

ಶಿರಸಿ ಕ್ಷೇತ್ರ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ವಿಧಾನಸಭಾ ಕ್ಷೇತ್ರ. ರಾಜ್ಯದಲ್ಲಿ ಭೂಸುಧಾರಣೆ ಕಾನೂನು ಜಾರಿಯಾಗಿ ಲಕ್ಷಾಂತರ ಬಡವರಿಗೆ ಭೂಮಿ ನೀಡಿದ ಕೀರ್ತಿಯ ಕಾಗೋಡು ಹೋರಾಟದ ರೂವಾರಿ ಎಚ್. ಗಣಪತಿಯಪ್ಪ ನವರಿಂದ ಹಿಡಿದು ಈ ಬಾರಿಯ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣನವರ ವರೆಗೆ ಅನೇಕರು ಈ ಕ್ಷೇತ್ರದಲ್ಲಿ ಚುನಾವಣಾ ಅಖಾಡದಲ್ಲಿ ಸೆಣಸಿದ್ದಾರೆ. ರಾಮಕೃಷ್ಣ ಹೆಗಡೆಯವರ ತವರು ಕ್ಷೇತ್ರವಾದ ಶಿರಸಿ ಭೌಗೋಳಿಕವಾಗಿ, ಜನಾಂಗೀಯವಾಗಿ, ಸಾಂಸ್ಕೃತಿಕವಾಗಿ ಹಲವು ಕೋನಗಳಿಂದ ಬಹುವಿಶಿಷ್ಟ ಕ್ಷೇತ್ರ.

ಬಹುಸಂಖ್ಯಾತ ದೀವರು ಅಥವಾ ನಾಮಧಾರಿಗಳ ಕ್ಷೇತ್ರವಾಗಿದ್ದ ಶಿರಸಿ ವಿಧಾನಸಭಾ ಕ್ಷೇತ್ರವನ್ನು ಹಿಂದೆ ಪರಿಶಿಷ್ಟರ ಮೀಸಲು ಕ್ಷೇತ್ರ, ನಂತರ ಕ್ಷೇತ್ರ ವಿಂಗಡನೆಯಲ್ಲಿ ದೀವರ ಮತಗಳನ್ನು ಶಿರಸಿ-ಯಲ್ಲಾಪುರಗಳಿಗೆ ವಿಂಗಡಿಸಿ ಶಿರಸಿಯಲ್ಲಿ ದೀವರ ಪ್ರಾಬಲ್ಯವನ್ನು ಒಡೆಯುವ ಹಿನ್ನೆಲೆಯಲ್ಲಿ ಕೇಂದ್ರ ಮಟ್ಟದಲ್ಲಿ ಅನೇಕ ಪ್ರಯತ್ನಗಳಾಗಿವೆ. ಆದರೆ ಈವರೆಗೂ ಶಿರಸಿ ಕ್ಷೇತ್ರದಲ್ಲಿ ಐವತ್ತು ಸಾವಿರಕ್ಕಿಂತ ಹೆಚ್ಚು ಮತದಾರರನ್ನು ಹೊಂದಿರುವ ದೀವರೇ ನಿರ್ಣಾಯಕರು.
ಶಿರಸಿ ಕ್ಷೇತ್ರದಲ್ಲಿ ರಾಮಕೇಷ್ಣ ಹೆಗಡೆ, ಇತ್ತೀಚೆಗೆ ವಿಶ್ವೇಶ್ವರ ಹೆಗಡೆ ನಡುವೆ ಮೀಸಲು ಕ್ಷೇತ್ರವಾಗಿದ್ದಾಗ ಗೋಪಾಲ ಕಾನಡೆ, ಪಿ.ಎಸ್. ಜೈವಂತ್, ವಿವೇಕಾನಂದ ವೈದ್ಯ ಹೀಗೆ ಅನೇಕರು ಶಾಸಕರು, ಸಚಿವರು ಆದರೂ ದೀವರಿಗೆ ಈ ಕ್ಷೇತ್ರದಲ್ಲಿ ಒಮ್ಮೆಯೂ ಶಾಸಕರಾಗುವ ಅವಕಾಶ ಸಿಕ್ಕಿಲ್ಲ!.
