ಮಳೆನಿಂತುಹೋದಮೇಲೆ!-ಭಾಗ-04
ಗ್ರಾಮಸ್ಥರು ನೆರೆಹೊರೆಯ ಹಳ್ಳಿಜನರಿಂದ ಸಿದ್ಧವಾಯ್ತು ಸೇತುವೆ
ಶರಾವತಿ ಮತ್ತು ವರದಾ ಸೇರಿದಂತೆ ಕೆಲವು ನದಿಗಳ ನೀರು, ಹಿನ್ನೀರು, ಶಿವಮೊಗ್ಗ ಜಿಲ್ಲೆಗೆ ವರ ಮತ್ತು ಶಾಪ.
ಬೇಸಿಗೆಯಲ್ಲಿ ಈ ನೀರು ಜೀವಜಲವಾದರೆ, ಮಳೆಗಾಲದಲ್ಲಿ ಮುಳುಗಿಸುವ ಶಾಪವಾಗಿ ಪರಿಣಮಿಸುತ್ತದೆ. ಗ್ರಾಮದ ಸಂಪರ್ಕ ಸೇತುವೆಯಂತಿದ್ದ ರಸ್ತೆಯೊಂದು ತುಂಡಾಗಿ ಗ್ರಾಮವೊಂದು ಬೇರ್ಪಟ್ಟ ಸುದ್ದಿ-ಚಿತ್ರಗಳು ಆಗಷ್ಟ್ 2 ನೇ ವಾರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಆ ಚಿತ್ರನೋಡಿದ ಅನೇಕರಿಗೆ ಆಶ್ಚರ್ಯವಾಗಿತ್ತು. ಆದರೆ ಬಹುತೇಕ ಜನರಿಗೆ ಆ ಚಿತ್ರಗಳು ಸಾಗರ ತುಮರಿ ಬಳಿಯ ಶಿವಮೊಗ್ಗ ಜಿಲ್ಲೆಯ ಕರೂರು ಹೋಬಳಿ ಬ್ರಾಹ್ಮಣ ಕೆಪ್ಪಿಗೆಯ ಕಲ್ಕಟ್ಟು ಗ್ರಾಮದ ಸಂಪರ್ಕ ಸೇತುವೆ, ರಸ್ತೆ ಎಂಬುದು ಸ್ಫಷ್ಟವಿರಲಿಲ್ಲ.
ವಿಶೇಶವೆಂದರೆ….. ಈ ಗ್ರಾಮದ ಸಂಪರ್ಕ ಸೇತುವೆ, ರಸ್ತೆ ತುಂಡಾದ ಬಗ್ಗೆ ಸ್ಥಳಿಯರು ಅಧಿಕಾರಿಗಳು, ಶಾಸಕರು, ಮಾಜಿ ಸಚಿವರೆಲ್ಲರಿಗೂ ಮನವಿ ಮಾಡಿದರು. ಆದರೆ ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ಶೀಘ್ರ ಪರಿಹಾರ, ಪರ್ಯಾಯ ವ್ಯವಸ್ಥೆ ಮಾಡಲಾಗಲೇ ಇಲ್ಲ. ಈ ಜನ ಬೇರೆಯವರಂತೆ ಸರ್ಕಾರ, ವ್ಯವಸ್ಥೆ ಹಳಿಯುತ್ತಾ ಕುಳಿತುಕೊಳ್ಳಲಿಲ್ಲ. ಗ್ರಾಮಸ್ಥರು, ಅಕ್ಕ-ಪಕ್ಕದ ಗ್ರಾಮದ ಜನರೆಲ್ಲಾ ಸೇರಿ ಲಭ್ಯ ಸ್ಥಳಿಯ ಸಂಪನ್ಮೂಲ, ಮಾನವಶಕ್ತಿ, ಪರಿಣತಿ ಬಳಸಿಕೊಂಡು ಕಿರುಸೇತುವೆಯನ್ನು ನಿರ್ಮಿಸಿಬಿಟ್ಟರು.
ಕಚ್ಚಾವಸ್ತು,ಕೂಲಿ ಎಲ್ಲಾ ಸೇರಿ ಲಕ್ಷಾಂತರ ಸುರಿದು ಮಾಡಿಕೊಳ್ಳಬೇಕಾದ ತಾತ್ಕಾಲಿಕ ವ್ಯವಸ್ಥೆಯ ಸೇತುವೆಯನ್ನು ಸ್ಥಳಿಯರೇ ಸಂಘಟಿತರಾಗಿ ನಿರ್ಮಿಸಿಕೊಂಡರು. ವಾರದ ಹಿಂದೆ ಮಳೆಯಿಂದ ಮುರಿದು ಹೋಗಿದ್ದ ಸೇತುವೆ ನೋಡನೋಡುತ್ತಲೇ ಕಾಲು ಲಕ್ಷದ ಕರ್ಚಿನಲ್ಲಿ ನಿರ್ಮಾಣವಾಯಿತು. ಸೇತುವೆ ನಿರ್ಮಿಸಿಕೊಂಡವರೇ ಸಿಹಿ ವಿತರಿಸಿ ಸಂಬ್ರಮಿಸಿದರು. ನೈಸರ್ಗಿಕ, ಸಹಜ ವಿಪತ್ತುಗಳ ಸಮಯದಲ್ಲಿ ಸ್ಥಳಿಯರು ತೋರಬಹುದಾದ ಸಮಯಪ್ರಜ್ಞೆ,ಜವಾಬ್ಧಾರಿ ಕರ್ತವ್ಯಗಳಿಗೆ ಕಲ್ಕಟ್ಟು ಗ್ರಾಮ ರಾಜ್ಯಕ್ಕೇ ಮಾದರಿಯಾಯಿತು. ಎಂದಿನಂತೆ ಪೊಲೀಸರು, ಪತ್ರಕರ್ತರು, ರಾಜಕಾರಣಿಗಳು ಆಮೇಲೆ ಬಂದು ಫೊಟೊ, ಸೆಲ್ಫಿ ಕ್ಲಿಕ್ಕಿಸಿಕೊಂಡರು. ಅಂದಹಾಗೆ ಈ ಕಿರುಸೇತುವೆಯ ಏಕೈಕ ಸಂಪರ್ಕದಿಂದಲೇ ಜಗತ್ತಿನೊಂದಿಗೆ ಸಂಪರ್ಕ-ಸಂಬಂಧ ಹೊಂದಿರುವ ಕಲ್ಕಟ್ಟುವಿನ ಕುಟುಂಬಗಳ ಸಂಖ್ಯೆ 15.