

ಜಲ,ಮರ,ಗಾಳಿ,ಬೆಟ್ಟಗಳನ್ನು ಬಳಸಿ ಸಾಹಸ ಪ್ರದರ್ಶಿಸುವ ರೋಮಾಂಚಕಾರಿ ಕ್ರೀಡೆಗೆ ಈಗ ಎಲ್ಲೆಡೆ ಮನ್ನಣೆ. ಇಂಥ ಸಾಹಸಗಳ ಕಾರಣದಿಂದ ಪ್ರಖ್ಯಾತವಾದ ಸ್ಥಳಗಳಲ್ಲಿ ಹೊನ್ನೆಮರಡು ಒಂದು.
ಶಿವಮೊಗ್ಗ ಮತ್ತು ಉತ್ತರಕನ್ನಡ ಜಿಲ್ಲೆಯ ಗಡಿಯಲ್ಲಿರುವ ಈ ಹೊನ್ನೆಮರಡು ಜಲಸಾಕ್ಷರತೆ,ಜಲಸಾಹಸ ಸೇರಿದ ಪಾಕೃತಿಕ ಆಕರ್ಷಣೆ ಮತ್ತು ಜ್ಞಾನದ ಕೇಂದ್ರ. ಇಂಥ ಕೇಂದ್ರ ಕಟ್ಟಿರುವ ಸ್ವಾಮಿ ದಂಪತಿಗಳು ಈ ಹೊನ್ನೆಮರುಡುವಿನ ಮೂಲಕ ಈ ಭಾಗದ ಪ್ರಕೃತಿ, ಪರಿಸರವನ್ನು ವಿಶ್ವಕ್ಕೆ ಪರಿಚಯಿಸಿದವರು. ಜಲಸಾಹಸದ ತರಬೇತಿ, ಚಾರಣ ಶಿಬಿರಗಳನ್ನು ನಡೆಸುವ ಸ್ವಾಮಿ,ಅವರ ನಿಷ್ಠೂರತೆ,ಸರಳತೆಗೆ ಪ್ರಸಿದ್ಧರು. ಇವರ ಪತ್ನಿ ನೊಮಿಟೋ. ನೊಮಿಟೋ ಜಲಸಾಹಸ ಯಾತ್ರೆಗೆ ಈಗ ಬೆಳ್ಳಿ ಹಬ್ಬದ ಹರ್ಷ. ಸ್ವಾಮಿಯವರೊಂದಿಗೆ ಸೇರಿ ನೊಮಿಟೋ ಹೊನ್ನೆಮರಡುವಿನಲ್ಲಿ ಜಲಸಾಹಸ ಶಿಬಿರಗಳು ಹೊರಗಡೆ ಸೈಕಲ್ ಯಾನ ನಡೆಸುತ್ತಾರೆ ಎಂಬುದು ಹೊರಜಗತ್ತು ನೋಡಿರುವ ಸತ್ಯ, ವಾಸ್ತವವೇನೆಂದರೆ ನೊಮಿಟೋ ಪ್ರಾರಂಭಿಸಿದ, ಪ್ರಾರಂಭಿಸುವ ಈ ಸಾಹಸದ ಯೋಚನೆ,ಯೋಜನೆಗಳನ್ನು ಹೊತ್ತೊಯ್ಯುವವರು ಅವರ ಪತಿ ಸ್ವಾಮಿ. ಕಳೆದ ಎರಡೂವರೆ ದಶಕಗಳಿಂದ ಹೊನ್ನೆಮರಡು ಕೇಂದ್ರವಾಗಿಸಿಕೊಂಡು ಈ ದಂಪತಿಗಳು ನಡೆಸಿರುವ ಸಾಹಸಗಳ ಚರಿತ್ರೆ ದೊಡ್ಡದು. ತಂಡಮಾಡಿಕೊಂಡು ನದಿಗುಂಟ ಸಾಗುವುದು, ಕಾಡು, ನೆಲ, ಜಲಗಳ ‘ಅರಿವು’ ತಿಳಿಸುವ ಜೊತೆಗೆ ಅವುಗಳ ಸಂರಕ್ಷಣೆಗೆ ಸ್ವಾಮಿ ದಂಪತಿಗಳು ಮಾಡುವ ಕೆಲಸ ಒಂದು ಹೋರಾಟ.