೫೦ ಸಾವಿರಕ್ಕಿಂತ ಹೆಚ್ಚಿನ ಮತದಾರರಿರುವ ನಾಮಧಾರಿಗಳನ್ನು ಬಿಟ್ಟರೆ ಈ ಕ್ಷೇತ್ರದಲ್ಲಿ ಹವ್ಯಕರು ಎರಡನೇ ಹೆಚ್ಚಿನ ಮತದಾರರು. ೩೦ ಸಾವಿರಗಳ ಆಸು-ಪಾಸು ಇರುವ ಹವ್ಯಕರು ಈ ಕ್ಷೇತ್ರವನ್ನು ಅನೇಕ ಬಾರಿ ಪ್ರತಿನಿಧಿಸಿದ್ದಾರೆ. ಅವರಲ್ಲಿ ಈ ಕ್ಷೇತ್ರದಿಂದ ಆಯ್ಕೆಯಾಗಿದ್ದ ರಾಮಕೃಷ್ಣ ಹೆಗಡೆ, ವಿಶ್ವೇಶ್ವರ ಹೆಗಡೆ ಸಚಿವರಾಗಿ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಬಹುವರ್ಷಗಳ ವರೆಗೆ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಸಚಿವರಾಗಿದ್ದ ಹಾಲಿ ಸಂಸದ ಅನಂತಕುಮಾರ ಹೆಗಡೆ, ಸುದೀರ್ಘ ಅವಧಿ ಸಂಸದರಾಗಿ ಕ್ಷೇತ್ರ ಬಿಟ್ಟು ಶಸ್ತ್ರ ತ್ಯಾಗ ಮಾಡಿದ್ದ ಮಾಜಿ ಸಂಸದ ದಿ. ಜಿ. ದೇವರಾಯ ನಾಯ್ಕ ಇದೇ ಕ್ಷೇತ್ರದವರು ಎನ್ನುವುದು ವಿಶೇಶ.
ಹೀಗೆ ಅನೇಕ ವೈಶಿಷ್ಟ್ಯಗಳ ಶಿರಸಿ ಕ್ಷೇತ್ರದಲ್ಲಿ ಈ ಬಾರಿ ಬಿ.ಜೆ.ಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ,ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ಹಾಗೂ ಜಾತ್ಯಾತೀತ ಜನತಾದಳದಿಂದ ಉಪೇಂದ್ರ ಪೈ ಹುರಿಯಾಳುಗಳಾಗಿದ್ದಾರೆ. ಇವರೊಂದಿಗೆ ಇನ್ನೂ ನಾಲ್ಕೈದು ಜನ ಈ ವಿಧಾನಸಭಾ ಚುನಾವಣೆಯಲ್ಲಿ ಸ್ಫರ್ಧಿಗಳಾಗಬಹುದಾದರೂ ಅವರ್ಯಾರೂ ಆಟಕ್ಕಿದ್ದರೂ ಲೆಕ್ಕಕ್ಕಿಲ್ಲದ ಸ್ಥಿತಿ. ಈ ಮೂವರು ಪ್ರಮುಖ ಸ್ಫರ್ಧಾಳುಗಳಲ್ಲಿ ಭೀಮಣ್ಣ ನಾಯ್ಕ ಒಂದು ಜಿ.ಪಂ. ಚುನಾವಣೆ ಗೆದ್ದದ್ದು ಬಿಟ್ಟರೆ ಕನಿಷ್ಠ ಐದು ಬಾರಿ ವಿಧಾನಸಭಾ,ಲೋಕಸಭಾ, ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಸೋತರೂ ಈಗಲೂ ಪ್ರಸ್ತುತವಾಗಿರುವ ಹಿರಿಯ ನಾಯಕ.
