ಗಂಗಾಧರ ಕೊಳಗಿಯವರ ಕತೆ- ಅನ್ವೇಷಣೆ

ಅನ್ವೇಷಣೆ

ದೇವಂಗಿ ಕ್ರಾಸಿನಲ್ಲಿ ನಾಗರಾಜ ಚಿಂತಾಕ್ರಾಂತನಾಗಿ ನಿಂತಿದ್ದ. ಸಂಜೆಯಾಗುವದರ ಒಳಗೆ ಅವನು ಹುಲಿಬಂಡೆ ಸೇರಿಕೊಳ್ಳಬೇಕಾಗಿತ್ತು. ಅದೂ ಅಲ್ಲದೆ ಆಕಾಶವೆಲ್ಲ ಕಪ್ಪು ಮೋಡಗಳಿಂದ ಆವೃತವಾಗಿ ತುಂತುರು ಹನಿಗಳು ಉದುರತೊಡಗಲು ಸಜ್ಜಾಗಿತ್ತು.
ಹುಲಿಬಂಡೆ ಎಂದೂ ನೋಡದ ಊರು ಬೇರೆ. ಅಲ್ಲಿಗೆ ಹೋಗುವಷ್ಟರಲ್ಲಿ ರಾತ್ರಿಯಾಗಿ ಬಿಟ್ಟರೆ ಕಷ್ಟ. ಈ ದರಿದ್ರ ಮಳೆ ಬೇರೆ ಶುರುವಾಗಿ ಬಿಟ್ಟರೆ ಏನು ಕತೆ ಎಂದೆಲ್ಲ ಆತಂಕ ಪಡುತ್ತ ನಿಂತಿದ್ದ. ಅವನು ಆತಂಕ ಪಡುವದಕ್ಕೆ ಕಾರಣವೂ ಇತ್ತು. ನಡುರಸ್ತೆಯಲ್ಲಿ ನಿಂತಿದ್ದವ ನೆಲದ ಮೇಲಿದ್ದ ಬ್ಯಾಗ್‍ಗಳನ್ನೆತ್ತಿಕೊಂಡು ಸುತ್ತು ನೋಡಿದ. ಎದುರಿನಲ್ಲೇ ಒಂದು ಬಸ್ ಷೆಲ್ಟರ್ ಇತ್ತು. ವಾಚ್ ನೋಡಿಕೊಂಡ. ಸಮಯ ಐದಾಗುತ್ತ ಬಂದಿತ್ತು. ತುಸುದೂರದಲ್ಲಿ ರಸ್ತೆಯ ಪಕ್ಕ ಒಂದೆರಡು ಸೋಗೆ ಗುಡಿಸಲುಗಳು ಕಂಡವು. ಗುಡಿಸಲುಗಳಿಂದ ಹೊರಬರುತ್ತಿದ್ದ ಹೊಗೆಯಿಂದ ಅಲ್ಲಿ ಮನುಷ್ಯರಿದ್ದಾರೆ ಎನ್ನುವುದು ಖಾತ್ರಿಯಾಯ್ತು. ಹಾಗೇ ನೋಡಿದರೆ ಮನುಷ್ಯರ ಸುಳಿವು ಇರಬಹುದೆಂದು ಊಹಿಸಲೂ ಸಾಧ್ಯವಿರದಂಥ ಸ್ಥಳ ಅದು. ಘೋರ ಕಾನನದ ನಡುವೆ ಹಾದು ಹೋದ ಡಾಂಬರು ರಸ್ತೆ, ಚಿಕ್ಕ ಬಸ್ ಷೆಲ್ಟರ್, ಎದುರಿನಲ್ಲಿ ತಗ್ಗಿನತ್ತ ಇಳಿದು ಹೋದ ಮತ್ತೊಂದು ಟಾರು ರಸ್ತೆ ದೇವಂಗಿ ಕ್ರಾಸ್ ಅಂದಾಗ ನಾಗರಾಜನ ಮನಸ್ಸಿನಲ್ಲಿದ್ದದ್ದು ನೂರಾರು ಮನೆಗಳಿದ್ದ, ನಾಲ್ಕಾರು ಅಂಗಡಿ, ಗೂಡಂಗಡಿಗಳಿರುವ ಚಿಕ್ಕ ಊರು. ಸಾಕಷ್ಟು ಜನ ಸಂಚಾರ, ವಾಹನಗಳ ಒಡಾಟ ಇರುತ್ತದೆಂದು ಭಾವಿಸಿದ್ದ. ನಿರ್ಮಾನುಷ್ಯ ಸನ್ನಿವೇಶ ಇದಿರಾಗಿದ್ದರಿಂದಲೇ ನಾಗರಾಜ ಗಾಭರಿಗೊಂಡಿದ್ದ.
ತೀರ್ಥಹಳ್ಳಿಯಿಂದ ಹೊರಟಾಗಲೇ ಆಕಾಶವನ್ನು ಅವರಿಸಿಕೊಂಡಿದ್ದ ಕಪ್ಪು ಮೋಡಗಳು ಈಗ ಹೆಪ್ಪುಗಟ್ಟತೊಡಗಿದ್ದವು. ಸುತ್ತ ಪಶ್ಚಿಮ ಘಟ್ಟಗಳ ಗಿರಿಶ್ರೇಣಿ, ಚೂರು ನೆಲವೂ ಕಾಣದಂತೆ ಹೆಣೆದುಕೊಂಡ ಕಾಡು, ನಡು ಹಗಲಿನಲ್ಲೂ ಕತ್ತಲೆಯ ಭಾಸ ಹುಟ್ಟಿಸುವ ಆ ಅಭೇಧ್ಯ ಕಾನನದೊಳಗಿಂದ ಪ್ರಾಣಿ, ಪಕ್ಷಿಗಳ ವಿಚಿತ್ರ ಸ್ವರ, ಕೆಳಗೆ ಕಣಿವೆಯಾಳದಲ್ಲಿ ಹೊಳೆಯ ನೀರಿನ ಸದ್ದು. ಇದಿರಾಗುವ ಅಪರಿಚಿತ ಪರಿಸರವಾಗಲೀ, ಮನುಷ್ಯನಾಗಲೀ ಅದರಲ್ಲಿ ತೊಡಗಿಸಿಕೊಳ್ಳುತ್ತ, ಅದರಲ್ಲಿ ಒಂದಾಗುತ್ತ ಹೋದಂತೆಲ್ಲ ಮೊದಲಿನ ಭಯ, ಮುಜುಗರಗಳು ಕಡಿಮೆಯಾಗುತ್ತದೆಂದು ನಾಗರಾಜ ತಿಳಿದುಕೊಂಡಿದ್ದ. ಆದ್ದರಿಂದ ನಿಧಾನಕ್ಕೆ ಆ ಅಪರಿಚಿತ ಲೋಕಕ್ಕೆ ಹೊಂದಿಕೊಳ್ಳುವ ಪ್ರಯತ್ನದಲ್ಲಿದ್ದ. ಬ್ಯಾಗ್‍ಗಳನ್ನೆತ್ತಿಕೊಂಡು ಬಸ್ ಷೆಲ್ಟರಿಗೆ ಬಂದು ಮೆಟ್ಟಿಲಿನ ಮೇಲೆ ಕೂತು ಸಿಗರೇಟ್ ಹತ್ತಿಸಿಕೊಂಡ.
ನಿಧಾನಕ್ಕೆ ಸಂಜೆಯಾಗತೊಡಗಿತ್ತು. ದಟ್ಟವಾದ ಮೋಡಗಳು ಮಬ್ಬುಗತ್ತಲನ್ನು ಮತ್ತೂ ಹೆಚ್ಚಿಸಿದ್ದವು. ಸುತ್ತ ಅಸಂಖ್ಯಾತ ಜೀರುಂಡೆಗಳ ಕರ್ಕಶ ಸ್ವರ. ಗಿಡಮರಗಳ ಸಂದಿಯೊಳಗಿಂದ ಕತ್ತಲು ಇಷ್ಟಿಷ್ಟೇ ಕುಪ್ಪಳಿಸುತ್ತ ಬರುತ್ತಿದೆಯೇನೋ ಅನ್ನಿಸುವ ಭ್ರಮೆ. ಇದ್ದಕ್ಕಿದ್ದಂತೆ ಷೆಲ್ಟರಿನ ಛಾವಣಿಯನ್ನು ಎಗರಿಸುವಂತೆ ಗಾಳಿ ಬೀಸತೊಡಗಿತ್ತು. ಸುತ್ತಲಿನ ಎತ್ತರವಾದ ಮರಗಳನ್ನೂ ತೊಯ್ದಾಡಿಸುತ್ತ ಸೊಂಯ್ ಎಂದು ಬೀಸತೊಡಗಿದ ಗಾಳಿಯ ಬೆನ್ನಲ್ಲೇ ನಾಲ್ಕಾರು ಮಳೆಯ ಹನಿಗಳು ಉದುರಿದವು. ನೋಡನೋಡುತ್ತಿದ್ದಂತೇ ತುಂತುರಾಗಿ ಹನಿಯುತ್ತಿದ್ದ ಮಳೆ ಧಾರಾÀಕಾರವಾಗಿ ಸುರಿಯತೊಡಗಿತು.
ಎತ್ತರದ ಮರಗಳನ್ನ ಗಿರಿಗುಟ್ಟಿಸುತ್ತ, ಚಿಕ್ಕಪುಟ್ಟವುಗಳನ್ನು ಅಮುಕುತ್ತ ಭೋರಿಡುವ ಗಾಳಿ, ಐದಾರು ಮಾರಿನಾಚೆಯ ದೃಶ್ಯವನ್ನೂ ಮಸುಕಾಗಿಸಿ, ಬಿರುಸಾದ ಹನಿಗಳ ರಾಚುವ ಮಳೆ. ಇಡೀ ಜಗತ್ತೇ ಪ್ರಳಯವಾಗುವುದೆಂಬ ಭೀತಿ ಹುಟ್ಟಿಸುವ ಈ ಪರಿಸ್ಥಿತಿಯಲ್ಲಿ ತಾನು ಹುಲಿಬಂಡೆ ಸೇರುವುದು ಅಸಾಧ್ಯ ಅನ್ನಿಸಿಬಿಟ್ಟಿತು. ಕ್ಷಣಮಾತ್ರದಲ್ಲಿ ಚರಂಡಿ ತುಂಬಿ ರಸ್ತೆಗೆ ನುಗ್ಗಿದ ರಾಡಿ ನೀರನ್ನು, ಸುರಿಯುತ್ತ್ತಿದ್ದ ಮಳೆಯನ್ನು, ಮುಸುಗುತ್ತಿದ್ದ ಕತ್ತಲನ್ನು ನೋಡುತ್ತ ನಾಗರಾಜ ಚಿಂತಾಕ್ರಾಂತನಾಗಿದ್ದ. ಅವೆಲ್ಲಕ್ಕಿಂತ ಒಂದೇ ದಿನದಲ್ಲಿ ಜರುಗಿಹೋದ ಊಹಾತೀತವಾದ ಘಟನೆಗಳಿಂದ, ಅಂದುಕೊಂಡದ್ದಕ್ಕೆ ವ್ಯತಿರಿಕ್ತವಾದ ಸಂದರ್ಭ ಪರಿಸರಗಳಿಂದ ತಾನೊಬ್ಬ ಅನಾಥ ಎನ್ನುವ ಭಾವನೆ ಉಕ್ಕತೊಡಗಿತ್ತು. ನಾಗರಾಜನಿಗೆ ಇವೆಲ್ಲ ಗೊತ್ತಿರಲಿಲ್ಲ ; ಎಂಥವನನ್ನಾದರೂ ಧೃತಿಗೆಡಿಸುವ ಶಕ್ತಿ ಈ ಕಾಡಿನ ಒಡಲಲ್ಲಿರುತ್ತದೆ. ಕಾಡಿನ ಸಂಪರ್ಕ ಇಲ್ಲದ ಮನುಷ್ಯ ಇಲ್ಲಿನ ಸ್ನಿಗ್ಧ ಮೌನ, ಮಳೆ, ವಿರಳ ಜನಸಾಂದ್ರತೆಗೆ ಬೆಚ್ಚಿಬಿಡುತ್ತಾನೆ. ಬೇಡ ಬೇಡವೆಂದರೂ ಅನಾಥ ಪ್ರಜ್ಞೆಹೊಕ್ಕಿ ಬಿಡುತ್ತದೆ. ಅದರಲ್ಲಂತೂ ಊಹೆಗೆ ವಿರುದ್ಧವಾಗಿಯೇ ಘಟನೆಗಳು ಜರುಗತೊಡಗಿದರಂತೂ ನಾಗರಾಜನಂತೆ ಮಂಕಾಗಿ ಬಿಡುತ್ತಾನೆ. ‘ನಾನು ಯಾಕಾದರೂ ಅವಸರ ಪಟ್ಟು ಬಂದೇನೋ ಈ ರಾತ್ರಿ ತೀರ್ಥಹಳ್ಳಿಯಲ್ಲಿ ಉಳಿಯಬಹುದಿತು’್ತ ಎಂದೆಲ್ಲ ಅಲವತ್ತುಕೊಳ್ಳತೊಡಗಿದ ನಾಗರಾಜ.
ತೀರ್ಥಹಳ್ಳಿಯಲ್ಲಿ ಯಾರೋ ಹುಲಿಬಂಡೆಗೆ ನೇರ ಬಸ್ಸು ಇಲ್ಲ. ದೇವಂಗಿ ಕ್ರಾಸ್‍ನಲ್ಲಿ ಇಳಿದುಕೊಂಡರೆ ಆ ಕಡೆ ಹೋಗುವ ನಾಟಾ ಲಾರಿಯಾಗಲೀ, ಎತ್ತಿನ ಗಾಡಿಯಾಗಲಿ ಸಿಕ್ಕಬಹುದೆಂದು ಹೇಳಿದ್ದರು. ಆದಷ್ಟು ಬೇಗ ಹುಲಿಬಂಡೆ ತಲುಪುವ ಅವಸರದಲ್ಲಿದ್ದ ನಾಗರಾಜ ಕೊಪ್ಪಕ್ಕೆ ಹೋಗುವ ಬಸ್ ಹತ್ತಿ ಇಲ್ಲಿಳಿದು ಬಿಟ್ಟಿದ್ದ. ತನಗಾಗೇ ಯಾವುದಾದರೂ ಕಾದುಕೊಂಡಿರುತ್ತೆ ಅನ್ನುವ ಗ್ಯಾರಂಟಿಯಲ್ಲಿ ಬಂದಿದ್ದವನಿಗೆ ವಾಹನವಿರಲಿ, ಯಾರಾದರೂ ಜನಗಳು ಸಿಕ್ಕಿದರೂ ಸಾಕಿತ್ತು. ಈ ಕಾಡು, ಇಲ್ಲಿನ ಹೆಪ್ಪುಗಟ್ಟಿದ ಮೌನ ಏನೋ ಗುಪ್ತವಾದದ್ದನ್ನು ಬಚ್ಚಿಟ್ಟಂತಿತ್ತು. ಕತ್ತಲು ಕವಿದುಕೊಳ್ಳುತ್ತಿದ್ದ ಆ ಹೊತ್ತಿನಲ್ಲಿ ತಾನ್ಯಾವುದೋ ರಹಸ್ಯ ಜಗತ್ತಿನ ಇದಿರಿನಲ್ಲಿ ನಿಂತಿದ್ದೇನೆ ಅನ್ನಿಸತೊಡಗಿತು.
ನಾಗರಾಜ ಹುಲಿಬಂಡೆಗೆ ಹೋಗಬೇಕೆನ್ನುವುದನ್ನು ಮುಂಚಿತವಾಗೇನೂ ನಿರ್ಧರಿಸಿರಲಿಲ್ಲ. ಏಕಾಏಕಿ ಯಾವತ್ತೋ ತೀರ್ಮಾರ್ನಿಸಿಕೊಂಡವನಂತೆ ಬಟ್ಟೆಬರೆ, ಒಂದಿಷ್ಟು ಸಿಗರೇಟ್ ಪ್ಯಾಕ್, ಕ್ಯಾಮರಾಗಳನ್ನು ಬ್ಯಾಗ್‍ನಲ್ಲಿ ತುಂಬಿಕೊಂಡು ಹೊರಟುಬಿಟ್ಟಿದ್ದ. ನಾಗರಾಜ ಒಂದು ರೀತಿಯಲ್ಲಿ ವಿಲಕ್ಷಣ ಮನಸ್ಥಿತಿಯವ. ಹೋಗಬೇಕೆಂದ ಕಡೆ ಸಮಯದ್ದಾಗಲೀ, ಇನ್ನಿತರ ಯಾವ ತೊಂದರೆಯನ್ನಾಗಲೀ ಗಣನೆಗೆ ತೆಗೆದುಕೊಳ್ಳದೇ ಹೊರಟು ಬಿಡುತ್ತಿದ್ದ. ಮಧ್ಯರಾತ್ರಿಯಾಗಲಿ, ಅಪಾಯ ಎದುರಿದ್ದಾಗಾಗಲೀ ಧೈರ್ಯಗುಂದದ ಮನುಷ್ಯ ಆತ. ಸದಾಕಾಲ ಸವಾಲೊಡ್ಡುವ ಸಂದರ್ಭಗಳಿಗಾಗಿ ಕಾತರಿಸುತ್ತಿರುವಂಥ ವ್ಯಕ್ತಿ. ಸುಮ್ಮನೆ ಬದುಕುವುದೆಂದರೆ ಬೋರ್ ಅನ್ನುತ್ತಿದ್ದ. ಹೆಜ್ಜೆ ಹೆಜ್ಜೆಗೂ ಅಪಾಯ ಕಾದಿದ್ದಾಗ, ಮುಂದಿನ ಪ್ರತಿಕ್ಷಣವೂ ಊಹಿಸಲಾಗದಂತಿದ್ದಾಗ ನಮ್ಮ ವ್ಯಕ್ತಿತ್ವ ಕ್ರಿಯಾಶೀಲವಾಗಿರುತ್ತೆ ಅನ್ನುತ್ತಿದ್ದ. ಅಂಥ ಥ್ರಿಲ್‍ಗಳನ್ನು ನಗರದಲ್ಲಷ್ಟೇ ಕಂಡಿದ್ದ ನಾಗರಾಜ ಈಗ ಘೋರ ಕಾನನದ ನೀರವ ವಾತಾವರಣದಲ್ಲಿ ಧೃತಿಗೆಡುತ್ತಿದ್ದ. ತನ್ನ ಸುತ್ತ ಬೇಕೆಂತಲೇ ಸುತ್ತಿಕೊಂಡಿದ್ದ ಉಪಾದ್ವಾಪಗಳಿಂದ ಸ್ವಲ್ಪಕಾಲ ದೂರವಿರುವುದೂ ಅವನಿಗೆ ಮುಖ್ಯವಾಗಿತ್ತು. ತನ್ನ ಫ್ರಿಲಾನ್ಸ್ ಫೋಟೋಗ್ರಫಿಯಲ್ಲದೇ ಸಾಹಿತ್ಯ, ಪತ್ರಿಕೋದ್ಯಮ ಅದೂ, ಇದೂ ಅಂತ ಓಡಾಡುತ್ತ ನೂರಾರು ಜನಗಳ ಜೊತೆ ತೊಡಗಿಕೊಂಡು ಉಸಿರಾಡಲೂ ಪುರುಸೊತ್ತು ಇಲ್ಲದಂತಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಅವನ ಬಗ್ಗೆ ಅವನಿಗೆ ಅಪನಂಬಿಕೆ ಹುಟ್ಟತೊಡಗಿತ್ತು. ಸ್ವಂತ ವ್ಯಕ್ತಿತ್ವವನ್ನೇ ಕಳೆದುಕೊಳ್ಳುತ್ತಿದ್ದೇನೆಂಬ ಭಯ ಹುಟ್ಟಿತ್ತು. ವೃತ್ತಿಯಲ್ಲಿ ಸಂಪಾದನೆ ಚೆನ್ನಾಗಿಯೇ ಇದ್ದುದರಿಂದ ಹಣದ್ದೇನೂ ಕೊರತೆ ಇರಲಿಲ್ಲ. ಛಾಯಾಗ್ರಹಣದಲ್ಲಿ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ನಾಗರಾಜ ವೃತ್ತಿಯ ಒತ್ತಡದಿಂದಾಗಿಯೇ ಬಳಲಿ ಹೋಗಿದ್ದ.
ವೃತ್ತಿ ತಂದು ಕೊಡುವ ಘನತೆಯಾಗಲಿ, ಹಣವಾಗಲೀ, ಅವನಿಗೆಂದೂ ಮುಖ್ಯವಾಗಿ ಕಂಡಿರಲಿಲ್ಲ. ಮಹತ್ತರವಾದುದನ್ನು ಸಾಧಿಸಬೇಕು, ಅದೂ ಅನುಭವಪೂರ್ವಕವಾಗಿ ಎನ್ನುವ ಹಂಬಲವಿಟ್ಟುಕೊಂಡಿದ್ದ. ಅದೇನೆನ್ನುವದೂ ಇವತ್ತಿಗೂ ಅರ್ಥವಾಗದೇ ಮರೀಚಿಕೆಯಾಗಿತ್ತು. ನಗರಜೀವನ, ಯಾಂತ್ರಿಕತೆಯ ಮುಖವಾಡ ತೊಟ್ಟ ಮನುಷ್ಯರ ವರ್ತನೆ ಇವೆಲ್ಲ ಕಾಡಿಸತೊಡಗಿತ್ತು. ವಿಚಿತ್ರ ರೀತಿಯ ವೈರಾಗ್ಯವನ್ನು ಮನಸ್ಸಿನಲ್ಲಿ ತುಂಬಿಕೊಂಡು ಬಿಟ್ಟಿದ್ದ. ಪ್ರವಾಹದಂತೆ ಉಕ್ಕುವ ಪ್ರೇಮ, ಹೆಣ್ಣಿನ ಕುರಿತಾದ ತೀವ್ರವಾದ ಕಾತರ ಅವನಲ್ಲಿತ್ತು. ಹರೆಯದ ಶುರುವಿನಲ್ಲೇ ವಿಫಲವಾದ ಪ್ರೇಮ ಪ್ರಕರಣ ಅವನಾಗಿಯೇ ಅಂಥದ್ದಕ್ಕೆ ತಡೆಯೊಡ್ಡುವಂಥÀ ಸ್ಥಿತಿಯನ್ನು ಉಂಟು ಮಾಡಿತ್ತು. ಗಾಯವಾಗಿ, ವ್ರಣವಾಗಿ, ಕೀವು ಸುರಿಯುವ ನೆನಪಾಗಿ ಅದನ್ನು ತನ್ನೊಳಗೆ ಶಾಶ್ವತವಾಗಿ ಇರಿಸಿಕೊಂಡು ಬಿಟ್ಟಿದ್ದ. ‘ಮದುವೆಯಾದರೆ ಈ ಒಂಟಿತನ ಕಡಿಮೆಯಾಗುತ್ತೆ’ ಎಂದು ಸ್ನೇಹಿತರು ಹೇಳಿದ್ದರೂ ತನ್ನ ಮನಸ್ಥಿತಿಯ ಸಂಪೂರ್ಣ ಅರಿವಿದ್ದ ನಾಗರಾಜ ಆ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆತನಿಗೆ ಒಟ್ಟಿನಲ್ಲಿ ತಾನಿದ್ದ ಪರಿಸರದಿಂದ ಕಳಚಿಕೊಳ್ಳುವುದು ಬೇಕಿತ್ತು.
