ಗಾಂಜಾ ಗ್ಯಾಂಗ್!


ಒಂದು ದಿನ ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊರ್ವರು ಗಿರಿಧರನನ್ನು ಹುಡುಕಿಕೊಂಡು ಬಂದರು.
ಯಾರ್ಯಾರನ್ನೋ ಕೇಳಿಕೊಂಡು ಅವನ ಚಿಕ್ಕದಾದ ಆಫೀಸನ್ನು ಗೊತ್ತು ಹಚ್ಚಿ ಒಳನುಗ್ಗಿದ ಆವರೆಗೂ
ಕಂಡಿರದ ಮನುಷ್ಯ ಅವನ ಹೆಸರು ಕೇಳಿ ಗಿರಿಧರ ಹೌದೆನ್ನುವದು ಖಾತರಿಪಡಿಸಿಕೊಂಡು „ ನಿಮ್ಮ
ಹತ್ರ ತುಂಬಾ ಸಿಕ್ರೇಟ್ ಆದ ವಿಷಯ ಮಾತಾಡೋದಿದೆ‟ ಎಂದಾಗ ಗಿರಿಧರ ಹೌಹಾರಿಬಿಟ್ಟ.
ಈ ಥರ „ಸಿಕ್ರೇಟ್‟ ಆದ ವಿಷಯಗಳನ್ನು ಮಾತಾಡಿ ಪಜೀತಿಯಲ್ಲಿ ಸಿಕ್ಕಾಕಿಕೊಂಡ
ಕಹಿ ಅನುಭವಗಳು ಅವನಿಗೆ ಸಾಕಷ್ಟಾಗಿದ್ದವು. ಮಾತಾಡುವಾಗ ತಮ್ಮ ಸ್ವಂತ ವಿಷಯವೆಂಬಂತೆ
ಮಾತಾಡಿದವರು ನಂತರದಲ್ಲಿ ಆ ಕುರಿತು ಬೇರೊಬ್ಬರ ಬಳಿ ಹೇಳುವಾಗ ಸುಮ್ಮನೆ ಅವರ
ಮಾತಿಗೆ ತಲೆ ಹಾಕುತ್ತ ಕೇಳಿಸಿಕೊಂಡ ಗಿರಿಧರನೇ ಹೇಳಿದ್ದು ಎನ್ನುವಂತೆ ತಮ್ಮ
ಅಭಿಪ್ರಾಯಗಳನ್ನು ಅವÀನ ಮೇಲೆ ಹೇರಿ ಗೋಟಾವಳಿಗೆ ಸಿಕ್ಕಿಸಿದ ಸಾಕಷ್ಟು ನಿದರ್ಶನಗಳಿದ್ದವು.
ಈ ಥರದ ಗುಟ್ಟಿನ ವಿಷಯಗಳು ನಂತರದಲ್ಲಿ ಊರ ತುಂಬಾ ಹೇಗೆ ಸುದ್ದಿಯಾಗುತ್ತದೆ ಎಂದು
ಗೊತ್ತಾದ ನಂತರದಲ್ಲಿ ಯಾರಾದರೂ ಕಿವಿ ಕಚ್ಚಲು ಬಂದರೆ ಗಿರಿಧರ ಕಂಗಾಲಾಗಿಬಿಡುತ್ತಿದ್ದ.
ಹತ್ತು ಹಲವು ಬಾರಿ ಅಂಥಹ ತಲೆಮೇಲೆ ಬರುವ ಪರಿಸ್ಥಿತಿಗಳ ಅನುಭವ
ಅವನಿಗಾಗಿರುವಾಗ ಕಾಣದ, ಕೇಳದ ವ್ಯಕ್ತಿಯೊಬ್ಬ ಬಂದು ತನ್ನ ಪರಿಚಯವನ್ನೂ ಹೇಳಿಕೊಳ್ಳದೇ
ಏಕಾಏಕಿ „ಸಿಕ್ರೇಟ್ ಆಗಿ ಮಾತಾಡಬೇಕು‟ ಅಂದರೆ ಗಿರಿಧರನ ಪರಿಸ್ಥಿತಿ ಏನಾಗಿರಬೇಡ!
ತೆಳ್ಳಗೆ ಉದ್ದಕ್ಕಿದ್ದ ದೇಹದ, ಕೋಲು ಮುಖದ ಸುಮಾರು ಅರವತ್ತು ವರ್ಷದ ಸನಿಹವಿದ್ದ
ಎದುರು ಬಂದ ಆ ವ್ಯಕ್ತಿಯನ್ನು ಗಿರಿಧರ ಯಾರಾಗಿರಬಹುದು ಎಂದು ಊಹಿಸಿಕೊಳ್ಳಲು
ಯತ್ನಿಸಿದ. ಹಿಂದೆ ಯಾವಾಗಲಾದರೂ ನೋಡಿದ್ದೇನಾ? ಎಂದು ನೆನಪು ಮಾಡಿಕೊಳ್ಳಲು
ಪ್ರಯತ್ನಿಸಿದ.
ಇತ್ತೀಚೆಗೆ ಅವನಿಗೆ ಯಾವುದೇ ಅಪರಿಚಿತರನ್ನು ನೋಡಲಿ ಇವರನ್ನು ಹಿಂದೆಲ್ಲೋ ನೋಡಿರಬೇಕಲ್ಲ
ಎನ್ನಿಸುವದು, ಅಥವಾ ಯಾವುದೋ ಹೊಸ ಸುದ್ದಿಯನ್ನು ಕೇಳಲಿ ಇದನ್ನು ಮೊದಲೊಮ್ಮೆ
ಕೇಳಿರಬೇಕಲ್ಲ ಅನ್ನಿಸುವದು ಮಾಮೂಲಿಯಾಗಿತ್ತು. ಆಗುವ ಅನುಭವಗಳು
ಪುನರಾವರ್ತನೆಯಾದಂತೇ, ತಾನು ಆಡುವ , ಬೇರೆಯವರು ತನ್ನ ಬಳಿ ಹೇಳುವ ಮಾತುಗಳು
ಮೊದಲೇ ಕೇಳಿದಂತೇ ಅನ್ನಿಸತೊಡಗಿ ಅವನ ಮನಸ್ಥಿತಿಯ ಬಗ್ಗೆ ಅವನಿಗೇ ಅನುಮಾನ
ಬರುವಂತಾಗುತ್ತಿತ್ತು. ಎಲ್ಲಾದರೂ ಮೆಂಟಲ್ ಆಗಿಬಿಟ್ಟೆನಾ? ಎನ್ನುವ ಭಯಮಿಶ್ರಿತ
ಆಲೋಚನೆಯೂ ಬರುತ್ತಿತ್ತು.
ಬಂದ ವ್ಯಕ್ತಿಯ ಪರಿಚಯವನ್ನು ಕೇಳಬಹುದಾಗಿತ್ತಾದರೂ ಗಿರಿಧರನ ಮನಸ್ಸು ಆ ಸಂದರ್ಭದಲ್ಲಿ
ಯಾವಾಗಿನಂತೆ ಅನ್ಯಮನಸ್ಕವಾಗಿತ್ತು. ವಾಸ್ತವಿಕವಾಗಿ ಆತ ತನ್ನ ಮನೋಪ್ರಪಂಚದಲ್ಲಿ ಗಾಳ
ಇಳಿಬಿಟ್ಟುಕೊಂಡು ಕೂತಿದ್ದ. ತನ್ನಂಥವರ ಬರವಣಿಗೆಯಿಂದ ಏನಾದರೂ
ಪ್ರಯೋಜನವಾಗುತ್ತಿದೆಯೇ? ಅಥವಾ ನಾವು ಬರೆಯುತ್ತಿರುವದೆಲ್ಲ ಒಳಗಿನ ತುಡಿತವನ್ನೋ,
ಅಹಂಭಾವವನ್ನೋ ವ್ಯಕ್ತಪಡಿಸುವದಷ್ಟಕ್ಕೇ ಸೀಮಿತವಾಗುತ್ತಿದೆಯೋ? ಎನ್ನುವ ಕಬ್ಬಿಣದ
ಕಡಲೆಯಂಥ ಪ್ರಶ್ನೆಯೊಂದನ್ನು ತನ್ನ ಮನಸ್ಸಿನಲ್ಲಿ ಎತ್ತಿಕೊಂಡು ಆತ ಕೂತಿದ್ದ. ಸುದ್ದಿಯೇ ಇರಲಿ,
ಲೇಖನವೇ ಇರಲಿ, ಪ್ರಗತಿಪರರೆನ್ನುವ ನನ್ನಂಥವರು ದಿನನಿತ್ಯ ಬರೆಯುವ ಬರವಣಿಗೆಯನ್ನು ಓದಿ
ಅರ್ಥಮಾಡಿಕೊಂಡಿದ್ದರೆ ಇಷ್ಟು ಹೊತ್ತಿಗೆ ಲಂಚಕೋರತನವಾಗಲೀ, ಅನಾಚಾರವಾಗಲೀ ಅದರ
ವಿರುದ್ಧ ಜನ ದಂಗೆ ಏಳಬೇಕಿತ್ತಲ್ಲ? ಜಾತಿ, ಧರ್ಮ, ಮಠಾಧಿಪತಿಗಳ ವಿಷಯದಲ್ಲಿ ಚೂರು
ವ್ಯತ್ಯಾಸವಾದರೂ ಹುಚ್ಚೆದ್ದು ಬೀದಿಗಿಳಿಯುವ ಪ್ರವೃತ್ತಿ ಕಾಣುತ್ತಿದೆಯೇ ಹೊರತು ಸಾಮಾಜಿಕವಾದ
ಅನಿಷ್ಠವೆನ್ನುವದಕ್ಕೆ ಯಾರೂ ರೊಚ್ಚಿಗೆದ್ದು ಪ್ರತಿಭಟಿಸುತ್ತಿಲ್ಲ. ಬರೆಹಗಾರರೆಂದು ಕರೆಯಿಸಿಕೊಳ್ಳುವ
ನಮ್ಮೆಲ್ಲರ ರೊಚ್ಚು, ಕೆಚ್ಚು ಎಲ್ಲ ಬರವಣಿಗೆ, ಭಾಷಣದಲ್ಲಷ್ಟೇ ವ್ಯಕ್ತವಾಗುತ್ತಿದೆಯಲ್ಲ. ಅಂದರೆ
ಬರವಣಿಗೆಯ ವಸ್ತು, ವಿನ್ಯಾಸ,ಉದ್ದೇಶಗಳೆಲ್ಲ ಸಾಮಾಜಿಕ ಕಳಕಳಿ ಹೊಂದಿದ್ದು ಎಂದು ನಾವೆಷ್ಟೇ
ಆರೋಪಿಸಿಕೊಂಡರೂ ಅಂತಿಮವಾಗಿ ಅದು ವ್ಯಕ್ತಿ ಪ್ರಾಧಾನ್ಯತೆಯನ್ನು ಪಡೆದುಕೊಂಡದ್ದು
ಮಾತ್ರವೇ? ಎನ್ನುವ ತರ್ಕವೊಂದನ್ನು ತನ್ನಷ್ಟಕ್ಕೇ ತಾನು ಮಥಿಸುತ್ತಿದ್ದ. ಅವನಿಗೆ ನಿಜವಾಗಿಯೂ
ಆ ಕ್ಷಣದಲ್ಲಿ ಬರವಣಿಗೆ ಎನ್ನುವದೇ ಒಂದು ಅರ್ಥಹೀನ ಕ್ರಿಯೆ ಎನ್ನಿಸತೊಡಗಿತ್ತು.
ಇಂಥ ಆಲೋಚನಾ ಲಹರಿ ಆ ಹೊತ್ತಿನಲ್ಲಿ ಅವನಲ್ಲಿ ಒಂದು ತೆರನಾದ ಭಾವಶೂನ್ಯತೆಯನ್ನು
ಉಂಟುಮಾಡಿತ್ತು. ಯಾವಾಗಲೂ ಇಂಥ ಯಾವುದಾದರೂ ಪ್ರಶ್ನೆಯೊಂದನ್ನು ತಲೆಯಲ್ಲಿ
ತುಂಬಿಕೊಂಡಿರುವ ಅವನ ಇಂಥ ಅನ್ಯಮನಸ್ಕತೆಯ ಕಾರಣದಿಂದಲೇ ಕಂಡರೂ ಕಾಣದಂತೆ ಇರುವ
ಗಿರಿಧರನಿಗೆ ಅಹಂಕಾರವೆಂತಲೋ, ಎದುರಿಗೇ ಹಾದು ಹೋದರೂ ಮಾತನಾಡದ ಸೊಕ್ಕು
ಅಂತಲೋ ಅವರಿವರಿಂದ ಬೆನ್ನ ಹಿಂದೆ ಬೈಯಿಸಿಕೊಳ್ಳುತ್ತಿದ್ದ. ಅವನ ಬಗ್ಗೆ ಯಾವ್ಯಾವುದೋ
ಕಾರಣಕ್ಕೆ ಅಪಪ್ರಚಾರ ಮಾಡುವವರು ಇದಕ್ಕೆಲ್ಲ ಇನ್ನೊಂದಿಷ್ಟು ಸೇರಿಸಿ ಆ ಸಾಮಾಜಿಕ
ವರ್ತುಲದಲ್ಲಿ ಗಿರಿಧರನನ್ನು ಸಣ್ಣದಾಗಿಸಲು ಹೆಣಗಾಡುತ್ತಿದ್ದರು.
ತಲೆ ಎತ್ತಿ ಬಂದವರತ್ತ ನೋಡಿದಾಗ ಆ ವ್ಯಕ್ತಿಯ ಅರೆ ಕಪ್ಪು ಬಿಳುಪಿನ ಗಡ್ಡದ,
ಬೆವರಿಳಿಯುತ್ತಿದ್ದ ಮುಖದಲ್ಲಿ ಭಾವನೆಗಳು ಸ್ಪಷ್ಟವಾಗದಿದ್ದರೂ ಯಾವುದೋ
ತುಮುಲದಲ್ಲಿದ್ದದ್ದು ತಿಳಿಯುವಂತಿತ್ತು. ಅಷ್ಟರಲ್ಲಿ ಆ ವ್ಯಕ್ತಿಯೇ ತನ್ನ ಪರಿಚಯವನ್ನು
ಹೇಳಿಕೊಂಡರು.
“ ನಾನು ಗೋವಿಂದ ಹೆಗಡೆ ಅಂತ. ಕೋಗಾರ ಹತ್ತಿರದ ಬೈನೆಕಾಡಾಯ್ತು. ಬೈನೆಕಾಡಿನಲ್ಲಿ
ಜಮೀನು ಮಾಡ್ಕೊಂಡಿದ್ದೇನೆ” ಎಂದರು.
„ ಓಹ್, ಇವರ ಮಗಳಿಗೆ ಯಾವುದೋ ನನಗೆ ಗೊತ್ತಿರುವ ಹುಡುಗನನ್ನು ನೋಡಿರಬೇಕು.
ಅವನ ಬಗ್ಗೆ ನನ್ನ ಬಳಿ ಕೇಳಲು ಬಂದಿರಬೇಕು‟ ಅನ್ನಿಸಿ ಇವರ್ಯಾರೋ ಮಾಮೂಲಿಯಾಗಿ
ಬರುವವರು ಎಂದುಕೊಂಡು ಕುಳಿತುಕೊಳ್ಳುವಂತೆ ಸೂಚಿಸಿ, ಕನ್ನಡಕ ಏರಿಸಿ ಅರ್ಧ ಬರೆದಿಟ್ಟಿದ್ದ
ಸುದ್ದಿಯೊಂದನ್ನು ಪೂರ್ಣಗೊಳಿಸಲು ಕಂಪ್ಯೂಟರ್‍ನತ್ತ ಗಮನಕೊಟ್ಟ.
ಇಂಥ ಅನುಭವ ಅವನಿಗೆ ಹೊಸತೇನೂ ಆಗಿರಲಿಲ್ಲ. ಮಗಳಿಗೆ ಗಂಡು
ಹುಡುಕುವವರು, ಮಗನಿಗೆ ಹೆಣ್ಣು ಹುಡುಕುವವರು, ಜಮೀನು ಮಾರುವವರು, ಜಮೀನು
ಕೊಳ್ಳುವವರು… ಇವರೆಲ್ಲ ಅವನ ಬಳಿ ತಮಗೆ ಅಗತ್ಯವಿರುವದನ್ನು ಹೇಳಿ „ಎಲ್ಲಾದ್ರೂ ಇದ್ರೆ
ನೋಡು‟ ಎಂದು ದುಂಬಾಲು ಬೀಳುವದು ಸರ್ವೇಸಾಮಾನ್ಯವಾಗಿತ್ತು. ಅವರೆಲ್ಲರ ಲೆಕ್ಕದಲ್ಲಿ
ಗಿರಿಧರ ಮದುವೆ ಮಾಡಿಸುವ ಬ್ರೋಕರ್ರೋ, ರಿಯಲ್ ಎಸ್ಟೇಟ್ ಏಜೆಂಟ್ ಎಂದೋ
ಪರಿಗಣಿಸಲ್ಪಟ್ಟಿದ್ದನೇ ಹೊರತು ಪತ್ರಿಕೆಯೊಂದರ ವರದಿಗಾರನಾಗಿರಲೇ ಇಲ್ಲ. ಲೈಸನ್ಸ ಇಲ್ಲದೇ
ಬೈಕ್ ಹೊಡೆದು ಪೊಲೀಸರ ಬಳಿ ಸಿಕ್ಕಾಕಿಕೊಂಡವರು, ಊರಲ್ಲಿ ಹೊಡೆದಾಟ ಮಾಡಿ ಕೇಸು
ಮಾಡಿಕೊಂಡು ಪೊಲೀಸ್ ಸ್ಟೇಷನ್ನಿಗೆ ಬಂದು ಕೂತವರು, ಕಳ್ಳ ನಾಟಾ ಕೊಯ್ದು ಫಾರೆಸ್ಟ
ಡಿಪಾರ್ಟಮೆಂಟ್‍ನವರ ಬಳಿ ಕೇಸು ಹಾಕಿಸಿಕೊಂಡವರು…. ಇಂಥವರೆಲ್ಲ ಆಗಾಗ್ಗೆ ಬಿಡಿಸಿಕೊಡಿ
ಎಂದು ದುಂಬಾಲು ಬೀಳುತ್ತಿದ್ದರು. ಆಗೆಲ್ಲ ನಾನೇನು ಇವರ ಸಲುವಾಗಿ ಇದ್ದವನೋ ಅಥವಾ
ಸುದ್ದಿ ಬರೆಯಲು ಕೂತವನೋ ಎಂದು ಗಿರಿಧರನಿಗೆ ಅನುಮಾನವಾಗುತ್ತಿತ್ತು. ಅಂಥದ್ದೇ
ಯಾವುದೋ ಗಿರಾಕಿ ಇರಬೇಕು ಎಂದು ಕೊಂಡು ತನ್ನ ಕೆಲಸದಲ್ಲಿ ಮಗ್ನನಾದ.
„„ನಾನು ನಿಮ್ಮನ್ನೇ ಹುಡುಕಿಕೊಂಡು ಬಂದೆ. ನನಗೆ ಭಾರೀ ಕಷ್ಟವೊಂದು ಎದುರಾಗಿಬಿಟ್ಟಿದೆ.
ಅದಕ್ಕೆ ಏನಾದ್ರೂ ಪರಿಹಾರ ಸಿಗಬಹುದು ಎಂದು ಶರ್ಮಾ ವಕೀಲರ ಹತ್ರ ಹೋಗಿದ್ದೆ. ಅವ್ರು
ಇಲ್ಲಿಗೆ ಕಳುಹಿಸಿಕೊಟ್ರು” ಎಂದು ಆ ವ್ಯಕ್ತಿ ಮಾತು ಆರಂಭಿಸಿದರು.
“ ಸರಿ, ಹೇಳಿ ಏನಾಗಬೇಕಿತ್ತು?” ಎಂದ ಗಿರಿಧರ.
ಗೋವಿಂದ ಹೆಗಡೆ ಸ್ವಲ್ಪ ತಡೆದು “ ಇದು ಬಾಳ ಸಿರೀಯಸ್ ವಿಷಯ. ಎಲ್ಲೂ ಲೀಕ್
ಆಗ್ಬಾರ್ದು” ಅಂದರು.
ಗಿರಿಧರನಿಗೆ ಸರ್ರನೆ ಪಿತ್ಥ ನೆತ್ತಿಗೇರಿದಂತಾಗಿ “ನಾನೇನು ನೀವು ಹೇಳಿದ್ದೆಲ್ಲ ಜಾಗಟೆ ತಗೊಂಡು
ಬಾರಿಸ್ತಾ ಊರಲ್ಲೆಲ್ಲ ಕೂಗ್ತಾ ಹೋಗೋದಿಲ್ಲ. ನಂಗೂ ಬೇಕಾದಷ್ಟು ಕೆಲ್ಸ ಇದೆ. ನಿಮ್ಗೆ ಖಾತ್ರಿ
ಇದ್ರೆ ಹೇಳಿ. ಇಲ್ಲಾಂದ್ರೆ ಬಿಡಿ” ಎಂದು ಸಿಡುಕಿದ.
“ಛೇ, ಛೇ, ನಾನು ಹೇಳಿದ್ದು ಹಾಗಲ್ಲ. ನನ್ನ ಜೀವಕ್ಕೇ ಅಪಾಯ ಇರೋದ್ರಿಂದ ಹೇಳ್ದೆ. ನೀವು
ಬೇಜಾರು ಮಾಡ್ಕೋಬೇಡಿ” ಎಂದು ಸಣ್ಣನೆಯ ಧ್ವನಿಯಲ್ಲಿ ಹೇಳಿದಾಗ ಅವರ ಬಳಿ ಸಿಡುಕಿದ್ದು
ಹೆಚ್ಚಾಯ್ತೇನೋ ಎಂದು ಗಿರಿಧರನಿಗೆ ಅನ್ನಿಸಿತು.
“ನಿಮಗೇನು ಜೀವಕ್ಕೆ ಅಪಾಯ. ಯಾರಿಂದ?” ಎಂದ.
ಅತ್ತಿತ್ತ ನೋಡಿದ ಆ ವ್ಯಕ್ತಿ ಅವನಿಗಷ್ಟೇ ಕೇಳಿಸುವಂತೆ “ಗಾಂಜಾ ಬೆಳೆಯೋ ಗ್ಯಾಂಗ್‍ನವರಿಂದ”
ಅಂದಿತು.
ಒಂದು ಕ್ಷಣ ಗಿರಿಧರ ಅವನೊಳಗೇ ಬೆಚ್ಚಿದ.
ಎಲ್ಲೋ ಅಕ್ಕಪಕ್ಕದವರ ಜೊತೆ ಆಸ್ತಿಪಾಸ್ತಿ ಜಗಳದಲ್ಲಿ ಜೀವಾಪಾಯ ಇರಬಹುದು ಎಂದು
ಅಂದುಕೊಂಡಿದ್ದರೆ ಎದುರಿನಲ್ಲಿದ್ದ ಮನುಷ್ಯ ಹೇಳುತ್ತಿರೋದೇ ಬೇರೆ ಏನೋ? ಸೂತ್ರವಿಲ್ಲ,
ಸಂಬಂಧವಿಲ್ಲ. ಎಲ್ಲಿಂದಲೋ ಬಂದು ಇಲ್ಲಿ ನನ್ನೆದುರು ಕುಳಿತು ಗಾಂಜಾ ಬೆಳೆಯೋರಿಂದ ನನ್ನ
ಪ್ರಾಣಕ್ಕೆ ಕುತ್ತು ಬಂದಿದೆ ಎಂದು ಹೇಳ್ತಿರೋದು ನಿಜವೋ, ಸುಳ್ಳೋ? ಎಂದು ಅರೆಕ್ಷಣ
ಗಲಿಬಿಲಿಯಾಯ್ತು.
ಈ ವ್ಯಕ್ತಿ ಮಾನಸಿಕವಾಗಿ ಅಸ್ವಸ್ಥ ಇರಬಹುದೇ? ಅಥವಾ ನನ್ನನ್ನ ಯಾವುದೋ ಷಡ್ಯಂತ್ರದಲ್ಲಿ
ಸಿಕ್ಕಿಸಲು ಯಾರೋ ಹೂಡಿದ ತಂತ್ರವಾಗಿರಬಹುದೇ? ಅವನ ಮನಸ್ಸಿನೊಳಗೆ ನೂರೆಂಟು ಥರದ
ಯೋಚನೆಗಳು, ಆಲೋಚನೆಗಳು ಗಿರಿಗುಟ್ಟತೊಡಗಿದರೂ „ಗಾಂಜಾ‟ ಎನ್ನುವ ಶಬ್ದ ತೀವ್ರವಾಗಿ
ಸೆಳೆಯತೊಡಗಿತು. ಆದರೂ ತನ್ನ ಹಿಂದಿನ ಹಲವಾರು ಅನುಭವಗಳಿಂದ ಗೋವಿಂದ ಹೆಗಡೆ
ಎನ್ನುವ ಆ ವ್ಯಕ್ತಿಯನ್ನು ಏಕಾಏಕಿ ನಂಬಲು ಅವನು ಸಿದ್ಧನಾಗಲಿಲ್ಲ.
ಎದುರಿಗೆ ಕುಳಿತ ವ್ಯಕ್ತಿ ಹೇಳುತ್ತಿರುವ ವಿಷಯದಲ್ಲಿ ಯಾವುದೇ ಆಸಕ್ತಿ ಇಲ್ಲದವನಂತೆ
ಕೇಳಿಸಿಕೊಂಡವನು “ ನೀವೊಂದು ಕೆಲಸ ಮಾಡಿ. ವರದಿಗಾರ ನರಸಿಂಹ ಭಟ್ರು ಅಂತಿದಾರೆ.
ತಾಲೂಕಾಫೀಸ್ ಎದುರು ಅವರ ಬುಕ್ ಶಾಪ್ ಇದೆ. ಅವರ ಹತ್ರ ಹೋಗಿ ಮಧ್ಯಾಹ್ನ
ಸುದ್ದಿಗೋಷ್ಟಿ ಮಾಡಬೇಕು ಅಂತ ಹೇಳಿ. ಅವ್ರು ವ್ಯವಸ್ಥೆ ಮಾಡ್ತಾರೆ. ಸುದ್ದಿಗೋಷ್ಟಿಯಲ್ಲಿ ಎಲ್ಲ
ವಿಷಯ ಹೇಳಿ. ನಿಮ್ಮ ಹೆಸರು ಗೌಪ್ಯವಾಗಿಡೋಣ. ತಡ ಮಾಡ್ಬೇಡಿ. ತಕ್ಷಣ ….ಭಟ್ರ ಹತ್ರ
ಹೋಗಿ” ಎಂದು ಅವರನ್ನು ಸಾಗಹಾಕಿದ.
ಆ ವ್ಯಕ್ತಿಯನ್ನು ಅತ್ತ ಸಾಗಹಾಕಿದರೂ ಗಿರಿಧರನ ಮನಸ್ಸು ಅವರು ಹೇಳಿದ ವಿಷಯದ ಕಡೆಗೆ
ಎಳೆಯುತ್ತಿತ್ತು. ಬಂದ ವ್ಯಕ್ತಿ ಹೇಳಿದ ಸಂಗತಿ ಅವನನ್ನು ಎಷ್ಟು ದಂಗುಬಡಿಸಿತ್ತೆಂದರೇ ಅದನ್ನು
ಜೀರ್ಣಿಸಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಅದಕ್ಕೆಂದೇ ಗೋವಿಂದ ಹೆಗಡೆಯನ್ನು ಆದಷ್ಟು ಬೇಗ
ಅಲ್ಲಿಂದ ಸಾಗ ಹಾಕಿ ಸುಮ್ಮನೆ ಕುಳಿತು ಯೋಚಿಸತೊಡಗಿದ.
ಗಾಂಜಾ ಗ್ಯಾಂಗ್‍ನವರಿಂದ ಜೀವಕ್ಕೆ ಅಪಾಯ ಎಂದರಲ್ಲ, ಇವರಿಗೆಲ್ಲಿಂದ ಅವರು
ತಗುಲಿಹಾಕಿಕೊಂಡರು? ಹೇಳಿ ಕೇಳಿ ಅದು ಯಾವುದೇ ರೀತಿಯಲ್ಲೂ ಮಾಫಿಯಾಕ್ಕಿಂತ
ಭಿನ್ನವಾದುದಲ್ಲ. ಅದರಲ್ಲೂ ಗಾಂಜಾ ಬೆಳೆಯುವ ಗ್ಯಾಂಗಿನವರು ಇವರ ಮೇಲೆ ತಿರುಗಿ
ಬಿದ್ದಿದ್ದಾರೆಂದರೇ ವಿಷಯ ಗಂಭೀರವೇ ಇರಬೇಕು. ಪತ್ರಿಕೋದ್ಯಮದಲ್ಲಿ ಸಾಕಷ್ಟು ಪಳಗಿದ್ದ
ಗಿರಿಧರನಿಗೆ ಇದೊಂದು ರೋಮಾಂಚಕಾರಿ ಪ್ರಸಂಗವಾಗಿ ಅನಿಸತೊಡಗಿತು. ಆ ಕುರಿತಾಗಿ
ಅವನಿಂದÀ ಎಷ್ಟು ಸಾಧ್ಯವೋ ಅಷ್ಟು ಉತ್ಪ್ರೇಕ್ಷಿತವಾಗಿ ಊಹಿಸಿಕೊಳ್ಳತೊಡಗಿದ. ಅಷ್ಟು ಹೊತ್ತಿಗೆ
ಮಧ್ಯಾಹ್ನ ಮೂರುವರೆಗೆ ಗೋವಿಂದ ಹೆಗಡೆಯ ಸುದ್ದಿಗೋಷ್ಟಿ ಇದೆ ಎಂದು ವರದಿಗಾರ
ಮಿತ್ರರೊಬ್ಬರು ಗಿರಿಧರನಿಗೆ ಸುದ್ದಿ ಮುಟ್ಟಿಸಿದರು.
2
ಸುದ್ದಿಗೋಷ್ಟಿಯಲ್ಲಿ ಮಾತು ಪ್ರಾರಂಭಿಸುವ ಮುನ್ನವೇ ದಯವಿಟ್ಟು ತನ್ನ ಹೆಸರು ಎಲ್ಲೂ
ಬರಬಾರದು ಎಂದು ಶರತ್ತು ವಿಧಿಸಿದರು ಗೋವಿಂದ ಹೆಗಡೆ ಎನ್ನುವ ಆ ಮಹಾನುಭಾವ.
“ ನೋಡ್ರೀ, ನಮ್ಮೂರ ಹತ್ರ ಕಾನಿನಲ್ಲಿ ಕದ್ದು ಗಾಂಜಾ ಬೆಳೀತಿದಾರೆ. ಈಗಲ್ಲ, ನಾಲ್ಕಾರು
ವರ್ಷ ಆಯ್ತು. ನಮ್ಮಲ್ಲಿಯ ಕಾಡು ಗೊತ್ತಲ್ಲ. ಹೇಗಿರ್ತದೆ ಅಂತಾ. ಈ ಗಾಂಜಾ ಬೆಳೆಯೋರಿಂದ
ಅಲ್ಲಿನ ವಾತಾವರಣವೇ ಕೆಟ್ಟು ಹೋಗಿದೇರಿ…” ಎಂದು ಗೋವಿಂದ ಹೆಗಡೆ ಅಂಥ ಸಂದರ್ಭದಲ್ಲಿ
ಯಾವುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ, ಯಾವ ವಿಷಯವನ್ನ ಮುಚ್ಚಿಟ್ಟು ಯಾವುದನ್ನು
ತಟ್ಟುವಂತೆ ಹೇಳಬೇಕು ಎನ್ನುವದನ್ನು ಗಮನಿಸದೇ ಒಂದೇ ಸಮನೇ ಆ ಎಲ್ಲ ವಿವರಗಳ ಪ್ರವರ
ಊದಿದರು. ಅವರಿಗಾದರೂ ಈ ಪತ್ರಿಕಾ ಗೋಷ್ಟಿಗಳೆಂಬ ನಾಟಕಗಳ ಬಗ್ಗೆ ಗೊತ್ತಿರಲು ಹೇಗೆ
ಸಾಧ್ಯ!
ಈ ವಿಷಯ ಈ ಮೊದಲು ಗುಲ್ಲಾದಾಗ ತಾನೇ ಮಾಡಿರಬಹುದು ಎಂದು ಊಹಿಸಿ ಗಾಂಜಾ
ಗ್ಯಾಂಗ್‍ನವರು ತನಗೆ ಧಮಕಿ ಹಾಕಿದ್ದರೆಂದೂ, ಈಗ ಪೇಪರಿಗೆಲ್ಲ ಬಹಿರಂಗ ಪಡಿಸಿದ್ದು
ಗೊತ್ತಾದರೆ ತಮ್ಮ ಕುಟುಂಬಕ್ಕೆಲ್ಲ ಜೀವಕ್ಕೆ ಖಂಡಿತ ಅಪಾಯವಿದೆಯೆಂದೂ ಅಳುಬುರುಕ ಸ್ವರದಲ್ಲಿ
ಹೇಳಿದರು.
“ ಇಷ್ಟಾದ್ರೂ ನೀವ್ಯಾಕ್ರೀ ಈ ವಿಷಯ ನಿಮ್ಮಲ್ಲಿನ ಫಾರೆಸ್ಟ ಡಿಪಾರ್ಟಮೆಂಟನವರಿಗೆ ಹೇಳ್ಲಿಲ್ಲ?”
ಎಂದು ಯಾರೋ ವರದಿಗಾರರು ಪ್ರಶ್ನಿಸಿದರು.
“ ಅಯ್ಯೋ, ಆ ರಾಮಾಯಣ ಬ್ಯಾಡ್ರೀ, ಫಾರೆಸ್ಟ ಡಿಪಾಟ್ರ್ಮೆಂಟಲ್ಲಿ ಕೆಲವರು ಅವರ ಜನಾ
ಇದಾರ್ರೀ. ಗ್ಯಾಂಗ್‍ನವರು ಅವರಿಗೆ ಮಾಮೂಲು ಕೊಡ್ತಾರೆ. ಅಲ್ಲಿಗೆ ಹೋಗಿ ರೇಂಜರ್ ಹತ್ರಾನೋ,
ಮತ್ಯಾರ ಹತ್ರಾನೋ ಹೇಳಿ ಹೊರ ಬರೋಷ್ಟರಲ್ಲಿ ಗ್ಯಾಂಗಿನವರಿಗೆ ವಿಷಯ ಗೊತ್ತಾಗಿರುತ್ತದೆ.
ಅಲ್ಲಿಂದ ಹೊರಬಿದ್ದ ನಾನು ಮತ್ತೆ ಮನೆ ಸೇರೋದಿಲ್ಲ. ನಮ್ಮಲ್ಲಿರುವ ರೇಂಜರ್ ಖಡಕ್ ಇದಾರೆ.
ಆದ್ರೆ ಅವರ ಕೆಳಗಿನವರು ಎಡವಟ್ಟು ಮಾಡ್ತಾರೆ. ಅವರಿಗೆ ಹೇಳೋದ್ರಿಂದ ನಾನು ಪೈಸಲ್
ಆಗಬೇಕೇ ಹೊರ್ತು ಮತ್ತೇನೂ ಪ್ರಯೋಜನ ಇಲ್ಲ..” ಎಂದು ಗೋವಿಂದ ಹೆಗಡೆ
ಅಲವತ್ತುಕೊಂಡರು.
“… ಅಲ್ಲಿ ನಡೀತಿರೋದರ ಬಗ್ಗೆ ನೀವು ಬರೆದ್ರೆ ಸರಕಾರದ ಗಮನಕ್ಕೆ ಬರ್ತದೆ. ಏನಾದ್ರೂ ಕ್ರಮ
ತಗೋತಾರೆ. ಇಲ್ಲಾಂದ್ರೆ ಈ ಖದೀಮರು ಮಾಡಿದ್ದೇ ಮಾಟ. ನೀವೆಲ್ಲ ಇದರ ಬಗ್ಗೆ ಬರೀಬೇಕು”
ಎಂದು ಕೈಮುಗಿದು ಕೂತರು.
ಗೋವಿಂದ ಹೆಗಡೆ ಮುಗ್ದರೋ, ಮುಠ್ಠಾಳರೋ ಎನ್ನುವದು ಗಿರಿಧರನಿಗೆ ಅಂದಾಜಾಗಲಿಲ್ಲ.
ಇಂಥ ಕಳ್ಳ ದಂಧೆಗಳ ಬಗ್ಗೆ ಪತ್ರಿಕೆಯಲ್ಲಿ ಬರೆದರೆ ಸರಕಾರದವರು ಕ್ರಮ ತೆಗೆದುಕೊಳ್ಳುತ್ತಾರೆ
ಎಂದು ಈ ಕಾಲದಲ್ಲೂ ಭರವಸೆ ಇಟ್ಕೊಂಡಿದಾರಲ್ಲ, ಇದಕ್ಕೆ ಏನನ್ನಬೇಕೋ ಗೊತ್ತಾಗಲಿಲ್ಲ.
“ ಅಲ್ರೀ ಗೋವಿಂದ ಹೆಗಡೆರೇ, ಸರಕಾರದಲ್ಲೇ ಇಂಥ ಕಳ್ಳರು, ಖದೀಮರು ಎಷ್ಟು ಮಂದಿ
ಇದ್ದಾರೆ ಎನ್ನುವದು ನಿಮಗೆ ಗೊತ್ತಿಲ್ವಾ. ಅವರೇ ಹಾಡುಹಗಲೇ ರಾಜಾ ರೋಷವಾಗಿ ಕೊಳ್ಳೆ
ಹೊಡಿತೀದಾರೆ. ಬಿಳಿಬಟ್ಟೆ ಹಾಕಿದ ನಾಲ್ಕಾರು ವರ್ಷಕ್ಕೇ ಹತ್ತು ಲಕ್ಷದ ಕಾರಲ್ಲಿ ಓಡಾಡ್ತಾರೆ.
ಅಂಥದ್ರಲ್ಲಿ ನೀವು ಅವರು ಗಾಂಜಾ ಬೆಳೆಯೋರ ಮೇಲೆ ಕ್ರಮ ತೊಗೋತಾರೆ ಅಂತೀರಲ್ಲಾ. ಅವರು
ಕ್ರಮ ತೊಗೊಳೋದಿಲ್ಲಾರೀ. ಡೀಲ್ ಮಾಡ್ಕೋತಾರೆ ಅಷ್ಟೇ” ಎಂದು ಗಿರಿಧರ ರೇಗಿದ.
“ ಫಾರೆಸ್ಟನವರು ನೋಡಿದ್ರೇ ಹೀಗೇ, ಸರಕಾರದವರು ಹಾಗೇ, ಹಾಗಾದ್ರೆ ಇದಕ್ಕೆಲ್ಲಾ ಕಡಿವಾಣ
ಹಾಕೋರಾದ್ರೂ ಯಾರು?” ಎಂದು ಗೋವಿಂದ ಹೆಗಡೆ ವಿಷಣ್ಣವದನರಾಗಿ ಕೇಳಿದರು.
“ ಮತ್ತೇನಿಲ್ಲ, ಕೈಗೆ ಗನ್ ತೋಗೋಬೇಕು ಅಷ್ಟೇ..” ಎಂದು ರೇಗುತ್ತಿದ್ದ ಗಿರಿಧರನನ್ನು
ಸಮಾಧಾನ ಪಡಿಸಿದ ಹಿರಿಯ ವರದಿಗಾರರೊಬ್ಬರು ಗೋವಿಂದ ಹೆಗಡೆಯವರಿಗೆ ಮನವರಿಕೆ
ಮಾಡಿಕೊಡಲು ಪ್ರಯತ್ನಿಸಿದರು.
“ ನೋಡ್ರೀ, ನಿಮ್ಮ ಕೋರಿಕೆ ಅಸಾಧ್ಯದ ಮಾತು. ಯಾಕೆಂದ್ರೇ ಮೊದಲನೆಯದು ಗಾಂಜಾ
ಬೆಳೆಯೋ ನಿಮ್ಮೂರ ಕಾಡು ಬೇರೆ ತಾಲೂಕಿನಲ್ಲಿದೆ. ಅದು ನಮ್ಮ ವ್ಯಾಪ್ತಿಗೆ ಬರದ ಕಾರಣ ನಿಮ್ಮ
ತಾಲೂಕಿನ ಸುದ್ದಿ ನಾವು ಬರೆಯುವಂತಿಲ್ಲ. ಎರಡನೆಯದು ನಾವು ಸ್ಥಳಕ್ಕೆ ಹೋಗದೇ ಸುದ್ದಿ
ಬರೆಯುವಂತಿಲ್ಲ. ಮೂರನೆಯದು ವಿಷಯ ತಿಳಿಸಿದ ನಿಮ್ಮಂಥ ಅಧಿಕೃತ ವ್ಯಕ್ತಿಯ ಹೆಸರಿಲ್ಲದೇ
ಸುದ್ದಿ ಬರೆದರೆ ಅದು ಕಸದ ಬುಟ್ಟಿ ಸೇರ್ತದೆ. ಈ ಎಲ್ಲ ಕಾರಣಗಳಿಂದ ಈ ಬಗ್ಗೆ ನಾವೇನೂ
ಮಾಡ್ಲಿಕಾಗೋದಿಲ್ಲ” ಎಂದು ಮಾಮೂಲಾಗಿ ಹೇಳಿದರು.
ಭಾರೀ ಕಗ್ಗಂಟಾಗಿದ್ದ ವಿಷಯವನ್ನು ಎಷ್ಟು ಸಲೀಸಾಗಿ, ಸಮಾಧಾನದಿಂದ ಹೇಳಿ ಕೈ
ತೊಳೆದುಕೊಂಡರಲ್ಲಾ! ನಾನು ಇಷ್ಟು ಹೊತ್ತಿನಿಂದ ತಲೆಬಿಸಿ ಮಾಡಿಕೊಂಡಿದ್ದನ್ನ ಇವರು ಹ್ಯಾಗೇ
ನಿಭಾಯಿಸಿಬಿಟ್ಟರು ಎಂದು ಗಿರಿಧರನಿಗೆ ಪರಮಾಶ್ಚರ್ಯವಾಯಿತು.
ವಾಸ್ತವಿಕವಾಗಿ ಗಿರಿಧರನಿಗೆ ಗೋವಿಂದ ಹೆಗಡೆ ಮೇಲೆ ಸಿಟ್ಟು ಬಂದಿರಲಿಲ್ಲ. ಈ ವ್ಯವಸ್ಥೆಯ
ಮೇಲೆ ಏಕಾಏಕಿ ಕೋಪ ಉಕ್ಕೇರಿತ್ತು. ಸಣ್ಣ ಪುಟ್ಟ ಕಾರಣಕ್ಕೆಲ್ಲ ಕುತ್ತಿಗೆ ಬಿಗಿಯಾಗಿಸುವ ಈ
ಕಾನೂನುಗಳು ಕಣ್ಣೆದುರೇ ನಡೆಯುವ ಕರಾಳ ದಂದೆಗೆ ಪ್ರಚೋದನೆ ನೀಡುವ ರೀತಿಯಲ್ಲಿ
ನಡೆದುಕೊಳ್ಳುತ್ತಿರುವದು ಅವನ ಒಳಗಡೆಯಿದ್ದ ಆಕ್ರೋಶ ಹೊರಗೆ ನುಗ್ಗುವಂತೆ ಮಾಡಿತ್ತು.
ಅಲ್ಲಿದ್ದವರೆಲ್ಲ ತಿಳಿದುಕೊಂಡಂತೆ ಗೋವಿಂದ ಹೆಗಡೆ ಅಷ್ಟು ಸುಲಭಕ್ಕೆ ಬಗ್ಗುವ
ಜಾಯಮಾನದವರಾಗಿರಲಿಲ್ಲ. ಹಿರಿಯ ವರದಿಗಾರರು ಹೇಳಿದ ಮಾತಿಗೆ ಸ್ವಲ್ಪ ಹೊತ್ತು ಸಪ್ಪೆ
ಮುಖ ಮಾಡಿಕೊಂಡು ಕೂತವರು ತಟ್ಟನೆ “ ನಿಮ್ಮ ಪೇಪರಿನ ಮೇಲಿನವರ ಬಳಿ ಪರ್ಮಿಶನ್
ತಗೊಂಡು ಬರಬಹುದಲ್ಲ. ಹಾಗಾದ್ರೂ ಮಾಡಿ” ಎಂದು ದುಂಬಾಲು ಬಿದ್ದೇಬಿಟ್ಟರು.
