

ಇಂದಿನ ಸುದ್ದಿಗಳು-
ವಿದ್ಯುತ್ ಹರಿದು ಸಾವು-
ಸಿದ್ಧಾಪುರ ತಾಲೂಕಿನ ಹುಣಸೆಕೊಪ್ಪಾ ಗ್ರಾಮದ ಕಲ್ಕಟ್ಟಿ ಕರಮನೆ ಸುಬ್ರಾಯ ಹೆಗಡೆಯವರ ತೋಟಕ್ಕೆ ಅಳವಡಿಸಿದ್ದ ವಿದ್ಯುತ್ ತಂತಿ ತಾಕಿದ ಪರಿಣಾಮ ಅದೇ ಗ್ರಾಮದ ವಿಷ್ಣು ರಾಮಾ ಗೌಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಬಗ್ಗೆ ವಿಷ್ಣು ಗೌಡರ ತಂದೆ ರಾಮಾ ಸುಬ್ಬಾ ಗೌಡ ಸಿದ್ಧಾಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾನಗೋಡು ಗ್ರಾ.ಪಂ. ಕಾರ್ಯದರ್ಶಿ ನಿಧನ-
ಸಿದ್ಧಾಪುರ ತಾಲೂಕಿನ ಬೈಲಳ್ಳಿಯ ವಾಸಿ ಕಾನಗೋಡು ಗ್ರಾ.ಪಂ.ಕಾರ್ಯದರ್ಶಿ ಬಾಲಕೃಷ್ಣ ದಿಢೀರ್ ಅನಾರೋಗ್ಯದಿಂದ ಸಾವನ್ನಪ್ಪಿದ್ದಾರೆ.
ಬಾಲಕೃಷ್ಣ ಕನ್ನಾ ನಾಯ್ಕ ಹಂಗಾಮಿ ನೌಕರರಾಗಿ ಕೆಲಸ ಮಾಡಿ ಒಂದೂವರೆ ವರ್ಷದ ಕೆಳಗೆ ಖಾಯಂ ನೌಕರರಾಗಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿದ್ದರು.
ಮೃತರು 2 ವರ್ಷದ ಮಗಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇಂದು ಮಧ್ಯಾಹ್ನ ಅಂತಿಮ ವಿಧಿ ವಿಧಾನಗಳ ಮೊದಲು ತಾ.ಪಂ. ಅಧಿಕಾರಿಗಳು, ತಹಸಿಲ್ಧಾರರು,ಜನಪ್ರತಿನಿಧಿಗಳು, ನೌಕರರ ಸಂಘ ಮತ್ತು ಗ್ರಾಮಾಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಸಂಘದ ಪ್ರಮುಖರು ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ನವವಿವಾಹಿತರಿಗೆ ಕಿರುಕುಳ ಆರೋಪ-
ಇತ್ತೀಚೆಗೆ ಕಾನೂನು ಬದ್ಧವಾಗಿ ಮದುವೆಯಾದ ದಂಪತಿಗಳಿಗೆ ಜಾತಿ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿದೆ ಎಂದು ಸಿದ್ಧಾಪುರದ ದಲಿತ ಮುಖಂಡರು ದೂರಿದ್ದಾರೆ.
ಅವರಗುಪ್ಪಾದ ವರ ಮಹೇಶ್ ಹರಿಜನ ಮತ್ತು ಚಪ್ಪರಮನೆ ಭವಾನಿ ರಾಜಾರಾಮ ಹೆಗಡೆ ಕಾನೂನುಬದ್ಧ ಮದುವೆಯಾಗಿದ್ದು ಕೆಲವು ಪಕ್ಷ, ಮತ್ತು ಜಾತಿಯ ಮುಖಂಡರು ಈ ನವದಂಪತಿಗಳಿಗೆ ಕಿರುಕುಳ ನೀಡುತ್ತಿದ್ದು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

