

ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ ?
ಹರಿಯ ಒಲುಮೆ ಪಡೆದು ಪುಣ್ಯಗಳಿಸುತಿರುವೆಯಾ ?
ಹುಚ್ಚ, ನೀನು ಹಳ್ಳಿಗೋಡು;
ದೀನ ಜನರ ಪಾಡ ನೋಡು;
ಇರಲು ಗುಡಿಸಲು ಇಲ್ಲವಲ್ಲ !
ಹೊಟ್ಟೆ ತುಂಬಾ ಅನ್ನವಿಲ್ಲ !
ಹರಿಗೆ ಎಂದು ಗುಡಿಯನೊಂದು
ಕಟ್ಟುತಿರುವೆಯಾ ?
ಹರಿಯ ವಿಶ್ವರೂಪವನ್ನು
ಮರೆತು ಬಿಟ್ಟೆಯಾ ?
ಜಗಕೆ ಗೋಡೆ ಹಾಕಿ ಗುಡಿಯ
ಕಟ್ಟ ಬಲ್ಲೆಯಾ ?
ದೀನಗೊಂದು ಗೂಡು ಸಾಕು;
ದೇವಗೊಂದು ವಿಶ್ವ ಬೇಕು;
ಮಣ್ಣ ಹುಲ್ಲ ಸಣ್ಣ ಗೂಡು_
ಬಡವಗದುವೇ ಸಿರಿಯ ಬೀಡು.
ಹರಿಗೆ ಎಂದು ಗುಡಿಯನೊಂದ
ಕಟ್ಟುತಿರುವೆಯಾ?
ದೀನಗಿಂತ ದೇವ
ಬಡವನೆಂದು ಬಗೆದೆಯಾ?
- ದಿನಕರ ದೇಸಾಯಿ
