



ಇನ್ನೇನು ಒಂದೆರಡು ದಿವಸಗಳಲ್ಲಿ ಲೋಕಸಭೆ ಚುನಾವಣೆ ೨೪ ರ ಅಭ್ಯರ್ಥಿಗಳ ಹೆಸರು ಸ್ಫಷ್ಟವಾಗಲಿದೆ. ಈಗಿನ ವರ್ತಮಾನದ ಪ್ರಕಾರ ಶಿವಮೊಗ್ಗ ಕ್ಷೇತ್ರಕ್ಕೆ ಗೀತಾ ಶಿವರಾಜ್ ಕುಮಾರ್,ಉತ್ತರ ಕನ್ನಡಕ್ಕೆ ಅಂಜಲಿ ನಿಂಬಾಳ್ಕರ್ ಹೆಸರು ಅಂತಿಮವಾಗಿವೆ ಎನ್ನುವ ಮಾಹಿತಿ ಇದೆ. ಉಡುಪಿ-ಚಿಕ್ಕಮಂಗಳೂರಿಗೆ ಜಯಪ್ರಕಾಶ್ ಹೆಗಡೆ, ಚಿಕ್ಕೋಡಿಗೆ ಪ್ರೀಯಾಂಕಾ ಜಾರ್ಕಿಹೊಳೆ ಎನ್ನಲಾಗುತ್ತಿದೆ.


ಬಂಗಾರಪ್ಪನವರ ಪುತ್ರಿ, ಶಿವರಾಜ್ ಕುಮಾರ ಪತ್ನಿಯಾಗಿರುವ ಗೀತಾ ಶಿವರಾಜ್ ಕುಮಾರ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಜೆ.ಡಿ.ಎಸ್. ನಿಂದ ಸ್ಫರ್ಧಿಸಿ ಪರಾಭವಗೊಂಡಿದ್ದರು. ಗಟ್ಟಿ ಅಭ್ಯರ್ಥಿ, ಪ್ರಬಲ ಪಕ್ಷದ ನೆರವಿಲ್ಲದ ಗೀತಾ ಶಿವರಾಜ್ ಕುಮಾರ ಸೋಲು ಅಂದು ಅನಿರೀಕ್ಷಿ ತವಾಗಿರಲಿಲ್ಲ ಆದರೆ ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಗೀತಾ ಶಿವರಾಜ್ ಕುಮಾರ ಆಡಳಿತ ಪಕ್ಷ ಕಾಂಗ್ರೆಸ್ ನ ಅಭ್ಯರ್ಥಿ. ಇವರ ತಮ್ಮ ಮಧು ಬಂಗಾರಪ್ಪ ಜಿಲ್ಲಾ ಉಸ್ತುವಾರಿ ಸಚಿವ ರಾಜ್ಯದ ಸಾಕ್ಷರತಾ ಮಂತ್ರಿ. ಮೇಲಿಂದ ಇವರು ಮುಖ್ಯಮಂತ್ರಿಗಳ ಅಭ್ಯರ್ಥಿ. ಇವರ ಎದುರಾಳಿ ಬಿ.ವೈ. ರಾಘವೇಂದ್ರ ಹಾಲಿ ಸಂಸದ,ಮಾಜಿಮುಖ್ಯಮಂತ್ರಿ ಯುಡಿಯೂರಪ್ಪನವರ ಪುತ್ರ, ಬಿ.ಜೆ.ಪಿ. ರಾಜ್ಯ ಅಧ್ಯಕ್ಷ ಬಿ,ವೈ, ವಿಜಯೇಂದ್ರನವರ ಅಣ್ಣ ಹೀಗೆ ಹಲವು ಅನುಕೂಲ,ಪ್ರತಿಷ್ಠೆಗಳ ರಾಘವೇಂದ್ರ ಎದುರು ಗೀತಾ ಅಂಥಾ ಪ್ರಬಲ ಅಭ್ಯರ್ಥಿಯಲ್ಲ ಎನ್ನುವುದು ಮೇಲ್ನೋಟದ ಸತ್ಯ. ಆದರೆ ಶಿವಮೊಗ್ಗ, ಉಡುಪಿ ಭಾಗದಲ್ಲಿ ಈ ಅಪ್ಪ ಮಕ್ಕಳ ವಿರುದ್ಧ ಕುದಿಯುತ್ತಿರುವ ಸ್ವಪಕ್ಷ ಮತ್ತು ವಿರೋಧ ಪಕ್ಷಗಳ ಮುಖಂಡರು ಬಿ.ವೈ. ರಾಘವೇಂದ್ರ ಎದುರು ಗೀತಾ ಶಿವರಾಜ್ ಕುಮಾರ ಗೆಲ್ಲಿಸುವ ತವಕದಲ್ಲಿದ್ದಾರೆ. ರಾಜ್ಯದಲ್ಲಿ ಬಿ.ಜೆ.ಪಿ., ಯಡಿಯೂರಪ್ಪ ಕುಟುಂಬದ ವಿರುದ್ಧದ ಅಸಹನೆ ಗೀತಾ ಶಿವರಾಜ್ ಕುಮಾರ್ ಗೆ ಅನುಕೂಲ ಆಗಬಹುದು ಎನ್ನುವ ಲೆಕ್ಕಾಚಾರ ಅವರ ಪರವಾಗಿರುವವರದ್ದು.