ಇವರೆದುರು ನಿರಂತರ ಆರು ವಿಧಾನಸಭಾ ಚುನಾವಣೆಗಳನ್ನು ಗೆದ್ದು ಸಚಿವ, ವಿಧಾನಸಭಾ ಅಧ್ಯಕ್ಷರಾಗಿ ಈಗ ನಾಲ್ಕನೇ ಬಾರಿ ಇದೇ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಬಿ.ಜೆ.ಪಿ.ಯಿಂದ ಸ್ಫರ್ಧಿಸುತಿದ್ದಾರೆ.
ಭೀಮಣ್ಣ, ವಿಶ್ವೇಶ್ವರ ಹೆಗಡೆ ಕಾಗೇರಿಗಳಲ್ಲಿ ಗುಣವಿಶೇಶಗಳಲ್ಲಿ ಹೆಚ್ಚಿನ ವ್ಯತ್ಯಾಸಗಳಿಲ್ಲ. ಸತತ ಆರೇಳು ಸೋಲುಗಳ ನಂತರವೂ ಜನಸಂಪರ್ಕ, ಉಧಾರತೆ, ಸರಳತೆಗಳ ಮೂಲಕ ಜನಪರವಾಗಿರುವ ಭೀಮಣ್ಣ ರಾಜಕೀಯ ಪ್ರವೇಶಿಸಿದ್ದು ಬಂಗಾರಪ್ಪನವರ ಮೂಲಕ. ಉದ್ಯಮಿಯಾಗಿ,ಕೃಷಿಕರಾಗಿ,ದಾನಿಯಾಗಿ ಗುರುತಿಸಿಕೊಂಡಿರುವ ಭೀಮಣ್ಣ ನಾಯ್ಕ ರ ಎದುರು ಆರು ಬಾರಿ ಶಾಸಕರಾಗಿರುವ ವಿಶ್ವೇಶ್ವರ ಹೆಗಡೆ ಸಂಘದ ಹಿನ್ನೆಲೆಯಿಂದ ಬಂದು ಸಂಘದ ನಯವರಿತ ಉಪಾಯಗಳಿಂದ ಜನಮನಗೆದ್ದು ಉಪಕಾರಿಯಾಗದ ವ್ಯಕ್ತಿ.
ಶಿರಸಿ ಕ್ಷೇತ್ರದ ಪ್ರಮುಖ ಹುರಿಯಾಳುಗಳಾಗಿರುವ ಉಪೇಂದ್ರ ಪೈ, ಭೀಮಣ್ಣ ನಾಯ್ಕರಿಗೆ ಜನಪರತೆಯ ಗೌರವವಿದ್ದರೆ ನಿರಂತರ ಜನಪ್ರತಿನಿಧಿಯಾಗಿರುವ ಕಾಗೇರಿಯವರಿಗೆ ಬರಿಗೈಯ, ಒಣ ಭಾಷಣದ ವೈದಿಕ ತಂತ್ರವೊಂದೇ ಅಸ್ತ್ರ.
ಶಿರಸಿ ಕ್ಷೇತ್ರದಲ್ಲಿ ಸತತ ಮೂರು ಬಾರಿ ಆಯ್ಕೆಯಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸರ್ಕಾರಿ ಅನುದಾನ ಹಂಚಿಕೆ ಪಟ್ಟಿ ನೋಡಿದರೆ ಅಲ್ಲಿ ಪಕ್ಷಪಾತ ಎದ್ದು ಕಾಣುತ್ತದೆ. ಸ್ವಜಾತಿ,ಸ್ವಪಕ್ಷದವರ ಪರ ಪಕ್ಷಪಾತಿಯಾಗಿ ಕೆಲಸ ಮಾಡುವ ವಿಶ್ವೇಶ್ವರ ಹೆಗಡೆ ಕಾಗೇರಿ ಕೊಟ್ಟಿರುವ ಗರಿಷ್ಠ ಅನುದಾನಗಳಲ್ಲಿ ಸಾವಿರ-ಲಕ್ಷಗಳ ಲೆಕ್ಕದ್ದು ಬಹುಸಂಖ್ಯಾತರು,ಬಹುಜನರಿಗೆ ಸಿಕ್ಕಿದ್ದರೆ,ತಮ್ಮವರಿಗೆ ಕೊಟ್ಯಾಂತರ ಅನುದಾನ ನೀಡುವ ಮೂಲಕ ಕಾಗೇರಿ ತಮ್ಮ ಸಂಘದ ಧೋರಣೆಯಂತೆ ಮೇಲ್ವರ್ಗ, ಮೇಲ್ಜಾತಿಗಳ ಪಕ್ಷಪಾತಿ ಎನಿಸುತ್ತದೆ.
