

ಇಂಥದ್ದು ಅಪರೂಪಕ್ಕೊಮ್ಮೆಯೂ ಘಟಿಸಬಾರದು. ಆದರೆ ವಿಧಿಯ ಲೆಕ್ಕನೇ ಬೇರೆ.”ಈ ವರ್ಷ ನೀವು ಮೆಚ್ಚಿದ ಎರಡು ಪುಸ್ತಕಗಳು ಯಾವುದು ಸರ್?” ಎಂದು ಕೇಳಿ ಟಿವಿ9 ಚಾನೆಲ್ಲಿನ ಶ್ರೀದೇವಿ ಕಳಸದ ನನ್ನನ್ನು ಕೇಳಿದರು. ನಾನು ಮೆಚ್ಚಿದ 20-30 ಪುಸ್ತಕಗಳಲ್ಲಿ ಯಾವುದನ್ನು ಆಯ್ಕೆ ಮಾಡುವುದು ಎಂಬ ಯೋಚನೆಗೆ ಬಿದ್ದೆ. ಮುಂದೂಡಿದೆ. ಶ್ರೀದೇವಿ ಮತ್ತೆ ಮತ್ತೆ ನೆನಪಿಸಿದರು. ವರ್ಷಾಂತ್ಯದ ಕೊನೆಯ ನಾಲ್ಕು ದಿನಗಳಲ್ಲಿ ದಿನವೂ ಟಿವಿ9 ಜಾಲತಾಣದಲ್ಲಿ ಸಾಹಿತ್ಯಪ್ರೇಮಿಗಳ ಮೆಚ್ಚುಗೆಯ ಪುಸ್ತಕಗಳ ಪಟ್ಟಿಯೇ ಬರತೊಡಗಿತ್ತು. ನಾನೂ ಬರೆಯಬೇಕೆಂದು ರಿಮೈಂಡರ್ ಬರುತ್ತಲೇ ಇತ್ತು. ಅಂತೂ ನಾನು ಎರಡು ಪುಸ್ತಕಗಳನ್ನು ಆಯ್ಕೆ ಮಾಡಿ ತಡವಾಗಿ ಸಂಕ್ಷಿಪ್ತವಾಗಿ ಬರೆದು ಕಳಿಸಿದೆ. ಅದು ಡಿಸೆಂಬರ್ ೩೧ರಂದು ಪ್ರಕಟವೂ ಆಯಿತು.ಅವುಗಳಲ್ಲಿ ಒಂದು, ಇಲ್ಲಿ ಚಿತ್ರದಲ್ಲಿ ತೋರಿಸಿದ “ಊರೆಂಬ ಉದರ” ಎಂಬ ಮನೋಜ್ಞ ಪುಸ್ತಕದ ಬಗೆಗಿತ್ತು. ಇದನ್ನು ಬರೆದವರು ಪ್ರಮೀಳಾ ಸ್ವಾಮಿ. ಇವರ ಬಾಲ್ಯದ ಕಥನ ಇದರಲ್ಲಿದೆ. ಹೇಮಾವತಿ ನದಿ ಸಮೀಪದ ಒಂದು ಸಂಕೇತಿ ಗ್ರಾಮದ ಚುರುಕಿನ ಹುಡುಗಿಯಾಗಿ, ಯುವತಿಯಾಗಿ, ಸಂಪ್ರದಾಯಬದ್ಧ ಮನೆತನದ ಚೈತನ್ಯಭರಿತ ಗೃಹಿಣಿಯಾಗಿ, ಅಜ್ಜಿಯಾಗಿ ಕೊನೆಗೆ ಬೆಂಗಳೂರಿನ ಮಗಳ ಮನೆಯಲ್ಲಿ ಕೂತು ತನ್ನ ಊರನ್ನು ನೆನಪಿಸಿಕೊಳ್ಳುವ ಪರಿ ಈ ೧೮೦ ಪುಟಗಳ ಪುಸ್ತಕದಲ್ಲಿ ಮನೋಜ್ಞವಾಗಿ ಹೆಣೆದುಕೊಂಡಿದೆ.

ತಾನು ಬಿಟ್ಟು ಬಂದ ಹಳ್ಳಿಯ ಜನ, ನಡೆನುಡಿ, ಚಿಕ್ಕಪುಟ್ಟ ಕಥನಗಳ ಜೊತೆಗೆ ಅಡುಗೆ ರಿಸಿಪಿಯನ್ನೂ ಪ್ರಮೀಳಾ ಸ್ವಾಮಿ ಇದರಲ್ಲಿ ದಾಖಲಿಸಿದ್ದಾರೆ. (ನಮ್ಮೂರಿನ, ನನಗೇ ಮರೆತು ಹೋಗಿದ್ದ ಅಡುಗೆ ವಿಧಾನವೂ ಅದರಲ್ಲಿ ಇತ್ತಾದ್ದರಿಂದ ನಾನೂ ಒಂದೆರಡು ರಿಸಿಪಿಗಳ ಪ್ರಯೋಗ ಮಾಡಿದೆ ಅನ್ನಿ). ಸಂಕೇತಿಗಳ ಮರೆಯಲಾಗದ ಹಾಡು-ಹಸೆ, ಮರೆಯಬಾರದ ಅಡುಗೆ ವಿಧಾನ, ಹೊಳೆ ಊಟ, ಪುಳ್ಳಂಗಾಯಿ ಉಂಡೆ, ದೇವರ ದೀಪಕ್ಕಾಗಿ ಹಿಪ್ಪೆ ಎಣ್ಣೆ ತಯಾರಿಸುವುದು, ನಾಗರಪಂಚಮಿಯಂದು ಮರದ ಮೇಲೆ ನಿಜದ ಹಾವು ತೂಗಾಡಿದ್ದು, ಗರುಡಮಚ್ಚೆಯ ಮೇಷ್ಟ್ರೂ, ಎಲ್ಲವೂ ಒಂದಕ್ಕೊಂದು ಅನನ್ಯವಾಗಿ ಹೆಣೆದುಕೊಂಡಿವೆ. “ಹಿರಿಯ ಜೀವವೊಂದು ತನ್ನೆಲ್ಲ ಕರ್ತವ್ಯಗಳನ್ನು ಮುಗಿಸಿ ಜಗುಲಿಯಲ್ಲಿ ಕೂತು ಗತಕಾಲದ ಮಾಯೆಯನ್ನು ಮೆಲುಕುವಂತೆ ರಚಿತವಾದ ಈ ಕೃತಿ ‘ಮುಂದಿನ ಪೀಳಿಗೆಗೆ ದಾಟಿಸುವ ಸಿರಿ ಅರಿವಿನಂತೆ” ಎಂದು ವೈದೇಹಿ ಬಣ್ಣಿಸಿದ್ದಾರೆ.
ಇದು ಸಂಸ್ಕೃತಿ ಕಥನವೂ ಹೌದು, ಬೇರುಮೂಲದಲ್ಲಿ ವಿಸ್ತರಿಸಿಕೊಂಡ ಜೀವಿವೈವಿಧ್ಯದ ಪರಿಸರ ಕಥನವೂ ಹೌದು. ಕನ್ನಡ ಸಾಹಿತ್ಯಕ್ಕೆ ಅಪರೂಪವಾಗಿ ಬಂದ ಒಂದು ರುಚಿಕರ ಕಲಸು ಮೇಲೋಗರ ಇದು.*ಇಷ್ಟು ಬರೆದು ಈ ಫೋಟೊದೊಂದಿಗೆ ನಾನು ಕಳಿಸಿದೆ. ಅದೇ ದಿನ (ವರ್ಷದ ಕೊನೇ ದಿನ) ಅದು ಪ್ರಕಟವೂ ಆಯಿತು. ಪ್ರಮೀಳಾ ಸ್ವಾಮಿಯವರ ಮಗಳು ದೀಪಾ ಗಣೇಶ್, ದಿ ಹಿಂದೂ ಪತ್ರಿಕೆಯಲ್ಲಿ ಹಿರಿಯ ಪತ್ರಕರ್ತೆ, ನನಗೆ ದಶಕಗಳಿಂದ ಪರಿಚಿತರು. ಅವರಿಗೆ, ʼನಿಮ್ಮ ಅಮ್ಮನ ಪುಸ್ತಕವನ್ನು ಟಿವಿ9 ಜಾಲತಾಣದಲ್ಲಿ ಪರಿಚಯಿಸಿದ್ದೇನೆʼಎಂದು ಲಿಂಕ್ ಕೊಟ್ಟು, ಸಂಜೆ 6 ಗಂಟೆಗೆ ವಾಟ್ಸಾಪ್ ಸಂದೇಶ ಕಳಿಸಿದೆ.
ಈ ಪುಸ್ತಕ ಕನ್ನಡದ ಅಪರೂಪದ ಕೃತಿಯೆಂದು ಅನೇಕರು ಮೆಚ್ಚುಗೆಯ ಮಾತುಗಳನ್ನು ಬರೆದಿದ್ದಾರೆ. ಎರಡು ವಾರಗಳ ಹಿಂದಷ್ಟೆ ಜಯಂತ ಕಾಯ್ಕಿಣಿ ಬರೆದ ಸೊಗಸಾಗಿ ಲೇಖನ ಮಯೂರದಲ್ಲಿ ಪ್ರಕಟವಾಗಿತ್ತು. ಆ ಹಿರಿಯ ಲೇಖಕಿಗೆ ನನ್ನಿಂದಲೂ ಒಂದು ಪುಟ್ಟ ಶ್ಲಾಘನೆ ಇರಲಿ ಎಂದು ಎಣಿಸಿದ್ದೆ.ಅದೇ 31 ರಾತ್ರಿ ಪ್ರಮೀಳಾ ಸ್ವಾಮಿ ನಿಧನರಾದರು.
*[ಇದೇ ಪುಸ್ತಕವನ್ನು ಮೆಚ್ಚಿ ವಿವೇಕ್ ಶಾನ್‌ಭಾಗ್ ಕೂಡ ಅದೇ ದಿನ ಬರೆದಿದ್ದಾರೆ. ಕನ್ನಡದ 45 ಓದುಗರು ಮೆಚ್ಚಿದ 90 ಸಾಹಿತ್ಯಕೃತಿಗಳ ಸಂಗ್ರಹಯೋಗ್ಯ ಪರಿಚಯ ಸರಣಿಯನ್ನು ಪ್ರಕಟಿಸಿದ ಟಿವಿ-ನೈನ್ ಜಾಲತಾಣಕ್ಕೆ, ವಿಶೇಷವಾಗಿ ಶ್ರೀದೇವಿ ಕಳಸದ ಅವರಿಗೆ ಧನ್ಯವಾದಗಳು. ಈ ಪರಿಚಯಗಳ ಲಿಂಕ್ ಇಲ್ಲಿದೆ:https://tv9kannada.com/tag/book-reading



_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