ಗಿರಿಧರನಿಗೆ ಬೆಳಗಿನಿಂದ ಗೋವಿಂದ ಹೆಗಡೆಯವರ ನಿಲುಗಡೆಯಿಲ್ಲದ ಕೊರೆತ ಕೇಳಿ,ಕೇಳಿ
ಅವರಿಂದ ಎಷ್ಟು ಹೊತ್ತಿಗೆ ತಪ್ಪಿಸಿಕೊಳ್ಳುತ್ತೇನೆ ಅನ್ನಿಸುತ್ತಿದ್ದರೂ ತನ್ನ ವೃತ್ತಿಯ ತಾಂತ್ರಿಕ
ತೊಡಕುಗಳ ಕಾರಣದಿಂದ ಒಂದು ಸಾಮಾಜಿಕ ಕಾಳಜಿ ಹೊಂದಿದ ಸುದ್ದಿ ಕೈ ತಪ್ಪಿ
ಹೋಗ್ತಿದೆಯಲ್ಲಾ ಎನ್ನುವ ಬೇಸರವೂ ಆಗುತ್ತಿತ್ತು. ಮೊದಲಾಗಿದ್ದರೆ ಇಷ್ಟು ಹೊತ್ತಿಗೆ
ಸಿನೆಮಾಗಳಲ್ಲಿ ಡಕಾಯಿತರ ಅಡ್ಡೆಗೆ ನುಗ್ಗಿ ಕಳ್ಳರನ್ನೆಲ್ಲಾ ಸದೆ ಬಡಿವ ಹೀರೋ ತರಹ ಆ ಗಾಂಜಾ
ಬೆಳೆಯುವದನ್ನು ಫೋಟೊ ತೆಗೆದು, ಸುದ್ದಿ ಬರೆದು ಅಲ್ಲೋಲಕಲ್ಲೋಲವೆಬ್ಬಿಸಿದ ಕನಸು
ಕಾಣುತ್ತಿದ್ದ ಅವನಿÀಗೆ ಅಂಥ ರಮ್ಯ ಕಲ್ಪನೆಗಳೆಲ್ಲ ವಾಸ್ತವದ ಎದುರಿನಲ್ಲಿ ಕರಗಿಹೋಗಿದ್ದವು.
ಇಂಥ ಸಂದರ್ಭಗಳೆಲ್ಲ ಮೊದಲಿನಂತೆ ತನ್ನಲ್ಲಿ ಉತ್ಸಾಹ ಹುಟ್ಟಿಸುತ್ತಿಲ್ಲವಲ್ಲ ಎನ್ನುವ ಖೇದದ
ಜೊತೆಗೆ ಮನುಷ್ಯ ಹೆಚ್ಚು ಹೆಚ್ಚು ವಾಸ್ತವಿಕವಾದಷ್ಟೂ ಸಿನಿಕನಾಗುತ್ತ ಹೋಗುತ್ತಾನೋ? ಎನ್ನುವ
ಪ್ರಶ್ನೆ ಅಲ್ಲಿಯೂ ಎದುರಾಯ್ತು. ವಾಸ್ತವದ ಅನುಭವಗಳು ಗಿರಿಧರನನ್ನು ಎಷ್ಟೇ
ಬದಲಾಯಿಸಿದ್ದರೂ ಹುಟ್ಟು ಗುಣ ಎನ್ನುವಂತೆ ಅವನ ಮನಸ್ಸಿನ ಮೂಲೆಯಲ್ಲೆಲ್ಲೋ ಅಡಗಿದ್ದ
ಉತ್ಪ್ರೇಕ್ಷಿತ ಪ್ರವೃತ್ತಿ ಎಂಥಾ ಅವಕಾಶವೊಂದು ಕಣ್ಣೆದುರೇ ಕರಗಿಹೋಗ್ತಿದೆಯಲ್ಲಾ ಎನ್ನುವ
ನಿರಾಶೆಯನ್ನು ಮೂಡಿಸಿತ್ತು. ಆದರೆ ಕೊನೆಯಲ್ಲಿ ಗೋವಿಂದ ಹೆಗಡೆ ಕೊಟ್ಟ ಸಲಹೆ ಮತ್ತೆ
ಕನಸು ಕಟ್ಟಲು ಆಸ್ಪದ ಕೊಟ್ಟಂತಾಗಿತ್ತು.
ಅಷ್ಟರಲ್ಲಿ ವರದಿಗಾರರೊಬ್ಬರು “ಬರೋದಾದ್ರೆ ಎರಡು ದಿನ ಬಿಟ್ಟು ಹೇಳ್ತೇವೆ. ನೀವು ನಮ್ಮದೆಲ್ಲ
ಫೋನ್ ನಂಬರ್ ಇಟ್ಕೊಂಡಿರೀ” ಎಂದರು. ಅವರ ಲೆಕ್ಕದಲ್ಲಿ „ಬೀಸೋ ದೊಣ್ಣೆ ತಪ್ಪಿದರೆ ನೂರು
ವರ್ಷ ಆಯಸ್ಸು‟ ಎನ್ನುವಂತಿತ್ತು.
ಗಿರಿಧರನಿಗೂ ಅದು ಸರಿ ಅನ್ನಿಸಿತು. ಗೋವಿಂದ ಹೆಗಡೆ ಖಾತ್ರಿ ಮನುಷ್ಯನಾದರೆ ಮತ್ತೆ ಫೋನ್
ಮಾಡ್ತಾರೆ, ಇಲ್ಲವಾದ್ರೆ ನಮ್ಮ ತಂಟೆಗೆ ಬರೋದಿಲ್ಲ. ಯಾವುದೂ ನಿಷ್ಕರ್ಷೆಯಾಗುತ್ತೆ
ಎಂದುಕೊಂಡ. ಎಲ್ಲರ ಫೋನ್ ನಂಬರ್ ತೆಗೆದುಕೊಂಡ ಗೋವಿಂದ ಹೆಗಡೆ ಎರಡು ದಿನ
ಬಿಟ್ಟು ಫೋನ್ ಮಾಡುವದಾಗಿ ಹೇಳಿ ಹೋದರು.
3
ಎರಡೆಂದರೆ ಎರಡೇ ದಿನಕ್ಕೆ ಗಿರಿಧರನಿಗೆ ಬಂದ ಫೋನಿನಲ್ಲಿ ಗೊಗ್ಗರ ಧ್ವನಿಯೊಂದು
“ನಾನು ಗೋವಿಂದ ಹೆಗಡೆ, ಕೋಗಾರಿನಿಂದ” ಎಂದಿತು. ತಿವಿಕ್ರಮನ ಬೆನ್ನು ಬಿದ್ದ ಹಠ ಬಿಡದ
ಬೇತಾಳದಂತೆ ಈ ಹೆಗಡೆ ಬೆನ್ನು ಹತ್ತಿದ್ದು ಸ್ಪಷ್ಟವಾಗಿತ್ತು.
“ಗಾಂಜಾ ಕೊಯ್ಲಿಗೆ ಬಂದದೆ. ನಾಲ್ಕಾರು ದಿನದಲ್ಲಿ ಕೊಯ್ಲು ಮಾಡ್ತಾರೆ. ಬೇಗ ಬನ್ನಿ” ಎಂದು
ಗೋವಿಂದ ಹೆಗಡೆ ಸಣ್ಣಗಿನ ಧ್ವನಿಯಲ್ಲಿ ಗಡಿಬಿಡಿಯಿಂದ ಹೇಳಿದರು.
“ ನನ್ನ ಬಗ್ಗೆ ತುಂಬಾ ನಿಗಾ ಇಟ್ಟಿದಾರೆ. ನಾನು ಎಲ್ಲಿಗೆ ಹೋಗ್ತೀನಿ, ಏನು ಮಾಡ್ತೀನಿ ಎಲ್ಲಾನೂ
ಗಮನಿಸ್ತಿದಾರೆ. ನನ್ನ ಮನೆಯಿಂದ ಎಲ್ಲೆಲ್ಲಿಗೆ ಫೋನ್ ಹೋಗ್ತದೆ ಎಂದು ಕಣ್ಣಿಟ್ಟಿದ್ದಾರಂತೆ.
ಅದಕ್ಕೆ ನಾನು ಕೋಗಾರಿಗೆ ಬಂದು ಫೋನ್ ಮಾಡ್ತಿದ್ದೇನೆ. ಯಾವಾಗ ಬರ್ತೀರಿ?” ಎಂದರು.
ಎಲ್ಲಿ ತಾನು ಮಾತನಾಡುವಾಗ ಮಧ್ಯೆ ಫೋನ್ ಸಂಪರ್ಕ ಕಡಿದುಹೋಗುತ್ತದೆಯೋ ಎನ್ನುವ
ಆತಂಕದಲ್ಲಿ ಗೋವಿಂದ ಹೆಗಡೆ ಮಾತನಾಡುತ್ತಿರುವಂತೆ ಭಾಸವಾಯಿತು. ಅವರೂ ತನ್ನಂತೆಯೇ
ಎದುರಿನ ವಾಸ್ತವವನ್ನು ಸ್ವಲ್ಪ ಹೆಚ್ಚೇ ಉತ್ಪ್ರೇಕ್ಷಿತವಾಗಿ ನೋಡತೊಡಗಿದ್ದಾರೆ ಎಂದು ಅವರ
ಮಾತುಗಳನ್ನು ಕೇಳಿದಾಗ ಗಿರಿಧರನಿಗೆ ಅನ್ನಿಸಿತು. ಗೋವಿಂದ ಹೆಗಡೆ ಮಾತನಾಡುತ್ತಿರುವಾಗ ಈ
ಪ್ರಕರಣದ ಬಗ್ಗೆ ಅವನು ಕಟ್ಟಿಕೊಂಡಿದ್ದ ಕಲ್ಪನೆಯ ಜೊತೆಗೆ ಆ ಕ್ಷಣದಲ್ಲಿ ಅವರು ಮಾತುಗಳಲ್ಲಿ
ವ್ಯಕ್ತವಾಗುತ್ತಿದ್ದ ಅಪಾಯದ ಸೂಚನೆಗಳು ಅವನಲ್ಲಿ ಒಂದು ಗಟ್ಟಿಯಾದ ನಿಶ್ಚಯವನ್ನು
ಹುಟ್ಟಿಸಿಬಿಟ್ಟಿತ್ತು. ಅಷ್ಟರಲ್ಲಾಗಲೇ ಯಾರು ಬರಲಿ, ಬಿಡಲಿ, ನಾನೊಬ್ಬನಾದರೂ ಅಲ್ಲಿಗೆ
ಹೋಗಬೇಕು ಎನ್ನುವ ನಿರ್ಧಾರಕ್ಕೆ ಬಂದುಬಿಟ್ಟಿದ್ದ.
ಅದನ್ನು ಅವರಿಗೂ ಹೇಳಿಯೂಬಿಟ್ಟ.
“ಆದರೆ ಒಂದು ಮಾತು. ನನಗೆ ಅಲ್ಲಿನ ಪ್ರದೇಶ ಗೊತ್ತಿಲ್ಲ. ಅಲ್ಲಿಗೆ ಬರೋ ದಾರಿ ಗೊತ್ತಿಲ್ಲ.
ನನ್ನನ್ನು ಕರೆದುಕೊಂಡು ಹೋಗಿ ವಾಪಸ್ಸು ಬಿಡಲು ವ್ಯವಸ್ಥೆ ಮಾಡಬೇಕು. ನಾಡಿದ್ದು ರವಿವಾರ
ಬರ್ತೇನೆ. ಬರಲು ನನ್ನ ಸ್ನೇಹಿತರಿಗೂ ಹೇಳ್ತೇನೆ. ಇಲ್ಲವಾದರೆ ನಾನೊಬ್ಬನಂತೂ ಬರ್ತೇನೆ” ಎಂದ.
4
ದೇವರ ಕಾಡು ಎನ್ನುವ ಹೆಸರನ್ನು ಅಂಟಿಸಿಕೊಂಡಿದ್ದ ಆ ಊರಿನಲ್ಲಿ ಈಗ
ಹುಡುಕಿದರೂ ಒಂದೇ ಒಂದು ದೇವರ ಕಾಡು ಎಂದು ಕರೆಸಿಕೊಳ್ಳುವಂಥ ತೋಪು ಕಾಣಲು
ಸಾಧ್ಯವೇ ಇರಲಿಲ್ಲ. ಆ ಊರಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರನ್ನು ಸಂದರ್ಶಿಸಲು
ಹೋಗಿದ್ದಾಗ ಶತಮಾನದಂಚಿಗೆ ಬಂದು ತಲುಪಿದ ಆ ಮುದುಕರು ದೇವರ ಕಾಡಿನ ಐತಿಹ್ಯದ
ಕುರಿತು ತಾಸುಗಟ್ಟಲೇ ಹೇಳಿದ್ದರು. ಒಂದು ಕಾಲದಲ್ಲಿ ದೂರ ದೂರದಲ್ಲಿರುವ ಮನೆಗಳ ಆ
ಊರನ್ನೆಲ್ಲ ಕಾಡು ಕವಿದುಕೊಂಡಿತ್ತು. ಮನೆಯಂಚಿಗೆ ಬಂದು ಆವರಿಸಿಕೊಳ್ಳುತ್ತಿದ್ದ ಕಾಡಿನಲ್ಲಿದ್ದ
ಹುಲಿ, ಜಿಂಕೆ ಮುಂತಾಗಿ ಹಲವು ಕಾಡುಪ್ರಾಣಿಗಳು ಕೊಟ್ಟಿಗೆಯಲ್ಲಿದ್ದ ಜಾನುವಾರುಗಳಂತೆ
ಸಾಮಾನ್ಯವಾಗಿದ್ದವು. ಎತ್ತರದ ಗುಡ್ಡವೊಂದರ ಇಳಿಜಾರಿನ ಸುತ್ತಲಿನ ಅಂಚುಗಳಲ್ಲಿದ್ದ
ಮನೆಗಳೆಲ್ಲ ಜನಸಂಖ್ಯೆ ಹೆಚ್ಚಿದಂತೆ ಹತ್ತಾರು ಮನೆಗಳ ಊರಾದವು. ಅಂಥ ನಾಲ್ಕಾರು ಪುಟ್ಟ
ಊರುಗಳೆಲ್ಲ ಕ್ರಮೇಣ ವಿಸ್ತರಿಸುತ್ತ ಒಂದಕ್ಕೊಂದು ಸೇರಿಕೊಂಡು ಈಗ ಪಟ್ಟಣವೆಂದು
ಕರೆಸಿಕೊಳ್ಳುವ ಸ್ವರೂಪ ಪಡೆದಿತ್ತು. ದಟ್ಟವಾಗಿದ್ದ ಕಾಡು ನೋಡ ನೋಡುತ್ತಿದ್ದಂತೇ ದೂರ
ಸರಿಯತೊಡಗಿತ್ತು. ಅತ್ತ ಪಟ್ಟಣವೂ ಅಲ್ಲದ, ಇತ್ತ ಹಳ್ಳಿಯೂ ಆಗಿ ಉಳಿಯದ ದೇವರ ಕಾಡು
ಮರಗಳಿಲ್ಲದಿದ್ದರೂ ಹೆಸರನ್ನು ಮಾತ್ರ ಉಳಿಸಿಕೊಂಡಿತ್ತು. ಮಲೆನಾಡಿನ ಎಲ್ಲ ಊರುಗಳಂತೇ
ಅಲ್ಲಿಯೂ ಸ್ಥಳೀಯರಿಗಿಂತ ಹೊರ ಊರಿನವರೇ ಅಧಿಪತ್ಯ ಸ್ಥಾಪಿಸಿದ್ದರು. ಅಲ್ಲಿನ ಹವೆ,
ವಾತಾವರಣ, ಎಲ್ಲಕ್ಕಿಂತ ಹೆಚ್ಚಾಗಿ ಕಡಿಮೆ ಖರ್ಚಿನಲ್ಲಿ ಬದುಕುವ ಅವಕಾಶದಿಂದಾಗಿ ಒಮ್ಮೆ ಈ
ಊರಿಗೆ ಕಾಲಿಟ್ಟವರು ಇಲ್ಲಿಂದ ಹೋಗಲು ಮನಸ್ಸು ಮಾಡುತ್ತಿರಲಿಲ್ಲ.
ಹಿಂದೆ ಅಲ್ಲಿ ಬಲಾಡ್ಯವಾಗಿದ್ದ ಶ್ವೇತಪುರದ ರಾಜರನ್ನು ಹದ್ದುಬಸ್ತಿನಲ್ಲಿಡಲು ಅನುಕೂಲವಾಗುತ್ತದೆ
ಎನ್ನುವ ಕಾರಣದಿಂದ ಬ್ರಿಟಿಷರು ಈ ಊರಿನಲ್ಲಿ ಕಚೇರಿ ಹಾಗೂ ಸಣ್ಣ ಪೊಲೀಸ್ ಚೌಕಿಯನ್ನು
ತೆರೆದಿದ್ದರಂತೆ. ನಂತರದಲ್ಲಿ ದೇವರಕಾಡನ್ನು ತಾಲೂಕು ಕೇಂದ್ರ ಮಾಡಿದ್ದರೂ ಅದು ತನ್ನ ಹಳೆಯ
ಗುಣ, ಸ್ವರೂಪವನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸಿಯೇ ಇರಲಿಲ್ಲವೇನೋ?
ದೇವರ ಕಾಡಿನ ಎಲ್ಲ ರಸ್ತೆಗಳ ಬದಿಯುದ್ದಕ್ಕೂ ಸಾಲು ಸಾಲಾಗಿ ನೆಟ್ಟು ಬೆಳೆಸಿದ್ದ ದೂಪ,
ಹೊನ್ನೆ, ಬೀಟೆ, ಆಲದ ಮರಗಳೆಲ್ಲ ಒಂದು ಕಾಲಕ್ಕೆ ಆ ಸುತ್ತಮುತ್ತಲೆಲ್ಲ ಪ್ರಸಿದ್ಧವಾಗಿತ್ತಂತೆ.
ಹೊಸ ಕಾಲದ ಜನಕ್ಕೆ ಅವೆಲ್ಲ ಪಿರಿಪಿರಿಯಂತೆನ್ನಿಸಿತ್ತೋ ಏನೋ? ಏನೇನೋ ಮಸಲತ್ತು ಮಾಡಿ,
ರಾತ್ರಿ ಬೆಳಗಾಗುವದರೊಳಗೆ ಅದರ ಬುಡ ಬಿಡಿಸಿ ಕಿತ್ತೋ, ಮರಗಳ ತೊಗಟೆ ಸುಲಿದು, ಒಣಗಿದ
ನಂತರ ಬೆಂಕಿ ಇಟ್ಟೋ ಅವನ್ನೆಲ್ಲ ನಿರ್ನಾಮ ಮಾಡಿದ್ದರು. ಆ ಮರಗಳಿದ್ದ ಜಾಗದಲ್ಲಿ ಪುಟ್ಟ
ಅಂಗಡಿಗಳು ಸ್ಥಾಪಿತವಾಗಿ ಯಾವ್ಯಾವುದೋ ದಂಧೆಗಳಲ್ಲಿ ತೊಡಗಿಕೊಂಡಿದ್ದವು. ಆ ಊರಿನಲ್ಲಿ
ಯಾರೇ ಆಗಲಿ ಮಾತೆತ್ತಿದರೆ ಕ್ಷುಲ್ಲಕ ರಾಜಕಾರಣದ ಬಗ್ಗೆಯೋ, ಮಠಾಧಿಪತಿಗಳ ಅಬ್ಬರದ
ಕಾರ್ಯಕ್ರಮದ ಬಗ್ಗೆಯೋ ಮಾತನಾಡುತ್ತಿದ್ದರೇ ಹೊರತು ಜನಸಾಮಾನ್ಯನ ಬದುಕಿಗೆ ಅಗತ್ಯವಾದ
ವಿಷಯದ ಕುರಿತು ಚಕಾರವೆತ್ತುತ್ತಲೇ ಇರಲಿಲ್ಲ. ದೇವರ ಕಾಡು ಎನ್ನುವ ಆ ಊರು ಒಂದು
ರೀತಿಯಲ್ಲಿ ಜಡವಾಗಿ, ಉಸಿರೆಳೆಯುತ್ತ ಬದುಕುತ್ತಿತ್ತು. ಅನಿವಾರ್ಯವಾಗಿ ಬದುಕುತ್ತಿದ್ದ
ಗಿರಿಧರನಿಗೆ ಬೇಡವೆಂದರೂ ಆ ಊರನ್ನು ಬಿಡಲು ಸಾಧ್ಯವಿರಲಿಲ್ಲ. ಹಿಂದೆ ಯಾವಾಗಲೋ
ಜನಜಂಗುಳಿಯಿಲ್ಲದ, ಇನ್ನೊಬ್ಬರ ಮಾತಿಗೆ ಮಾನ್ಯತೆ ಕೊಟ್ಟು ಬದುಕುತ್ತಿದ್ದ ಜನಗಳು
ಇದ್ದಿರಬಹುದಾದ ಆ ಊರು ಈಗ ಬಿಡುಬೀಸಾದ, ಯಾವ ಅಂಕೆಯಿಲ್ಲದ ಮನಸ್ಥಿತಿಯನ್ನು
ಪಡೆದುಕೊಂಡಿದ್ದರ ಕಾರಣವನ್ನು ಹುಡುಕಲು ಗಿರಿಧರ ಪರದಾಡುತ್ತಿದ್ದ.
ವಾಸ್ತವಿಕವಾಗಿ ಗಿರಿಧರ ಆ ಊರಿನವನೇ ಅಲ್ಲವಾಗಿದ್ದ. ಆತ ಎಲ್ಲಿಂದ ಬಂದನೋ? ಅವನ ತಂದೆ,
ತಾಯಿ ಯಾರೋ? ನೆಂಟರು, ಬಂಧು ಬಳಗ ಇದೆಯೋ, ಇಲ್ಲವೋ? ದೇವರ ಕಾಡಿನ ಒಬ್ಬರಿಗೂ
ಗೊತ್ತಿರಲಿಲ್ಲ. ಪತ್ರಿಕೆಯೊಂದರ ವರದಿಗಾರನಾಗಿ ಆ ಊರಿಗೆ ಬಂದ ಗಿರಿಧರ ಆ ಬಗ್ಗೆ
ಚಕಾರವೆತ್ತುತ್ತಿರಲಿಲ್ಲ. ಪುಟ್ಟ ರೂಮೊಂದರಲ್ಲಿ ಒಂಟಿಯಾಗಿ ಇರುತ್ತಿದ್ದ ಆತನ ಬಗ್ಗೆ
ಕುತೂಹಲಪಟ್ಟ ಹಲವರು ಅವನ ಕುಲ,ಗೋತ್ರ ತಿಳಿದುಕೊಳ್ಳಲು ಪ್ರಯತ್ನಿಸಿದರೂ ಅವರಿಗೆ
ಆತನಿಂದ ಏನೂ ಅರಿತುಕೊಳ್ಳಲಾಗಿರಲಿಲ್ಲ. ಹಲವು ತಿಂಗಳುಗಳ ಕಾಲ ಗಿರಿಧರನ ಕುರಿತಾಗಿ
ಅನುಮಾನ, ಕುತೂಹಲಗಳೆಲ್ಲ ಬೆರೆತ ದೃಷ್ಟಿಯಿಂದ ನೋಡಿದ ದೇವರ ಕಾಡಿನ ಜನ ನಿಧಾನಕ್ಕೆ
ಅದನ್ನೆಲ್ಲ ಮರೆತು ಬಿಟ್ಟಿದ್ದರು. ಅಕಸ್ಮಾತ್ ಹೊಸಬರ್ಯಾರಾದರೂ ಗಿರಿಧರ ಎಲ್ಲಿಯವನು? ಅಂತ
ಪ್ರಶ್ನಿಸಿದರೂ „ ಇಲ್ಲೆಲ್ಲೋ ಯಾವುದೋ ಊರಿನವನು‟ ಎಂದು ಹೇಳುವಷ್ಟರ ಮಟ್ಟಿಗೆ ಆತನನ್ನು
ತಮ್ಮೊಳಗೆ ಒಬ್ಬನನ್ನಾಗಿಸಿಕೊಂಡಿದ್ದರು.
ಈ ಊರಿಗೆ ಕಾಲಿಟ್ಟ ದಿನದಿಂದಲೂ ತನಗೆ ಹಿಂದಿನ ಜೀವನವೊಂದಿತ್ತು ಎನ್ನುವದನ್ನು
ಮರೆತವನಂತೇ ಗಿರಿಧರ ಬದುಕಿದ್ದ. ಅವನನ್ನು ಹುಡುಕಿಕೊಂಡು ಈವರೆಗೂ ಯಾರೂ
ಬಂದಿರಲಿಲ್ಲ. ಸ್ವಕೀಯರನ್ನು ಕಾಣಬೇಕೆಂದು ಈತನೂ ಎಲ್ಲಿಗೂ ಹೋಗಿರಲಿಲ್ಲ. ಯಾವುದೋ
ಗ್ರಹದಿಂದ ಉದುರಿಬಿದ್ದವನಂತೆ ದೇವರ ಕಾಡಿನಲ್ಲಿ ಕಾಣಿಸಿಕೊಂಡಿದ್ದ ಗಿರಿಧರ ಈ ಕಾರಣದಿಂದ
ಆಗೀಗ ಕೆಲವರಲ್ಲಾದರೂ ತಲೆಬಿಸಿ ಹುಟ್ಟಿಸುತ್ತಿದ್ದ. ಸಿಡುಕು, ಒಂಟಿತನಗಳ ಜೊತೆಗೆ ಅವನಲ್ಲಿದ್ದ
ಪ್ರಾಮಾಣಿಕತೆ, ನಿಷ್ಠುರತೆಗಳು ಆ ಊರಿನವರಲ್ಲಿ ಮೆಚ್ಚುಗೆಯನ್ನು, ಭಯವನ್ನೂ ಹುಟ್ಟಿಸಿತ್ತು.
ಅವನಿಗೆ ವೈಯುಕ್ತಿಕ ಬದುಕೆನ್ನುವದು ಇತ್ತೋ, ಇಲ್ಲವೋ? ಯಾರಿಗೂ ಅರ್ಥವಾಗುವಂತಿರಲಿಲ್ಲ.
ತನ್ನ ನಿತ್ಯದ ಬದುಕನ್ನು ನಿಚ್ಛಳವಾದ ಬೆಳಕಿಗಿಟ್ಟಂತೇ ಬದುಕುತ್ತಿದ್ದರೂ ಅಲ್ಲಿನವರಿಗೆ ಆತ
ನಿಗೂಢವಾಗಿಯೇ ಕಾಣುತ್ತಿದ್ದ.
5
ರವಿವಾರ ನಸುಕಿನಲ್ಲೇ ಗಿರಿಧರನ ಬೈಕ್ ಜೋಗಫಾಲ್ಸ ರಸ್ತೆಯಲ್ಲಿ ಓಡುತ್ತಿತ್ತು. ತಮ್ಮ
ಪರಿಚಯದ, ಗೋಳಿಮಕ್ಕಿ ಕಡೆಯ ಶಂಕರ ಶೆಟ್ಟಿ ಎನ್ನುವಾತನಿಗೆ ಕರೆದುಕೊಂಡು ಬರಲು
ಹೇಳಿದ್ದಾಗಿಯೂ, ಅವನ ಜೊತೆಯಲ್ಲೇ ಬರಬೇಕೆಂತಲೂ ಮಾರನೆಯ ದಿನವೇ ಮತ್ತೆ ಗೋವಿಂದ
ಹೆಗಡೆ ಫೋನ್ ಮಾಡಿ ತಿಳಿಸಿದ್ದರು. ಅವರಿಗೆ ಗಿರಿಧರ ಬರುತ್ತಿರುವದೇ ಬಹುದೊಡ್ಡ ಥ್ರೀಲ್
ಆಗಿಬಿಟ್ಟಿತ್ತು.
ಪಂಪ್ ಸೆಟ್ ರಿಪೇರಿ, ಕರೆಂಟ್ ಕೆಲಸದ ಗುತ್ತಿಗೆ ಅದೂ ಇದೂ ಮಾಡಿಕೊಂಡಿದ್ದ ಐವತ್ತರ
ಆಚೆ, ಈಚೆ ಇದ್ದ ಶಂಕರ ಶೆಟ್ಟಿಯ ಪರಿಚಯ ಹಿಂದೆ ಯಾವಾಗಲೋ ಗಿರಿಧರನಿಗೂ ಆಗಿತ್ತು.
ಗೋಳೀಮಕ್ಕಿ ಹತ್ತಿರದ ಯಾವುದೋ ಊರಿನವನಾಗಿದ್ದ ಆತ ಎಲ್ಲಾದರೂ ಅಪರೂಪಕ್ಕೆ ಗಿರಿಧರನ
ಹತ್ತಿರ ಬಂದು ಅದು, ಇದು ಎಂದು ಹರಟುತ್ತಿದ್ದ. ಅವನ ಅದೃಷ್ಟಕ್ಕೆ ಗಿರಿಧರನ ಮನಸ್ಥಿತಿ
ಸರಿಯಿದ್ದರೆ ಅವರ ಮಾತುಕತೆಗಳು ಸೌಹಾರ್ದವಾಗಿ ಕೊನೆಗೊಳ್ಳುತ್ತಿದ್ದವು. ಇಲ್ಲವಾದರೆ ಗಿರಿಧರ
ಮತ್ತು ಅವನ ನಡುವೆ ಇಬ್ಬರಿಗೂ ನಯಾಪೈಸೆ ಪ್ರಯೋಜನವಿಲ್ಲದ ಹೆಸ್ಕಾಂ ಕಾರ್ಯವೈಖರಿಯ
ಬಗ್ಗೆ ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷದವರ ನಡುವೆ ನಡೆಯುವಂತೆ ವಾಕ್
ಸಮರ ನಡೆಯುತ್ತಿತ್ತು.
ಶನಿವಾರ ಬೆಳಿಗ್ಗೆಯೇ ಬಂದು ಮರುದಿನ ಹೋಗುವದರ ಬಗ್ಗೆ ಶಂಕರಶೆಟ್ಟಿ ಮಾತನಾಡಿದ್ದ.
ಹಾಗಾಗಿ ಯಾವ ತಲೆಬಿಸಿ ಮಾಡಿಕೊಳ್ಳದೇ ಗಿರಿಧರ ಶಂಕರ ಶೆಟ್ಟಿಯನ್ನು ತನ್ನ ಬೈಕಿನಲ್ಲಿ
ಕೂರಿಸಿಕೊಂಡು ಬೆಳ್ಳಂಬೆಳಗ್ಗೆಯೇ ಹೊರಟಿದ್ದ. ಉಳಿದ ವರದಿಗಾರರಿಗೆ ಬರಲು
ತೊಂದರೆಯಿದ್ದುದರಿಂದ ನೀನು ಹೋಗಿ ಬಾ ಎಂದಿದ್ದರು.
ಅವರು ಜೋಗಫಾಲ್ಸ ದಾಟಿ ಎ.ಬಿ.ಸೈಟ್ ಇರುವ ದಾರಿಯಲ್ಲಿ ಮುಂದೆ ಹೋಗಿ ಹೆನ್ನೆ
ಎನ್ನುವ ಊರಿಗೆ ಹೋಗಬೇಕಿತ್ತು. ಬೈನೆಕಾಡಿನಿಂದ ಗೋವಿಂದ ಹೆಗಡೆ ಕಳುಹಿಸುವ ಜನ ಬಂದು
ಘಟ್ಟ ಇಳಿಸಿ ಗಾಂಜಾ ಬೆಳೆಯುವ ಜಾಗದ ಸಮೀಪ ಕರೆದುಕೊಂಡು ಹೋಗುತ್ತಾರೆ ಎಂದು
ಗೋವಿಂದ ಹೆಗಡೆ ತನಗೆ ತಿಳಿಸಿರುವದಾಗಿ ಗಿರಿಧರನ ಜೊತೆ ಬಂದ ಶಂಕರ ಶೆಟ್ಟಿ ಹೇಳಿದ.
“ನಾವು ಸೋರಗುಪ್ಪ ಮೂಲಕ ಹೋದರೆ ಗಾಂಜಾ ಗ್ಯಾಂಗಿನವರು ಕಂಡಾರು?. ಅದಕ್ಕೆ ಹೆನ್ನೆ
ಮೂಲಕ ಹೋಗೋದು ಒಳ್ಳೇದು ಎಂದು ಹೆಗಡೇರಿಗೆ ಹೇಳಿದ್ದೆ” ಎಂದು ಶಂಕರ ಶೆಟ್ಟಿ
ಸಮಜಾಯಿಷಿ ಕೊಟ್ಟ.
ಗಿರಿಧರನಿಗೆ ನಿಜಕ್ಕೂ ರೋಮಾಂಚನವಾಗತೊಡಗಿತ್ತು. ಪತ್ತೇದಾರಿ ಕಾದಂಬರಿಯನ್ನ ಓದುವಾಗ
ಆಗುತ್ತಿದ್ದ, ಮರೆತುಹೋಗಿದ್ದ ಥ್ರಿಲ್ ಈಗ ಮರುಕಳಿಸತೊಡಗಿತ್ತು. ಇಂಗ್ಲೀಷ್ ಆಕ್ಷನ್
ಸಿನೆಮಾಗಳಲ್ಲಿನ ಅನಿರೀಕ್ಷಿತ ತಿರುವುಗಳಂತೆ ತಮಗೂ ಆ ಥರ ಅನುಭವ ಎದುರಾಗಬಹುದು
ಎನ್ನಿಸತೊಡಗಿತು. ನೇರವಾಗಿ ಗಾಂಜಾ ಬೆಳೆಯುವ ಕಾಡಿಗೆ ಹೋಗಿ ಫೋಟೊ ತೆಗೆದುಕೊಂಡು
ಬರಬಹುದಾಗಿದ್ದರೂ ಅದನ್ನು ಬಿಟ್ಟು ಈ ರೀತಿ ಸುತ್ತಿ ಬಳಸಿ, ಅಡಗಿಕೊಂಡು ಹೋಗುವ
ಅಗತ್ಯವಿತ್ತೇ? ಎನ್ನಿಸಿತು. ಆದರೂ ಅವನಿಗಾಗುತ್ತಿರುವ ಪುಳಕದಲ್ಲಿ ಈ ಥರ ಹೋಗೋದರ
ಮಜಾನೇ ಬೇರೆ ಎನ್ನುವ ಸಮಾಧಾನ ಮಾಡಿಕೊಂಡ.

6

ಎ.ಬಿ.ಸೈಟ್ ಗೇಟಿನಲ್ಲಿ ಅಲ್ಲಿದ್ದ ಸೆಕ್ಯೂರಿಟಿ ತಗಾದೆ ತೆಗೆದುಕೊಂಡು ಕೂತಿದ್ದ.
“ನೀವು ಯಾರು? ಎಲ್ಲಿಂದ ಬಂದವರು? ಎಲ್ಲಿಗೆ ಹೋಗುವವರು?” ಎನ್ನುವ ಅಸಡ್ಡಾಳ
ಪ್ರಶ್ನೆಗಳನ್ನು ಹಾಕಿ “ಹೆನ್ನೆ ಊರಿನವರಾದರೆ ಮಾತ್ರ ಈ ದಾರಿಯಲ್ಲಿ ಪ್ರವೇಶ. ಹೊರ
ಭಾಗದವರು ಅಲ್ಲಿಗೆ ಹೋಗಬೇಕೆಂದರೆ ಪರ್ಮಿಶನ್ ತರಬೇಕು” ಎಂದು ಕಡ್ಡಿ ಮುರಿದಂತೆ ಹೇಳಿದ.
ಅವನನ್ನೇ ಎಲ್ಲಿ ಪರ್ಮಿಶನ್ ಪಡೆಯೋದು ಎಂದು ಕೇಳಿಕೊಂಡು ಕೆಪಿಸಿ ಕಚೇರಿಗೆ ಬರುವಾಗ
ಗಿರಿಧರ ಜೊತೆಗಿದ್ದ ಶಂಕರ ಶೆಟ್ಟಿ ಹತ್ತಿರ ಕೇಳಿದ.
“ಅಲ್ಲಾ, ಆ ಗೇಟಿನಲ್ಲಿ ಜನರನ್ನು ಹೆನ್ನೆಯವರು ಅಂತಾ ಹೇಗೆ ಗುರ್ತಿಸ್ತಾರೆ. ನಾವೂ ಎದೆ ಸೆಟಸಿ
ಹೋಗಿದ್ದರೇ ದಾಟಬಹುದಿತ್ತೋ ಏನೋ? ಎಂದ.
ಅದಕ್ಕೆ ಶಂಕರಶೆಟ್ಟಿ “ಅವರಿಗೆಲ್ಲ ದಿನಾ ಓಡಾಡೋರು ಯಾರು, ಹೊರಗಿನವರು ಯಾರು ಎಂದು
ಗೊತ್ತಿರ್ತದೆ” ಎಂದ.
ಕೆಪಿಸಿ ಕಚೇರಿಯಲ್ಲಿ ಪರ್ಮಿಶನ್ ಕೊಡುವಾಗ ಒಳಗಿದ್ದ ವ್ಯಕ್ತಿ ಕಿಟಕಿಯಲ್ಲೇ ಹಣಕಿ “ಹೆನ್ನೆಯಲ್ಲಿ
ಯಾರ ಮನೆಗೆ ಹೋಗುವವರು ನೀವು?” ಎಂದಿತು.
“ಗುಣಪಾಲರ ಮನೆಗೆ” ಎಂದು ತಟ್ಟನೆ ಹೇಳಿದ ಜೊತೆಗಿದ್ದ ಶಂಕರ ಶೆಟ್ಟಿ.
ಆಶ್ಚರ್ಯದಿಂದ ಕಣ್ಣು ಬಿಟ್ಟ ಗಿರಿಧರನತ್ತ ನೋಡಿ ಸುಮ್ಮನಿರು ಎಂದು ಶಂಕರ ಶೆಟ್ಟಿ ಸನ್ನೆ
ಮಾಡಿದ. ಪರ್ಮಿಶನ್ ಲೆಟರ್ ಹಿಡಿದು ಬರುವಾಗ “ಯಾರು ಗುಣಪಾಲ? ಎಂದಿದ್ದಕ್ಕೆ “ಯಾರೋ
ಏನೋ, ಈ ಭಾಗದಲ್ಲಿ ಜೈನರು ಜಾಸ್ತಿ. ಅದಕ್ಕೆ ನೆನಪಿಗೆ ಬಂದ ಹೆಸರು ಹೇಳಿದೆ. ಅನುಮಾನ
ಮಾಡಿದ್ರೆ ಪರ್ಮಿಶನ್ ಕೋಡೋಕೆ ಹಿಂದೆ ಮುಂದೆ ನೋಡ್ತಿದ್ನೆನೋ” ಎಂದ.
ಗಿರಿಧರನಿಗೆ ಅಷ್ಟರಲ್ಲಾಗಲೇ ನಾನು ಬೇರೆ ಯಾರೋ ಆಗಿದ್ದೇನೆಯೇ ಎನ್ನುವ ಅನುಮಾನ
ಬರಲು ಆರಂಭವಾಗಿತ್ತು. ಅವನಿಗೆ ಯಾರಾದರೂ „ನೀನು ಯಾರು? „ ಎಂದಾಗಲೆಲ್ಲ ಅವನ ಬಗ್ಗೆ
ಅವನಿಗೇ ಬಗ್ಗೆಯೇ ಗುಮಾನಿ ಮೂಡುವದು ಮಾಮೂಲಿಯಾಗಿತ್ತು. ಅದು ಮಾತ್ರವಲ್ಲದೇ ಈಗ
ಕ್ಷಣಕ್ಕೊಂದು ಕಿರಿ ಕಿರಿ, ಕೊರಕೊರೆಗಳು. ಈ ಎಲ್ಲದರ ಕೊನೆ ಏನಾಗಬಹುದು? ಎನ್ನುವ
ಭಯಮಿಶ್ರಿತ ಅನಿಸಿಕೆಯೂ ಆಯಿತು.
ಪರ್ಮಿಶನ್ ಲೆಟರ್ ಕೊಟ್ಟು ಗೇಟು ದಾಟುವಾಗ “ಯಾಕಿಷ್ಟು ಕಂಡಿಶನ್?” ಎಂದು
ಸೆಕ್ಯೂರಿಟಿಯನ್ನು ಕೇಳಿದ್ದಕ್ಕೆ ಆತ “ಏನ್ರೀ, ಅಷ್ಟು ಗೊತ್ತಾಗಲ್ವಾ, ದೇಶಕ್ಕೇ ಕರೆಂಟ್ ಕೊಡೋ
ಎ.ಬಿ.ಸೈಟ್ ಮುಂದಿದೆ. ಯಾವನಾದ್ರೂ ಉಗ್ರಗಾಮಿ ನುಸುಳಿ ಬಿಟ್ಟು ಲಫಡಾ ಮಾಡಿದ್ರೇ?” ಎಂದು
ಗಿರಿಧರನನ್ನು „ಟೆರರಿಸ್ಟ‟ ಥರಾ ಕೆಕ್ಕರಿಸಿ ನೋಡಿದ.
„ ಏನಾದ್ರೂ ಲಫಡಾ ಮಾಡಲು ಉಗ್ರಗಾಮಿಗಳಿಗೆ ಈ ದಾರಿಯಲ್ಲೇ ಬರಬೇಕೇ? ಬಂದರೂ
ಹಳೆಯ ಲಡಾಸು ಕೋವಿ ಹಿಡಿದ ಈ ಮುದಿ ಸೆಕ್ಯೂರಿಟಿ ಟೆರರಿಸ್ಟಗಳಿಗೆ ಯಾವ ಲೆಕ್ಕ. ಇವರಿಗೆ
ಸಾವಿರಾರು ರೂಪಾಯಿ ಸಂಬಳ ತಿನ್ನಲು, ಜನರಿಗೆ ಎಲ್ಲಿಲ್ಲದ ತರಲೆ, ತಾಪತ್ರಯ ಕೊಡಲು
ಮಾಡಿಕೊಂಡ ಕಣ್ಣುಕಟ್ಟುವ ವ್ಯವಸ್ಥೆ‟ ಎಂದು ಗಿರಿಧರ ಮನಸ್ಸಿನಲ್ಲೇ ಬೈಯ್ದುಕೊಂಡ.
ಬೈಕಿನಲ್ಲಿ ಹೆನ್ನೆಯ ದಾರಿ ಹಿಡಿದಾಗ ಹಿಂದುಗಡೆ ಕೂತಿದ್ದ ಶಂಕರ ಶೆಟ್ಟಿ ತನ್ನ
ಕುತೂಹಲಭರಿತ ಪ್ರಶ್ನೆಗಳಿಗೆ ಶುರು ಹಚ್ಚಿದ.
“ ಈ ಗಾಂಜಾ ಅಂದರೆ ನಮ್ಮಲ್ಲಿ ಸೇದ್ತಾರಲ್ಲಾ ಆ ಭಂಗಿನಾ? ಅಥವಾ ಇದೇ ಬೇರೆ ಇರ್ತದಾ?”
ಅಮಾಯಕನಂತೆ ಕೇಳಿದ ಶಂಕರಶೆಟ್ಟಿ.
ಬೈಕಿನ ಸದ್ದಿನಲ್ಲಿ ಗಟ್ಟಿಯಾಗಿ ಕೇಳಿದ ಅವನ ಸ್ವರ ಸುತ್ತ ನಾಲ್ಕು ಮೈಲಿಗೆ ಕೇಳುವಷ್ಟು
ದೊಡ್ಡದಾಗಿತ್ತು.
“ ಮಾರಾಯಾ, ಸಣ್ಣಗೆ ಮಾತಾಡೋ. ನಾವು ಗುಟ್ಟಿನಿಂದ ಯಾರಿಗೂ ಗೊತ್ತು ಮಾಡದೇ
ಹೋಗ್ತೀದೀವಿ. ನೀನು ನೋಡಿದ್ರೇ ಇಲ್ಲೆಲ್ಲ ಟಾಂಟಾಂ ಮಾಡ್ತಾ ಇದಿಯಲ್ಲೋ” ಎಂದು ಗಿರಿಧರ
ರೇಗಿದ.
“ ಅಲ್ಲಾ ಮಾರಾಯ್ರಾ, ಭಂಗಿನಾ ನಮ್ಕಡೆ ಕೆಲವರು ಬೆಳೀತಾರೆ, ಅದೂ ಒಂದೋ, ಎರಡೋ ಗಿಡ
ಅಷ್ಟೇಯಾ. ಅದ್ನೂ ಕಾಡಿನೊಳಗೆಲ್ಲೋ ಬೇಳೀತಾರೆ. ಅದನ್ನೇ ಯಾರಾದ್ರೂ ಹೇಳಿಕೊಟ್ಟು
ಗೊತ್ತಾದ್ರೆ ಈ ಫಾರೆಸ್ಟನವರ ಅಬ್ಬರ ಏನೂ ಅಂತೀರಿ. ಇಲ್ಲಿ ಎಕರೆಗಟ್ಲೆ ಬೆಳೆದಿದಾರೆ ಅಂತಾರೆ
ಗೋವಿಂದ ಹೆಗಡೇರು, ಫಾರೆಸ್ಟನೋರು ಸುಮ್ನೆ ಇರ್ತಾರಾ?” ಎಂದು ಶಂಕರಶೆಟ್ಟಿ ಮರು ಪ್ರಶ್ನೆ
ಎಸೆದ.
ಗಿರಿಧರ ಏನೂ ಮಾತನಾಡದೇ ತಿರುವು ಮುರುವಿನ ಆ ರಸ್ತೆಯಲ್ಲಿ ಬೈಕ್‍ನ್ನು ಸಮತೋಲನದಲ್ಲಿ
ಓಡಿಸುವದರತ್ತ ಗಮನ ಕೊಟ್ಟ.
ವಾಸ್ತವವಾಗಿ ಈಡೀ ಪಶ್ಚಿಮಘಟ್ಟವೇ ನಾನಾ ರೀತಿಯ ಅಕ್ರಮ ಕಾರ್ಯಗಳಿಂದಾಗಿ ನಲುಗುತ್ತಿತ್ತು.
