ಕರ್ನಾಟಕ ವಿದ್ಯುಚ್ಛಕ್ತಿ ನಿಗಮ ನಡೆಸುತ್ತಿರುವ ಮಾಸಿಕ ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ಕಾಟಾಚಾರದ ಕಾರ್ಯಕ್ರಮಗಳಾಗು ತ್ತಿರುವ ಅಂಶ ಬೆಳಕಿಗೆ ಬಂದಿದೆ.
ಸಿದ್ಧಾಪುರ ತಾಲೂಕು, ಉತ್ತರಕನ್ನಡ ಜಿಲ್ಲೆ ಸೇರಿದ ಕರ್ನಾಟಕದಾದ್ಯಂತ ನಾನಾ ವಿಭಾಗಗಳಾಗಿ ವಿಸ್ತರಿಸಿರುವ ಹೆಸ್ಕಾಂ, ಬೆಸ್ಕಾಂ, ಮೆಸ್ಕಾಂಗಳಲ್ಲಿ ಪ್ರತಿತಿಂಗಳು ನಿಗದಿತ ದಿನಗಳಂದು ಗ್ರಾಹಕರ ಅದಾಲತ್ ಮತ್ತು ಸಂವಾದ ಸಭೆಗಳು ನಡೆಯುತ್ತಿವೆ.
ಈ ಅದಾಲತ್ ಮತ್ತು ಸಂವಾದಸಭೆಗಳಿಗೆ ಗ್ರಾಹಕರೇ ಬರದಿರುವುದರಿಂದ ಸಭೆ,ಸಂವಾದ ಯಾರೊಂದಿಗೆ ಮಾಡುವುದು? ಹೀಗಾಗಿ ಈ ಯೋಜನೆ ವಿಫಲವಾಗುತ್ತಿದೆ. ಕಳೆದ ಶನಿವಾರ ಜು.20 ರಂದು ನಿಗದಿಯಂತೆ ಮುಂಜಾನೆ ಗ್ರಾಹಕರ ಅದಾಲತ್ ಮತ್ತು ಸಾಯಂಕಾಲ ಸಂವಾದ ಸಭೆಗಳಿದ್ದವು. ಆದರೆ ಈ ಎರಡೂ ನಿಗದಿತ ಕಾರ್ಯಕ್ರಮಗಳಿಗೆ ಜನರೇ ಇರಲಿಲ್ಲ.
ಮುಂಜಾನೆ ವೇಳೆ ದೂರು ಹೊತ್ತು ಬಂದ ಏಕೈಕ ಗ್ರಾಹಕ ಸಿಬ್ಬಂದಿಗಳು ಮತ್ತು ವ್ಯವಸ್ಥೆಯ ಲೋಪದ ಬಗ್ಗೆ ದೂರುತಿದ್ದುದು ಬಿಟ್ಟರೆ, ಬೇರೆ ಯಾವ ಗ್ರಾಹಕರ ಮುಖಗಳೂ ಸಿದ್ಧಾಪುರ ಹೆಸ್ಕಾಂ ಉಪವಿಭಾಗೀಯ ಕಚೇರಿ ಎದುರು ಕಾಣಲಿಲ್ಲ. ಹಾಗೆಂದು ಸಿದ್ಧಾಪುರದಲ್ಲಿ ವಿದ್ಯುತ್ ಸಮಸ್ಯೆಗಳೇ ಇಲ್ಲವೇನೆಂದೇನಿಲ್ಲ, ಆದರೆ ಗ್ರಾಹಕರಿಗೆ ನಿರಾಸಕ್ತಿ. ಕಟ್ಟೆಮೇಲೆ ಕೂತು, ಸಂಬಂಧಿಸಿರದ ಪ್ರದೇಶ, ಸಮಯಗಳಲ್ಲಿ ಕೆ.ಇ.ಬಿ., ಹೆಸ್ಕಾಂ ಬಗ್ಗೆ ದೂರುವವರು ಅವರದೇ ವೇದಿಕೆಗಳಾದ ಸಂವಾದ ಸಭೆ,ಗ್ರಾಹಕರ ಅದಾಲತ್ ಗಳಿಗೆ ಬಂದಿರುವುದಿಲ್ಲ.
