರಾದೇಶಿಕವಾಗಿ ತುಸು ಮಾರ್ಪಾಡುಗಳೊಂದಿಗೆ ಕುಮಾರ ರಾಮನನ್ನು ಹನಿಹಬ್ಬ, ಬಂಡಿಹಬ್ಬ ಸೇರಿದಂತೆ ಅನೇಕ ಉತ್ಸವಗಳಲ್ಲಿ ವಿಭಿನ್ನವಾಗಿ ಪೂಜಿಸಿ ಆರಾಧಿಸಲಾಗುತ್ತದೆ.


ಸೇನೆಯ ಹಿನ್ನೆಲೆ-
ಹಳೆಪೈಕ ಅಂದರೆ ಆದಿಸೈನಿಕ ( ದೀವರು| ಈಡಿಗ) ರಾಗಿದ್ದ ಈ ನೆಲದ ಮೂಲನಿವಾಸಿಗಳು ರಾಜರು, ಸಾಮಂತರ ಜೊತೆಗೆ ಸೈನಿಕರಾಗಿ ಕೆಲಸಮಾಡುತಿದ್ದ ಸಮಯದಲ್ಲಿ ಮಳೆಗಾಲದ ಯುದ್ಧ ವಿರಾಮದ ಕಾಲದಲ್ಲಿ ತಿಂಡುಂಡು, ಕೃಷಿಕಾಯಕ ಮಾಡುತ್ತಾ ತಮ್ಮ ಪ್ರಕೃತಿ ಪುರುಷರಿಗೆ ನೈವೇದ್ಯ ಕೊಟ್ಟು ತಮ್ಮನ್ನು ರಕ್ಷಿಸುವಂತೆ ಬೇಡಿಕೊಳ್ಳುವ ಆಚರಣೆ ಕ್ರಮೇಣ ಆರಿದ್ರಮಳೆ ಹಬ್ಬ ವಾಗಿ ರೂಢಿಯಾಯಿತು. ಈ ಉತ್ಸವದ ನೆನಪಿಗಾಗಿ ಸಂಬ್ರಮದ ಕುಣಿತ ಮಾಡುತ್ತಾ ಸ್ನೇಹಿತರು, ಸಂಬಂಧಿಗಳೆಲ್ಲಾ ಕೂಡಿ-ಕಲೆತು ಆಚರಿಸುವ ಈ ದೇಶೀ ಉತ್ಸವವೇ ಆರಿದ್ರಮಳೆ ಹಬ್ಬ.
ರಾಜರೊಂದಿಗೆ ಸೈನಿಕರಾಗಿರುತಿದ್ದ ಜನಸಾಮಾನ್ಯರು ರಾಜಪುತ್ರ ಪರಾಕ್ರಮಿ ಕುಮಾರರಾಮನೇ ತಮ್ಮ ಆದಿ ಪುರುಷ, ಆತನ ತ್ಯಾಗ, ಧೀರತನ, ಸಾಹಸ, ವೀರತ್ವಗಳೇ ಈ ಜನರ ಆರಾಧನೆಯ, ಗೌರವದ ಅಂಶಗಳೆಂದು ಅರಿತು ಧೀರತ್ವ, ವೀರತ್ವ, ಶೂರತನ, ತ್ಯಾಗಗಳಿಗೆ ಸಂಕೇತವಾಗಿ ಕುಮಾರರಾಮನನ್ನು ಆರಾಧಿಸುತಿದ್ದವರು ಈಗ ತುಸು ಬದಲಾವಣೆಗಳನ್ನೂ ಮಾಡಿಕೊಂಡಿದ್ದಾರೆ.
ಸಾಗರ-ಸಿದ್ಧಾಪುರ ಶಿರಸಿಗಳ ಕೋಲಶಿರ್ಸಿ, ಹುಸೂರು, ಅವರಗುಪ್ಪಾ,ಮನಮನೆ,ಕುಗ್ವೆ ಸೇರಿದ ಬಹುತೇಕ ಹಳ್ಳಿಗಳಲ್ಲಿ ಪ್ರತಿವರ್ಷ ಆರಿದ್ರ ಮಳೆಯಲ್ಲಿ ಆಚರಿಸುವ ಈ ಹನಿಹಬ್ಬದಲ್ಲಿ ಗ್ರಾಮದ ದೇವರನ್ನು ಪೂಜಿಸುವ ಜೊತೆಗೆ ಗ್ರಾಮದೇವತೆಗಳು, ಊರದೇವರುಗಳು ಸೇರಿದ ತಮ್ಮ ಹಿಂದಿನ ಸ್ತ್ರೀ, ಪುರುಷ ಮಾದರಿಗಳನ್ನೇ ಪೂಜಿಸುವ ಮೂಲಕ ಆರಾಧಿಸಿ ತಮ್ಮ ಬದುಕು, ಸಂಸ್ಕೃತಿ, ಆಚರಣೆಗಳಿಗೂ ವ್ಯಾಪಾರಿ ವೈದಿಕ ಆಚರಣೆಗಳಿಗೂ ಸೂತ್ರ-ಸಂಬಂಧಗಳಿಲ್ಲ ಎಂಬುದನ್ನು ಪ್ರತಿಬಿಂಬಿಸುವುದರಿಂದ ಈ ಆಚರಣೆ ಸಾಂಪ್ರದಾಯಿಕ, ಜನಾಂಗೀಯ ಭಿನ್ನತೆಗಳಿಂದಲೂ ವಿಶಿಷ್ಟ. ಜೂನ್ ಅಂತ್ಯ, ಜುಲೈ ಪ್ರಾರಂಭದ ವಾರದಲ್ಲಿ ಆಚರಿಸಿದ ಈ ಆರಿದ್ರಮಳೆ ಹಬ್ಬದಲ್ಲಿ ಸಿದ್ಧಾಪುರ ಹೊಸೂರಿನಲ್ಲಿ ಬೊಮ್ಮ ದೇವರ ಮೆರವಣಿಗೆ, ಹಣ್ಣು ಕಾಯಿ ಅರ್ಪಣೆಗಳು ನಡೆದವು.

ಕೋಲಶಿರ್ಸಿಯಲ್ಲಿ ಸಾವಿನ ಸೂತಕದ ಹಿನ್ನೆಲೆಯಲ್ಲಿ ಈ ವರ್ಷ ಸರಳವಾಗಿ, ವಿಳಂಬವಾಗಿ ಹನಿ ಹಬ್ಬ ಆಚರಿಸಲಾಯಿತು. ಪ್ರತಿವರ್ಷ ಬಹುವಿಶಿಷ್ಟವಾಗಿ ಆರಿದ್ರಮಳೆ ಹಬ್ಬ ಆಚರಿಸುವ ಅವರಗುಪ್ಪದಲ್ಲಿ ಈ ವರ್ಷವೂ ಈ ಹಬ್ಬ ವಿಜೃಂಬಣೆಯಿಂದ ನಡೆಯಿತು.
ನವವಧುವರರು ದೇವರ ರೂಪಗಳ ವಿಭಿನ್ನ ಮುಖವಾಡ ಹೊತ್ತು ಕೆಂಡತುಳಿಯುವ ಆಚರಣೆ ಮೂಲಕ ತ್ರೈಮಾಸಿಕ ಉಪವಾಸ ಆಚರಿಸುವುದೂ ಈ ಹಬ್ಬದ ವೈಶಿಷ್ಟ್ಯವೆ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