ಗಾಂಜಾ ಬೆಳೆಯುವದರಿಂದ ಹಿಡಿದು ಊಹಿಸಲೂ ಸಾಧ್ಯವಾಗದ ಚಟುವಟಿಕೆಗಳು ಸಹ್ಯಾದ್ರಿಯ
ದಟ್ಟ ಕಾಡಿನ ಒಡಲಲ್ಲಿ ನಿರಾತಂಕವಾಗಿ ನಡೆಯುತ್ತಿದ್ದವು. ಮೊದಲೆಲ್ಲ ಬೆಲೆ ಬಾಳುವ ಮರ, ಬೆತ್ತ
ಮುಂತಾದವುಗಳ ಕಳ್ಳ ಸಾಗಾಣಿಕೆಗೆ ಸೀಮಿತವಾಗಿದ್ದ ಕಳ್ಳ ದಂಧೆಗಳು ಹೆಚ್ಚು ಹೆಚ್ಚು ಹಣ
ದೋಚುವ ಕ್ಷೇತ್ರಗಳಿಗೂ ವಿಸ್ತರಿಸಿತ್ತು. ಕಡವೆ ಮುಂತಾದ ಪ್ರಾಣಿಗಳಿಂದ ಹಿಡಿದು ಪುನುಗಿನ
ಬೆಕ್ಕು ಮುಂತಾದ ಸಣ್ಣಪುಟ್ಟ ಪ್ರಾಣಿಗಳನ್ನು ಹತ್ಯೆ ಮಾಡಿ ಅವುಗಳ ಚರ್ಮ, ತುಪ್ಪಳಗಳನ್ನು
ಗುಟ್ಟಾಗಿ ಸಾಗಿಸುವ, ಔಷಧಿ ಮೂಲಿಕೆ, ಮರದ ಚಕ್ಕೆ, ಬಳ್ಳಿಗಳನ್ನು ಸಾಗಿಸುವ ಭೂಗತ
ತಂಡಗಳು ಅಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ವಿವಿಧ ಜಾತಿಯ ಹಾವುಗಳ ವಿಷ, ಚರ್ಮ,
ಮೊಟ್ಟೆ ಮುಂತಾದವನ್ನೆಲ್ಲ ಕಳ್ಳತನದಲ್ಲಿ ಸಾಗಿಸಲಾಗುತ್ತಿತ್ತು. ಚಿಪ್ಪು ಹಂದಿ, ಕ್ಯಾಸಣಿಲು
ಮುಂತಾದವನ್ನು ಜೀವಂತವಾಗಿ ಹಿಡಿದು ಕದ್ದು ಒಯ್ಯುತ್ತಿದ್ದರು. ಜೀವಜಗತ್ತಿನ ಸಕಲ
ಭಂಡಾರದಂತಿದ್ದ ಪಶ್ಚಿಮಘಟ್ಟ ಇತ್ತೀಚಿನ ದಿನಗಳಲ್ಲಿ ಗಾಂಜಾ ಬೆಳೆಗೂ ಪ್ರಶಸ್ತ ತಾಣವಾಗಿ
ಮಾರ್ಪಟ್ಟಿತ್ತು. ಹಗಲೆಲ್ಲ ಸಾಮಾಜಿಕ ಜೀವನದಲ್ಲಿ ಪ್ರತಿಷ್ಠಿತರಂತೆ ಓಡಾಡುತ್ತಿದ್ದವರೆಲ್ಲ
ರಾತ್ರಿಯಾಗುತ್ತಿದ್ದಂತೇ ತಮ್ಮ ಮುಖವಾಡ ಕಳಚಿಟ್ಟು, ನಿಜವಾದ ಸ್ವರೂಪದಲ್ಲಿ ಕಳ್ಳದಂಧೆಯಲ್ಲಿ
ಸಕ್ರೀಯರಾಗುತ್ತಿದ್ದರು.
ಈ ಥರದ ಮಾದಕವಸ್ತುಗಳ ಬೆಳೆ ಬೆಳೆಯುವದನ್ನು ತಡೆಯಲು ಭಾರೀ ಕಟ್ಟುನಿಟ್ಟಾದ
ಕಾನೂನಿದ್ದರೂ ಅದಕ್ಕೆ ತುಕ್ಕು ಹಿಡಿದಿತ್ತು. ಕಾನೂನುಗಳೆಲ್ಲ ಸಾಮಾನ್ಯ ಜನರಿಗೆ ಉಪದ್ರವ
ಕೊಡಲು ಬಳಕೆಯಾಗುತ್ತಿತ್ತೇ ಹೊರತು ಯಾವ ಅಕ್ರಮ ದಂಧೆಯನ್ನೂ ತಡೆಯುತ್ತಿರಲಿಲ್ಲ. ಸ್ಟ್ರಿಕ್ಟ
ಆಫೀಸರ್ ಯಾರಾದ್ರೂ ಇಂಥದ್ದಕ್ಕೆಲ್ಲ ಬಿಗಿ ಮಾಡಿದರೆ ಸ್ಥಳೀಯ ರಾಜಕಾರಣಿಗಳಿಂದ ಹಿಡಿದು
ಶಾಸಕ, ಮಂತ್ರಿಗಳೂ ಕೆಂಡಾಮಂಡಲವಾಗುತ್ತಿದ್ದರು. ಅವರಿಗೆಲ್ಲ ಯಾವ ಮೂಲದಿಂದ ಮಾಮೂಲು
ಹೋಗುತ್ತಿತ್ತೋ ಏನೋ? ಯಾವ್ಯಾವುದೋ ತರಲೆ ಎಬ್ಬಿಸಿ, ಆ ಅಧಿಕಾರಿ ಜನವಿರೋಧಿ ಎಂದು
ಅವನ ವಿರುದ್ಧ ಸ್ಟ್ರೈಕ್ ಮಾಡಿಸುತ್ತಿದ್ದರು. ಇಲ್ಲಸಲ್ಲದ ಆರೋಪ ಹೊರಿಸಿ ಅವನನ್ನು
ಹೈರಾಣಾಗಿಸುತ್ತಿದ್ದರು. ಇದರಿಂದಾಗಿ ನಮ್ಮ ಕೆಲಸ ಉಳಿದರೆ ಸಾಕು ಎಂದು ಅರಣ್ಯ
ಇಲಾಖೆಯವರು ತೆಪ್ಪಗಾಗಿದ್ದು ಹೇಗೋ ಹೊಂದಿಕೊಂಡು ಸರ್ವೀಸ್ ಮಾಡುತ್ತಿದ್ದರು.
“ ನಿಂಗೆಂತಾ ಗೊತ್ತು ಫಾರೆಸ್ಟನವರ ತಲೆಬಿಸಿ. ಅವರಿಗೂ ಮನೆ, ಮಕ್ಕಳು ಇದಾವೆ. ಇಲ್ಲೆಲ್ಲಾ
ಗಾಂಜಾ ಬೆಳೆಯೋರು ಸೇದೋಕೆ ಬೆಳೆಯೋರಲ್ಲ; ಎಲ್ಲೆಲ್ಲೋ ಮಾರಾಟ ಮಾಡಿ ಕೋಟಿಗಟ್ಲೆ
ಹಣ ಮಾಡೋರು. ಅವರ ಹಿಂದೆ ರಾಜಕಾರಣಿಗಳಿರ್ತಾರೆ. ಇಲ್ಲಿನ ಲಿಂಕ್ ಎಲ್ಲಿಗೋ ಹೋಗಿರ್ತದೆ.
ಫಾರೆಸ್ಟನವರು ಹೋಗಿ ಹಿಡಿದ್ರೆ ಸಾಕು, ಫೋನ್ ಬರ್ತದೆ. ಇಂಥದ್ದರಲ್ಲಿ ಯಾರ್ಯಾರು
ಶಾಮೀಲಾಗಿರ್ತಾರೋ, ಏನೋ. ಅದಕ್ಕೆ ಫಾರೆಸ್ಟನವರು ನಮಗ್ಯಾಕೆ ಅಂತ ಸುಮ್ನಿರ್ತಾರೆ” ಎಂದು
ಗಿರಿಧರ ಸಮಜಾಯಿಷಿ ಕೊಟ್ಟ.
ಗಿರಿಧರ ಈ ಭಂಗಿಸೊಪ್ಪಿನ ಲಫಡಾದಲ್ಲಿ ಹಿಂದೊಮ್ಮೆ ಸಿಕ್ಕಿ ಹಾಕಿಕೊಂಡಿದ್ದರ ಪರಿಣಾಮ ಅದರ
ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಒಟ್ಟುಮಾಡಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದ.
ಗಿರಿಧರನ ಪರಿಚಯದ ಒಬ್ಬರ ಬಳಿ ಯಾರೋ ಹರುಕುಮುರುಕು ಕನ್ನಡ ಮಾತನಾಡುವ
ಹೊರಗಿನ ರಾಜ್ಯದ ಮಂದಿ ಬಂದು ದಟ್ಟ ಕಾಡಿನ ನಡುವಿನ ತೀರಾ ಕುಗ್ರಾಮವಾಗಿದ್ದ ಅವರ
ಊರಿನಲ್ಲಿದ್ದ ಹಾಳುಬಿಟ್ಟಿದ್ದ ಜಮೀನನ್ನು ಐದಾರು ವರ್ಷಗಳ ಲೀಸಿಗೆ ಕೇಳಿದ್ದರು. ಪೇಟೆಯಲ್ಲಿದ್ದು
ಅಡಕೆ ವ್ಯಾಪಾರ ಮಾಡಿಕೊಂಡಿದ್ದ ಈ ಮಹಾನುಭಾವ ಜಮೀನು ಕೇಳಲು ಬಂದವರ ಕುಲ,ಗೋತ್ರ
ತಿಳಿದುಕೊಳ್ಳÀದೇ, ತನ್ನ ಹಾಳುಬಿದ್ದ ಜಮೀನಿನಲ್ಲಿ ಅವರು ಏನು ಬೆಳೆಯುತ್ತಾರೆ ಎನ್ನುವದನ್ನೂ
ವಿಚಾರಿಸದೇ ವ್ಯವಹಾರಕ್ಕೆ ಮುಂದಾಗಿದ್ದರು. ಮಾತುಕತೆಗೆ ಕುಳಿತಾಗ ನಿರೀಕ್ಷೆಗಿಂತಲೂ ಹೆಚ್ಚಿನ
ದುಡ್ಡು ಸಿಗುತ್ತದೆ ಎಂದಾಗ ಒಪ್ಪಿಕೊಂಡೂಬಿಟ್ಟಿದ್ದರು. ದಸ್ತಾವೇಜಿನ ಮೇಲೆ ಅದರ ಕುರಿತಾದ
ಎಲ್ಲವನ್ನೂ ಬರೆಸಿ ಒಡಬಂಡಿಕೆ ಮಾಡಿಕೊಂಡು ದುಡ್ಡು ಇಸಿದುಕೊಂಡವರು ನಂತರದಲ್ಲಿ ಆ ಬಗ್ಗೆ
ತಲೆಬಿಸಿ ಮಾಡಿಕೊಳ್ಳದೇ ತಮ್ಮ ಪಾಡಿಗೆ ತಾವಿದ್ದರು.
ಅದಾಗಿ ಎರಡು ವರ್ಷದಲ್ಲೇ ಅವರಿಗೆ ಬರಸಿಡಿಲಿನಂತೆ ಆಘಾತವೊಂದು ಅಪ್ಪಳಿಸಿತ್ತು. ಮಾಡದ
ತಪ್ಪಿಗೆ ಜೈಲುಪಾಲಾಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಇವರಿಂದ ಲೀಸಿಗೆ ಜಮೀನು
ಪಡೆದ ಮಂದಿ ಅಲ್ಲಿ ಗಾಂಜಾ ಬೆಳೆಯುತ್ತಿದ್ದು, ಅದು ಗೊತ್ತಾಗಿ ಅಲ್ಲಿ ರೈಡಾಗಿತ್ತು. ಬೆಳೆ
ತೆಗೆಯುತ್ತಿದ್ದವರು ಪರಾರಿಯಾಗಿದ್ದರು. ಆ ಜಮೀನು ಗಿರಿಧರನ ಪರಿಚಯದ ಅಡಕೆ ವ್ಯಾಪಾರಿಗಳ
ಹೆಸರಲ್ಲೇ ಇದ್ದ ಕಾರಣ ಅದರ ಸಮಸ್ತ ಹೊಣೆಯನ್ನೂ ಇವರೇ ಹೊರಬೇಕಾಗಿ ಬಂತು.
ಮನೆಯೆದುರಿಗೆ ಬಂದು ನಿಂತ ಫಾರೆಸ್ಟ ಇಲಾಖೆಯವರು, ಪೊಲೀಸರು, ಮಾದಕವಸ್ತು ನಿಗ್ರಹ
ದಳ ಮುಂತಾದವರ ಬಳಿ ತಮ್ಮ ಬಳಿಯಿದ್ದ ಲೀಸಿನ ಒಡಂಬಡಿಕೆ ಪತ್ರ ಹಿಡಿದರೂ ಅವರ್ಯಾರೂ
ಕ್ಯಾರೇ ಅನ್ನಲೂ ಇಲ್ಲ.
“ಜಮೀನು ನಿಮ್ಮ ಹೆಸರಿಗಿದೆ ಅಂದರೆ ಅಲ್ಲಿ ನಡೆದ ಲಫಡಾನೂ ನೀವು ಮಾಡಿದ್ದೇ. ಈಗ
ತಪ್ಪಿಸಿಕೊಳ್ಳಲು ಯಾರದ್ದೋ ಹೆಸರು ಹೇಳಿ ನಾಟಕ ಮಾಡ್ತಿದೀರಿ. ಅದನ್ನೆಲ್ಲಾ ಕೋರ್ಟಿನಲ್ಲಿ
ಹೇಳಿ, ಈಗ ಮೊದಲು ಜೀಪ್ ಹತ್ತಿ” ಎಂದು ಗದರಿ, ಸ್ವಲ್ಪ ದೊಡ್ಡ ಮನುಷ್ಯರಾದ ಕಾರಣ ಕತ್ತು
ಹಿಡಿದು ದಬ್ಬದೇ, ಸ್ವಲ್ಪಮಟ್ಟಿನ ರಿಯಾಯಿತಿ ತೋರಿಸಿ, ಕರೆದೊಯ್ದಿದ್ದರು. ಅವರಿವರಿಗೆ ಗೊತ್ತಾಗಿ
ಏನಾದರೂ ಮಾಡಿ ಬಚಾವು ಮಾಡುವಾ ಎಂದು ಹೋಗುವಷ್ಟರಲ್ಲಿ ಅದೂ, ಇದೂ ಎಂದು
ಹತ್ತಾರು ಸೆಕ್ಷನ್ ಹಾಕಿ ಕೇಸು ಜಡಿದಿದ್ದರು. ಎಷ್ಟೇ ತಿಪ್ಪರಲಾಗ ಹಾಕಿದರೂ ಹದಿನೈದು ದಿವಸ
ಜೈಲಿನಲ್ಲಿ ಕಂಬಿ ಎಣಿಸಬೇಕಾಗಿ ಬಂದಿತ್ತು. ನಂತರ ಏನೇನೋ ಮಾಡಿ, ಕ್ರಿಮಿನಲ್ ಕೇಸುಗಳಲ್ಲಿ
ಗಟ್ಟಿಯಾದ ವಕೀಲರನ್ನು ಹಿಡಿದು ಜಾಮೀನು ಪಡೆದು ಹೊರಬರಬೇಕಾದರೆ ಏಳು ಕೆರೆ ನೀರು
ಕುಡಿದಂತಾಗಿತ್ತು. ಲೀಸಿನಲ್ಲಿ ಸಿಕ್ಕ ದುಡ್ಡಿರಲಿ, ದುಡಿದಿದ್ದ ಲಕ್ಷಾಂತರ ರೂಪಾಯಿಗಳೇ ಕೈಬಿಟ್ಟು
ಹೋಗಿದ್ದವು. ಇದ್ದ ದುಡ್ಡಿನಲ್ಲಿ ಬದುಕುವದು ಬಿಟ್ಟು ಮತ್ತಷ್ಟು ಗಳಿಸಲು ಹೋದ ಆ ಪುಣ್ಯಾತ್ಮ
ಜೈಲಿನಲ್ಲಿ ತಿಂಗಳುಗಟ್ಟಲೆ ಒದ್ದಾಡಿ, ಈ ಜೀವನವೇ ಇಷ್ಟು ಎನ್ನುವ ವೇದಾಂತ ಹೇಳುವ ಸ್ಥಿತಿಗೆ
ಬಂದಿದ್ದ. ಜೈಲಿಗೆ ಹೋಗಿ ಬಂದರೂ ಗಂಟು ಬಿಡದ ಕೇಸಿನ ಕಾರಣದಿಂದ ತಿಂಗಳಿಗೆ ಎರಡು,
ಮೂರು ಬಾರಿ ಕೋರ್ಟಿಗೆ ಅಲೆಯುವ ಪಾಡು ತಪ್ಪಿರಲಿಲ್ಲ. ಊರಲ್ಲಿ ಹಾಳುಬಿಟ್ಟಿದ್ದ ಜಮೀನಿನಿಂದ
ಪುಕ್ಕಟೆ ದುಡ್ಡು ಸಿಗುತ್ತದೆ ಎಂದು ದುರಾಸೆಯಿಂದ ಯಾಕಾದರೂ ಲೀಸಿಗೆ ಕೊಟ್ಟೆನೋ ಎಂದು
ಪರಿತಪಿಸಬೇಕಾದ ದುರ್ದೆಸೆ ಅವರದ್ದಾಗಿತ್ತು.
ಆ ಸಮಯದಲ್ಲೇ ತಮ್ಮ ಕೇಸಿಗೆ ಏನಾದರೂ ಪ್ರಯೋಜನವಾದೀತೆಂದು ಗಿರಿಧರನ ಬಳಿ ಅವರು
ಗಾಂಜಾದ ಬಗ್ಗೆ ವಿಚಾರಿಸಿದ್ದರು. ಅವರ ಕಾರಣದಿಂದ ಗಿರಿಧರ ಇವೆಲ್ಲವುದರ ತಲೆ ಬುಡ
ಶೋಧಿಸುವ ಪ್ರಯತ್ನಕ್ಕೆ ಕೈ ಹಾಕಿದ್ದ.
ಹಣದ ಹುಚ್ಚು ತಲೆಗೆ ಅಡರಿಕೊಳ್ಳುವದರ ಅಂತಿಮ ಪರಿಣಾಮ ಇಂಥ ಪರಿಸ್ಥಿತಿಯೇ? ದುಡ್ಡು
ಎಲ್ಲಿಂದ ಬರಲಿ, ಹೇಗೇ ಬರಲಿ, ಒಟ್ಟಿನಲ್ಲಿ ಬ್ಯಾಂಕ್ ಅಕೌಂಟಿನಲ್ಲಿ ಭರ್ಜರಿ ದುಡ್ಡು
ಜಮೆಯಾಗಬೇಕು ಎನ್ನುವ ಹಪಾಹಪಿಯ ಕೊನೆ ಹೀಗೂ ಆದೀತೆ? ಎನ್ನುವ ಪ್ರಶ್ನೆಗಳ ಜೊತೆಗೆ
ಈ ಪ್ರಕರಣದ ಹಿಂದಿನ ವಿವರಗಳನ್ನು ಕಲೆಹಾಕುತ್ತ ಹೋದಂತೇ ಗಿರಿಧರನಿಗೆ ಅಚ್ಚರಿ ಕಾದಿತ್ತು.
ಇವೆಲ್ಲ ಮೇಲ್ನೋಟಕ್ಕೆ ಕಾಣುವಂತೆ ಮಾಮೂಲಿಯಾದ ವ್ಯವಹಾರವಾಗಿರದೇ ಯಾವುದೋ ಕಾಣದ
ಲೋಕದ ಕನೆಕ್ಷನ್ ಹೊಂದಿದ ಕರಾಳಕೃತ್ಯವಾಗಿತ್ತು. ವ್ಯವಸ್ಥಿತವಾದ, ವಿಸ್ತಾರವಾದ ರಾಕೆಟ್
ಒಂದು ಈ ದಂಧೆಯಲ್ಲಿ ಕಾರ್ಯನಿರ್ವಹಿಸುತ್ತಿತ್ತು. ಯಾವುದೋ ಅಪರಿಚಿತರಿಗೆ ಲೀಸಿಗೆಂದು
ಜಮೀನು ಕೊಟ್ಟು ಮೋಸ ಹೋದವರಲ್ಲಿ ಗಿರಿಧರನ ಪರಿಚಯದ ಅಡಕೆ ವ್ಯಾಪಾರಸ್ಥರೇನೂ
ಮೊದಲನೆಯವರಾಗಿರಲಿಲ್ಲ. ಇಂಥವರು ಅನೇಕರಿದ್ದರು. ಅವರೆಲ್ಲ ಮೊದಲೇ ತಮ್ಮ ಜಮೀನಿನಲ್ಲಿ
ಲೀಸ್ ಪಡೆಯಬಂದವರು ಯಾರು? ಅಂಥ ಕಗ್ಗಾಡಿನಲ್ಲಿ ಯಾವ ಲಾಭದಾಯಕ ಬೆಳೆಯನ್ನು
ಬೆಳೆದಾರು? ನಾಲ್ಕಾರು ತಿಂಗಳು ಅಬ್ಬರಿಸುವ ಮಳೆ, ಜವುಗು ನೆಲ, ಕಾಡುಪ್ರಾಣಿಗಳ
ಕಾಟ..ಇವುಗಳ ನಡುವೆ ಇಷ್ಟೆಲ್ಲ ಹಣ ಹಾಕಿ ಏನು ಮಾಡೀಯಾರು? ಎಂದು ಸ್ವಲ್ಪವಾದರೂ
ಯೋಚಿಸಿದ್ದರೆ ಈ ರಾಮಾಯಣದಲ್ಲಿ ಸಿಲುಕಿಕೊಳ್ಳುವ ಪ್ರಸಂಗವೇ ಬರುತ್ತಿರಲಿಲ್ಲ. ಹೇಗೂ
ಹಾಳುಬಿದ್ದ ಜಮೀನು, ಏನೂ ಮಾಡದೇ ಅನಾಯಾಸವಾಗಿ ದುಡ್ಡು ಸಿಗುತ್ತಿದೆಯಲ್ಲ ಎನ್ನುವ
ಆಸೆಗೆ ಬಲಿಬಿದ್ದು ಗಂಡಾಂತರಕ್ಕೆ ತಲೆ ಕೊಟ್ಟಿದ್ದರು. ಈಗ ಗಿರಿಧರನ ಪರಿಚಯದ ಅಡಕೆ
ವ್ಯಾಪಾರಿಯೂ ತಲೆದಂಡ ಎದುರಿಸಬೇಕಾಗಿಬಂದಿತ್ತು.
ಇವರ ಬಳಿ ಲೀಸಿಗೆ ಜಮೀನು ಪಡೆದ ಖದೀಮರು ನೂರಾರು ಜನರನ್ನು ವಂಚಿಸಿದ
ಪಾಕಡಾಗಳಾಗಿದ್ದರು. ಲೀಸಿಗೆ ಪಡೆದು ಕರಾರು ಮಾಡಿಕೊಳ್ಳುತ್ತಿದ್ದರೂ ಜಮೀನಿನ ಮಾಲಿಕತ್ವ
ಮಾತ್ರ ಅದರ ಮೂಲ ಮಾಲೀಕರ ಹೆಸರಲ್ಲೇ ಇರುತ್ತಿತ್ತು. ಈ ಖದೀಮರಿಗೆ ಇವೆಲ್ಲ ಒಂದು
ರೀತಿಯಲ್ಲಿ ಜೂಜಿನಂತೆ; ಬಂದರೆ ಬಂತು, ಇಲ್ಲವಾದರೆ ಇಲ್ಲ. ಹತ್ತು ಕಡೆ ಕಳೆದದ್ದರ ಹತ್ತು
ಪಟ್ಟನ್ನು ಒಂದು ಕಡೆ ಗಳಿಸಿಕೊಳ್ಳುತ್ತಿದ್ದ ಕಾರಣ ನಷ್ಟವೆನ್ನುವದೇ ಇರುತ್ತಿರಲಿಲ್ಲ. ಯಾರ
ಗಮನಕ್ಕೂ ಬಾರದ ಕುಗ್ರಾಮಗಳನ್ನೇ ಆರಿಸಿಕೊಂಡು ನೆಪಮಾತ್ರಕ್ಕೆ ಏನಾದರೂ ಬೆಳೆ ಬೆಳೆಯುವ
ನೆಪ ಮಾಡಿ ಗಾಂಜಾ ಬೆಳೆದು, ಎಲ್ಲಾದರೂ ಎಡವಟ್ಟಾಗಿ ರೈಡ್ ಆದರೆ
ಪರಾರಿಯಾಗಿಬಿಡುತ್ತಿದ್ದರು. ತಾವು ಬರೆದುಕೊಟ್ಟ ಕರಾರುಪತ್ರಕ್ಕೆ ಕಾಸಿನ ಕಿಮ್ಮತ್ತು ಇಲ್ಲ; ಇವೆಲ್ಲ
ತಲೆಗೆ ಬರುವದು ಜಮೀನು ಕೊಟ್ಟ ಮಹಾನುಭಾವನಿಗೆ ಎನ್ನುವದು ಅವರಿಗೆ ಖಂಡಿತವಾಗಿ
ಗೊತ್ತಿರುತ್ತಿತ್ತು. ಇವನ್ನೆಲ್ಲ ಅರಸುತ್ತ ಹೋದಂತೆ ಗಿರಿಧರನಿಗೆ ಇಂಥ ಹತ್ತಾರು ಪ್ರಕರಣಗಳು
ಎದುರಾಗಿದ್ದವು.
ಕೆಲವು ವರ್ಷಗಳ ಹಿಂದೆಯೇ ಒಂದು ವಿಸ್ಮಯವಾಗಿ ಕಾಡುತ್ತಿದ್ದ ಭಂಗಿ ಎನ್ನುವ ಅಮಲು
ಪಧಾರ್ಥದ ಬಗ್ಗೆ ಗಿರಿಧರ ಚೂರುಪಾರು ಅಧ್ಯಯನವನ್ನೂ ಮಾಡಿದ್ದ. ದೇಸಿಯವಾಗಿ ಭಂಗಿಸೊಪ್ಪು
ಎಂದು ಕರೆಸಿಕೊಳ್ಳುವ ಗಾಂಜಾಕ್ಕೆ ಆ ಹೆಸರು ಬಂದಿದ್ದು ಉತ್ತರ ಭಾರತದ ಕಡೆಯಿಂದ. ಆ
ಭಾಗದಲ್ಲಿ ಭಾಂಗ್ ಎಂದು ಕರೆಯುವ ಭಂಗಿ ಗಿಡಗಳಲ್ಲಿ ಮೂರು ಜಾತಿಯವು ಇದ್ದಾವೆಂದೂ,
ಬೀಜದಿಂದ ಸಸಿಯಾಗುವ ಇವು ಬಹಳಷ್ಟು ಸಾರಿ ಕುಲಾಂತರಗೊಳ್ಳುತ್ತವೆಯೆಂದೂ ಗಿರಿಧರ
ಕೇಳಿದ್ದ. ಆ ಕಾರಣದಿಂದ ಸಸ್ಯಶಾಸ್ತ್ರದ ಬಗ್ಗೆ ಗೊತ್ತಿದ್ದವರನ್ನು ಬಿಟ್ಟೂ ಬಿಡದೇ ಕಾಡಿ ಬೇಡಿ
ಭಂಗಿಗೆ ಸಂಬಂಧಿಸಿದ ಪುಸ್ತಕಗಳ ಬಗ್ಗೆ ವಿವರ ಪಡೆದು ಓದಿಕೊಂಡಿದ್ದ. ಅಗಲವಾದ ಐದು
ದಳದ ಎಲೆಯ ಭಂಗಿ ಸೊಪ್ಪುಗಳು ಉಪಯೋಗಕ್ಕೆ ಬಾರದ್ದೆಂತಲೂ, ನಾಲ್ಕೈದು ಅಡಿ ಎತ್ತರಕ್ಕೆ
ಬೆಳೆದು ಹಲವು ಟಿಸಿಲುಗಳಾಗಿ, ಆ ಟಿಸಿಲುಗಳ ಬುಡದಲ್ಲಿ ವಿರಳವಾಗಿ ಎಲೆಗಳಿದ್ದು ಆ ನಂತರ
ಗೊಂಚಲು ಗೊಂಚಲಾಗಿ ಚೂಪಾದ ತೆನೆಗಳನ್ನು ಬಿಡುವ „ಕಲ್ಲಿ‟ ಎಂದು ಕರೆಸಿಕೊಳ್ಳುವ ಭಂಗಿ
ಉಪಯೋಗಕ್ಕೆ ಬರುತ್ತದೆಂದು ಅದರಿಂದ ತಿಳಿದಿದ್ದ. ಆ ತೆನೆಗಳನ್ನು ಒಣಗಿಸಿ, ನಂತರ ಅವನ್ನು
ತುಂಡುಮಾಡಿ ಬೀಜ ತೆಗೆದು ತೆನೆಯನ್ನು ಹದ ಮಾಡಿ ಸೇದುವದೋ, ಪಾನಕ ಮಾಡಿಕೊಂಡು
ಕುಡಿಯುವದೋ ಮಾಡುತ್ತಾರೆಂದು ಆ ಪುಸ್ತಕಗಳಲ್ಲಿ ವಿವರವಿತ್ತು. ಗಿರಿಧರ ತನ್ನ ಊರಿನಲ್ಲಿ,
ನೆಂಟರಿಷ್ಟರ ಮನೆಗಳಲ್ಲಿ ಹದಮಾಡಿದ ಭಂಗಿಯನ್ನು ಮಣ್ಣಿನ ಚಿಲುಮೆಯಲ್ಲಿ ತುಂಬಿ, ಅದಕ್ಕೆ
ಹೊಸೆದು ಹುರಿ ಮಾಡಿದ ತೆಂಗಿನ ನಾರಿನಿಂದ ಬೆಂಕಿ ಹೊತ್ತಿಸಿ, ಚಿಲುಮೆಯಲ್ಲಿಟ್ಟು ಧೀರ್ಘವಾಗಿ
ಹೊಗೆ ಒಳಗೆಳೆದುಕೊಂಡು ಗುಂಗಿನಲ್ಲಿ ಮೈಮರೆಯುವವರನ್ನು ಸಾಕಷ್ಟು ಬಾರಿ ನೋಡಿದ್ದ.
ಅಪರೂಪಕ್ಕೆ ಮಳೆಗಾಲದಲ್ಲಿ ನೆಂಟರು, ಪರಿಚಯದವರು ಸೇರಿ ಭಂಗಿ ಪಾನಕ ಕುಡಿದು ನಶೆ
ಏರಿಸಿಕೊಂಡು ಏನೇನೋ ಉಪದ್ವಾಪ ಮಾಡಿದ ಅನೇಕ ಸಂದರ್ಭಗಳ ಕುರಿತೂ ಕೇಳಿದ್ದ. ಭಂಗಿ
ನಿಧಾನಕ್ಕೆ ನಶೆ ಏರಿಸುತ್ತದೆ ಮತ್ತು ತುಂಬಾ ಪುಕ್ಕಲು ಹುಟ್ಟಿಸುತ್ತದೆ ಎಂದು ಹಳ್ಳಿ ಕಡೆ ಭಂಗಿ
ಕುರಿತಾಗಿಯೇ ಅನೇಕ ಸ್ವಾರಸ್ಯಕರ ಪ್ರಸಂಗಗಳು ನಡೆದಿದ್ದರ ಬಗ್ಗೆ ಖಾಯಂ ಆಗಿ ಭಂಗಿ ಸೇದುವ
ಗಿರಿಧರನ ಪರಿಚಯದವರೊಬ್ಬರು ಹೇಳಿದ್ದರು.
ತನ್ನ ಪರಿಚಯದವರ ಉಪದ್ವಾಪದ ಕಾರಣ ಅದರ ಕುರಿತು ಮತ್ತಷ್ಟು ವಿವರ ಸಂಗ್ರಹಿಸುತ್ತ
ಹೋದಂತೆ ಗಿರಿಧರ ಬೆಚ್ಚಿ ಬಿದ್ದಿದ್ದ. ಕೇವಲ ಭಂಗಿ ಎನ್ನುವದು ಹಳ್ಳಿಗಾಡಿನಲ್ಲಿ ಹೊಗೆ
ಹಾರಿಸುವದಕ್ಕಷ್ಟೇ ಸೀಮಿತವಾಗದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾದ ಹೆರಾಯಿನ್
ಮುಂತಾದ ಮಾದಕವಸ್ತುಗಳ ಮೂಲ ಎನ್ನುವದು ತಿಳಿದು ಬೆರಗಾಗಿದ್ದ. ಮಿಲಿಯನ್‍ಗಟ್ಟಲೇ
ಹಣದ ವಹಿವಾಟು ಇದರ ಹಿಂದಿರುವದನ್ನು ತಿಳಿದು ಬೆಚ್ಚಿದ್ದ. ಅವನಿರುವ ದೇವರ ಕಾಡು ಎನ್ನುವ
ಊರಿನಲ್ಲಿ ಇದನ್ನೆಲ್ಲ ಹೇಳಿದ್ದರೇ ಇವನೆಲ್ಲೋ ಭಂಗಿ ಸೇದಿ ಮಾತನಾಡುತ್ತಿದ್ದಾನೆ ಎಂದು
ನಗುತ್ತಿದ್ದರೇನೋ? ಅದರಲ್ಲೂ ಗಿರಿಧರನನ್ನು ಅನವಶ್ಯಕವಾಗಿ ದ್ವೇಷಿಸುವವರಿಗೆ ಅಪಪ್ರಚಾರಕ್ಕೆ
ಮತ್ತೊಂದು ಹೊಸ ಅಸ್ತ್ರ ಸಿಗುತ್ತಿತ್ತೇನೋ? ಇದೆಲ್ಲ ಅರ್ಥ ಮಾಡಿಕೊಂಡಿದ್ದ ಗಿರಿಧರ
ಯಾರಲ್ಲೂ, ಏನೂ ಹೇಳದೇ ತನ್ನೊಳಗೇ ತಾನು ಅದುಮಿಟ್ಟುಕೊಂಡಿದ್ದ. ಇಂಥ ನೂರೆಂಟು
ರಹಸ್ಯಗಳು ಅವನೊಳಗೆ ಬಚ್ಚಿಟ್ಟುಕೊಂಡ ಕಾರಣಕ್ಕೋ, ಏನೋ ಒಮ್ಮೊಮ್ಮೆ ಇದ್ದಕ್ಕಿದ್ದಂತೇ
ಎದುರಿಗಿದ್ದವರ ಮೇಲೆ ರೇಗಾಡಿಬಿಡುತ್ತಿದ್ದ.
ಅವನು ಅಮೂಲಾಗ್ರವಾಗಿ, ಅದರ ಬೇರೆ ಬೇರೆ ಕೋನಗಳಲ್ಲಿ ಆ ಕುರಿತು ಅಭ್ಯಾಸ ಮಾಡಿದ್ದ.
ಭಂಗಿ ಅಥವಾ ಗಾಂಜಾ ಗಿಡವಾಗಿ ಬೆಳೆದ ನಂತರ ಅದರ ತೆನೆಗಳನ್ನು ಕೊಯ್ಯುವದು ಒಂದು
ವಿಧಾನವಾದರೆ, ಬೆಳೆದ ಭಂಗಿ ಗಿಡಗಳ ಕಾಂಡಕ್ಕೆ ರಬ್ಬರ್ ಗಿಡಕ್ಕೆ ಕೊರೆದಂತೆ ಕೊರೆದು, ಅದರಿಂದ
ಒಸರುವ ದ್ರವವನ್ನು ಸಂಗ್ರಹಿಸಿ ಹೆರಾಯಿನ್ ಮಾಡುತ್ತಿದ್ದರು. ಭಂಗಿಗಿಂತ ಹತ್ತಾರುಪಟ್ಟು ನಶೆ
ಇರುವ ಅದಕ್ಕೆ ಭಾರೀ ಮೊತ್ತದ ದರವೂ ಇರುವ ಬಗ್ಗೆ ತಿಳಿದುಕೊಂಡಿದ್ದ.
ಕೊನೆಗೂ ಏನೇನೋ ಕಸರತ್ತು ಮಾಡಿ ಅವನ ಪರಿಚಯದ ವ್ಯಾಪಾರಿ ಆ ಕೇಸಿನಲ್ಲಿ
ಬಚಾವಾಗಿದ್ದರು. ಆ ನೆಪದಲ್ಲಿ ಗಿರಿಧರನಿಗೆ ಗಾಂಜಾದ ಕುರಿತು ಒಂದಿಷ್ಟು ಮಾಹಿತಿ
ದೊರಕಿಸಿಕೊಂಡ ಲಾಭವಾಗಿತ್ತು.
ಉತ್ತರ ಭಾರತದಲ್ಲಿ ಗಾಂಜಾಕ್ಕೆ ಯಾವುದೇ ನಿಷೇಧವಿರದಿದ್ದರೂ ದಕ್ಷಿಣ ಭಾರತದಲ್ಲಿ ಅದನ್ನು
ಬೆಳೆಯುವದಕ್ಕಾಗಲೀ, ಮಾರುವದಕ್ಕಾಗಲೀ ಅವಕಾಶವೇ ಇಲ್ಲವೆನ್ನುವದನ್ನು ಹಿಂದೆ ಯಾವಾಗಲೋ
ಮನೆ ಬಿಟ್ಟು ಓಡಿಹೋಗಿ ದಿಲ್ಲಿ ಸೇರಿಕೊಂಡು, ಎರಡು ವರ್ಷದ ಹಿಂದೆ ವಾಪಸ್ಸು ಬಂದು
ಪೇಟೆಯಲ್ಲಿ ಟೈಲರಿಂಗ್ ಮಾಡುತ್ತಿದ್ದ ಜೋಸೆಪ್ ಆಗಾಗ್ಗೆ ಹೇಳುತ್ತಿದ್ದುದಲ್ಲದೇ ಪೇಟೆಯಲ್ಲಿ
ಒಂದೆರಡು ಅಂಗಡಿಗಳಲ್ಲಿ ಗುಟ್ಟಾಗಿ ಭಂಗಿಸೊಪ್ಪು ಮಾರುತ್ತಾರೆ. ಅಲ್ಲದೇ ಖಾಯಂ ಗಿರಾಕಿಗಳಿಗೆ
ಮಾತ್ರ ಕೊಡ್ತಾರೆ ಎಂದು ಕೂಡ ಹೇಳಿದ್ದ.
ಅವನ್ನೆಲ್ಲ ನೆನಪು ಮಾಡಿಕೊಳ್ಳುತ್ತ ಬೈಕ್ ಓಡಿಸುತ್ತಿದ್ದ ಗಿರಿಧರ “ ನಿನಗೆ ಇವತ್ತು
ಬೇಕಾದಷ್ಟು ಭಂಗಿ ಸೊಪ್ಪು ಸಿಕ್ಕುತ್ತೆ. ಚೀಲ ತಂದಿದೀಯೋ ಇಲ್ವೋ, ತಂದಿದ್ರೆ ತುಂಬಿಕೊಂಡು
ಹೋಗ್ಬೋದಿತ್ತು” ಎಂದು ಶಂಕರಶೆಟ್ಟಿಗೆ ಕಿಚಾಯಿಸಿದ.
“ ಅದರ ಸಹವಾಸ ಬ್ಯಾಡ್ರೋ ಮಾರಾಯ್ರಾ, ಸಿಕ್ಕಿಬಿದ್ದು ಜೈಲಲ್ಲಿ ಕೂರಿಸಿದ್ರೆ ಹೆಂಡರು, ಮಕ್ಕಳ
ಗತಿಯೇನ್ರಾ?” ಎಂದು ತೀರಾ ಲೌಕಿಕವಾಗಿ ಉತ್ತರಿಸಿದ.
7
ಹೆನ್ನೆ ಎನ್ನುವ ಊರಿಗೆ ಬಂದರೆ ಅದನ್ನು ಯಾರೂ ಊರು ಎನ್ನುವಂತೆಯೇ ಇರಲಿಲ್ಲ. ಸುತ್ತ
ದಟ್ಟವಾಗಿ ಕವಿದುಕೊಂಡಿದ್ದ ಕಾಡಿನ ನಡುವೆ ಅಲ್ಲಲ್ಲಿ ನಾಲ್ಕಾರು ಮನೆಗಳು ಮಾತ್ರ ಕಂಡವು.
ಅಲ್ಲಿನ ಮನೆಗಳಲ್ಲಿ ಇವರ ಬೈಕಿನ ಸದ್ದಿಗೆ ಒಂದೆರಡು ಮಂದಿ ಹಣಿಕಿದ್ದು ಬಿಟ್ಟರೆ ಮತ್ಯಾವ
ನರಪಿಳ್ಳೆಯೂ ಕಣ್ಣಿಗೆ ಬೀಳಲಿಲ್ಲ. ಸಾಕಷ್ಟು ಮನೆಗಳಿರುವ ಊರು ಎಂದುಕೊಂಡಿದ್ದ ಗಿರಿಧರನಿಗೆ
ಅಲ್ಲಿನ ಹೆಪ್ಪುಗಟ್ಟಿದ ಮೌನ, ನಿರ್ಮಾನುಷ್ಯ ಪರಿಸರ ವಿಚಿತ್ರವಾಗಿ ಕಂಡಿತು.
“ಅಲ್ಲಾ, ಜನರನ್ನು ಕಳಿಸ್ತೀನಿ ಎಂದಿದ್ರಲ್ಲಾ ಗೋವಿಂದ ಹೆಗಡೆ. ಆ ಜನ ಎಲ್ಲಿ ಹೋದರು?”
ಎಂದು ಜೊತೆಗಿದ್ದ ಶಂಕರ ಶೆಟ್ಟಿ ತನ್ನಷ್ಟಕ್ಕೇ ಕೇಳಿಕೊಂಡ.
“ನಿನಗೆ ನಮ್ಮನ್ನು ಕರೆದುಕೊಂಡು ಹೋಗಲು ಬರುವ ಜನರ ಪರಿಚಯ ಉಂಟಾ?” ಗಿರಿಧರ
ಎಂದಿದ್ದಕ್ಕೆ “ಅಯ್ಯೋ, ನಾನೆಲ್ಲಿ ಅವರನ್ನ ನೋಡಲಿ, ನನಗೂ ಈ ಊರು ಹೊಸತು” ಎಂದ
ಶಂಕರ ಶೆಟ್ಟಿ.
ನಮ್ಮನ್ನ ಕರೆದುಕೊಂಡು ಹೋಗಲು ಬರುವವರು ಈವರೆಗೆ ನಮ್ಮ ಮುಖ ನೋಡಿದವರಲ್ಲ.
ನಮಗೂ ಬರುವವರು ಯಾರೆಂದು ಗೊತ್ತಿಲ್ಲ! ನಮಗಿಂತ ಮೊದಲೇ ಅವರು ಬಂದಿದ್ದರೆ ನಮ್ಮನ್ನು
ಯಾರ ಬಳಿ ಏನಂತ ವಿಚಾರಿಸಿಯಾರು? ಈಗ ನಾವು ಅವರ ಬಗ್ಗೆ ಯಾರ ಬಳಿ ಏನಂತ
ಕೇಳುವದು?
ಒಂದು ವಿಚಿತ್ರವಾದ ಸಂದಿಗ್ಧದಲ್ಲಿ ಗಿರಿಧರ ಹಾಗೂ ಶಂಕರ ಶೆಟ್ಟಿ ಇಬ್ಬರೂ ಚಿಂತಾಕ್ರಾಂತರಾಗಿ
ನಿಂತಿದ್ದರು. ಹಾಗೇ ನಿಂತರೆ ಮನೆಯಿಂದ ಇಣುಕುವವರು ಇನ್ನಷ್ಟು ಅನುಮಾನಪಟ್ಟಾರೆಂದು
ಮುಂದೆ ಸಾಗಿ ರಸ್ತೆ ಪಕ್ಕ ವಿಶಾಲವಾಗಿ ಬೆಳೆದ ಮರದ ಬುಡದಲ್ಲಿ ಕಾದು ನಿಂತರು. ಅವರನ್ನು
ಕರೆದೊಯ್ಯಲು ಬಂದವರು ಸಿಗುವವರೆಗೆ ಹೇಗಾದರೂ ಸಮಯ ಕಳೆಯುವದು
ಅನಿವಾರ್ಯವಾಗಿತ್ತು.
ಮರದ ನೆರಳಲ್ಲಿ ನಿಂತು, ನಿಂತೂ ಸಾಕಾಗಿ ನೆಲದ ಮೇಲೆ ಕುಳಿತುಕೊಂಡ ಗಿರಿಧರನಿಗೆ ಏಕಾಏಕಿ
ಒಂದು ಯೋಚನೆ ತಲೆಗೆ ಹೊಕ್ಕಿತು.