ಬಹುಸಂಖ್ಯಾತ ದೀವರ ದೊಡ್ಡ ಹಳ್ಳಿಗಳಿಗೆ ಅನುದಾನ ಕೊಡದೆ, ನಾಮಧಾರಿ ಪ್ರಮುಖ ಮುಖಂಡರನ್ನು ಬೆಳೆಯಲು ಬಿಡದೆ ತನ್ನ ಬಾಲಬಡುಕರನ್ನು ಸಾಕಿಕೊಂಡಿರುವ ಕಾಗೇರಿ ತನ್ನ ರಾಜಕೀಯ ಜೀವನದಲ್ಲಿ ಈ ಬಾರಿ ಸಂಯಮ ಮೀರಿ ವರ್ತಿಸುವ, ಸಾರ್ವಜನಿಕ ವೇದಿಕೆಗಳಲ್ಲಿ ಸವಾಲು ಹಾಕುವ ಪರಿಸ್ಥಿತಿ ಅವರ ಹತಾಶ ಮನೋಭಾವವನ್ನು ಪ್ರತಿಬಿಂಬಿಸುತ್ತದೆ.
ಶಿರಸಿ ಕ್ಷೇತ್ರದಲ್ಲಿ ಸ್ವಜಾತಿಯವರನ್ನೂ ಸೇರಿ ಇತರ ಯಾವುದೇ ಸಮೂದಾಯದವರನ್ನು ಬೆಳೆಯಲು ಬಿಡದ ಕಾಗೇರಿ ವಿಶ್ವೇಶ್ವರ ಹೆಗಡೆಯವರಿಗೆ ಈ ಬಾರಿ ಸಂಘನಿಷ್ಠ ಪತ್ರಕರ್ತರು ಹಿಂದೆ ಬಿದ್ದಿರುವ ಕಾರಣ ಹುಡುಕಿದರೆ ಹತ್ತಿದ ಏಣಿ ಒದೆಯುತ್ತಿರುವ ಕಾಗೇರಿಯವರ ನಮಕ್ ಹರಾಮ್ ವಲಸೆಬುದ್ಧಿ ಇದಕ್ಕೆಲ್ಲಾ ಕಾರಣ ಎನ್ನುವುದು ಸ್ಫಷ್ಟವಾಗುತ್ತದೆ.
ಶಿರಸಿ-ಸಿದ್ಧಾಪುರಗಳಲ್ಲಿ ಬಿ.ಜೆ.ಪಿ.ಯ ಪ್ರಮುಖರೆನ್ನುವವರ ವಿರೋಧ ಕಟ್ಟಿಕೊಂಡು ಪಕ್ಷದ ಅಭಿಪ್ರಾಯ ಸಂಗ್ರಹಣೆಯಲ್ಲಿ ವಿರೋಧಿ ಬಣದ ಸ್ವಪಕ್ಷದ ನಾಯಕರಿಗಿಂತ ಕಡಿಮೆ ಬೆಂಬಲ ಪಡೆದ ಕಾಗೇರಿ ಮತ್ತೆ ಮತ್ತೆ ಅಭ್ಯರ್ಥಿಯಾಗುವ ಹಿಂದೆ ಅವರ ಸಂಘದ ಸಂಬಂಧಿಗಳ ಅಭಯ ವಿರುವುದೂ ಸ್ಫಷ್ಟವಿದೆ.
