


ಸಿದ್ಧಾಪುರ, ತಾಲೂಕಿನ ಚುನಾವಣಾ ಅಧಿಕಾರಿ ತಹಸಿಲ್ಧಾರರನ್ನು ವರ್ಗಾಯಿಸುವಂತೆ ಕೋಡನಮನೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ಬಗ್ಗೆ ನಗರದಲ್ಲಿ ಕರೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಶ್ರೀಪತಿ ಹೆಗಡೆ ಕೊಡನಮನೆ ಹಾಗೂ ಇತರರು, ಚಾರೆಕೋಣೆ ರಸ್ತೆ ವಿವಾದ ಬಗೆಹರಿಸುವಂತೆ ಚುನಾವಣಾ ಅಧಿಕಾರಿ ತಹಸಿಲ್ಧಾರರಿಗೆ ಮನವಿ ಮಾಡಲಾಗಿತ್ತು.ತಹಸಿಲ್ಧಾರರು ಈ ವಿಚಾರದಲ್ಲಿ ಉಡಾಪೆ ತೋರಿರುವುದರಿಂದ ಅವರಿಂದ ಮತದಾರರಿಗೆ ನ್ಯಾಯ ಸಿಗುತ್ತಿಲ್ಲ ಹಾಗಾಗಿ ತಕ್ಷಣ ಅವರನ್ನು ವರ್ಗಾಯಿಸಿ ಮತದಾರರಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು.
೧೪ ಮನೆಗಳ ಕೃಷಿಕರ ಕೆಲಸಗಳಿಗೆ ಅನುಕೂಲವಾಗುವ ಗ್ರಾಮೀಣ ರಸ್ತೆ ನಿರ್ಮಾಣಕ್ಕೆ ಕಾಣದ ಕೈಗಳು ಅಡ್ಡಿ ಪಡಿಸುತ್ತಿವೆ. ಈ ಬಗ್ಗೆ ಹಿಂದಿನ ತಹಸಿಲ್ಧಾರರು ಮಾಡಿದ ಆದೇಶಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿರುವ ಈಗಿನ ತಹಸಿಲ್ಧಾರರು ಸ್ಥಳ ಪರಿಶೀಲನೆ ಮಾಡದೆ ಒಮ್ಮತದ ನಿರ್ಣಯ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ನ್ಯಾಯಯುತವಾಗಿ ನಡೆದುಕೊಳ್ಳದ ಚುನಾವಣಾಧಿಕಾರಿಗಳಿಂದ ನ್ಯಾಯಯುತ ಚುನಾವಣೆ ಅಸಾಧ್ಯ ಎಂದು ಅವರು ದೂರಿದರು.
ಕೋಡನಮನೆ ವ್ಯಾಪ್ತಿಯ ಕನಿಷ್ಟ ೧೫೦ ಜನ ಈ ವಿಚಾರದ ಕಾರಣಕ್ಕೆ ಮತದಾನ ಬಹಿಷ್ಕರಿಸುತಿದ್ದೇವೆ. ಚುನಾವಣೆ ಮೊದಲು ಈ ರಸ್ತೆ ಕಾಮಗಾರಿ ಪೂರೈಸಿದರೆ ಮಾತ್ರ ಮತದಾನ ಮಾಡುತ್ತೇವೆ ಎಂದು ಅವರು ತಿಳಿಸಿದರು.