ಕಗ್ಗಾಡಿನ ನಡುವೆ ಇರುವ ಗೋವಿಂದ ಹೆಗಡೆಗೂ, ಅಲ್ಲೆಲ್ಲೋ ಓಡಾಡಿಕೊಂಡು, ಏನಾದರೂ
ಪಿಂಜಾರುಪೋಲು ಕೆಲಸ ಮಾಡಿಕೊಂಡಿರುವ ಶಂಕರಶೆಟ್ಟಿಗೂ ಎಲ್ಲಿಯ ಸಂಬಂಧ? ಇವರಿಬ್ಬರ
ಪರಿಚಯವಾದರೂ ಆಗಿದ್ದು ಹೇಗೆ? ನನ್ನನ್ನು ಕರೆದುಕೊಂಡು ಬರಲು ಅತ್ಯಂತ ನಂಬಿಗಸ್ತ
ಮನುಷ್ಯ ಎಂದು ಗೋವಿಂದ ಹೆಗಡೆ ತೀರ್ಮಾನಿಸಿದ್ದರ ಮೇಲೇ ಅವರಿಬ್ಬರ ನಡುವೆ ವಿಶ್ವಾಸವಿದೆ
ಎನ್ನುವದಂತೂ ಗ್ಯಾರಂಟಿಯಾಗಿತ್ತು. ಅವರಿಬ್ಬರ ಮಧ್ಯೆ ಅಷ್ಟೊಂದು ನಿಕಟವಾದ ಸಂಪರ್ಕ
ಬೆಳೆದದ್ದಾದರೂ ಹೇಗೆ ? ಎಂದೆಲ್ಲ ಪ್ರಶ್ನೆಗಳನ್ನು ತನ್ನೊಳಗೇ ಕೇಳಿಕೊಂಡ ಗಿರಿಧರ ಅವಕ್ಕೆ
ಉತ್ತರ ಸಿಗದೇ ಎದುರಲ್ಲಿ ನಿಂತು ಯಾವುದೋ ಯೋಚನೆಯಲ್ಲಿ ಮಗ್ನನಾಗಿದ್ದ ಶಂಕರಶೆಟ್ಟಿ ಬಳಿ
ಮಂಡಿಸಿದ. ಗಿರಿಧರನಿಗೆ ತನ್ನ ತಲೆ ಕೊರೆಯುತ್ತಿದ್ದ ಚಿಂತೆಯ ಪರಿಹಾರದ ಜೊತೆಗೆ ಆ
ಅಸಹನೀಯವಾದ ಮೌನವನ್ನು ಹೇಗಾದರೂ ಕಲಕುವದು ಬೇಕಿತ್ತು.
“ ಅದನ್ರಾ, ಅದೊಂದು ದೊಡ್ಡ ಕತೆ…” ಎಂದು ತಲೆ ಅಲುಗಿಸುತ್ತ ಹೇಳಿದ ಶಂಕರ ಶೆಟ್ಟಿ
ಹೆಗಲಿಗೆ ಜೋಲಿಸಿಕೊಂಡಿದ್ದ ಚೀಲದಿಂದ ಒಂದು ಪ್ಲಾಸ್ಟಿಕ್ ಸುತ್ತಿದ ಪೊಟ್ಟಣ ತೆಗೆÀದು ಬಿಚ್ಚಿದ.
ಅದರಿಂದ ಎರಡು ಹೋಳು ಅಡಿಕೆ ಚೂರು ತೆಗೆದು ಬಾಯಿಗೆಸೆದು, ಒಂದು ವೀಳ್ಯದೆಲೆ ತೆಗೆದು
ಅದರ ಎರಡೂ ಪಾಶ್ರ್ವವನ್ನು ಪ್ಯಾಂಟಿಗೆ ತಿಕ್ಕುತ್ತ ಮಾತು ಮುಂದುವರಿಸಿದ.
“ £ನ್ನ ಮಗಳು ಆಗ ಸಣ್ಣಕಿದ್ಳ್ರಾ, ಏಳನೇ ಕ್ಲಾಸಿಗೇ ಶಾಲೆ ಬಿಟ್ಟು ಮನೆಗೆಲಸ ಮಾಡಿಕೊಂಡಿದ್ಳು.
ಇದ್ದಕ್ಕಿದ್ದಂತೆ ಅವಳು ಮಾತು ಕಡಿಮೆ ಮಾಡಿಬಿಟ್ಲು. ಸ್ವಲ್ಪ ದಿನ ಬಿಟ್ಟು ಆಗಾಗ ತಲೆ ತಿರುಗಿ
ಬೀಳ್ತಿದ್ಲು. ನಂತರ ಶುರು ಆಯ್ತು ನೋಡಿ ಅಬ್ಬರ” ಎಂದ ಶಂಕರ ಶೆಟ್ಟಿ ಮಾತು ನಿಲ್ಲಿಸಿ
ವೀಳ್ಯದೆಲೆಯ ತೊಟ್ಟು ಮುರಿದು, ಪೊಟ್ಟಣದಿಂದ ಸುಣ್ಣದ ಅಂಡೆ ತೆಗೆದು ಎಲೆಗೆ ಸುಣ್ಣ ತೀಡಿ,
ಮತ್ತೊಂದು ಪುಟ್ಟ ಡಬ್ಬಿಯಲ್ಲಿದ್ದ ತಂಬಾಕಿನ ಪುಡಿ ಅದರ ಮೇಲೆ ಸುರಿದು ಬಾಯಿಗಿಟ್ಟುಕೊಂಡು
ಕಣ್ಣುಮುಚ್ಚಿ ಆಸ್ವಾದಿಸಿದ. ಗಿರಿಧರ ಅವನ ಈ ಎಲ್ಲ ವರ್ತನೆಗಳನ್ನು ನೋಡುತ್ತಿದ್ದವ ಶಂಕರಶೆಟ್ಟಿ
ಅನುಭವಿಸುತ್ತಿದ್ದ ಅವರ್ಚನೀಯ ಸುಖಕ್ಕೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಲೇ ಇವನೊಬ್ಬ ಕಲೆಗಾರ
ಅಂದುಕೊಂಡ. ತನ್ನ ಮಾತಿನ ಸರಣಿಯನ್ನ ಕುತೂಹಲಕಾರಿ ಘಟ್ಟದಲ್ಲಿ ನಿಲ್ಲಿಸಿ ಎದುರಿಗಿದ್ದವನ
ಕುತೂಹಲವನ್ನು ಇನ್ನಷ್ಟು ಹೆಚ್ಚಿಸುವ ಫಟಿಂಗತನವನ್ನು ಗಿರಿಧರ ಸಾಕಷ್ಟು ಜನರಲ್ಲಿ ನೋಡಿದ್ದ.
“ ದಿನ ಬಿಟ್ಟು ದಿನಕ್ಕೆ ಮಗಳ ಮೈ ಮೇಲೆ ಬರೋಕೆ ಹಿಡೀತು ನೋಡಿ, ಮನೆ ಮಂದಿಯೆಲ್ಲ
ಕಂಗಾಲು ಎದ್ದು ಹೋದ್ವಿ. ಊರ ಬದಿ ಗಾಡಿಗರಾಯ್ತು. ದೇವಸ್ಥಾನ ಭಟ್ಟರ ವಿಭೂತಿಯಾಯ್ತು.
ಮಾರಿಗುಡಿ ಪೂಜಾರಿ ಕುಂಕುಮ ಆಯ್ತು. ಎಂತಾದ್ರೂ ಮೈ ಮ್ಯಾಲೆ ಬರೋದು ಮಾತ್ರ ನಿಲ್ಲಲಿಲ್ಲ
ನೋಡಿ. ದಿನಕ್ಕೊಂದು ಥರಾ ಕೂಗೋದು, ಯಾವ ದೇಶದ ಭಾಷೆಯೋ ಏನೋ ಬಾಯಿಗೆ
ಬಂದಂತೆ ಮಾತಾಡೋದು. ಎಂತಾ ಮಾಡೋದು ಎಂದು ಯೋಚನೇಲಿದ್ದಾಗ ಯಾರೋ ಹೇಳಿದ್ರು
ಕೋಟಿಗದ್ದೆ ಎನ್ನುವಲ್ಲಿ ಒಂದು ವೀರಭದ್ರ ದೇವಸ್ಥಾನ ಇದೆ. ಅಲ್ಲಿ ಭಟ್ಟರೊಬ್ಬರಿಗೆ ವೀರಭದ್ರ
ದೇವ್ರು ಅಳಕೆ ಆಗ್ತದೆ, ಅಲ್ಲಿ ಹೋಗಿ ಎಂದ್ರು. ಹಾಗೇ ಒಂದಿನ ಅಲ್ಲಿಗೆ ಹೋದ್ವಿ. ಗುರ್ತಿಲ್ಲ,
ಪರಿಚಯ ಇಲ್ಲ ಆ ಊರಲ್ಲಿ. ನಾನು, ನಮ್ಮನೆಯವಳು ಮಗಳನ್ನ ಕರಕೊಂಡು ಹೋಗಿ ಸಾಕು
ಬೇಕಾಯ್ತು. ಅಲ್ಲಿ ಬಸ್ ಇಳಿದಲ್ಲಿಂದ ದೇವಸ್ಥಾನಕ್ಕೆ ಎರಡು ಮೂರು ಮೈಲಿ. ಹ್ಯಾಗಪ್ಪಾ
ಇವಳನ್ನು ಕರೆಕೊಂಡು ಹೋಗೋದು ಎಂದು ಚಿಂತೆ ಮಾಡ್ತಿದ್ದಾಗ ಎಲ್ಲಿಗೋ ಹೊರಟಿದ್ದ
ಗೋವಿಂದ ಹೆಗಡೆ ದೇವರು ಬಂದಂತೆ ಬಂದ್ರು. ಅವರೇ ನಮ್ಮ ಕಷ್ಟ ನೋಡಿ ತಮ್ಮ ಮನೆಗೆ
ಕರಕೊಂಡು ಹೋಗಿ ನಾಲ್ಕು ದಿನ ಮನೇಲೇ ಉಳಿಸ್ಕೊಂಡು ದಿನಾ ದೇವಸ್ಥಾನಕ್ಕೆ ಕರಕೊಂಡು
ಹೋಗ್ತಿದ್ರು. ಅಂತೂ ಇಂತೂ ಮೈ ಮೇಲೆ ಬರೋದು ನಿಂತ್ತು ನೋಡಿ. ಅವರ ಉಪಕಾರ
ಮರೆಯೋಹಾಗೇ ಇಲ್ಲ” ಎಂದು ಶಂಕರಶೆಟ್ಟಿ ತನ್ನ ಮಾತಿನ ಸರಣಿಯ ನಡುವೆ ನಿಟ್ಟುಸಿರು ಬಿಟ್ಟು
ಪುರಾಣ ಮುಂದುವರಿಸಿದ.
“ ನೀನು ಮಗಳ ರೋಗಕ್ಕೆ ಡಾಕ್ಟರ್ ಹತ್ರ ಹೋಗೋದು ಬಿಟ್ಟು ಗಾಡಿಗರು, ಭಟ್ರು ಎಂದೆಲ್ಲಾ
ಹೋದೆಯಲ್ಲಾ, ನಿಂಗೇನಾದ್ರೂ ಬುದ್ದಿ ಇದೆಯಾ? ಏನಾರೂ ಮಗಳಿಗೆ ಹೆಚ್ಚುಕಮ್ಮಿ ಆಗಿದ್ರೆ ಎಂತಾ
ಮಾಡ್ತಿದ್ದೆ?” ಎಂದು ಗಿರಿಧರ ಗುರುಗುಟ್ಟಿದ.
“ ನನ್ನ ಮಗಳಿಗಾಗಿದ್ದು ಡಾಕ್ಟರಿಗೆಲ್ಲಾ ಎಲ್ಲಿ ಗೊತ್ತಾಗಬೇಕ್ರಾ? ಅದೆಂಥ ಔಷಧಿಗೆ ಬಗ್ಗೋ ರೋಗ
ಅಂದ್ಕೊಂಡ್ರಾ. ಮಗಳ ಮೈ ಸೇರಿದ್ದು ಅದ್ಯಾವುದೋ ಕೆಟ್ಟ ಪಿಶಾಚಿ, ಅದರ ಬಗ್ಗೆ ಈ ಡಾಕ್ಟರಿಗೆಲ್ಲಿ
ಗೊತ್ತಾಗ್ತದೆ” ಎಂದು ಶಂಕರಶೆಟ್ಟಿ ವೈದ್ಯಕೀಯ ಲೋಕವನ್ನೇ ಮೂದಲಿಸಿದ.
ಗಿರಿಧರ ಮತ್ತೇನೂ ಹೇಳಲು ಹೋಗಲಿಲ್ಲ. ಯಾಕೆಂದರೆ ನಂಬಿಕೆಯ ಪ್ರಶ್ನೆ ಅದಾಗಿತ್ತು. ಅವರವರ
ನಂಬಿಕೆ ಅವರವರದ್ದು. ಬದುಕು ಎನ್ನುವದು ವ್ಯಕ್ತಿಗತವಾಗಿ ಪರಿವರ್ತಿತವಾಗುತ್ತ ಬಂದಂತೆ
ಅವನವನ ನಂಬಿಕೆಯೂ ವೈಯುಕ್ತಿಕವಾಗುತ್ತದೆ. ಮತ್ತೊಬ್ಬನ ಅನುಭವವನ್ನು, ಅವನ
ನಂಬಿಕೆಯನ್ನು ಅಲ್ಲಗೆಳೆಯಲು ನನಗೇನು ಅಧಿಕಾರ? ಯಾವ ಹಂತದಲ್ಲೂ ಶಂಕರಶೆಟ್ಟಿಯ
ಬದುಕಿನ ಪರಿಚಯವೇ ಇಲ್ಲದ ನಾನು ಏಕಾಏಕಿ ಅವನದು ಮೂಡನಂಬಿಕೆಯೋ, ಅಜ್ಞಾನದ
ಪರಮಾವಧಿಯೋ ಎಂದು ತೀರ್ಮಾನ ಕೊಡಲು ಹೇಗೆ ಸಾಧ್ಯ? ನಭೋಮಂಡಲಕ್ಕೆ ಉಪಗ್ರಹ
ಉಡಾಯಿಸುವ ವಿಜ್ಞಾನಿಗಳೇ ಮುಹೂರ್ತ ಕೇಳುವ, ಉಡಾವಣೆಗೆ ಮುಂಚೆ ದೇವಸ್ಥಾನದಲ್ಲಿ ಪೂಜೆ
ಮಾಡಿಸುತ್ತಿರುವಾಗ ಶಂಕರಶೆಟ್ಟಿಯಂಥ ಬಡಪಾಯಿ ಮಗಳನ್ನು ಉಳಿಸಿಕೊಳ್ಳಲು ಪಟ್ಟ ಪಾಡನ್ನು
ಕ್ಷುಲ್ಲಕವೆಂದು ಪರಿಗಣಿಸಲು ಹೇಗೆ ಸಾಧ್ಯ? ಅದೂ ಪ್ರಾಮಾಣಿಕವಾದ, ಹಠದ ನಂಬಿಕೆ
ಅವನದಾಗಿರುವಾಗ ಅಲ್ಲಗೆಳೆಯುವದಾದರೂ ಹೇಗೆ? ಅಂದುಕೊಂಡು ಸುಮ್ಮನಾಗಿಬಿಟ್ಟ.
ಗಿರಿಧರ ಇಂಥ ವಿಪರ್ಯಾಸಗಳನ್ನು ದಿನನಿತ್ಯ ಕಾಣುತ್ತಿದ್ದ. ಬರವಣಿಗೆಯಲ್ಲಿ, ಭಾಷಣದಲ್ಲಿ ಜಾತಿ
ಪದ್ಧತಿಯ ಬಗ್ಗೆ, ಧಾರ್ಮಿಕ ಮನೋಭಾವದ ವಿರುದ್ಧ ಕಿಡಿಕಾರುತ್ತಿದ್ದವರು ರಾತ್ರಿ ಹೆಂಡ ಕುಡಿದು,
ಮಾಂಸ ತಿಂದು, ಬೆಳಿಗ್ಗೆ ಎದ್ದವರೇ ಗೋಮೂತ್ರ ಸೇವಿಸಿ, ಮಡಿಯುಟ್ಟು ದೇವರ ಪೂಜೆ
ಮಾಡುವದನ್ನು ನೋಡಿದ್ದ. ಅಸಮಾನತೆಯ ಬಗ್ಗೆ ಸ್ಟ್ರೈಕ್ ಮಾಡಿಸಿ, ಪೇಪರುಗಳಲ್ಲಿ ಫೋಟೊ
ಹಾಕಿಸಿಕೊಂಡು, ತಾವು ಮಾತ್ರ ಕಾರುಗಳಲ್ಲಿ ಓಡಾಡುವ ಸಾಮಾಜಿಕ ಕಾಳಜಿಯ ಪೋಸು
ಕೊಡುವವರನ್ನು ಕಂಡಿದ್ದ. ಅಂಥವರೇ ಮೂಡನಂಭಿಕೆಗಳ ವಿರುದ್ಧ, ಸಾಮಾಜಿಕ ನ್ಯಾಯದ ಬಗ್ಗೆ
ವಾಚಾಮಗೋಚರವಾಗಿ ಮಾತನಾಡುವದನ್ನು ನೋಡಿ, ನೋಡಿ ಇಂಥದ್ದರ ಬಗ್ಗೆ ಯೋಚಿಸಿ
ಸಮಯ ಕಳೆಯುವದು ನಿಜಕ್ಕೂ ವ್ಯರ್ಥ ಎನ್ನುವ ನಿರ್ಣಯಕ್ಕೆ ಯಾವಾಗಲೋ ಬಂದಿದ್ದ.
“ ಅಲ್ಲಾ ಮಾರಾಯ್ರಾ , ಆ ದೇವ್ರ ಶಕ್ತಿ ಅಂದ್ರೆ ಕಡಿಮೆಯಲ್ರೋ, ಭಟ್ರ ಮೇಲೆ ದೇವ್ರು ಬಂದಾಗ
ಎಂಥ ಅಬ್ಬರ ಗೊತ್ತಾ? ನಾಲ್ಕು ಜನ ಹಿಡಿದರೂ ಎತ್ತೆತ್ತಿ ಒಗೀತದೆ ಮಾರಾಯ್ರಾ , ಆಗಿದ್ದನ್ನ
ಕಂಡಂತೇ ಹೇಳ್ತದೆ. ಮುಂದಾಗೋದನ್ನು ಕೂತಲ್ಲೇ ಹೇಳ್ತದೆ…”
ಗಿರಿಧರನ ಕಿವಿಯೊಳಕ್ಕೆ ಶಂಕರಶೆಟ್ಟಿಯ ಮಾತುಗಳು ಹೋಗುತ್ತಲೇ ಇರಲಿಲ್ಲ. ಅವನಾಗಲೇ ತನ್ನ
ಮನಸ್ಸಿನ ಆಳದೊಳಕ್ಕೆ ಇಳಿದುಬಿಟ್ಟಿದ್ದ. ತನ್ನ ಎಂದಿನ ಅನ್ಯಮನಸ್ಕತೆಯಲ್ಲಿ ಮನಸ್ಸಿನ ಹೊಂಡಕ್ಕೆ
ಗಾಳ ಇಳಿ ಬಿಟ್ಟುಕೊಂಡಿದ್ದ. ಯಾರೋ, ಎಲ್ಲಿಯೋ ಕಾರ್ಯಕಾರಣ ಸಂಬಂಧವಿಲ್ಲದೇ ಭೆಟ್ಟಿಯಾಗಿ
ಬಿಡುತ್ತಾರೆ. ಒಂದಿಷ್ಟು ಸಂಬಂಧಗಳು ಹಾಗೇ ಉಳಿದುಕೊಂಡು ಬಿಡುತ್ತವೆ. ಇನ್ನಷ್ಟು ಬದುಕಿನ
ಹಾದಿಯಲ್ಲಿ ಎಳೆ ಹರಿದುಕೊಂಡು ಇಲ್ಲವಾಗಿಬಿಡುತ್ತವೆ ಅಂದುಕೊಂಡ ಗಿರಿಧರ.
ಶಂಕರ ಶೆಟ್ಟಿ ಮತ್ತು ಗೋವಿಂದ ಹೆಗಡೆಯ ದೋಸ್ತಿ ಮಾನವೀಯತೆಯ ಕಾರಣದಿಂದ
ಮುಂದುವರಿದುಕೊಂಡು ಬಂದಿದ್ದು ಈ ಕಾಲದಲ್ಲೂ ಸಾಧ್ಯವೇ ಎನ್ನುವ ಅಚ್ಚರಿಯನ್ನು ಅವನಲ್ಲಿ
ಹುಟ್ಟಿಸಿತ್ತು. ಈವರೆಗೂ ಕೇಳಿ ಗೊತ್ತಿರದ ಊರೊಂದರ ನಡುವೆ ಮರದ ಕೆಳಗೆ ನಿಂತು
ಯಾರೋ, ಏನೋ ಆಗಿರುವ ಶಂಕರಶೆಟ್ಟಿ ಜೊತೆಗೆ ಮಾತನಾಡುತ್ತ ಹೊತ್ತು ಕಳೆಯುವದನ್ನು
ತಾನು ಯಾವತ್ತಾದರೂ ಊಹಿಸಿಕೊಂಡಿದ್ದೇನೆಯೇ? ಅಗೋಚರವಾದ ಯಾವುದೋ ಒಂದು ಎಳೆ
ನಮ್ಮನ್ನೆಲ್ಲ ತನ್ನ ದಾರಿಯಲ್ಲಿ ಎಳೆದುಕೊಂಡು ಹೋಗುತ್ತಿದೆಯೇ? ಎನ್ನುವ ಯೋಚನೆ ಗಿರಿಧರನಿಗೆ
ಬಂತು.
ಈ ಯೋಚನೆಯಲ್ಲಿದ್ದಾಗಲೇ ಸ್ವಲ್ಪ ಹೊತ್ತಿನ ಬಳಿಕ ಮೊಣಕಾಲಿನ ಮೇಲೆ ಮಡಚಿ
ಲುಂಗಿಯುಟ್ಟುಕೊಂಡಿದ್ದ ಇಬ್ಬರು ಯುವಕರು ರಸ್ತೆಯಲ್ಲಿ ಬರುವದು ಕಂಡಿತು. ಆ ಊರಲ್ಲಿ
ರಸ್ತೆಯಲ್ಲಿ ಕಂಡ ಮೊದಲ ವ್ಯಕ್ತಿಗಳಾಗಿದ್ದರು ಅವರು. ತಮ್ಮಲ್ಲೇ ಏನೋ ಮಾತಾಡುತ್ತ ಇವರತ್ತ
ನೋಡದೇ ಸುಮಾರು ದೂರ ಹೋದವರು ಪುನ: ತಿರುಗಿ ಬಂದು ಅವರಿಂದ ತುಸು ದೂರದಲ್ಲಿ
ನಿಂತು ಅವರವರಲ್ಲೇ ಮಾತನಾಡತೊಡಗಿದರು.
ಇವರಿಬ್ಬರಿಗೂ ಸಣ್ಣಗೆ ಭಯವಾಗತೊಡಗಿತು. ಪ್ರಾಯಶ: ಇದೇ ಊರಿನವರಾದ ಈ
ಯುವಕರು ತÀಮ್ಮ ಬಗ್ಗೆ ಅನುಮಾನ ಪಡುತ್ತಿದ್ದಾರೆಯೇ? ಅಪರಿಚಿತರಾದ ನಮ್ಮನ್ನು
ವಿಚಾರಿಸತೊಡಗಿದರೆ ಏನೆಂದು ಉತ್ತರಿಸುವದು? ಎನ್ನುವ ಚಿಂತೆಯ ಜೊತೆಗೆ ನಮ್ಮನ್ನು
ಕರೆದೊಯ್ಯಲು ಬೈನೆಕಾಡಿನಿಂದ ಬಂದವರು ಇವರೇ ಆಗಿರಬಹುದೇ ಎನ್ನುವ ಪ್ರಶ್ನೆ ಇಬ್ಬರಲ್ಲೂ
ಮೂಡಿತು.
ಕೇಳುವದು ಹೇಗೆ? ಸುಲಭವಾಗಿ ವ್ಯವಹರಿಸುವ ಸಂದರ್ಭ ಅದಾಗಿರಲೇ ಇಲ್ಲ. ಒಂದೊಮ್ಮೆ
ಅವರಲ್ಲದಿದ್ದರೆ? ಏನಾದರಾಗಲಿ, ಅವರನ್ನು ಮಾತಾಡಿಸುವಾ ಎಂದು ಗಿರಿಧರನ ಬಳಿ
ಗುಸುಗುಟ್ಟಿದ ಶಂಕರ ಶೆಟ್ಟಿ ನಿಧಾನಕ್ಕೆ ಅವರ ಬಳಿ ಹೋದ.
“ಇಲ್ಲಿ ಎಲ್ಲಾದರೂ ಹೊಟೇಲ್ ಇದೆಯಾ?” ಎಂದು ಶಂಕರಶೆಟ್ಟಿ ಅವರ ಬಳಿ ಕೇಳಿದ.
“ಗೊತ್ತಿಲ್ಲ. ನಾವೂ ಈ ಊರಿನವರಲ್ಲ” ಎನ್ನುವ ಉತ್ತರ ಅವರಿಂದ ಬಂದಾಗ „ಓಹ್, ನಾವು
ಕಾಯುತ್ತಿದ್ದುದು ಇವರನ್ನೇ‟ ಎನ್ನುವದು ಅವರಿಬ್ಬರಿಗೂ ಧೃಡವಾಯಿತು.

8
ಎದುರಿನಲ್ಲಿದ್ದದ್ದು ಅಪೂರ್ವವಾದ ಬಿಡಿಸಿಟ್ಟ ಚಿತ್ರದಂತಿತ್ತು. ಕಾಲ ಕೆಳಗಿನ ಪ್ರಪಾತದಲ್ಲಿ
ಕಣ್ಣಂಚಿನ ಕೊನೆವರೆಗೂ ನಿಶ್ಚಲವೆನ್ನುವಂತೆ ಪವಡಿಸಿದ್ದ ಪ್ರಕೃತಿ. ದೂರದಲ್ಲಿ ಮಸುಕಾಗಿ ತೋರುವ
ದಿಗಂತದ ಅಂಚಿನವರೆಗೂ ಅಗಾಧವಾಗಿ ಹರಡಿದ್ದ ಹಸಿರು ಶರಧಿ. ಮಧ್ಯೆ ಅಲ್ಲಲ್ಲಿ ತುಣುಕು
ತುಣುಕು ಗದ್ದೆ, ಬಯಲು. ಬಲಭಾಗದ ಅದೆಷ್ಟೋ ದೂರದಲ್ಲಿ ಪುಟ್ಟ ಕೊಳದಂತೆ ತೋರುವ
ಕಡುನೀಲಿ ಬಣ್ಣದ ಸೋರಗುಪ್ಪ ಆಣೆಕಟ್ಟಿನ ಹಿನ್ನೀರು. ಪಶ್ಚಿಮ ಘಟ್ಟದ ಅಂಚಿನಲ್ಲಿ ನಿಂತಿದ್ದವರನ್ನು
ಹಿಂದಕ್ಕೆ ತಳ್ಳುವಂತೆ ಅಬ್ಬರಿಸಿ ಬರುವ ಗಾಳಿ. ಫಳಫಳಿಸುತ್ತಿದ್ದ ಬೆಳಗಿನ ಸೂರ್ಯನ ಕಿರಣಗಳಲ್ಲಿ
ಮೀಯುತ್ತಿದ್ದ ಜೀವ ವೈವಿಧ್ಯದ ಜಗತ್ತು ಗಿರಿಧರನ ಎದುರಿಗಿತ್ತು.
ಎದುರಿನಲ್ಲಿದ್ದದ್ದು ಮತ್ತೆಲ್ಲಿ ಮರೆಯಾಗಿಬಿಡುತ್ತೇನೋ ಎನ್ನುವಂತೆ ಪರವಶನಾಗಿ ನೋಡುತ್ತಿದ್ದ
ಗಿರಿಧರನನ್ನು ಉಳಿದ ಮೂವರು ಎಚ್ಚರಿಸಿದರು. ಅಲ್ಲಿಂದಲೇ ಕೆಳಗಿನ ಪ್ರಪಾತದಲ್ಲಿನ
ಗೊಂಡಾರಣ್ಯದ ನಡುವೆ ತಲುಪಬೇಕಾದ ಜಾಗವನ್ನು ಬೊಟ್ಟು ಮಾಡಿ ಅಂದಾಜು ಲೆಕ್ಕದಲ್ಲಿ
ಬಂದವರಲ್ಲೊಬ್ಬ ತೋರಿಸಿದ. ಗಣೇಶ ಮತ್ತು ನಾರಾಯಣ ಎನ್ನುವ ಹೆಸರಿನ ಅವರಿಬ್ಬರೂ
ದೂರದಲ್ಲಿ ಚುಕ್ಕಿಯಂತೆ ತೋರುತ್ತಿದ್ದ ಬೈನೆಕಾಡಿನಿಂದ ಬೆಳಿಗ್ಗೆ ಹೊರಟು ಘಾಟಿ ಹತ್ತಿ ಬಂದಿದ್ದರು.
ನಾವು ಹೋಗುವ ಸ್ಥಳ ತಲುಪಲು ಕನಿಷ್ಠ ಎರಡು ತಾಸು ಬೇಕೆಂತಲೂ, ಘಟ್ಟ ಇಳಿಯುವಾಗಲೂ,
ನಂತರವೂ ಕಿರಿದಾದ ಕಾಲುದಾರಿಯಲ್ಲಿ ಹೋಗಬೇಕಾಗಿದೆ ಎಂತಲೂ ತಿಳಿಸಿದ ನಾರಾಯಣ ಬೇಗ
ಹೋಗಲು ಅವಸರಿಸಿದ. ಆಗಲೇ ಹತ್ತು ಗಂಟೆಯಾಗುತ್ತ ಬಂದಿತ್ತು.
ಪಶ್ಚಿಮ ಘಟ್ಟದ ಅನೇಕ ಕಾಡುಗಳಲ್ಲಿ, ಜನವಸತಿಗಳೇ ಇಲ್ಲದ ದಟ್ಟ ಅರಣ್ಯಗಳಲ್ಲಿ ಗಿರಿಧರ
ಸಾಕಷ್ಟು ಬಾರಿ ಓಡಾಡಿದ್ದ. ಘಟ್ಟದ ಮೂಲಕ ಕರಾವಳಿಯತ್ತ ಹಾದು ಹೋಗುವ ಟಾರು
ರಸ್ತೆಗಳಲ್ಲಿ ನಾಲ್ಕಾರು ಬಾರಿ ನಡೆದುಕೊಂಡೇ ಹೋಗಿದ್ದ. ಆಗೆಲ್ಲ ಸುತ್ತ ಕವಿದುಕೊಂಡ ಕಾಡ
ನಡುವಿನ ರಸ್ತೆಗಳ ತಿರುವುಗಳು, ಘಟ್ಟದ ಅಂಚಿನ ಕೊಳ್ಳ, ಪ್ರಪಾತ ಕಂಡು ಬೆಚ್ಚಿದ್ದ. ಹಲವು ಬಾರಿ
ಗೊಂಡಾರಣ್ಯದ ನಡುವೆ ಅಲ್ಲಲ್ಲಿರುವ ಒಂಟಿ ಮನೆಗಳಲ್ಲಿ ನಾಲ್ಕಾರು ದಿನ ಉಳಿದಿದ್ದ ಕೂಡ. ಕಾಡ
ನಡುವಿನ ಅದೆಷ್ಟೋ ತಿರುಗಾಟದ ನಂತರದಲ್ಲಿ ಕಾಡು ಎಂದರೆ ಏನು? ಎನ್ನುವದು ಅವನ
ಅರಿವಿಗೆ ಬರತೊಡಗಿತ್ತು. ಅದೊಂದು ಅಲೌಕಿಕವಾದ, ಆಧ್ಯಾತ್ಮದ ಮೂಲ ಸ್ಥಾಯಿಯಾದ ನಿಗೂಡ
ಜಗತ್ತು ಎಂದೇ ತಿಳಿಯತೊಡಗಿದ್ದ. ನಾಗರಿಕತೆಗಳು ಸೃಷ್ಟಿಯಾದ, ಬೆಳೆದ, ಉಚ್ಛ್ರಾಯ ಸ್ಥಿತಿ
ತಲುಪಿ, ಅಷ್ಟೇ ವೇಗದಲ್ಲಿ ನಾಮಾವಶೇಷವಾದ ನೆಲದ ಮೇಲೆ ಕಾಡು ಬೆಳೆದು, ಹಬ್ಬಿದ ಕುರಿತು
ಓದಿದ್ದ. ಕೆಲವಷ್ಟನ್ನು ಕಂಡಿದ್ದ.
ಮುಂದೆ ಸಾಗುವ ಮಾರ್ಗ ಟಾರು ರಸ್ತೆಯಂತೆ ಸಲೀಸಾಗಿ, ಹತ್ತಾರು ತಿರುವು,
ಮುರುವುಗಳಲ್ಲಿ ಇಳಿದು ಹೋಗುವಂತಿರುತ್ತದೆ ಎಂದುಕೊಂಡಿದ್ದ ಗಿರಿಧರ. ಆದರೆ ಅವರು
ಹೋಗಬೇಕಾಗಿದ್ದು ಬೆಟ್ಟದ ದರೆಯನ್ನೇ ಕೊರೆದು ಮಾಡಿದ್ದ ಕಿರಿದಾದ ಮೆಟ್ಟಿಲುಗಳಿದ್ದ ಕಚ್ಚಾ
ದಾರಿಯಲ್ಲಿ. ಉಳಿದೆಡೆಯಂತೆ ಅಲ್ಲಿ ಕೆಳಗಿನ ಪ್ರದೇಶ ತೀರಾ ಆಳದಲ್ಲಿರಲಿಲ್ಲ. ಯಾಕೆಂದರೆ
ಗೋಚರಕ್ಕೆ ಬಾರದ ರೀತಿಯಲ್ಲಿ ಹೆನ್ನೆಯಿಂದ ಘಟ್ಟದ ಅಂಚಿನವರೆಗೂ ನೆಲ ಇಳಿಮುಖವಾಗಿತ್ತು.
ಆ ಕಾಡಿನ ನೆಲ ಸ್ವಾಭಾವಿಕವಾಗಿಯೇ ತೇವ ಭರಿತವಾಗಿತ್ತು. ಬಿಸಿಲು ಕಾಣದ ನೆಲ ಆ
ಕಾರಣದಿಂದ ಕಾಲಿಟ್ಟಲ್ಲಿ ಜಾರುತ್ತಿತ್ತು. ಅಕ್ಕಪಕ್ಕದ ಗಿಡ, ಬಳ್ಳಿ ಹಿಡಿದು, ಹೆಜ್ಜೆ ಇಡುವಷ್ಟು
ಚಿಕ್ಕದಾದ ಮೆಟ್ಟಿಲುಗಳಲ್ಲಿ ಕಾಲಿಟ್ಟು, ಜಾರುತ್ತ, ಸಾವರಿಸಿಕೊಳ್ಳುತ್ತ ಅಂತೂ ಇಂತೂ ಸಮತಟ್ಟಾದ
ಪ್ರದೇಶಕ್ಕೆ ಇಳಿದು ಬಂದಾಗ ಸಮಾಧಾನವೆನ್ನಿಸಿತು. ಹೆನ್ನೆಯಿಂದ, ಕೋಗಾರು, ಬೈನೆಕಾಡು
ಹಾಗೂ ಸುತ್ತಮುತ್ತಲಿನ ಊರುಗಳಿಗೆ ಓಡಾಡಲು ಸುಮಾರು ಎರಡು, ಮೂರು ಮೈಲಿಯನ್ನು
ಇಳಿದು ಬರಬೇಕಾದವರು ಇದೇ ಕಾಲುದಾರಿ ಬಳಸುತ್ತಾರೆಂದು ನಾರಾಯಣ ಹೇಳಿದಾಗ ಅಬ್ಬಾ!
ಅನ್ನಿಸಿತು.
ದಟ್ಟವಾದ ಕಾಡು, ಎತ್ತರೆತ್ತರದ ಭಾರೀ ಗಾತ್ರದ ಮರಗಳು, ಅವುಗಳ ಬುಡದಲ್ಲಿ ಪುಟ್ಟ
ಕೂಸುಗಳಂತೆ ಸಣ್ಣಪುಟ್ಟ ಗಿಡಮರಗಳು, ಮರಗಳಿಗೆ ಹಬ್ಬಿಕೊಂಡ ಹೆಬ್ಬಾವುಗಳಂಥ ಬಳ್ಳಿಗಳು,
ಮರಗಳ ಕೊಂಬೆಗಳಲ್ಲಿ ಚಿತ್ರ ವಿಚಿತ್ರದ ಹಾವಸೆಗಳು, ದೊಡ್ಡ ದೊಡ್ಡ ಬೆತ್ತದ ಮೆಳೆಗಳು…
ಅವುಗಳ ನಡುವಿನ ಕಿರು ದಾರಿಯಲ್ಲಿ ನಾಲ್ವರೂ ಆದಷ್ಟು ಬೇಗ ತಲುಪಬೇಕಾದ ಜಾಗಕ್ಕೆ
ತರಾತುರಿಯಿಂದ ಹೆಜ್ಜೆ ಹಾಕುತ್ತಿದ್ದರು.
9
ಗೋವಿಂದ ಹೆಗಡೆ ಹೇಳಿದ ಗಾಂಜಾ ಬೆಳೆಯುವ ಪ್ರದೇಶದಲ್ಲಿ ಅನೇಕ ಶತಮಾನಗಳ ಹಿಂದೆ
ಸಾಕಷ್ಟು ವಿಸ್ತಾರವಾದ ಪ್ರದೇಶದ ಅಧಿಪತ್ಯ ಹೊಂದಿದ್ದ ಅರಸು ಮನೆತನವೊಂದರ
ರಾಜಧಾನಿಯಿತ್ತೆಂದು ಗಿರಿಧರ ಇತಿಹಾಸದ ಪುಸ್ತಕದಿಂದ ಓದಿ ತಿಳಿದುಕೊಂಡಿದ್ದ. ಪ್ರಸಿದ್ಧವಾದ
ಬಾಣಾವತಿ ನದಿ ಆ ಪ್ರದೇಶವನ್ನು ಇಬ್ಬಾಗಿಸಿಕೊಂಡು ಹರಿದು ಸಮುದ್ರ ಸೇರುತ್ತಿತ್ತು. ಆ ನದಿಯ
ಮೂಲಕ ನಡೆಸುತ್ತಿದ್ದ ವ್ಯಾಪಾರ, ವಹಿವಾಟು ಇತಿಹಾಸದಲ್ಲಿ ದಂತಕತೆಯೇ ಆಗಿತ್ತು. ಅದೆಷ್ಟೋ
ಶತಮಾನಗಳ ಹಿಂದೆಯೇ ಸಾವಿರಾರು ಮೈಲುಗಳ ದೂರದ ನಾಡಿನಲ್ಲಿ ಇಲ್ಲಿಯ ಕಾಳುಮೆಣಸು
ಪ್ರಸಿದ್ಧವಾಗಿತ್ತು. „ಬ್ಲಾಕ್ ಗೋಲ್ಡ‟ ಎಂದು ಕರೆಯುವ ಇಲ್ಲಿನ ಕಾಳುಮೆಣಸು ದೇಶ,
ವಿದೇಶದಲ್ಲೂ ಪ್ರಖ್ಯಾತವಾಗಿದ್ದಲ್ಲದೇ ಅಪಾರವಾದ ಹಣವನ್ನೂ ತಂದುಕೊಡುತ್ತಿತ್ತು. ಆ
ಕಾಲದಲ್ಲೇ ಈ ರಾಜ್ಯವಾಳುತ್ತಿದ್ದ ರಾಣಿಯನ್ನು „ಕಾಳುಮೆಣಸಿನ ರಾಣಿ‟ ಎಂದು
ಕರೆಯಿಸಿಕೊಳ್ಳುವಷ್ಟರ ಪ್ರಸಿದ್ಧಿಯನ್ನು ತಂದಿತ್ತಂತೆ. ಈ ಕಾಡಿನಲ್ಲಿ ತಾನೇತಾನಾಗಿ ಬೆಳೆಯುತ್ತಿದ್ದ
ಏಲಕ್ಕಿ ಸುಗಂಧದ ಜೊತೆಗೆ ರುಚಿಯೂ ಆಗಿರುತ್ತಿತ್ತಂತೆ. ಇಂಥ ಮಸಾಲೆ ಪಧಾರ್ಥಗಳ
ಮೂಲವನ್ನು ಪತ್ತೆಹಚ್ಚಲೆಂದೇ ವಾಸ್ಕೊ ಡಿ ಗಾಮ ಸಾವಿರಾರು ಮೈಲಿಗಳ ದೂರದ ಸಮುದ್ರವನ್ನು
ದಾಟಿ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಬಂದಿಳಿದಿದ್ದ. ಕಾಳುಮೆಣಸಿನ ವ್ಯಾಪಾರಕ್ಕೆ ಬಂದ ಆ
ಪೋರ್ಚುಗೀಸರು ಇಲ್ಲೇ ವಸಾಹತನ್ನು ಕಟ್ಟಿಕೊಂಡರು. ಇಲ್ಲಿಯದೇ ನೆಲವನ್ನು ತಮ್ಮ ಸುಪರ್ದಿಗೆ
ತೆಗೆದುಕೊಂಡರು. ಆ ಕಾಲದಲ್ಲಿ ಪಶ್ಚಿಮ ದೇಶಗಳಲ್ಲಿ ಪೈಪೋಟಿಯೇ ನಡೆದಿರಬೇಕು.
ಪೋರ್ಚುಗೀಸರ ಹಿಂದೆಯೇ ಪ್ರೆಂಚರು, ಅವರ ಹಿಂದೆಯೇ ಬ್ರಿಟಿಷರು ಬಂದರು. ಮತ್ತು ಅವರೆಲ್ಲ
ಬಂದು ತಲುಪಿದ್ದು ಪಶ್ಚಿಮಘಟ್ಟದ ಅಂಚಿನ ಸಮುದ್ರ ತೀರಗಳಲ್ಲೇ ಆಗಿತ್ತು. ಅಷ್ಟರ ನಂತರದ್ದು
ಒಂದು ದುರಂತದ ಇತಿಹಾಸ. ಈ ದೇಶದ ಸಕಲ ಸಂಪತ್ತನ್ನೂ ಕೊಳ್ಳೆ ಹೊಡೆದಿದ್ದಲ್ಲದೇ ಇಲ್ಲಿನ
ಜನರನ್ನು ಗುಲಾಮರನ್ನಾಗಿಸಿಕೊಂಡ ವಿದೇಶಿಯರು ಈ ನೆಲದ ಸಂಸ್ಕøತಿಯನ್ನೇ
ಬದಲಾಯಿಸಿಬಿಟ್ಟರು. ಒಂದು ಚರಿತಾರ್ಹವಾದ ಸಂದರ್ಭಕ್ಕೆ ಸಾಕ್ಷಿಯಾಗಿದ್ದ ಸೋರಗುಪ್ಪ ರಾಜ್ಯ
ಎಲ್ಲ ಸಾಮ್ರಾಜ್ಯಗಳಂತೇ ನಂತರದಲ್ಲಿ ಅವನತಿ ಹೊಂದಿತ್ತು. ಆ ರಾಜಧಾನಿಯ ಕುರುಹುಗಳು,
ಗುಡಿ, ಗೋಪುರಗಳ ಅವಶೇಷಗಳು, ಕೆರೆ,ಬಾವಿಗಳು ಈಗಲೂ ಅವನ್ನೆಲ್ಲ ಕಬಳಿಸಿಕೊಂಡು ಬೆಳೆದ
ಕಾಡಿನೊಳಗೆ ಗೋಚರವಾಗುತ್ತಿದ್ದವು.
ಒಂದು ಕಾಲದಲ್ಲಿ ಹಣ, ಪ್ರತಿಷ್ಠೆಯನ್ನು ತಂದುಕೊಟ್ಟ, ಸಮೃದ್ಧವಾದ ಕಾಡಿನಲ್ಲಿ ತಾನೇ ತಾನಾಗಿ
ಕಾಳುಮೆಣಸು, ಏಲಕ್ಕಿ ಬೆಳೆಯುತ್ತಿದ್ದ ನೆಲದಲ್ಲಿ ಈಗ ಅದೇ ಕಾಡನ್ನು ಕಡಿದು ಮನುಷ್ಯನನ್ನು
ಮೃಗವಾಗಿಸುವ, ಅವನ ಸಹಜತೆಯನ್ನು ನಾಶ ಮಾಡುವ ಗಾಂಜಾ ಬೆಳೆಯುತ್ತಿರುವದು ಎಂಥ
ವಿಪರ್ಯಾಸ ಎಂದು ಗಿರಿಧರ ಅಂದುಕೊಂಡ.
ಇದ್ದಕ್ಕಿದ್ದಂತೇ ಬೈನೆಕಾಡಿನಿಂದ ಬಂದವರಲ್ಲೊಬ್ಬನಾದ ಗಣೇಶ ಕೆಳ ಭಾಗದ ಮರದ
ಬುಡವೊಂದನ್ನ ತೋರಿಸಿ “ ಹೋದ ವರ್ಷ ಇಲ್ಲೇ ಒಬ್ಬ ಕೊಲೆಯಾಗಿದ್ದ. ಆ ಮರದ ಬುಡದಲ್ಲಿ
ಅವನ ಹೆಣ ಸಿಕ್ಕಿತ್ತು” ಎಂದ.
ಗಿರಿಧರನಿಗೆ ಒಂದು ಕ್ಷಣ ಮೈ ಜುಮ್ ಎಂದಿತು!
