
;
ಗಮನ ಸೆಳೆದ ಆಟ
ಸಿದ್ದಾಪುರದ ಶ್ರೀ ಅನಂತ ಯಕ್ಷಕಲಾ ಪ್ರತಿಷ್ಠಾನದ ಕಲಾವಿದರು ರಾಜಧಾನಿಯಲ್ಲಿ ಸಂಸ್ಥೆಯ ದಶಮಾನೋತ್ಸವದ ಸಂಭ್ರಮದ ಪ್ರಥಮ ಯಕ್ಷಗಾನ ಪ್ರದರ್ಶನ ನೀಡಿದರು.
ಸಮಾಜಮುಖಿ ಬಳಗ ಹಾಗೂ ಬೆಂಗಳೂರು ಅಂತರಾಷ್ಟ್ರೀಯ ಕೇಂದ್ರದಿಂದ ಶ್ರೀಕೃಷ್ಣಾರ್ಜುನ ಯಕ್ಷಗಾನ ಆಖ್ಯಾನ ಆಯೋಜಿತ್ತು.
ಗಯನಿಗಾಗಿ ಕೃಷ್ಣ ಹಾಗೂ ಅರ್ಜುನರ ಯುದ್ಧ ನಡೆದದ್ದು, ಭಾವಂದಿರ ನಡುವೆ ನಡೆದ ಸಂಘರ್ಷದಲ್ಲಿ ಸುಭದ್ರೆಯ ನೋವು, ಸಂಕಟ, ಅಭಿಮನ್ಯುವಿನ ಕ್ಷಾತ್ರ ಉಮೇದಿ, ದಾರುಕನ ಹಾಸ್ಯ, ಭೀಮನ ಗಂಭೀರತೆಗಳ ನಡುವೆ ಕೃಷ್ಣಾರ್ಜುನ ಪ್ರಸಂಗ ಕಳೆ ಕಟ್ಟಿತು.
ಹಿಮ್ಮೇಳದಲ್ಲಿ ಪ್ರಸಿದ್ಧ ಭಾಗವತ ಕೇಶವ ಹೆಗಡೆ ಕೊಳಗಿ, ಮದ್ದಲೆಯಲ್ಲಿ ಎ.ಪಿ.ಪಾಠಕ, ಚಂಡೆಯಲ್ಲಿ ಆದಿತ್ಯ ಕೇಶೈನ್, ಮುಮ್ಮೇಳದಲ್ಲಿ ಅರ್ಜುನನಾಗಿ ವಿನಾಯಕ ಹೆಗಡೆ ಕಲಗದ್ದೆ, ಕೃಷ್ಣನಾಗಿ ಅಶೋಕ ಭಟ್ಟ ಸಿದ್ದಾಪುರ, ಸುಭದ್ರೆಯಾಗಿ ನಾಗಶ್ರೀ ಜಿ.ಎಸ್., ದಾರುಕನಾಗಿ ನಾಗೇಂದ್ರ ಭಟ್ಟ ಮೂರೂರು, ಭೀಮನಾಗಿ ವೆಂಕಟೇಶ ಬೊಗ್ರಿಮಕ್ಕಿ, ಅಭಿಮನ್ಯುವಾಗಿ ತುಳಸಿ ಹೆಗಡೆ ಪಾತ್ರ ಮಾಡಿದರು.
ಶಂಕರ ಹೊಸೂರು ಪ್ರಸಾದನಕ್ಕೆ ಸಹಕರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಪ್ರಜಾವಾಣಿ ಬಳಗದ ನಿರ್ದೇಶಕ ಕೆ.ಎನ್.ಶಾಂತಕುಮಾರ, ಕರ್ನಾಟಕದ ಜನಪದ ಲೋಕವನ್ನು ಸಮಾಜಮುಖಿ ಬಳಗ ಹಾಗೂ ಈ ಕೇಂದ್ರದ ಮೂಲಕ ಜನರಿಗ ತೋರಿಸಬೇಕು ಎಂಬುದು ನಮ್ಮ ಆಶಯವಾಗಿದೆ. ಈ ಕಾರಣಕ್ಕೋಸ್ಕರ ಗ್ರಾಮೀಣ ಭಾಗದಿಂದ ಕಲಾ ತಂಡಗಳನ್ನು ಆಹ್ವಾನಿಸಿ ಪ್ರದರ್ಶನ ನೀಡಲಾಗುತ್ತದೆ ಎಂದು ವಿವರಿಸಿದರು.
ಈ ವೇಳೆ ಲೇಖಕ ಜಯರಾಮ್ ರಾಯಪೂರ ಸಮಾಜಮುಖಿ ಬಳಗದಿಂದ ಕಲಾವಿದರನ್ನು, ಭಾಗವತ ಕೇಶವ ಹೆಗಡೆ ಕೊಳಗಿ ಅವರನ್ನು ಗೌರವಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರಾದ ರವೀಂದ್ರ ಭಟ್ಟ ಐನಕೈ, ಚಂದ್ರಕಾಂತ ವಡ್ಡು, ರಂಗಕರ್ಮಿ ಶಶಿಧರ ಭಾರಿಘಾಟ, ಡಾ.ಟಿ.ಆರ್.ಚಂದ್ರಶೇಖರ, ಆನಂದರಾಜ್ ಅರಸ್, ಪೃಥ್ವಿದತ್ತ ಚಂದ್ರಶೋಭಿ, ಚಂದ್ರಶೇಖರ ಬೆಳಗೆರೆ, ಡಾ. ಕೆ.ಎಂ. ಬೋಜಪ್ಪ, ಲೇಖಕಿ ಭುವನೇಶ್ವರಿ ಹೆಗಡೆ ಇತರರು ಇದ್ದರು.