ಈ ದಂಪತಿಗಳ ಈ ಕೆಲಸ, ಸಾಹಸ ನೋಡಿ ಕಾಡಿನ ಮೂಲೆ ಹೊನ್ನೆಮರುಡುವಿಗೆ ದೇಶವಿದೇಶಗಳಿಂದ ಬಂದ ಜನರಿದ್ದಾರೆ. ಯಾರೇ ಬರಲಿ ಪ್ಲಾಸ್ಟಿಕ್, ಕಸ, ರಗಳೆ, ಇತ್ಯಾದಿ ನಿಷೇಧ. ಕಾಡನ್ನು ಅರಿಯುವವರು ಸಹಜ, ಸರಳ ಇರಬೇಕೆಂದು ಬಯಸುವ ಈ ದಂಪತಿಗಳು ಈ ಭಾಗಕ್ಕೆ ಸ್ವಚ್ಛ, ಶುದ್ಧ ಪರಿಸರದ ಅರಿವನ್ನು ಮೂಡಿಸಿದ್ದಾರೆ. ಹೀಗೆ ದಾಖಲೆಗೆ ಸಿಗುವ, ಸಿಗಲಾರದ ಅನೇಕ ಬದ್ಧತೆಯ ಕೆಲಸಮಾಡುವ ಈ ಸ್ವಾಮಿ ದಂಪತಿಗಳನ್ನು ಅವರ ಕೆಲಸ ಸಾಧನೆಗಳಿಗಾಗಿ ನಾಡಿನ ಅನೇಕ ಸಂಸ್ಥೆಗಳು ಗುರುತಿಸಿವೆ. ಕಳೆದ ವರ್ಷ ನೊಮಿಟೋ ಕೇಂದ್ರ ಸರ್ಕಾರದ ನಾರೀಶಕ್ತಿ ಗೌರವ ಪುರಸ್ಕಾರ ಪಡೆಯುವ ಮೂಲಕ ಕೇಂದ್ರ ನೊಮಿಟೋ ರನ್ನು ಗುರುತಿಸಿದೆ. ಚಿತ್ರದುರ್ಗದ ಮುರಘಾಮಠ ನೀಡುವ ಪ್ರತಿಷ್ಠಿತ ಬಸವಶ್ರೀ ಪ್ರಶಸ್ತಿ ಹೊನ್ನೆಮರಡು ಸ್ವಾಮಿಯವರಿಗೆ ದೊರೆತಿದೆ. ಹೊನ್ನೆಮರುಡುವನ್ನು ಜಗತ್ತಿಗೆ ಪರಿಚಯಿಸಿದ ಈ ದಂಪತಿಗಳನ್ನು ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳು ಅಭಿನಂದಿಸಿ,ಗೌರವಿಸುವ ಮೂಲಕ ಜಗತ್ತಿಗೆ ಪರಿಚಯಿಸಿವೆ.ಮಲೆನಾಡಿನ ಪರಿಸರ, ಕಲೆ, ವೈಶಿಷ್ಟ್ಯ, ಅನನ್ಯತೆಗಳನ್ನು ಜಗತ್ತಿಗೆ ಪರಿಚಯಿಸಿ ಆಮೂಲಕ ಸ್ಥಳಿಯ ಆಸಕ್ತರೂ ಆದಾಯ, ಅಭಿನಂದನೆ, ವೃತ್ತಿ ಮಾಡುವಂತೆ ಪ್ರೇರೇಪಿಸಿದ ನಿಜ ನಾರೀಶಕ್ತಿ ನೊಮಿಟೋ ಮತ್ತು ಸ್ವಾಮಿ(ಜಿ.ಎನ್.) ದಂಪತಿಗಳಿಗೆ ಸಮಾಜಮುಖಿ ಅಭಿನಂದಿಸುತ್ತದೆ. (ಸಾಗರದ ಹೊನ್ನೆಮರಡು ಸಾಗರದಿಂದ 20.ಕಿ.ಮೀ. ಸಿದ್ಧಾಪುರದಿಂದ 14 ಕಿ.ಮೀ. ಜೋಗದಿಂದ 15 ಕಿ.ಮೀ.ಒಳಗೆ) ಸಂಪರ್ಕ ಸಂಖ್ಯೆ-9448485508