ನರ ಮನುಷ್ಯರ ಸುಳಿವಿರದ ದಟ್ಟಾರಣ್ಯದ ನಡುವೆ ಏಕಾಏಕಿ ವ್ಯಕ್ತಿಯೊಬ್ಬನ ಕೊಲೆಯ
ಪ್ರಸ್ತಾಪವಾದದ್ದು, ಅದರಲ್ಲೂ ಕೊಲೆ ನಡೆದಿರಬಹುದಾದ ಜಾಗದಲ್ಲೇ ಆ ಮಾತು ಕೇಳಿದ್ದು
ಸಣ್ಣಗೆ ನಡುಕ ಹುಟ್ಟಿಸಿತ್ತು. ಶಂಕರ ಶೆಟ್ಟಿಯ ಮುಖ ನೋಡಿದರೆ ಅಲ್ಲೂ ಭಯದ ಕಳೆ. ಅಲ್ಲಿ
ನಿಲ್ಲಲು ಪ್ರಾಯಶ: ಅವನಿಗೂ ಭಯವಾಗಿತ್ತೇನೋ? ನಡೆಯುತ್ತಲೇ ಇದ್ದರೂ ಆಗಿರುವ
ಹೆದರಿಕೆಯನ್ನು ಕಡಿಮೆ ಮಾಡಿಕೊಳ್ಳಲು ಏನಾದರೂ ಮಾತಾಡಬೇಕಿತ್ತು. ಗಿರಿಧರ ಪ್ರಶ್ನೆ
ಕೇಳುವದು ಬೇಡ ಎಂದುಕೊಳ್ಳುತ್ತಿದ್ದರೂ ಅದನ್ನು ಮೀರಿ “ ಕೊಲೆಯಾದವ ಯಾರು? ಕೊಲೆ
ಮಾಡಿದ್ದು ಯಾರು?” ಎಂದುಬಿಟ್ಟ.
ಆಡಿದ ನಂತರ ಈ ಪ್ರಶ್ನೆ ಕೇಳಬಾರದಿತ್ತೇನೋ ಎಂದು ಗಿರಿಧರನಿಗೆ ಅನ್ನಿಸಿತು.
ಕೊಲೆಯಾದ ಮನುಷ್ಯ ಬೈನೆಕಾಡಿನ ಸಮೀಪ ಅತಿಕ್ರಮಣ ಜಮೀನು ಮಾಡಿಕೊಂಡಿದ್ದು, ಆತನ
ಹೆಂಡತಿ ತವರುಮನೆಯಾದ ಹೆನ್ನೆಗೆ ಬಂದು ವಾಪಸ್ಸು ಹೋಗುವಾಗ ಕೊಲೆಯಾಗಿತ್ತೆಂದು
ಅವರಿಗಷ್ಟೇ ಕೇಳುವ ಪಿಸುಧ್ವನಿಯಲ್ಲಿ ಜೊತೆಗೆ ಬಂದ ನಾರಾಯಣ ಹೇಳಿದ.
ಮನೆಯವರು ಆತ ಮಾವನಮನೆಯಲ್ಲಿ ಉಳಿದಿರಬಹುದೆಂದೂ, ಮಾವನ ಮನೆಯವರು ವಾಪಸ್ಸು
ಮನೆಗೆ ಹೋಗಿರುವನೆಂದೂ ತಿಳಿದರು. ನಾಲ್ಕಾರು ದಿನಗಳ ನಂತರವೂ ಬಾರದಿರುವದಕ್ಕೆ
ಮನೆಯವರು ಹೆನ್ನೆಯವರೆಗೂ ಹುಡುಕುತ್ತ ಬಂದರು. ಎರಡು ದಿನಗಳ ಹಿಂದೆಯೇ ಹೋಗಿದ್ದನ್ನು
ಕೇಳಿ ಗಾಬರಿ ಬಿದ್ದು ಕಾಡನ್ನೆಲ್ಲ ಹುಡುಕತೊಡಗಿದರು. ಸಣ್ಣದಾಗಿ ಅಡರತೊಡಗಿದ್ದ ಕೆಟ್ಟ
ವಾಸನೆಯ ಮೂಲ ಹಿಡಿದು ಬಂದಾಗ ಮರದ ಬುಡದಲ್ಲಿ ಕೊಳೆಯುತ್ತ ಬಿದ್ದ ಹೆಣ
ಕಂಡಿತ್ತೆಂದೂ, ಮೊದಲು ಕರಡಿಯೋ, ಮತ್ತೇನೋ ಕೊಂದಿರಬಹುದೆಂದು ಊಹಿಸಿದ್ದರೂ,
ನಂತರದಲ್ಲಿ ಗಾಂಜಾ ಗ್ಯಾಂಗ್‍ನವರೇ ತಮ್ಮ ಬಗ್ಗೆ ಈತನಿಗೆ ಮಾಹಿತಿ ಗೊತ್ತಾಯ್ತು ಎಂದು ಈ
ಕೊಲೆ ಮಾಡಿರಬಹುದೆಂದು ಅನುಮಾನ ಬಂತೆಂದೂ ಗಣೇಶ, ನಾರಾಯಣ ಹೇಳುತ್ತಿರುವಾಗ
ಅವರ ಮಾತನ್ನು ಕೇಳಿ ಗಿರಿಧರನಿಗಿಂತ ಶಂಕರಶೆಟ್ಟಿ ಸಿಕ್ಕಾಪಟ್ಟೆ ಕಂಗಾಲಾಗಿಬಿಟ್ಟ.
ಅವರಿಬ್ಬರೂ ಈವರೆಗೆ ಕಾಣದ, ಕೇಳದ ಗೊಂಡಾರಣ್ಯದಲ್ಲಿ ಗುರುತು, ಪರಿಚಯವಿಲ್ಲದ ವ್ಯಕ್ತಿಗಳ
ಜೊತೆ ಅಷ್ಟೇ ಅನೂಹ್ಯವಾದ ಸ್ಥಳಕ್ಕೆ ಯಾವುದೋ ಕೂದಲೆಳೆಯ ನಂಬಿಕೆಯ ಮೇಲೆ
ಹೋಗುತ್ತಿದ್ದರು. ನಮ್ಮನ್ನು ಕರೆದುಕೊಂಡು ಹೋಗುತ್ತಿರುವ ಈ ಜನ ಗಾಂಜಾ ಗ್ಯಾಂಗನವರೇ
ಆಗಿದ್ದರೇ? ಒಂದು ಕ್ಷಣ ಗಿರಿಧರನಿಗೆ ಈ ಅನುಮಾನವೂ ಬಂತು. ನಾನು ಕಳುಹಿಸಿದವರು ಇವರೇ
ಎಂದು ಗೋವಿಂದ ಹೆಗಡೆ ಯಾವ ಸಾಕ್ಷವನ್ನೂ ಕೊಟ್ಟಿರಲಿಲ್ಲ. ನಾವೇ ಹಿಂದೆ ಮುಂದೆ ನೋಡದೇ
ದುಡುಕಿಬಿಟ್ಟೇವೇ ಎನ್ನಿಸಿತು.
ವಿಹ್ವಲ ಸ್ಥಿತಿಯಲ್ಲಿದ್ದಾಗ ಮನಸ್ಸು ಯಾವ ರೀತಿ ಯೋಚಿಸುತ್ತದೆ ಎನ್ನುವದು ಆಗ ಗಿರಿಧರನ
ಅನುಭವಕ್ಕೆ ಬಂತು. ಹಗ್ಗವನ್ನು ಕೂಡ ಹಾವೆಂದು ಭಾವಿಸಿ ಭಯಪಡಬೇಕಾದ ಮನಸ್ಥಿತಿ
ಉಂಟುಮಾಡುತ್ತದೆ ಎನ್ನಿಸಿತು. ಅಲ್ಲಿ ಕರಡಿಯಿಂದಾಗಲೀ, ಮನುಷ್ಯರಿಂದಾಗಲೀ, ಕೊನೆ ಪಕ್ಷ
ಹಾವು ಕಚ್ಚಿ ಸತ್ತರೂ ಕೇಳುವವರಿರಲಿಲ್ಲ. ತಪ್ಪಿಸಿಕೊಳ್ಳಲು ದಾರಿ ಗೊತ್ತಿರಬೇಕಲ್ಲ? ಅಕ್ಕಪಕ್ಕ
ನುಸುಳಲಾರದ ದಟ್ಟ ಕಾಡು. ಹಿಂದೆ ಸಾಗಿ ಬಂದ ದಾರಿಯಲ್ಲಿ ಅಥವಾ ಎದುರಿಗಿದ್ದ ದಾರಿಯಲ್ಲಿ
ಓಡಬೇಕಿತ್ತಷ್ಟೇ. ಕಾಡಿನಲ್ಲಿ ಯಾವ ಪ್ರಾಣಿಗಳಿದ್ದಾವೋ, ಅದೆಷ್ಟು ಹಾವುಗಳಿದ್ದಾವೋ?
ಚಕ್ರವ್ಯೂಹದೊಳಕ್ಕೆ ನುಗ್ಗಿಯಾಗಿದೆ. ಏನು ಬಂದರೂ ಎದುರಿಸುವಾ ಎನ್ನುವ ನಿಶ್ಚಯಕ್ಕೆ ಬರುವದು
ಅನಿವಾರ್ಯವೂ ಆಗಿತ್ತು.
ಗಿರಿಧರ ಈ ಮೊದಲೇ ತನ್ನ ಎಂದಿನ ಹವ್ಯಾಸದಂತೆ ದಟ್ಟವಾದ ಕಾಡಿನಲ್ಲಿ ಅಕ್ರಮ ಚಟುವಟಿಕೆ
ನಡೆಸುವವರ ಬಗ್ಗೆ ಒಂದಿಷ್ಟು ಮಾಹಿತಿ ಸಂಗ್ರಹಿಸಿದ್ದ. ಕೊಲೆ, ದರೋಡೆ ಮುಂತಾದ ಕೇಸಿನಲ್ಲಿ
ಜಾಮೀನು ಪಡೆದು ಹೊರಬಂದವರಿಗೆ ಅಥವಾ ಜೇಲ್ ಬ್ರೇಕ್ ಮಾಡಿ ತಪ್ಪಿಸಿಕೊಂಡ
ಅಪರಾಧಿಗಳಿಗೆ ಇಂಥ ದಟ್ಟಾರಣ್ಯ ಅಡಗಲು ಹೇಳಿ ಮಾಡಿಸಿದ ಜಾಗವಾಗಿತ್ತು. ಗಾಂಜಾ
ಬೆಳೆಯಲು ಕಾಡು ಸವರಿ, ನೆಲ ಸಮತಟ್ಟು ಮಾಡಲು ಯಂತ್ರಗಳನ್ನಾಗಲೀ, ಹತ್ತಾರು
ಕೂಲಿಗಳನ್ನಾಗಲೀ ಬಳಸುವಂತಿಲ್ಲ. ಹೊರ ಜಗತ್ತಿಗೆ ಇದರ ಐಬು ಗೊತ್ತಾಗದಂತೆ ಅವನ್ನೆಲ್ಲ
ಇಂಥ ಕ್ರಿಮಿನಲ್‍ಗಳಿಂದಲೇ ಮಾಡಿಸುತ್ತಿದ್ದರು. ಆ ನಂತರವೂ ಗಾಂಜಾ ಬೀಜ ಹಾಕಿ, ಸಸಿ ಬೆಳೆಸಿ,
ಅದನ್ನು ಊರಿ, ದಿನನಿತ್ಯ ಅದಕ್ಕೆ ನೀರುಹಾಕಿ, ಅದರ ಬೆಳೆ ಕೊಯ್ಲಾಗುವವರೆಗೆ ಮೂರ್ನಾಲ್ಕು
ತಿಂಗಳು ಕಾಡಿನಲ್ಲೇ ಇವರ ವಾಸ. ಅಲ್ಲೇ ಊಟ, ವಸತಿ. ಇಲ್ಲಿನ ಯಾರಾದರೊಬ್ಬ ಮಧ್ಯವರ್ತಿ
ಬಿಟ್ಟರೆ ಬೇರೆ ಯಾರಿಗೂ ಇದರ ಸುಳಿವೇ ಹತ್ತುವದಿಲ್ಲ. ಮತ್ಯಾರೂ ಇಲ್ಲಿಗೆ ಬಂದು
ಹೋಗುವಂತಿರಲಿಲ್ಲ. ಈ ಕ್ರಿಮಿನಲ್‍ಗಳಿಗೂ ಅಷ್ಟೇ. ತಮ್ಮನ್ನು ಕರೆತಂದು, ಗಾಂಜಾ ಬೆಳೆಸ್ತಾ
ಇರೋವ್ನು ಯಾರೋ? ಈ ಕಗ್ಗಾಡಿನ ನಡುವೆ ಗಾಂಜಾ ಬೆಳೆಯಲು ಕೋಟಿಗಟ್ಟಲೆ ಹಣದ
ಜೂಜಾಡ್ತಿರೋನು ಯಾರೋ? ಅವನೆಲ್ಲಿ ಕುಳಿತಿದ್ದಾನೋ? ಒಂದೂ ಗೊತ್ತಿರುವದಿಲ್ಲ. ಬಹುಪಾಲು
ಹೊರಗಿನ ರಾಜ್ಯಗಳಿಂದ ಬರುವ ಈ ಕ್ರಿಮಿನಲ್‍ಗಳು ಕಾಡಿನೊಳಗಿದ್ದು ಪಕ್ಕಾ
ಮೃಗದಂತಾಗಿರುತ್ತಾರೆ ಎನ್ನುವದನ್ನು ತಿಳಿದಿದ್ದ.
ಬಡಪಾಯಿಯೊಬ್ಬನ ಕೊಲೆಯ ಪ್ರಸ್ತಾಪವಾದ ನಂತರ ಅವರ ನಡುವೆ ಮಾತುಕತೆ ನಡೆಯದೇ
ಮೌನವಾಗಿ ಹೆಜ್ಜೆ ಹಾಕಿದರು. ಒತ್ತೊತ್ತಾಗಿ ಬೆಳೆದ ಗಿಡ, ಮರಗಳು. ಅದರ ಜೊತೆಗೆ
ವಿಸ್ತಾರವಾದ ಬೆತ್ತದ ಹಿಂಡು, ಮುಳ್ಳುಕಂಟಿಗಳು. ನಾಲ್ವರೂ ಕಾಡುಪ್ರಾಣಿಗಳಂತೆ ಅವೆಲ್ಲವುದರ
ಮಧ್ಯೆ ನುಸುಳಿ ಸಾಗುತ್ತಿದ್ದರು. ನರಮನುಷ್ಯರ ಸುಳಿವಿರದ ಆ ಕಗ್ಗಾಡಿನಲ್ಲಿ ಎಷ್ಟೋ ವರ್ಷಗಳಿಂದ
ಮರದ ಎಲೆಗಳು ನೆಲಕ್ಕುದುರಿ ಮಳೆ ನೀರಲ್ಲಿ ಮಣ್ಣಿನೊಂದಿಗೆ ಕರಗಿ ಗೊಬ್ಬರವಾಗಿ ಕಾಲಿಟ್ಟರೆ
ಸ್ಪಾಂಜಿನ ಮೇಲೆ ಕಾಲಿಟ್ಟಂತೆ ಮೆತ್ತನೆಯ ಅನುಭವವಾಗುತ್ತಿತ್ತು. ಕೈಯಿಂದ ಎದುರಾಗುವ
ಗಿಡ,ಬಳ್ಳಿಗಳನ್ನು ಸರಿಸುತ್ತ, ಹಾವು, ಹುಳ ಮೆಟ್ಟಿಬಿಟ್ಟೆವೆಂದು ಕಾಲ ಬುಡ ನೋಡಿಕೊಳ್ಳುತ್ತ
ಹುಶಾರಾಗಿ ನಡೆಯುತ್ತ, ಮುಂದೆ ಹೋಗುತ್ತಿದ್ದವರನ್ನ ಹಿಂಬಾಲಿಸಿದರು. ಗಿರಿಧರನಿಗೆ ಹಾಲಿವುಡ್
ಸಿನೆಮಾಗಳಲ್ಲಿನ ದೃಶ್ಯಗಳು ಬೇಡವೆಂದರೂ ನೆನಪಾಗುತ್ತಿತ್ತು.
ಅತ್ತಿತ್ತ ನೋಡುತ್ತ ನಡೆಯುತ್ತಿದ್ದ ಗಿರಿಧರ, ಶಂಕರ ಶೆಟ್ಟಿ ಇದ್ದಕ್ಕಿದ್ದಂತೆ ಸ್ಥಂಭಿಭೂತರಾಗಿ ನಿಂತು
ಬಿಟ್ಟರು. ಆ ಕಗ್ಗಾಡಿನ ಮಧ್ಯೆ ಎದುರಿನಲ್ಲಿ ಒಂಟಿ ಮನುಷ್ಯ !
ಅವರು ಹೋಗುತ್ತಿದ್ದ ಕಾಲುದಾರಿಯಲ್ಲಿ ವ್ಯಕ್ತಿಯೊಬ್ಬ ಅಕಸ್ಮಾತಾಗಿ ಎದುರು ಬಂದದ್ದಕ್ಕೆ ಒಂದು
ಕ್ಷಣ ಕಂಗಾಲಾದರು. ಅವರು ನಾಲ್ವರನ್ನು ಬಿಟ್ಟು ಮತ್ತೊಬ್ಬನನ್ನ ಆ ಕಾಡಿನಲ್ಲಿ ಊಹಿಸಿಕೊಳ್ಳಲೂ
ಅವರ ಮನಸ್ಸು ಸಿದ್ಧವಿರಲಿಲ್ಲ. ನಡೆಯುತ್ತಿದ್ದ ಅವರೆಲ್ಲ ನಿಂತಲ್ಲೇ ನಿಂತುಬಿಟ್ಟರು. ಗಿರಿಧರ
ಏಕಾಏಕಿ ಈ ಘಟನೆಯಿಂದ ಕಂಗಾಲಾಗಿದ್ದ. ಈ ಅಪರಿಚಿತ ಮನುಷ್ಯ ಯಾರಿರಬಹುದು? ಈತ
ಎಲ್ಲಿಂದ ಬಂದ? ದಾರಿಯಲ್ಲಿ ಬರ ಹೋಗುವವರನ್ನ ಗಮನಿಸುತ್ತ ಗಾಂಜಾ ಗ್ಯಾಂಗಿನವರಿಗೆ ಸುದ್ದಿ
ತಲುಪಿಸುವವನೇ? ಎನ್ನುವ ಭೀತಿ ಅವನಲ್ಲಿ ಹುಟ್ಟಿತು. ದೇಹದ ನರನಾಡಿಗಳಲ್ಲಿ ಹಠಾತ್ತನೆ
ಸರಿದಾಡಿದ ಭಯ ಕ್ಷಣಕಾಲ ಬಿಸಿ ಹುಟ್ಟಿಸಿತು. ನನ್ನನ್ನು ಕರೆದುಕೊಂಡು ಬರುತ್ತಿರುವ ಇವರನ್ನು
ನಂಬಿ ನಾನು ಮೋಸಹೋದೇನೆ. ವಿಷವ್ಯೂಹವೊಂದರಲ್ಲಿ ಅಂತೂ ನನ್ನ ಸಿಕ್ಕಿಸಿದರಲ್ಲ ಎಂದು
ಗಿರಿಧರ ಚಡಪಡಿಸುತ್ತ ಜೊತೆಗಿದ್ದವರತ್ತ ಗಿರಿಧರ ನೋಡಿದ. ಅವರ ಮುಖದಲ್ಲಿ ಗಾಬರಿಯ
ಕಳೆಯಿರಲಿಲ್ಲ. ನಿಧಾನಕ್ಕೆ ಆ ಮನುಷ್ಯ ಹತ್ತಿರಕ್ಕೆ ಬರತೊಡಗಿದ. ಹತ್ತಿರ ಬಂದಾಗ ನೋಡಿದರೆ
ಗೋವಿಂದ ಹೆಗಡೆ!
ಪಕ್ಕಾ ಹಳ್ಳಿಗರಂತೆ ಕಚ್ಚೆಪಂಚೆ ಉಟ್ಟು, ತಲೆಗೆ ಟವೆಲ್ ಸುತ್ತಿ ಕೈಯಲ್ಲೊಂದು ಹಗ್ಗದ ಸಿಂಬೆ
ಹಿಡಿದಿದ್ದ ಗೋವಿಂದ ಹೆಗಡೆ ಅವರನ್ನ ಕಂಡದ್ದೇ ಪಿಸುಧ್ವನಿಯಲ್ಲಿ ಕುಶಲೋಪರಿ ಕೇಳಿದರು.
ಗಿರಿಧರನಿಗೆ ಹೋದ ಜೀವ ಬಂದಂತಾಗಿತ್ತು. ಛೇ, ಜೊತೆಗೆ ಬಂದವರ ಮೇಲೆ
ಅನುಮಾನಪಟ್ಟೆನಲ್ಲಾ ಎನ್ನುವ ಖೇದವೂ ಆಯಿತು.
“ನಾನು ದನ ತಪ್ಪಿಸಿಕೊಂಡಿದೆ. ಹುಡುಕಬೇಕು ಎಂದು ಊರಲ್ಲಿ ಸುಳ್ಳು ಹೇಳಿ ಬಂದಿದ್ದೇನೆ. ನನ್ನ
ಮನೆ ಪಕ್ಕದವನೇ ಈ ಗ್ಯಾಂಗಿನಲ್ಲಿದಾನೆ. ಅವನಿಗೆ ಗೊತ್ತಾದರೆ ಕಷ್ಟ. ನೀವು ಇಲ್ಲೇ ಮೇಲೆ ಹತ್ತಿ
ಕಾಡಿನಲ್ಲಿ ಹೋಗಿ. ಇವರು ನಿಮಗೆ ಗಾಂಜಾ ಬೆಳೆದ ಜಾಗ ತೋರಿಸ್ತಾರೆ. ನಾನು ಇಲ್ಲೇ ಮುಂದೆ
ಹೋಗಿ ವಾಪಸ್ಸು ಬರ್ತೀನಿ” ಎಂದ ಗೋವಿಂದ ಹೆಗಡೆ ಬೈನೆಕಾಡಿನಿಂದ ಬಂದವರಿಗೆ ಏನೋ
ಹೇಳಿ ಮುಂದೆ ಹೋಗಿಬಿಟ್ಟಿದ್ದರು.

10
ಪಶ್ಚಿಮಘಟ್ಟದ ತಪ್ಪಲಿನ ಗುಡ್ಡಗಳ ಕಣಿವೆಯಲ್ಲಿ ಅಲ್ಲಲ್ಲಿ ಬಿಡಿ ಬಿಡಿಯಾದ ಮನೆಗಳಿರುವ ಊರು
ಬೈನೆಕಾಡು. ಗೊಂಡಾರಣ್ಯದ ಮಧ್ಯದ ಅಲ್ಲಿನ ದಿನನಿತ್ಯದ ಕಷ್ಟಗಳಿಗೆ, ಧೋ ಧೋ ಸುರಿಯುವ
ಅಬ್ಬರದ ಮಳೆ, ಗಾಳಿ, ಥಂಡಿಯ ವಾತಾವರಣಕ್ಕೆ ಅಲ್ಲಿದ್ದ ಮೂರು ಮತ್ತೊಂದು ಕುಟುಂಬಗಳೇ
„ಇಲ್ಲಿಂದ ಪಾರಾದರೆ ಸಾಕಪ್ಪಾ ದೇವರೇ‟ ಎಂದು ಬೇರೆಡೆಗೆ ಹೋಗಲು ಪರಿತಪಿಸುತ್ತಿರಬೇಕಾದರೆ
ಈ ಗೋವಿಂದ ಹೆಗಡೆ ಎನ್ನುವ ಅಪರಿಚಿತ ವ್ಯಕ್ತಿಯೊಂದು ಹೆಂಡತಿ ಹಾಗೂ ಪ್ರಾಯಕ್ಕೆ ಬರುತ್ತಿದ್ದ
ಮಗಳೊಬ್ಬಳನ್ನು ಕಟ್ಟಿಕೊಂಡು ಎಲ್ಲಿಂದಲೋ ಬಂದು ಅಲ್ಲಿ ತಳವೂರಿದ್ದು ಅಲ್ಲಿನವರಿಗೆ
ನಿಗೂಢವಾಗಿ ಕಂಡಿತ್ತು.
ಫಾರೆಸ್ಟ ಡಿಪಾರ್ಟಮೆಂಟನವರು ಕಡಿದ ಮರ ಸಾಗಿಸಲು, ಅಕೇಶಿಯಾ ಪ್ಲಾಂಟೇಷನ್‍ಗೆ ಸಸಿ
ಸಾಗಿಸಲು ಮಾಡಿಕೊಂಡ ಕಚ್ಚಾರಸ್ತೆ ಬಿಟ್ಟರೆ ಆ ಊರಿಗೆ ನೆಟ್ಟಗೆ ಒಂದು ಸರಿಯಾದ ರಸ್ತೆಯೂ
ಇರಲಿಲ್ಲ. ಕೊರಕಲು ಬಿದ್ದು ಕಾಲಿಟ್ಟರೆ ಜಾರುವ ಅದರಲ್ಲಿ ನಡೆದಾಡಲು ಸಾಧ್ಯವೇ ಇರಲಿಲ್ಲ.
ಕರೆಂಟ್ ಬಂದಿದ್ದರೂ ಲೈನ್ ಮೇಲೆ ಮರ ಬಿದ್ದು, ಮರದ ರೆಂಬೆ ಬಿದ್ದು ವರ್ಷದ ಮುಕ್ಕಾಲು
ದಿವಸ ಚಿಮಣಿ ಬುಡ್ಡಿಯೇ ಗತಿಯಾಗುತ್ತಿತ್ತು. ಕಂಡ ಕಂಡಲ್ಲಿ ಒಸರುವ ನೀರಿನ ಒರತೆಗಳ
ಕಾರಣದಿಂದ ನೆಲವೆಲ್ಲಾ ಜವುಗಾಗಿಯೇ ಇರುತ್ತಿತ್ತಲ್ಲದೇ ಮಳೆಗಾಲದಲ್ಲಂತೂ ಕಚಪಚ ಎನ್ನುವ
ಕೆಸರು ಗದ್ದೆಯಾಗಿರುತ್ತಿತ್ತು. ಅಲ್ಲಿನ ತೇವಾಂಶದ ಕಾರಣದಿಂದ ಅಲ್ಲಿನವರೆಲ್ಲ ಸದಾ ಕಾಲ
ನೆಗಡಿಯಾದವರಂತೆ ಮೂಗು ಸೀಟುತ್ತ, ಕವಕವ ಕೆಮ್ಮುತ್ತಲೇ ಇರುತ್ತಿದ್ದರು. ಯಾರಿಗಾದರೂ
ಹುಷಾರಿಲ್ಲವೆಂದರೆ ಕೋಗಾರಿಗೋ, ಮತ್ತೆಲ್ಲಿಗೋ ಹೋಗಿ ಔಷಧಿ ತರುವಷ್ಟರಲ್ಲಿ ಅವರು
ನೆಗೆದುಬಿದ್ದಿರುತ್ತಿದ್ದರು.
ಇಂಥ ದಂಡಕಾರಣ್ಯದ ನಡುವಿನ ಊರಿಗೆ ತಲೆ ಕೆಟ್ಟವರೇ ಬರಬೇಕು ಎಂದು ತಮ್ಮ ಬಗ್ಗೆಯೇ
ಹಳಹಳಿಸುತ್ತಿರಬೇಕಾದರೆ ಗೋವಿಂದ ಹೆಗಡೆ ಕುಟುಂಬ ಅಲ್ಲಿಗೆ ಬಂದದ್ದು ಈ ಹೆಗಡೆಗೆ ಮಂಡೆ
ಸರಿಯಿಲ್ಲ ಎನ್ನುವ ತೀರ್ಮಾನಕ್ಕೆ ಅಲ್ಲಿನವರೆಲ್ಲ ಬರುವಂತಾಗಿತ್ತು
ಹಿಂದೆ ಯಾರೋ ಅತಿಕ್ರಮಣ ಮಾಡಿ, ಕಾಡು ಕಡಿದು, ನೆಲ ಅಗೆದು, ಭತ್ತದ ಗದ್ಧೆ
ಮಾಡಿಕೊಂಡು ನಂತರದಲ್ಲಿ ಅದು ಬರಕತ್ತಾಗದೇ ಸೋರಗುಪ್ಪ ಪೇಟೆಯ ಸುಬ್ರಾಯ ಪೈಗೆ
ಹುಟ್ಟಿದ್ದಷ್ಟಕ್ಕೆ ಕೊಟ್ಟು ಹೋಗಿದ್ದರು. ಸುಬ್ರಾಯ ಪೈ ಅದರಲ್ಲೇನೂ ಕೃಷಿ ಮಾಡುವ
ಆಶೆಯಿಂದೇನೂ ಕೊಂಡಿರಲಿಲ್ಲ. ತನ್ನ ಬಳಿ ದಿನನಿತ್ಯ ಬೇಕಾದ ಕಿರಾಣಿ ಸಾಮಾನು ಒಯ್ಯುತ್ತಿದ್ದ ಆ
ಮನುಷ್ಯನಿಂದ ಬರಬೇಕಾದ ಸಾಲಕ್ಕೆ ಮುರಿದುಕೊಂಡು ಒಂದಿಷ್ಟು ಹಣವನ್ನು ಆ ಬಡಪಾಯಿಯ
ಕೈಗೆ ಕೊಟ್ಟು, ಅಂತೂ ಕೊಟ್ಟ ದುಡ್ಡಿಗೆ ಇದಾದರೂ ದಕ್ಕಿತಲ್ಲ ಎಂದು ಯಾರಾದರೂ ಗಿರಾಕಿ
ಸಿಕ್ಕಾರೇನೋ ಎಂದು ಕಾಯುತ್ತಿದ್ದ. ಯಾರದೋ ಮಧ್ಯಸ್ಥಿಕೆಯಲ್ಲಿ ಗೋವಿಂದ ಹೆಗಡೆ ಜಮೀನು
ಕೊಳ್ಳುವದರ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೇ ಸುಮ್ಮನೆ ಚೌಕಾಶಿ ಮಾಡಿದನಾದರೂ ತೆತ್ತಿದ್ದಕ್ಕಿಂತ
ಕಡಿಮೆ ಬೆಲೆಗೆ ಕೊಟ್ಟು ಕೈ ತೊಳೆದುಕೊಂಡಿದ್ದ.
ಬೈನೆ ಕಾಡಿನ ಮಣ್ಣು ಅಂಥ ಫಲವತ್ತಾದುದೇನೂ ಅಲ್ಲವಾಗಿತ್ತು. ವರ್ಷದ ನಾಲ್ಕಾರು ತಿಂಗಳ
ಮಳೆ, ಸುತ್ತಲಿನ ಕಾಡು ಇವೆಲ್ಲವುದರಿಂದ ಗದ್ದೆಯೆಲ್ಲ ಜವುಗಾಗಿ ನೆಟ್ಟ ಸಸಿಗಳೇ
ಮೇಲೇಳುತ್ತಿರಲಿಲ್ಲ. ಸೊಪ್ಪು, ತರಗೆಲೆ, ಗೊಬ್ಬರ ಹಾಕಿದರೂ ಅವಕ್ಕೆ ಏನು
ಧಾಡಿಯಾಗುತ್ತಿತ್ತೋ? ಹಾಗೂ ಹೀಗೂ ಗೇಣುದ್ದ ಮೇಲೆ ಬಂದು ತೆನೆ ಬಿಡುವಷ್ಟರಲ್ಲೇ
ಕಾಡೆಮ್ಮೆ, ಮಿಕ, ಮಂಗ, ನವಿಲು.. ಹೀಗೆ ನೂರೆಂಟು ಪ್ರಾಣಿಗಳ ಕಾಟ. ಬೈನೆ ಕಾಡೆಂಬ
ಊರಲ್ಲದ ಊರಿನಲ್ಲಿ ಯಾವುದೇ ರೈತ ಪೂರ್ತಿ ಬೆಳೆಯನ್ನು ಕೊಯ್ದ ದಾಖಲೆಯೇ ಈವರೆಗೆ
ಇರಲೇ ಇಲ್ಲ.
ಕಾಲಿಟ್ಟರೆ ಹುಗಿಯುವ, ನಡು ಬೇಸಗೆಯಲ್ಲೂ ಬೆನ್ನು ಡೊಂಕು ಮಾಡಿಕೊಂಡು ರಕ್ತದ ವಾಸನೆ
ಹಿಡಿದು ಬರುವ ಉಂಬಳಗಳ ಕಾಟದ, ಘೋರ ಮೌನದ ಬೈನೆ ಕಾಡಿಗೆ ಬಂದದ್ದೇ ಗೋವಿಂದ
ಹೆಗಡೆ ಹೆಂಡತಿ, ಮಗಳು ನಾಲ್ಕಾರು ದಿನ ಗೋಳಿಟ್ಟರು. ಸುತ್ತಲಿನ ಕಾಡು, ಗಂವ್ ಎನ್ನುವ
ಮೌನ ಅವರಲ್ಲಿ ಬೇಸರಕ್ಕಿಂತ ಭಯವನ್ನೇ ಹುಟ್ಟಿಸಿತ್ತು. ತಮ್ಮನ್ನು ಯಾವುದೋ ನರಕಕ್ಕೆ ತಂದು
ಬಿಟ್ಟರೆಂದು ಅತ್ತು ಅತ್ತೂ ಅವರ ಕಣ್ಣೀರ ಕೆರೆ ಖಾಲಿಯಾಗುತ್ತಿದ್ದಂತೇ ಗೋವಿಂದ ಹೆಗಡೆಯನ್ನು
ತಾರಾಮಾರಾ ಉಗಿಯಲು ಶುರುವಿಟ್ಟುಕೊಂಡರು.
“ನಮ್ಮನ್ನೇನು ಯಾವ್ದಾದ್ರೂ ಕಾಡುಪ್ರಾಣಿಗೆ ಬಲಿ ಕೊಡಲು ಕರ್ಕೋಬಂದ್ರಾ, ಏನ್ ಕತೆ? ಇಲ್ಲಿ
ಸತ್ರೂ ಯಾರು ಕೇಳೋರಿಲ್ಲ. ನಡಿ ಮಗಳೇ, ಇವ್ರು ಬೇಕಾದ್ರೆ ಈ ಕಾನಾಗೆ ಕೂತಿರ್ಲಿ. ನಾವು
ಎಲ್ಲಾದ್ರೂ ಹೋಗ್ವಾ” ಎಂದು ಇದ್ದಬದ್ದ ಬಟ್ಟೆ ಬರೆ ಚೀಲಕ್ಕೆ ತುಂಬುತ್ತ ಹೆಂಡತಿ ಅಬ್ಬರಿಸಿದಾಗ
ಗೋವಿಂದ ಹೆಗಡೆಯವರಿಗೆ ಪೀಕಲಾಟಕ್ಕೆ ಇಟ್ಟುಕೊಂಡಿತು. ಅವರನ್ನು ಸಮಾಧಾನ
ಪಡಿಸುವಷ್ಟರಲ್ಲಿ ಏಳುಕೆರೆಗಳ ನೀರು ಕುಡಿದಂತಾಗಿತ್ತು.
ಗೋವಿಂದ ಹೆಗಡೆ ಎಲ್ಲಿಂದ? ಯಾತಕ್ಕಾಗಿ ಇಲ್ಲಿಗೆ ಬಂದ? ಎನ್ನುವದು ಬೈನೆಕಾಡಿನವರಿಗೆ
ಕೊನೆಗೂ ಗೊತ್ತಾಗಲೇ ಇಲ್ಲ. ಅವರ ಹೆಂಡತಿ, ಮಗಳೂ ಅದರ ಬಗ್ಗೆ ತುಟಿ ಪಿಟಕ್
ಎಂದಿರಲಿಲ್ಲ. ನಾಲ್ಕಾರು ದಿನ ಕೊಸಪಸ ಮಾಡಿ ಕೊನೆಗೆ ಅವರಿಬ್ಬರೂ ನಿಧಾನಕ್ಕೆ ಅಲ್ಲಿನ
ವಾತಾವರಣಕ್ಕೆ ಹೊಂದಿಕೊಳ್ಳತೊಡಗಿದ್ದರು.
11
ಸೋರಗುಪ್ಪಾ ಮೊದಲಿನಿಂದಲೂ ಯಾವುದೇ ಗೌಜಿ ಗದ್ದಲವಿಲ್ಲದೇ ತನ್ನ ಪಾಡಿಗೆ ತಾನಿದ್ದ
ಊರಾಗಿತ್ತು. ಒಂದು ಸಾಮ್ರಾಜ್ಯವಾಗಿತ್ತೆನ್ನುವ ಕುರುಹಗಳಾಗಲೀ, ಕಾಳುಮೆಣಸಿನ ಖ್ಯಾತಿಯ
ಹಿಂದಿನ ವೈಭವದ್ದಾಗಲೀ ಯಾವ ಅವಶೇಷಗಳೂ ಅಲ್ಲಿರಲಿಲ್ಲ. ಅಲ್ಲಿದ್ದ ಮೂರೋ,
ಮತ್ತೊಂದೋ ಕೊಂಕಣಿಗರು, ಶೆಟ್ಟರ ಕುಟುಂಬಗಳ ಅಂಗಡಿ, ಹೊಟೇಲ್‍ಗಳೂ, ಒಬ್ಬ ದಪೇದಾರ,
ಒಬ್ಬಿಬ್ಬರು ಪೊಲೀಸರೋ ಇರುತ್ತಿದ್ದ ಠಾಣೆ, ಮುದಿ ಡಾಕ್ಟರ್ ಒಬ್ಬರು ಇರುತ್ತಿದ್ದ ಸರಕಾರಿ ಆಸ್ಪತ್ರೆ
ಇವುಗಳಿಂದಾಗಿ ಪೇಟೆ ಎಂದು ಕರೆಸಿಕೊಳ್ಳುತ್ತಿತ್ತು ಅಷ್ಟೇ. ಇದರ ನಡುವೆ ಒಂದೋ, ಎರಡೋ
ಮುಸಲ್ಮಾನರ, ಕ್ರಿಶ್ಚಿಯನ್ನರ ಮನೆಗಳು ಅದು, ಇದೂ ಮಾಡಿಕೊಂಡು ಬದುಕಿದ್ದವು. ಒಂದು
ಕಾಲಕ್ಕೆ ಒಂದು ಪ್ರತಿಷ್ಠಿತ ರೇವು ಆಗಿದ್ದ ಅಲ್ಲಿ ಈಗ ಹೊಳೆಯ ದಂಡೆ ಮಾತ್ರವಾಗಿ ಉಳಿದಿತ್ತು.
ಇತ್ತೀಚಿನವರೆಗೂ ಕರಾವಳಿ ಕಡೆ ಹೋಗಬೇಕೆಂದರೆ ಸೋರಗುಪ್ಪಕ್ಕೆ ಬಂದು ಅಲ್ಲಿಂದ ಬೆಳಿಗ್ಗೆ
ಹೊರಡುವ ತಾರಿ ದೋಣಿ ಹತ್ತಿ ಹೊರಟರೆ ವಾಪಸ್ಸು ಸಂಜೆ ಅದರಲ್ಲೇ ಬರಬೇಕಿತ್ತು. ನಿಶ್ಚಲವಾಗಿ
ಹರಿವ ಬಾಣಾವತಿಯ ಮೇಲ್ಮೈಯಲ್ಲಿ ತೇಲುವ ತಾರಿ ದೋಣಿಯೇ ಆ ಭಾಗದ ಊರಿನವರಿಗೂ,
ಘಟ್ಟದ ಮೇಲಿಂದ ಬರುವ ವ್ಯಾಪಾರಸ್ಥರಿಗೂ ಸಂಪರ್ಕ ಸಾಧನವಾಗಿತ್ತು.
ಒಂದು ಕಾಲದಲ್ಲಿ ಸಾಮ್ರಾಜ್ಯವಾಗಿ ಹೆಸರು ಮಾಡಿ, ಈಗ ಗತ ವೈಭವಕ್ಕೆ ಸೇರಿದ್ದ ಆ ಊರು
ನಿಧಾನಕ್ಕೆ ಬದಲಾಗತೊಡಗಿತ್ತು. ಕರಾವಳಿ ಸೀಮೆಯಲ್ಲಿ ಕೇರಳದಿಂದ ಮುಂಬಯಿಯವರೆಗೆ
ಹೆದ್ದಾರಿಯಾಗಿದ್ದೇ ಆಸುಪಾಸಿನ ಪ್ರದೇಶವೆಲ್ಲ ವರ್ಷದಿಂದ ವರ್ಷಕ್ಕೆ ಹೊಸದಾಗತೊಡಗಿತು.
ಕಡಲತಡಿಯ ಬಂಗಾರುಪೇಟೆಯಿಂದ ಪೂರ್ವದಿಕ್ಕಿನಲ್ಲಿ ಸುಮಾರು ಮೂವತ್ತು ಮೈಲು ದೂರದ
ಸೋರಗುಪ್ಪದವರೆಗೆ ಕಪ್ಪನೆಯ ಟಾರು ರಸ್ತೆಯಲ್ಲಿ ಬಸ್ ಓಡಾಡಲಾರಂಬಿಸಿತು. ಮುಂದೆ ಇದೇ
ರಸ್ತೆ ರಾಜ್ಯ ಹೆದ್ದಾರಿಯಾಗಿ ಘಟ್ಟದ ಮೇಲೆ ಹತ್ತಿ, ಮುಂದೆ ಬಯಲು ಸೀಮೆಯವರೆಗೂ
ವಿಸ್ತರಿಸಿದಾಗ ದಿನಕ್ಕೆ ನೂರಾರು ಲಾರಿ, ಬಸ್ ಸಂಚರಿಸತೊಡಗಿ ಮೂಲೆಯಲ್ಲಿದ್ದ ಸೋರಗುಪ್ಪ
ಮುಂಚೂಣಿಗೆ ಬಂದಿತ್ತು. ಅಲ್ಲಿಯ ತನಕ ಮುಂಜಾನೆ ಬೋಂ ಎಂದು ಸುತ್ತ ಹತ್ತಾರು ಮೈಲಿಗೆ
ಕೇಳುವಂತೆ ತುತ್ತೂರಿ ಊದಿ ಹೊರಟು, ಹೊಳೆ ದಂಡೆಯ ಆಚೀಚಿನ ಊರುಗಳ ಜನರನ್ನು
ಬಂಗಾರು ಪೇಟೆಗೆ ತಲುಪಿಸಿ, ಮತ್ತೆ ಹೊತ್ತು ಕಂತುವ ಮೊದಲು ಅಲ್ಲಿಂದ ಹೊರಟು
ಸೋರಗುಪ್ಪಕ್ಕೆ ಬಂದು ತಲುಪುತ್ತಿದ್ದ ದೋಣಿ ಯಾನ ನಿಂತು ಹೋಗಿತ್ತು. ನಾಲ್ಕಾರು ಮನೆಗಳಿದ್ದ
ಅಲ್ಲಿನವರ ಸಂಬಂಧಿಕರೆಲ್ಲ ಎಲ್ಲೆಲ್ಲಿಂದಲೋ ಬಂದು ಆ ಭಾಗದ ಕಾಡಿನಲ್ಲೆಲ್ಲ ಅತಿಕ್ರಮಣ
ಮಾಡಿಕೊಂಡು ನೆಲೆ ನಿಂತರು. ಊರು ಕೇರಿ ಗೊತ್ತಿರದ ಎಲ್ಲ ಜಾತಿ,ಮತಸ್ಥರೂ
ಬಾಣಾವತಿಯಾಚೆಗಿನ ದಟ್ಟ ಕಾಡನ್ನು ಸವರಿ ಒಂದಿಷ್ಟು ಜಮೀನು ಮಾಡಿಕೊಂಡು
ಸೋರಗುಪ್ಪವೆಂಬ ಪೇಟೆಯ ಮೊದಲಿನ ಚಿತ್ರಣವನ್ನೇ ಬದಲಾಯಿಸಿಬಿಟ್ಟರು.
ಸೋರಗುಪ್ಪವೆಂಬ ಊರು ವಿಚಿತ್ರವಾದ ರೀತಿಯಲ್ಲಿ ಬದಲಾಗುತ್ತ ಅತ್ತ ಕಾಡೂ ಅಲ್ಲದ, ಇತ್ತ
ನಾಡು ಆಗದೇ ಒಬ್ಬರು ಮತ್ತೊಬ್ಬರನ್ನು ಅರಿತುಕೊಳ್ಳಲಾಗದ ಒಂದು ರೀತಿಯಲ್ಲಿ ನಿಗೂಡವಾದ
ಮನಸ್ಥಿತಿಯನ್ನು ಪಡೆದುಕೊಳ್ಳತೊಡಗಿತ್ತು.
ಆವಾಗಲೇ ಆ ಊರಿಗೆ ಮತ್ತೊಂದು ಹೊಸ ಸ್ವರೂಪ ಪ್ರಾಪ್ತವಾಗಿತ್ತು.
ಸರಕಾರಕ್ಕೆ ಕಂಡಕಂಡಲ್ಲಿ ಆಣೆಕಟ್ಟು ಕಟ್ಟಿ ವಿದ್ಯುತ್ ಉತ್ಪಾದಿಸುವ ಹುಚ್ಚು ತಲೆಗೇರಿತ್ತು. ಅದಕ್ಕೆ
ಪೂರಕವೆನ್ನುವಂತೆ ಯಾವುದೋ ವಿಜ್ಞಾನಿ ಸೋರಗುಪ್ಪದ ಬಳಿ ಬಾಣಾವತಿ ಹೊಳೆಗೆ ಆಣೆಕಟ್ಟು
ಕಟ್ಟಿದರೆ ಎಷ್ಟೋ ಮೆಗಾವ್ಯಾಟ್ ಕರೆಂಟ್ ಸಿಗುತ್ತದೆ ಎನ್ನುವ ಯೋಜನೆಯನ್ನು ಪ್ರಸ್ತಾವಿಸಿದ.