ಭೀಮಣ್ಣ ನಾಯ್ಕ, ಉಪೇಂದ್ರ ಪೈ ಎದುರು ಜುಗ್ಗನಾಗಿ ಕಾಣುವ ಕಾಗೇರಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿದ್ದ ಉಪೇಂದ್ರ ಪೈ ಬೆಂಬಲ ಪಡೆದು ಭೀಮಣ್ಣರ ವಿರುದ್ಧ ಜಯಗಳಿಸಿರುವುದು ಈಗ ಇತಿಹಾಸ. ಈ ವರ್ಷ ಹಿಂದಿನ ಚುನಾವಣೆಯಲ್ಲಿ ಹೆಗಲುಕೊಟ್ಟ ದುಡಿದ ಬಿಜೆ.ಪಿ. ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಜಿ. ನಾಯ್ಕ ಬಣ ತಿರುಗಿ ಬಿದ್ದಿದೆ.ಕಾಂಗ್ರೆಸ್ ನಲ್ಲಿದ್ದೂ ಸಂಘದ ಕುತಂತ್ರ ಮಾಡುವ ಉಪೇಂದ್ರ ಪೈನಂಥ ವಿರೋಧಿ ಮಿತ್ರರ ಸಹಕಾರವೂ ಕಾಗೇರಿಯವರಿಗಿಲ್ಲ.ಕಳೆದ ವರ್ಷ ಹೆಚ್ಚು ಮತಗಳಿಸಿಕೊಟ್ಟ ಪರೇಶ್ ಮೇಸ್ತ ಪ್ರಕರಣಬೋಗಸ್ ಎಂದು ಸಾಬೀತಾಗಿರುವುದರಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿ.ಜೆ.ಪಿ.ಗೆ ಬೀಳಬಹುದಾಗಿದ್ದ ಮತಗಳು ಬಿ.ಜೆ.ಪಿ.ಯಿಂದ ದೂರ ಸರಿದಿವೆ. ಈ ಕಾರಣಗಳಿಂದ ಚುನಾವಣೆ ಮೊದಲೇ ಸೋಲೊಪ್ಪಿಕೊಂಡಂತಿರುವ ಕಾಗೇರಿ ವಿಶ್ವೇಶ್ವರ ಹೆಗಡೆ ಹಿಂದಿನ ವರ್ಷ ಜೆ.ಡಿ.ಎಸ್. ಹಿಂದೆ ಸರಿಸಿ ಆಡಿದ ನಾಟಕವನ್ನೇ ಈ ಬಾರಿಯೂ ಮಾಡಲಿದ್ದಾರೆ ಎನ್ನುವ ಅನುಮಾನ ಕ್ಷೇತ್ರದಲ್ಲಿ ದಟ್ಟವಾಗಿದೆ!. ಈ ಅನುಮಾನದ ಹಿಂದೆ ಹಲವು ಅಂಶಗಳಿರುವುದನ್ನು ಅಲ್ಲಗಳೆಯುವಂತಿಲ್ಲ.