ನಿರಾಳವಾಗಿ ಉಸಿರಾಡುವಂಥ, ಯಾತರ ಹಂಗೂ ಇಲ್ಲದ ನೆಮ್ಮದಿಯ ಬದುಕಿನ ಕಲ್ಪನೆ ಅವನನ್ನು ಅಯಸ್ಕಾಂತದಂತೆ ಸೆಳೆಯುತ್ತಿತ್ತು. ದಿನದಿಂದ ದಿನಕ್ಕೆ ಆ ಕಲ್ಪನೆ ವಿಸ್ತಾರಗೊಳ್ಳುತ್ತ ಬದುಕೇ ಅಸಹನೀಯ ಅನ್ನಿಸುತ್ತಿದ್ದಾಗ, ಗೆಳೆಯ ಸೀತಾರಾಮ ನೆನಪಾಗಿದ್ದ. ತಾನು ಹುಲಿಬಂಡೆಯಲ್ಲಿ ಇರುವುದಾಗಿಯೂ, ನಿನ್ನಂಥ ಸಾಹಸಿಗೆ ಇಲ್ಲಿ ಬೇಕಾದಷ್ಟು ಸವಾಲುಗಳಿವೆ. ನಿನ್ನ ಕ್ರಿಯಾಶೀಲತೆಯನ್ನು ಮತ್ತಷ್ಟು ಹೆಚ್ಚಿಸುವ ಅವಕಾಶಗಳು ಇವೆ. ಖಂಡಿತಾ ಬಾ. ಎಂದು ಯಾವತ್ತೋ ಬರೆದ ಪತ್ರ ನೆನಪಾಗಿತ್ತು. ತನ್ನ ಫೈಲ್ ಹುಡುಕಿ ಅವನ ವಿಳಾಸ ಎತ್ತಿಕೊಂಡವನೇ ಸೀತಾರಾಮ£ಗೆ ಮುಂಚಿತವಾಗಿಯೂ ತಿಳಿಸದೇ ನಿಂತ ಕಾಲ ಮೇಲೆ ಹೊರಟುಬಿಟ್ಟ. ಹೀಗೇ ತಕ್ಷಣ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿ ಒದಗಬಹುದಾದ ಸಮಸ್ಯೆಗಳ ಬಗ್ಗೆ, ಗಂಡಾಂತರಗಳ ಬಗ್ಗೆ ನಾಗರಾಜ ಯೋಚಿಸುತ್ತಿರಲಿಲ್ಲವೆಂದಲ್ಲ. ಮೂಲತಃ ನಾಗರಾಜನ ಪ್ರಕೃತಿಯೇ ಅಂಥದ್ದು. ತನ್ನನ್ನು ಪರೀಕ್ಷೆಗೊಡ್ಡುವ ಅಂಥ ಕ್ಷಣಗಳಿಗಾಗಿ ಆತ ಕಾದುಕೊಂಡಿರುತ್ತಿದ್ದ.
ಕತ್ತಲು ದಟ್ಟವಾಗುತ್ತಿತ್ತು. ಮಳೆ ಕಡಿಮೆಯಾಗುವುದನ್ನೇ ನಿರೀಕ್ಷಿಸುತ್ತ ಚಡಪಡಿಸುತ್ತ ಕೂತಿದ್ದ ನಾಗರಾಜನಿಗೆ ಯಾವ ನಿರ್ಧಾರಕ್ಕೂ ಬರಲು ಆಸ್ಪದವೇ ಇರಲಿಲ್ಲ. ಪರಿಸ್ಥಿತಿ ಹೇಗೆ ಬರುತ್ತದೆಯೋ ಹಾಗೇ ಹೊಂದಿಕೊಂಡು ಹೋಗಬೇಕಾದ ಅನಿವಾರ್ಯತೆಗೆ ಆತ ಸಿಲುಕಿಬಿಟ್ಟಿದ್ದ. ಸೊಂಯೆಂದು ಬೀಸಿ ಬರುವ ಥಂಡಿಗಾಳಿಗೆ ಮೈ ನಡುಗಿ ಬ್ಯಾಗಿನಿಂದ ಜರ್ಕಿನ್ ತೆಗೆದು ತೊಟ್ಟುಕೊಂಡ. ಅಗೋಚರವಾಗಿದ್ದು ಒಂದೇ ಸಮನೆ ‘ಟ್ರಂಯ್, ಟ್ರಂಯ್’ ಎಂದು ಕಿರುಚಿಕೊಳ್ಳುವ ಕಪ್ಪೆಗಳ ಕೂಗು ಒಂದಿಷ್ಟು ಹೊತ್ತು ತಲೆ ಚಿಟ್ಟು ಹಿಡಿಸಿದರೂ ಸ್ವಲ್ಪ ಸಮಯದ ನಂತರ ಮಾಮೂಲಿಯೆನ್ನಿಸಿತು. ಈ ರಾತ್ರಿ ಎಲ್ಲಿ ಹೋಗಲಿ? ಈ ಕತ್ತಲಿನಲ್ಲಿ ಹುಲಿಬಂಡೆ ಸೇರಿ, ಸೀತಾರಾಮ£ದ್ದಲ್ಲಿ ಹೋಗುವುದು ಹೇಗೆ ಸಾಧ್ಯ? ಕಾಡು, ಮಳೆ, ಕತ್ತಲೆಯ ಈ ಅನೂಹ್ಯ ಜಗತ್ತಿನಲ್ಲಿ ಸೇರಬೇಕಾದ ಜಾಗವನ್ನು ಹೇಗೆ ಹುಡುಕಲಿ? ತಾನೊಂದು ನಿಗೂಢ ಲೋಕದಲ್ಲಿ ಸಿಕ್ಕಿ ಬಿದ್ದಿದ್ದೆನೆಂದು ನಾಗರಾಜನಿಗೆ ಅನ್ನಿಸತೊಡಗಿತು. ಇದು ಭ್ರಮೆ ಅನ್ನಿಸಿದರೂ ಅವನ ಯಾವತ್ತಿನ ಉತ್ಪ್ರೇಕ್ಷಿತವಾಗಿ ಊಹಿಸಿ, ರೋಮಾಂಚನಗೊಳ್ಳುವ ಮನಸ್ಸು ಸತ್ಯವೆಂದೇ ಸಿದ್ಧ ಮಾಡತೊಡಗಿತು. ಏನಾದರಾಗಲಿ, ಈ ರಾತ್ರಿ ಈ ಶೆಲ್ಟರಿನಲ್ಲೇ ಠಿಕಾಣಿ ಹೂಡಿದರಾಯ್ತು ಅಂದುಕೊಂಡ.
ಹೀಗೆ ತನ್ನೊಳಗೇ ತಾನು ಮಗ್ನನಾಗಿದ್ದ ನಾಗರಾಜ ಅಪರಿಚಿತರಿಬ್ಬರೂ ಗಟ್ಟಿಯಾಗಿ ಮಾತನಾಡುತ್ತ ಅಲ್ಲಿಗೆ ಬಂದದ್ದರಿಂದ ದಿಗಿಲುಗೊಂಡ, ಯಾತರದ್ದೋ ಬಗ್ಗೆ ವಾದ ಮಾಡಿಕೊಳ್ಳುತ್ತ ಶೆಲ್ಟರ್À ಒಳಗೆ ಹೊಕ್ಕವರು ಮಸುಕು ಕತ್ತಲಿನಲ್ಲಿ ನಾಗರಾಜನ ಆಕಾರ ಕಂಡು ಗಾಬರಿಯಾಗಿರಬೇಕು. ತಟ್ಟನೆ ಮಾತು ನಿಲ್ಲಿಸಿದರು. ತನ್ನ ಮನಸ್ಸಿನಾಳಕ್ಕೆ ಇಳಿಯುತ್ತ ಈ ಸಂದರ್ಭವೇ ಒಂದು ನೆಪವೆನ್ನುವಂತೆ ಬದುಕಿನ ಕಳೆದ ದಿನಗಳ ಬಗ್ಗೆ ಗಾಢವಾಗಿ ಚಿಂತಿಸುತ್ತ ಕೂತಿದ್ದ ನಾಗರಾಜ ಕೂಡ ಬೆಚ್ಚಿದ. ಅಸ್ಪಷ್ಟವಾಗಿ ಗೋಚರವಾಗುತ್ತಿದ್ದ ಆ ಆಕೃತಿಗಳ ಬಗ್ಗೆ ಏನೆಲ್ಲ ಊಹೆಗಳು ಬಂದು ಹೋದವು. ಬಂದಿದ್ದವರಲ್ಲಿ ಒಬ್ಬ ಗಡಿಬಿಡಿಯಲ್ಲಿ ಜೇಬಿನಿಂದ ಕಡ್ಡಿಪೊಟ್ಟಣ ತೆಗೆದು ಕಡ್ಡಿ ಗೀರಿದ. ಒಂದು ಕ್ಷಣ ಇಡೀ ಶೆಲ್ಟರಿನ ತುಂಬ ಬೆಳಕು ಹರಡಿಕೊಂಡಿತ್ತು. ಆ ಅಲ್ಪ ಸಮಯದಲ್ಲಿ ಪರಸ್ಪರರೂ ಮನುಷ್ಯರೇ ಹೌದೆನ್ನುವುದನ್ನು ಖಾತ್ರಿ ಪಡಿಸಿಕೊಂಡರು. ನಾಗರಾಜನನ್ನು ಅವನ ಬಳಿಯಿದ್ದ ಬ್ಯಾಗ್‍ಗಳನ್ನು ನೋಡಿ ಆಗುಂತಕರಲ್ಲಿ ಸಂಶಯ, ಆಶ್ಚರ್ಯಗಳು ಒಟ್ಟೊಟ್ಟಿಗೇ ಕಾಣಿಸಿಕೊಂಡವು. ಕಾಡಿನ ಮಧ್ಯದ ಈ ನಿರ್ಮಾನುಷ ಬಸ್‍ಶೆಲ್ಟರ್‍ನಲ್ಲಿ ಮಳೆಗಾಳಿಯ ಕತ್ತಲೆಯಲ್ಲಿ ಅಪರಿಚಿತ ಯಾಕೆ ಕೂತಿದ್ದಾನೆ? ಅದೂ ಅಲ್ಲದೇ ಈ ಬ್ಯಾಗ್‍ಗಳು ಬೇರೆ; ಗಂಧ, ಗಾಂಜಾ, ಕಳ್ಳಸಾಗಾಣಿಕೆ ಮಾಡುವ ಗ್ಯಾಂಗ್‍ನವನಿರಬಹುದೇ? ಎನ್ನುವ ಕಲ್ಪನೆಗೆ ಶಕ್ಯವಿರುವ ಅನುಮಾನಗಳೆಲ್ಲ ಅವರಿಬ್ಬರ ಮನಸ್ಸಿನಲ್ಲಿ ಸುಳಿದು ಹೋಗಿರಬಹುದು. ನಾಗರಾಜ ಕೂಡ ಅವರಿಬ್ಬರ ಬಗ್ಗೆ ಹಾಗೆಯೇ ಯೋಚಿಸುತ್ತಿದ್ದ. ಈ ನಿರ್ಜನ ಪರಿಸರದಲ್ಲಿ ಹೆಪ್ಪುಗಟ್ಟಿದ ಕತ್ತಲ ಮಧ್ಯದಿಂದ ನಿಶಾಚರರಂತೆ ತಟ್ಟನೆ ಅವತರಿಸಿದ ಇವರು ಯಾರು? ತಾನು ಒಂಟಿಯಾಗಿರುವುದನ್ನು ಕಂಡು ದೋಚಲು ಬಂದರೇ? ಎಂದೆಲ್ಲ ಕ್ಷಣಮಾತ್ರದಲ್ಲಿ ಯೋಚಿಸಿದವನಿಗೆ ಅವರು ಗಟ್ಟಿಯಾಗಿ ಮಾತನಾಡುತ್ತ ಬಂದದ್ದು, ತನ್ನ ಕಂಡು ಗಾಭರಿಯಾದದ್ದು ಇವೆಲ್ಲವುದರಿಂದ ಅನಿರೀಕ್ಷಿತವಾಗಿ ಬಂದವರು ಅ£್ನಸಿತು. ಬಂದವರಿಬ್ಬರೂ ಒದ್ದೆಯಾದ ತಮ್ಮ ಕೈಗಳನ್ನು ಪಂಚೆಗೆ ಒರೆಸಿಕೊಂಡು ಬೀಡಿ ತೆಗೆದು ಬೆಂಕಿ ಹೊತ್ತಿಸಿ ಬೆಚ್ಚಗಾಗತೊಡಗಿದರು. ಅಷ್ಟೊತ್ತಿನ ತನಕ ಸಿಗರೇಟನ್ನು ಮರೆತು ಕೂತಿದ್ದ ನಾಗರಾಜ ಅದನ್ನು ಕಂಡು ನೆನಪಾಗಿ ಸಿಗರೇಟನ್ನ ಹೊತ್ತಿಸಿಕೊಂಡ.
ನಾಗರಾಜನ ರೇಡಿಯಂ ಇದ್ದ ವಾಚ್ ಏಳುಗಂಟೆಯಾಗುತ್ತಿದ್ದುದನ್ನು ತೋರಿಸುತ್ತಿತ್ತು. ಯಾಕೋ, ಏನೋ ಆ ಅಪರಿಚಿತರಿಬ್ಬರೂ ಮಾತನಾಡುವುದಿರಲಿ, ಪಿಸುಗುಟ್ಟುತ್ತಲೂ ಇರಲಿಲ್ಲ. ಚಿಕ್ಕ ಕಿಡಿಗಳಂತಿದ್ದ ಬೀಡಿಯ ತುದಿಗಳು ಆಗಾಗ ಮತ್ತಷ್ಟು ಹೊಳೆದಾಗಷ್ಟೇ ಅವರಿದ್ದಾರೆನ್ನುವುದು ಅರಿವಾಗುತ್ತಿತ್ತು. ಕತ್ತಲು, ತಣ್ಣನೆಯ ಗಾಳಿ, ಮಳೆ, ಅಸಹನೀಯ ಮೌನದ ನಡುವೆ ನಾಗರಾಜನ ಮನಸ್ಸು ವಿಷಾದವನ್ನು ತುಂಬಿಕೊಳ್ಳತೊಡಗಿತು.
ತಮ್ಮನ್ನು ಕಂಡು ಮೂಕನಂತೆ ಕೂತ ನಾಗರಾಜನ ಬಗ್ಗೆ ಆ ಅನಾಮಧೇಯರಿಗೆ ಕುತೂಹಲ ಉಂಟಾಗಿತ್ತು. ಭಯ, ಸಂಶಯಗಳು ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದವು. ಅವರಲ್ಲಿ ಒಬ್ಬ ಕೊನೆಗೂ ತಡೆದು ಕೊಳ್ಳಲಾಗದೇ ಮಾತು ಪ್ರಾರಂಭಿಸಿಯೇ ಬಿಟ್ಟ.
“ನಿಮ್ಮನ್ನು ನೋಡಿದರೆ ಹೊಸಬರೂಂತ ಕಾಣ್ಸುತ್ತೆ. ಎಲ್ಲಿಂದ ಬಂದೀರಿ? ಎತ್ತಲಾಗೆ ಹೋಗಬೇಕು?”
ಪರಸ್ಪರ ಮುಖ ಕಾಣುವಷ್ಟೂ ಬೆಳಕಿಲ್ಲದ ಕರಿಗತ್ತಲೆಯಲ್ಲಿ ಅಶರೀರವಾಣಿಯಂತೆ ಕೇಳಿಬಂದ ಮೊನಚಾದ ಧ್ವನಿಗೆ ನಾಗರಾಜ ಕುÀಮಟಿ ಬಿದ್ದ. ಆ ಅದೃಶ್ಯರೂಪಿ ಕೇಳಿದ ಪ್ರಶ್ನೆ ನಿದ್ದೆಗಣ್ಣಿನಲ್ಲಿದ್ದವನನ್ನು ತಟ್ಟಿ ಎಬ್ಬಿಸಿದಂತಾಗಿತ್ತು. ವಾಸ್ತವಿಕವಾಗಿ ಇಷ್ಟು ಹೊತ್ತಿನ ತನಕ ನಾಗರಾಜ ಸುಪ್ತ ಪ್ರಜ್ಞೆಯಾಳದಲ್ಲಿ ಇದೇ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಿದ್ದ. ಬದುಕಿನಲ್ಲಿ ಸÀಂದುಹೋದ ಘಟನೆಗಳನ್ನು, ಪ್ರತಿಯೊಂದು ಸಂದರ್ಭವನ್ನೂ ತೀವ್ರವಾಗೇ ಗ್ರಹಿಸುವ ತನ್ನ ಅನುಭವಗಳನ್ನು ಮೆಲುಕು ಹಾಕುತ್ತ ಒಂದು ರೀತಿಯ ಮಂಪರಿನಲ್ಲಿದ್ದ. ಅದೇ ನೆನಪುಗಳು ಅವನನ್ನು ವಿಷಾದಯೋಗಕ್ಕೆ ತಳ್ಳಿ, ಬದುಕೆಂದರೇನು? ಬದುಕಿನ ನಿಜವಾದ ಅರ್ಥವೇನು?
ಮತ್ತು ಬದುಕಿಗೆ ಯಾವ ರೀತಿಯಲ್ಲಿ ಸಾರ್ಥಕತೆ ತರಲು ಸಾಧ್ಯ? ಎನ್ನುವದನ್ನೆಲ್ಲ ಒಂದೇ ಸಮನೆ ಯೋಚಿಸಲು ಹಚ್ಚಿದ್ದÀವು. ಈವರೆಗೆ ಒಂದೇ ಒಂದು ಕ್ಷಣವೂ ಈ ಥರದ ಧ್ಯಾನದ ಸ್ಥಿತಿಯಲ್ಲಿ ಆತ ಕೂತಿರಲಿಲ್ಲ. ಸದಾ ಗದ್ದಲದ, ವೇಗದ, ಸ್ಪರ್ಧೆಯ ಜಗತ್ತಿನಲ್ಲಿ ಇಂಥದೊಂದು ಸ್ಥಿತಿಯೂ ಇರಬಹುದೇ? ಎನ್ನುವುದನ್ನೂ ಕೂಡ ಯೋಚಿಸಿರಲಿಲ್ಲ. ನಾಗರಾಜನಿಗೆ ತಿಳಿದಿರಲಿಲ್ಲ; ಈ ಕಾಡು, ಕಾಡಿನ ಅಂತರಾಳ, ಮಳೆ, ಹೊಳೆ, ಕಾಡಿನ ನಿಗೂಢತೆಗಳೆಲ್ಲ ಮನುಷ್ಯನನ್ನು ಒಂಟಿಯಾಗಿಸಿಬಿಡುತ್ತವೆ. ಗುಂಪಿನಲ್ಲಿದ್ದರೂ ಮನುಷ್ಯ ತನ್ನ ಮನಸ್ಸಿನಲ್ಲೇ ಗಾಳ ಹಾಕಿ ಕೂತುಬಿಡುತ್ತಾನೆ. ಇದು ನಗರ ಜೀವನದಂತೆ ಸೀಮಿತವಾದದ್ದಲ್ಲ. ಸ್ವಾರ್ಥದ್ದಲ್ಲ. ಕಾಡಿನ ಈ ಶಕ್ತಿ ಗೊತ್ತಿದ್ದೇ ಹಿಂದಿನ ಕಾಲದ ಋಷಿ ಮು£ಗಳು ಇಲ್ಲೇ ಬೀಡುಬಿಡುತ್ತಿದ್ದರೇನೋ;
ಬೆಚ್ಚಿಬಿದ್ದ ನಾಗರಾಜ ಆ ಪ್ರಶ್ನೆಗೆ ಉತ್ತರಿಸಲು ತಡಬಡಾಯಿಸಿದ. ನೇರವಾಗಿ ಹೇಳಬಹುದಾಗಿತ್ತಾದರೂ ಅವನು ಆ ಸ್ಥಿತಿಯಲ್ಲಿ ಇರಲಿಲ್ಲವಲ್ಲ ; ತನ್ನ ಹುಟ್ಟು, ಬಾಲ್ಯ ಹರೆಯದ ಈ ಕ್ಷಣದವರೆಗಿನದನ್ನೂ ಆತ ಭಿನ್ನ ರೀತಿಯಲ್ಲಿ ಯೋಚಿಸತೊಡಗಿದ್ದ. ಎಲ್ಲಿಂದ ಬಂದೆ? ಎನ್ನುವ ಪ್ರಶ್ನೆಗೆ ಏನೆಂದು ಉತ್ತರಿಸುವುದು? ‘ಬೆಂಗಳೂರಿ£ಂದ’ ಅಂದರೆ ಸಮಂಜಸವಾದೀತೆ? ಎಲ್ಲಿಂದ ಬಂದೆ ಎನ್ನುವುದನ್ನು ನಿಖರವಾಗಿ ಹೇಳಲು ಸಾದ್ಯವೇ ಇಲ್ಲ; ಈ ಅನೂಹ್ಯ ಬದುಕಿನಲ್ಲಿ ಎತ್ತ ಹೋಗುತ್ತೆನೆನ್ನುವುದನ್ನು ಹೇಗೆ ಹೇಳಲಿ? ಹಗಲಿನಲ್ಲಾಗಿದ್ದರೆ, ಮೊದಲಿನ ಮನಸ್ಥಿತಿಯೇ ಇದ್ದಿದ್ದರೆ ಮಾಮೂಲಾದ ಈ ಪ್ರಶ್ನೆಗೆ ಸಹಜವಾಗಿ ಉತ್ತರಿಸಿ ಬಿಡುತ್ತಿದ್ದನೇನೋ? – ಆದರೆ ಅವನಲ್ಲಿ ಹಠಾತ್ತನೇ ಬದಲಾದ ಮನಸ್ಥಿತಿ ವಿಚಿತ್ರ ರೀತಿಯಲ್ಲಿ ಯೋಚಿಸಲು ಹಚ್ಚಿಬಿಟ್ಟಿತ್ತು. ತಾನು ಹೇಳಿದ್ದು ನಾಗರಾಜನಿಗೆ ಕೇಳಿಸಿರಲಿಕ್ಕಿಲ್ಲ ಅಂದುಕೊಂಡು ಆ ವ್ಯಕ್ತಿ ಪುನಃ ಮತ್ತದೇ ಪ್ರಶ್ನೆಯನ್ನು ಕೇಳಿದಾಗ ನಾಗರಾಜ ಎಚ್ಚೆತ್ತುಕೊಂಡ. ತನ್ನ ಒಳಮನಸ್ಸಿನಿಂದ ಈಚೆ ಜಿಗಿದು ಸಾದ್ಯಂತವಾಗಿ ವಿವರಗಳನ್ನು ಹೇಳತೊಡಗಿದ.
“ ಈ ಹೊತ್ತಿನಾಗೆ ಹುಲಿಬಂಡೆ ಎಸ್ಟೇಟಿಗೆ ಹೋಗುವುದು ಬಾಳ ಕಷ್ಟ, ದಾರಿ ಗೊತ್ತಿಲ್ಲ ಅನ್ನುತ್ತೀರಿ. ಈ ಥರ ಮಳೆ ಬೇರೆ. ಕತ್ತಲಿನಲ್ಲಿ ಕಾಡಿನ ಮಧ್ಯೆ ಹತ್ತುಮೈಲಿ ನಡೆಯುವದೆಂದರೆ ನಿಮ್ಮ ಹತ್ರ ಸಾಧ್ಯವೇ ಇಲ್ಲ.” ಅಂದಿತು ಆ ವ್ಯಕ್ತಿ.
“ಅದಕ್ಕೆ ರಾತ್ರಿ ಕಳೆದು, ಬೆಳಕಾದ ಮೇಲೆ ಮುಂದೇನು ಅಂತ ಯೋಚಿಸೋದು ಅಂತ ಇಲ್ಲೇ ಕೂತಿದೀನಿ” ನಾಗರಾಜ ನಿರಾಸಕ್ತ ದ£ಯಲ್ಲಿ ಹೇಳಿದ.