ವಾಸ್ತವವಾಗಿ ಈ ಯೋಜನೆಯ ಹಿಂದೆ ಸರಕಾರದಲ್ಲಿರುವ ಮಂತ್ರಿಗಳ, ನೂರಾರು ಕೋಟಿ
ರೂಪಾಯಿಗಳ ಮೆಷಿನ್, ಸಲಕರಣೆಗಳನ್ನು ಹೊಂದಿದ ದೊಡ್ಡ ಗುತ್ತಿಗೆದಾರನ ಕೈವಾಡವೂ ಇತ್ತು.
ಸರಕಾರದಲ್ಲಿರುವವರಿಗೆ ದುಡ್ಡು ಬೇಕಿತ್ತು. ಗುತ್ತಿಗೆದಾರನಿಗೆ ದೊಡ್ಡದೊಂದು ಕೆಲಸದ ಜೊತೆಗೆ
ಹತ್ತಾರು ಕೋಟಿ ರೂಪಾಯಿಗಳ ಲಾಭ ಬೇಕಿತ್ತು. ಅವರಿಬ್ಬರಿಗೂ ಆಣೆಕಟ್ಟು ಕಟ್ಟುವದರಲ್ಲಿನ
ಲಾಭಕ್ಕಿಂತ ಅದರಿಂದ ಮುಳುಗಡೆಯಾಗುವ ಕಾಡಿನ ಅಮೂಲ್ಯ ಸಂಪತ್ತನ್ನು ಲೂಟಿ ಮಾಡುವದು
ಮುಖ್ಯವಾಗಿತ್ತು.
ವಿದ್ಯುತ್ ಯೋಜನೆಯ ಪ್ರಸ್ತಾವನೆ ಸಲ್ಲಿಕೆಯಾದ ಬೆನ್ನಿಗೇ ಮಂಜೂರಿಯೂ ಆಗಿ ಆಣೆಕಟ್ಟಿನ ಕೆಲಸ
ಆರಂಭವಾಗಿಬಿಟ್ಟಿತ್ತು. ಯೋಜನೆಯಲ್ಲಿ ಕೆಲಸ ಮಾಡುವ ನೌಕರರಿಗೆಂದು ಕ್ವಾರ್ಟಸ್ ಕಟ್ಟಲು
ಒಂದಿಷ್ಟು ಕಾಡು ಕಡಿದರು. ಸೋರಗುಪ್ಪದ ಜನರಿಗೆ ಅದರಿಂದ ದಿನವೂ ಕೆಲಸ
ದೊರಕತೊಡಗಿತ್ತು. ನಿಧಾನಕ್ಕೆ ಆಣೆಕಟ್ಟಿನ ಕೆಲಸಕ್ಕೆ, ಮುಳುಗಡೆಯಾಗುವ ಪ್ರದೇಶದ ಕಾಡನ್ನು
ಕಡಿಯಲಿಕ್ಕೆ, ನೀರಲ್ಲಿ ಮುಳುಗುವ ರಾಜ್ಯ ಹೆದ್ದಾರಿಗೆ ಪರ್ಯಾಯ ರಸ್ತೆ ಮಾಡಲಿಕ್ಕೆ ಎಂದೆಲ್ಲ
ಎಲ್ಲೆಲ್ಲಿಯವರೋ, ಯಾವ್ಯಾವ ಭಾಷೆಯವರೋ ಸಾವಿರಾರು ಮಂದಿ ಬರತೊಡಗಿದರು.
ಅಷ್ಟರವರೆಗೆ ಕಾಡ ನಡುವಿನಲ್ಲಿ ತಣ್ಣಗೆ ಇದ್ದ ಸೋರಗುಪ್ಪದಲ್ಲಿ ನಿತ್ಯವೂ ಜಾತ್ರೆ ಎನ್ನುವಂತೆ
ಜನಸಂದಣಿ ಕಿಕ್ಕಿರಿಯತೊಡಗಿತು.
ಇಷ್ಟರ ನಡುವೆ ಸೋರಗುಪ್ಪದ ಹಲವರು ಊರಲ್ಲಿ ತಾವು ಮಾಡುತ್ತಿದ್ದ ಕೂಲಿ ಕೆಲಸ ಬಿಟ್ಟು
ಆಣೆಕಟ್ಟಿನ ಕೆಲಸಕ್ಕೆ ಬಂದವರ ಅಗತ್ಯ ಪೂರೈಸಲು ಪೆಟ್ಟಿಗೆ ಅಂಗಡಿ ಕೂರಿಸಿ ವ್ಯಾಪಾರಕ್ಕೆ
ತೊಡಗಿದ್ದರು. ಕಿರಾಣಿ, ಬಟ್ಟೆ, ಹೊಟೇಲ್, ತರಕಾರಿ, ಸಾರಾಯಿ.. ಅಂಗಡಿಗಳೆಂದರೆ ಒಂದೇ,
ಎರಡೇ. ದೊಡ್ಡ ಪೇಟೆಯೊಂದರಂತೆ ಬದಲಾಗಿ, ನೂರಾರು ಟಿಪ್ಪರ್‍ಗಳು, ಧಡೂತಿ ಲಾರಿಗಳು,
ಸಹಸ್ರಾರು ಕೆಲಸಗಾರರು ಏಳಿಸುತ್ತಿದ್ದ ಧೂಳಿನ ನಡುವೆ ಸೋರಗುಪ್ಪ ತನ್ನ ಮೂಲರೂಪವನ್ನೇ
ಕಳೆದುಕೊಂಡಿತ್ತು.
ಮೂರ್ನಾಲ್ಕು ವರ್ಷಗಳ ಅಬ್ಬರದ ನಂತರ ಬಂದಷ್ಟೇ ನಿಧಾನಕ್ಕೆ ಜನಸಂದಣಿ ಕರಗತೊಡಗಿತ್ತು.
ಆಣೆಕಟ್ಟಿನ ಕೆಲಸ ಮುಗಿದಂತೇ ಘೀಳಿಡುತ್ತ ಓಡಾಡುತ್ತಿದ್ದ ಲಾರಿ,ಟಿಪ್ಪರ್‍ಗಳೆಲ್ಲ ಮಾಯವಾಗಿದ್ದವು.
ಅರ್ಥವಾಗದ ಭಾಷೆ ಮಾತನಾಡುತ್ತಿದ್ದವರೆಲ್ಲ ಗಂಟು ಮೂಟೆ ಕಟ್ಟಿ ಎಲ್ಲಿಗೋ ಹೊರಟು
ಹೋಗಿದ್ದರು. ಜನರಿಂದ ಗಿಜಿಗುಡುತ್ತಿದ್ದ ಅಂಗಡಿಗಳೆಲ್ಲ ನೊಣ ಹಾರತೊಡಗಿತ್ತು. ಆ ನಂತರ
ಸೋರಗುಪ್ಪದ ಜನರಿಗೆ ಎದುರಿಗಿದ್ದದ್ದು ಬೃಹತ್ತಾದ ಆಣೆಕಟ್ಟು. ನಶಿಸಿಹೋದ ಕಾಡು,
ಎಲ್ಲಿಂದಲೋ ಎತ್ತಿ ತಂದಿಟ್ಟಂತ ವಿದ್ಯುತ್ ಕಂಪನಿಯ ಬೆಂಕಿಪೊಟ್ಟಣದಂಥ ಮನೆಗಳ ಸಾಲು.
ಅಲ್ಲಿನವರಿಗೆ ತಾವು ಏನನ್ನೋ ಕಳೆದುಕೊಂಡಿದ್ದೇವೆ ಎನ್ನಿಸುತ್ತಿತ್ತೇ ಹೊರತು ಏನನ್ನು
ಕಳೆದುಕೊಂಡಿದ್ದೇವೆ ಎನ್ನುವದು ಅರಿವಿಗೆ ಬಾರದಂತಿತ್ತು.
ಅಲ್ಲಿನ ಜನ ಕೂಡ ಬೇರೊಂದು ಬದುಕಿನ ರೀತಿಗೆ ಬದಲಾಗಿ, ಈಗ ಪುನ: ಮೂಲಸ್ಥಿತಿಗೆ
ಒಗ್ಗಿಕೊಳ್ಳಲು ಒದ್ದಾಡುತ್ತಿದ್ದರು. ತಮ್ಮ ದಿನನಿತ್ಯದ ಕೆಲಸಗಳನ್ನು ಬಿಟ್ಟು ಅನೂಹ್ಯವಾದ
ಆಮಿಷಗಳಿಗೆ ಶರಣಾಗಿ ಯಾರೂ ಊಹಿಸಿಕೊಳ್ಳಲೂ ಸಾಧ್ಯವಾಗದ ಚಿತ್ರ ವಿಚಿತ್ರವಾದ
ಚಟುವಟಿಕೆಗಳಲ್ಲಿ ಮಗ್ನರಾಗತೊಡಗಿದ್ದರು. ಕನಸಿನಂತೆ ಸರಿದುಹೋದ ಅನುಭವದ ನೆನಪಿನಲ್ಲಿ
ದಿನ, ದಿನ ಹೊಸ ಹೊಸದಾದ ಹಣ ಮಾಡುವ ಯೋಜನೆಗಳು ಅವರ ಕಣ್ಣ ಮುಂದೆ
ಕುಣಿಯತೊಡಗಿದ್ದವು.
ಹಿಂದೆ ಯಾವಾಗಲೋ ಬ್ರಿಟಿಷರು ಬಾಣಾವತಿಯ ಹೊಳೆ ದಂಡೆಯ ಎರಡೂ ಪಕ್ಕದಲ್ಲಿ ನೂರಾರು
ಎಕರೆ ಜಾಗದಲ್ಲಿನ ಬೆಲೆ ಬಾಳುವ ಮರಗಳನ್ನು ಕಡಿದು ಸಾಗಿಸಿ ಆ ಜಾಗದಲ್ಲಿ ತೇಗದ
ಗಿಡಗಳನ್ನು ಬೆಳೆಸಿದ್ದರು. ಸೋರಗುಪ್ಪದ ಒಂದಿಬ್ಬರು ಮುದುಕರು ಹೇಳುವದನ್ನು ನಂಬುವದಾದರೆ
ಬ್ರಿಟಿಷರು ಕುದುರೆಯ ಮೇಲೆ ಹೋಗಿ ಅಲ್ಲೆಲ್ಲ ತೇಗದ ಗಿಡಗಳನ್ನು ನೆಟ್ಟಿಸಿದ್ದರಂತೆ. ನಂತರದಲ್ಲಿ
ಅದು ಬೆಳೆದು ಕಟಾವು ಮಾಡಿದರೂ ಬುಡದಲ್ಲಿ ಹಲವು ಚಿಗುರೊಡೆದು ಮತ್ತೆ ಬೆಳೆಯುತ್ತಿದ್ದವು.
ಸೋರಗುಪ್ಪದ ಹಲವರಿಗೆ ಆ ತೇಗದ ಮರಗಳನ್ನು ಕಡಿದು, ನಾಟಾ ಕೊಯ್ಯುವದು ಒಂದು
ಕಸುಬಾಗಿತ್ತು. ಕಡಿದ ಮರಗಳನ್ನು ಹೊಳೆ ನೀರಿಗೆ ಕೆಡವಿ, ಎರಡೆರಡು ಮರಗಳನ್ನು ಒಟ್ಟಿಗೇ ಕಟ್ಟಿ
ತೇಲಿ ಬಿಟ್ಟರೆ ಅವು ಸಲೀಸಾಗಿ ಕೆಳಗಡೆ ಬರುತ್ತಿದ್ದವು. ಮೊದಲೇ ಅವನ್ನು ಬಹುಪಾಲು ಕಡಿದು
ಸಾಗಿಸಲಾಗಿತ್ತು. ಉಳಿದವನ್ನು ಕಡಿದು ಸಾಗಿಸುವ ಅಂದರೂ ಅಡ್ಡಲಾಗಿ ಆಣೆಕಟ್ಟು
ನಿಂತುಕೊಂಡಿತ್ತು.
ಒಟ್ಟಿನಲ್ಲಿ ರಾತ್ರಿಯೆಲ್ಲ ಯಕ್ಷಗಾನ ನೋಡಿದ ಮರುದಿನದ ಹಗಲು ಬೇಸರ ಹುಟ್ಟಿಸುವಂತೆ
ಸೋರಗುಪ್ಪದ ಜನಜೀವನದಲ್ಲಿ ಅವ್ಯಕ್ತವಾದ ಬೇಗುದಿ ವ್ಯಕ್ತವಾಗುತ್ತಿತ್ತು.
ಒಂದು ದಿನ ಯಾರೋ ಬಂದು ಹೊಟ್ಟೆ ಬಾಗದಲ್ಲಿ ಬಿಳಿಯದಾಗಿರುವ ಆಮೆಯನ್ನು ಜೀವಂತವಾಗಿ
ಹಿಡಿದು ಕೊಟ್ಟರೆ ಒಂದೊಂದಕ್ಕೆ ಹತ್ತು ಸಾವಿರ ರೂಪಾಯಿ ಕೊಡುತ್ತಾರಂತೆ ಎಂದಿದ್ದೇ ಅಂಗಡಿ
ಕಟ್ಟೆ ಮೇಲೆ ಕುಳಿತು ಹರಟುತ್ತಿದ್ದವರಲ್ಲಿ ಜೀವ ಸಂಚಾರವಾದಂತಾಗಿ ಊರಲ್ಲಿ, ಸುತ್ತಮುತ್ತಲಲ್ಲಿ
ಇದ್ದ ಬದ್ದ ಹೊಂಡ, ಕೆರೆ, ಹೊಳೆಗಳನ್ನೆಲ್ಲ ಸೋಸಿ ಬಿಳಿ ಆಮೆ ಹಿಡಿಯಲು ಹರಸಾಹಸ ಪಟ್ಟರು.
ಇವರ ಶೋಧನಾ ಸಾಹಸಗಳು ಮತ್ತಷ್ಟು ಮಂದಿಯ ಕಿವಿಗೆ ಬಿದ್ದು ಊರಲ್ಲೆಲ್ಲ ವಾರಗಟ್ಟಲೆ ಕಾಲ
ಕೋಲಾಹಲವೇ ಆಯಿತು.
ಮತ್ತೊಂದು ದಿನ ಕಾಡಿನಲ್ಲಿ ಇರುವ ಅಪರೂಪವೆಂದರೆ ಅಪರೂಪವೇ ಆದ ಬೃಹತ್ ಗಾತ್ರದ
ಚಿಪ್ಪಕ್ಕಿಯನ್ನು ಜೀವಂತವಾಗಿ ಹಿಡಿದು ತಂದರೆ ಐವತ್ತು ಸಾವಿರ ಕೊಡುತ್ತಾರಂತೆ ಎಂದಿದ್ದೇ ಅಲ್ಲಿನ
ಜನ ಸುತ್ತಮುತ್ತಲಿನ ಕಾಡನ್ನೆಲ್ಲ ಸೋಸಿದ್ದರು. ಕೆಲವರಿಗಂತೂ ಕಾಡಿನಲ್ಲಿ ತಲೆ ಮೇಲೆ
ಮಾಡಿಕೊಂಡು ಮರಗಳನ್ನ ನೋಡಿ, ನೋಡಿ ವಾರಗಟ್ಟಲೆ ತಲೆ ಕೆಳಕ್ಕೆ ಮಾಡಲು
ಸಾಧ್ಯವಾಗದಂತಾಗಿತ್ತು. ಈ ಸುದ್ದಿಯನ್ನು ಯಾರು ಹೇಳಿದರು? ಚಿಪ್ಪಕ್ಕಿಯನ್ನು ಖರೀದಿ
ಮಾಡುವವರು ಯಾರು? ಎಂದು ಯಾರೊಬ್ಬರೂ ಕೇಳಲೇ ಇಲ್ಲ. ಅಲ್ಲಿನ ಬಹುಪಾಲು ಮಂದಿ
ಅದನ್ನೆಲ್ಲ ಗೊತ್ತು ಮಾಡಿಕೊಳ್ಳುವ ಕನಿಷ್ಟ ಪ್ರಜ್ಞೆಯೂ ಇಲ್ಲದೇ ಕೇಳಿದ್ದನ್ನೆಲ್ಲ ತಕ್ಷಣಕ್ಕೆ
ಕಾರ್ಯರೂಪಕ್ಕೆ ತರುವ ಸಮೂಹ ಸನ್ನಿಗೆ ಒಳಗಾಗಿಬಿಟ್ಟಿದ್ದರು. ಒಟ್ಟಿನಲ್ಲಿ ತತ್‍ಕ್ಷಣದಲ್ಲಿ
ಕಣ್ಣೆದುರು ಹಣ ಸುರಿದಾಡಬೇಕು ಎನ್ನುವ ಆಕಾಂಕ್ಷೆ ಅಲ್ಲಿನ ಹಲವರಲ್ಲಿ ಗುಪ್ತಗಾಮಿನಿಯಂತೆ
ಹರಿದಾಡುತ್ತಿತ್ತು. ಯಾರೋ, ಎಲ್ಲೋ ಕುಳಿತು ಇಲ್ಲಿನ ಜನಜೀವನವನ್ನು ನಿಯಂತ್ರಿಸುವ, ಜನರ
ಮನಸ್ಸಿನಲ್ಲಿ ಪುಕ್ಕಟೆ ದುಡ್ಡಿನ ಬಗ್ಗೆ ದಾಹ ಹುಟ್ಟಿಸುವ ಕೆಲಸವನ್ನು ವ್ಯವಸ್ಥಿತವಾಗಿ
ಮಾಡುತ್ತಿದ್ದುದರ ಬಗ್ಗೆ ಯಾರಿಗೂ ಅನುಮಾನ ಬರಲೇ ಇಲ್ಲ.
ಅದಕ್ಕೊಂದು ನಿದರ್ಶನ ಸೋರಗುಪ್ಪದಲ್ಲಿ ವಿದ್ಯುತ್‍ನಂತೆ ಸರಿದಾಡಿದ ಸುದ್ದಿ ಅಕ್ಕಿಯಲ್ಲಿ
ಹುಗಿದಿಟ್ಟರೆ ಎದ್ದು ಬರುವ ಸಾಲಿಗ್ರಾಮ ಗಾಳಿ ನಾಗರಾಜನ ಬಳಿ ಇದೆ ಎನ್ನುವ ಸಂಗತಿ.
ಪ್ರತಿ ದಿನ ನಡುರಾತ್ರಿಯಲ್ಲಿ ಕಾರೊಂದು ಬಂದು ಬಾಣಾವತಿ ನದಿ ಪಕ್ಕದ ದೇವಸ್ಥಾನದ ಸಮೀಪ
ನಿಲ್ಲುತ್ತದೆ ಎನ್ನುವ ಪಿಸು ಮಾತಿನ ಬೆನ್ನು ಹಿಡಿದು ಹೋದವರಿಗೆ ಆಶ್ಚರ್ಯಕರವಾದ
ಸುದ್ದಿಯೊಂದು ಕಿವಿಗೆ ಬಿದ್ದಿತ್ತು. ಮನೆಬಿಟ್ಟು ಎಲ್ಲಿಗೋ ಹೋಗಿ ಎರಡು, ಮೂರು ವರ್ಷದ
ಹಿಂದೆ ವಾಪಸ್ಸಾಗಿದ್ದ ಗಾಳಿ ನಾಗರಾಜನ ಬಳಿ ಒಂದು ಸಾಲಿಗ್ರಾಮವಿದೆಯೆಂತಲೂ, ಅದನ್ನು
ಅಕ್ಕಿಯಲ್ಲಿ ಹುಗಿದಿಟ್ಟರೆ ಸ್ವಲ್ಪ ಹೊತ್ತಿನ ನಂತರ ತಾನಾಗೇ ಮೇಲೆದ್ದು ಬರುತ್ತದೆಯೆಂತಲೂ, ಅಂಥ
ಅಪರೂಪದ ಸಾಲಿಗ್ರಾಮ ಹತ್ತಾರು ಲಕ್ಷ ಬೆಲೆ ಬಾಳುತ್ತದೆಯೆಂತಲೂ, ಅಕ್ಕಿಯಿಂದ ಮೇಲೆದ್ದು
ಬರುವದನ್ನು ನೋಡಿ, ಖರೀದಿ ಮಾಡಲು ಪೈಪೋಟಿಯಾಗಿದ್ದು, ದಿನಾ ಎಲ್ಲೆಲ್ಲಿಂದಲೋ,
ಯಾರ್ಯಾರೋ ಬರ್ತಿದಾರೆಂತಲೂ ಸೋರಗುಪ್ಪದಲ್ಲಿ ಒಳಗೊಳಗೇ ಸುದ್ದಿ ಹರಿದಾಡತೊಡಗಿತ್ತು.
ತನ್ನ ಹೆಸರಿನ ಹಿಂದೆ ಗಾಳಿ ಎನ್ನುವ ವಿಶೇಷತೆಯನ್ನು ಅಂಟಿಸಿಕೊಂಡಿದ್ದ ನಾಗರಾಜನ ಬಗ್ಗೆ, ಅವನ
ಬಳಿ ಇದೆ ಎನ್ನಲಾಗುವ ಸಾಲಿಗ್ರಾಮದ ಬಗ್ಗೆ ಬಹಳಷ್ಟು ಮಂದಿ ಲೇವಡಿ ಮಾಡಿದರಾದರೂ,
ಅವನನ್ನು ಹುಡುಕಿಕೊಂಡು ಬರುವ ನಿಗೂಡ ಮನುಷ್ಯರು ಅವರ ಮನಸ್ಸಿನಲ್ಲಿ ಪ್ರಶ್ನಾರ್ಥಕ ಚಿಹ್ನೆ
ಮೂಡಿಸಿದ್ದರು. ತನ್ನ ವರ್ತನೆ, ಚಟುವಟಿಕೆಗಳಿಂದಾಗಿಯೇ ಗಾಳಿ ಎಂದು ಕರೆಸಿಕೊಳ್ಳುತ್ತಿದ್ದ
ನಾಗರಾಜನ ಬಳಿ ನಿಜಕ್ಕೂ ಅಂಥ ವಿಶೇಷ ವಸ್ತುವಿದೆಯೇ? ಅದು ನಾಗರಾಜನಿಗೆ ದೊರಕಿದ್ದಾದರೂ
ಹೇಗೆ? ಎನ್ನುವದರ ಬಗ್ಗೆ ಕೂತಲ್ಲಿ, ನಿಂತಲ್ಲಿ ಸಾಕಷ್ಟು ಮಂದಿ ತಲೆಕೆಡಿಸಿಕೊಂಡರು.
ಮಧ್ಯಾಹ್ನದ ಹೊತ್ತಿಗೆ ಬರುವ ಮಟ್ಕಾದ ಓಪನ್ ನಂಬರ್ ಇದಾಗಿರಬಹುದು ಎಂದು ಲೆಕ್ಕಾಚಾರ
ಮಾಡಿಕೊಂಡು ಅದರ ಮೇಲೆ ಹಣ ಹಾಕಿ, ಆ ನಂತರ ಬಂದ ನಂಬರ್ ತಪ್ಪಿದ್ದು ಹೇಗೆ? ಎಂದು
ಮತ್ತೆ ತಲೆಬಿಸಿ ಮಾಡಿಕೊಳ್ಳುವದರ ಜೊತೆಗೆ ರಾತ್ರಿ ಬರುವ ಕ್ಲೋಸ್ ನಂಬರ್ ಇದಾಗಬಹುದು
ಎಂದು ಲೆಕ್ಕಾಚಾರ ಹಾಕುತ್ತ ದಿನವೆಲ್ಲ ಅಂಕೆ,ಸಂಖ್ಯೆಗಳ ನಡುವೆ ಗುದ್ದಾಡುತ್ತ, ಚಾರ್ಟು,
ಪೇಪರಲ್ಲಿ ಬರುವ ಚಿತ್ರ, ನಿನ್ನೆ ರಾತ್ರಿ ಬಿದ್ದ ಕನಸು.. ಎಲ್ಲವಕ್ಕೂ ಅಂಕೆಗಳನ್ನು
ಆರೋಪಿಸಿಕೊಳ್ಳುತ್ತ, ಒಟ್ಟಿನಲ್ಲಿ ಈಡೀ ದಿನವನ್ನು ಕಳೆದು,ಕೂಡುವದರಲ್ಲೇ ವ್ಯಯಿಸುವ
ಅವರೆಲ್ಲರಿಗೆ ಯಾರಿಗೂ ಲೆಕ್ಕಕ್ಕಿಲ್ಲದಂತಿದ್ದ ನಾಗರಾಜ ಇದ್ದಕ್ಕಿದ್ದಂತೇ ವಿಸ್ಮಯಕಾರಿಯಾಗಿ
ಕಾಣತೊಡಗಿದ್ದ. ಅವನಲ್ಲಿರುವ ವಿಶೇಷ ವಸ್ತುವಿನ ಬಗ್ಗೆ ನಾಗರಾಜನನ್ನೇ ಕೇಳೋಣ ಎಂದು
ಕೆಲವರು ಉತ್ಸಾಹ ತೋರಿಸಿದರೂ ಯಾಕೋ ಸಾಧ್ಯವಾಗುತ್ತಿರಲಿಲ್ಲ. ದಿನ,ದಿನ ಹೊಸದಾಗಿ
ಕೇಳಿಬರುವ ಗಾಳಿಸುದ್ದಿಗೆ ಕಿವಿ ತೆರೆದಿಟ್ಟುಕೊಂಡು ಒಂದು ತೆರನಾದ ಸುಖ ಅನುಭವಿಸುತ್ತಿದ್ದರು.
ವಾಸ್ತವಿಕವಾಗಿ ಅವರಿಗೆ ವರ್ತಮಾನದ ತಲ್ಲಣಗಳನ್ನು, ದಿನನಿತ್ಯದ ಮಾನಸಿಕ ಕ್ಷೋಬೆಯನ್ನು
ತಪ್ಪಿಸಿಕೊಳ್ಳಲು ಏನಾದರೂ ನೆಪ ಬೇಕಿತ್ತು ಅಷ್ಟೇ.
ಇದ್ದಕ್ಕಿದ್ದಂತೇ ಆ ಸಾಲಿಗ್ರಾಮವನ್ನು ಮಾರಾಟ ಮಾಡಿಸಿಕೊಟ್ಟರೆ ಗಾಳಿ ನಾಗರಾಜ ಲಕ್ಷಗಟ್ಟಲೆ
ಕಮೀಷನ್ ಕೊಡುತ್ತಾನಂತೆ ಎನ್ನುವ ಸುದ್ದಿ ಹಬ್ಬಿದ್ದೇ ಇದ್ದಬದ್ದವರೆಲ್ಲ ಸಾಲಿಗ್ರಾಮದ ಕಮೀಷನ್
ಏಜೆಂಟ್‍ರಾಗಿ ಪರಿವರ್ತಿತರಾಗಿದ್ದರು. ಯಾರೇ ಕಾಣಲಿ, ಪರಸ್ಪರ ಗುಸಗುಸ, ಪಿಸಪಿಸ
ಮಾತನಾಡತೊಡಗಿದ್ದರು. ಎಲ್ಲೆಲ್ಲಿಗೋ, ತಮಗೆ ಗೊತ್ತಿದ್ದವರಿಗೆಲ್ಲ ಫೋನ್ ಹಚ್ಚಿ ಗುಟ್ಟು
ಮಾಡತೊಡಗಿದ್ದರು. ಅಂಥ ಚಿತ್ರ, ವಿಚಿತ್ರ ವರ್ತನೆಗಳು ಎಷ್ಟು ವ್ಯಾಪಕವಾಗಿ ಆವರಿಸಿಕೊಂಡಿತೆಂದರೆ
ಹಗಲು, ರಾತ್ರಿ, ಎಚ್ಚರ, ನಿದ್ದೆ..ಎಲ್ಲ ಸಂದರ್ಭದಲ್ಲೂ ಅವರಿಗೆಲ್ಲ ಸಾಲಿಗ್ರಾಮದ್ದೇ
ಧ್ಯಾನವಾಗಿಬಿಟ್ಟಿತು. ಯಾವುದ್ಯಾವುದೋ ಕಾರುಗಳು, ಬೈಕುಗಳು, ಈವರೆಗೆ ನೋಡದ ಮುಖಗಳು,
ಮನುಷ್ಯರು ಅಪರಾತ್ರಿಯ ಕತ್ತಲಲ್ಲಿ ಸೋರಗುಪ್ಪದಲ್ಲಿ ಸರಿದಾಡತೊಡಗಿದ್ದವು.
ಇಂಥದ್ದೊಂದು ಭ್ರಮಾದೀನತೆಯ ತುರಿಯಾವಸ್ಥೆಯಲ್ಲಿದ್ದಾಗ ನಾಗರಾಜನ ಬಳಿ ಇರುವ ಸಾಲಿಗ್ರಾಮ
ಅವನೊಬ್ಬನೇ ಇದ್ದಾಗ ಮಾತ್ರ ಅಕ್ಕಿಯಿಂದ ಮೇಲೆ ಬರುತ್ತದೆಯೆಂತಲೂ, ಬೇರೆ ಯಾರಿದ್ದರೂ
ಬರುವದಿಲ್ಲವೆಂತಲೂ ಏಕಾಏಕಿ ಒಂದು ದಿನ ಮತ್ತೊಂದು ಸುದ್ದಿ ತೇಲಿಬಂತು. ಅದನ್ನು ಕೇಳಿದ್ದೇ
ಯಾವುದೋ ಒಂದು ನಿಗೂಡತೆಯ ಬೆನ್ನು ಹತ್ತಿದ್ದವರೆಲ್ಲ ಮಂಕಾಗಿಬಿಟ್ಟರು. ನಾಗರಾಜನನ್ನು
ಹಿಡಿದು ಹೊಡೆಯುವಾ ಎನ್ನುವ ಸಿಟ್ಟು ಅವರಿಗೆಲ್ಲ ಬಂದಿದ್ದರೂ ಅವನೇನೂ ಇವರ ಬಳಿ
ಅದನ್ನೆಲ್ಲ ಹೇಳಿರಲಿಲ್ಲವಲ್ಲ? ಏನೆಂದು ಕೇಳುವದು? ಯಾತಕ್ಕೆ ಜಗಳ ಮಾಡುವದು? ಲಕ್ಷಗಟ್ಟಲೆ
ಕಮೀಷನ್ ಆಸೆಗೆ ಗಿರಿಗಿಟ್ಟಿ ತಿರುಗಿದವರೆಲ್ಲ ನಿರಾಶೆ, ವ್ಯಥೆಪಡುತ್ತ ಇಂಥದ್ದೇ ಮತ್ತೊಂದು
ಗಾಳಿಸುದ್ದಿಗೆ ಕಾಯತೊಡಗಿದರು. ನಿಧಾನಕ್ಕೆ ಅಪರಾತ್ರಿಯಲ್ಲಿ ಬರುತ್ತಿದ್ದ ವಾಹನಗಳು, ಮನುಷ್ಯರು
ಕಾಣದಾದರು.
ಇಂಥ ಹತ್ತಾರು ವಿಚಿತ್ರ ಚಟುವಟಿಕೆಗಳ, ಅಸ್ಥಿರವಾದ ಮನಸ್ಥಿತಿಯ, ಗೊತ್ತುಗುರಿಯಿಲ್ಲದೇ
ಸಾಗುತ್ತಿರುವ ಅವ್ಯವಸ್ಥಿತ ಕೇಂದ್ರವಾಗಿ ಸೋರಗುಪ್ಪ ಅಗೋಚರವಾಗಿ ಬದಲಾಗುತ್ತಿತ್ತು.
ಇಂಥ ಸನ್ನಿವೇಶದಲ್ಲೇ ಈ ಪ್ರದೇಶಕ್ಕೆ ಕಾಲಿಟ್ಟ ಗೋವಿಂದ ಹೆಗಡೆಗೆ ಹಿಂದೆ ತಾನಿದ್ದ ಜನನಿಬಿಡ
ಪ್ರದೇಶದಲ್ಲಿ ಹೆಜ್ಜೆ ಹೆಜ್ಜೆಗೂ ಜನರನ್ನು ಕಾಣುತ್ತಿದ್ದು, ಇಲ್ಲಿ ಜನರೇ ಅಪರೂಪವಾಗತೊಡಗಿದಾಗ
ತನ್ನ ಅಸ್ತಿತ್ವವೇ ಕಳೆದುಹೋದಂತೆ ಅನಿಸತೊಡಗಿತು. ಅವರಿಗೂ ಇಂಥ ಗೊಂಡಾರಣ್ಯ ಹೊಸತೇ.
ಜನರ ನಡುವೆಯೇ ಬೆಳೆದುಬಂದ ಅವರಿಗೆ ಕಾಡಿನ ಸೂಕ್ಷ್ಮಗಳು ಅರ್ಥವೇ ಆಗುತ್ತಿರಲಿಲ್ಲ. ಮಾತು
ಕತೆಗಳ ಬದಲಾಗಿ ಕಾಡಿನ ಸದ್ದು, ಅಗೋಚರ ಪ್ರಾಣಿಗಳ ಕೂಗು, ಪಕ್ಷಿಗಳ ಕಲರವ,
ನರಮನುಷ್ಯರ ಸುಳಿವಿಲ್ಲದ ಕಾಡಿನ ಜೊತೆ ಕಾಲ ಕಳೆಯಬೇಕಾದ ಅನಿವಾರ್ಯ ಒತ್ತಡಕ್ಕೆ ಅವರು
ಸಿಲುಕಿದ್ದರು.
ಮನೆಗೆ ಬೇಕಾದ ಕಿರಾಣಿ, ಅದೂ, ಇದು ಎಂದು ತರಲು ಐದಾರು ಮೈಲು ದೂರದ
ಸೋರಗುಪ್ಪಕ್ಕೆ ಹೋಗಿ ಬರಬೇಕಾದ ಕಾರಣ ಗೋವಿಂದ ಹೆಗಡೆಯವರಿಗೆ ಅಲ್ಲಿನ ಜನರ
ಗುರುತಾಗತೊಡಗಿತು. ಜಮೀನು ಕೊಟ್ಟ ಸುಬ್ರಾಯ ಪೈದಂತೂ ಮೊದಲೇ ಪರಿಚಯವಿತ್ತಲ್ಲ.
ಮೊದಲಿನಿಂದಲೂ ಸ್ವಲ್ಪ ರಾಜಕಾರಣದ ಮನಸ್ಥಿತಿಯ ವ್ಯಕ್ತಿಯಾದ ಗೋವಿಂದ ಹೆಗಡೆ ನಿಧಾನಕ್ಕೆ
ಬೈನೆಕಾಡಿನ ಆಗುಹೋಗುಗಳಲ್ಲಿ ಆಸಕ್ತಿ ತೋರಿಸತೊಡಗಿದರು. ಮೈಲಿಗೊಂದರಂತೆ ಇರುವ
ಅಲ್ಲಿನ ಎಲ್ಲ ಮನೆಗಳಿಗೂ ಹೋಗಿ ಪರಿಚಯ ಮಾಡಿಕೊಂಡು ಕಷ್ಟ ಸುಖ ಮಾತಾಡಿದರು. ಈ
ಊರು ಹೀಗಿರಬಾರದಿತ್ತು, ಇನ್ನು ಏನೇನೋ ಆಗಬೇಕಿತ್ತು ಎಂದು ಅಲ್ಲಿನವರ ಏಕ ಮುಖವಾಗಿದ್ದ
ಯೋಚನಾಕ್ರಮವನ್ನು ಮತ್ತೊಂದು ದಿಕ್ಕಿಗೆ ತಿರುಗಿಸಲು ಪ್ರಯತ್ನಿಸತೊಡಗಿದರು.
ಬೈನೆಕಾಡೆಂಬ ನಿಶಬ್ದ ತಾಂಡವಾಡುತ್ತಿದ್ದ ಊರಲ್ಲಿ ಆಗಿನಿಂದಲೇ ಸುಪ್ತವಾಗಿ ಕದನ ಶುರುವಾಗಿತ್ತು.
ಗೋವಿಂದ ಹೆಗಡೆಯವರ ಜಮೀನಿನ ಸಮೀಪವೇ ತುಂಬಾ ಹಿಂದಿನಿಂದ ತಂಗವೇಲು
ಎನ್ನುವಾತ ಜಮೀನು ಮಾಡಿಕೊಂಡಿದ್ದ. ಅಲ್ಲಿ ಒಂದು ಮನೆಯಿತ್ತೇ ಹೊರತು ಅವನಾಗಲೀ,
ಅವನ ಕುಟುಂಬವಾಗಲೀ ಇರುತ್ತಿರಲಿಲ್ಲ. ಅವನು ಒಬ್ಬಂಟಿಯೋ, ಕುಟುಂಬಸ್ಥನೋ ಎನ್ನುವದೂ
ಅಲ್ಲಿನ ಯಾರಿಗೂ ಗೊತ್ತಿರಲಿಲ್ಲ. ಹೊರಗಡೆ ಏನೇನೋ ವ್ಯಾಪಾರ ಮಾಡುತ್ತಾನೆ ಎಂದಷ್ಟೇ
ಗೊತ್ತಿತ್ತೇ ಹೊರತು ಅದು ಯಾವ ದಂಧೆ ಎನ್ನುವದೂ ತಿಳಿದಿರಲಿಲ್ಲ. ವಾರಕ್ಕೆ ಎರಡು, ಮೂರು
ಬಾರಿ ಬಂದು ಹೋಗುತ್ತಿದ್ದ ತಂಗವೇಲು ಇಲ್ಲಿ ಆಳುಗಳನ್ನಿಟ್ಟು ಕೆಲಸ ಮಾಡಿಸುತ್ತಿದ್ದ. ತಂಗವೇಲು
ಬೈನೆಕಾಡಿನ ಉಳಿದವರೊಂದಿಗೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಕೆಲವರಂತೂ ಅವನ ಬಳಿ ಮಾತು
ಕೂಡ ಆಡಿರಲಿಲ್ಲ. ಗಂಟು ಗಂಟಾದ ಕಾಠಿಣ್ಯ ಮುಖದ, ನೋಡಿದವರಲ್ಲಿ ಭಯ ಹುಟ್ಟಿಸುವವನಂತೆ
ಇದ್ದ ತಂಗವೇಲು ತನ್ನ ವ್ಯಕ್ತಿತ್ವದಿಂದಲೇ ಅಲ್ಲಿನವರನ್ನು ಹೆದರಿಸಿಕೊಂಡಿದ್ದ. ಅವನ ಬಗ್ಗೆ
ಗಟ್ಟಿಯಾಗಿ ಮಾತನಾಡಲೂ ಬೈನೆಕಾಡಿನ ಜನ ಅಂಜುತ್ತಿದ್ದರು.
ತಂಗವೇಲು ತನ್ನ ಜಮೀನಿನ ಮನೆಗೆ ಟೆಲಿಪೋನ್ ಲೈನ್ ಎಳೆಸಿಕೊಂಡು ಫೋನ್
ಹಾಕಿಸಿಕೊಂಡಿದ್ದ. ಬಹಳಷ್ಟು ಸಮಯ ಅದು ಸ್ಥಗಿತವಾಗಿರುತ್ತಿದ್ದರೂ ಕೆಲವೊಮ್ಮೆ ಜೀವ
ತಳೆದಿರುತ್ತಿತ್ತು. ಗೋವಿಂದ ಹೆಗಡೆ ಎರಡು, ಮೂರು ಬಾರಿ ಎಲ್ಲಿಗೋ ಅರ್ಜೆಂಟಾಗಿ ಪೋನ್
ಮಾಡಲು ಅವನ ಬಳಿ ಹೋಗಿದ್ದ. ಮುಖ ಗಂಟಿಕ್ಕಿಕೊಂಡೇ ಫೋನ್ ಮಾಡಲು ಸಮ್ಮತಿಸಿದ್ದ
ತಂಗವೇಲು ಒಮ್ಮೆ ಗೋವಿಂದ ಹೆಗಡೆಯವರಿಗೆ ಜಾಡಿಸಿಬಿಟ್ಟಿದ್ದ. „ಬೇಕಾಗ್ತದೆ ಅಂದ್ರೇ ಫೋನ್
ಹಾಕಿಸ್ಕೊಬೇಕು. ಬೇರೆಯವರಿಗ್ಯಾಕೇ ತೊಂದ್ರೆ ಕೊಡ್ತೀಯಾ‟ ಎಂದು ಅರೆಬರೆ ಕನ್ನಡದಲ್ಲಿ
ಏಕವಚನದಲ್ಲೇ ಗೋವಿಂದ ಹೆಗಡೆಯವರಿಗೆ ದಬಾಯಿಸಿದ.
ಅಲ್ಲಿಂದ ಗುರುಗುಡುತ್ತಲೇ ಬಂದ ಗೋವಿಂದ ಹೆಗಡೆ ಮಾರನೇ ದಿನದಿಂದಲೇ ಟೆಲಿಪೋನ್
ಆಫೀಸಿಗೆ ಎಡತಾಕತೊಡಗಿದ್ದರು.
ಬಹುಪಾಲು ದಿನಗಳು ಕರೆಂಟ್ ಇಲ್ಲದೆಯೋ, ಮತ್ಯಾತಕ್ಕೋ ಡೆಡ್ ಆಗೇ ಇರುತ್ತಿದ್ದ ಆ
ಎಕ್ಸಚೆಂಜ್‍ನಲ್ಲಿ ಓರ್ವ ಲೈನ್‍ಮನ್, ಅವನಿಗೊಬ್ಬ ಹೆಲ್ಪರ್ ಬಿಟ್ಟರೆ ಮತ್ಯಾರೂ ಇರುತ್ತಿರಲಿಲ್ಲ.
ಮಹಾ ಕೆಲಸಗಳ್ಳನಾದ ಲೈನ್‍ಮನ್ ಕೆಲವೊಮ್ಮೆ ಎಕ್ಸಚೇಂಜ್‍ನ ಕರೆಂಟ್ ಸಂಪರ್ಕವನ್ನೇ ತೆಗೆದು
ಬ್ಯಾಟರಿ ಡೌನ್ ಆಗಿದೆ ಎಂದು ಬಾಗಿಲು ಹಾಕಿಕೊಂಡು ಹೋಗಿರುತ್ತಿದ್ದ. ಬಂಗಾರುಪೇಟೆಯ
ಆಫೀಸಿನಲ್ಲಿ ಗಂಟುಬಿದ್ದು, ಲೈನ್ ಮಂಜೂರಿ ಮಾಡಿಸಿಕೊಳ್ಳಲೂ ಗೋವಿಂದ ಹೆಗಡೆಯವರಿಗೆ ಆದ
ಕಷ್ಟಕ್ಕಿಂತ ಇಲ್ಲಿ ಲೈನ್‍ಮನ್‍ನಿಂದ ಮೊದಲೇ ಇದ್ದ ಕಂಬಕ್ಕೆ ಲೈನ್ ಎಳೆಸಿಕೊಳ್ಳುವಷ್ಟರಲ್ಲಿ
ಅವರಿಗೆ ಮೂರುಲೋಕ ಕಂಡಂತಾಗಿತ್ತು. ಅವನ ಕೈ, ಕಾಲಿಗೆ ಬಿದ್ದು, ಅವನಿಗೆ ಚಾ, ಊಟ
ಕೊಟ್ಟು ಲೈನ್ ಎಳೆಸಿಕೊಳ್ಳುತ್ತಿದ್ದಂತೇ ತಂಗವೇಲು ತಕರಾರು ಶುರು ಮಾಡಿದ್ದ.
„ನಾನು ಎಳೆಸಿಕೊಂಡ ಲೈನ್‍ನಲ್ಲಿ ಅವನ ಲೈನ್ ಯಾಕೆ ಎಳೆದ್ರೀ‟ ಎಂದು ಎಕ್ಸಚೇಂಜ್‍ನವರನ್ನು
ತರಾಟೆಗೆ ತೆಗೆದುಕೊಂಡಿದ್ದ. ಅವನ ತಗಾದೆಗೆ ಅವರು ಕ್ಯಾರೇ ಅನ್ನದಿದ್ದರೂ ಗೋವಿಂದ ಹೆಗಡೆ
ಮತ್ತು ತಂಗವೇಲು ನಡುವೆ ಮನಸ್ತಾಪ ಹುರಿಗಟ್ಟಲು ಅದು ಸಾಕಾಗಿತ್ತು.