ಜೆ.ಡಿ.ಎಸ್. ನ ಉಪೇಂದ್ರ ಪೈ ಮೂಲ ಆರೆಸ್ಸೆಸ್ಸಿಗರು, ಬಿ.ಜೆ.ಪಿ. ಮುಖಂಡರು, ಪಕ್ಷದ ಒಳಗಿನ ಕೆಲವರ ಸಂಪರ್ಕ, ಸಂಬಂಧದಲ್ಲಿರುವ ಪೈ ದುರ್ಬಲ ಜಾದಳವನ್ನು ಪ್ರಚಾರಕ್ಕೆ ತಂದಿದ್ದಾರೆ. ಆದರೆ ಅವರು ಪ್ರಬಲ ಜಾತಿಯ ಹಿನ್ನೆಲೆ ಇಲ್ಲದವರು, ಕ್ಷೇತ್ರದಲ್ಲಿ ನೆಲೆ ಇಲ್ಲದ ಪಕ್ಷದವರಾಗಿರುವುದು ಅವರಿಗೆ ತೊಡಕು. ಕಾಗೇರಿ, ಪೈ, ಭೀಮಣ್ಣ ನಡುವೆ ಸಧ್ಯಕ್ಕೆ ಪ್ರಚಾರದಲ್ಲಿ ಮೊದಲ ಸ್ಥಾನದಲ್ಲಿರುವವರು ಉಪೇಂದ್ರ ಪೈ. ಆದರೆ ಅವರ ಅದ್ಧೂರಿ ಪ್ರಚಾರದ ನಡುವೆ ಕೆಳಮಟ್ಟದಲ್ಲಿ ಹಿಡಿತ ಹೊಂದಿರುವ ಕಾಂಗ್ರೆಸ್ ಪ್ರಚಾರವಿಲ್ಲದೆ ಬುಡಮಟ್ಟದಲ್ಲಿ ಗಟ್ಟಿಯಾಗಿದೆ. ಬಿ.ಜೆ.ಪಿ. ಮೇಲ್ವರ್ಗದ ಮತಗಳನ್ನು ನೆಚ್ಚಿಕೊಂಡಿದೆಯಾದರೂ ಅವರಿಗಿರುವ ಆಡಳಿತ ವಿರೋಧಿ ಅಲೆ, ಬಿ.ಜೆ.ಪಿ.ಪಕ್ಷದ ಒಳಗಿನ ಗುದ್ದಾಟ, ಬಂಡಾಯ, ಇವುಗಳೇ ಬಿ.ಜೆ.ಪಿ. ಗೆ ಮಾರಕ ಎನ್ನಲಾಗುತ್ತಿದೆ. ಚುನಾವಣಾ ಪ್ರಚಾರದ ಒಂದು ತಿಂಗಳ ಅವಧಿ ಒಳಗೆ ಜಾದಳ ಸೊರಗಿರುವುದು ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿನ ಸಾಧ್ಯತೆಯನ್ನು ವೃದ್ಧಿಸಿದೆ.
ಕಾಂಗ್ರೆಸ್ ನ ಭೀಮಣ್ಣ ಅವರಿಗಿರುವ ಅನುಕಂಪ,ಕಾಂಗ್ರೆಸ್ ವೇವ್ ಹಾಗೂ ತಮ್ಮ ಭೀಮಬಲದ ಸಂಪೂರ್ಣ ಪ್ರಯೋಜನ ಪಡೆದುಕೊಂಡರೆ ಈ ಬಾರಿಯಾದರೂ ಅವರು ವಿಧಾನಸೌಧದ ಮೆಟ್ಟಿಲೇರಬಹುದು ಆದರೆ ಬಿ.ಜೆ.ಪಿ.ಯಂತೆ ಬಹಿರಂಗವಾಗಿರದ ಕಾಂಗ್ರೆಸ್ ನ ದಾಯಾದಿ ಮತ್ಸರ ಕಾಗೇರಿಯವರ ಕಾಂಚಾಣಕ್ಕೆ ಬಲಿಯಾದರೆ ಫಲಿತಾಂಶ ಬದಲಾದರೂ ಅಚ್ಚರಿ ಇಲ್ಲ. ಆದರೆ ಪ್ರಮುಖ ಮೂರು ಪಕ್ಷಗಳಲ್ಲಿ ಆಡಂಬರ, ಅಧಿಕಾರ, ಪ್ರಚಾರವಿಲ್ಲದೆ ಈ ಬಾರಿ ಬೀಮಣ್ಣ ಎನ್ನುವ ಸಾರ್ವತ್ರಿಕ ಒಲವು ಅವರಿಗಿರುವ ಗುಣಾತ್ಮಕ ಅಂಶ.
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