“ಏನು? ರಾತ್ರಿ ಇಲ್ಲೇ ಇರ್ತೀರಾ? ಎಂಥದು ನೀವು ಹೇಳೋದು.” ಮತ್ತೊಂದು ವ್ಯಕ್ತಿ ಧ್ವನಿ ತಗ್ಗಿಸಿ ಪಿಸುಗುಟ್ಟಿತು. “ನಮ್ಮಂಥ ಇಲ್ಲಿಯೋರೇ ಓಡಾಡೋಕೆ ಹೆದರಿಕೊಳ್ಳೋ ಜಾಗ ಇದು. ನಮ್ಮ ಗ್ರಹಚಾರ. ಮಳೆಯಿಂದಾಗಿ ಇಲ್ಲಿ ಸಿಕ್ಕಾಕಿಕೊಂಡಿದೀವಿ. ಮಳೆ ಕಡಿಮೆಯಾಗ್ಲಿ ಬಿಡ್ಲಿ, ಇನ್ನು ಸ್ವಲ್ಪಹೊತ್ತಿಗೆ ಹೊರಟು ಬಿಡೋದೇ” ಆ ಮಾತುಗಳಿಂದ ಅಷ್ಟು ಹೊತ್ತಿನ ತನಕ ಯೋಚಿಸಿರದ ಮತ್ತೊಂದು ಮಗ್ಗಲು ನಾಗರಾಜನನ್ನು ಚಿಂತೆಗೀಡು ಮಾಡಿತು. ಯಾತಕ್ಕೆ ಅಷ್ಟೊಂದು ಭಯ. ಕಾಡುಪ್ರಾಣಿಗಳಿಂದಲಾ? ಅಥವಾ ಹಾವು ಗೀವು ಇರಬಹುದೆಂತಲಾ? ಒಟ್ಟಿನಲ್ಲಿ ಇವರ ಮಾತು ಕೇಳಿದರೆ ಈ ಜಾಗ ಅಷ್ಟೊಂದು ಸುರಕ್ಷಿತವಾದದ್ದಲ್ಲ ಅನ್ನಿಸಿತು.
“ಯಾಕೆ? ಇಲ್ಲಿ ಅಷ್ಟೊಂದು ಭಯ ಯಾಕೆ?” ಆತಂಕ ಬೆರೆತ ಸ್ವರದಲ್ಲಿ ಕೇಳಿದ ನಾಗರಾಜ.
“ಯಾಕೆ ಅಂತ ಕೇಳ್ಬೇಡಿ. ಒಟ್ಟಿನಲ್ಲಿ ಡೇಂಜರ್ ಜಾಗ ಇದು.” ಮತ್ತೂ ಕ್ಷೀಣವಾದ ಧ್ವನಿಯಲ್ಲಿ ವ್ಯಕ್ತಿಯೊಂದು ಪಿಸುಗುಟ್ಟಿತು. ಮೂವರೂ ಸ್ವಲ್ಪ ಕಾಲ ಮೌನವಾಗಿದ್ದರು. ಮಳೆ ಒಂದೇ ಸಮನೆ ಸುರಿಯುತ್ತಲೇ ಇತ್ತು. ಬೋರೆಂದು ಹೊಯ್ದಾಡುವ ಗಾಳಿಗೆ ಮರಗಳು ಪತರಗುಟ್ಟುತ್ತಿದ್ದವು. ಏಕಾಏಕಿ ಬದಲಾಗಿಬಿಟ್ಟ ಸನ್ನಿವೇಶದ ಬಿಗಿಯನ್ನು ಸಡಿಲಗೊಳಿಸಲೆಂಬಂತೆ ನಾಗರಾಜ ಅವರ ಬಗ್ಗೆ ವಿಚಾರಿಸಿದ. ಅವರಿಬ್ಬರೂ ಅಲ್ಲೇ ಹತ್ತಿರದ ಕಿಬ್ಬಿ ಅನ್ನುವ ಹಳ್ಳಿಯ ರಾಮೇಗೌಡರ ಮನೆಗೆ ಕೋಣದ ಜೊತೆಯೊಂದರ ವ್ಯಾಪಾರಕ್ಕೆ ಹೋಗಿದ್ದವರು ನಡುದಾರಿಯಲ್ಲಿ ಮಳೆಯಲ್ಲಿ ಸಿಕ್ಕಾಕಿಕೊಂಡಿದ್ದರು. ಅವರು ಹೋಗಬೇಕಾಗಿದ್ದು ಹುಲಿಬಂಡೆಯ ಸಮೀಪದ ಮಂಡಗಳ್ಳಿಗೆ. ಭತ್ತದ ನಾಟಿಯ ಸಮಯ ಹತ್ತಿರ ಬಂದಿದ್ದರಿಂದ ಎಷ್ಟು ಕ್ರಯಕ್ಕಾದರೂ ಕೊಳ್ಳುತ್ತಾರೆನ್ನುವ ಭರವಸೆಯಲ್ಲಿ ರಾಮೇಗೌಡರು ಕೋಣದ ರೇಟನ್ನು ತಾರಾಮಾರ ಹೇಳಿದ್ದರು. ಇವರಿಬ್ಬರೂ ಅರ್ಧ ಒಪ್ಪತ್ತು ಜಗ್ಗಾಡಿ, ಜಗಳವಾಡಿ, ಗೋಳಾಡಿದರೂ ರಾಮೇಗೌಡರು ಅಲುಗಾಡಿರಲಿಲ್ಲ. ಎರಡು ಜೊತೆಗಳ ಕೋಣದ ದರವನ್ನು ಒಂದಕ್ಕೇ ಹೇಳಿದರೆ ಹೇಗೆ? ಅನ್ನುತ್ತ ವ್ಯವಹಾರವನ್ನು ಬರಖಾಸ್ತುಗೊಳಿಸಿ ಬಂದಿದ್ದರು. ಅತ್ತ ವ್ಯಾಪಾರವೂ ಆಗಲಿಲ್ಲ. ಇತ್ತ ಮಳೆಯಲ್ಲಿ ಸಿಕ್ಕು ಒದ್ದಾಡುವುದೂ ತಪ್ಪಲಿಲ್ಲ ಎಂದು ರಾಮೇಗೌಡನನ್ನು ಒಂದಿಷ್ಟು ಬೈಯ್ದರು. ತಮ್ಮ ಅಂತರಂಗದ ಸಿಟ್ಟನ್ನು ಕಾರಿ, ಮನಸ್ಸನ್ನು ಸಮಾಧಾನ ಮಾಡಿಕೊಳ್ಳಲು ಅವರಿಗೊಬ್ಬ ಶೋತೃ ಬೇಕಿತ್ತು. ನಾಗರಾಜ ಆ ಹೊಣೆಯನ್ನು ಹೊತ್ತದ್ದೇ ಈ ಇಡೀ ಜಗತ್ತನ್ನೇ ವಾಚಾಮಗೋಚರವಾಗಿ ಬೈಯ್ದು ಸಮಾಧಾನಪಟ್ಟರು. ಅಷ್ಟೊತ್ತಿಗಾಗಲೇ ನಾಗರಾಜ ಅವರಿಗೆ ಹತ್ತಿರದವನಾಗಿ ಬಿಟ್ಟಿದ್ದ. ‘ನೀವೇನೂ ಯೋಚ್ನೆ ಮಾಡ್ಬೇಡಿ. ನಿಮ್ಮನ್ನು ಹುಲಿಬಂಡೆಗೆ ತಲುಪಿಸೋ ಜವಾಬ್ದಾರಿ ನಮ್ಮದು’ ಅನ್ನುತ್ತ ಆ ಉಸಾಬರಿಯನ್ನೂ ಹೊತ್ತುಕೊಂಡು ಬಿಟ್ಟಿದ್ದರು. ವಿಚಿತ್ರ ಅಂದರೆ ಅಷ್ಟಾದರೂ ಪರಸ್ಪರರಲ್ಲಿ ಗುಮಾನಿ ಇದ್ದೇ ಇತ್ತು. ಈ ಕಾಳರಾತ್ರಿಯಲ್ಲಿ ಎತ್ತಲೋ ಕರೆದೊಯ್ದು, ತನ್ನಲ್ಲಿದ್ದ ಹಣ, ಸಾಮಗ್ರಿಗಳನ್ನು ದೋಚುವ ಹಂಚಿಕೆ ಇವರದ್ದೇ ಎನ್ನುವ ಸಂಶಯ ನಾಗರಾಜನಿಗೆ. ಇವನು ಕಳ್ಳಸಾಗಾಣಿಕೆ ಗ್ಯಾಂಗ್‍ನವನೇ? ಅಥವಾ ಅವರನ್ನು ಪತ್ತೆ ಮಾಡಲು ಬಂದ ಸಿ.ಐ.ಡಿ.ಯೇ? ಎನ್ನುವ ಗುಮಾನಿ ಆ ಅಪರಿಚಿತರಿಗೆ.
ನಿರಾಕಾರ ರೂಪಿಗಳಂತಿದ್ದ ಆ ಮೂವರು ಹೀಗೇ ಪರಸ್ಪರ ಉತ್ಪ್ರೇಕ್ಷಿತವಾದ ಸಂದೇಹಗಳಲ್ಲಿ ತೊಳಲಾಡುತ್ತಿದ್ದಂತೆಯೇ ಏಕಾಏಕಿ ಮಳೆ ನಿಂತಿತ್ತು. ಗಾಳಿ ಬೀಸಿದಾಗ ಪಟಪಟ ಮರದ ಎಲೆಗಳಿಂದ ಉದುರುವ ನೀರಹನಿಗಳ ಸದ್ದು ಸ್ಪಷ್ಟವಾಗಿ ಕೇಳತೊಡಗಿತ್ತು. ಕಪ್ಪೆಗಳ ಆಕ್ರಂದನ, ಕೆಳಗೆ ಕಣಿವೆಯಲ್ಲೆಲ್ಲೋ ಹೊಳೆಯ ಬೋರ್ ಎನ್ನುವ ಹರಿವ ಸದ್ದು ಕಿವಿಗೆ ಅಪ್ಪಳಿಸತೊಡಗಿತ್ತು. ‘ಹೋಗೋಣವೇನು?’ ಎನ್ನುತ್ತಾ ಅವರಿಬ್ಬರೂ ಹೊರಟು ನಿಂತರು. ಬಾಯಿ ತಪ್ಪಿ ಆಡಿಬಿಟ್ಟಿದ್ದಕ್ಕೆ ಉಪಚಾರಕ್ಕಾದರೂ ಹೇಳಬೇಕಲ್ಲ ಅನ್ನುವಂತಿತ್ತು ಅವರ ಮಾತಿನ ಭಾವ. ತನ್ನನ್ನು ಹೀಗೆ ಭಯಗ್ರಸ್ತನನ್ನಾಗಿಸಿ ಹೊರಟ ಅವರ ಬಗ್ಗೆ ಕೋಪ ಬಂದರೂ ತಡೆದುಕೊಂಡ ನಾಗರಾಜ. ಈ ಅಪರಾತ್ರಿಯಲ್ಲಿ ತನಗೆ ದೊರಕಬಹುದಾದ ಕೊಟ್ಟ ಕೊನೆಯ ಮನುಷ್ಯ ಪ್ರಾಣಿಗಳು ಇವರು. ಇಲ್ಲಿ ಭೀತಿಪಡುತ್ತ ಕೂತಿರುವುದಕ್ಕಿಂತ ಏನಾದರಾಗಲಿ ಇವರ ಜೊತೆ ಹೋಗುವುದೇ ವಾಸಿ ಎಂದುಕೊಂಡು ಬ್ಯಾಗ್‍ಗಳನ್ನು ಹೆಗಲಿಗೇರಿಸಿ ಅವರ ಜೊತೆ ರಸ್ತೆಗಿಳಿದ.
ರಸ್ತೆಯಲ್ಲಿ ನಾಲ್ಕು ಮಾರು ನಡೆದಿದ್ದರೋ ಇಲ್ಲವೋ, ತೀರ್ಥಹಳ್ಳಿಯ ದಿಕ್ಕಿನಿಂದ ಪ್ರಕಾಶಮಾನವಾದ ಬೆಳಕೊಂದು ಉದ್ದನೆಯ ಗೆರೆಯಂತೆ ಹಾಸಿಕೊಂಡದ್ದು ‘ಯಾವುದೋ ಲಾರಿಯಿರಬೇಕು’ ಎಂದೊಬ್ಬ ಅನ್ನುತ್ತಿರುವಂತೆಯೇ ಅಲ್ಲೇ ಇದ್ದ ತಿರುವನ್ನು ದಾಟಿ ವಾಹನವೊಂದು ಬರುತ್ತಿರುವುದು ಗೋಚರಿಸಿತು. ಮೂವರು ಪಕ್ಕಕ್ಕೆ ಸರಿದು ಅದು ಬರುವತ್ತ ನೋಡುತ್ತ ನಿಂತರು. ಸದ್ದೇ ಇಲ್ಲದಂತಿದ್ದ ವಾಹನ ಹತ್ತಿರವಾದಂತೆಲ್ಲ ಅಸಾಧ್ಯ ಸಪ್ಪಳದೊಂದಿಗೆ ಎದುರಿನಲ್ಲಿ ಬಂದು ನಿಂತೇ ಬಿಟ್ಟಿತ್ತು. ಈ ಕಡೆಯಲ್ಲಿ ಕುಳಿತ ವ್ಯಕ್ತಿಯೊಂದು ‘ತಣ್ಣೀರಹೊಳೆ’ ಅಂದಿತು. ‘ನಾವೂ ಆ ಕಡೆ ಹೋಗೋರೇ……’ ದೊಡ್ಡದಾಗಿ ಪಕ್ಕದಲ್ಲಿದ್ದ ವ್ಯಕ್ತಿ ಕೂಗಿದ. ‘ಹತ್ತಿ, ಹತ್ತಿ’ ಎನ್ನುತ್ತ ಬಾಗಿಲು ತೆಗದದ್ದೇ ‘ನೀವು ಹತ್ತಿ’ ಎನ್ನುತ್ತ ನಾಗರಾಜನನ್ನು ಆ ವ್ಯಕ್ತಿಗಳಿಬ್ಬರೂ ಅಕ್ಷರಶಃ ಒಳಗೆ ತಳ್ಳಿ ತಾವೂ ಹತ್ತಿಕೊಂಡರು.
ಇಕ್ಕಟ್ಟಾದ ಲಾರಿಯೊಳಗಡೆ ಪ್ರಯಾಸಪಟ್ಟು ಕೂರುತ್ತಿದ್ದಂತೇ ಲಾರಿ ಘೀಳಿಡುತ್ತ ಹೊರಟುಬಿಟ್ಟಿತ್ತು. ಒಂದೇ ಸಮ ಇಳಿಜಾರಾದ ರಸ್ತೆಯಲ್ಲಿ ಡ್ರೈವರ್ ವೇಗವಾಗಿಯೇ ಓಡಿಸುವ ರೀತಿ ನೋಡಿದರೆ ಹುಲಿಬಂಡೆಯನ್ನು ಸುರಕ್ಷಿತವಾಗಿ ಮುಟ್ಟುತ್ತೇನೆನ್ನುವ ಭರವಸೆ ಅದರೊಳಗೆ ಕೂತ ಕ್ಷಣವೇ ನಶಿಸಿಬಿಟ್ಟಿತು. ಖಾಲಿ ಲಾರಿಯಾದ್ದರಿಂದ ಎತ್ತೆತ್ತಿ ಕುಕ್ಕುತ್ತಿತ್ತು ಬೇರೆ. ರಸ್ತೆಯ ಇಳಿಜಾರನ್ನು ನೋಡಿದರೆ ಎಂಥ ದೃಢವಾದ ಬ್ರೇಕ್ ಆದರೂ ತಡೆಯಲಾರದು ಅನ್ನಿಸುವಂತಿತ್ತು. ಅದಲ್ಲದೇ ನಾಲ್ಕು ಮಾರಿಗೊಂದು ತಿರುವುಗಳು ಬೇರೆ; ಡ್ರೈವರ್ ಮಹಾಶಯನಾದರೋ ತುಟಿಯಂಚಿನಲ್ಲಿ ಬೀಡಿ ಕಚ್ಚಿಕೊಂಡು, ಹೊಗೆ ಹಾರಿಸುತ್ತ ಆರಾಮಾಗಿ ಸ್ಟೇರಿಂಗ್ ತಿರುಗಿಸುತ್ತಿದ್ದ. ಒಮ್ಮೆ ಅತ್ತ, ಇನ್ನೊಮ್ಮೆ ಈ ಪಕ್ಕ ವಾಲಾಡುತ್ತ ತಿರುವುಗಳನ್ನು ಲೀಲಾಜಾಲವಾಗಿ ದಾಟುತ್ತ ಈ ಪ್ರಪಾತದಲ್ಲಿ ಅಸಾಧ್ಯವೇಗದಲ್ಲಿ ಇಳಿಯುತ್ತಿದ್ದುದ್ದನ್ನು ಹಗಲು ಹೊತ್ತಿನಲ್ಲಿ ಹೊಸಬರ್ಯಾರಾದರೂ ಕಂಡಿದ್ದರೆ ಬ್ರೇಕ್ ಫೇಲ್ ಆಗಿದೆ ಅಂತಲೇ ಭಾವಿಸುತ್ತಿದ್ದರೇನೋ. ಪ್ರಕಾಶಮಾನವಾದ ಲೈಟುಗಳು ಕತ್ತಲನ್ನು ಕೊರೆದುಕೊಂಡು ನುಗ್ಗುತ್ತಿದ್ದವು. ಆಗಷ್ಟೇ ಮಳೆ ಹೊಳವಾದ್ದರಿಂದ ರಸ್ತೆಯಲ್ಲಿ ಆವಿ ದಟ್ಟಮಂಜಿನಂತೆ ಹೊಗರುತ್ತಿತ್ತು. ಹೆಣೆದುಕೊಂಡಿದ್ದ ಕಾಡಿನೊಳಕ್ಕೆ, ಸುರಂಗದೊಳಗೆ ನುಗ್ಗಿದಂತೆ ಭಾಸವಾಗಿ ನಾಗರಾಜ ಎದುರಿಗಿದ್ದ ಹ್ಯಾಂಡಲೊಂದನ್ನು ಗಟ್ಟಿಯಾಗಿ ಹಿಡಿದು ಬಿಟ್ಟಿದ್ದ. ನಿಜಕ್ಕೂ ಅವನಿಗೆ ಎಷ್ಟೋ ಎತ್ತರದ ಅಂತಸ್ತಿನಿಂದ ಲಿಫ್ಟ್‍ನಲ್ಲಿ ಅಸಾಧ್ಯವೇಗದಿಂದ ಕೆಳಕ್ಕಿಳಿದಂತೆ ಅನ್ನಿಸತೊಡಗಿತ್ತು. ಇವನ ಜೊತೆಗೆ ಹತ್ತಿದ ವ್ಯಕ್ತಿಗಳಾದರೋ ಕಿಂಚಿತ್ತೂ ಭಯವಿಲ್ಲದೇ ಏನೋ ಪಿಸುಗುಟ್ಟಿಕೊಳ್ಳತೊಡಗಿದ್ದರು. ಡ್ರೈವರ್ ಒಮ್ಮೊಮ್ಮೆ ಕುಳಿತವರತ್ತ ನೋಡುತ್ತ ವೇಗವನ್ನು ಚೂರು ತಗ್ಗಿಸದೇ ಲಾರಿಯನ್ನು ಆ ಕಿರಿದಾದ ರಸ್ತೆಯಲ್ಲಿ ಇಳಿಸುತ್ತಿದ್ದ. ಸ್ವಲ್ಪ ಜಾರಿದರೂ ಪಕ್ಕದ ಕಗ್ಗತ್ತಲ ಪ್ರಪಾತದಲ್ಲಿ ಬಿದ್ದು ನುಚ್ಚುನೂರಾಗಿ ಬಿಡುವ ಊಹೆ ನಾಗರಾಜನನ್ನು ಮುಳ್ಳಿನ ಮೇಲೆ ಕೂರಿಸಿದಂತೆ ಮಾಡಿತ್ತು. ಆ ಆತಂಕಗಳಿಗೆ ಸಧ್ಯ ಬಿಡುಗಡೆ ಅನ್ನಿಸುವ ಹಾಗೇ ಇಳಿಜಾರು ಕ್ರಮೇಣ ಕಡಿಮೆಯಾಗುತ್ತ ಸಮತಟ್ಟಾದ ರಸ್ತೆಯಲ್ಲಿ ವಾಹನ ಓಡತೊಡಗಿತ್ತು.
‘ಅಬ್ಬಾ; ಅಂತೂ ಪಾತಾಳ ಲೋಕ ತಲುಪಿದಂತಾಯ್ತು’ ಎಂದು ನಾಗರಾಜ ನಿಟ್ಟುಸಿರುಬಿಟ್ಟ. ಎದುರುಗಡೆ ಸಾಕಷ್ಟು ದೂರದಲ್ಲಿ ಒಂದು ಸೇತುವೆಯೂ, ಅದರ ಪಕ್ಕ ಕಂಬಳಿ ಹೊದ್ದು ನಿಂತ ಒಂದೆರಡು ಮಾನವಾಕೃತಿಗಳು ಲಾರಿಯ ಪ್ರಖರವಾದ ಬೆಳಕಿನಲ್ಲಿ ಗೋಚರಿಸಿದವು. ನಾಗರಾಜನ ಜೊತೆಯಾಗಿದ್ದವರಲ್ಲೊಬ್ಬ ಗಟ್ಟಿಯಾಗಿ ‘ನಿಲ್ಲಿಸು’ ಅಂತ ಕೂಗಿದ. ಡ್ರೈವರ್ ಬೆಚ್ಚಿಬಿದ್ದವನಂತೆ ಸಿಕ್ಕಾಪಟ್ಟೆ ವೇಗದಲ್ಲಿದ್ದ ಲಾರಿಯ ಬ್ರೇಕನ್ನು ತುಳಿದದ್ದೇ ಗರ್ರರ್ರ……. ಎನ್ನುತ್ತಾ ಸುಮಾರು ದೂರ ಟೈರ್ ಹೊಸೆದುಕೊಳ್ಳುತ್ತ ಹೋಗಿ ನಿಂತಿತು. ಆ ತೊಯ್ದಾಟಕ್ಕೆ ನಾಗರಾಜನ ಹಿಡಿತ ತಪ್ಪಿ ಕೈ ಎದುರಿನ ಪಟ್ಟಿಗೆ ಅಪ್ಪಳಿಸಿತು. ಗಾಡಿ £ಲ್ಲಿಸಿ ಡ್ರೈವರ್ ಒಳಗಿನ ದೀಪ ಹಾಕಿದ. ಆಗಲೇ ನಾಗರಾಜ ತನ್ನೊಂದಿಗೆ ಬಂದವರನ್ನು ಗಮನಿಸಿದ್ದು. ಕಪ್ಪಗೆ, ಠೊಣಪರಂತಿದ್ದ ಆ ವ್ಯಕ್ತಿಗಳ ವೇಷಭೂಷಣ ನೋಡಿದರೆ ಕೋಣದ ವ್ಯಾಪಾರ ಮಾಡುವ ಹಳ್ಳಿಗರಂತಿರಲಿಲ್ಲ. ಕಣ್ಣುಗಳಲ್ಲಿ ಧೂರ್ತತೆ ತುಂಬಿಕೊಂಡಿರುವದನ್ನು ಆ ನಸುಬೆಳಕಿನಲ್ಲೂ ನಾಗರಾಜ ಗುರುತಿಸಿದ್ದ. “ನಾವಿನ್ನೂ ಬರ್ತೇವೆ’ ಎನ್ನುತ್ತ ಕೆಳಕ್ಕಿಳಿದವರು ಆ ಪಕ್ಕಕ್ಕೆ ಹೋಗಿ ಡ್ರೈವರ್ ಹತ್ತಿರ ‘ಆ ಪಾರ್ಟಿನ ಹುಲಿಬಂಡೆಯಲ್ಲಿ ಇಳಿಸು. ಎಸ್ಟೇಟಿಗೆ ಹೋಗಬೇಕಂತೆ. ಒಂದು ಹತ್ತು ರೂಪಾಯಿ ಬೇಕಾರೆ ಇಸ್ಕೊ. ಅಲ್ಲಿತನಕ ಮುಟ್ಟಿಸು’ ಅಂದರು. ಅವರ ಧ್ವನಿಯಲ್ಲಿದ್ದ ಕೋರಿಕೆಯ ಬದಲಾಗಿ ಆದೇಶದ ಛಾಯೆ ಥಟ್ಟನೆ ಗಮನಕ್ಕೆ ಬರುವಂತಿರಲಿಲ್ಲ. ದುಡ್ಡು ಕೊಡದೇ ಹಾಗೇ ಕೈಬೀಸಿ ಕಳಿÀಸಿದ್ದಕ್ಕೆ ಡ್ರೈವರ್ ಸುಮ್ಮನೇಕಾದ ಅನ್ನುವುದೂ ಲಾರಿ ಚಲಿಸತೊಡಗಿದ ಎಷ್ಟೋ ಹೊತ್ತಿನ ತನಕ ನಾಗರಾಜನಿಗೆ ಬಗೆಹರಿಯಲಿಲ್ಲ. ಸ್ವಲ್ಪ ಹೊತ್ತಿನ ನಂತರ ಡ್ರೈವರ್ ಇದ್ದಕ್ಕಿದ್ದಂತೆ ‘ನಿಮಗೆ ಇವರೆಲ್ಲಿ ಸಿಕ್ಕರು?’ ಅಂದ. ಡಿಸೇಲ್, ಬೀಡಿ, ಅಲ್ಪಸ್ವಲ್ಪ ಸಾರಾಯಿ ವಾಸನೆಗೆ ಹೊಟ್ಟೆ ತೊಳೆಸುತ್ತಿದ್ದುದನ್ನು ಸಹಿಸಿಕೊಂಡು ಸಾದ್ಯಂತವಾಗಿ ತನ್ನ ಪುರಾಣವನ್ನು ಡ್ರೈವರ್£ಗೆ ಹೇಳಬೇಕಾಗಿ ಬಂದಿತ್ತು. ಅದನ್ನೆಲ್ಲ ಕೇಳುತ್ತಿದ್ದಂತೆಯೇ ಡ್ರೈವರ್ ಎಡಗೈಯಿಂದ ಹಣೆ ಬಡಿದುಕೊಂಡ.
