ಜಯಂತ ಝಲ(ಕ್ಸ್)ಕ್- ಖ್ಯಾತ ಸಾಹಿತಿಗಳಾದ ಜಯಂತ,ಗೌರೀಶ್ ಕಾಯ್ಕಿಣಿಗಳ ಪ್ರೀತಿ-ಗೀತಿ ಇತ್ಯಾದಿ…….
ಕನ್ನಡ ಸಾಹಿತ್ಯ, ಸಾಂಸ್ಕೃ ತಿಕ ಲೋಕ ಕಂಡ ವಿಶೇಷ ಪ್ರತಿಭೆ ಜಯಂತ್ ಕಾಯ್ಕಿಣಿ, ಜಯಂತ್ ಕಾಯ್ಕಿಣಿ ಎಂಬ ಹೆಸರಿನ ಮಾಂತ್ರಿಕತೆ ಹೇಗಿದೆಯೆಂದರೆ…….
ಅನಿಸುತಿದೆ ಯಾಕೋ ಇಂದು…..
ಅಂತೂ ಇಂತು ಪ್ರಿತಿ ಬಂತು……
ಸೇರಿದಂತೆ ಅನೇಕ ಗೀತೆಗಳನ್ನು ಕೇಳಿ,ಜಯಂತರಿಗೆ ಕೃತಜ್ಞತೆ ಹೇಳದೆ ಇರುವ ಕನ್ನಡಿಗನೆ ಇಲ್ಲ, ಎನ್ನುವಷ್ಟು ಜಯಂತ್ ಕಾಯ್ಕಿಣಿ ಕನ್ನಡ ಸಹೃದಯರಿಗೆನಮ್ಮವರಾಗಿದ್ದಾರೆ.
ಇಂಥ ಜಯಂತ ಕಾಯ್ಕಿಣಿ ಅಂಕೋಲಾದಲ್ಲಿ ನಡೆದ 18 ನೇ (ಉ.ಕ.)ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು. ರೋಹಿದಾಸ ನಾಯ್ಕ, ವಿಷ್ಣು ನಾಯಕರ ಸಂಘಟನೆ ಜಯಂತರ ಸರ್ವಾಧ್ಯಕ್ಷತೆ ಸರ್ವರನ್ನೂ ಸಮ್ಮೋಹನಗೊಳಿಸಿತು. ಸರ್ವಾಧ್ಯಕ್ಷ ಜಯಂತ ಸಮ್ಮೇಳನ ಸೇರಿದಂತೆ, ಅನೇಕ ಬಾರಿ ನಮಗೆ ಎದುರಾಗಿದ್ದಾರೆ. ಅವರ ಸಹಜತೆ, ಸರಳತೆ,ವಿಶಿಷ್ಟತೆಗಳನ್ನುಪ್ರತಿಬಿಂಬಿಸುವ ಅನೇಕ ಪ್ರಸಂಗ, ಘಟನೆಗಳು ಹಾಗೇ ಸುಮ್ಮನೆಎನ್ನುವಂತೆನಡೆದುಹೋಗಿವೆ. ಕೆಲವನ್ನು ಹೀಗೇ ಸುಮ್ಮನೆ ಸ್ಮರಿಸುತ್ತಿದ್ದೇನಿ.
- ನಾನಾಗ, (ಆಗತಾನೆ) ಪತ್ರಿಕೊದ್ಯಮಕ್ಕೆ ಬಂದಿದ್ದೆ. ಜಯಂತರ ಬಗ್ಗೆ ಒಂಥರಾ ಅನೂಹ್ಯ ಕುತೂಹಲ, ಆಗಲೇ ಜಯಂತ್ ‘ಚಿಗುರಿದ ಕನಸು’ ‘ಮುಂಗಾರು ಮಳೆ’ ‘ಹಾಗೆ ಸುಮ್ಮನೆ’ ಸೇರಿದಂತೆ ಅನೇಕ ಚಿತ್ರಗಳಿಗೆ ಸುಮಧುರ ಹಾಡುಗಳನ್ನು ಬರೆದಿದ್ದರು.