ಈಡಿಗರ ಕೋಟಾದಡಿ ಟಿಕೆಟ್ ಪಡೆದಿರುವ ಗೀತಾ ಶಿವರಾಜ್ ಕುಮಾರ ರಾಜ್ಯದ ದೊಡ್ಮನೆ ಕುಟುಂಬದ ಸೊಸೆ, ಈ ಕ್ಷೇತ್ರದಲ್ಲಿ ದೊಡ್ಡ ಸಂಖ್ಯೆಯಲ್ಲಿರುವ ಈಡಿಗರು, ಮುಸ್ಲಿಂ, ದಲಿತ ವರ್ಗಗಳು ಗೀತಾ ಕೈ ಹಿಡಿದರೆ ರಾಘವೇಂದ್ರ ರನ್ನು ಸೋಲಿಸುವುದು ಕಷ್ಟವಲ್ಲ ಎನ್ನುವ ಲೆಕ್ಕಾಚಾರ ಈಗಿದೆ. ಮೇಲಿಂದ ಕಾಂಗ್ರೆಸ್ ಗ್ಯಾರಂಟಿ ಅನುಕೂಲ ಬೇರೆ.
ಈ ಕ್ಷೇತ್ರದಲ್ಲಿ ಈಡಿಗರಿಗೆ ಅವಕಾಶ ಸಿಕ್ಕ ಕಾರಣಕ್ಕೆ ಉತ್ತರ ಕನ್ನಡದಲ್ಲಿ ಮರಾಠರಿಗೆ ನೀಡಲಾಗುತ್ತಿದೆ ಎನ್ನುವ ವಿಶ್ಲೇಷಣೆಗಳ ಆಧಾರದಲ್ಲಿ ಉತ್ತರ ಕನ್ನಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಖಾನಾಪುರದ ಅಂಜಲಿ ನಿಂಬಾಳ್ಕರ್ ಸ್ಫರ್ಧೆ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ. ಈ ಹಿಂದೆ ಉತ್ತರ ಕನ್ನಡ ಕ್ಷೇತ್ರದ ಕೆನರಾ ಪ್ರತಿನಿಧಿಯಾಗಿದ್ದ ಮಾರ್ಗರೇಟ್ ಆಳ್ವ ನಂತರ ಮಹಿಳಾ ಮತ್ತು ಮರಾಠಾ ಕೋಟಾದಡಿ ಟಿಕೇಟು ಪಡೆಯುತ್ತಿರುವ ಡಾ. ಅಂಜಲಿ ವೃತ್ತಿಯಲ್ಲಿ ವೈದ್ಯೆ, ಖಾನಾಪುರದ ಹಿಂದಿನ ಶಾಸಕರಾಗಿದ್ದ ಅಂಜಲಿ ನಿಂಬಾಳ್ಕರ್ ಕೂಡಾ ಮುಖ್ಯಮಂತ್ರಿಗಳ ಅಭ್ಯರ್ಥಿ ಎನ್ನಲಾಗಿದೆ.
