
ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಜನರ ಭಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಸಾರ್ವಜನಿಕರ ಬೇಡಿಕೆಗಳಿಗೆ ಹಂತ ಹಂತವಾಗಿ ಸ್ಪಂದಿಸಲಾಗುವುದು ಎಂದು ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು.
ತಾಲೂಕಿನ ಕಿಲವಳ್ಳಿಯಲ್ಲಿ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಜನರು ಕೊಟ್ಟಂತ ಅಧಿಕಾರವನ್ನು ಸಮರ್ಥವಾಗಿ ನಿಭಾಯಿಸುವುದು ಜನಪ್ರತಿನಿಧಿಯಾದವನ ಕರ್ತವ್ಯವಾಗಿದೆ. ಹಿರಿಕಿರಿಯ ಸಹೋದರ-ಸಹೋದರಿಯರ ನಿರಂತರ ಶ್ರಮದಿಂದ ನಾನು ಆಯ್ಕೆಯಾಗಿದ್ದೇನೆ. ಈ ಭಾಗದ ಜನರ ಬೇಡಿಕೆಗಳನ್ನು ಒಂದೊಂದಾಗಿ ಆದ್ಯತೆಯ ಮೇರೆಗೆ ಇಡೇರಿಸಲಾಗುವುದು. ಸರ್ಕಾರದ ಎಲ್ಲಾ ಮಂತ್ರಿಗಳ ಸಹಕಾರದಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರಲು ಪ್ರಯತ್ನಿಸುತ್ತೇನೆ. ಕ್ಷೇತ್ರದ ಜನರ ಭಾವನೆಯನ್ನು ಸರ್ಕಾರದ ಮುಂದಿಟ್ಟಿದ್ದು, ಹಂತ ಹಂತವಾಗಿ ಕೆಲಸ ಮಾಡಲಾಗುವುದು ಎಂದರು.
ಹಿರಿಯರಾದ ಎನ್.ಎಲ್.ಗೌಡ ಕಿಲವಳ್ಳಿ ಪ್ರಾಸ್ತಾವಿಕ ಮಾತನಾಡಿ, ಕಿಲವಳ್ಳಿ ವಾರ್ಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಅತ್ಯಧಿಕ ಮತ ನೀಡಿದ್ದಾರೆ. ಮಾಜಿ ಶಾಸಕರು ಪಕ್ಷ ಸೇರಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಆದರೆ ನಾನು ಸೇರಿಲ್ಲ. ಸೋಲನ್ನೆ ಕಾಣದ ಕಾಗೇರಿ ಸೋತಿದ್ದಾರೆ. ಅವರಿಗೆ ಇನ್ನು ಗೆಲುವು ಕಷ್ಟ. ಸೋತು ಸುಣ್ಣವಾಗಿದ್ದ ಭೀಮಣ್ಣ ಗೆಲುವು ಕಂಡಿದ್ದಾರೆ. ಇನ್ನು ಮುಂದೆ ಸದಾ ಗೆಲುವನ್ನು ಕಾಣಲೆಂದು ಪ್ರಾರ್ಥಿಸುತ್ತೇನೆ. ಸರ್ಕಾರದ ಎಲ್ಲಾ ಸಚಿವರೊಂದಿಗೆ ಉತ್ತಮ ಸಂಬಂಧ ಇಟ್ಟುಕೊಂಡು ಕ್ಷೇತ್ರಕ್ಕೆ ಹೆಚ್ಚು ಅನುದಾನ ತರಬೇಕು ಎಂದರು.
ಸೋವಿನಕೊಪ್ಪ ಸೊಸೈಟಿ ಅಧ್ಯಕ್ಷ ಬಿ.ಆರ್.ನಾಯ್ಕ ಮಾತನಾಡಿ, ಜನರ ಮಧ್ಯದಲ್ಲಿ ಇರಬೇಕು ಎಂಬ ಉದ್ದೇಶ ಇಟ್ಟುಕೊಂಡು ಸುದೀರ್ಘ ಸಮಯದ ಪರಿಶ್ರಮದಿಂದ ಭೀಮಣ್ಣ ನಾಯ್ಕ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಮೂವತ್ತು ವರ್ಷದಿಂದ ಈ ಭಾಗದಲ್ಲಿ ಯಾವುದೇ ಕೆಲಸವಾಗದೇ ಇರುವುದರಿಂದ ಜನರ ಬೇಡಿಕೆಯ ಪಟ್ಟಿ ದೊಡ್ಡದಿವೆ. ಹಂತ ಹಂತವಾಗಿ ಕೆಲಸ ಮಾಡಿಸಿಕೊಳ್ಳೋಣ ಎಂದರು.
ಈ ವೇಳೆ ಸೋವಿನಕೊಪ್ಪ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸುಮಾ ಗೌಡ, ಊರಿನ ಹಿರಿಯರಾದ ಎನ್.ಎಲ್.ಗೌಡ ಕಿಲವಳ್ಳಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಜಿ.ನಾಗರಾಜ, ಪ್ರಮುಖರಾದ ಬಿ.ಆರ್.ನಾಯ್ಕ, ವಿ.ಎನ್.ನಾಯ್ಕ, ಸುಬ್ರಾಯ ಭಟ್ ಗಡಿಹಿತ್ಲು, ಸೋವಿನಕೊಪ್ಪ ಪಂಚಾಯ್ತಿ ಘಟಕಾಧ್ಯಕ್ಷ ಮಂಜುನಾಥ ನಾಯ್ಕ ಮಾವಿನಗದ್ದೆ, ಗ್ರಾಮ ಪಂಚಾಯ್ತಿ ಸದಸ್ಯ ರವಿ ಹೆಗ್ಗಾರಕೈ, ಎಂ.ಜಿ.ನಾಯ್ಕ ಹಾದ್ರಿಮನೆ, ಅರುಣ ಗೌಡ ಮಳಲಿ, ಆರ್.ಜಿ.ನಾಯ್ಕ ಕಿಬ್ಬಳ್ಳಿ ಉಪಸ್ಥಿತರಿದ್ದರು. ಸ್ಥಳೀಯ ವಿನಾಯಕ ಗೌಡ ನಿರೂಪಿಸಿದರು. ಇದೇ ವೇಳೆ ಕಿಲವಳ್ಳಿಯ ಎನ್.ಎಲ್.ಗೌಡ ಅವರನ್ನು ಶಾಸಕ ಭೀಮಣ್ಣ ನಾಯ್ಕ ಸನ್ಮಾನಿಸಿದರು.