ಜನಪ್ರತಿನಿಧಿಗಳು ಗ್ರಾಮಸಭೆ,ತಾಲೂಕಾ ಪಂಚಾಯತ್ ಮಾಸಿಕ ಸಭೆಗಳಲ್ಲಿ ಇಂಥ ವಿಚಾರ, ಮಾಹಿತಿ ಪಡೆದಿರುತ್ತಾರೆ. ಆದರೆ ನಿಗದಿತ ಗ್ರಾಹಕರ ಅದಾಲತ್ ಮತ್ತು ಗ್ರಾಹಕರ ಸಂವಾದ ಸಭೆಗಳಲ್ಲಿ ಜನಪ್ರತಿನಿಧಿಗಳೂ ಕಾಣಸಿಗುವುದಿಲ್ಲ. ಅಧಿಕಾರ, ಅನುಕೂಲ, ಜಾತಿ-ಧರ್ಮಗಳ ಕಾರಣಕ್ಕೆ ಆಯ್ಕೆಯಾಗುವ ಇಲ್ಲಿಯ ಶಾಸಕರು, ಸಂಸದರನ್ನಂತೂ ಕಾಣುವುದು ಹಾಗಿರಲಿ, ಕೇಳುವ ಹಾಗೂ ಇಲ್ಲ. ಸಿದ್ಧಾಪುರದ ಕೋಲಶಿರ್ಸಿ, ಬೇಡ್ಕಣಿ ಪಂಚಾಯತ್ ಗಳಲ್ಲಿ ಹೆಸ್ಕಾಂ ಉಳ್ಳವರಿಗೊಂದು ನ್ಯಾಯ, ಇಲ್ಲದವರಿಗೊಂದು ನ್ಯಾಯ ಎನ್ನುವ ಪಕ್ಷಪಾತ ಮಾಡಿ ಕೆಲವರಿಗಷ್ಟೆ ನಗರದ ವಿದ್ಯುತ್ ಸಂಪರ್ಕ, ಹಲವರಿಗೆ ಗ್ರಾಮೀಣ ಸಂಪರ್ಕದ ತಾರತಮ್ಯ ಮಾಡುತ್ತಿದೆ.
ಆದರೆ ಈ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು,ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರು ಕೂಡಾ ಧ್ವನಿ ಎತ್ತುತ್ತಿಲ್ಲ. ಜನಪ್ರತಿನಿಧಿಗಳು, ಸಾರ್ವಜನಿಕರ ಈ ಅನಾಸಕ್ತಿಯಿಂದಾಗಿ ತಾಲೂಕಿನಲ್ಲಿ ಬಹುತೇಕ ದಿನಗಳಲ್ಲಿ ವಿಶೇಶವಾಗಿ ಮಳೆಗಾಲದಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ನಿರಂತರ ಆದರೆ ಗ್ರಾಹಕರು, ಜನಪ್ರತಿನಿಧಿಗಳು ಜವಾಬ್ಧಾರಿ ವಹಿಸದ ಪರಿಣಾಮ ಹೆಸ್ಕಾಂ ಗೆ ಮಲಗುವವರಿಗೆ ಹಾಸಿಗೆ ಹಾಸಿ ಕೊಟ್ಟಂತಾಗಿದೆ.
ಶಿರಸಿ-ಸಿದ್ಧಾಪುರದ ಜನರಿಗೆ ಸಮಸ್ಯೆಗಳು, ಅಧಿಕಾರಿಗಳು, ಜನಪ್ರತಿನಿಧಿಗಳನ್ನು ಸಹಿಸಿಕೊಂಡು ರೂಢಿಯಾಗಿದೆ ಹಾಗಾಗಿ ಅವರು ಇಂಥದ್ದಕ್ಕೆಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುವ ಅಭಿಪ್ರಾಯವಿದೆ. ಹೆಸ್ಕಾಂ ವಿಚಾರದಲ್ಲಂತೂ ಇದು ಸತ್ಯವಾಗಿದೆ. ಜನರಿಗೇ ಬೇಡದ ಅನುಕೂಲ, ಸೌಲಭ್ಯ,ಸೌಲತ್ತುಗಳ ಬಗ್ಗೆ ಹೊರಗಿನವರು ಎಷ್ಟು ಹೇಳಿದರೂ, ಬರೆದರೂ, ಮಾತನಾಡಿದರೂ ವ್ಯರ್ಥ ಎನ್ನುವ ನಿರಾಶಾವಾದ ಹೆಚ್ಚುವಂತಾಗಿದೆ.
ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!
ಸಿದ್ಧಾಪುರ ಹುಸೂರು ನಿಪ್ಲಿ ಜಲಪಾತದ ಬಳಿ ಅನುಚಿತವಾಗಿ ವರ್ತಿಸಿದರೆಂಬ ಆರೋಪದ ಮೇಲೆ ನಾಲ್ವರು ಯುವಕರನ್ನು ಸ್ಥಳಿಯ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭಿಸಿದೆ.
ಜೋಗ, ಹುಸೂರು, 16 ನೇ ಮೈಲ್‍ಕಲ್ ತುಂಬರಗೋಡು, ಕಾಳೇನಳ್ಳಿ ಶೀರಲಗದ್ದೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಜಲಪಾತಗಳಿಗೆ ತೆರಳುವ ಯುವಕರಿಗೆ ಇದು ಮುನ್ನೆಚ್ಚರಿಕೆ. ಪ್ರವಾಸಿಗಳೇ ಪೊಲೀಸರಿದ್ದಾರೆ ಎಚ್ಚರಿಕೆ!