“ಅವರೆಂಥ ಜನ ಅಂತ ನಿಮಗೆ ಹೇಗೆ ಗೊತ್ತಾಗಬೇಕು? ಪಕ್ಕಾ ಕೊಲೆಗಡುಕರು; ಯಾರೇ ಹೊಸಬರಾಗಲಿ, ವಾಹನವಾಗಲೀ ಅವರ ಕಣ್ಣು ತಪ್ಪಿಸಿ ಈ ದಾರಿಯಲ್ಲಿ ಬರುವಂತೆಯೇ ಇಲ್ಲ. ಹಾಗೇನಾದರೂ ಕಾಣಿಸಿಕೊಂಡರೆ ಹಿಂಬಾಲಿಸುತ್ತಾರೆ. ಚೂರು ಗುಮಾನಿ ಕಂಡರೆ ಸಾಕು. ನಾಪತ್ತೆ ಮಾಡಿ ಬಿಡುತ್ತಾರೆ. ನೀವು ಒಂಚೂರು ಎಡವಟ್ಟು ಮಾತಾಡಿದರೂ ಸಾಕಿತ್ತು. ನೀವಿಲ್ಲಿ ಇರ್ತಿರಲಿಲ್ಲ.” ಡ್ರೈವರನ ಮಾತಿಗೆ ನಾಗರಾಜ ಒಳಗೊಳಗೇ ಬೆವರಿಬಿಟ್ಟ. ತನ್ನನ್ನು ಬೇಕೆಂತಲೇ ಹೆದರಿಸಲೆಂದು ಹೇಳುತ್ತಿದ್ದಾನೇನೋ ಎನ್ನುವ ಸಂದೇಹದಿಂದ ಅವನತ್ತ ನೋಡಿದ ನಾಗರಾಜ. ಲಾರಿಯೊಳಗಡೆ ದೇವರಪಟವೊಂದಕ್ಕೆ ಜೋಡಿಸಿದ್ದ ಸಣ್ಣಬಲ್ಬಿನ ಕೆಂಪು ಬೆಳಕಲ್ಲಿ ಅವನ ಮುಖ ಅಸ್ಪಷ್ಟವಾಗಿ ಕಾಣುತ್ತಿತ್ತು.
“ ಮತ್ತೆ ಕೋಣದ ವ್ಯಾಪರಕ್ಕೆ ಹೋಗಿದ್ದೆವು ಅಂದರಲ್ಲ. ಅವರಿಳಿದದ್ದು ಮಂಡಗಳ್ಳೆಯೇ ತಾನೇ” ನಾಗರಾಜನ ಮಾತು ಪೂರ್ತಿಯಾಗುವ ಮುನ್ನವೇ ಡ್ರೈವರ್ ಪಕಪಕ ನಕ್ಕುಬಿಟ್ಟ.
“ ಕೋಣದ ವ್ಯಾಪಾರಾನಾ? ಅವರ ಮನೆ ಹಾಳಾಯ್ತು. ಏನೋ ಒಂದು ಸಬೂಬು ಹೇಳಿದ್ದಾರೆ. ಅವರು ಇಳಿದರಲ್ಲ. ಅಲ್ಲಿ ಇರೋದು ಹೊಳೆಯ ಸೇತುವೆ ಮಾತ್ರ. ಈ ಆಸುಪಾಸಿನಲ್ಲಿ ಮಂಡಗಳ್ಳೆ ಎನ್ನುವ ಊರೇ ಇಲ್ಲ.”
ಡ್ರೈವರ್ ಖಂಡಿತವಾಗಿಯೂ ನಾಗರಾಜನನ್ನ ಬೆಪ್ಪರಾಷ್ಟ್ರನೆಂದೇ ಪರಿಗಣಿಸಿದ್ದ. ಅವನಿಗೂ ಕನಿಕರ ಬಂದಿರಬೇಕು “ನೋಡಿ ಸಾರ್, £ೀವು ಪಟ್ಟಣದೋರು. ಇಲ್ಲಿಯ ವಿಷಯಗಳು £ಮಗೆ ಹೇಗೆ ಗೊತ್ತಾಗಬೇಕು. ಅವರು ಲಾರಿಹತ್ತಿ £ಮ್ಜೊತೆನಲ್ಲಿ ಹುಲಿಬಂಡೆಗೆ, ನೀವು ಸೇರೋ ಮನೆತನಕವೂ ಬರ್ತಿದ್ರು.. ಆದರೆ ದಾರಿಯಲ್ಲಿ ಅವರಿಗೆ ಬೇರೆಯೇನೋ ಸೂಚನೆ ಸಿಕ್ತು. ನೋಡಿದ್ರಲ್ಲಾ; ಕಂಬಳಿ ಹೊದ್ದು ನಿಂತೋರನ್ನ. ಹಾಗೇ ಅಪರಾತ್ರಿಯಲ್ಲಿ ಯಾರೂ ಈ ರೀತಿ ನಿಲ್ಲೋದಿಲ್ಲ. £ಂತಿದ್ದರೆ ಅದು ಗ್ಯಾಂಗ್‍ನವರೇ ಅಂಥ ಅರ್ಥ. ಅದಕ್ಕೆ ಅಲ್ಲೇ ಇಳ್ಕೊಬಿಟ್ರು. ನನಗೆ ನಿಮ್ಮನ್ನು ಸುರಕ್ಷಿತವಾಗಿ ಮುಟ್ಟಿಸೋದಕ್ಕೆ ಹೇಳಿದ್ದು ಉಪಕಾರ ಮಾಡೋದಿಕ್ಕಲ್ಲ. ಬೆನ್ನು ಹತ್ತಿದೋನು ಯಾವ ಜಾಗ ತಲುಪಿದ ಅನ್ನೋದು ಅವರಿಗೆ ಬೇಕಾದ್ದು. ನಾಳೆ ಬೆಳಿಗ್ಗೆ ವಾಪಸ್ಸು ಹೋಗ್ತಾ ನನ್ನ ತಡೆದು ಕೇಳಿಯೇ ಕೇಳ್ತಾರೆ. ನಾನು ಸುಳ್ಳು ಹೇಳಿದೆ ಅಂದ್ರೆ ನನ್ನ ಪ್ರಾಣಕ್ಕೆ ಸಂಚಕಾರ..”
ನಾಗರಾಜನ ಮೈ ಜುಮ್ ಎಂದಿತು. ತಾನೇನಾದರೂ ಉಡಾಫೆಯ ಮಾತನಾಡಿದ್ದರೆ ಖಂಡಿತ ವಿಪತ್ತಿನಲ್ಲಿ ಸಿಕ್ಕಿಕೊಳ್ಳುತ್ತಿದ್ದೆನಲ್ಲ ಅನ್ನಿಸಿತು. ಅವನು ವರದಿಗಾರನಾಗಿ ಸಾಕಷ್ಟು ಕೊಲೆಗಡುಕರನ್ನ ನೋಡಿದ್ದ. ಅವರ ಗ್ಯಾಂಗ್‍ವಾರಗಳನ್ನು ಕಂಡಿದ್ದ. ಚಿಕ್ಕಪುಟ್ಟ ಪಿಕ್‍ಪಾಕೆಟ್‍ನವರಿಂದ ಹಿಡಿದು ಡಾನ್‍ಗಳವರೆಗೆ ಭೂಗತಲೋಕದ ಚಟುವಟಿಕೆಗಳನ್ನು ಗಮನಿಸಿದ್ದ. ಅಂಥ ಅಪಾಯ ತುಂಬಿದ್ದ ಸಂದರ್ಭಗಳಲ್ಲೂ ಈ ರೀತಿ ಭಯ ಹುಟ್ಟಿರಲಿಲ್ಲ. ಅಂಥ ರಕ್ತಪಿಪಾಸುಗಳಿಗೇ ಅಲಕ್ಷ ತೋರಿದವನಿಗೆ ಈ ಮಂದಿಯ ಬಗ್ಗೆ ಏಕೆ ಈ ಥರ ಭೀತಿ? ಹಳ್ಳಿಯ ಸಭ್ಯರೆಂದು ತಾನು ಅಂದುಕೊಂಡಿರುವವರು ಹಠಾತ್ತನೆ ಕೊಲೆಗಡುಕರು ಅಂತ ಗೊತ್ತಾಗಿದ್ದಕ್ಕೇ? ಮುಗ್ಧರೆಂದು ತಾನವರನ್ನು ಪರಿಗಣಿಸಿದ್ದು ತನ್ನ ಬಾಲಿಶತನವೇ? ಎಂದೆಲ್ಲ ಪ್ರಶ್ನೆಗಳ ಸರಮಾಲೆಯನ್ನ ಮನಸ್ಸಿನಲ್ಲಿಟ್ಟು ಗೊಂದಲಕ್ಕೆ ಬಿದ್ದ.
ಮಾತನಾಡದೇ ಸುಮ್ಮನೆ ಕೂತಿದ್ದ ನಾಗರಾಜನಿಗೆ ಪಕ್ಕನೆ ಮಿಂಚಿನಂತೆ ಏನೋ ಹೊಳೆಯಿತು. ಅರಿವಿಲ್ಲದೇ ಗಟ್ಟಿಯಾಗಿ ‘ಹೌದೌದು’ ಅಂದದ್ದಕ್ಕೆ ಡ್ರೈವರ್ ಗಾಭರಿಯಲ್ಲಿ ‘ಏನ್ ಸಾರ್’ ಅಂದ.
“ನಾನಿದ್ದಲ್ಲಿಗೆ ಬಂದಾಗ ಅವರು ಅಷ್ಟೇನೂ ಒದ್ದೆಯಾಗಿರಲಿಲ್ಲ. ಅಂಥ ಬಿರುಮಳೆಗೆ ತೊಯ್ದು ತೊಪ್ಪಡಿಯಾಗಿರಬೇಕಿತ್ತು. ಆಗ ನನಗೆ ಹೊಳಿಲೇ ಇಲ್ಲ’ ನಾಗರಾಜ ಅಂದ. “ಅದನ್ನ ಕೇಳದೇ ನೀವು ಬಚಾವಾದ್ರಿ. ಹಾಗೇನಾರೂ ಕೇಳಿದ್ರೆ ಅವರಿಗೆ ಗುಮಾನಿ ಹುಟ್ಕೋತಿತ್ತು. ಗುಮಾನಿ ಹುಟ್ಟೋದಿಕ್ಕೆ ನೀವು ಯಾರಾದ್ರೂ ಸರಿ. ಸಣ್ಣ ವಿಷಯ ಸಾಕು. ಸುತ್ತಲೂ ಅಪಾಯ ಕಾದಿರೋ ಮನುಷ್ಯನಿಗೆ ಅಷ್ಟು ಸಾಕು. ಅದೇ ದೊಡ್ಡದಾಗಿ ಬಿಡುತ್ತೆ” ಡ್ರೈವರ್ ನಾಗರಾಜ ಬಚಾÀವಾಗಿ ಬಂದದ್ದಕ್ಕೆ ಸೂಕ್ತ ಕಾರಣಗಳನ್ನು ಕೊಟ್ಟ. ಅಷ್ಟೂ ಅಲ್ಲದೇ ಕಿರುಚಿಕೊಂಡರೂ ಕೇಳದ ಲಾರಿಯ ಆ ಕಿವುಡಾಗುವಂಥ ಸದ್ದಿನಲ್ಲೂ ಸಣ್ಣಗಿನ ಸ್ವರದಲ್ಲಿ ಹೇಳಿದ್ದ.
“ಅವರೆಲ್ಲಿಂದಲೂ ಬರ್ಲಿಲ್ಲ. ನಿಮ್ಮ ಕಣ್ಣೆದುರಿನಲ್ಲೇ ಇದ್ರು. ನೀವು ಬಸ್ಸು ಇಳಿದದ್ದು, ಶೆಲ್ಟರ್‍ನಲ್ಲಿ ಕೂತದ್ದು ಎಲ್ಲ ನೋಡಿದ್ದಾರೆ. ಕತ್ತಲಾಗುವ ತನಕ ಕಾದು, ತಮ್ಮ ಗುರುತು ಹತ್ತದಿರಲಿ ಅಂತ ಆಗ ಬಂದಿದ್ದಾರೆ. ಅವರೆಲ್ಲಿದ್ರೂ ಊಹಿಸಿ. ಎದುರುಗಡೆ ಇತ್ತಲ್ಲಾ ಆ ಸೋಗೆ ಗುಡಿಸಲು ಅಲ್ಲಿದ್ರು. ಇವರಿಬ್ಬರೇ ಅಲ,್ಲ ಎಷ್ಟೋ ಎಷ್ಟೋ ಜನ ಈ ಕಾಡಿನ ಉದ್ದಗಲದಲ್ಲಿದ್ದಾರೆ. ಆ ಗುಡಿಸ್ಲಾಗೆ ಇವರಲ್ದೇ ಇನ್ನಿಬ್ರೂ ಹೆಂಗಸರು ಇದ್ದಾರೆ. ನೂರಾರು ಎಕರೆಯ ಕಾಡಿನೊಳಕ್ಕೆ ಗುಟ್ಟಾಗಿ ಗಾಂಜಾ ಬೆಳೆಯುವ ಗ್ಯಾಂಗೇ ಇದೆ. ಆ ಗ್ಯಾಂಗ್‍ಗೆ ಸೇರಿದ ಜನ ಇವರು”.
ನಾಗರಾಜನಿಗೆ ಡ್ರೈವರ್‍ನ ಬಗ್ಗೆ ಸಂಶಯ ಹುಟ್ಟತೊಡಗಿತು. ಎಷ್ಟೆಲ್ಲ ತಿಳಿದಿದ್ದಾನೆ. ಅದೆಲ್ಲವನ್ನು ನನಗೆ ಹೇಳುತ್ತಿದ್ದಾನೆ. ಇವನ ಮಾತಿನಲ್ಲಿ ಸತ್ಯವೆಷ್ಟು? ಸುಳ್ಳೆಷ್ಟು? ಹೇಳುವುದನ್ನೆಲ್ಲ ನಂಬಲೇ? ಸ್ವಲ್ಪ ಹೊತ್ತಿನ ಮುಂಚೆ ಹಳ್ಳಿಯ ಮಗ್ಧರಂತೆ ಕಂಡವರು ಈಗ ಖದೀಮರಾಗಿ ಬಿಟ್ಟಿದ್ದಾರೆ. ಸ್ವಲ್ಪ ಕಾಲದಲ್ಲಿ ಇವನೂ ಬಣ್ಣ ಬಿಚ್ಚುತಾನೋ ಅನ್ನಿಸಿತು.
ಮನುಷ್ಯನ ಒಳಹೊರಗಿನ ಚರ್ಯೆಗಳ ಬಗ್ಗೆ ನಾಗರಾಜ ಸಾಕಷ್ಟು ತಿಳಿದಿದ್ದ. ಮನುಷ್ಯನಲ್ಲಿರಬಹುದಾದ ಪಾತಕದ ಅಂಶಗಳು ಬಲಗೊಳ್ಳಬೇಕಾದರೆ ನೂರೆಂಟು ಕಾರಣಗಳಿರುತ್ತವೆ. ಸೇಡು, ವ್ಯವಸ್ಥೆಯ ವಿರುದ್ಧ ಬಂಡೇಳುವ ಪ್ರವೃತ್ತಿ, ಹಣದ ದಾಹ ಇವೆಲ್ಲವೂ ಆತನಲ್ಲಿನ ಅಲ್ಪ ಪ್ರಮಾಣದಲ್ಲಿನ ರಾಕ್ಷಸೀ ಪ್ರವೃತ್ತಿಯನ್ನು ಕೆರಳಿಸಿ ಬಿಡುತ್ತದೆ. ಈ ದಟ್ಟ ಕಾಡಿನ ಮಧ್ಯೆ ನಡೆಯುತ್ತಿರುವುದೇನು? ಯಾವುದೋ ರೊಚ್ಚಿಗಾಗಿ ಗುಂಪು ಕಟ್ಟಿಕೊಂಡು ದರೋಡೆ ನಡೆಸುವ ಕಾಲ ಇದಲ್ಲ. ಹಾಗಾದರೆ ನಕ್ಸಲೈಟ್ಸ್‍ಗಳಿರಬಹುದೇ? ಅವರೆಂದೂ ಈ ಥರ ವರ್ತಿಸಿದ ದಾಖಲೆಗಳಿಲ್ಲ. ಕಳ್ಳಸಾಗಾಣಿಕೆಯವರೇ? ಅವರಾದರೆ ವಾಹನಗಳಲ್ಲಿ ಮಾಲನ್ನು ತುಂಬಿಕೊಂಡು ಪಾರಾಗುತ್ತಾರೆಯೇ ವಿನಃ ಬರಹೋಗುವವರ ನಿಗಾ ಇಡುತ್ತ ಹಾದಿ ಕಾಯುತ್ತ ಕೂರುವುದಿಲ್ಲ.
ಯೋಚಿಸುತ್ತ ಹೋದಂತೆಲ್ಲ ತಾನೊಂದು ವೃತ್ತದಾಳಕ್ಕೆ ಸಿಲುಕಿದ್ದೇನೆ ಅನ್ನಿಸಿತು. ಒಮ್ಮೆ ಈ ಚಕ್ರವ್ಯೂಹದೊಳಕ್ಕೆ ಹೊಕ್ಕ ವ್ಯಕ್ತಿ ಸುಲಭದಲ್ಲಿ ಪಾರಾಗಲಾರ; ಆತ ಪತ್ತೆ ಕಾರ್ಯಕ್ಕೆ ಬಂದಿದ್ದರೂ ಸರಿ. ತನ್ನಂತೆ ಯಾವ ಉದ್ದೇಶವೂ ಇಲ್ಲದೇ ಗೆಳೆಯನನ್ನು ಭೇಟಿಯಾಗಲು ಬಂದರೂ ಸರಿ. ನಮಗೆ ಸಹಜವೆನ್ನಿಸುವ ವರ್ತನೆ, ಮಾತುಗಳೇ ಅವರಿಗೆ ಗುಮಾನಿಯನ್ನು ಗಟ್ಟಿಯಾಗಿಸುವ ಸಾಧ್ಯತೆಗಳನ್ನು ಹೊಂದಿರುತ್ತದೆ. ತಾನು ಈ ವ್ಯವಹಾರಕ್ಕೆ ಅನ್ಯ ಅಂತ ಸಿದ್ಧ ಮಾಡುತ್ತ ಹೋದಂತೆ ನಿಜರೂಪವನ್ನು ಮುಚ್ಚಿಡಲು ಹೀಗೆ ವರ್ತಿಸುತ್ತಾನೆ ಎನ್ನುವ ಸಂಶಯ. ಶೋಧನೆಗಾಗಿ ಬಂದರಂತೂ ಗುಮಾನಿ ನಿಶ್ಚಿತ. ಒಟ್ಟಿನಲ್ಲಿ ಎದುರಿನಲ್ಲಿರುವುದು ಘೋರ ವಿಪತ್ತೇ ಅನ್ನುವುದು ನಾಗರಾಜನಿಗೆ ನಿಸ್ಸಂದೇಹವಾಗಿ ತೋರಿತು. ಕಾಡು, ಹಸಿರನ್ನ ಹೊದ್ದ ಗಿರಿಶ್ರೇಣಿ, ಕಡುಬೇಸಗೆಯಲ್ಲೂ ಜುಳುಜುಳು ಹರಿವ ನದಿ, ಹೊಳೆ, ಸಮೃದ್ಧ ಭೂಮಿ – ಈ ಎಲ್ಲವುದರ ಅಂತರಾಳದಲ್ಲಿ ಯಾವುದೋ ದುಷ್ಟಶಕ್ತಿ ವ್ಯಾಪಿಸಿಕೊಂಡು ಬಿಟ್ಟಿದೆ. ಈ ವಿಷ ನರ ನರಗಳಲ್ಲೂ ಹರಿಯತೊಡಗುತ್ತಿದೆ ಎನ್ನುವ ಕ್ಷೀಣ ವೇದನೆಯೊಂದು ಅವನಲ್ಲಿ ಹುಟ್ಟಿಕೊಂಡಿತು.