ಕಾಡಿನಲ್ಲಿ ಸುಮಾರು ಆರು ಮೈಲಿ ಹಾದು ಬರುವ ಫೋನ್ ಲೈನ್ ಮೇಲೆ ಮರದ
ಕೊಂಬೆಯೋ, ಕಾಡುಬಳ್ಳಿಯೋ ಬೀಳುವದು ಸಾಮಾನ್ಯವಾಗಿತ್ತು. ಮಳೆಗಾಲದಲ್ಲಿ ಮರ
ಬೀಳುವದೂ ಇತ್ತು. ಬಿಗಿಯಾಗಿ ತಂತಿ ಎಳೆಯದೇ ಜೋತಾಡುತ್ತಿದ್ದ ಕಾರಣ ಗಾಳಿಗೆ ತಂತಿಗಳು
ಒಂದಕ್ಕೊಂದು ಸುತ್ತಿಕೊಳ್ಳುತ್ತಿದ್ದವು. ಅಲ್ಲಿದ್ದ ಲೈನ್‍ಮನ್ ಅದನ್ನು ಸರಿಪಡಿಸುವದು ತನ್ನ
ಜವಾಬ್ದಾರಿಯಲ್ಲ ಎಂದೇ ತೀರ್ಮಾನಿಸಿದ್ದ. ಬೇಕಿದ್ದರೇ ನೀವೇ ಸರಿಮಾಡಿಕೊಳ್ಳಿ ಎಂದು ಅವನ ಬಳಿ
ದುರಸ್ಥಿ ಮಾಡು ಎಂದವರ ಬಳಿ ಘಂಟಾಘೋಷವಾಗಿ ಹೇಳುತ್ತಿದ್ದ. ಕೆಲವೊಮ್ಮೆ ಟೆಲಿಫೋನ್
ತಂತಿಗಳು ಒಂದಕ್ಕೊಂದು ಜಾಯಿಂಟ್ ಆಗುತ್ತಿದ್ದ ಕಾರಣದಿಂದ ತಂಗವೇಲುವಿಗೆ ಬರುವ ಕರೆಗಳು
ಗೋವಿಂದ ಹೆಗಡೆ ಮನೆಗೂ, ಗೋವಿಂದ ಹೆಗಡೆಗೆ ಬರುವ ಅಪರೂಪದ ಕರೆಗಳು
ತಂಗವೇಲುವಿಗೂ ಹೋಗುತ್ತಿದ್ದವು. ಅವನ ಮನೆ ಫೋನ್‍ಗೆ ಕರೆ ಬಂದರೆ ಇವರ ಫೋನ್
ಸದ್ದಾಗುತ್ತಿತ್ತು. ಕೆಲವೊಮ್ಮೆ ಫೋನ್ ಎತ್ತಿದರೆ ತಂಗವೇಲು ಮಾತಾಡುವದು ಗೋವಿಂದ
ಹೆಗಡೆಗೂ, ಇವರು ಮಾತಾಡುವದು ಅವನಿಗೂ ಕೇಳಿಸುತ್ತಿತ್ತು.
ಆಗೀಗ ತಂಗವೇಲುವಿಗೆ ಬರುತ್ತಿದ್ದ ಕರೆಗಳು ಗೋವಿಂದ ಹೆಗಡೆಯವರ ಮನೆಗೆ
ಬಂದಾಗ ಅದರಲ್ಲಿನ ಧ್ವನಿಗಳು ಮೊದಮೊದಲು ಸ್ವಾಭಾವಿಕವಾಗಿ ಕಂಡಿತ್ತು. ನಿಧಾನಕ್ಕೆ
ಅದರಲ್ಲೇನೋ ರಹಸ್ಯವಿದೆ ಎಂದು ಗೋವಿಂದ ಹೆಗಡೆಯವರಿಗೆ ಅನಿಸತೊಡಗಿದಾಗ ಅದನ್ನು
ಗಮನಿಸತೊಡಗಿದರು. ಕನ್ನಡವಲ್ಲದೇ ತಮಿಳು, ಮಲೆಯಾಳದಲ್ಲೂ ಮಾತಾಡಿಕೊಳ್ಳುವದನ್ನು
ಕೇಳುವಾಗ ಸಹಜವಾದ ಮಾತುಕತೆಗಳು ಅವಲ್ಲ ಎನ್ನಿಸತೊಡಗಿತು. ತಂಗವೇಲು ಬೈನೆಕಾಡಿನ
ಜಮೀನಿನ ಮನೆಯಲ್ಲಿರುವಾಗ ನಡುರಾತ್ರಿಯಲ್ಲೂ ಮಾತುಕತೆಗಳು ನಡೆಯುತ್ತಿದ್ದವು. ತಂಗವೇಲು
ಏನೋ ಕಳ್ಳ ವ್ಯವಹಾರ ನಡೆಸುತ್ತಿದ್ದಾನೆ ಎಂದು ಗೋವಿಂದ ಹೆಗಡೆಗೆ ಯಾಕೋ ಅನುಮಾನ
ಬರತೊಡಗಿತು. ತಂತಿಗಳ ಮೇಲೆ ಕೊಂಬೆ ಬಿದ್ದಾಗಲೋ, ಗಾಳಿಗೆ ತಂತಿಗಳು ಸುತ್ತಿಕೊಂಡಾಗಲೋ
ಪುರುಸೊತ್ತಿದ್ದರೆ ಬಿದಿರು ಗಳುವೊಂದನ್ನು ಹಿಡಿದುಕೊಂಡು ಸರಿ ಮಾಡಲು ಹೋಗುತ್ತಿದ್ದ
ಗೋವಿಂದ ಹೆಗಡೆ ಅಶರೀರವಾಣಿಯಂತೆ ಫೋನಿನಲ್ಲಿ ಏನಾದರೂ ಗೌಪ್ಯವಾದ ಸುದ್ದಿ
ಕೇಳಿಸಿತೆನ್ನುವ ಕಾತರ, ಕುತೂಹಲದಿಂದ ಕೆಲವೊಮ್ಮೆ ಲೈನ್ ದುರಸ್ಥಿಗೆ ಹೋಗದೇ
ಸುಮ್ಮನಿದ್ದುಬಿಡುತ್ತಿದ್ದರು.
ಸ್ವಲ್ಪ ದಿನಗಳ ನಂತರದಲ್ಲಿ ಇದ್ದಕ್ಕಿದ್ದಂತೇ ಗೋವಿಂದ ಹೆಗಡೆಯವರ ಫೋನ್ ತಂತಿಗಳು ಲೈನ್
ಮಧ್ಯೆ ಎಲ್ಲೆಲ್ಲೋ ತುಂಡಾಗತೊಡಗಿದವು. ಲೈನ್‍ಮನ್ ಹತ್ತಿರ ಹೋಗಿ ಗೋಗರೆದು
ಜೋಡಿಸಿಕೊಳ್ಳುವದೇ ಒಂದು ಮಹಾಕಾರ್ಯವಾಗಹತ್ತಿತು. ಇದು ಪದೇ ಪದೇ ಆಗತೊಡಗಿದಾಗ
ಇದು ಯಾರದ್ದೋ ಕಿತಾಪತಿ ಎನ್ನುವ ತೀರ್ಮಾನಕ್ಕೆ ಗೋವಿಂದ ಹೆಗಡೆ ಬಂದರು.
ಬೈನೆ ಕಾಡಿನಲ್ಲೇ ಜಮೀನು ಮಾಡಿಕೊಂಡಿದ್ದ ಒಬ್ಬಾತ ಗೋವಿಂದ ಹೆಗಡೆಯವರ ಮನೆ ಕೆಲಸಕ್ಕೆ
ಬರುತ್ತಿದ್ದ. ಒಂದು ದಿನ ಕೆಲಸಕ್ಕೆ ಬಂದವ ಗುಟ್ಟಾಗಿ ಅವರ ಬಳಿ „ ಇಲ್ಲೇ ಬಾಣಾವತಿ ಹೊಳೆ
ಪಕ್ಕದ ಕಾನಿನಲ್ಲಿ ಭಂಗಿ ಬೆಳೆಯುತ್ತಿದ್ದಾರೆ. ನಾನು ಮೊನ್ನೆ ಬೇಟೆಗೆ ಹೋದಾಗ ನೋಡ್ದೆ‟ ಎಂದ.
ಇಂಥವಕ್ಕೆಲ್ಲ ತುಂಬಾ ಆಸಕ್ತಿ ವಹಿಸುತ್ತಿದ್ದ ಗೋವಿಂದ ಹೆಗಡೆ ಎರಡು ದಿನ ಬಿಟ್ಟು ಅವನನ್ನು
ಕರೆದುಕೊಂಡು ಆ ಕಾಡನ್ನೆಲ್ಲ ಸುತ್ತಾಡಿ, ದೂರದಿಂದ ಗಾಂಜಾ ಬೆಳೆಯುವ ಜಾಗವನ್ನೂ ನೋಡಿ
ಬಂದರು. ಮನಸ್ಸು ತಡೆಯಲಾಗದೇ ಮರುದಿನ ಖುದ್ದಾಗಿ ಫಾರೆಸ್ಟ ಆಫೀಸಿಗೆ ಹೋಗಿ ಅಲ್ಲಿದ್ದವರ
ಬಳಿ ಈ ಎಲ್ಲಾ ಕತೆ ಹೇಳಿ ಬಂದರು.
ಗೋವಿಂದ ಹೆಗಡೆಯವರಿಗೆ ಭೂಗತ ಲೋಕದ ಯಾವ ಒಳಸುಳಿವುಗಳೂ ಗೊತ್ತಿರಲಿಲ್ಲ. ದಿನ
ನಿತ್ಯದ ಸಾದಾ ಸೀದಾ ಬದುಕಿನಂತೆ ಅಲ್ಲಿನದಲ್ಲ ಎನ್ನುವದೂ ತಿಳಿದಿರಲಿಲ್ಲ. ಯಾವುದೋ
ಘನಕಾರ್ಯ ಮಾಡಿದವರಂತೆ ಫಾರೆಸ್ಟನವರಿಗೆ ಹೇಳಿ ಬಂದದ್ದರಿಂದ ಏನು ಪ್ರಯೋಜನವಾಯ್ತೆಂದು
ಅವರಿಗೆ ಗೊತ್ತಾಗದಿದ್ದರೂ ತಂಗವೇಲು ಇವರ ಮೇಲೆ ಎಗರಿ ಬಿದ್ದಿದ್ದ.
ಒಂದು ದಿನ ಗೋವಿಂದ ಹೆಗಡೆಯವರನ್ನೇ ಹುಡುಕಿಕೊಂಡು ಬಂದ ತಂಗವೇಲು ಬರೋಬ್ಬರಿ
ಆವಾಜ್ ಹಾಕಿದ್ದ.
“ ಏಯ್ ಹೆಗಡೆ, ನೀನು ಇಲ್ಲಿ ಇರಬೇಕು ಅಂದರೆ ತಣ್ಣಗೆ ಕೂತಿರ್ಬೇಕು. ನೀಂಗ್ಯಾಕೆ ಇದೆಲ್ಲ
ಉಪದ್ರ. ನಿನ್ನ ಪಾಡಿಗೆ ನೀನಿದ್ರೆ ಸರಿ, ಇಲ್ಲಾಂದ್ರೆ ಏನಾಗಬೇಕೋ ಅದಾಗತ್ತೆ‟ ಎಂದು
ಯಾವುದನ್ನೂ ಉದ್ದೇಶಿಸದೇ ಕೂಗಾಡಿದ್ದ.
ಅವನು ಯಾತಕ್ಕಾಗಿ ಈ ಪರಿ ಗಲಾಟೆ ಮಾಡ್ತಿದಾನೆ ಎಂದು ಯಾರಿಗೂ ಅರ್ಥವಾಗಿರಲಿಲ್ಲ.
ತಂಗವೇಲುವಿಗೂ ಅದು ಬೇಕಿರಲಿಲ್ಲ. ಆ ಆವಾಜಿನ ಹಿಂದಿನ ರಹಸ್ಯ ಅವನಿಗೂ, ಗೋವಿಂದ
ಹೆಗಡೆಗೂ ಇಬ್ಬರಿಗೇ ಮಾತ್ರ ಗೊತ್ತಿತ್ತು.
ಅದಾದ ನಂತರ ಮೌನಕ್ಕೆ ಶರಣಾದ ಗೋವಿಂದ ಹೆಗಡೆ ಒಳಗೊಳಗೇ ತಂಗವೇಲುವಿನ
ವಹಿವಾಟಿನ ಮಾಹಿತಿಗಳನ್ನೆಲ್ಲ ಒಟ್ಟು ಮಾಡಿದ್ದರು. ಅದರ ಹಿಂದಿನ ಕರಾಳತೆ ಬೆಚ್ಚಿ
ಬೀಳಿಸುವಂತಿತ್ತು. ಅಲ್ಲಿನ ಜನರೆಲ್ಲ ಒಳಗೊಳಗೇ ಅವನನ್ನು ದ್ವೇಷಿಸುತ್ತಿದ್ದರೂ ತಂಗವೇಲುವನ್ನು
ಎದುರಿಸಲು ಯಾರೂ ಸಿದ್ದರಿರಲಿಲ್ಲ. ಅವನ ಕುರಿತಾಗಿ ಬೇನಾಮಿಯಾಗಿ ಒಂದೆರಡು ಬಾರಿ
ಫಾರೆಸ್ಟನವರಿಗೆ ತಿಳಿಸಿದರೂ ಬೇರೆ ಏನೂ ಪ್ರಯೋಜನವಾಗಿರಲಿಲ್ಲ. ತಂಗವೇಲು ಆಗೆಲ್ಲ ಒಂದಷ್ಟು
ದಿನ ಗುರ್ರ್ ಎನ್ನುತ್ತಿದ್ದ.
ಒಟ್ಟಿನಲ್ಲಿ ಹೇಗಾದರೂ ತಂಗವೇಲುವನ್ನು ಮಣಿಸಬೇಕು ಎಂದು ತೀರ್ಮಾನಿಸಿದ್ದ ಗೋವಿಂದ
ಹೆಗಡೆ ಅದಕ್ಕಾಗಿ ತಮ್ಮದೇ ಆದ ಪ್ಲಾನ್ ರೂಪಿಸಿದ್ದರು.
12
ಎದುರಿಗೆ ಎತ್ತರಕ್ಕೆ ಬೇಲಿಯಾಗಿ ಬೆಳೆದುನಿಂತ ನಿಬಿಡವಾದ ಪೊದೆಗಳು. ಅದರಾಚೆ ಎನೂ
ಕಾಣುತ್ತಿರಲಿಲ್ಲ. ಗಿರಿಧರ ಮತ್ತು ಶಂಕರಶೆಟ್ಟಿಯನ್ನು ಕರೆದುಕೊಂಡು ಬಂದ ಗಣೇಶ ಎನ್ನುವಾತ
ಪಿಸುದನಿಯಲ್ಲಿ “ ಸಾರ್, ಆ ಮಟ್ಟಿಯಾಚೆಗೆ ಭಂಗಿ ಪ್ಲಾಂಟೇಷನ್ ಇದೆ. ಇಲ್ಲಿಂದ ಏನೂ
ಕಾಣೋದಿಲ್ಲ. ಯಾವುದಾದರೂ ಮರ ಹತ್ತಿ ನೋಡಿದರೆ ಕಾಣುತ್ತೆ” ಎಂದ.
ಗಿರಿಧರನಿಗೆ ಮರವಿರಲಿ, ಚಿಕ್ಕದೊಂದು ಗಿಡವನ್ನು ಹತ್ತುವ ಶಕ್ತಿಯೂ ಇರಲಿಲ್ಲ. ಕಾಲಿನ ಕೀಲು,
ಮೂಳೆಗಳೆಲ್ಲ ಆಗಲೇ ಕಿರುಗುಟ್ಟತೊಡಗಿದ್ದವು. ಆದರೂ ಗಾಂಜಾ ಬೆಳೆದಿದ್ದನ್ನ ನೋಡಬೇಕೆಂದರೆ
ನೆಲದಲ್ಲಿ ನಿಂತು ನೋಡಲು ಸಾಧ್ಯವೇ ಇರಲಿಲ್ಲ. ಅಲ್ಲಿ ನುಸುಳಿಕೊಂಡೂ ಹೋಗಲು ಸಾಧ್ಯವಿರದ
ಕಾರಣ ಮರ ಹತ್ತಿ ಏನಾದರೂ ಕಾಣುತ್ತದಾ ಎಂದು ನೋಡುವದು ಅನಿವಾರ್ಯವಾಗಿತ್ತು.
ಮರ ಹತ್ತುವದು ಕಾಡಿನ ನಡುವೆಯೇ ಹುಟ್ಟಿ ಬೆಳೆದ ಗಿರಿಧರನಿಗೆ ಹೊಸತೇನೂ ಆಗಿರಲಿಲ್ಲ.
ಚಿಕ್ಕವರಿದ್ದಾಗ ಓರಗೆಯವರ ಜೊತೆ ಪಂದ್ಯ ಕಟ್ಟಿ ಚಿಗಳಿಯಂತೆ ಎತ್ತರದ ಮರಗಳನ್ನು ಹತ್ತಿ
ಇಳಿಯುತ್ತಿದ್ದ. ಕಂದ್ಲೆ ಎಂದು ಮಲೆನಾಡು ಭಾಗದಲ್ಲಿ ಕರೆಸಿಕೊಳ್ಳುವ ದಪ್ಪನಾದ ಕತ್ತಿಯನ್ನು
ಮರದ ಕಾಂಡಕ್ಕೆ ಕುಕ್ಕು ಕಾಕುತ್ತ ಅದರ ಆಧಾರದ ಮೇಲೆ ಯಾವುದೇ ರೆಂಬೆ, ಕೊಂಬೆಗಳಿಲ್ಲದೇ
ನೇರವಾಗಿ ಬೆಳೆದ ಮರಗಳನ್ನೂ ಹತ್ತುವ ಕುಶಲತೆ ಅವನಿಗಿತ್ತು. ಆದರೆ ಅಪ್ಪುಗೆಗೆ ನಿಲುಕದ
ದಪ್ಪನಾದ ಎತ್ತರದ ಮರಗಳನ್ನು ಎರಡು ಕತ್ತಿಗಳ ಮೂಲಕ ಕುಕ್ಕು ಹಾಕುತ್ತ ಮರವೇರುವ
ಚಾಕಚಕ್ಯತೆ ಕೊನೆಗೂ ಅವನಿಗೆ ಸಿದ್ಧಿಸಿರಲೇ ಇಲ್ಲ. ಇವತ್ತಿಗೂ ಆ ಬಗ್ಗೆ ಅವನಿಗೆ ವಿಸ್ಮಯ ಇದ್ದೇ
ಇತ್ತು.
ಶರ್ಟು ಬಿಚ್ಚಿ, ಪ್ಯಾಂಟು ಮಡಚಿ, ಮರೆತು ಹೋದದ್ದನ್ನು ನೆನಪಿಸಿಕೊಳ್ಳುತ್ತ ಹೇಗೋ ಒದ್ದಾಟ
ಮಾಡಿ ಮರ ಹತ್ತಿದ ಗಿರಿಧರ ಆ ಮರದ ದಟ್ಟ ಎಲೆಗಳ ಮಧ್ಯೆ ನಿರುಕಿಸಿ ನೋಡಿದ.
ಅಕ್ಕಪಕ್ಕದ ಮರಗಳ ಸಂದಿಯಲ್ಲಿ ಅಲ್ಲೊಂದು ವಿಶಾಲವಾದ ಎರಡು ಗುಡ್ಡಗಳ ನಡುವಿನ ಕಣಿವೆ
ಕಂಡಿತು. ಅಷ್ಟೇನೂ ಕಡಿದಾಗಿರದೇ ಬಯಲಿನಂತಿದ್ದ ಅಲ್ಲಿ ಹರಡಿ ಬೆಳೆದು ನಿಂತ ಗಿಡಗಳು
ಕಂಡವು; ನಾಲ್ಕಾರು ಮಂದಿ ಅತ್ತಿತ್ತ ಓಡಾಡುವದೂ ಕಂಡಿತು. ಮರವೊಂದರೆ ಕೆಳಗೆ ಪ್ಲಾಸ್ಟಿಕ್
ಶೀಟ ಹೊದೆಸಿದ ಟೆಂಟ್ ಕೂಡ ಗೋಚರಿಸಿತು.
ಯಾಕೋ ಅದನ್ನು ನೋಡುತ್ತಿದ್ದಂತೇ ಗಿರಿಧರನಿಗೆ ಇಷ್ಟರವರೆಗೆ ಅಂದುಕೊಂಡಂತೆ ಅಲ್ಲಿರುವದು
ಮಾಮೂಲಿ ಕ್ರಿಮಿನಲ್‍ಗಳ ಗ್ಯಾಂಗ್ ಆಗಿರದೇ ಅಪಾಯಕಾರಿ ತಂಡದಂತೆ ಅನ್ನಿಸತೊಡಗಿತು.
ಹತ್ತಿರ ಹತ್ತಿರ ಕೋಟಿಗಟ್ಟಲೆ ರೂಪಾಯಿಗಳ ಬೆಲೆ ಬಾಳಬಹುದಾದ ಗಾಂಜಾ ಬೆಳೆದಿರುವ ಆ
ವಿಶಾಲ ಪ್ರದೇಶದಲ್ಲಿ ಅಡ್ಡಾಡುತ್ತಿರುವ ಒಂದಿಬ್ಬರು ಠೊಣಪರು ಅಸ್ಪಷ್ಟವಾಗಿ ಕಂಡಿದ್ದರೂ ಅಲ್ಲಿ
ಅಂಥವರು ಸಾಕಷ್ಟಿರುವ ಸಾಧ್ಯತೆಗಳು ಕಂಡಿತು. ಸ್ವಲ್ಪ ಹೆಚ್ಚು ಕಡಿಮೆಯಾಗಿ ಹೀಗೇ ಅವರ
ಶೋಧನೆಗೆ ಬಂದ ಸುಳಿವೇನಾದರೂ ಹತ್ತಿದರೆ ಈ ಕಗ್ಗಾಡಿನಲ್ಲಿ ಅಟ್ಟಾಡಿಸಿಕೊಂಡು ಕೊಂದು
ಹಾಕುವದು ಖಂಡಿತ ಅನ್ನಿಸಿ ನಿಧಾನಕ್ಕೆ ಮರ ಇಳಿದುಬಂದು ಕುಸಿದು ಕುಳಿತ.
ವಿನಾ:ಕಾರಣವಾಗಿ ಆಪತ್ತನ್ನು ಮೈಮೇಲೆ ಎಳೆದುಕೊಂಡೆವಾ? ಎಂದು ಗಿರಿಧರ ಯೋಚಿಸಿದ.
ಬರುವಾಗ ಇದ್ದ ವರದಿಗಾರಿಕೆಯ ಹುಮ್ಮಸ್ಸು, ಸುದ್ದಿಯೊಂದನ್ನ ಸ್ಪೋಟಿಸುವ ತವಕಗಳೆಲ್ಲ
ನಿಧಾನಕ್ಕೆ ಕರಗತೊಡಗಿತ್ತು. ಮೇಲ್ನೋಟಕ್ಕೆ ಪರಿಶುದ್ಧವಾಗಿ, ಸುಂದರವಾಗಿ ಕಾಣುತ್ತಿದ್ದ ಕಗ್ಗಾಡಿನ
ಒಳಗಿನ ಸತ್ಯಗಳು ಅವನನ್ನು ಅಲುಗಾಡಿಸತೊಡಗಿದ್ದವು.
ಕೆಲವೊಮ್ಮೆ ಎಡವಟ್ಟು ಕೆಲಸಗಳೇ ನೆರವಿಗೆ ಬರುತ್ತವೆ ಎನ್ನುವದು ಗಿರಿಧರನಿಗೆ ಈ ಮೊದಲು
ಎಷ್ಟೋ ಬಾರಿ ಅನುಭವಕ್ಕೆ ಬಂದಂತೆ ಈಗಲೂ ಆಯಿತು.
ಗಿರಿಧರನ ಬಳಿ ಬರಲು ಹೇಳಿದ್ದ ಗೋವಿಂದ ಹೆಗಡೆ ಫಾರೆಸ್ಟ ಡಿಪಾರ್ಟಮೆಂಟಿನವರನ್ನ ಬಳಿ ತನ್ನ
ಪ್ರಭಾವ ತೋರಿಸಲೋ, ಅಥವಾ ಏನಾದರೂ ಅಪಾಯವಾದರೆ ಅವರಿರುವ ಕಾರಣ ತನ್ನ ತಲೆಗೆ
ಸುತ್ತಿಕೊಳ್ಳಲಾರದು ಅಂತಲೋ ಗಿರಿಧರ ಗಾಂಜಾ ಬೆಳೆ ವರದಿಗಾರಿಕೆಗೆ ಬರುವದನ್ನು ಪಾರೆಸ್ಟ
ಡಿಪಾರ್ಟಮೆಂಟಿನ ರೇಂಜರ್ ಬಳಿ ಹಲುಬಿದ್ದರು. ಇದ್ದುದರಲ್ಲಿ ಅವರು ಮಾಡಿದ ಒಂದು ಒಳ್ಳೇ
ಕೆಲಸವೆಂದರೆ ಅದನ್ನು ಮತ್ಯಾರಲ್ಲೂ ಹೇಳದೇ ರೇಂಜರ್ ಒಬ್ಬರ ಬಳಿಯೇ ಹೇಳಿದ್ದು.
ಗಿರಿಧರ ಇಂಥ ದಿನ, ಇಷ್ಟು ವೇಳೆಗೆ ಬರುತ್ತಾನೆ ಎನ್ನುವದನ್ನು ತಿಳಿದುಕೊಂಡಿದ್ದ ರೇಂಜರ್ ತಮ್ಮ
ಇಲಾಖೆ ಜೀಪಿನಲ್ಲಿ ಸಿಬ್ಬಂದಿಗಳನ್ನು ತುಂಬಿಕೊಂಡು, ಫಾರೆಸ್ಟರ್ ಕೈಯಲ್ಲಿ ಹಳೆ ಕಾಲದ ಕೇಪಿನ
ಕೋವಿಯನ್ನು ಹಿಡಿಸಿಕೊಂಡು, ಅವರಿಗೆಲ್ಲ, ಎಲ್ಲಿಗೆ, ಏನು, ಎಂತು ಹೇಳದೇ ಗೋವಿಂದ
ಹೆಗಡೆಯನ್ನು ಹುಡುಕಿಕೊಂಡು ಬಂದೇ ಬಿಟ್ಟಿದ್ದರು. ಎಲ್ಲಾದರೂ ತಮ್ಮ ಅನುಪಸ್ಥಿತಿಯಲ್ಲಿ ಗಿರಿಧರ
ಬಂದು ವರದಿ ಮಾಡಿ, ಮರು ದಿವಸ ಕೋಲಾಹಲವಾಗಿ ತನ್ನ ನೌಕರಿಗೆ ಕುತ್ತು ಬರುವ
ಅಪಾಯವನ್ನು ಮುಂದಾಗಿ ಗ್ರಹಿಸಿದ್ದ ರೇಂಜರ್ ರಸ್ತೆಯಿರುವ ತನಕ ಜೀಪಿನಲ್ಲಿ ಬಂದು ಅಲ್ಲಿಂದ
ಕಾಲ್ನಡಿಗೆಯಲ್ಲಿ ಬಂದು ಇಂಥ ಉಪದ್ವಾಪಕ್ಕೆ ಮುಂದಾದ ಗೋವಿಂದ ಹೆಗಡೆಗೆ ತಾರಾಮಾರಾ
ಬೈಯುತ್ತ, ಗಾಂಜಾ ಬೆಳೆಯ ಮೇಲೆ ದಾಳಿ ನಡೆಸಿದ ಸುದ್ದಿ ಹೇಗೆ ಪೇಪರಿನಲ್ಲಿ ಬರಬಹುದೆಂಬ
ಊಹೆಯಲ್ಲೇ ಮುಂದಾಗಬಹುದಾದ ಘೋಟಾವಳಿಗಳಿಗೆ ಬೆವರುತ್ತ ಹೆಗಡೆಯನ್ನು ಹುಡುಕಲು
ಗಾರ್ಡಗಳನ್ನು ಅಟ್ಟಿದ್ದರು.
ಎದುರಿನ ವಾಸ್ತವಕ್ಕೂ, ಅದರಿಂದ ದೂರ ನಿಂತು ನೋಡುವ ಸ್ಥಿತಿಗೂ ಇರುವ ಅಗಾಧ ಅಂತರ
ಗಿರಿಧರನನ್ನು ಚಿಂತನೆಗೆ ಹಚ್ಚಿತ್ತು. ರಕ್ಷಣೆಯಿರುವ ವರ್ತುಲದಲ್ಲಿ ಬದುಕುತ್ತಿರುವ ಮನುಷ್ಯನಿಗೆ
ಯಾವ ನೆರವು ದೊರೆಯದ ಅಪಾಯಕಾರಿ ಸಂದರ್ಭ ಏಕಾಏಕಿ ಎದುರಾದಾಗ ಉಂಟಾಗುವ
ಮನಸ್ಥಿತಿ, ಯೋಚನಾಕ್ರಮ ಅವನ ಅನುಭವಕ್ಕೆ ಬರತೊಡಗಿತ್ತು. ಗಾಂಜಾ ಬೆಳೆ ಏರಿಯಾ
ನೋಡಲು ಮರ ಹತ್ತಿ ಇಳಿದವನಿಗೆ ಹೆದರಿಕೆಗಿಂತಲೂ ಒಂದು ರೀತಿಯ ಶುಷ್ಕತೆ
ಆವರಿಸಿಕೊಳ್ಳತೊಡಗಿತ್ತು. ಕಾಡಿನ ನೀರವತೆ, ಮೌನ, ಅಲೌಕಿಕ ಪರಿಸರದ ಜೊತೆಗೆ ಹೊರ
ಜಗತ್ತಿನ ಅರಿವಿಗೆ ಬಾರದಂತೆ ದಟ್ಟವಾಗಿ ಹೆಣೆದುಕೊಂಡ ಇಂಥ ಕಾಡಿನ ನಡುವೆ
ಸಂಭವಿಸಬಹುದಾದ ಅತಿಮಾನುಷ ವಿದ್ಯಮಾನಗಳು ಊಹೆ ಮಾತ್ರದಿಂದಲೇ ಅವನನ್ನು
ಕಂಗೆಡಿಸಿಬಿಟ್ಟಿತ್ತು. ಬದುಕು ಕೂಡ ಕಾಡಿನಂತೆಯೇ ಜಟಿಲವಾಗುತ್ತಿದೆಯೇ? ಊಹಿಸಲಾಗದಷ್ಟು
ಅತೀತವಾಗುತ್ತಿದೆಯೇ? ಎನ್ನುವ ಅಸಂಬದ್ದ ಯೋಚನೆಗಳು ಅವನನ್ನು ಮುತ್ತಿಕೊಳ್ಳತೊಡಗಿದ್ದವು.
“ ಮುಂದೇನು ಮಾಡೋದು ಅಂತ ಹೆಗಡೆಯವರನ್ನೆ ಕೇಳೋಣ. ನಂಗೇನೂ ತೋಚೋದಿಲ್ಲ”
ಎಂದು ಗಿರಿಧರ ಹೇಳಿದ್ದಕ್ಕೆ ಕತ್ತು ಅಲ್ಲಾಡಿಸಿದ ಅವನ ಜೊತೆಗಿದ್ದವರು ಬಂದಷ್ಟೇ ಹುಶಾರಾಗಿ
ವಾಪಸ್ಸು ಗೋವಿಂದ ಹೆಗಡೆ ಭೇಟಿಯಾದ ಕಾಲುದಾರಿಯ ಸಮೀಪ ಬಂದರು.
ಮುಂದಿದ್ದ ನಾರಾಯಣ ಕಾಲುದಾರಿಗೆ ಹೆಜ್ಜೆಯಿಟ್ಟು ಬಲಗಡೆ ನೋಡಿದವನೇ ದಿಗ್ಗನೆ ಮತ್ತೆ
ಹಿಂದೆ ಜಿಗಿದು ಬರುತ್ತಿದ್ದವರನ್ನು ತಡೆದ. “ ಏನೋ ಎಡವಟ್ಟಾಗಿದೆ. ಅಲ್ಲಿ ಫಾರೆಸ್ಟನವರು
ಬಂದಾಂಗಿದೆ” ಎಂದು ಪಿಸುಗುಟ್ಟಿದ.
ಗೋವಿಂದ ಹೆಗಡೆ ರೇಂಜರಿಗೆ ಹೇಳಿದ್ದಾಗಲೀ, ಫಾರೆಸ್ಟ ಡಿಪಾರ್ಟಮೆಂಟನವರು ಇಲ್ಲಿಗೆ
ಬಂದಿದ್ದಾಗಲೀ ಗೊತ್ತಿರದ ಇವರೆಲ್ಲ ಸಿಕ್ಕಾಪಟ್ಟೆ ಕಂಗಾಲಾಗಿಬಿಟ್ಟರು. ಮುಂದೆ ಹೋಗುವ ಹಾಗೂ
ಇಲ್ಲ, ಹಿಂದೆ ಬರುವ ಹಾಗೂ ಇಲ್ಲ. ಮುಂದೆ ಕಂದಕ, ಹಿಂದೆ ಹುಲಿ ಎನ್ನುವ ಅಡಕೊತ್ತಿನ ಸ್ಥಿತಿ
ಅವರದ್ದಾಗಿತ್ತು. ಫಾರೆಸ್ಟ ಡಿಪಾರ್ಟಮೆಂಟಿನವರ ರಗಳೆ ಗೊತ್ತಿದ್ದ ಗಣೇಶ, ನಾರಾಯಣರಿಗೆ
ತಮ್ಮನ್ನು ನೀವೂ ಗಾಂಜಾ ಗ್ಯಾಂಗನವರು ಎಂದು ಹಿಡಿದು ಕೇಸು ಮಾಡಿ, ಜೇಲಿಗೆ ಹಾಕಿದರೆ
ಏನು ಗತಿ? ಎನ್ನುವ ಚಿಂತೆಯಾದರೆ, ಈವರೆಗೆ ಮುಖ, ಮೂತಿ ನೋಡದ ಯಾರೋ ಈ
ಕಗ್ಗಾಡಿನಲ್ಲಿ ಓಡಾಡ್ತಿದಾರೆ ಅಂದರೆ ಕ್ರಿಮಿನಲ್‍ಗಳೇ ಇರಬೇಕು ಎಂದು ತಮ್ಮನ್ನು ಹಿಡಿದುಕೊಂಡರೆ
ಏನು ಮಾಡೋದು? ಎನ್ನುವದು ಗಿರಿಧರ, ಶಂಕರ ಶೆಟ್ಟಿ ತಲೆಬಿಸಿಯಾಗಿತ್ತು. ತಮ್ಮನ್ನು
ಇಂಥದೊಂದು ಅಪಾಯಕ್ಕೆ ಗುರಿ ಮಾಡಿದ ಗೋವಿಂದ ಹೆಗಡೆಗೆ ಅವರೆಲ್ಲ ಮನಸ್ಸಿನಲ್ಲೇ
ಬೈಯ್ದುಕೊಂಡರು.
ನಿಧಾನಕ್ಕೆ ಕಾಲುದಾರಿಯ ಗುಂಟ ಒಂದಿಷ್ಟು ಮಂದಿ ಮಾತನಾಡುತ್ತ ಬರುವದನ್ನು ತಿಳಿದು ಅಲ್ಲೇ
ಪೊದೆ ಸಂದಿಯಲ್ಲಿ ಅವಿತುಕೊಂಡರು. ಕಚಪಚ ಎನ್ನುತ್ತಿದ್ದ ಆ ಕಲರವದಲ್ಲಿ ಗೋವಿಂದ
ಹೆಗಡೆಯ ಕೀರಲು ಸ್ವರವೂ ಕೇಳಿತು. ಗೋವಿಂದ ಹೆಗಡೆಗೆ ಫಾರೆಸ್ಟನವರು ಹಿಡಿದು
ತದುಕಿರಬಹುದೇ? ಎಂದು ಆ ಸಂಕಷ್ಟ ಸ್ಥಿತಿಯಲ್ಲೂ ಗಣೇಶ ಪಿಸುಗುಟ್ಟಿದ. ಒಂದೊಮ್ಮೆ
ತದುಕಿದ್ದರೇ ಗೋವಿಂದ ಹೆಗಡೆ ವರ್ತನೆ ಹೇಗಿರಬಹುದು ಎಂದು ಗಿರಿಧರ ಊಹಿಸಿಕೊಂಡು
ಸಣ್ಣಗೆ ನಕ್ಕ.
ಮಾತನಾಡುತ್ತ ಬಂದವರು ಇವರು ಅವಿತುಕೊಂಡ ಜಾಗದ ಸಮೀಪವೇ ನಿಂತು ಮಾತು
ಮುಂದುವರೆಸಿದರು.
“ಅಲ್ಲಾ, ಸುಮಾರು ಹೊತ್ತಾಯ್ತು. ನೋಡಿ ಬರ್ತೀವಿ ಅಂತ ಹೋಗಿ. ಅವರಿಗೆ ಏನಾರೂ ಆಯ್ತೋ,
ಏನೋ ಮಾರಾಯ್ರಾ..” ಎನ್ನುವ ಗೋವಿಂದ ಹೆಗಡೆ ಸ್ವರ ಕೇಳಿ ನಾಲ್ವರಿಗೂ ಸಮಾಧಾನವೆನ್ನಿಸಿತು.
ನಾವು ತಿಳಿದುಕೊಂಡಂತೇ ಭಯಪಡಬೇಕಾದ ಅಗತ್ಯವಿಲ್ಲ ಎನ್ನಿಸಿ ಏನಾದರಾಗಲಿ ಎಂದು
ಒಬ್ಬೊಬ್ಬರಾಗಿ ಕಾಡಿನಿಂದ ಕಾಲುದಾರಿಗೆ ದಾಟಿದರು.
13
“ ಎಂಥ ಮನುಷ್ಯರ್ರೀ ನೀವು. ನಂಗೋದು ಮಾತು ಹೇಳ್ಲಿಲ್ಲ. ಇಷ್ಟೆಲ್ಲಾ ಒದ್ದಾಟ ಆಗ್ತಿತ್ತಾ?
ಆರಾಮಾಗಿ ನಮ್ಮ ಜೀಪಲ್ಲೇ ಬರಬಹುದಿತ್ತಲ್ಲ” ಎಂದು ರೇಂಜರ್ ಹನುಮಂತಪ್ಪ ಸುಳ್ಳೇ ಸಿಟ್ಟನ್ನು
ನಟಿಸಿ ಗಿರಿಧರನಿಗೆ ದಬಾಯಿಸಿದರು.
ವಾಸ್ತವಿಕವಾಗಿ ರೇಂಜರ್ ಹನುಮಂತಪ್ಪನ ಪರಿಚಯ ಗಿರಿಧರನಿಗೆ ಮೊದಲೇ ಇತ್ತು. ಫಾರೆಸ್ಟರ್
ಆಗಿ ಸರ್ವೀಸ್ ಮಾಡುವಾಗ ಪರಿಚಯವಾಗಿದ್ದರೂ ಅವರಿಗೆ ಬಡ್ತಿಯಾಗಿ ಇಲ್ಲಿ ಬಂದಿರುವದು
ಗೊತ್ತಿರಲಿಲ್ಲ. ಗೋವಿಂದ ಹೆಗಡೆ ಬಳಿ ಆ ಏರಿಯಾದ ಫಾರೆಸ್ಟ ಇಲಾಖೆ ವಿವರಗಳನ್ನು ಕೇಳಲು
ಗಿರಿಧರ ಗಡಿಬಿಡಿಯಲ್ಲಿ ಮರೆತಿದ್ದ. ಕೇಳಿದ್ದರೆ ಹನುಮಂತಪ್ಪ ಈ ರೇಂಜ್‍ನಲ್ಲಿರುವದು
ತಿಳಿಯುತ್ತಿತ್ತು. ಯಾವುದಾದರೂ ತನಿಖಾ ವರದಿ ಮಾಡುವ ಸಂದರ್ಭದಲ್ಲಿ ಗಿರಿಧರ ಅಧಿಕಾರಿಗಳ
ವಿವರಗಳನ್ನೂ ಕೇಳುತ್ತಿರಲಿಲ್ಲ. ಎಲ್ಲಾದರೂ ಪರಿಚಯದವರಾಗಿ ಇರಿಸುಮುರಿಸಾದರೆ ಎನ್ನುವ
ಎಚ್ಚರಿಕೆ ಅವನದ್ದಾಗಿತ್ತು.
“ ಕೊನೆಗೆ ಎಂತಾ ಆಯ್ತ್ರೀ, ನಿಧಿ ಅಗೆಯೋರ ಕತೆ?” ಎಂದು ರೇಂಜರ್ ಹನುಮಂತಪ್ಪ ಹಳೆಯ
ಘಟನೆಯೊಂದರ ಹುತ್ತಕ್ಕೆ ಕೈ ಹಾಕಿದ್ದರು.
ಗಿರಿಧರ ಒಂದೆರಡು ವರ್ಷಗಳ ಕಾಲ ಬೆಂಗಳೂರಿನ ಒಂದೆರಡು ವಾರಪತ್ರಿಕೆಗಳಲ್ಲಿ ಕೆಲಸ
ಮಾಡಿದ್ದರೂ ಅದರ ಕೆಲಸಕ್ಕಿಂತ ಹೆಚ್ಚಾಗಿ ಇನ್ನಿತರ ಜನಸಾಮಾನ್ಯರ ದೃಷ್ಟಿಯಲ್ಲಿ ಪೈಸಾ
ಪ್ರಯೋಜನವಿಲ್ಲದ್ದಕ್ಕೆ ಸಮಯ ವ್ಯಯಿಸಿದ್ದ. ಆ ಕಾಲದಲ್ಲಿ ರಾಜಧಾನಿಯಲ್ಲಿ ಧಾಂಗುಡಿಯಿಡುತ್ತಿದ್ದ
ರೌಡಿಂಜಂನ್ನು ಕಣ್ಣಾರೆ ನೋಡಿದ್ದ. ಹಾಡು ಹಗಲೇ ರಾಜಾರೋಷವಾಗಿ ನಡುಬೀದಿಯಲ್ಲಿ
ನಡೆಯುತ್ತಿದ್ದ ಗ್ಯಾಂಗ್‍ವಾರ್‍ನ್ನು ಕಂಡಿದ್ದ. ಅ ವೇಳೆಯಲ್ಲಿ ಅವನಿಗೊಬ್ಬ ಮುಸಲ್ಮಾನ್
ಗೆಳೆಯನೊಬ್ಬ ದೊರಕಿದ್ದ. ಸಿಟಿ ಮಾರ್ಕೆಟ್ ಪಕ್ಕದ ಉರ್ದು ಕಾಲೇಜಿನಲ್ಲಿ ಕ್ಲರ್ಕ ಆಗಿ ಕೆಲಸ
ಮಾಡುತ್ತಿದ್ದ ಆತ ಕಲಾಸಿ ಪಾಳ್ಯದ ಎದುರಿನ ಮಟನ್ ಹೊಟೇಲ್ ಪಕ್ಕ ಪಾನ್ ಶಾಪ್
ನಡೆಸುತ್ತಿದ್ದ. ಹಗಲಿನ ವೇಳೆ ಅಂಗಡಿ ನಡೆಸಲು ಒಬ್ಬ ಅಂಗವಿಕಲನನ್ನು ಇಟ್ಟಿರುತ್ತಿದ್ದ. ವ್ಯಾಪಾರ
ಹೆಚ್ಚಿರುತ್ತಿದ್ದ ಸಂಜೆ ಮತ್ತು ರಾತ್ರಿ ವೇಳೆ ತಾನೇ ಕೂತಿರುತ್ತಿದ್ದ. ಹೇಗೋ, ಏನೋ ಗಿರಿಧರನಿಗೆ
ಅವನಿಗೆ ದೋಸ್ತಿಯಾಗಿ ಪ್ರತಿದಿನ ಸಂಜೆ ಗಿರಿಧರ ಅಲ್ಲಿ ಹೋಗಿ ಕೂರುತ್ತಿದ್ದ.
ಪಕ್ಕದ ಹೊಟೇಲಿನಲ್ಲಿ ಬೇಯಿಸುತ್ತಿದ್ದ ದನದ, ಕುರಿಯ ಮಾಂಸದ ಘಾಟು, ಆಚೆ ಪಕ್ಕದಲ್ಲಿದ್ದ
ಸಾರಾಯಿ ಅಂಗಡಿಯಲ್ಲಿ ಕುಡಿದು ಫುಲ್ ಟೈಟಾಗಿ ಬರುತ್ತಿದ್ದ ಅದರ ಗಿರಾಕಿಗಳು, ಅವರ
ಮಾತು, ಜಗಳ, ಮಿತಿ ಮೀರಿದಾಗ ನಡೆಯುತ್ತಿದ್ದ ಬಡಿದಾಟ ಮೊದಮೊದಲು ಭಯ
ಹುಟ್ಟಿಸಿದರೂ ನಿಧಾನಕ್ಕೆ ಒಗ್ಗತೊಡಗಿತ್ತು. ಕಲಾಸಿ ಪಾಳ್ಯ ಹಗಲಿನಲ್ಲಿ ಕಾಣುವದಕ್ಕಿಂತ ತೀರಾ
ವಿಭಿನ್ನವಾಗಿ ರಾತ್ರಿಯ ವೇಳೆಯಲ್ಲಿ ರೂಪಾಂತರವಾಗುತ್ತಿತ್ತು. ವೇಶ್ಯೆಯರು, ಅವರನ್ನು
ಹುಡುಕಬಂದ ವಿಟರು, ಗೂಂಡಾಗಳು, ಸಣ್ಣ ವಿಷಯಕ್ಕೆ ಆಗುತ್ತಿದ್ದ ಬಡಿದಾಟಗಳು ಇವೆಲ್ಲವನ್ನೂ
ಗಿರಿಧರ ಆ ಕಟ್ಟೆಯ ಪಕ್ಕದ ಪಾನ್ ಅಂಗಡಿಯಲ್ಲಿ ಕೂತು ನೋಡಿದ್ದ. ಕೆಸರಿನ ನಡುವಿನ
ಕಮಲದಂತಿದ್ದ ಆ ಮುಸಲ್ಮಾನ್ ಗೆಳೆಯ ಎಷ್ಟು ಒಳ್ಳೆಯವನಾಗಿದ್ದನೆಂದರೆ ಗಿರಿಧರನಿಗೆ ಅಂಥ
ಸ್ನೇಹಿತ ಮೊದಲು, ಆ ನಂತರವೂ ದೊರಕಿರಲೇ ಇಲ್ಲ.