- ನನ್ನ ಪ್ರಶ್ನೆ- ಸರ್,
50 ರ ಆಸುಪಾಸಿನಲ್ಲಿ ಇಂಥ ಪ್ರೇಮಗೀತೆಗಳನ್ನು ಬರೆಯುತ್ತಿದ್ದಿರಿ? ಹೇಗೆ?
ಜಯಂತ್_ ನಮ್ಮದೇನಿದ್ದರೂ ಈಗ ಬರೆಯುವುದು, ನೀವು ಅವನ್ನೆಲ್ಲಾ ಮಾಡುವುದು.(!)
ಜಯಂತರ ದಗಡೂ ಪರಬನ ಅಶ್ವಮೇಧ ಕಥೆ ಬಗ್ಗೆಮಾತನಾಡುತ್ತಾ ಸರ್, ನಿಮ್ಮ ಪರಬ ಅಪಘಾತಗೊಳಗಾಗುತ್ತಿದ್ದರೂ ರೋಚಕ, ರೋಮಾಂಚಕ ಎನಿಸುತ್ತದೆ ಎನು ಮಾಯೆ ಅದು?
ಜಯಂತ್- ಪ್ರೀತಿ ಇದ್ದರೆ ಅದೇ ರೋಚಕ, ರೋಮಾಂಚಕ ಎಲ್ಲಾ ಆಗುತ್ತೆ, ಮಾಡುತ್ತೆ. ಈ ಪ್ರಶ್ನೆ ಮುಗಿಯುತ್ತಿದ್ದಂತೆ ನಿರೂಪಕ ರತ್ನಾಕರ ನಾಯ್ಕ ಕನ್ನೇಶ್ ಅವರು ಇನ್ನೂ ಪ್ರೀತಿಯ ಅಪಘಾತಕ್ಕೆ ಒಳಗಾಗಿಲ್ಲ ಎಂದರು. ಈ ಮಾತು ಕೇಳಿದ ಜಯಂತ್ ಏ,..ನೀನಿನ್ನೂ ಮದುವೆ ಆಗಲಿಲ್ಲ? ಆಗುತ್ತೆ… ಸುಮ್ಮನೆ ಗೊತ್ತಾಗದ ಹಾಗೆ ಆಗುತ್ತೆ, ಅದೇ ದುರಂತ. (ಎಂದು ನಕ್ಕರು)
ಮಾನವೀಯ ಸಂವೆದನೆಗೆ ಜಯಂತರಿಗೆ ಜಯಂತ್ ಮಾತ್ರ ಸಾಟಿ. ಒಮ್ಮೆ ಹೀಗೊಂದು ತಮಾಸೆಯ ಉದಾಹರಣೆ ಹೇಳಿದರು.
ಬೆಂಗಳೂರಿನಲ್ಲಿ ಒಂದು ಮದುವೆಗೆ ಹೋಗಿದ್ದರಂತೆ ಆ ಮದುವೆಯ ವಧು ವರರಿಬ್ಬರೂ ಜಯಂತ್ ಅಭಿಮಾನಿಗಳಂತೆ. ಮದುವೆಯ ಮಂಟಪದ ಸಭಾಭವನದಲ್ಲಿ ಎರಡ್ನೂರು-ಮನ್ನೂರಕ್ಕೂ ಮಿಕ್ಕಿ ಜನರಿದ್ದರಂತೆ ಬಹುತೇಕರ್ಯಾರೂ ಪರಸ್ಪರ ಮಾತುಕತೆ, ಉಭಯ ಕುಶಲೋಪರಿಗಳ ಪರಿವೆಯೇ ಇಲ್ಲದೆ ಮು(ಗು)ಮ್ಮಾಗಿದ್ದರಂತೆ!