“ಸಾರ್, ಹುಲಿಬಂಡೆ ಇದೇನೇ” ಡ್ರೈವರ್ ಗಟ್ಟಿಯಾಗಿ ಕೂಗಿದಾಗಲೇ ನಾಗರಾಜ ಎಚ್ಚೆತ್ತುಕೊಂಡಿದ್ದು. ಲಾರಿ ಇಂಜಿನ್ ಆಪ್ ಮಾಡಿ ತನ್ನ ಸೀಟಿನಡಿಯಲ್ಲಿ ತಡಕಾಡಿ ಟಾರ್ಚೊಂದನ್ನು ಎತ್ತಿಕೊಂಡು ಕೆಳಕ್ಕಿಳಿದ. ನಾಗರಾಜ ತನ್ನೆಲ್ಲ ಸರಂಜಾಮುಗಳ ಸಮೇತ ಕೆಳಕ್ಕಿಳಿದಾಗ ಬಾಗಿಲು ಹಾಕಿಕೊಂಡು ‘ನಡೀರಿ ಸಾರ್, ಎಸ್ಟೇಟ್ ತನಕ ಬಿಡುತ್ತೇನೆ’ ಅಂದ. ಮನುಷ್ಯರ ಮೇಲಿನ ವಿಶ್ವಾಸವೇ ಏಕಾಏಕಿ ನಶಿಸಿಹೋದಂತಾಗಿದ್ದಕ್ಕೆ ನಾಗರಾಜ ಅನುಮಾನಿಸಿದ. ‘ನಿಮ್ಗೆ ಎಲ್ಲರ ಬಗ್ಗೂ ಅನುಮಾನ ಬರೋದಿಕ್ಕೆ ಶುರುವಾಯ್ತು ಅಂತ ಕಾಣುತ್ತೆ’ ಅಂದವ ‘ನಾನಂಥವನಲ್ಲ ಸಾರ್, ಹೆಂಡ್ತಿ, ಮಕ್ಕಳು ದೂರದಲ್ಲಿದ್ದಾರೆ. ನಾ£ಲ್ಲಿ ಹೊಟ್ಟೆಪಾಡಿಗೆ ದುಡೀತಿದ್ದೀನಿ. ಸಾವು ಇಂತಲ್ಲೀ ಕಾದಿರುತ್ತೆ ಅಂತ ಯಾರಿಗೇನು ಗೊತ್ತಿರುತ್ತಾ. ಬಂದದ್ದನ್ನ ಅನುಭವಿಸಬೇಕಲ್ಲಪ್ಪಾ’ ಅನ್ನುತ್ತÀ ಟಾರ್ಚ ಹಾಕಿದ. ಮಂದ ಬೆಳಕು ಚೆಲ್ಲುತ್ತಿದ್ದ ಅದರ ಸಹಾಯದಲ್ಲಿ ಕೆಸರಾಗಿದ್ದ ನೀರು ತುಂಬಿದ ಸಣ್ಣ ಪುಟ್ಟ ಹೊಂಡಗಳ ಕಾಲುದಾರಿಯೊಂದನ್ನು ಹಿಡಿದು ಸುಮಾರು ದೂರ ನಡೆದು, ಎದುರಾದ ಗೇಟನ್ನು ಸರಿಸಿ, ಒಳಕ್ಕೆ ಇಬ್ಬರೂ ಹೋದ ನಂತರ ಅಲ್ಲೇ £ಂತು ಪಿಸುಧ್ವನಿಯಲ್ಲಿ ಹೇಳಿದ. ‘ಆದಷ್ಟು ಮಾತು ಕಡಿಮೆ ಆಡಿ. ಬಾಳ ಎಚ್ಚರದಲ್ಲಿರಿ. ನಾನು ಹೇಳಿದ್ದನ್ನೆಲ್ಲ ಮರೆತುಬಿಟ್ಟರೆ ಇಬ್ಬರಿಗೂ ಕ್ಷೇಮ’ ಅಂದು ಮತ್ತೆ ಮುಂದೆ ನಡೆದ. ಹತ್ತಿರದಲ್ಲೇ ನಾಯಿ ಬೊಗಳಿದ್ದನ್ನ ಕೇಳಿ ಮನೆಯಿರಬಹುದು ಅನ್ನಿಸಿ ನಾಗರಾಜನಿಗೆ ಒಂಥರಾ ಸಮಾಧಾನವೆನ್ನಿಸಿತು.
ಎಚ್ಚರವಾದಾಗ ನಾಗರಾಜನಿಗೆ ತಾನೆಲ್ಲಿದ್ದೇನೆ ಎನ್ನುವುದು ಅರಿವಿಗೆ ಬರಲು ಸಾಕಷ್ಟು ಸಮಯವೇ ಹಿಡಿಯಿತು. ಎದ್ದು ಪಕ್ಕದಲ್ಲಿದ್ದ ಕಿಡಕಿಯೊಂದನ್ನು ತೆರೆದು ಹಣುಕಿ ನೋಡಿದ. ಮಸುಕು ಬೆಳಕು. ಧೋ ಧೋ ಸುರಿಯುತ್ತಿದ್ದ ಮಳೆ. ಇರಚಲು ಗಾಳಿಯ ಅಬ್ಬರ. ರೆಪ್ಪೆ ತೆರೆಯಲಾರದಷ್ಟು ಕಣ್ಣು ಉರಿಯುತ್ತಿತ್ತು ಬೇರೆ. ಕಣ್ಣುಜ್ಜಿಕೊಳ್ಳುತ್ತಾ ಮಲಗಿದ್ದ ಕಂಬಳಿಯ ಮೇಲೆ ಕೂತು ಸಿಗರೇಟನ್ನು ಹತ್ತಿಸಿಕೊಂಡ. ಒಂಥರಾ ನಿದ್ದೆಯ ಮಂಪರು ಎಳೆಯುತ್ತಿತ್ತು. ರಾತ್ರೆ ಸರಿಯಾಗಿ ನಿದ್ದೆ ಬಂದಿರದಕ್ಕಿರಬೇಕು ಎನಿಸಿತು. ಹಿಂದಿನ ದಿನದ ಪ್ರಯಾಣ, ಮನಃಸ್ಥಿತಿಯನ್ನು ಕೆಡಿಸಿದ ಘಟನೆಗಳು ಎಲ್ಲಾ ಸೇರಿ ಒತ್ತಿ ಬಂದ ನಿದ್ದೆಯನ್ನು ದೂರ ಮಾಡಿದಂತಿತ್ತು. ಅವನಿಗೆ ನಿನ್ನೆಯ ಅನುಭವಗಳೆಲ್ಲ ನಿಜವೇ? ಎನ್ನುವ ಸಣ್ಣ ಅನುಮಾನ ಶುರುವಾಯಿತು.
ಕನಸಿನಲ್ಲಿ ಕಂಡು ಭ್ರಾಂತಿಯಾಗಿರಬಹುದೇ? ಎಂದು ಸಮರ್ಥನೆ ಮಾಡಿಕೊಂಡ. ಒಂದು ರೀತಿಯಲ್ಲಿ ಹಿಂದಿನ ದಿನದ ಘಟನೆಗಳಿಗೆ ನಾಗರಾಜ ತಲ್ಲಣಗೊಂಡು ಬಿಟ್ಟಿದ್ದ. ತಾನು ಕಲ್ಪಿಸಿಕೊಂಡ ರೀತಿಯಲ್ಲಿರದ ಪರಿಸರ ಮೊಟ್ಟ ಮೊದಲು ಅವನ ಮನಸ್ಸನ್ನು ಏರುಪೇರುಗೊಳಿಸಿಬಿಟ್ಟಿತ್ತು. ಅದಕ್ಕೆ ಹೊಂದಿಕೊಳ್ಳುವ ಸಿದ್ಧತೆ ಮಾಡುವಷ್ಟರಲ್ಲಿ ಚಿತ್ರ ವಿಚಿತ್ರವಾದ ಸಂದರ್ಭಗಳು ಜರುಗತೊಡಗಿಬಿಟ್ಟಿದ್ದವು. ಆ ಪರಿಣಾಮದಿಂದ ಇನ್ನೂ ಚೇತರಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಆತ ಜರುಗಿ ಹೋದದ್ದೆಲ್ಲಾ ಭ್ರಮೆಯೇ? ಸತ್ಯವೇ? ಎನ್ನುವ ಜಿಜ್ಞಾಸೆಯಲ್ಲಿ ತೊಡಗಿದ್ದು. ಅವೆಲ್ಲ ವಾಸ್ತವಿಕವಾದ ಘಟನೆಗಳೆನ್ನಲು ಅವನ ಬಳಿ ಪುರಾವೆಗಳೇನೂ ಇರಲಿಲ್ಲ ; ಮನಸ್ಸಿನ ಮೂಲಕ ಪಡೆದುಕೊಂಡ ಅನುಭವಗಳ ವಿನಃ. ಇಪ್ಪತ್ನಾಲ್ಕು ತಾಸುಗಳಲ್ಲಿ ಎಲ್ಲಿಂದ ಎಲ್ಲಿಗೆ ಬಂದೆ? ಇಷ್ಟೊಂದು ಕಿರಿದಾದ ಅವಧಿಯಲ್ಲಿ ಇಷ್ಟೆಲ್ಲಾ ಮೈ ನಡುಗಿಸುವ ಅನುಭವಗಳಾಗುವುದು ಸಾಧ್ಯವೇ? ಈ ಚÀಳಿಯಲ್ಲಿ ಬಿಸಿಯಾದ ಕಾಫಿಯಾದರೂ ಇದ್ದಿದ್ದರೆ ಈ ತಲೆ ಚಿಟ್ಟು ಹಿಡಿಸುವ ಯೋಚನೆಗಳಿಂದ ಮುಕ್ತಿಯಾದರೂ ಸಿಗುತ್ತಿತ್ತು ಅಂದುಕೊಂಡ.
ಸಮಯ ಎಷ್ಟಾಯಿತೆಂದು ವಾಚ್ ನೋಡಿದರೆ ಏ£ತ್ತು ಅಲ್ಲಿ? ಗ್ಲಾಸ್ ಒಡೆದು ಮುಳ್ಳುಗಳೆಲ್ಲ ಮುರಿದು ಹೋಗಿ ಬೆಲ್ಟಿಗೆ ಅಂಟಿಕೊಂಡ ಪುಟ್ಟ ಡಬ್ಬಿಯಂತಾಗಿತ್ತು. ಅರೆರೇ…. ಈ ರೀತಿಯಾಗಲು ಹೇಗೆ ಸಾಧ್ಯ? ಎಂದು ಕಕ್ಕಾಬಿಕ್ಕಿಯಾದವನಿಗೆ ಹಿಂದಿನ ರಾತ್ರಿ ಜೋಲಿ ಹೊಡೆದು ನಿಂತಾಗ ಕೈ ಅಪ್ಪಳಿಸಿದ್ದು ನೆನಪಿಗೆ ಬಂತು. ಕತ್ತಲಾಗಿದ್ದಕ್ಕೋ, ಅಥವಾ ಕ್ಷಣಕ್ಷಣಕ್ಕೆ ಬದಲಾವಣೆಯಾಗುತ್ತಿದ್ದ ಸಂದರ್ಭಗಳ ಘಾಸಿಗೋ ಲಕ್ಷ ಕೊಟ್ಟಿರಲಿಲ್ಲ. ಹಾಗಾದರೇ ನಡೆದಿದ್ದೆಲ್ಲ ಭ್ರಾಂತಿಯಲ್ಲ. ಸ್ವಭಾವತಃ ಸಾಹಸಿಯಾದ ನಾಗರಾಜ£ಗೆ ತನಗಾದ ಅನುಭವಗಳ ಮುಂದೆ ಈ ವಾಚ್ ಹಾಳಾಗಿದ್ದು ದೊಡ್ಡದ್ದಲ್ಲ ಅನ್ನಿಸಿ ಬಿಟ್ಟಿತು.
ನಿಧಾನಕ್ಕೆ ಅಸ್ಪಷ್ಟವಾಗಿದ್ದ ನೆನಪುಗಳೆಲ್ಲ ಮನಸ್ಸಿನಲ್ಲಿ ಸ್ಪಷ್ಟವಾಗತೊಡಗಿದವು. ಸಣ್ಣಗೆ ಮಳೆ ಹೊಯ್ಯುತ್ತಿರುವಂತೆಯೇ ಆ ಕಾಲುದಾರಿಗುಂಟ ಡ್ರೈವರ್‍ನೊಂದಿಗೆ ಬಂದಿದ್ದ. ಮುಸುಕಿನಲ್ಲಿದ್ದ ಮನೆಯೆದುರು ನಿಂತು ಡ್ರೈವರ್ ಕೂಗಿಯೇ ಕೂಗಿದ. ಎಲ್ಲೋ ಹಿಂದುಗಡೆಯಿದ್ದ ನಾಯಿ ಅಷ್ಟು ದೂರದಲ್ಲೇ ನಿಂತು ಒಂದೇ ಸಮನೆ ಕಿರುಚತೊಡಗಿತ್ತು. ಸ್ವಲ್ಪ ಹೊತ್ತಿನಲ್ಲಿ ದೀಪವೊಂದನ್ನು ಹಿಡಿದುಕೊಂಡು ಮನೆಯೊಳಗಿಂದ ಬರುತ್ತಿರುವುದು ಎದುರಿನ ಕಿಡಕಿಯ ಸಂದಿಯಲ್ಲಿ ಕಾಣುತ್ತಿತ್ತು. ವಯಸ್ಸಾದಂತೆ ಕಾಣುತ್ತಿದ್ದ ಗಂಡಸೊಂದು ಬಾಗಿಲು ತೆರೆದು ‘ಯಾರು?’ ಅಂದಿತು.
ಡ್ರೈವರ್ ನಾಗರಾಜನ ಪಡಿಪಾಟಲನ್ನು ಹೇಳಿ ತನಗೆ ಹೊತ್ತಾಗುತ್ತದೆಯೆಂದು ಗಡಬಡಿಸಿ ಹೊರಟಾಗ ನಾಗರಾಜನೇ ಒತ್ತಾಯ ಮಾಡಿ ಒಂದಿಷ್ಟು ಹಣ ಅವನ ಕೈಗೆ ತುರುಕಿದ. ಮುಸುಕು ಗಾಜಿನ ಲಾಟೀನು ಹಿಡಿದಿದ್ದ ಆ ವೃದ್ಧ ಅಲ್ಲೇ ಇದ್ದ ಬಾನಿಯೊಂದರಿಂದ ತಂಬಿಗೆಯಲ್ಲಿ ನೀರು ಮೊಗೆದು ‘ಕಾಲು ತೊಳೆದುಕೊಳ್ಳಿ’ ಅಂದು ಒಳಕ್ಕೆ ಬಂದವನಿಗೆ ಕಂಬಳಿ ಹಾಸಿ ಕುಳಿತುಕೊಳ್ಳಿ ಅಂದರು. ‘ಬಾಯಾರಿಕೆಗೆ?’ ಅಂತ ವಿಚಾರಿಸಿದ್ದರು. ನಾಗರಾಜನಿಗೆ ಮೈ ಚಾಚಿ ಬಿದ್ದುಕೊಂಡರೆ ಸಾಕಿತ್ತು ‘ಈಗ ಏನೂ ಬೇಡ. ಒಂದು ಹಾಸಿಗೆ ಕೊಡಿ’ ಅಂದರೂ ಕೇಳದೇ ಒಳಮನೆಯಿಂದ ಒಂದಿಷ್ಟು ಬಾಳೆಹಣ್ಣು ತಂದಿಟ್ಟು ‘ಈಗ ಬಂದೆ’ ಅನ್ನುತ್ತ ಮನೆಯೊಳಗೆಲ್ಲೋ ಮಾಯವಾಗಿದ್ದರು. ಗಪ್ಪನೇ ಕವಿದುಕೊಂಡ ಕತ್ತಲಿನಲ್ಲಿ ಕೂತು ನಾಗರಾಜ ತಾನೇನಾದರೂ ದಾರಿ ತಪ್ಪಿ ಬಂದೆನಾ? ಸೀತಾರಾಮ ಇದ್ದಿದ್ದರೆ ಕಾಣಬೇಕಿತ್ತಲ್ಲಾ ಅಂದು ಕೊಂಡಿದ್ದ. ಅಷ್ಟರಲ್ಲಿ ಲೋಟಾದಲ್ಲಿ ಹಾಲು ತಂದಿಟ್ಟು ‘ಕುಡಿಯಿರಿ’ ಅಂದಿದ್ದರು. ಆ ಮುದುಕರು. ‘ಸೀತಾರಾಮ ಮಲಗಿದ್ದಾನೋ?’ ನಾಗರಾಜ ಸಹಜವೆನ್ನುವಂತೆ ಕೇಳಿದ್ದರೂ ಅದ್ಯಾಕೋ ಅವರು ಬೆಚ್ಚಿದಂತೆ ನಾಗರಾಜನಿಗನ್ನಿಸಿತು. ಏನೋ ಹೇಳಬೇಕೆಂದವರು ತಡೆದುಕೊಂಡು ‘ಅವನು ಎಲ್ಲೋ ತಿರುಗಾಟವಿದೆ ಅಂತ ಬೆಳಿಗ್ಗೆ ಹೋದ’ ಸ್ವರ ಕಂಪಿಸುತ್ತಿದ್ದುದಕ್ಕೆ ನಾಗರಾಜನಿಗೆ ಏನೂ ಅನ್ನಿಸಲಿಲ್ಲ. ‘ಛೇ ನಾನು ಬಂದಾಗಲೇ ಅವನಿಗೆ ತಿರುಗಾಟ’ ಅಂತ ಗೊಣಗಿದ್ದಕ್ಕೆ ಆ ಮುದುಕರು ‘ಸೀತಾರಾಮನ ಹತ್ತಿರ ಏನು ಕೆಲಸವಿತ್ತೋ? ಅವನ ಪರಿಚಯವುಂಟಾ? ಅಂದಾಗ ‘ನÀನ್ನ ಸ್ನೇಹಿತ’ ಅಂದು ಸುಮ್ಮನಾಗಿ ಬಿಟ್ಟ. ನಾಗರಾಜನಿಗೆ ಒಮ್ಮೆಲೇ ನಿರುತ್ಸಾಹ ಕಾಣಿಸಿಕೊಂಡಿತು. ಇಷ್ಟೆಲ್ಲಾ ತೊಂದರೆಪಟ್ಟು ಬಂದರೆ ಈತ ನಾಪತ್ತೆ. ಅವನ ತಪ್ಪಲ್ಲ ನನ್ನದೇ ಅಂತ ತನಗೆ ತಾನೇ ಬೈಯ್ದುಕೊಂಡ. ಹಾಲು ಕುಡಿದು ಮುಗಿಸುತ್ತಿದ್ದಂತೆಯೇ ‘ಬನ್ನಿ, ನಿಮಗೂ ಆಯಾಸವಾಗಿದೆ’ ಅನ್ನುತ್ತಾ ಮಾಳಿಗೆಯ ಮೆಟ್ಟಿಲುಗಳನ್ನು ಹತ್ತಿಸಿಕೊಂಡು ಹಾಸಿಗೆ ಬಿಚ್ಚಿ ದಪ್ಪನೆಯ ಕಂಬಳಿಯನ್ನು ಹೊದೆಯಲಿಟ್ಟು, ಬೆಳಿಗ್ಗೆ ಮಾತಾಡುವಾ ಅಂತ ಇಳಿದು ಹೋಗಿದ್ದರು. ತನ್ನ ಹೆಸರು ಶಂಕರಪ್ಪ ಅಂದಿದ್ದರಲ್ಲಾ ಅಂತಾ ನೆನಪು ಮಾಡಿಕೊಂಡ ನಾಗರಾಜ.
ಮಲಗಿದ್ದಂತೆಯೇ ನಿದ್ದೆ ಆವರಿಸಿದ್ದರೂ ವಿಲಕ್ಷಣವಾದ ಕನಸುಗಳು ಅವನಿಗೆ ಗಾಢ ನಿದ್ದೆ ಮಾಡಲು ಬಿಟ್ಟಿರಲಿಲ್ಲ. ಎಂಥೆಂಥ ಕನಸುಗಳು, ಅಬ್ಬಾ! ಅಂದುಕೊಂಡ ನಾಗರಾಜ. ನೆನಪಿಸಿಕೊಂಡರೆ ಮೈ ಕಂಪಿಸುವ ಹಾಗಾಗುತ್ತಲ್ಲ, ಇಂಥ ಕನಸುಗಳು ಯಾವತ್ತೂ ಬಿದ್ದಿರಲಿಲ್ಲ ಅಂತನ್ನಿಸಿತು. ನಿದ್ದೆಗಣ್ಣಿನಲ್ಲಿ ತಟ್ಟಿ ಎಬ್ಬಿಸಿದಂತೆ ನಾಯಿಯ ಕೂಗು, ನಾಲ್ಕಾರು ಬಾರಿ ಕೂಗಿ ಕರೆದ ಸ್ವರ, ಕೆಳಗೆ ಮನೆಯೊಳಗೆ ಗಟ್ಟಿಧ್ವನಿ ಅರ್ಧಸ್ವಪ್ನಾವಸ್ಥೆಯಲ್ಲೂ ನಾಗರಾಜನಿಗೆ ಮೈ ನಡುಗಿತ್ತು. ಈಗ ನೆನಪು ಮಾಡಿಕೊಂಡರೂ ಬೆಚ್ಚಿಬೀಳುವಂತಿದ್ದ ಕನಸಿನಲ್ಲಿ ಕೇಳಿದ ಹೆಣ್ಣಿನ ಆರ್ತನಾದ, ಕಿರುಚಾಡುವ ಸದ್ದು ಕ್ರಮೇಣ ಕರಗಿಹೋಗಿತ್ತು. ಇಂಥ ಕನಸುಗಳೂ ಸಾಧ್ಯವೇ ಎಂದು ನಾಗರಾಜ ಸೋಜಿಗಪಡುತ್ತಿದ್ದಂತೆಯೇ ಮಾಳಿಗೆಯ ಮೆಟ್ಟಿಲುಗಳ ಸದ್ದಾಯ್ತು. ‘ಆಗಲೇ ಎದ್ದುಬಿಟ್ಟಿದ್ದಿರೋ? ಮುಖ ತೊಳೆದುಕೊಳ್ಳಿ ಬ£್ನ’ ಎನ್ನುತ್ತ ಶಂಕರಪ್ಪ ಎದುರಿನಲ್ಲಿ ನಿಂತಿದ್ದರು. ಅವರ ಮುಖದಲ್ಲೂ ಸರಿಯಾಗಿ ನಿದ್ದೆಯಾಗಿರದ ಕುರುಹು ನೆರಿಗೆಗಟ್ಟಿದ ಮುಖದಲ್ಲೂ, ಒತ್ತಗಿನ ಹುಬ್ಬಿನ ಕೆಳಗಿನ ಜೋಡಿಕಣ್ಣುಗಳಲ್ಲೂ ಎದ್ದು ಕಾಣುತ್ತಿತ್ತು.
ಶಂಕರಪ್ಪ ನಾಗರಾಜನನ್ನು ಮನೆಯ ಹಿಂಬದಿಯಲ್ಲಿದ್ದ ಬಚ್ಚಲಿಗೆ ಕರೆದುಕೊಂಡು ಹೋದರು. ಹೊರಗಿನ ವಾತಾವರಣವೇ ಮಸುಕಾಗಿದ್ದಕ್ಕೋ, ಆ ಸೋಗೆ ಮನೆಯ ಯಥಾಸ್ಥಿತಿಯೋ ಮನೆಯೊಳಗೆಲ್ಲಾ ಕತ್ತಲು ಕವಿದಿತ್ತು. ಕರಿಗತ್ತಲಿನ ಮೂಲೆಯೊಳಗಿಂದ ಸೂತಕದ ವಾಸನೆ ಹೊರ ಹೊಮ್ಮುತ್ತಿದೆಯೇನೋ ಅನ್ನಿಸುವ ಅಸಹನೀಯ ಮೌನವೂ ತುಂಬಿಕೊಂಡಿತ್ತು. ತಿಂಡಿ ತಿನ್ನಲೆಂದು ಕೂತಾಗಲೇ ನಾಗರಾಜನಿಗೆ ತಿಳಿದದ್ದು; ಮತ್ತಾರೂ ಇಲ್ಲವೆಂದೇ ತಿಳಿದಿದ್ದ ಈ ಮನೆಯೊಳಗೆ ಇನ್ನೊಂದು ಜೀವಿಯೂ ಇದೆಯೆಂಬುದು.
