

ಅಣಶಿ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ: ರಾಜ್ಯ ಹೆದ್ದಾರಿ ಸಂಚಾರ ಬಂದ್
ಕಾರವಾರದ ಅಣಶಿ ಘಟ್ಟದಲ್ಲಿ ಭಾರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ. ಪರಿಣಾಮ ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
ಕಾರವಾರ(ಉತ್ತರ ಕನ್ನಡ): ಜೋಯಿಡಾ ತಾಲೂಕಿನ ಅಣಶಿ ಘಟ್ಟದಲ್ಲಿ ಭಾೀರಿ ಮಳೆಯಿಂದಾಗಿ ಗುಡ್ಡ ಕುಸಿತವಾಗಿದೆ. ಇದರ ಪರಿಣಾಮ ಕಾರವಾರದ ಬೆಳಗಾವಿ ಸಂಪರ್ಕಿಸುವ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿದೆ. ಕಳೆದ ನಾಲ್ಕು ದಿನಗಳಿಂದ ಭಾರಿ ಪ್ರಮಾಣದ ಮಳೆಯಾಗುತ್ತಿರುವ ಹಿನ್ನೆಲೆ ಗುಡ್ಡ ಕುಸಿತವಾಗಿದೆ. ಕಳೆದ ತಿಂಗಳು ಗುಡ್ಡ ಕುಸಿತವಾಗಿದ್ದರಿಂದ ವಾರಕ್ಕೂ ಹೆಚ್ಚು ಕಾಲ ಈ ರಾಜ್ಯ ಹೆದ್ದಾರಿ ಬಂದ್ ಮಾಡಲಾಗಿತ್ತು.
ಬಳಿಕ ಹಗಲಿನ ವೇಳೆ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಇದೀಗ ಮತ್ತೆ ಅದೇ ಪ್ರದೇಶದಲ್ಲಿ ಗುಡ್ಡ ಕುಸಿತವಾಗಿದ್ದು, ಜೋಯಿಡಾ, ದಾಂಡೇಲಿ ಹಾಗೂ ಕಾರವಾರಕ್ಕೆ ಹೋಗುವ ಪ್ರಯಾಣಿಕರು ಪರದಾಡುವಂತಾಗಿದೆ.
ಅಣಶಿ ಘಟ್ಟದಲ್ಲಿ ಮತ್ತೆ ಗುಡ್ಡ ಕುಸಿತ
ತಕ್ಷಣ ಕಾರ್ಯ ಪ್ರವೃತ್ತವಾದ ಸ್ಥಳೀಯ ಆಡಳಿತ ಜೆಸಿಬಿ ಮೂಲಕ ಮಣ್ಣನ್ನು ತೆರವು ಮಾಡುತ್ತಿದೆ. ಕಂದಾಯ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಹೊನ್ನಾವರದ ಅಪ್ಸರಕೊಂಡದಲ್ಲಿ ಗುಡ್ಡ ಕುಸಿತದ ಭೀತಿ: ಕಾಳಜಿ ಕೇಂದ್ರಕ್ಕೆ ಜನರ ಸ್ಥಳಾಂತರ
ವಾರದ ಹಿಂದೆ ಭಟ್ಕಳ ತಾಲೂಕಿನಲ್ಲಿ ಸುರಿದ ರಣಭೀಕರ ಮಳೆಗೆ ಗುಡ್ಡ ಕುಸಿದು ನಾಲ್ವರು ಮೃತಪಟ್ಟಿದ್ದರು. ಆದರೆ ಈ ಕರಾಳ ನೆನಪು ಮಾಸುವ ಮುನ್ನವೇ ಇದೀಗ ಹೊನ್ನಾವರ ತಾಲೂಕಿನ ಅಪ್ಸರಕೊಂಡದಲ್ಲಿ ಮತ್ತೆ ಗುಡ್ಡ ಬಾಯ್ತೆರೆದುಕೊಂಡಿದೆ. ಇದೀಗ ಸ್ಥಳೀಯರಲ್ಲಿ ಗುಡ್ಡ ಕುಸಿತ ಭೀತಿ ಕಾಡತೊಡಗಿದೆ.
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಭಾರೀ ಪ್ರಮಾಣದ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಹೊನ್ನಾವರದ ಕೆಳಗಿನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಪ್ಸರಕೊಂಡದಲ್ಲಿ ಗುಡ್ಡ ಕುಸಿತದ ಭೀತಿ ಎದುರಾಗಿದೆ. ಕಳೆದ ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿ ಎದುರಿಸಿದ್ದ ಜನಕ್ಕೆ ಇದೀಗ ಮತ್ತೊಂದು ಭೀತಿ ಎದುರಾಗಿದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರದಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.
ಗುಡ್ಡ ಪ್ರದೇಶದ ಕೆಳಗೆ 60ಕ್ಕೂ ಹೆಚ್ಚಿನ ಕುಟುಂಬಗಳು ವಾಸ ಮಾಡುತ್ತಿವೆ. ಈಗಾಗಲೇ ಬಹುತೇಕ ಕುಟುಂಬಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಂತರಿಸಲಾಗಿದೆ. ಗುಡ್ಡದ ಮೇಲೆ ಬೃಹದಾಕಾರದ ಬಂಡೆಗಳಿದ್ದು, ಸ್ವಲ್ಪ ಎಚ್ಚರ ತಪ್ಪಿದ್ರೂ ಅದರ ಕೆಳಗಿರುವ ನಿವಾಸಿಗಳಿಗೆ ಅಪಾಯ ತಪ್ಪಿದ್ದಲ್ಲ. ಅಪ್ಸರಕೊಂಡದಲ್ಲಿ ಗುಡ್ಡ ಕುಸಿಯುವ ಭೀತಿ ಇರುವ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನೀಲ್ ನಾಯ್ಕರೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ರು.
ಮಳೆಗಾಲದ ಸಂದರ್ಭದಲ್ಲಿ ಗುಡ್ಡವನ್ನು ತೆರವುಗೊಳಿಸುವುದು ಇನ್ನೊಂದು ಅಪಾಯಕ್ಕೆ ದಾರಿ ಮಾಡಿಕೊಡಬಹುದು ಎಂಬ ಭಯವೂ ಇದೆ. ಈಗ ಕಣ್ಣಳತೆಯಲ್ಲಿ ಕಾಮಗಾರಿ ನಡೆಸುವುದು ಕಷ್ಟಸಾಧ್ಯ ಎಂಬ ಪರಿಸ್ಥಿತಿ ಇರುವುದರಿಂದ ಗುಡ್ಡ ತೆರವಿನಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಮಾಹಿತಿ ಪಡೆದು, ಸರ್ವೇ ನಡೆಸುವಂತೆ ಅಧಿಕಾರಿಗಳಿಗೆ ಸಚಿವರು ಆದೇಶಿಸಿದ್ದಾರೆ.
ಅಲ್ಲದೇ ಆ ಭಾಗದ ನಿವಾಸಿಗಳಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸಚಿವರಿಗೆ ಗುಡ್ಡ ಕುಸಿತದ ಸ್ಥಳ ಹಾಗೂ ಸುತ್ತಲಿನ ಮನೆ ಮತ್ತು ರೈತರ ಭೂಮಿಯಲ್ಲಿ ಬೆಳೆದ ಬೆಳೆಗಳ ಬಗ್ಗೆ ಶಾಸಕ ಸುನೀಲ್ ನಾಯ್ಕ ವಿವರಿಸಿದರು. (ಈಟಿಬಿಕೆ)