ಆ ಮೇಲೆ ತಿಳಿದ ಸತ್ಯವೇನೆಂದರೆ, ಆ ಮದುವೆಯ ಜೋಡಿ ಫೇಸ್‍ಬುಕ್ ಮೂಲಕ ಬುಕ್ ಆಗಿದ್ದರಂತೆ! ಅಲ್ಲಿ ಸೇರಿರುವ ಬಹುತೇಕರೆಲ್ಲಾ ಫೇಸ್‍ಬುಕ್ ಸ್ನೇಹಿತರಂತೆ! ಆಧುನಿಕ ಇಂಟರ್‍ನೆಟ್, ಫೇಸ್‍ಬುಕ್‍ಗಳೆಲ್ಲಾ ಸಂವೇದನೆರಹಿತ ಸ್ನೇಹ-ಸಂಬಂಧಗಳನ್ನು ಸೃಷ್ಟಿಸುತ್ತವೆ ಎನ್ನುವುದು ಅವರ ಮಾತು!
ಎಲ್ಲರ ಮನೆ ದೋಸೆನೂ ತೂತೆ!
ಬಹಳಷ್ಟು ಪಾಲಕರು ತೊಂದರೆ, ಸಮಸ್ಯೆ, ತಾಪತ್ರಯಗಳಲ್ಲೇ ಇರುತ್ತಾರೆ. ಆದರೆ ಅವರು ತಮ್ಮ ತೊಂದರೆ, ಸಮಸ್ಯೆಗಳನ್ನು ಮಕ್ಕಳ ಎದುರಿಗೆ ತೋರಿಸಿಕೊಂಡರೆ ‘ಮಗುಮನಸು’ ಘಾಶಿಯಾಗುತ್ತದೆ. ವಿಶೇಷವೆಂದರೆ, ನನಗೆ ನನ್ನ 20-25 ನೇ ವಯಸ್ಸಿನವರೆಗೂ ನಮ್ಮ ಮನೆಯಲ್ಲೂ ತೊಂದರೆ ತಾತ್ರಯಗಳು ಇರಲೇ ಇಲ್ಲ ಎಂದುಕೊಂಡಿದ್ದೆ. ಆ ನಂತರ ನನಗಾದ ದಿವ್ಯಾನುಭವವೇನೆಂದರೆ ನಾವು ಚಿಕ್ಕವರಿರುವಾಗ ನಮ್ಮ ತಂದೆ ತಾಯಿ ಎಂದೂ ನಮ್ಮೆದುರು ಜಗಳವಾಡಿದ್ದೇ ಇಲ್ಲ. ಮಕ್ಕಳೆದುರು ನಾವು ಅಸಮಧಾನ, ಅತೃಪ್ತಿ, ರಾಗ-ದ್ವೇಷಗಳನ್ನು ತೊರಿಸಿಕೊಳ್ಳಬಾರದು ಎನ್ನುವ ವಿವೇಕ ನಮ್ಮ ಪಾಲಕರಿಗಿತ್ತು. ಹಾಗಾಗಿ ನಮಗೆ ಈ ಎಲ್ಲರ, ಎಲ್ಲರ ಮನೆಯ ಸಮಸ್ಯೆ ನಮ್ಮ ಮನೆಯಲ್ಲೂ ಇರಬಹುದೆಂಬ ಅನುಮಾನವೂ ಇರಲಿಲ್ಲ. (ಎಂದರು)
ಲೋಕದ ಜಂಜಡಗಳನ್ನು ಸಣ್ಣವಯಸ್ಸಿನ ಮಕ್ಕಳ ಮೇಲೆ ಹೇರಬಾರದು ಎನ್ನುವ ಸಲಹೆ ಅವರದ್ದು.
ಜಿಲ್ಲಾ ಸಮ್ಮೇಳನದಲ್ಲೇ ವೇದಿಕೆ ಎದುರಿಗಿದ್ದ ಸಂಕಲ್ಪ ಪ್ರಮೋದರನ್ನು ಉದಾಹರಿಸಿದ ಜಯಂತ್, ತಮ್ಮ ಯುನಿವರ್ಸಿಟಿ ದಿನಗಳನ್ನು ನೆನಪಿಸಿಕೊಂಡರು.