ಒಲೆಯ ಮುಂದೆ ಕೂತು ದೋಸೆ ಹೊಯ್ಯುತ್ತಿದ್ದ ಹೆಂಗಸಿಗೆ ಹೊಸಬನೆನ್ನುವ ಯಾವ ಸಹಜ ಕುತೂಹಲವೂ ಇರುವಂತೆ ತೋರಲಿಲ್ಲ. ‘ಇವಳು ನನ್ನ ಹೆಂಡತಿ’ ಎಂದು ಶಂಕರಪ್ಪ ಹೇಳಿದರು. ತನ್ನತ್ತ ತಿರುಗಿಯೂ ನೊಡದ್ದಕ್ಕೆ ನಾಗರಾಜನಿಗೆ ಅಚ್ಚರಿಯೆನ್ನಿಸಿತು. ತಿಂಡಿ ತಿನ್ನುತ್ತ ಶಂಕರಪ್ಪ ‘ಚೆನ್ನಾಗಿ ನಿದ್ದೆ ಬಂತೋ?’ ಎಂದು ಔಪಚಾರಿಕವಾಗಿ ಕೇಳಿದರು. ‘ನಿದ್ದೆ ಬಂತು, ಆದರೆ ಎಂಥೆಂಥ ಕನಸುಗಳು ನೋಡಿ. ನಿದ್ದೆಗಣ್ಣಿನಲ್ಲೂ ಹೆದರಿಕೆಯೆನ್ನಿಸಿ ಬಿಟ್ಟಿತು’ ಅಂದ. ನಾಗರಾಜನ ಮಾತಿಗೆ ಶಂಕರಪ್ಪ ‘ಅದೆಂಥ ಕನಸುಗಳಪ್ಪಾ, ಅಂಥ ಹೆದರಿಕೆಯದ್ದು’ ಅಂದರು. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನಾಗರಾಜ ಹೇಳುತ್ತಿದ್ದಂತೆಯೇ ಶಂಕರಪ್ಪ ಸ್ಥಬ್ಧರಾಗಿ ಕೂತಿದ್ದರು. ಕಾಫಿಯ ಲೋಟವನ್ನು ಹಿಡಿದ ಕೈಗಳು ಕಂಪಿಸಿದ್ದವು. ಮುಖ ಕುಂದಿ ಹೋದದ್ದನ್ನು ಗಮನಿಸಿ ಯಾಕೆ ಇವರಿಗೂ ಹೆದರಿಕೆ ಹುಟ್ಟಿತಾ? ಅನ್ನಿಸಿತು. ಅವನಿಗೆ ಆಶ್ಚರ್ಯವಾದದ್ದು ಅಷ್ಟರತನಕ ತಿರುಗಿಯೂ ನೋಡದಿದ್ದ ಅವರ ಹೆಂಡತಿ ಗಕ್ಕನೆ ತಿರುಗಿ ನಾಗರಾಜನನ್ನು ದಿಟ್ಟಿಸಿದ್ದಳು. ಒಲೆಯ ಬೆಂಕಿಯ ಬೆಳಕಿನಲ್ಲಿ ಅವಳ ಕಣ್ಣುಗಳು ಕೆಂಪಗೆ ಊದಿಕೊಂಡಿರುವುದು ಎದ್ದು ಕಾಣುತ್ತಿತ್ತು. ಶಂಕರಪ್ಪ ಆ ಮಾತುಗಳನ್ನು ಮರೆಸಿ ಎಸ್ಟೇಟಿನ ಬಗ್ಗೆ ಹೇಳತೊಡಗಿದರು. ಈ ಎಸ್ಟೇಟಿನ ಅಡಿಕೆತೋಟ, ತೆಂಗಿನತೋಟ, ಭತ್ತದ ಗದ್ದೆಗಳೆಲ್ಲ ಒಬ್ಬ ಭಾರೀ ಶ್ರೀಮಂತರದ್ದೆಂದೂ, ಬೆಂಗಳೂರಿನಲ್ಲಿ ನಾಲ್ಕಾರು ಕಾರ್ಖಾನೆಗಳಿದ್ದವೆಂದೂ, ಮನೆತನದ ಆಸ್ತಿಯನ್ನು ಮಾರಲು ಮನಸ್ಸಿಲ್ಲದೇ ಇಟ್ಟುಕೊಂಡಿದ್ದಾರೆಂದು ಹೇಳಿದರು. ಸೀತಾರಾಮ ಇಲ್ಲಿಗೆ ಬಂದ ಮಾರನೇ ವರ್ಷ ತಾವು ಬಂದದ್ದೆಂದೂ ಹೇಳಿದರು. ನಾಗರಾಜ ‘ಸೀತಾರಾಮ ಎಲ್ಲಿಗೆ ಹೋದನೋ ಏನೋ?’ ಅಂದ. ವಾಸ್ತವಿಕವಾಗಿ ತನ್ನೊಳಗೇ ಆಡಿಕೊಂಡದ್ದಾದರೂ ಅರಿವಿಲ್ಲದೇ ಗಟ್ಟಿಯಾಗಿ ಹೇಳಿ ಬಿಟ್ಟಿದ್ದ. ಒಂದರೆಗಳಿಗೆ ತಡೆದು ‘ಅದು ಗೊತ್ತಿಲ್ಲ, ನಾಲ್ಕು ದಿನ ತಡವಾಗುತ್ತೆ ಅಂತ ಮಾತ್ರ ಹೇಳಿದ್ದ’ ಅಂದು ಶಂಕರಪ್ಪ ನುಡಿದಾಗ ತನ್ನ ಮನಸ್ಸಿನಲ್ಲಿದ್ದದ್ದು ಇವರಿಗೆ ಹೇಗೆ ಗೊತ್ತಾಯ್ತು ಎನ್ನುವಂತೆ ಅವರತ್ತ ನೋಡಿದ.
ತಿಂಡಿ ಮುಗಿಸಿ ಹೊರಬರುವಾಗ ನಡುಮನೆಯ ಕತ್ತಲಿನಲ್ಲಿ ಸಣ್ಣ ಧ್ವನಿಯಲ್ಲಿ ಬಿಕ್ಕುವ ಸದ್ದು ಕೇಳಿದಂತಿತ್ತು. ಗುಹೆಯಾಳದಿಂದ ಬಂದಂತಿದ್ದ ಆ ಸ್ವರವನ್ನು ನಾಗರಾಜ ಅಷ್ಟಾಗಿ ಗಮ£ಸಲಿಲ್ಲ. ಹೊರಗೆ ಬಂದಾಗ ಜಗಲಿಯಂಚಿನ ಕಟ್ಟೆಯ ಮೇಲೆ, ಅಪರಿಚಿತನೊಬ್ಬ ಕೂತಿದ್ದ, ಬಟ್ಟೆಯೆಲ್ಲಾ ಒದ್ದೆಯಾಗಿ, ತಲೆಗೂದಲಿಂದ ನೀರು ತೊಟ್ಟಿಕ್ಕುತ್ತಿದ್ದರೂ ನಿರ್ಲಿಪ್ತನಂತೆ ಕೂತಿದ್ದು ಕಂಡು ನಾಗರಾಜ ಬೆರಗಾಗಿಬಿಟ್ಟ. ಕೊಳೆಯಾದ ಬಟ್ಟೆ, ಹರಕು ಮುರುಕು ಗಡ್ಡ, ಉದ್ದನೆಯ ತಲೆಗೂದಲೆಲ್ಲಾ ಕೆದರಿ ಹುಚ್ಚನಂತೆ ಕಾಣುತ್ತಿದ್ದವ ನಾಗರಾಜನನ್ನು ಕಂಡದ್ದೇ ಬಗೆದು ಬಿಡುವವನಂತೆ ನೋಡಿದ. ಶಂಕರಪ್ಪ ಅವನ ಬಳಿ ‘ಎಲ್ಲಿ ಹೋಗಿದ್ಯೋ ನಾಲ್ಕಾರು ದಿನವಾಯ್ತು ನಾಪತ್ತೆಯಾಗಿದ್ದೆಯಲ್ಲ’ ಅಂದರು. ಎಲೆ ಅಡಿಕೆ ತಿಂದು ಕೆಂಪಗಾದ ಹಲ್ಲುಗಳನ್ನು ಕಿರಿದು ನಕ್ಕನೇ ಹೊರತು ಏನೂ ಮಾತನಾಡಲಿಲ್ಲ. ಯಾಕೋ ಅವನ ನಗು ಸಹಜದ್ದೆಂದು ನಾಗರಾಜನಿಗೆ ತೋರಲಿಲ್ಲ. ಇವನೊಬ್ಬ ವಿಲಕ್ಷಣ ವ್ಯಕ್ತಿ ಅನ್ನಿಸಿತು ನಾಗರಾಜನಿಗೆ. ‘ಇವನೊಂಥರ ಅರೆಫಿರ್ಕಿ. ಒಂದೂ ಮಾತು ಆಡುವುದಿಲ್ಲ. ಒಂದಿಷ್ಟು ದಿನ ಇಲ್ಲೇ ಇರ್ತಾನೆ. ಹಾಕಿದ್ದು ತಿಂತಾನೆ. ಮತ್ತೆ ನಾಲ್ಕು ದಿನ ಎಲ್ಲಿ ಹೋಗ್ತಾನೋ ಏನೋ? ವಿಚಿತ್ರ ಮನುಷ್ಯ’ ಅಂದರು ಶಂಕರಪ್ಪ. ಮಾಳಿಗೆ ಹತ್ತುವಾಗಲೂ ಆತನ ದೃಷ್ಟಿ ತನ್ನ ಬೆನ್ನಿಗೆ ಇರಿಯುತ್ತಿರುವಂತೆ ಭಾಸವಾಯ್ತು. ತಿರುಗಿ ನೋಡಿದರೆ ರೆಪ್ಪೆ ಮಿಟುಕಿಸದೇ ನೋಡುತ್ತಲೇ ಇದ್ದ. ಯಾತಕ್ಕಾಗಿಯೋ ಏನೋ ಮನಸ್ಸು ಚುಳ್ಳೆಂದಿತು. ಅವನ ಚೂರಿಯ ಮೊನೆಯಂಥ ಕಣ್ಣುಗಳ ಹಿಂದೆ ಏನೋ ರಹಸ್ಯ ಅಡಗಿದೆ ಅಂತಲೇ ಅನ್ನಿಸುತ್ತಿತ್ತು. ಒಂದು ಕ್ಷಣ ಯೋಚಿಸಿದ. ತನ್ನ ದೃಷ್ಟಿಕೋನವೇ ಈ ನೀರವ ಪರಿಸರದಿಂದ, ನಿಶ್ಚಲಸ್ಥಿತಿ ತಲುಪಿದ ಜೀವನಕ್ರಮಗಳ ಸಾಮೀಪ್ಯದಿಂದ ಬದಲಾಗಿ ಬಿಟ್ಟಿತೇನೋ? ಮನುಷ್ಯನಾದಿಯಾಗಿ ಪ್ರತಿಯೊಂದೂ ಅನುಮಾನಾಸ್ಪದವಾಗಿ ಕಾಣುತ್ತಿದೆಯಲ್ಲ. ಪ್ರತಿಯೊಂದರ ಹಿಂದೂ ನಿಗೂಢತೆ ಇದೆ ಅನ್ನುವ ಕಲ್ಪನೆಯೇ ತನ್ನ ಮನಸ್ಥಿತಿ ಹದಗೆಟ್ಟಿದ್ದರ ಪ್ರತೀಕವೋ? ಅಥವಾ ಅಂಥದ್ದೇನಾದರೂ ಮುಚ್ಚಿಡಲಾಗದಂಥದ್ದು ತಾನೇ ತಾನಾಗಿ ಇವರಿಂದ ಹೊರಹೊಮ್ಮುತ್ತಿದೆಯೋ? ಚಿಂತಿಸಿದ್ದಷ್ಟೂ ಜಟಿಲವಾಗುತ್ತ ಹೋದಂತೆ ಯೋಚನಾ ಸರಪಣಿಯೊಳಗೆ ನಾಗರಾಜ ಸಿಕ್ಕುಬಿಟ್ಟಿದ್ದ.
ಬೆಳಿಗ್ಗೆಯೇ ಹೊರಟು ಬಿಡಬೇಕೆಂದು ನಾಗರಾಜ ನಿಶ್ಚಯಿಸಿದ್ದರೂ ಕೊನೆಗೂ ಅದು ಸಾಧ್ಯವಾಗಲೇ ಇಲ್ಲ. ಆಕಾಶ ಕಪ್ಪು ಮೋಡಗಳಿಂದ ಆವೃತ್ತವಾಗಿ ಆಹೋರಾತ್ರಿ ಮಳೆಯನ್ನು ಸುರಿಸುತ್ತಿತ್ತು. ರಪರಪ ರಾಚುವ ಮಳೆಯ ಜೊತೆ ಭೀಕರವಾದ ಗಾಳಿ ಬೇರೆ. ತಲೆ ಹೊರಗಿಡುವುದೂ ಸಾಧ್ಯವಿರಲಿಲ್ಲ. ಮಳೆ ಕಡಿಮೆಯಾದೀತೆಂದು ಕಾದು ಕೂತೇ ಇದ್ದ ನಾಗರಾಜ. ಸಂಜೆಗತ್ತಲಿನಂತೆ ಮಬ್ಬು ಕವಿದು ವೇಳೆ ಎಷ್ಟಾಯಿತೆನ್ನುವುದು ತಿಳಿಯುವಂತಿರಲಿಲ್ಲ. ವಾಚ್ ಬೇರೆ ಹಾಳಾಗಿತ್ತು. ವೇಳೆ ಗೊತ್ತು ಮಾಡುವ ಯಾವ ಸಾಧನಗಳೂ ಆ ಮನೆಯಲ್ಲಿರಲಿಲ್ಲ. ಕಾಲ ಚಲಿಸುತ್ತಲೇ ಇಲ್ಲವೇನೋ ಅನ್ನಿಸುವ ಆ ಸ್ಥಬ್ಧ ಜಗತ್ತಿನಲ್ಲಿ ನಾಗರಾಜ ತನ್ನ ನಿರ್ಧಾರ, ನಿಶ್ಚಯಗಳನ್ನೆಲ್ಲಾ ಬದಿಗೆ ಸರಿಸಿ, ಪ್ರಕೃತಿಯ ಕೃಪಾಕಟಾಕ್ಷಕ್ಕೆ ಕಾಯುತ್ತಿರುವಂತೆ ಆಗಿತ್ತು. ಎಷ್ಟೆಲ್ಲಾ ಸಾಮಥ್ರ್ಯಗಳಿದ್ದರೂ ಮನುಷ್ಯ ಇದರೆದುರು ಮಾತ್ರ ಬಲಹೀನವೆಂದು ಮೊದಲ ಬಾರಿಗೆ ನಾಗರಾಜ ಅರ್ಥ ಮಾಡಿಕೊಂಡಿದ್ದ.
ನಗರದ ಏಕತಾನದ ಬದುಕಿಗೆ ಒಗ್ಗಿ ಹೋಗಿದ್ದವ ಪ್ರಕೃತಿಯ ವೈಪರೀತ್ಯಗಳಿಗೆ ಬೆರಗಾಗಿ ಬಿಟ್ಟಿದ್ದ. ಸದ್ದುಗದ್ದಲದ ಜಗತ್ತಿನಿಂದ ಮಳೆಗಾಳಿಗಳ ಸಪ್ಪಳವೊಂದೇ ನಿರಂತರ ಅನ್ನಿಸುವ ನಿರಾಸಕ್ತಿ ಪ್ರಪಂಚಕ್ಕೆ ಕಾಲಿಟ್ಟಿದ್ದ. ಯುಗಾಂತರಗಳಲ್ಲೂ ಏಕತ್ರವಾದ ಸ್ಥಿತಿ ಇಲ್ಲಿನದು ಎನ್ನುವ ನಿರ್ಧಾರಕ್ಕೆ ಬರುತ್ತಿದ್ದ ನಾಗರಾಜ. ಸೀತಾರಾಮ ಇಂಥ ದುರ್ಗಮ ಪ್ರದೇಶಕ್ಕೆ ಬಂದು ಕಾಲನೂಕುತ್ತಿರುವುದಕ್ಕೆ ಪ್ರಬಲ ಕಾರಣವೇನಿದ್ದೀತು? ಎಸ್ಟೇಟಿನ ದೇಖರೇಖಿಗೆ ಅನ್ನುವ ಮಾತು ಎಷ್ಟರ ಮಟ್ಟಿಗೆ ಸತ್ಯ? ಸಮಾನ ಮನಸ್ಕನಾಗಿ ತನ್ನಂಥದ್ದೇ ನೂರೆಂಟು ಹುಚ್ಚು ಕನಸುಗಳ£್ನಟ್ಟುಕೊಂಡವ ಹೊರ ಪ್ರಪಂಚದ ಸಂಬಂಧವನ್ನೇ ಕಡಿದುಕೊಂಡಿರುವಂಥ ಘೋರ ಕಾನನದ ಮಧ್ಯೆ ನೆಲ ಕಚ್ಚಿ ಬದುಕುತ್ತಾನೆಂದರೆ ನಂಬಲು ಸಾಧ್ಯವೇ? ನಾಗರಾಜ ಒಂದಾದ ನಂತರ ಒಂದು ಸಿಗರೇಟುಗಳನ್ನು ಬೂದಿ ಮಾಡುತ್ತ £ಷ್ಕರ್ಷೆಗೆ ಬರಲು ಹೆಣಗಾಡುತ್ತಿದ್ದ, ಇದಕ್ಕೆಲ್ಲಾ ಸೀತಾರಾಮ ಮಾತ್ರ ಉತ್ತರಿಸಬಲ್ಲ ಅನ್ನಿಸಿತು. ಸೀತಾರಾಮ ಇಲ್ಲಿಗೆ ಬರುವ ಪೂರ್ವದಲ್ಲಿ ಅವನ ತಮ್ಮನೊಬ್ಬ ಅಕಸ್ಮಾತಾಗಿ ಕಣ್ಮರೆಯಾಗಿದ್ದ. ಅವತ್ತಿನಿಂದ ಸೀತಾರಾಮ ತಲೆಕೆಟ್ಟವನಂತೆ ಚಡಪಡಿಸುತ್ತಿದ್ದ. ಅವನ ಪತ್ತೆಗಾಗಿ ತಿರುಗದ ಊರಿರಲಿಲ್ಲ; ಮಾಡದ ಪ್ರಯತ್ನಗಳಿರಲಿಲ್ಲ. ಅವ ಯಾಕೆ ನಾಪತ್ತೆಯಾದ? ಅದಕ್ಕೇನು ಕಾರಣ? ಯಾವುದಕ್ಕೂ ಸೀತಾರಾಮ ಸಮರ್ಪಕವಾದ ಉತ್ತರವನ್ನು ಕೊಟ್ಟಿರಲಿಲ್ಲ. ಒಮ್ಮೊಮ್ಮೆ ತಮ್ಮನ ಪತ್ತೆಯೇ ಬದುಕಿನ ಗುರಿ ಅನ್ನುತ್ತಿದ್ದ, ಅವನು ಸಿಕ್ಕದಿದ್ದರೂ ಸರಿ, ಅವನಿರುವ ಜಾಗವನ್ನಾದರೂ ಪತ್ತೆಮಾಡಬೇಕು ಎನ್ನುವದು ಅವನ ಜಪವಾಗಿತ್ತು. ಒಂದು ದಿನ ಇದ್ದಕ್ಕಿದ್ದಂತೆ ಏನೂ ಹೇಳದೇ ಹೊರಟು ಹೋಗಿದ್ದ. ನಾಲ್ಕಾರು ತಿಂಗಳ ನಂತರ ಅವನಿಂದ ಪತ್ರ ಬಂದಾಗಲೇ ಇಲ್ಲಿದ್ದದ್ದು ಗೊತ್ತಾಗಿದ್ದು. ಈಗಲೂ ಅಂಥದ್ದೇನಾದರೂ ಸುಳಿವಿನ ಬೆನ್ನು ಹತ್ತಿ ಹೋಗಿದ್ದಾನೆಯೇ? ಹೊರಗೊಂದು ಜಗತ್ತಿದೆ ಅನ್ನುವುದೇ ಅರಿವಿಗೆ ಬಾರದ ಈ ಪ್ರದೇಶದಲ್ಲಿ ಅಂಥ ಸಂದೇಶಗಳಾದರೂ ಹೇಗೆ ಸಿಕ್ಕೀತು? ಇಂಥ ದ್ವೀಪದಲ್ಲಿದ್ದು ಕಳೆದ ತಮ್ಮನನ್ನ ಪತ್ತೆಮಾಡುವುದು ಯಾತರ ಸಹಾಯದಿಂದ? ಇದೊಂದು ಕಗ್ಗಂಟಾಗತೊಡಗಿತ್ತು. ಮತ್ತೆ ಮತ್ತೆ ಹೆಣೆದುಕೊಳ್ಳುತ್ತ , ಛೇಧಿಸುವ ಯತ್ನವನ್ನೇ ವಿಫಲಗೊಳಿಸುತ್ತಿತ್ತು. ಇಲ್ಲಿಯ ಪ್ರತಿ ಮನುಷ್ಯರನ್ನು ಪ್ರತಿಯೊಂದು ಸಂದರ್ಭವನ್ನು ಅಷ್ಟೇ ಏಕೆ ಇಡೀ ಪರಿಸರವನ್ನೇ ನಿಯಂತ್ರಿಸುವ ಅದೃಶ್ಯ ಹಸ್ತವೊಂದು ಇದ್ದೇ ಇದೆ ಅನ್ನುವ ಕ್ಷೀಣ ಸಂದೇಹ ನಾಗರಾಜನಿಗೆ ಮೊದಲಬಾರಿಗೆ ಕಾಣಿಸಿಕೊಂಡಿತ್ತು.
ಮಧ್ಯಾಹ್ನ ಊಟದ ನಂತರ ಮಾಳಿಗೆ ಹತ್ತಿ ಮುಸುಗಳೆದು ಮಲಗಿಬಿಟ್ಟ. ಸಮಯದ ಗೊಡವೆಯಂತೂ ಇರಲೇ ಇಲ್ಲ. ಉಸಿರಾಡುವ ಹವೆಯಲ್ಲಿ ಬೆರೆತಿದೆಯೋ ಅನ್ನಿಸುವ ವಿಷಮಸ್ಥಿತಿ, ತನ್ನ ಯಾವುದೋ ಸೇಡನ್ನ ತೀರಿಸಿಕೊಳುತ್ತಿದೆಯೇನೋ ಎನ್ನುವಷ್ಟು ವಿಕೋಪ, ಚಿಪ್ಪಿನೊಳಗೆ ಅಡಗಿರುವಂಥ ಬಂಧÀನದ ಸ್ಥಿತಿ ನಾಗರಾಜನ ಅಸ್ತಿತ್ವವನ್ನೇ ಅಲುಗಾಡಿಸತೊಡಗಿತ್ತು. ಊಟಕ್ಕೆ ಕುಳಿತಾಗ ಶಂಕರಪ್ಪ ಆಳುಗಳು ಹೇಳಿದ್ದನ್ನು ತಿಳಿಸಿದ್ದರು. ಗಾಳಿ ಮಳೆಯಿಂದಾಗಿ ಸಿಕ್ಕಾಪಟ್ಟೆ ಮರಗಳು ಉರುಳಿಬಿದ್ದಿದಾವಂತೆ, ಹೊಳೆ ಉಕ್ಕಿಬಂದು ದೇವಂಗಿ ರಸ್ತೆಯಲ್ಲಿದ್ದ ಲಾಚಾರಾಗಿದ್ದ ಸೇತುವೆ ಕುಸಿದು ಬಿದ್ದಿದೆಯಂತೆ ಅಂದಾಗ ನಾಗರಾಜ ಕಂಗೆಟ್ಟು ಹೋದ. ಇಲ್ಲಿಂದ ಹೊರಹೋಗಬಹುದಾದ ಒಂದೇ ಒಂದು ದಾರಿಯೂ ಕಟ್ಟಿಹೋದಂತಾಗಿತ್ತು. ಇನ್ನೆಷ್ಟು ಕಾಲ ಈ ಪ್ರಳಯ ಸ್ವರೂಪಿ ಮಳೆಗಾಳಿಯ ಆಕ್ರೋಶದ ಮಧ್ಯೆ ಸಿಕ್ಕಿಬಿದ್ದಿರುವುದು? ಚಿಂತೆಯಿಂದಾದ ದಣಿವಿಗೋ ಏನೋ ಘೋರ ನಿದ್ರೆಯೇ ಬಂದು ಬಿಟ್ಟಿತ್ತು. ಜೋಗುಳದಂತಿದ್ದ ಮಳೆಯ ಸದ್ದು, ಚಳಿಯ ವಾತಾವರಣವೂ ಬೆಚ್ಚಗೆ ಮಲಗಲು ಸಹಾಯವಾಗಿತ್ತು.