ಉತ್ತರ ಕನ್ನಡದ ಬಹುಸಂಖ್ಯಾತರ ಈಡಿಗರ ನಡುವೆ ಭಾಷಾ ಬಹುಸಂಖ್ಯಾತ ಮರಾಠ ಸಮಾಜದ ಡಾ. ಅಂಜಲಿ ಕಾಂಗ್ರೆಸ್ ನ ಗ್ಯಾರಂಟಿ, ಮುಸ್ಲಿಂ ಸೇರಿದ ಅಹಿಂದ ಮತಗಳು ಮತ್ತು ೬ ಕ್ಷೇತ್ರಗಳಲ್ಲಿ ೪ ಕ್ಷೇತ್ರಗಳಲ್ಲಿರುವ ಕಾಂಗ್ರೆಸ್ ಶಾಸಕರನ್ನು ಅವಲಂಬಿಸಿದ್ದಾರೆ. ಅತ್ತ ಬಿ.ಜೆ.ಪಿ. ಯಲ್ಲಿ ಅನಂತ ಹೆಗಡೆಯವರಿಗೆ ಟಿಕೇಟ್ ನಿರಾಕರಣೆಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಅಥವಾ ಸೂಲಿಬೆಲೆ ಚಕ್ರವರ್ತಿ ಅಭ್ಯರ್ಥಿಗಳಾದರೆ ಅನಂತಕುಮಾರ ಹೆಗಡೆಯವರ ಬಣ ಎದುರಾಳಿ ಅಭ್ಯರ್ಥಿಯನ್ನು ಬೆಂಬಲಿಸುತ್ತಾರೆ ಎನ್ನುವ ಸಾಮಾನ್ಯ ಗ್ರಹಿಕೆಯಿಂದ ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ದಿಂದ ಸಂಸತ್ ಪ್ರವೇಶಿಸುವ ಯೋಚನೆಯಲ್ಲಿದ್ದಾರೆ.
ಚಿಕ್ಕೋಡಿಯಲ್ಲಿ ಕೂಡಾ ಕಾಂಗ್ರೆಸ್ ನ ಸತೀಶ್ ಜಾರಕಿಹೊಳಿ ಪುತ್ರಿ ಅಭ್ಯರ್ಥಿ ಎನ್ನಲಾಗುತ್ತಿದೆ. ಈ ಮೂರೂ ಮಹಿಳಾ ಅಭ್ಯರ್ಥಿಗಳ ಸಮಾನಾಂತರ ಪೂರಕ ಅಂಶ ಎಂದರೆ ಅವರಿಗಿರುವ ಗಾಡ್ ಫಾದರ್ಗಳು ಪ್ರೀಯಾಂಕಾ ಜಾರಕಿಹೊಳೆ ಅಸಾಮಾನ್ಯ ಸತೀಶ್ ಜಾರಕಿಹೊಳಿ ಪುತ್ರಿ. ಶಿವಮೊಗ್ಗದ ಗೀತಾ ಶಿವರಾಜ್ ಕುಮಾರ್ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಪತ್ನಿ. ಬೆಳಗಾವಿಯ ಡಾ. ಅಂಜಲಿ ರಾಜ್ಯದ ಹಿರಿಯ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಪತ್ನಿ. ಹೀಗೆ ವೈಯಕ್ತಿಕವಾಗಿ ಪ್ರಭಾವಿಗಳು ಎನ್ನುವುದಕ್ಕಿಂತ ಪ್ರಭಾವಿಗಳ ಪತ್ನಿಯರಾದ ಈ ಮಹಿಳಾಮಣಿಗಳು ಬಹುತೇಕ ಪ್ರಭಾವಿಗಳ ಎದುರೇ ಸ್ಫರ್ಧೆಯಲ್ಲಿರಲಿದ್ದಾರೆ. ಈ ಮಹಿಳೆಯರಿಗೆ ಸಂಸತ್ ಪ್ರವೇಶ ನಿಲುಕದ ನಕ್ಷತ್ರವಾಗುವುದೋ? ಪ್ರಯಾಸದ ಪಯಣವಾಗುವುದೋ ಮುಂದಿನ ದಿನಗಳು ಉತ್ತರ ಹೇಳಲಿವೆ.
