



ಭಾರತದ ಸ್ವಾತಂತ್ರ‍್ಯಕ್ಕೆ ಆಹುತಿಯಾದ ಜೀವಗಳ ಪಟ್ಟಿ ದೊಡ್ಡದು.ಬ್ರಟೀಷರನ್ನುಭಾರತದಿಂದ ಹೊರತಳ್ಳಲು ಶ್ರಮಿಸಿದ ಕೋಟ್ಯಾಂತರ ಜನರಲ್ಲಿ ಸರ್ಕಾರದ ಪಟ್ಟಿಗೆ ಸಿಕ್ಕು ಸ್ವಾತಂತ್ರ‍್ಯ ಹೋರಾಟಗಾರರೆಂದು ದಾಖಲೆಗೆ ಸಿಕ್ಕವರು ಹಲವರಾದರೆ, ಅವರಲ್ಲಿ ಸರ್ಕಾರದ ಪಿಂಚಣಿ ನಿರಾಕರಿಸಿ ಸ್ವಾಭಿಮಾನ ಮೆರೆದವರು ಕೆಲವರು.


ಕೆಲವರಂತೂ ಸ್ವಾತಂತ್ರ‍್ಯ ಹೋರಾಟ ಮಾಡಿ ಜೈಲು ಪಾಲಾಗಿ ಕೊನೆಗೆ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಗೆ ಸೇರದೆ ಅನಾಮಿಕರಾಗಿ ಕಳೆದು ಹೋದರು. ಈ ಸ್ವಾತಂತ್ರ‍್ಯದ ಕತೆ, ಕವನ, ಕಾದಂಬರಿ ಹೇಳಿ-ಕೇಳಿ, ಓದಿ ಹಗುರಾಗುವುದು ಸುಲಭ, ಆದರೆ ಅಂದಿನ ಹೋರಾಟದ ಕಾರಣಕ್ಕೆ ಅನುಭವಿಸಿದ ಹಿಂಸೆ ಇದೆಯಲ್ಲ ಅದು ಅಸಹನೀಯ.
ಇಂಥ ಅಸಹನೀಯ ದುರಂತದ ಕತೆಗಳು ಹಲವು. ಅಂಥ ಕತೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನ ಅನೇಕರ ನೆರಳಿರುವುದು ಚರಿತ್ರೆಯ ಭಾಗ.

ಕೋಲಶಿರ್ಸಿಯ ಹುಲಿಹೊಡೆಯುವ ರಾಮಜ್ಜ, ಹುಸೂರಿನ ಲಕ್ಷಣ ನಾಯ್ಕ ಸೇರಿದ ಅನೇಕರು ಕಂಡ ದುರಂತ ಅಂತ್ಯದ ಕತೆಗಳೇ ಒಂದು ಚರಿತ್ರೆ. ಇವರಲ್ಲಿ ಬೇಡ್ಕಣಿಯ ಚೌಡ ನಾಯ್ಕರ ಕತೆ ನಾಟಕವಾಗಿ ಪ್ರಸಿದ್ಧವಾಗಿದೆ.
ಬೇಡ್ಕಣಿಯ ರಾವ್ ಬಹುದ್ದೂರ್ ಕನ್ನ ನಾಯ್ಕ ಸ್ವಾತಂತ್ರ‍್ಯ ಪೂರ್ವದಲ್ಲಿ ೮೦೦ ರೂಪಾಯಿ ಭೂ ಕಂದಾಯ ಕೊಡುತಿದ್ದ ಶ್ರೀಮಂತ ರೈತ. ಇವರ ದೌಲತ್ತು-ದರ್ಬಾರಿಗೆ ಇಡೀ ಊರೇನು…? ತಾಲೂಕೆ ನಡುಗುವಂತಿತ್ತು. ಅವರ ಮೊದಲ ಮಗ ಚೌಡ ನಾಯ್ಕ.



ಚೌಡ ನಾಯ್ಕ ಹೊನ್ನಾವರದ ಸೇಂಟ್ ಥಾಮಸ್ ಹೈಸ್ಕೂಲಿನಲ್ಲಿ ಮೆಟ್ರಿಕ್ ಓದಿದ ಬುದ್ಧಿವಂತ. ಸಿದ್ಧಾಪುರದ ದೀವರ ಸಮೂದಾಯದ ಮೊದಲ ಮೆಟ್ರಿಕ್ಯುಲೇಟ್ ಆದ ಚೌಡಾ ನಾಯ್ಕ ತನ್ನ ಕುಟುಂಬದ ಸೌಲತ್ತು-ದೌಲತ್ತು ಬಳಸಿ ಆಗಿನ ಮಾಮಲೇದಾರ ಆಗುವ ಅವಕಾಶ ನಿರಾಕರಿಸಿ ಉತ್ತರ ಕನ್ನಡ ಜಿಲ್ಲೆಯ ಮೊದಲ ಸ್ವಾತಂತ್ರ‍್ಯ ಖೈದಿಯಾದ ಧೀರ.