ನಾಗರಾಜನಿಗೆ ಎಚ್ಚರವಾದಾಗ ಅದೆಷ್ಟೋ ಹೊತ್ತಾಗಿತ್ತು. ಕಣ್ಣುಬಿಟ್ಟು ನೋಡಿದರೆ ಶಂಕರಪ್ಪ ಎದುರಿನಲ್ಲೊಂದು ಹೊಗೆ ಕಾರುತ್ತಿದ್ದ ಸೀಮೆ ಎಣ್ಣೆ ಬುಡ್ಡಿಯನ್ನಿಟ್ಟುಕೊಂಡು ಕೂತಿದ್ದರು. ಬಿಟ್ಟೂ ಬಿಡದೇ ನೇರವಾಗಿ ನಾಗರಾಜನ ಮುಖವನ್ನೇ ದಿಟ್ಟಿಸುತ್ತಿದ್ದರು. ಬೆಳಿಗ್ಗೆ ಕಂಡ ಅರೆಹುಚ್ಚನ ಚೂರಿಯ ಮೊನೆಯಂಥ ನೋಟವಲ್ಲ. ಆರ್ದವಾದ, ಏನನ್ನೋ ಅರಸುವ ಹತಾಶೆಯ ದೃಷ್ಟಿ ಎಂದು ಯಾರೂ ಗುರುತಿಸುವ ಹಾಗಿತ್ತು. ಮುಖದಲ್ಲಿ ಹೆಪ್ಪುಗಟ್ಟಿದ ಇನ್ನೇನು ಹೊರನುಗ್ಗಿ ಬಿಡುತ್ತದೆ ಎನ್ನುವ ದುಃಖ ಇತ್ತು. ನಾಗರಾಜ ಕಣ್ಣು ಬಿಟ್ಟದ್ದನ್ನ ಕಂಡಾಕ್ಷಣ ಆ ಭಾವವೆಲ್ಲಾ ಮಾಯವಾಗಿ ಮತ್ತದೇ ಮೊದಲಿನ ನಿರುದ್ವೇಗದ, ನಿಸ್ಸಾರದ ಶಂಕರಪ್ಪನಾಗಿಬಿಟ್ಟರು.
“ಪಕ್ಕನೆ ನಿಮಗೆ ಎಚ್ಚರವಾದಾಗ ಹೆದರಿಕೊಂಡಿರೆಂದು ದೀಪ ಇಟ್ಟುಕೊಂಡು ಕೂತೆ” ಅಂದರು. ‘ಊಟಕ್ಕೆ ಸಿದ್ಧವಾಗಿದೆ ಬನ್ನಿ’ ಎಂದರು. ಬರೇ ಊಟ, ತಿಂಡಿ, ಕುಳಿತಲ್ಲೇ ಬೇರುಬಿಟ್ಟಂಥ ಸ್ಥಿತಿ ನಾಗರಾಜನ ಅಲೆಮಾರಿ ವ್ಯಕ್ತಿತ್ವಕ್ಕೆ ಬೇಜಾರು ಹುಟ್ಟಿಸಿ ಬಿಟ್ಟಿತ್ತು. ಇದೆಂಥ ನಿಸ್ಸಹಾಯಕ ಪಾಡಾಯ್ತಲ್ಲ ಅನ್ನಿಸುತ್ತಿತ್ತು. ‘ನನಗೆ ಹಸಿವಿಲ್ಲ. ಏನೂ ಬೇಡ’ ಎಂದು ನಿರಾಕರಿಸಿಬಿಟ್ಟ. ನಾಗರಾಜ ಸಿಗರೇಟನ್ನ ಹಚ್ಚುತ್ತಿದ್ದಂತೆ ಈಗ ಬಂದೆ ಎಂದು ಇಳಿದು ಹೋದವರು ಸ್ವಲ್ಪ ಹೊತ್ತಿನಲ್ಲಿ ಹಾಲು ತಂದು ಎದುರಿಟ್ಟರು. ಶಂಕರಪ್ಪನಿಗೆ ತನ್ನ ಬಳಿ ಏನೋ ಹೇಳುವುದಿದೆ ಅನ್ನುವುದು ನಾಗರಾಜನಿಗೆ ಮನದಟ್ಟಾಗಿ ಹೋಗಿತ್ತು. ಏ£ದೆ ಈ ಮನುಷ್ಯನಲ್ಲಿ ಅಂಥ ತುಡಿತ? ಈ ನಿಗೂಢ ಪ್ರಪಂಚದಲ್ಲಿ ಈತ ಕೂಡ ಯಾವುದೋ ಸಂಕೇತಗಳನ್ನು ವ್ಯಕ್ತಪಡಿಸುವ ಕಾತರದಲ್ಲಿದ್ದಾನೆಯೇ? ಅಥವಾ ಒಳಗಿಟ್ಟುಕೊಳ್ಳಲಾಗದ ಬೆಂಕಿಯಂಥಹ ರಹಸ್ಯವೊಂದು ಈತನೊಳಗೆ ಕುದಿಯುತ್ತಿದೆಯೇ? ಶಂಕರಪ್ಪ ಅಂಥದ್ದೇನೂ ಹೇಳದೇ ಮೂಮೂಲಿ ವಿಷಯಗಳ ಬಗ್ಗೆ ಮಾತನಾಡುತ್ತಿದ್ದರೂ ನಾಗರಾಜ ಅದರತ್ತ ಲಕ್ಷ್ಯಗೊಟ್ಟಿರಲೇ ಇಲ್ಲ. ಆತ ಬೇರ್ಯಾವುದೋ ವಿಚಾರದಲ್ಲಿದ್ದ. ಈ ಪರಿಸರದ ಮೂಲಸ್ಥಿತಿಯೇ ಇಂಥದ್ದೇ? ಒಬ್ಬರನ್ನೊಬ್ಬರು ಶೋಧಿಸುವ ಈ ಅಂತರಾಳದ ಒತ್ತಡ ಏ£ದ್ದೀತು? ಪ್ರತಿಯೊಬ್ಬನದೂ ಅನ್ವೇಷಕ ದೃಷ್ಟಿ. ಮತ್ತೊಬ್ಬನ ಬಗ್ಗೆ ಅಸಹಜ ನಿಗೂಢತೆಯನ್ನು ಹುಟ್ಟಿಸುವ ಮೂಲ ಗುಣ ಈ ಪರಿಸರದ್ದೇ? ಹೊಗೆಯಂತೆ ಎಲ್ಲೆಲ್ಲೂ ಆವರಿಸಿಕೊಂಡಿರುವ ಸಂದೇಹ ದೃಷ್ಟಿಗೆ ಕಾರಣವಾದರೂ ಏನು? – ನಾಗರಾಜ ತನ್ನದೇ ಆದ ನಿರ್ಧಿಷ್ಟ ತೀರ್ಮಾನಕ್ಕೆ ಹತ್ತಿರವಾಗುತ್ತಿದ್ದ. ನಿದ್ದೆ ಅವನ ಆಯಾಸವನ್ನು, ಮನಸ್ಸಿಗೆ ಕವಿದ ಮಂಕನ್ನು ಕಳೆದು ಸ್ಪಷ್ಟವಾಗಿ ಶಕ್ತಿಯನ್ನು ತಂದಿತ್ತು. ಇಲ್ಲಿಯವರೆಲ್ಲ ಎದೆಯೊಳಗೊಂದು ಗುಟ್ಟನ್ನು ಬಚ್ಚಿಟ್ಟುಕೊಂqವರೇ! ನಿನ್ನೆ ರಾತ್ರಿ ಕಂಡ ಅನಾಮಧೇಯರು, ಡ್ರೈವರ್, ಶಂಕರಪ್ಪ ಆತನ ಹೆಂಡತಿ, ಅರೆಹುಚ್ಚ – ಪ್ರತಿಯೊಬ್ಬರಲ್ಲೂ ಏನೋ ಗೌಪ್ಯವಿದೆ. ಯಾವುದೋ ಅನೂಹ್ಯವಾದದ್ದರ ಸುಳಿಯಲ್ಲಿ ಸಿಕ್ಕಿದ್ದಾರೆ. ಸೀತಾರಾಮ ಕೂಡ ಅಂಥ ರಹಸ್ಯಗಳನ್ನು ಹುದುಗಿಟ್ಟುಕೊಂಡು, ಮತ್ಯಾರದೋ ಬೆನ್ನು ಬಿದ್ದಿದ್ದಾನೆ. ತಾನು ಕೂಡ ಅಷ್ಟೇ, ಇಲ್ಲಿಗೆ ಬರುವ ಮುಂಚೆ ಯಾವ ಉದ್ದೇಶವನ್ನು ಇಟ್ಟುಕೊಳ್ಳದೇ ಬಂದೆನಾದರೂ ಅರಿವಿಲ್ಲದಂತೆ ಯಾವುದೋ ನಿಗೂಢÀವೊಂದರತ್ತ ನಿಧಾನವಾಗಿ ಆಕರ್ಷಿತನಾಗುತ್ತಿದ್ದೇನೆ. ಪ್ರತಿಯೊಬ್ಬರ ಮಾತು, ವರ್ತನೆ ಒಟ್ಟಾರೆ ಜೀವನಕ್ರಮವೇ ಅವರತ್ತ ಆಸಕ್ತಿಯನ್ನು ಹುಟ್ಟಿಸುತ್ತಿದೆ. ನಿಗೂಢ ವ್ಯಕ್ತಿಗಳು ಎಡೆಬಿಡದೇ ತನ್ನನ್ನ ಹಿಂಬಾಲಿಸಿದಂತೇ ಅದೇ ಥರ ಅವರನ್ನು ತಾನು ಬೆಂಬತ್ತುವುದು ಅನಿವಾರ್ಯ. ಪರಸ್ಪರ ಶೋಧನೆಯ ಪರ್ಯಾವಸಾನ ಹೇಗೂ ಇರಲಿ. ಈ ಅನ್ವೇಷಣೆಯ ಹೋರಾಟವಂತೂ ನಡೆದೇ ನಡೆಯುತ್ತದೆ ಎನ್ನುವ ಧÀೃಢ ನಿರ್ಧಾರವೊಂದಕ್ಕೆ ನಾಗರಾಜ ಬಂದುಬಿಟ್ಟಿದ್ದ.
ತುಂಬಾ ಹೊತ್ತಿನ ತನಕ ಶಂಕರಪ್ಪ ನಾಗರಾಜನ ಎದುರು ಕೂತೇ ಇದ್ದರು. ಮೌನವನ್ನು ಮುರಿದು ಆಗೀಗ ಒಂದೆರಡು ಮಾತನ್ನಾಡುತ್ತ ನಾಗರಾಜನನ್ನು ಮಾತಿಗೆಳೆಯುವ ಪ್ರಯತ್ನ ಮಾಡುತ್ತಿರುವಂತಿತ್ತು. ಆದರೆ ನಾಗರಾಜ ಮಾತಿರಲಿ, ಯಾತರ ಹಂಗೂ ಬೇಡವೆನ್ನಿಸುವಷ್ಟು ಅನ್ಯಮನಸ್ಕನಾಗಿದ್ದ. ಒಂದಾದ ನಂತರ ಒಂದರಂತೆ ಸಿಗರೇಟನ್ನು ಸೇದುತ್ತಲೇ ಇದ್ದ. ತನ್ನಲ್ಲಿರುವ ಒಂದೆರಡು ಪ್ಯಾಕ್ ಸಿಗರೇಟ್ ಮುಗಿದನಂತರ ಏನು ಗತಿ? ಎನ್ನುವುದು ಸಮಸ್ಯೆಯಾಗಿತ್ತು. ಜೊತೆಗೆ ಎದುರಾದ ಸಂದಿಗ್ದಸ್ಥಿತಿಗೆ ಮನಸ್ಸಿನಲ್ಲೇ ಪರಿಹಾರ ಹುಡುಕಿಕೊಳ್ಳಲು ಹವಣಿಸುತ್ತಿದ್ದ. ಈ ಅಪರಿಚಿತ ಜಗತ್ತಿನ ಪ್ರತಿಯೊಬ್ಬರನ್ನು ಭಯಗ್ರಸ್ತರನ್ನಾಗಿಸಿ, ಸದಾ ಸಂಶಯದ ಹೆಡೆಯಡಿಯಲ್ಲಿ ಬದುಕಬೇಕಾದ ಅನಿವಾರ್ಯತೆಯನ್ನು ಉಂಟು ಮಾಡಿದ ಆ ಅದೃಶ್ಯ ಶಕ್ತಿ ಎನ್ನಿದ್ದೀತು? ಮತ್ತೆ ಯಾಕೆ ಆ ರೀತಿ ವರ್ತಿಸುತ್ತದೆ? ಎನ್ನುವುದು ಅರಿತುಕೊಳ್ಳಲೇಬೇಕೆಂಬುವುದಾದರೆ ಎಲ್ಲಿಂದ ಪ್ರಾರಂಭಿಸಲಿ ಎನ್ನುವುದನ್ನೇ ಅವ£ಗೆ ಬಗೆಹರಿಸಲಾಗಲಿಲ್ಲ. ಎಲ್ಲಿಯೋ ಒಂದು ಕಡೆ ಈ ಗೋಪ್ಯದ ಜಗತ್ತಿಗೆ ಕಿಂಡಿ ಇದ್ದೇ ಇದೆ. ಎಲ್ಲಿದ್ದೀತು? ದೇವಂಗಿ ಕ್ರಾಸ್‍ನಲ್ಲಿ ಇಳಿದಲ್ಲಿಂದ ಪ್ರತಿಕ್ಷಣವನ್ನೂ ಎಚ್ಚರದಿಂದ ಮತ್ತೆ ಮತ್ತೆ ನೆನಪು ಮಾಡಿಕೊಳ್ಳುತ್ತ ಆಲೋಚನಾ ಸರಣಿಯನ್ನೇ ನೇಯತೊಡಗಿದ್ದ.
ಅದೆಷ್ಟು ಹೊತ್ತಾಗಿತ್ತೋ ಏನೋ? ದಿಂಬನ್ನು ಗೋಡೆಗೊರೆಗಿಕೊಂಡು ಕೂತ ಸ್ಥಿತಿಯಲ್ಲಿ ನಾಗರಾಜ ತನ್ನಾಳದ ಮಡುವಿಗೆ ಇಳಿದು ಹೋಗಿದ್ದ. ಅವನ ಮಸ್ತಿಷ್ಕದಲ್ಲಿ ಕಳೆದ ನಿನ್ನೆಗಳ ಬದುಕಿನ ಸೋಲು, ಗೆಲುವುಗಳ ಚಿಂತನೆಯ ಸಂಘರ್ಷವೇ ನಡೆದಿತ್ತು. ತಳದಲ್ಲಿದ್ದ ಹತಾಶೆಯ, ಬೇಗುದಿಯ, ವ್ಯಕ್ತ ಪಡಿಸಲಾಗದ ಭಾವನೆಗಳೆಲ್ಲಾ ಗಿರ ಗಿರ ಸುತ್ತತೊಡಗಿದ್ದವು. ಈ ಜೀವ ಜಾಲದ ಸರಪಣಿಯಲ್ಲಿ ತನ್ನಂಥ ತೃಣರೂಪಿಯ ಅಸ್ತಿತ್ವವಾದರೂ ಏನು? ತನ್ನ ಅವಶ್ಯಕತೆ ಇತ್ತೇ? ಎನ್ನುವ ಜಿಜ್ಞಾಸೆಯ ಹಂತಕ್ಕೆ ಮುಟ್ಟಿದ ಸ್ಥಿತಿಯಲ್ಲಿದ್ದ ಆತ ನಿಧಾನಕ್ಕೆ ನಿದ್ದೆಯಂತಹ ಮಂಪರಿನೊಳಕ್ಕೆ ಸಿಲುಕಿ ಬಿಟ್ಟಿದ್ದ. ಅರೆ ಸ್ವಪ್ನಾವಸ್ಥೆಯಲ್ಲಿದ್ದ ನಾಗರಾಜ ವಿಸ್ಮøತಿ, ವಾಸ್ತವಿಕತೆಯ ನಡುವೆ ತಾಕಲಾಡುತ್ತ ಸಹಜಸ್ಥಿತಿಯನ್ನೇ ಕಳೆದುಕೊಂಡು ನಿದ್ದೆಗಣ್ಣಿಗೆ ಜಾರಿಬಿಟ್ಟಿದ್ದ.
ಸ್ವಲ್ಪ ಹೊತ್ತಿನಲ್ಲಿ ಮಂಕಾಗಿ ಉರಿಯುತ್ತ, ಹೊಗೆಯನ್ನ ಕಾರುತ್ತಿದ್ದ ಬುಡ್ಡಿ ದೀಪದ ವರ್ತುಲದಲ್ಲಿ ಆಕಾರವೊಂದನ್ನು ಕಂಡು ನಾಗರಾಜ ಸಣ್ಣಗೆ ಬೆಚ್ಚಿದ. ಅದೊಂದು ಹೆಣ್ಣು ಅನ್ನುವುದು ಸ್ಪಷ್ಟವಾಗುತ್ತಿತ್ತು. ಮತ್ತೊಂದು ಹೆಂಗಸನ್ನು ಈ ಮನೆಯಲ್ಲಿ ನೋಡಿರಲಿಲ್ಲ. ಈಕೆ ಎಲ್ಲಿಂದ ಬಂದಳು? ಇನ್ನೂ ಚಿಕ್ಕ ವಯಸ್ಸಿನವಳಂತೆ ಕಾಣುತ್ತಿದ್ದ ಈ ಹುಡುಗಿ ಸೀರೆಯ ಸೆರಗಿನಿಂದ ಕಣ್ಣೊರೆಸಿಕೊಳ್ಳುತ್ತ ಎದುರಿನ ಗೋಡೆಗೊರಗಿ ನಿಂತಳು. ನಾಗರಾಜ ಇದೆಂಥ ಮಾಯಾಲೋಕವಪ್ಪ ಅಂದುಕೊಳ್ಳುತ್ತಿದ್ದ, ಎಂಥೆಂಥ ಪಾತ್ರಗಳು ಇಲ್ಲಿ ಪ್ರವೇಶ ಮಾಡುತ್ತಿವೆಯೋ ಎಂದು ಭೀತನಾಗಿಬಿಟ್ಟ. ಸಣ್ಣಗೆ ಬಿಕ್ಕುತ್ತಿದ್ದವಳನ್ನು ಆ ಭಯವನ್ನು ಹೋಗಲಾಡಿಸಲೆಂಬಂತೆ ಕೇಳಿದ.
“ಯಾರು ನೀನು?” ಆಕೆ ಮಾತನಾಡದೇ ಬಿಕ್ಕುವುದನ್ನೇ ಮುಂದುವರೆಸಿದಾಗ ಗದರಿಕೆಯ ಧ್ವನಿಯಲ್ಲಿ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದ, ಅವನ ಸ್ವರದಲ್ಲಿ ಕಾಣಿಸಿಕೊಂಡ ಗಡಸಿಗೋ ಏನೋ ಆಕೆ ಉಸಿರನ್ನು ಬಿಗಿ ಹಿಡಿದು ಕೊಂಡಂತಿತ್ತು. ಸ್ವಲ್ಪ ತಡೆದು ಸೀಮೆಎಣ್ಣೆ ಬುಡ್ಡಿಯನ್ನು ಉಫ್ ಎಂದು ಆರಿಸಿ ಕ್ಷೀಣ ಧ್ವನಿಯಲ್ಲಿ ಮಾತನಾಡಿದಳು.
“£ೀವು ಗೆಳೆಯನನ್ನು ಹುಡುಕಿಕೊಂಡು ಬಂದವರೆಂದು ನನಗೆ ಗೊತ್ತು, ನಿಮ್ಮನ್ನು ನೋಡಿದಾಗಲೇ ನನಗೆ ವಿಶ್ವಾಸವುಂಟಾಯ್ತು. ನೀವು ಇಲ್ಲಿರುವ ಪ್ರತಿಕ್ಷಣವೂ ಅಪಾಯಕಾರಿಯೇ. ಆದಷ್ಟು ಬೇಗ ಇಲ್ಲಿಂದ ಹೋಗಿಬಿಡಿ. ಬೆಳಿಗ್ಗೆಯೇ ಹೇಳಬೇಕೆಂದುಕೊಂಡೆ. ಆದರೆ ನಾನು ಯಾರ ಕಣ್ಣಿಗೂ ಕಾಣಿಸಿಕೊಳ್ಳುವಂತಿಲ್ಲಾ. ಬಂದಿಯಂತೆ ಇದ್ದೇನೆ. ಯಾವ ಕ್ಷಣದಲ್ಲೂ ಅವರು ನನ್ನನ್ನು ಕೊಲ್ಲಬಹುದು, ಎಷ್ಟು ಕಾಲ ಅಡಗಿಕೊಳ್ಳಬಹುದು ಹೇಳಿ?” ಒಂದೇ ಉಸುರಿನಲ್ಲಿ ತುಂಡು ತುಂಡಾಗಿ ಹೇಳಿ ಕಣ್ಣೊರೆಸಿಕೊಂಡಳು. ನಾಗರಾಜನಿಗೆ ತಕ್ಷಣ ನೆನಪಾಯ್ತು ಬೆಳಿಗ್ಗೆ ನಡುಮನೆಯ ಕತ್ತಲಿನ ಮೂಲೆಯಲ್ಲಿ ಬಿಕ್ಕುತ್ತಿದ್ದಳು ಈಕೆಯೇ ಅನ್ನುವುದು ನಿಶ್ಚಯವಾಗಿಬಿಟ್ಟಿತು.
“£ೀನ್ಯಾಕೆ ಅವಿತು ಕೂತಿದ್ದೀಯಾ? ಶಂಕರಪ್ಪ ನಿನಗೇನಾಗಬೇಕು?” ತನ್ನದೂ ಅವಳ ಹಾಗಿನ ಅಸಮರ್ಪಕ ಮಾತಿನ ದಾಟಿಯಾಗುತ್ತಿದ್ದುದು ನಾಗರಾಜನ ಗಮನಕ್ಕೆ ಬರಲಿಲ್ಲ. ಭೀತಿಗಿಂತ ಹೆಚ್ಚಾಗಿ ರಹಸ್ಯದ ಮೊಟ್ಟೆಯೊಡೆಯುವ ಕಾಲ ಸನ್ನಿಹಿತವಾಗಿದೆ ಅಂತನ್ನಿಸಿದ ಕಾತುರತೆ ಅವನನ್ನು ಗಡಿಬಿಡಿಗೀಡು ಮಾಡಿತ್ತು.