‘ನಾನಾಗ ಮಹಾನ್ ಕವಿ ಎಂದು ಗುರುತಿಸಿಕೊಂಡಿದ್ದೆ, ಪ್ರಮೋದ ಒಂದು ಹುಡುಗಿಗೆ ಕೊಡಲು ನನ್ನಿಂದ ಪ್ರೇಮಪತ್ರವೊಂದನ್ನು ಬರೆಸಿಕೊಂಡ. ನಾವು ಜೊತೆಗಿದ್ದಾಗಲೇ ಆ ಹುಡುಗಿಗೆ ಅದನ್ನು ಹಸ್ತಾಂತರಿಸಲು ಪ್ರಯತ್ನಿಸುತ್ತಿದ್ದ. ನಾನೂ ಕೂಡಾ ಆ ಹುಡುಗಿಗೆ ಕಣ್ಸನ್ನೆಯಲ್ಲೇ ‘ಈ ಪತ್ರ ಬರೆದವನು ನಾನೇ’ ಎಂದು ಹೇಳಿಕೊಂಡಿದ್ದೆ.
ಆ ಹುಡುಗಿ, ಕೆಲವೊಮ್ಮೆ ನಮ್ಮೆಡೆಗೆ ನೋಡುತ್ತಿದ್ದಳು. ಅಥವಾ ನಾವು ಹಾಗೆಲ್ಲಾ ಭಾವಿಸಿದ್ದೆವು! ಕೊನೆಗೂ ಪ್ರಮೋದ ಆ ಪತ್ರ ಕೊಡಲೇ ಇಲ್ಲ, ಎಂದರು. ಇದಾದ ನಂತರಎದುರಿಗೆಕಂಡಪ್ರಮೋದರನ್ನುದ್ದೇಶಿಸಿ
‘ಸರ್, ಜಯಂತ್ ನಿಮ್ಮ ರಹಸ್ಯ ಪುರಾಣವನ್ನೆಲ್ಲಾ ಹೊರ ಹಾಕಿಬಿಟ್ರು ‘ಎಂದು ಕಿಚಾಯಿಸಿದೆ.
‘ಅವನ್ದು ಬಾಳ ನನ್ನತ್ರ ಅದೆ’ ಎಂದರು. ಪ್ರಮೋದ್ ಹೆಗಡೆ.
ಯಾವುದೋ ಕಾರ್ಯಕ್ರಮ ಒಂದರಲ್ಲಿ ಜಯಂತ್ ಹೇಳಿದ್ದು,
‘ಮಜಾ ಗೊತ್ತಾ ಒಮ್ಮೆ ನಮ್ಮಪ್ಪ ತನ್ನ ಸಹದ್ಯೋಗಿಗಳೊಂದಿಗೆ ಎಂಥದ್ದೊ ರಗಳೆ ಮಾಡಿಕೊಂಡರಂತೆ, ಅವರ ಸಹೊದ್ಯೋಗಿ ‘ಏ ಗೌರೀಶ ನೀನು ಎಲ್ಲದಕ್ಕೂ ಮೂಗು ತೂರಿಸಬೇಡ’ ಈ ಆರೋಪಕ್ಕೆ ಕೂಲಾಗಿ ಉತ್ತರಿಸಿದ ಗೌರಿಶರು ‘ಏ ಏನ್ ಆರೋಪ ಮಾಡ್ತೆ ನೀನು, ಸುಳ್ಳು ಹೇಳ್ತೆ, ಸುಳ್ ಹೇಳಿದ್ರೂ ಜನ ನಂಬೊಹಾಗೆ ಇರ್ಬೇಕು. ನಂಗೆ ಮೂಗೇ ಇಲ್ಲ, ಹೆಂಗೆ ನಾನ್ ಮೂಗು ತೂರಿಸಲಿ. ( ವಾಸ್ತವ ಏನೆಂದರೆ, ಹೂವು ಆಘ್ರಾಣಿಸಿದ್ದಕ್ಕೆ ಶಿಕ್ಷೆಯಾಗಿ ಉಂಟಾದ ನಂಜಿನಿಂದ ಗೌರೀಶರ ಮೂಗನ್ನು ಕತ್ತರಿಸಿದ್ದರು)
ಇಂಥದ್ದೆ ಇನ್ನೊಂದು ಪ್ರಸಂಗದಲ್ಲಿ ಜಯಂತ್ ಹೇಳಿದ್ದು, ‘ನಮ್ಮಪ್ಪ ಹೇಗಿದ್ದರೆಂದರೆ… ಯಾರೇ ಬೆನ್ನುಡಿ, ಮುನ್ನುಡಿ ಬರೆಯಿರಿ ಎಂದು ಹೇಳಲಿ, ದೂಸರಾ ಮಾತಾಡದೆ ಪ್ರೀತಿಯಿಂದ ಬರೆದು ಕೊಡುತ್ತಿದ್ದರು. ಇದು ಒಂಥರಾ ರೇಜಿಗೆಯಾಗಿ ‘ಪಪ್ಪ ನೀನ್ ಯಾಕೆ ಎಲ್ಲರಿಗೂ ಬರ್ದ್ ಕೊಡೊ ತ್ರಾಸ್ ತಗಳ್ತೆ? ಎಂದಾಗ, ತ್ರಾಸ್ ಪ್ರಶ್ನೆ ಅಲ್ಲ ಅದು, ಒಬ್ಬ ಕವಿಯಾದ, ಸಾಹಿತಿಯಾದ ಎಂದರೆ ಸಮಾಜದಲ್ಲಿ ಒಬ್ಬ ಕೊಲೆಗಾರ ಕಡಿಮೆ
ಆದ ಹಂಗೆ (ಅಂದಂತೆ) ಹಾಗಾಗಿ, ಒಬ್ಬನಿಗೂ ಬೇಸರ, ನೋವು ಮಾಡ್ದೆ
ಬೆನ್ನುಡಿ, ಮುನ್ನುಡಿ ಬರೆಯುತ್ತಾ ಸಮಾಜದ ದುರಂತ ತಪ್ಪಿಸಬೇಕು. ಅದು ಕೂಡಾ ಸಮಾಜ ಸೇವೆಯೇ ಎಂದರಂತೆ.
ಗೌರೀಶ ಕಾಯ್ಕಿಣಿ ಶಿಕ್ಷಕರಾಗಿ ಹೆಸರು ಮಾಡಿದ್ದರು, ಅವರ ಶಿಷ್ಯವೃಂದ ಅನೇಕ ಸಾಧನೆ ಗಳನ್ನು ಮಾಡಿದೆ. ಒಮ್ಮೆ ಗೌರೀಶರ ಶಿಷ್ಯರೊಬ್ಬರು ಒಂದು ದೋಣಿ ಉದ್ಘಾಟನೆ ಕಾರ್ಯಕ್ರಮ ಇಟ್ಟುಕೊಂಡಿದ್ದರಂತೆ, ಅದೇ ದಿನ ಕೇಂದ್ರ ಸಾಹಿತ್ಯ ಸಂಘಟನೆಯೊಂದರ ಬೆಳ್ಳಿಹಬ್ಬವೊ, ಸುವರ್ಣ ಸಂಭ್ರಮವೋ ಬೆಂಗಳೂರಿನಲ್ಲಿತ್ತಂತೆ. ಗೌರೀಶ್ ಮಾಸ್ತರ್ ರಾಜ್ಯಮಟ್ಟದ ಆ ಕಾರ್ಯಕ್ರಮ ನಿರಾಕರಿಸಿ, ತಮ್ಮ ಶಿಷ್ಯನ ದೋಣಿ ಉದ್ಘಾಟನೆಗೆ ಹೋದರಂತೆ! ಈ ಘಟನೆ ಆ ಕಾಲದಲ್ಲಿ ನನ್ನ ಬೇಸರಕ್ಕೆ ಕಾರಣವಾಗಿತ್ತು. ಆದರೆ, ಈಗ ಅದೇ ಒಳ್ಳೆ ಕೆಲಸ, ಅಂಥಾ ಸ್ಥಳೀಯ, ಆತ್ಮಿಯ ಪ್ರಸಂಗಗಳಿಗೆ ಗೌರವ ಕೊಡುವ ದೊಡ್ದತನ ಅನುಕರಣಾಯೋಗ್ಯ ಎನ್ನುತ್ತಾರೆ ಜಯಂತ್.
ಗೌರಿಶ್ ಮಾಸ್ತರ್ ಎಂದರೆ….
ಶಿಸ್ತು ಮತ್ತು ಕಠಿಣತೆಗೆ ಹೆಸರಾಗಿದ್ದವರು. ಅವರು ತಮ್ಮ ಶಿಷ್ಯಂದಿರಿಗೆ ಪೆಟ್ಟು ಕೊಡುತ್ತಿದ್ದ ಪ್ರಸಂಗಗಳೂ ಸಾಮಾನ್ಯವಾಗಿದ್ದವಂತೆ. ಆ ಸಮಯದಲ್ಲಿ ಊರಲ್ಲಿ ಸ್ನೇಹಿತರ ನಡುವೆ ಕೋಪ, ವಿವಾದ, ವಾಗ್ವಾದಗಳಾಗಿ ಯಾರಾದರೂ ಹೊಡೆದರೆ ‘ಇಂವ ಏನ್ ತನ್ನ ಗೌರೀಶ್ ಮಾಸ್ತರ್ ಎಂದು ತಿಳ್ಕೋಂಡಿದ್ದಾನಾ? ಎಂದು ಪ್ರಶ್ನಿಸುತ್ತಿದ್ದ ಪ್ರಸಂಗವಿತ್ತಂತೆ.!
ಗೌರೀಶರಿಗೆ ಹೀಗೆ ಯಾರಿಗೂ ಹೊಡೆಯಲು ವಿನಾಯಿತಿ ಇತ್ತಂತೆ!
ಡಾ. ಜಯಂತ್ ಕಾಯ್ಕಿಣಿ ಬಯೋ ಕೆಮೆಸ್ಟ್ರಿ (ಬಂಗಾರದ ಪದಕದೊಂದಿಗೆ) ಸ್ನಾತಕೋತ್ತರ ಶಿಕ್ಷಣ ಪಡೆದು, ಮುಂಬೈಯಲ್ಲಿ ಕಂಪನಿಯಲ್ಲಿದ್ದವರು. ನಂತರ ಟಿ.ವಿ. ಪತ್ರಿಕೋದ್ಯಮ, ಸಿನೇಮಾಗಳ ನಾನಾ ವಿಭಾಗಗಳಲ್ಲಿ ತೊಡಗಿಸಿಕೊಂಡವರು. ಅವರು ‘ಭಾವನಾ’ ಪತ್ರಿಕೆಯಲ್ಲಿ ಬರೆದ ಸಂಪಾದಕೀಯವೊಂದರಲ್ಲಿ ರಾಜ್‍ಕುಮಾರ್ ಬಗ್ಗೆ ಒಂದು ಪುಟ ಬರೆದಿದ್ದರೂ, ಅವರ ಹೆಸರು (ಡಾ ರಾಜ್) ಉಲ್ಲೇಖಿಸಿರಲಿಲ್ಲ. ಈ ಬಗ್ಗೆ ಅಚ್ಚರಿಯಿಂದ ಕೇಳಿದಾಗ, ಅದು ರಾಜ್ಕುಮಾರ್ ಅಂದ್ರೆ ಹಂಗೆ, ಅವರೇ ಪ್ರೇರಣೆ, ಅವರ ಸಿನೇಮಾ, ಅವರ ಹಿರೋಯಿಸಂ ನೋಡುತ್ತಾ ಬೆಳೆದಿದ್ದಕ್ಕೆ ಅದು ಸಾಧ್ಯವಾಯ್ತು ಎಂದು ಉತ್ತರಿಸಿದ್ದರು.
ನಿಜ ಜಯಂತ ಕಾಯ್ಕಿಣಿ ಪ್ರೀತಿ ಪ್ರೇಮದ ಧ್ವನಿ.