ರಾವ್ ಬಹುದ್ದೂರ್ ಹುದ್ದೆ ಬ್ರಟೀಷರ ಗುಲಾಮಗಿರಿಗೆ ಸಿಕ್ಕುವ ಭಿಕ್ಷೆ ಎಂದು ಸ್ವಂತ: ತಂದೆ ಕನ್ನ ನಾಯ್ಕರ ವಿರುದ್ಧ ಬಂಡಾಯವೆದ್ದು ಸ್ವಾತಂತ್ರ‍್ಯ ಹೋರಾಟದ ಮುಂಚೂಣಿಯ ನಾಯಕನಾಗುವ ಚೌಡ ನಾಯ್ಕ ಸ್ವಾತಂತ್ರ‍್ಯ ಹೋರಾಟಗಾರರ ಮನೆಯ ಫಸಲು ಲಿಲಾವು ಮಾಡುವ ಶೋಷಣೆ ವಿರೋಧಿಸಿ ಅಡಿಕೆ ತುಂಬಿದ ಗಾಡಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸುವ ಇವರು ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿ ಒಂದು ವರ್ಷದ ಕಠಿಣ ಜೈಲು ಶಿಕ್ಷೆಗೆ ಗುರಿಯಾಗುತ್ತಾರೆ.
ಚಿಕ್ಕಮಕ್ಕಳ ತಾಯಿ ಪತ್ನಿ ಮೈಲಿ ಪತಿಧರ್ಮ ಪಾಲಿಸುತ್ತಾ ಮಾವ ಕನ್ನ ನಾಯ್ಕರ ವಿರೋಧಕ್ಕೆ ಒಳಗಾಗಿದ್ದ ಗಂಡನ ಸ್ವಾತಂತ್ರ‍್ಯ ಹೋರಾಟ ಬೆಂಬಲಿಸುವುದು, ಮನೆಯ ಗೌರವ, ಸ್ವಂತ: ಹಿತಕ್ಕಿಂತ ದೇಶದ ಸ್ವಾತಂತ್ರ‍್ಯ ಮುಖ್ಯ ಎಂದು ತನ್ನ ತಾಳಿ ಸರವನ್ನೇ ಸ್ವಾತಂತ್ರ‍್ಯ ಸಂಗ್ರಾಮಕ್ಕೆ ಹವಿಸ್ಸಾಗಿ ನೆಹರೂ ಅವರಿಗೆ ನೀಡುವುದು ಇವೆಲ್ಲಾ ಸ್ವಾತಂತ್ರ‍್ಯ ಹೋರಾಟದ ಪುಟದಲ್ಲಿ ಸೇರಿದ ಸತ್ಯ ಸಂಗತಿಗಳು.
ಇಂಥ ಕಥಾ ಹಂದರದ ಎಸ್.ವಿ.ಹೆಗಡೆ ಮಘೇಗಾರ್ ರಚಿಸಿದ ಐತಿಹಾಸಿಕ ನಾಟಕಕ್ಕೆ ಸ್ಥಳೀಯ ದೀವರ ಭಾಷೆಯ ಗ್ರಾಮ್ಯ ಸೊಗಡಿನ ದೀವರ ಕನ್ನಡದ ಸಂಭಾಷಣೆ ರಚಿಸಿ ನಿರ್ಧೇಶಿಸಿರುವ ಗಣಪತಿ ಹೆಗಡೆ ಹುಲಿಮನೆಯವರ ಕ್ರಾಂತಿಯ ಕಿಡಿ ಐತಿಹಾಸಿಕ ನಾಟಕ ಇತ್ತೀಚೆಗೆ ಸಿದ್ಧಾಪುರದ ಶಂಕರ ಮಠದಲ್ಲಿ ಪ್ರದರ್ಶನ ಕಂಡಿತು.
ಕ್ರಾಂತಿಕಾರಿ ಚೌಡಾ ನಾಯಕರ ಜೀವನ ಹೋರಾಟ ಆಧಾರಿತ ಕತೆ ಸ್ವಾಂತತ್ರ‍್ಯ ಹೋರಾಟದ ಹಾದಿ ಪರಿಚಯಿಸುತ್ತಾ ಆ ಕಾಲದ ಜನಜೀವನ, ಬ್ರಿಟೀಷರ ಪರವಾಗಿರುವ ಪಟೇಲಿಕೆ, ರಾವ್ ಬಹುದ್ದೂರ್ ಗಿರಿ ಅದಕ್ಕೆ ಪರ್ಯಾಯವಾಗಿ ಸ್ವಾತಂತ್ರ‍್ಯ ಹೋರಾಟದ ಧೀರತನ, ನಡುನಡುವೆ ಬ್ರಟೀಷ್ ಕ್ರೌರ್ಯ ಜೊತೆಜೊತಗೆ ಹೋರಾಟಗಾರರ ಶೂರತನ ಇವಗಳನ್ನೆಲ್ಲಾ ಸ್ಥಳೀಯ ಸಮೂದಾಯವೊಂದರ ಆಡು ಭಾಷೆಯಲ್ಲಿ ಕಟ್ಟಿಕೊಡುವುದು ಅಷ್ಟು ಸುಲಭವಲ್ಲ ಆದರೆ ರಂಗಸೌಗಂಧ ಈ ನಾಟಕ ಪ್ರದರ್ಶನಮಾಡಿ ತನ್ನ ಗಟ್ಟಿತನವನ್ನು ಸಾಬೀತುಮಾಡಿದೆ.
ಪಾತ್ರಧಾರಿಗಳಲ್ಲಿ ಕನ್ನ ನಾಯ್ಕ ಆಗಿ ಗಣಪತಿ ಹೆಗಡೆ ಗುಂಜಗೋಡು, ಚೌಡಾ ನಾಯ್ಕ ಆಗಿ ನಾಗಪತಿ ಭಟ್ಟ, ಮೈಲಿ ಪಾತ್ರದಲ್ಲಿ ಶುಭಾ ರಮೇಶ್, ಅದ್ಭುತ ಅಭಿನಯದಿಂದ ಪ್ರೇಕ್ಷಕರ ಗಮನ ಸೆಳೆದರೆ ಇತರ ಪಾತ್ರಧಾರಿಗಳೂ ಹದವರಿತು ನಟಿಸಿ ಈ ರಂಗಪ್ರಸಂಗದ ಸೊಗಸು ಹೆಚ್ಚಿಸಿದರು.
ಗಣಪತಿ ಹೆಗಡೆ ಗುಂಜಗೋಡರ ಕನ್ನ ನಾಯ್ಕ, ನೆಹರೂ ಹಾಗೂ ಮನೋವೈದ್ಯನ ಪಾತ್ರಗಳ ಅಭಿನಯ ಅವರ ರಂಗಾನುಭವಕ್ಕೆ ಸಾಕ್ಷಿ ಒದಗಿಸಿದವು. ಮೈಲಿ ಪಾತ್ರದ ಶುಭಾ ರಮೇಶ ಮೈಲಿಯಾಗಿ ಪರಕಾಯ ಪ್ರವೇಶ ಮಾಡಿದಂತಿತ್ತು. ನಾಗಪತಿ ಭಟ್ಟ ಎಂದಿನಂತೆ ತಮ್ಮ ಅಭಿನಯದಿಂದಲೇ ಚೌಡ ನಾಯ್ಕರ ಘನತೆ ಹೆಚ್ಚಿಸಿದರು. ರಂಗಸೌಗಂಧದ ಇತರ ಸಾಥಿಗಳು ತಮ್ಮ ಸಂಗೀತ,ವಿನ್ಯಾಸ, ವಸ್ತ್ರಾಲಂಕಾರಗಳ ಮೂಲಕ ನಾಟಕದ ಮೆರಗು ಹೆಚ್ಚಿಸಿದರು. ಚೌಡ ನಾಯ್ಕರ ದುರಂತ ಕತೆ ಭಾರತದ ಚರಿತ್ರೆ,ಸ್ವಾತಂತ್ರ‍್ಯ ಹೋರಾಟದ ಇತಿಹಾಸ ಹೇಳುತ್ತಲೇ ಬೋಲೋ ಭಾರತ ಮಾತಾ ಕಿ, ಒಂದೇ ಮಾತರಂ ಎನ್ನುವ ಘೋಷಣೆ ಮತ್ತೆ ಮತ್ತೆ ಅನುರಣಿಸುವುದು ರಂಗಸೌಗಂಧ ದ ಗಂಧ ಸೂಸುವಂತಿತ್ತು.ಈ ರಂಗ ಪ್ರಸ್ತುತಿ ಸ್ವಾತಂತ್ರ‍್ಯ ಹೋರಾಟದ ಸ್ಮರಣೆಗೆ ಸೂಕ್ತ ವೇದಿಕೆ ಎನ್ನಲಡ್ಡಿಯಿಲ್ಲ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