“ಅವರು ನನ್ನಪ್ಪಯ್ಯ. ಸೀತಾರಾಮನ ಬಗ್ಗೆ ಎಲ್ಲ ವಿವರಗಳೂ ನನಗೆ ಗೊತ್ತು. ಆತ ಇಲ್ಲಿಗೆ ಯಾಕೆ ಬಂದ ಎಂಬುದಲ್ಲ. ಅದಕ್ಕಿಂತ ಇಲ್ಲಿದ್ದು ಆತ ಸಂಗ್ರಹಿಸಿದ ಮಾಹಿತಿಗಳೆಲ್ಲವೂ ಗೊತ್ತು. ನನ್ನಲ್ಲಿ ಎಲ್ಲವನ್ನೂ ಹೇಳಿದ್ದ. ನಾವಿಬ್ಬರೂ ಪ್ರಿತಿಸುತ್ತಿದ್ದುದೂ, ಮದುವೆಯಾಗಲು ನಿಶ್ಚಯಿಸಿದ್ದುದೂ ಎಲ್ಲರಿಗೂ ಗೊತ್ತು. ಕೆಳಗೊಬ್ಬ ಕೂತಿರುತ್ತಾನಲ್ಲ. ಅರೆ ಮಳ್ಳ; ಅವನು ಮಳ್ಳಲ್ಲ; ಕಾವಲು ಕೂತವ. ಮುಂಚಿನಿಂದ ಸೀತಾರಾಮನ ಬೆನ್ನುಹತ್ತಿದವ. ಸೀತಾರಾಮನ ಬಗ್ಗೆ ನನಗೆಲ್ಲ ಗೊತ್ತು ಅನ್ನುವುದು ತಿಳಿದು ನನ್ನ ಹುಡುಕುತ್ತಿದ್ದಾರೆ.”
ತನಗೆ ಮಾತ್ರ ಕೇಳಿಸುವಂತಿದ್ದ ಆ ಪಿಸುಧ್ವನಿಯಲ್ಲಿರುವ ಭೀತಿಯ ಛಾಯೆಗಳೇ ಸುತ್ತಲಿನ ಕರಾಳತೆಯನ್ನು ಎತ್ತಿತೋರಿಸುವಂತಿತ್ತು. ಅತಿ ಅಪಾಯದ ಸಂದರ್ಭದಲ್ಲೂ, ಚಕ್ರವ್ಯೂಹದಂತೆ ಸುತ್ತುವರಿದ ಘಾತುಕರ ನಡುವೆÉಯೂ ಹುಡುಗಿಯೊಬ್ಬಳನ್ನು ಪ್ರೀತಿಸುವಷ್ಟು ಜೀವನಾಸಕ್ತಿ ಇರುವ ಸೀತಾರಾಮನ ಬಗ್ಗೆ ನಾಗರಾಜನಿಗೆ ಅಸೂಯೆಯೆನ್ನಿಸಿತು. ನಿಜವಾದ ಜೀವನಾಸಕ್ತಿ ಅಂದರೆ ಇದಪ್ಪಾ ಅಂದುಕೊಂಡು ಬಹುಶಃ ಸೀತಾರಾಮನಿಗೆ ದ್ವೀಪದಂತಹ ಈ ಜಗತ್ತಿನಲ್ಲಿ ಇಂಥದೊಂದು ಮನಸ್ಸಿನ ಅವಶ್ಯಕತೆ ಅನಿವಾರ್ಯವಾಗಿತ್ತೇನೋ? ಸದಾ ಕಾಡುವ ಸಂಕಟದ, ಸೋಲನ್ನ ನೀಡುವ ಸವಾಲಿನೆದುರು ಗಟ್ಟ್ಟಿಗೊಳ್ಳಲಿಕ್ಕೆ ತನ್ನನ್ನು ನಂಬಿದ ಜೀವದ ಅವಶ್ಯಕತೆ ಇತ್ತೇನೋ? ನಾಗರಾಜ ಯೋಚಿಸುತ್ತಿರುವಂತೆಯೇ ಕೆಳಗಡೆ ಏನೋ ಸದ್ದಾದಂತಾಗಿತ್ತು. ಕವಿದ ಕತ್ತಲೆಯಲ್ಲಿ ತನ್ನೊಳಗಿದ್ದ ಪ್ರಶ್ನೆಯನ್ನ ಗಡಿಬಿಡಿಯಲ್ಲೇ ಕೇಳಿದ.
“ಸೀತಾರಾಮ ಎಲ್ಲಿಗೆ ಹೋಗಿದ್ದಾನೆ?”
ಅಗೋಚರವಾದ ಕತ್ತಲಿನ ಒಡಲಿನ ಪಿಸುಧನಿಮಾತು ಕೇಳಿಸಿದಷ್ಟೇ. ‘ಸೀತಾರಾಮ ಬದುಕಿಲ್ಲ. ಅವನ ಕೊಲೆಯಾಗಿದೆ’.
ಉಕ್ಕಿಬಂದ ದುಃಖವನ್ನು ಹತ್ತಿಕ್ಕಿದ ಆ ಸ್ವರÀ ಮೆದುವಾದ ಹೆಜ್ಜೆ ಸಪ್ಪಳವಾಗಿ ಆ ಕತ್ತಲಿನಲ್ಲೆಲ್ಲೋ ಕರಗಿಹೋಗಿತ್ತು. ಥಟ್ಟನೆ ನಾಗರಾಜ ಸೆಟೆದು ಕೂತ. ಆ ಮಾತುಗಳನ್ನು ಕೇಳಿದ್ದೇ ಅವನ ನಿದ್ದೆಗಣ್ಣು ಹಾರಿ ಹೋಗಿತ್ತು. ಅರೆಪ್ರಜ್ಞಾವಸ್ಥೆಯಲ್ಲಿದ್ದ ಮನಸ್ಸು ಜಾಗೃತಗೊಂಡಿತ್ತು. ದೇಹವಿಡೀ ಬೆವರು ತೊಟ್ಟಿಕ್ಕತೊಡಗಿತ್ತು. ತಾನು ಕೇಳಿದ್ದು, ಕಂಡದ್ದು ನಿಜವೇ? ಕನಸೇ? ಎನ್ನುವುದನ್ನು ನಿರ್ಧರಿಸಲಾಗದಷ್ಟು ಭ್ರಾಂತನಾಗಿದ್ದ. ಕಣ್ಣುಗಳನ್ನು ಎದುರಿನ ಅವ್ಯಕ್ತದೆದುರು ಬರಿದೇ ಮುಚ್ಚಿ ತೆರೆಯುತ್ತಿದ್ದಂತೆ ಕತ್ತಲೆಯ ಪ್ರವಾಹವೇ ಕಣ್ಣಿನೊಳಕ್ಕೆ ನುಗ್ಗಿದಂತಿತ್ತು. ಸೀತಾರಾಮ ನಿಜಕ್ಕೂ ಕೊಲೆಯಾದನೇ? ತಾನು ಈ ತನಕ ಕಂಡದ್ದೆಲ್ಲ ವಾಸ್ತವವೇ? ಅವನ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಆದರೆ ನಡೆದದ್ದೆಲ್ಲ ಸತ್ಯ ಎನ್ನುವದನ್ನು ನಿರೂಪಿಸಬಲ್ಲದ್ದು ಅವನ ಎದುರಿನಲ್ಲೇ ಇತ್ತು. ಆಗಷ್ಟೇ ಆರಿ, ತುದಿಯಲ್ಲಿ ಕೆಂಪಗೆ ಹೊಗರುತ್ತ, ವಾಸನೆಯನ್ನು ಬೀರುತ್ತಿದ್ದ ಸೀಮೆಎಣ್ಣೆ ಬುಡ್ಡಿ ಸಂದು ಹೋದ ಘಟನೆ ಕನಸಲ್ಲ ಎನ್ನುವಂತಿತ್ತು.
ಆ ಹುಡುಗಿ ನಿಜಕ್ಕೂ ಶಂಕರಪ್ಪನ ಮಗಳು ಹೌದಾಗಿರಬಹುದೇ? ಅಥವಾ ಕ್ಷಣ ಕ್ಷಣಕ್ಕೂ ಚಿತ್ರ-ವಿಚಿತ್ರ ತಿರುವನ್ನ ಪಡೆಯುತ್ತಿರುವ ಅಗೋಚರ ಕಥಾನಕವೊಂದರ ಪಾತ್ರಧಾರಿಯೇ? ನಾಗರಾಜ ನಿಜವಾಗಿಯೂ ಕುಸಿದು ಹೋಗಿದ್ದ. ಅವನೆದುರು ಘಟಿಸುತ್ತಿದ್ದ ಸಂದರ್ಭಗಳ ತೀವ್ರತೆ ಹಾಗಿತ್ತು. ಅನೂಹ್ಯ ಜಗತ್ತಿನಿಂದ ಬಂದವರಂತಿದ್ದ ಅಪರಿಚಿತರು ಅವನೆದುರು ಇದ್ದಕ್ಕಿದ್ದಂತೆ ಪ್ರತ್ಯಕ್ಷರಾಗಿ ಜಂಘಾಬಲವನ್ನೇ ಉಡುಗಿಸುವಂತೆ ಮಾಡಿದರೆ ಅವನಾದರೂ ಏನು ಮಾಡಲು ಸಾಧ್ಯವಿತ್ತು? ಸುತ್ತಲೂ ಜಟಿಲವಾದ, ಕಗ್ಗಂಟಾಗುತ್ತ ಹೋದ ಈ ಉರುಳಿನಿಂದ ಹೇಗೆ ತಪ್ಪಿಸಿಕೊಳ್ಳುವುದು? ಸೀತಾರಾಮ ಬದುಕಿಲ್ಲ, ಮಾತ್ರವಲ್ಲ ಅವನ ಕೊಲೆಯಾಗಿದೆ ಅನ್ನುವುದೇ ಅವನ ಪ್ರಜ್ಞೆಗೆ ಬಲವಾದ ಆಘಾತವನ್ನೇ ಕೊಟ್ಟಿತ್ತು. ಯಾವುದಾದರೊಂದು ನಿಷ್ಕøರ್ಷೆಯಾಗಬೇಕೆಂದು ಹಠದಿಂದ ಕೂತಿದ್ದನೋ, ಆ ವಿಷಯವೇ ಸತ್ಯವಾಗಿ ಅವನೆದುರು ನಿಂತಾಗ ಅದನ್ನ ಎದುರಿಸುವ ಧೈರ್ಯವಾಗಲೀ, ತಾಕತ್ತಾಗಲೀ ನಾಗರಾಜನಿಗಿರಲಿಲ್ಲ. ಈ ಘಾತವನ್ನು ಸಹಿಸುವುದು ಸಾಧ್ಯವಿಲ್ಲ ಎನ್ನುವ ಹತಾಶೆಯಲ್ಲಿ ಗೆಳೆಯನೊಬ್ಬ ನಿಗೂಢವಾಗಿ ಕೂಲೆಯಾಗಿ ಹೋದ ದುಃಖದಲ್ಲಿ ಅವನ ಮನಸ್ಸು ಕದಡಿ ಹೋದಂತಾಗಿ ಕಣ್ಣುಮುಚ್ಚಿಕೂತ.
ಹೆಗಲಮೇಲೆ ಏನೋ ಸರಿದಾಡಿದಂತಾಗಿ ದಿಗ್ಗನೆ ಎಚ್ಚತ್ತು ಕಣ್ಣುಬಿಟ್ಟ. ಮಂಕಾದ ಲಾಟೀನು ಹಿಡಿದ ಶಂಕರಪ್ಪ ಕುಕ್ಕರಗಾಲಲ್ಲಿ ಕೂತು ಭುಜ ಸವರುತ್ತಿದ್ದರು. ಏನೋ ಹೇಳಲೆಂದು ಬಾಯಿ ತೆರೆದ ನಾಗರಾಜನ ಬಾಯಿಯ ಮೇಲೆ ಕೈಯಿಟ್ಟರು. ನಾಗರಾಜನಿಗಷ್ಟೇ ಕೇಳುವ ಸ್ವರದಲ್ಲಿ ‘ಮಾತನಾಡಬೇಡ’ ಎಂದು ಸನ್ನೆ ಮಾಡಿ ಮಾಳಿಗೆಯ ಮೂಲೆಗೆ ಕರೆದುಕೊಂಡು ಹೋದರು.
“ಈ ರಾತ್ರಿ ಬೆಳಗಾಗುವ ಮುಂಚೆ ನೀವು ಇಲ್ಲಿಂದ ಪರಾರಿಯಾಗಿ ಬಿಡಬೇಕು. ಇಲ್ಲವಾದರೆ ಸೀತಾರಾಮನಿಗಾದ ಗತಿಯೇ ನಿಮಗೂ. ನಿಮ್ಮಲ್ಲೊಂದು ವಿನಂತಿಯಿದೆ. ನಿಮಗೊಂದು ಜವಾಬ್ದಾರಿಯನ್ನು ವಹಿಸುತ್ತಿದ್ದೇನೆ. ನನ್ನ ಮಗಳನ್ನು ನಿಮ್ಮ ಜೊತೆಗೆ ಕರೆದುಕೊಂಡು ಹೋಗಿ. ಅವಳ ರಕ್ಷಣೆಯ ಭಾರ ನಿಮ್ಮದು. ಸೀತಾರಾಮನನ್ನು ಜೀವಕ್ಕಿಂತ ನಂಬಿದಳು; ಅವನಿಲ್ಲ. ಅವಳಿಗೆಂಥ ಅಪಾಯವಿದೆ ಅಂದರೆ ಈ ನೀಚರು ಏನು ಮಾಡಲು ಹೇಸುವದಿಲ್ಲ. ಅವಳಿಗೆಲ್ಲ ಗೊತ್ತು; ಅದೇ ತಪ್ಪಾಗಿದ್ದು. ನೀವು ಹೆದರಬೇಡಿ. ಸುರಕ್ಷಿತವಾದ ಜಾಗದ ತನಕ ತಲುಪಿಸುವ ವ್ಯವಸ್ಥೆ ಮಾಡಿದ್ದೇನೆ”.
ಬಡಬಡಿಸುವಂತೆ ಹೇಳಿದವರು ಯಾಕೋ ಸ್ವಲ್ಪ ತಡೆದರು. ಉದ್ವಿಘ್ನತೆಗೋ, ದುಃಖದಿಂದಲೋ ಅವರ ಗಂಟಲು ದಪ್ಪವಾಗಿ ಏರಿಳಿಯುತ್ತಿತ್ತು. ಆ ಮುಪ್ಪಿನ ಮುಖದಲ್ಲಿ ಕವಿದುಕೊಂಡ ಸಂಕಟದ ನೆರಳುಗಳು ಆ ಅಸ್ಪಷ್ಟ ಬೆಳಕಿನಲ್ಲೂ ಗೋಚರಿಸುತ್ತಿದ್ದವು.
“ನೀವು ಇಲ್ಲಿ ಹೇಗಿರ್ತೀರಾ? ನಾವು ಪರಾರಿಯಾದರೆ ನಿಮ್ಮನ್ನು ಸುಮ್ಮನೆ ಬಿಡ್ತಾರೆಯೇ?” ನಾಗರಾಜ ಆ ಹೊತ್ತಿಗಾಗಲೇ ಶಂಕರಪ್ಪನವರ ಬಗ್ಗೆ ತನ್ನಲ್ಲಿದ್ದ ಸಂಶಯದ ಭಾವನೆಯನ್ನ ಕಳೆದುಕೊಂಡು ಬಿಟ್ಟಿದ್ದ.
“ನಮ್ಮನ್ನ ಹಿಂಸಿಸುತ್ತಾರೆ ನಿಜ. ಆದರೆ ನಾವು ತಪ್ಪಿಸಿಕೊಳ್ಳುವ ತ್ರಾಣವಿಲ್ಲದವರು, ಈ ಬದುಕು ಸಾಕಾಗಿಬಿಟ್ಟಿದೆ. ಯಾವ ಪುರುಷಾರ್ಥಕ್ಕೆ ಇಲ್ಲಿಂದ ಓಡಿ ಹೋಗೋದು? ನಿಮಗೆ ಬಿಸಿರಕ್ತವಿದೆ. ಮುಂದೆ ಬದುಕುವ ಕಾಲವಿದೆ. ನೀವು ಇಂಥದರಿಂದ ಬಚಾವಾಗುತ್ತಲೇ ಹೋಗಬೇಕು. ನಮ್ಮಿಬ್ಬರ ಚಿಂತೆ ಬಿಡಿ. ಆದರೆ ನನ್ನ ಮಗಳನ್ನು ಮಾತ್ರ ಕೈಬಿಡಬೇಡಿ. ಅವಳಿಗೆ ನೀವೇ ದಿಕ್ಕು” ಎಂದವರೇ ಕಣ್ಣುಗಳಲ್ಲಿ ನೀರು ತುಳುಕಿಸಿದರು. ಮತ್ತೆ ಒಂದು ಕ್ಷಣಕ್ಕೆ ಸುಧಾರಿಸಿಕೊಂಡು ‘ನೀವು ಉಟ್ಟ ಬಟ್ಟೆಯಲ್ಲೇ ಹೊರಡಬೇಕು. ಅನವಶ್ಯಕ ಸಾಮಾನು ಬೇಡ. ಈಗ ಸದ್ದಿಲ್ಲದಂತೆ ಮೆಟ್ಟಿಲಿಳಿದು ಮನೆಯೆದರಿಗೆ ಕೂತ ಗಡವನಿಗೆ ತಿಳಿಯದ ಹಾಗೇ ಹಿತ್ತಲಬಾಗಿಲಲ್ಲಿ ಹೋಗಬೇಕು’ ಎಂದವರು ಹೆಜ್ಜೆ ಸಪ್ಪಳವಾಗದ ಹಾಗೆ ಬರುವಂತೆ ಸನ್ನೆ ಮಾಡಿದರು. ಸ್ವಲ್ಪ ತಡೆಯುವಂತೆ ಸೂಚಿಸಿ, ತನ್ನ ಬ್ಯಾಗ್‍ಗಳನ್ನು ಅಲ್ಲಿ ಬಿಟ್ಟು ಕ್ಯಾಮರಾವನ್ನು ಮಾತ್ರ ಎತ್ತಿಕೊಂಡು ನಾಗರಾಜ ಅವರನ್ನ ಹಿಂಬಾಲಿಸಿದ.
ಗಂವ್ ಎಂದು ಕವಿದ ಕತ್ತಲು, ರಭಸ ಕಡಿಮೆಯಾಗಿದ್ದರೂ ತೊಟ್ಟಿಕ್ಕುತ್ತಲೇ ಇದ್ದ ಮಳೆ, ಬೀಸುತ್ತಿದ್ದ ಗಾಳಿಯಲ್ಲೇ ದಿಕ್ಕುದೆಸೆಯಿಲ್ಲದ ಕಾಡಿನ ಮಧ್ಯೆ, ಕಾಲುದಾರಿಯಂತಿದ್ದಲ್ಲಿ ಅವರೆಲ್ಲಾ ಸರಸರ ಹೆಜ್ಜೆ ಹಾಕುತ್ತಿದ್ದರು, ಕಾಲಬುಡದಲ್ಲಿ ಮಾತ್ರ ಮಸುಕಾಗಿ ಬೀರುತ್ತಿದ್ದ ಲಾಟೀನು ಬೆಳಕಿನಲ್ಲಿ ಯಾವುದೋ ಅಸ್ಪಷ್ಟ ಲೋಕದೊಳಕ್ಕೆ ನಡೆಯುತ್ತಿದ್ದವನಂತೆ ನಾಗರಾಜ ನಡೆದ. ಅವನ ಮುಂದೆ ಶಂಕರಪ್ಪನವರ ವಿಶ್ವಾಸದ ಆಳೊಬ್ಬನಿದ್ದ. ಅವನೇ ಹೊಳೆಯಲ್ಲಿ ದೋಣಿಯ ಮೇಲೆ ದಾಟಿಸಿ ಬೆಳಗಾಗುವಷ್ಟರಲ್ಲಿ ತೀರ್ಥಹಳ್ಳಿಯ ಸೆರಗನ್ನಾದರೂ ತಲುಪಿಸುವ ಹೊಣೆ ಹೊತ್ತಿದ್ದ. ನಾಗರಾಜನ ಹಿಂದೆ ಶಂಕರಪ್ಪನವರ ಮಗಳು, ಅವಳನ್ನು ಗಮ£ಸಿ ನೋಡುವದಿರಲಿ, ಹೆಸರು ಕೂಡ ಇನ್ನೂ ಕೇಳಿರಲಿಲ್ಲ. ಅವಳ ಹಿಂದೆ ಶಂಕರಪ್ಪ. ಯಾರೂ ತುಟಿಪಿಟಕ್ಕೆನ್ನದೇ ನಡೆಯುತ್ತಿದ್ದರು; ಒಂದು ಹೊಸ ಜೀವನದತ್ತ. ಎದುರಾಗಲಿರುವ ಹಳೆಯದಾದರೂ ಹೊಸತಾಗುತ್ತಲೇ ಇರುವ ಜಗತ್ತಿನತ್ತ.
ಆ ಮಳೆ ಗಾಳಿ ಶಬ್ದದಲ್ಲೂ ಹರಿವ ನೀರಿನ ಬೋರಿಡುವ ಸದ್ದು ಕೇಳಿಸಿತು. ಸ್ವಲ್ಪದೂರ ನಡೆದದ್ದೇ ಉಕ್ಕಿಹರಿವ ನೀರು, ದಡದಲ್ಲಿದ್ದ ಗುಂಡನೆಯ ತೆಪ್ಪವೂ ಕಾಣಿಸಿತು. ಹಿಂದಿನಿಂದ ಶಂಕರಪ್ಪ ‘ನಿಲ್ಲಿ’ ಅಂದರು. ನಿತ್ರಾಣರಾದವರಂತೆ ತಡವರಿಸುತ್ತ ಮುಂದೆ ಬಂದು ಮಗಳ ಕೈಯನ್ನ ನಾಗರಾಜನ ಬಲಗೈಯಲ್ಲಿಟ್ಟು ಆಶೀರ್ವದಿಸುವಂತೆ ಕೈಯಾಡಿಸಿ “ಅದೃಷ್ಟವಿದ್ದರೆ ಮತ್ತೆ ನೋಡೋಣ. ಇಲ್ಲವಾದರೆ ಇದೇ ಕೊನೆ” ಅಂದರು. ತಕ್ಷಣ ‘ಬೇಗ ಬೇಗ’ ಎಂದು ಅವಸರಿಸಿ ಆಳಿನ ಜೊತೆ ಇವರಿಬ್ಬರನ್ನೂ ತೆಪ್ಪದ ಮೇಲೆ ಕೂರಿಸಿ ಹುಟ್ಟುಹಾಕುವಂತೆ ಆಳಿಗೆ ಹೇಳಿ ತಾವು ಹಿಂದೆ ಸರಿದು £ಂತರು. ಕ್ರಮೇಣ ದೂರವಾಗುತ್ತÀ, ಕ್ಷೀಣವಾಗುತ್ತಾ ಬಂದ ಅವರ ಕೈಯಲ್ಲಿದ್ದ ಲಾಟೀನಿನ ಬೆಳಕನ್ನು ನಾಗರಾಜ ಮತ್ತು ಆ ಹುಡುಗಿ ಮಂಜಾದ ದೃಷ್ಟಿಯಿಂದ ನೋಡುತ್ತಲೇ ಇದ್ದರು.
– ಗಂಗಾಧರ ಕೊಳಗಿ
ಇಂದಿರಾ ನಗರ
ಸಿದ್ದಾಪುರ(ಉ.ಕ.) 581355
(ಗಂಗಾಧರ ಕೊಳಗಿ ಪತ್ರಕರ್ತರು, ಕೃಷಿ, ಸಾಹಿತ್ಯ ಅವರ ಹವ್ಯಾಸ.ಐದು ಪುಸ್ತಕಗಳು ಅವರ ಬತ್ತಳಿಕೆಯಲ್ಲಿವೆ. ಅವುಗಳಲ್ಲಿ ಎರಡು ಕಾದಂಬರಿಗಳು)

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *