


ಬಟ್ಟೆಗಳೇ ಧರ್ಮವಲ್ಲ, ಧರ್ಮದ ಅಂತರಾಳಕ್ಕೆ ಇಳಿಯಬೇಕು: ಬ್ರಹ್ಮಾನಂದ ಸರಸ್ವತಿ ಶ್ರೀ
ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದು ಬ್ರಹ್ಮಾನಂದ ಸರಸ್ವತಿ ಶ್ರೀ ಹೇಳಿದರು.
ಕಾರವಾರ: ಬಟ್ಟೆಗಳನ್ನೇ ಧರ್ಮವೆಂದು ತಿಳಿದು ತಮಗೆ ಅನುಕೂಲವಾಗುವಂತಹ ಸಿದ್ಧಾಂತಗಳ ಮೇಲೆ ವಾದಗಳನ್ನು ಮಂಡಿಸಲಾಗುತ್ತಿದೆ. ಮಕ್ಕಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸದಿದ್ದರೆ ದೇಶಪ್ರೇಮ ಏನಾಗಲಿದೆ ಎಂಬ ಬಗ್ಗೆ ಭಯವಾಗುತ್ತಿದೆ ಎಂದು ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದ್ದಾರೆ.
ಹೊನ್ನಾವರದಲ್ಲಿ ಮಾತನಾಡಿದ ಅವರು, ಧರ್ಮದ ನಿಟ್ಟಿನಲ್ಲಿ ಶಾಲೆಯ ಮಕ್ಕಳು ಕೇಸರಿ ಶಾಲು, ಟೋಪಿ, ಹಿಜಾಬ್‌ಗಳನ್ನು ಹಾಕಿಕೊಂಡು ಬಂದು ವಿವಾದ ಸೃಷ್ಟಿಯಾಗಿದೆ. ಹಾಗಿದ್ದರೆ ಧರ್ಮವೆಂದರೇನು? ಟೋಪಿ, ಮುಖವಾಡ, ಕೇಸರಿ ಶಾಲು ಇವು ಧರ್ಮವಲ್ಲ. ಧರ್ಮವೆಂದರೆ ಬದುಕಿನ ನಿಯಮ. ಸನ್ಯಾಸವೆಂದರೆ ಕೇಸರಿ ಬಟ್ಟೆಯೊಂದೇ ಅಲ್ಲ. ನಮಗೆ ನಾವೇ ಹಾಕಿಕೊಳ್ಳುವ ಕಟ್ಟುಪಾಡು ಎಂದು ಹೇಳಿದರು. ಕೇಸರಿ ಹಾಕಿದ ಮೇಲೆ ಯಾರ ಮನೆಗೂ ಹೋಗುವಂತಿಲ್ಲ, ಮಾರ್ಗದಲ್ಲಿ ನಿಂತು ತಿನ್ನುವಂತಿಲ್ಲ. ಧರ್ಮಕ್ಕೆ ವಿರುದ್ಧವಾದ ವಿಚಾರಗಳನ್ನೂ ಮಾಡುವಂತಿಲ್ಲ ಇಂತಹ ನೈತಿಕತೆಯ ಮಟ್ಟ ಹೆಚ್ಚಿಸುವುದೇ ಧರ್ಮ ಎಂದು ಹೇಳಿದರು.
ಬಟ್ಟೆಗಳೇ ಧರ್ಮವಲ್ಲ. ಧರ್ಮದ ಅಂತರಾಳಕ್ಕೆ ಇಳಿಯಬೇಕು. ವೇದ, ಉಪನಿಷತ್, ಅನ್ಯಧರ್ಮದ ಖುರ್- ಆನ್, ಬೈಬಲ್‌ಗಳ ಅಂತರಾಳಕ್ಕೆ ಹೋದಾಗ ಸತ್ಯದರ್ಶನವಾಗುತ್ತದೆ ಎಂದರು.
ನಮ್ಮ ನಾಯಕರುಗಳಿಗೆ ದೇಶೀಯತೆ ಬೇಕಿದೆಯೇ?, ಬೇಕಿದ್ದರೆ ಇಂಥ ಸ್ಥಿತಿ ನಿರ್ಮಾಣವಾಗುತ್ತಿತ್ತಾ? ರಾಷ್ಟ್ರೀಯತೆ, ದೇಶೀಯತೆ, ರಾಷ್ಟ್ರ- ಸಹೋದರತೆ ಕಟ್ಟಬೇಕು ಎಂಬ ಮನಸ್ಥಿತಿ ನಮ್ಮ ರಾಜಕೀಯ ನಾಯಕರುಗಳಿಗೆ ಇಲ್ಲ. ಯಾವುದೇ ದೇಶದಲ್ಲಿ ಜನಾಂಗೀಯ ಸಂಘರ್ಷಗಳು ಉಂಟಾದರೆ ಆ ದೇಶ ಉಳಿಯುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮತೀಯ ಸಂಘರ್ಷಗಳು ಉಂಟಾದ ಯಾವ ದೇಶಗಳು ಉದ್ಧಾರವಾಗಿಲ್ಲ. ಉದ್ಧಾರವಾಗದಿದ್ದರೂ ಚಿಂತೆಯಿಲ್ಲ, ನನ್ನ ಪಕ್ಷ ಬರಬೇಕು ಎಂಬ ಮಾನಸಿಕತೆಯ ಜನರಿಂದಾಗಿ ಇಂತಹ ಘಟನೆ ಉಂಟಾಗುತ್ತಿರುವುದಾಗಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ. (ಈಟಿ.ಬಿ.ಕೆ.)