ಮಡಿಕೇರಿ ಸಮೀಪದ ಯಾವುದೋ ಊರಿನವನಾದ ಆತ ಗಿರಿಧರನ ಜೊತೆ ತಾನು ಸಣ್ಣವನಿದ್ದಾಗ
ಕಂಡ ಕಾಡು, ಅಲ್ಲಿನ ಮಳೆ, ಮಂಜು, ಗುಡ್ಡ, ಬೆಟ್ಟಗಳ ಬಗ್ಗೆ ಗಿರಾಕಿಗಳಿಗೆ ಪಾನ್
ಸಿದ್ಧಗೊಳಿಸುತ್ತಲೇ ಹೇಳುತ್ತಿದ್ದ. ಆ ಕಾಂಕ್ರೀಟ್ ನಾಡಿನಲ್ಲಿ ಕೂತು ಕಾಡಿನ ಬಗ್ಗೆ ಹೇಳುತ್ತಿದ್ದ
ಅವನ ಮಾತುಗಳು ಗಿರಿಧರನಿಗೆ ಪ್ರತಿನಿತ್ಯವೂ ಹೊಕ್ಕುಳಬಳ್ಳಿಯ ನೆನಪು ಮಾಡಿಕೊಡುತ್ತಿತ್ತು.
ದೇವರ ಕಾಡು ಎನ್ನುವ ಆ ಊರಿನಲ್ಲಿ ದಿನಪತ್ರಿಕೆಯೊಂದರ ವರದಿಗಾರನಾಗಿ ಕೆಲಸ ಶುರು
ಮಾಡಿದ ಕೆಲವೇ ದಿನಗಳಲ್ಲಿ ಆ ಭಾಗದಲ್ಲಿ ಸಣ್ಣದಾಗಿ ಸುದ್ದಿಯೊಂದು ಮೈ ಬೆವರಿನಂತೆ
ಜಿನುಗತೊಡಗಿತ್ತು. ತನಗೆ ಗೊತ್ತಿಲ್ಲದಂತೆ ಕಿವಿಯನ್ನೇ ಕಣ್ಣಾಗಿಸಿಕೊಂಡ ಗಿರಿಧರನಿಗೆ ಅದರ ವಾಸನೆ
ತಟ್ಟುವದು ತಡವೇನೂ ಆಗಲಿಲ್ಲ. ಯಾರೋ ಅಪರಿಚಿತರು ಕಾಡ ನಡುವಿನ ಪಾಳುಬಿದ್ದ
ದೇವಾಲಯಗಳ ಸುತ್ತಮುತ್ತ, ಯಾವ ಕಾಲದಲ್ಲೋ ನಾಮಾವಶೇಷವಾದ ಇಲ್ಲೊಂದು ಊರಿತ್ತು
ಎನ್ನುವ ಅವಶೇಷಗಳ ಬಳಿ ನಿಧಿಗಾಗಿ ಅಗೆಯತೊಡಗಿದ್ದರು. ಕೆಲವು ಹೇಳಿಕೇಳುವವರಿಲ್ಲದ
ದೇವಾಲಯಗಳ ಮೂರ್ತಿ, ಲಿಂಗ ಮುಂತಾದವುಗಳನ್ನೂ ಮಗುಚಿ ಹಾಕಿದ್ದರು. ಗಿರಿಧರ ತನಗೆ
ದೊರೆತ ಸುದ್ದಿಯ ಜಾಡು ಹಿಡಿದು ಹೋಗಿ ಅವನ್ನೆಲ್ಲ ಅವಲೋಕಿಸಿದಾಗ ಒಂದು ತಂಡ
ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದೆ ಎನ್ನುವದು ಅವನಿಗೆ ಮನವರಿಕೆ ಆಗಿತ್ತು.
ಈ ಕೃತ್ಯದ ಹಿಂದೆ ಇರುವವರು ಯಾರು? ಎನ್ನುವದು ಗಿರಿಧರನಿಗೆ ಬಗೆಹರಿಯದ ಪ್ರಶ್ನೆಯಾಗಿ
ಕಾಡತೊಡಗಿತ್ತು. ಕೇವಲ ಸ್ಥಳೀಯರಿಂದ ನಡೆಯುತ್ತಿರುವ ಕಾರ್ಯಾಚರಣೆ ಇದಲ್ಲ. ಇದರ ಹಿಂದೆ
ಯಾವುದೋ ಶಕ್ತಿಕೇಂದ್ರವಿದೆ ಎನ್ನುವದು ಅವನಿಗೆ ಮನದಟ್ಟಾಗಿತ್ತು. ಇದು ತನ್ನೊಬ್ಬನಿಂದ ಬಗೆ
ಹರಿಯುವಂಥದ್ದಲ್ಲ ಎನ್ನುವ ನಿರಾಶೆಯಲ್ಲಿದ್ದಾಗ ಥಟ್ಟನೆ ಒಂದು ಸಂಗತಿ ಹೊಳೆದಿತ್ತು. ನಿಧಿ
ಅಗೆಯುವ ಆ ಗ್ಯಾಂಗ್ ಹೆಚ್ಚಾಗಿ ಫಾರೆಸ್ಟ ಇಲಾಖೆಯ ವ್ಯಾಪ್ತಿಗೆ ಸೇರುವ ಜಾಗಗಳಲ್ಲೇ ತನ್ನ
ಕಾರ್ಯಾಚರಣೆ ನಡೆಸುತ್ತಿತ್ತು.
ಈ ಕೃತ್ಯದ ಬೆನ್ನು ಬಿದ್ದ ಗಿರಿಧರ ಒಂದು ದಿನ ಆಗ ಆ ರೇಂಜ್‍ನಲ್ಲಿದ್ದ ಹನುಮಂತಪ್ಪನನ್ನು
ಅಟಕಾಯಿಸಿದ್ದ. “ ಏನ್ರೀ, ನಿಮ್ಮ ರೇಂಜ್‍ನಲ್ಲಿ ಇಂಥದ್ದು ನಡೀತಿದೆ ಅಂತಾ ಗೊತ್ತಿದ್ದೂ ಸುಮ್ನೆ
ಕೂತಿದೀರಲ್ರೀ, ನಿಮಗೆ, ಅವರಿಗೆ ಏನಾದ್ರೂ ಅಡ್ಜೆಸ್ಟಮೆಂಟಾ? ಎಂದು ಕೇಳಿ ನಿಧಿ ಶೋಧನೆಯ
ಗ್ಯಾಂಗಿನ ಕೃತ್ಯಗಳನ್ನು ತಣ್ಣಗೆ ವಿವರಿಸಿದ್ದ. ಏನೂ ಗೊತ್ತಿಲ್ಲದ ಹನುಮಂತಪ್ಪ ಏಕದಂ ತನ್ನ
ಕೈಕೆಳಗಿನ ಫಾರೆಸ್ಟರ್, ಗಾರ್ಡರನ್ನು ಕರೆಸಿ ಹೂಂಕರಿಸಿದ್ದ. ಈ ಠೇಂಕಾರ, ಆದೇಶ ಯಾವುದೂ
ಪ್ರಯೋಜನಕ್ಕೆ ಬಾರದ್ದೆಂತಲೂ, ನಿಧಿ ಅಗೆಯುವವರನ್ನು ಹಿಡಿಯಬೇಕೆಂದರೆ ಒಂದು ಪ್ಲಾನ್
ಮಾಡಬೇಕೆಂತಲೂ ಗಿರಿಧರ ಹೇಳಿದ್ದಕ್ಕೆ ಹನುಮಂತಪ್ಪ ಒಪ್ಪಿಕೊಂಡಿದ್ದರು. ನಿಧಿ ಅಗೆಯುವವರನ್ನು
ಹಿಡಿಯುವದಾಗಲೀ, ಆ ಬಗ್ಗೆ ಕ್ರಮ ಕೈಗೊಳ್ಳುವದಾಗಲೀ ತಮ್ಮ ವ್ಯಾಪ್ತಿಗೆ ಬರದಿದ್ದರೂ ಗಿರಿಧರನ
ಮಾತಿಗೆ ಕಟ್ಟುಬಿದ್ದು, ಅದಕ್ಕಿಂತ ಮುಖ್ಯವಾಗಿ ತನ್ನ ಇಲಾಖೆಗೆ ಸೇರಿದ ಜಾಗಗಳಲ್ಲಿ ನಡೆಯುತ್ತಿದ್ದ
ಅಕ್ರಮಗಳಿಂದಾಗಿ ಆತ ಆ ತಂಡವನ್ನು ಮಟ್ಟ ಹಾಕುವ ನಿರ್ಧಾರಕ್ಕೆ ಬಂದಿದ್ದರು. ಆ ತಂಡದವರ
ಕರಾಮತ್ತೋ, ಅಥವಾ ಇಲಾಖೆಯ ಮರ್ಜಿಯ ಪ್ರಕಾರ ಆದ ವರ್ಗಾವಣೆಯೋ? ಹನುಮಂತಪ್ಪ
ಅಲ್ಲಿಂದ ವರ್ಗವಾಗಿದ್ದರು. ನಂತರದಲ್ಲಿ ಗಿರಿಧರನೂ ತನ್ನ ಸುತ್ತ ಹಬ್ಬಿಕೊಂಡ ಅನೇಕ
ಉಪದ್ವಾಪಗಳ ಕಾರಣದಿಂದ ನಿಧಿಕಳ್ಳರ ಬಗ್ಗೆ ಹೆಚ್ಚು ಗಮನ ಕೊಡಲು ಸಾಧ್ಯವಾಗಿರಲಿಲ್ಲ.
14
ಬಿಸಿಲು ತೀವ್ರಗೊಳ್ಳುತ್ತಿತ್ತು. ಅಂಥ ತಂಪಿನ ಕಾಡಿನಲ್ಲೂ ಮೈಯಿಂದ ಬೆವರು ಜಿನುಗುತ್ತಿತ್ತು.
ಬೆಳಿಗ್ಗೆಯಿಂದ ಹೊಟ್ಟೆಗೆ ಏನೂ ಬಿದ್ದಿರದ ಕಾರಣ ಹೊಟ್ಟೆ ಚುರುಗುಟ್ಟುತ್ತಿತ್ತು. ಪುಣ್ಯಕ್ಕೆ
ಗೋವಿಂದ ಹೆಗಡೆ ಮನೆಯಿಂದ ಒಂದು ಕೊಡ ಮಜ್ಜಿಗೆಯನ್ನು ಹೊತ್ತು ತಂದಿದ್ದರಿಂದ
ಬಾಯಾರಿಕೆ ಇಂಗುವಂತಾಗಿತ್ತು.
“ ಇಲ್ಲೇ ಕತೆ ಹೇಳ್ತಾ ಕೂತಿರೋದಾ ಏನು?” ಎಂದು ಗಿರಿಧರ ಪ್ರಶ್ನಿಸಿದ.
ರೇಂಜರ್ ಹನುಮಂತಪ್ಪ ಗಿರಿಧರನ ಜೊತೆ ಇಲ್ಲಿಯ ಕಷ್ಟಗಳನ್ನೆಲ್ಲ ಹೇಳಿಕೊಂಡು “ ಥತ್, ಇಲ್ಲಿ
ಎಂಥಾ ಸರ್ವೀಸ್ ಮಾಡೋದು. ನಂಗಂತೂ ಸಾಕಾಗಿಬಿಟ್ಟಿದೆ ” ಎಂದು ಲೊಚಗುಟ್ಟಿ ತನ್ನ
ಪುರಾಣವನ್ನೆಲ್ಲ ಹೇಳಿ ಮುಗಿಸಿದ್ದರು. ಇಲ್ಲೇ ಹೊತ್ತು ಕಳೆದರೆ ನಾವು ವಾಪಸ್ಸು ಹೋಗೋದಕ್ಕೆ
ಸಂಜೆಯಾಗುತ್ತದೆ ಎನ್ನುವದು ಗಿರಿಧರನ ಚಿಂತೆಯಾಗಿತ್ತು. ಅದಕ್ಕೇ ಮುಂದೇನು? ಅಂತ ಬೇಗ
ತೀರ್ಮಾನಿಸಿ ಎಂದು ಮತ್ತೊಮ್ಮೆ ದಬಾಯಿಸಿದ.
ಅದೊಂದು ಕೋಟೆಯಂತಿತ್ತು. ದೊಡ್ಡದಾದ ಮರಗಳನ್ನೇ ಕಡಿದು ಮನುಷ್ಯ , ಪ್ರಾಣಿಗಳಿರಲಿ
ನುಸಿಯೂ ದಾಟದಂತೆ ಅಡ್ಡಹಾಕಿದ್ದರು. ಬೆತ್ತದ ಮೆಳೆ, ಕಾಡಿನ ಗಿಡಗಳು ಜಿಗ್ಗಾಗಿ
ಹೆಣೆದುಕೊಂಡಿದ್ದವು. ಅವನ್ನೇ ಬಳಸಿಕೊಂಡು ಕಾಡನ್ನೇ ಕೋಟೆಯಂತೆ ಕಟ್ಟಿಕೊಂಡಿದ್ದರು. ಮಾರು
ದೂರದಿಂದ ಕೂಡ ಆ ಕೋಟೆಯಾಚೆ ವಿಶಾಲವಾದ ಕಣಿವೆಯಿದೆ. ಅಲ್ಲಿ ಕಾಡು ಸವರಿ
ಬಯಲಾಗಿಸಿ, ಗಾಂಜಾ ಬೆಳೆಯುತ್ತಿದ್ದಾರೆ ಎಂದು ತಿಳಿಯುವಂತಿರಲಿಲ್ಲ. ಅಷ್ಟೊಂದು
ವ್ಯವಸ್ಥಿತವಾದ ರಕ್ಷಣಾ ವಿಧಾನಕ್ಕೆ ಗಿರಿಧರನಿಗೆ ಮೆಚ್ಚಿಕೆಯಾಯಿತು. ಎಲ್ಲೂ ದಾಟಲು ದಾರಿಯಿರದ
ಕಾರಣ ಸ್ವಲ್ಪ ದೂರ ಆ ಕಾಡಿನ ಕೋಟೆಯನ್ನು ಸುತ್ತಿದರು. “ ಏ, ಇಲ್ಲೇ ಎಲ್ಲಾದ್ರೂ ಕಿಂಡಿ
ಮಾಡ್ರೋ” ಎಂದು ರೇಂಜರ್ ಹನುಮಂತಪ್ಪ ಗಾರ್ಡನಿಗೆ ಗುರುಗುಟ್ಟಿದರು.
ಅವರಿಗೆ ನಿಧಾನಕ್ಕೆ ಮಂಡೆ ಬಿಸಿಯೇರುತ್ತಿತ್ತು. ತನ್ನ ರೇಂಜಿನಲ್ಲಿ ಇಷ್ಟೊಂದು ಧೈರ್ಯದಿಂದ
ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರಲ್ಲ, ಮರ ಕಡಿದು ನಾಟಾ ಕೊಯ್ದಿದ್ದರೆ ಒಂದು
ಲೆಕ್ಕ. ಗಾಂಜಾ ಬೆಳಿತಿದ್ದಾರಲ್ಲ! ಏನು ಹುಡುಗಾಟಾನಾ? ಒಂದೆರಡು ಗ್ರಾಂ ಗಾಂಜಾ ಸಿಕ್ಕಿದ್ರೇ
ಭರೋಬ್ಬರಿ ಕೇಸು ಬೀಳತ್ತೆ, ಅಂಥದರಲ್ಲಿ ಕೋಟಿಗಟ್ಟಲೇ ರೂಪಾಯಿ ಬೆಲೆಯ ಗಾಂಜಾ ಕದ್ದು
ಬೆಳೀತಿದಾರೆ ಅಂದ್ರೇ! ತನ್ನ ಕಾಲ ಕೆಳಗೇ ಇಂಥ ಕೆಲಸ ನಡೆದ್ರೂ ಗೊತ್ತಾಗ್ಲಿಲ್ಲ. ಇದು ಖಂಡಿತ
ತನ್ನ ತಲೆಗೆ ಬರ್ತಿತ್ತು ಎಂದು ಹನುಮಂತಪ್ಪ ಒಳಗೊಳಗೇ ಕಂಗಾಲಾಗಿದ್ದರು. ಫಾರೆಸ್ಟರನಿಗೆ, ಈ
ಏರಿಯಾದ ಗಾರ್ಡನಿಗೆ ಬೈಯೋದಲ್ಲ, ನಾಲ್ಕು ಬಾರಿಸಬೇಕು ಎನ್ನುವಷ್ಟು ಕೋಪ ಬಂದರೂ
ಇದು ಸಂದರ್ಭವಲ್ಲ ಎಂದು ಆತ ಸುಮ್ಮನಾದರು. ತನ್ನ ಕೆಲಸದ ಮೇಲಿನ ನಿರ್ಲಕ್ಷ, ಸಿಬ್ಬಂದಿಗಳ
ಒಳಹೊಡೆತ ಪತ್ರಿಕೆಯವರ ಎದುರು ಹೊರಬಿದ್ದು ಮರ್ಯಾದೆ ಹರಾಜಾಯ್ತಲ್ಲ ಎನ್ನಿಸಿದರೂ
„ಎಲ್ಲಾದರೂ ಇವನೊಬ್ಬನೇ ಬಂದು ನಾಳೆ ಪೇಪರಿನಲ್ಲಿ ವರದಿ ಮಾಡಿದ್ದರೆ ನನ್ನ ತಲೆ ಹಾರ್ತಿತ್ತು.
ಗ್ರಹಗತಿ ಸರಿಯಿತ್ತು, ಬಚಾವಾದೆ‟ ಅಂದುಕೊಂಡರು.
ಒಳ ನುಗ್ಗುತ್ತಿದ್ದಂತೇ “ ಹೊಡೆಯೋ ಒಂದು ಈಡು ” ಎಂದು ರೇಂಜರ್ ಕೂಗುತ್ತಿದ್ದಂತೇ
ಫಾರೆಸ್ಟರ್ ಕೈಯಲ್ಲಿದ್ದ ಕೋವಿಯಿಂದ ಆಕಾಶಕ್ಕೆ ಗುಂಡು ಹಾರಿಸಿದ. ಒಂದು ಕ್ಷಣ „ಢಂ‟ ಎನ್ನುವ
ಆ ಆಸ್ಪೋಟ ಆ ಕಣಿವೆಯಲ್ಲಿ ಎದುರಿನ ಕಾಡಿಗೆ ಅಪ್ಪಳಿಸಿ ಮಾರ್ದನಿಸಿತು. ದೂರದಲ್ಲಿ ಕೆಳಗಿನ
ಕಣಿವೆಯಲ್ಲಿದ್ದ ನಾಲ್ಕಾರು ಮಂದಿ ದೈತ್ಯ ದೇಹಿಗಳು ಅತ್ತಕಡೆಯಿಂದ ಕಾಡು ಬಿದ್ದು
ಓಡಿಹೋಗುತ್ತಿದ್ದುದು ಕಾಣಿಸಿತು.
ಇದ್ದವರು ಗಿರಿಧರನು ಸೇರಿದಂತೆ ಎಂಟು, ಹತ್ತು ಮಂದಿಯಾದರೂ ಐವತ್ತು ಮಂದಿಯ ಗೌಜಿ
ಎಬ್ಬಿಸಿದರು. ಗಾಂಜಾ ಗ್ಯಾಂಗನವರು ಇವರು ಬಹಳ ಜನ ಇದಾರೆ ಅಂದುಕೊಳ್ಳಲಿ ಎಂದು
ಫಾರೆಸ್ಟರ್, ಗಾರ್ಡ ಎಲ್ಲರೂ ಕಾಡಿನತ್ತ ಮುಖ ಮಾಡಿ „ಆ ಕಡೆ ಬಾ, ಈ ಕಡೆ ಓಡು‟ ಎಂದೆಲ್ಲ
ಹಂದಿ ಬೇಟೆಗೆ ಬಂದವರ ಥರ ಬೊಬ್ಬೆ ಹೊಡೆದರು. ಗಾಂಜಾ ಗ್ಯಾಂಗಿನವರು ಧೈರ್ಯ ಮಾಡಿ
ತಿರುಗಿ ಬಿದ್ದರೆ ಇಲ್ಲಿದ್ವವರೆಲ್ಲ ಕಾಲಿಗೆ ಬುದ್ದಿ ಹೇಳುವವರೇ ಆದರೂ ಏಕಾಏಕಿ ಹೀಗೇ ನುಗ್ಗಿದ
ರಭಸಕ್ಕೆ ಎಲ್ಲಿ ಮಿಲಿಟ್ರಿ ಪೋರ್ಸೆ ಬಂತೇನೋ ಎಂದು ಅವರೆಲ್ಲ ಕಂಬಿ ಕಿತ್ತಿದ್ದರು.
ಆ ಕಣಿವೆಯ ಎರಡೂ ಪಾಶ್ರ್ವದ ನಾಲ್ಕಾರು ಎಕರೆ ಬಯಲಿನಲ್ಲಿ ಆಳೆತ್ತರದ ಗಾಂಜಾ ಗಿಡಗಳು
ಬೆಳೆದು ನಿಂತಿದ್ದವು. ನಿರ್ಧಿಷ್ಠ ಅಂತರದಲ್ಲಿ ನೆಟ್ಟು ಬೆಳೆಸಿದ್ದ ಗಿಡಗಳು ಸೊಂಪಾಗಿ ಮಾರಗಲ
ಹರಡಿಕೊಂಡಿದ್ದವು. ಕಡು ಹಸುರಿನ ಎಲೆಗಳ ಆ ಗಾಂಜಾ ಗಿಡಗಳಲ್ಲಿ ಚೂಪನೆಯ ಮೊಗ್ಗುಗಳು
ಗೊಂಚಲು, ಗೊಂಚಲಾಗಿ ಜೋತು ಬಿದ್ದಿದ್ದವು. ಅಲ್ಲೆಲ್ಲ ತಲೆ ತಿರುಗಿಸುವ ರೀತಿಯ ಒಂದು
ರೀತಿಯ ಕಡು ಘಾಟಿನ ವಾಸನೆ ದಟ್ಟವಾಗಿ ಹರಡಿಕೊಂಡಿತ್ತು.
ಏನೂ ಅಪಾಯವಿಲ್ಲ ಅನ್ನಿಸಿದಾಗ ಅವರೆಲ್ಲ ಗಾಂಜಾ ಬೆಳೆದಿದ್ದ ಈಡೀ ಬಯಲನ್ನು ಸುತ್ತಾಡಿದರು.
ಕಣಿವೆಯ ತಳಭಾಗದಲ್ಲಿ ಚಿಕ್ಕದೊಂದು ಹಳ್ಳ ಹರಿದಿದ್ದು ಅದಕ್ಕೆ ಒಡ್ಡು ಕಟ್ಟಿ ನೀರನ್ನು ಗಿಡಗಳಿಗೆ
ಹನಿಸುವ ವ್ಯವಸ್ಥೆ ಮಾಡಿಕೊಂಡಿದ್ದರು. ಪ್ಲಾಸ್ಟಿಕ್ ಹೊದೆಸಿದ್ದ ಟೆಂಟಿನಲ್ಲಿ ಎರಡು ಮೂರು ಚೀಲ
ಅಕ್ಕಿ, ಅದು, ಇದೂ ಸಾಮಾನು ಹರಡಿಕೊಂಡಿತ್ತು. ಒಲೆಯ ಮೇಲೆ ಅರ್ಧ ಖಾಲಿಯಾಗಿದ್ದ
ಅನ್ನದ ಪಾತ್ರೆಯಿತ್ತು. ಅಲ್ಲಿದ್ದವರೆಲ್ಲ ಓಡಿಹೋಗಿದ್ದು ಸ್ಪಷ್ಟವಾಗಿತ್ತು.
ಗಿರಿಧರ ಬಳಿಯಿದ್ದ ಕ್ಯಾಮರಾದಿಂದ ಸಾಕಷ್ಟು ಫೋಟೋ ತೆಗೆದುಕೊಂಡು, ಒಂದಿಷ್ಟು ನೋಟ್ಸ
ಬರೆದುಕೊಂಡ. ರೇಂಜರ್ ಹನುಮಂತಪ್ಪ ಅಲ್ಲಿನ ಘಾಟು ವಾಸನೆಗಿಂತ ಹೆಚ್ಚಾಗಿ ಅಸಂಖ್ಯಾತ
ಗಾಂಜಾ ಗಿಡಗಳನ್ನು ಕಂಡೇ ತಲೆ ತಿರುಗಿ ಬೀಳುವಂತಾಗಿದ್ದರು. ಕಾಲ ಕೆಳಗಿನ ನೆಲವೇ
ಕುಸಿದುಬಿದ್ದಂಥ ಶಾಕ್ ಅವರಿಗಾಗಿತ್ತು. „ಇದೆಲ್ಲ ಪೇಪರಲ್ಲಿ ಫೋಟೊ ಸೈತ ಬಂದಿದ್ರೆ ನಾನು
ಸತ್ತು ಹೋಗ್ತಿದ್ದೆ‟ ಎಂದು ಮನಸ್ಸಿನಲ್ಲೇ ಅಂದುಕೊಂಡರು.
“ ಸೀದಾ ಜೀಪ್ ತಗೊಂಡು ಹೋಗಿ ಗೋಟನಕಾರು ಬಳಿ ಸೇತುವೆ ಕಟ್ತಿದಾರಲ್ಲ. ಆ ಮೇಸ್ತ್ರಿ
ಬಳಿ ನಾನು ಹೇಳಿದೆ ಅಂತ ಅವರ ಟಿಪ್ಪರ್ ತಗೊಂಡು ಅಲ್ಲಿ ಕೆಲಸ ಮಾಡೋರನ್ನ ಕರ್ಕೊಂಡು
ಬಾ ” ಎಂದು ಫಾರೆಸ್ಟರನನ್ನು ಅಟ್ಟಿದ.
15
ನಿಧಾನಕ್ಕೆ ಬಿಸಿಲು ಇಳಿಯುತ್ತಿತ್ತು. ಆ ಕಗ್ಗಾಡಿನ ಬುಡದಲ್ಲಿ ಕತ್ತಲು ಆವರಿಸಿಕೊಳ್ಳುತ್ತ ಬಂದಂತೆ
ಅಲ್ಲಲ್ಲಿ ಜೀರುಂಡೆಗಳ ಅರಚಾಟ ಆರಂಭಗೊಂಡಿತ್ತು. ಕಾಡು ಕೋಳಿಗಳ ಕೂಗಿನ ನಡುವೆ
ದೂರದಲ್ಲೆಲ್ಲೋ ನವಿಲು ಕೂಗಿದ್ದಕ್ಕೆ ಹೆಪ್ಪುಗೊಂಡಿದ್ದ ಮೌನ ಒಮ್ಮೆ ಕದಡಿತು. ಬೆಳಿಗ್ಗೆ ಬಂದ
ಕಾಲುದಾರಿಯಲ್ಲಿ ಗಿರಿಧರ, ಶಂಕರಶೆಟ್ಟಿ ಗಡಿಬಿಡಿಯಿಂದ ವಾಪಸ್ಸಾಗುತ್ತಿದ್ದರು. ಆತಂಕ, ಭಯ
ಅವರಿಬ್ಬರನ್ನೂ ಆದಷ್ಟು ಬೇಗ ಹೆನ್ನೆ ತಲುಪಿದರೆ ಸಾಕು ಎನ್ನುವ ಅನಿಸಿಕೆ ಹುಟ್ಟಿಸಿತ್ತು.
ಹೋಗುತ್ತಿದ್ದವರು ಆ ಕಾಲುದಾರಿ ಒಂದೆಡೆ ಕವಲಾಗುವಾಗ ಯಾವುದರಲ್ಲಿ ಹೋಗುವದು?
ಎನ್ನುವ ಯೋಚನೆಗೆ ಬಿದ್ದರು. ಅಲ್ಲಿ ಆಯ್ಕೆಯ ಪ್ರಶ್ನೆಯೇ ಇರಲಿಲ್ಲ. ಸರಿಯಾದುದನ್ನೇ
ಆಯ್ದುಕೊಳ್ಳಬೇಕಿತ್ತು. ಒಂದಿಷ್ಟು ದೂರ ಹೋದವರಿಗೆ ತಾವು ಬಂದ ದಾರಿ ಅಲ್ಲ ಎಂದು ಅನ್ನಿಸಿ
ವಾಪಸ್ಸು ಬಂದು ಮತ್ತೊಂದು ದಾರಿ ಹಿಡಿದರು. ಛೇ, ಒಂದಿಷ್ಟು ಸಮಯ ಹಾಳಾಯ್ತಲ್ಲ ಎನ್ನಿಸಿ
ಭೇಜಾರೆನ್ನಿಸಿತು.
“ಇದನ್ನು ಬಿಟ್ಟು ಹೋಗುವಂತಿಲ್ಲ ಮಾರಾಯ್ರೇ. ಕಿತ್ತು ಹಾಕಬೇಕು. ಕಿತ್ತದ್ದನ್ನು ನಾಳೆ
ಕೋರ್ಟ ಎದುರು ಹಾಜರ ಮಾಡಬೇಕು. ಇನ್ನು ನಾಲ್ಕು ದಿನ ಇದೇ ರಾಮಾಯಣ ಅಂತ
ಕಾಣ್ತದೆ” ಎಂದು ಗಿರಿಧರನ ಬಳಿ ಅಲವತ್ತುಕೊಳ್ಳತೊಡಗಿದ್ದ ರೇಂಜರ್ ಹನುಮಂತಪ್ಪ “ ನೀವು
ಕೋಗಾರಿಗೆ ನಮ್ಮ ಜೀಪ್‍ನಲ್ಲಿ ಹೋಗಿ, ಆ ಕಾಡ್ನಲ್ಲಿ ಇಬ್ಬರೇ ಹೋಗೋದು ಬೇಡ ” ಎಂದರು.
ಗಿರಿಧರನ ಬೈಕ್ ಹೆನ್ನೆಯಲ್ಲಿತ್ತಲ್ಲ. “ ಕೋಗಾರಿಗೆ ಹೋಗಿ, ಅಲ್ಲಿಂದ ಮತ್ತೆ ಹೆನ್ನೆಗೆ ಬಂದು
ಬೈಕ್ ತಗೊಂಡು ಹೋಗೋದು ಅಂದ್ರೆ ಎರಡು ದಿನಾ ಹಿಡಿಯತ್ತೆ. ಏನಾದ್ರಾಗ್ಲಿ, ಬಂದ ದಾರಿಲೇ
ಹೋಗ್ತೀವಿ” ಎಂದು ಗಿರಿಧರ, ಶಂಕರಶೆಟ್ಟಿ ಹೊರಟಿದ್ದರು.
ಇಬ್ಬರೇ ಸಂಜೆಯ ಹೊತ್ತಿನಲ್ಲಿ ಗುರುತು, ಪರಿಚಯವಿಲ್ಲದ ಕಾಡಿನ ದಾರಿಯಲ್ಲಿ ಹೋಗುವದಕ್ಕೆ
ಗೋವಿಂದ ಹೆಗಡೆ ಸುತಾರಾಂ ಒಪ್ಪಲೇ ಇಲ್ಲ. „ನಿಮ್ಮನ್ನ ಹೀಗೇ ಕಳಿಸಿ ನಾವಿಲ್ಲಿ ನಿದ್ದೆ ಇಲ್ಲದೇ
ಒದ್ದಾಡಬೇಕಾದೀತು. ಏನಾದ್ರೂ ಆದ್ರೆ ಎಂಥ ಮಾಡೋದು?‟ ಎಂದು ಗೊಣಗುಟ್ಟಿದರು. ಎಷ್ಟೇ
ಹೇಳಿದರೂ ಹೋಗುವದೇ ಎನ್ನುತ್ತಿದ್ದ ಇವರನ್ನು ಹೆನ್ನೆಯವರೆಗೆ ತಲುಪಿಸಲು ಎಷ್ಟೇ ಹೇಳಿದರೂ
ಅದಕ್ಕೆ ಅಲ್ಲಿದ್ದ ಯಾರೂ ಸಿದ್ಧರಿರಲಿಲ್ಲ. ಎಲ್ಲರಲ್ಲೂ ಸಣ್ಣನೆಯ ಭಯ. ಯಾರಾದರೂ
ಬರಬಹುದೇನೋ ಎನ್ನುವ ಸಣ್ಣ ಆಶೆ ಶಂಕರಶೆಟ್ಟಿ, ಗಿರಿಧರ ಇಬ್ಬರಲ್ಲೂ ಇತ್ತು. ಯಾರಾದರೂ
ಬಂದಾರೆನೋ ಎಂದು ಕಾದು ಸಾಕಾಗಿ „ನಾವಿಬ್ಬರೇ ಹೋಗ್ತಿವೀ‟ ಎಂದು ಕೆಟ್ಟ ಧೈರ್ಯ ಮಾಡಿ
ಹೊರಟಿದ್ದರು.
ಶಂಕರಶೆಟ್ಟಿ ಗಾಡವಾದ ಯೋಚನೆಗೆ ಬಿದ್ದಿದ್ದ. ಅವನಿಗೆ ಬೆಳಗಿನಿಂದ ಕಂಡ ಘಟನೆಗಳು ಭಯಂಕರ
ಹೆದರಿಕೆಯನ್ನು ಹುಟ್ಟಿಸಿತ್ತು. ಯಾಕಾದರೂ ಗೋವಿಂದ ಹೆಗಡೆ ಮುಲಾಜಿಗೆ ಬಿದ್ದು ಈ
ಉಪದ್ವಾಪಕ್ಕೆ ಬಂದೆನೋ? ಏನಾದರೂ ಹೆಚ್ಚುಕಮ್ಮಿ ಆದರೆ ಏನು ಗತಿ? ಎನ್ನುವ ಚಿಂತೆ
ಆವರಿಸಿಕೊಂಡಿತ್ತು. ಗಾಂಜಾ ಗ್ಯಾಂಗಿನವರು ಎಲ್ಲಿಯಾದರೂ ಅಡಗಿಕೊಂಡು ನಾವಿಬ್ಬರೇ
ಹೊರಟದ್ದನ್ನು ಕಂಡು ಬೆನ್ನು ಹತ್ತಿ ಬಂದರೆ? ಎನ್ನುವ ಸಣ್ಣ ಅನಿಸಿಕೆ ಹಠಾತ್ತಾಗಿ ಅವನ
ಮನಸ್ಸಿನಲ್ಲಿ ಬಂತು. ಅವನ ಜಂಘಾಬಲ ಉಡುಗಿದಂತಾಗಿ ನಡೆಯುವದೂ ಕಷ್ಟ ಎನ್ನಿಸತೊಡಗಿತ್ತು.
ಅದನ್ನೇ ಸಣ್ಣನೆಯ ಧ್ವನಿಯಲ್ಲಿ ಗಿರಿಧರನಿಗೆ ಹೇಳಿದ.
ವಾಸ್ತವಿಕವಾಗಿ ಗಿರಿಧರನೂ ಅದನ್ನೇ ಯೋಚಿಸುತ್ತಿದ್ದ. ಗಾಂಜಾ ಗ್ಯಾಂಗಿನ ಕ್ರಿಮಿನಲ್‍ಗಳು
ಓಡಿಹೋಗಿದ್ದರೂ ಕಾಡಿನಲ್ಲಿ ಅಡಗಿ ತಮ್ಮ ಚಲನವಲನವನ್ನು ಗಮನಿಸುತ್ತಾರೆ ಎನ್ನುವದು
ಖಚಿತವಿತ್ತು. ಅವರು ಒಂದೊಮ್ಮೆ ಹಿಂಬಾಲಿಸಿ ಬಂದರೆ ಅವರನ್ನು ಎದುರಿಸುವ ಯಾವ ಬಲವೂ
ತಮ್ಮ ಬಳಿ ಇಲ್ಲ. ಕ್ಯಾಮರಾ, ಪೆನ್ನು ಬಿಟ್ಟರೆ ಒಂದು ಕತ್ತಿ ಹಿಡಿಯೂ ಇಲ್ಲ. ಗಾಂಜಾ
ಗ್ಯಾಂಗಿನವರಿರಲಿ, ಸಣ್ಣದೊಂದು ನರಿ ಬಂದರೂ ಎದುರಿಸುವ ಸಾಮಗ್ರಿ ಇಲ್ಲ. ತಾವೆಂಥ
ಮುಠ್ಠಾಳರು! ಇಂಥÀ ಕಗ್ಗಾಡಿಗೆ ಬರುವಾಗ ಕೈಬೀಸಿಕೊಂಡು ಬಂದಿದ್ದೇವೆ. ಅಲ್ಲಿ ಹೆಗಡೆ
ಬಳಿಯಾದರೂ ಒಂದು ಕತ್ತಿ ಇಸಿದುಕೊಂಡು ಬರಬಹುದಿತ್ತು ಎಂದು ತಮ್ಮ ಅವಿವೇಕಿತನಕ್ಕೆ
ಹಳಿದುಕೊಳ್ಳುತ್ತಿದ್ದ. ಈ ಕಾಡಿನಲ್ಲಿ ಕ್ರೂರ ಪ್ರಾಣಿಗಳಿವೆ ಎನ್ನುವದು ಒಂದು ಭಯವಾದರೆ,
ಗಾಂಜಾ ಗ್ಯಾಂಗಿನವರು ಕೊಲೆಗಡುಕರು ಎನ್ನುವದು ಇನ್ನೊಂದು. ಒಟ್ಟಿನಲ್ಲಿ ಭಾರೀ ವಿಪತ್ತಿನ
ಸನ್ನಿವೇಶದಲ್ಲಿ ಸಿಲುಕಿರುವದಂತೂ ಅವರಿಬ್ಬರಿಗೂ ಧೃಡವಾಗಿತ್ತು. ಹಾಗಾಗಿ ಪ್ರಾಣಿ ಬಂದರೂ
ಸರಿ, ಗ್ಯಾಂಗಿನವರು ಬಂದರೂ ಸರಿ, ಎರಡೂ ಒಂದೇ ಅಂದುಕೊಂಡ.
ಕ್ಷಣ ಕ್ಷಣಕ್ಕೂ ಅವರಿಬ್ಬರಲ್ಲೂ ಭಯ ಹೆಚ್ಚುತ್ತಿತ್ತು. ಎದುರಾಗಬಹುದಾದ ಅಪಾಯದಿಂದ
ಪಾರಾಗುವ ಉಪಾಯ ಹೇಗೆ ಎಂದು ಅವರಿಬ್ಬರ ಮನಸ್ಸು ಲೆಕ್ಕ ಹಾಕುತ್ತಿತ್ತು. ನಡೆದು, ನಡೆದು
ಕಾಲುಗಳು ಸೋಲುತ್ತಿದ್ದವು. ಬೆಳಗಿನಿಂದ ನಡೆದದ್ದಲ್ಲದೇ, ಹೊಟ್ಟೆಗೆ ಏನೂ ಇಲ್ಲದೇ ದೇಹ
ನಿತ್ರಾಣವಾಗಿತ್ತು. ಮನಸ್ಸಿನ ಭಯ, ದೇಹದ ಸುಸ್ತು ಅವರನ್ನು ಸೋಲಿಸುತ್ತಿತ್ತು.
ಕಾಡು ಮುಗಿದು ಘಟ್ಟ ಆರಂಭವಾಗಿತ್ತು. ಕಡಿದಾದ ಬೆಟ್ಟವನ್ನು ಏರುವಂತೆ ಆ ಕಚ್ಚಾ
ಮೆಟ್ಟಿಲುಗಳನ್ನು ಹತ್ತಬೇಕಿತ್ತು. ಅವಸರದಲ್ಲಿ ಓಡುತ್ತ ಬಂದಂತೆ ಬಂದ ಗಿರಿಧರ, ಶಂಕರಶೆಟ್ಟಿಗೆ
ಉಸಿರು ಹಿಡಿಯುತ್ತಿತ್ತು. ಯಾವುದೋ ಭೂತ ಬೆನ್ನು ಹತ್ತಿದ್ದು ಅದರಿಂದ ತಪ್ಪಿಸಿಕೊಳ್ಳುವವರಂತೆ
ಗುಡ್ಡವೇರತೊಡಗಿದರು. ಮೇಲ ಮೇಲಕ್ಕೆ ಬಂದಂತೆಲ್ಲ ಮತ್ತಷ್ಟು ಶ್ವಾಸ ಹಿಡಿಯತೊಡಗಿತು.
ಉಸಿರಾಡುವದು ಸಾಧ್ಯವೇ ಇಲ್ಲ ಎನ್ನುವಂತಾಗಿತ್ತು. ತಲೆ ಸುತ್ತತೊಡಗಿತ್ತು. ಈಡೀ ಶರೀರದ
ಶಕ್ತಿಯೇ ಸೋರಿಹೋದಂತಾಗಿತ್ತು.
ಘಟ್ಟವನ್ನ ಹತ್ತಿಕೊಂಡರೆ ನಾವು ಬದುಕಿದಂತೆ ಎನ್ನುವ ಕುಟುಕು ಭರವಸೆಯಲ್ಲಿ ಅವರಿಬ್ಬರೂ
ಕಾಲೆಳೆಯುತ್ತ, ಇದ್ದಬದ್ದ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಳ್ಳುತ್ತ ಘಟ್ಟವೇರುತ್ತಿದ್ದರು. ಆ ಕ್ಷಣದಲ್ಲಿ
ಬೆರಳ ತುದಿಯಿಂದ ಮುಟ್ಟಿದರೂ ಅವರು ಕೆಳಗೆ ಬೀಳುವಷ್ಟು ನಿತ್ರಾಣರಾಗಿದ್ದರು. ನಿಧಾನಕ್ಕೆ
ಕತ್ತಲು ಆವರಿಸಿಕೊಳ್ಳುತ್ತಿತ್ತು. ಮೊಟ್ಟುಗಳ, ಮರಗಳ ಬುಡದಲ್ಲಿದ್ದ ಕತ್ತಲು ಅಲ್ಲಿಂದ ಮೈ
ಕೊಡವಿ ಏಳುತ್ತಿತ್ತು. ಹಕ್ಕಿಗಳ ಕಚಪಚ ಕಲರವ ಮೊರೆಯತೊಡಗಿತ್ತು. ಘಟ್ಟವೇರುತ್ತ
ಸುಧಾರಿಸಿಕೊಳ್ಳಲು ನಿಂತ ಗಿರಿಧರ ತಿರುಗಿ ಕೆಳಗಿನ ಪ್ರಪಾತ ನೋಡಿದ.
ಆ ಸ್ಥಿತಿಯಲ್ಲೂ ಅವನಿಗೆ ಎದುರಿನ ಪ್ರಕೃತಿಯ ಸೌಂದರ್ಯ ಮನಸ್ಸನ್ನ ಸೆಳೆಯಿತು. ಬೆಳಗಿನ
ಬಿಸಿಲಿನಲ್ಲಿ ತೊಯ್ದಿದ್ದ ಕಾಡು ಈಗ ನಸುಗತ್ತಲೆಯಲ್ಲಿ ಇನ್ನಷ್ಟು ಕಡುಕಪ್ಪಾಗಿ ಕಾಣುತ್ತಿತ್ತು.
ನಿಗೂಢತೆಯನ್ನು ಬಚ್ಚಿಟ್ಟುಕೊಂಡ ಆ ಸಸ್ಯಸಮೂಹ ತನ್ನ ಒಡಲಲ್ಲಿ ನಡೆಯುವ ಎಲ್ಲವನ್ನೂ
ನೋಡಿಯೂ ನೋಡದಂತೆ ಮೌನವಾಗಿರುವಂತೆ ಭಾಸವಾಯಿತು. ತನ್ನ ಮೇಲೆ ಕವಿದುಕೊಂಡ
ಕತ್ತಲೆಯಲ್ಲಿ ಅದೆಷ್ಟು ರಹಸ್ಯಗಳನ್ನು ಈ ಕಾಡು ಬಚ್ಚಿಟ್ಟುಕೊಂಡಿದೆಯೋ ಅನ್ನಿಸಿತು.
ಪಶ್ಚಿಮದ ಅಂಚಿನಲ್ಲಿ ಸೂರ್ಯರಶ್ಮಿ ಮಂಕಾಗಿ ಕೊನೆಯ ಬೆಳಕೂ ಮರೆಯಾಗುತ್ತಿತ್ತು. ಗಾಳಿ
ಮತ್ತಷ್ಟು ಅಬ್ಬರದಿಂದ ಬೀಸುತ್ತಿತ್ತು. ಗಾಳಿಯನ್ನು ಒಳಗೆಳೆದುಕೊಳ್ಳಲಾಗದಷ್ಟು ತ್ರಾಣವಿಲ್ಲದ
ಗಿರಿಧರ, ಶಂಕರಶೆಟ್ಟಿಗೆ ಘಟ್ಟವೇರುವ ಭರದಲ್ಲಿ ದಾರಿ ತಪ್ಪಿರುವ ಶಂಕೆ ಬಂತು. ಇಷ್ಟೊತ್ತಿಗೆ ಘಟ್ಟ
ಹತ್ತಿ ಮುಗಿಯಬೇಕಿತ್ತು. ಎಷ್ಟು ಏರಿದರೂ ಮುಗಿಯುತ್ತಲೇ ಇಲ್ಲ. ತಮಗಾದ ಅನುಮಾನವನ್ನು
ಪರಸ್ಪರ ಇಬ್ಬರೂ ಹಂಚಿಕೊಂಡರು.
ಅಷ್ಟಾಗುತ್ತಿದ್ದಂತೇ ಶಂಕರಶೆಟ್ಟಿ ಕುಸಿದು ಕುಳಿತೇ ಬಿಟ್ಟ. ಮೊದಲೇ ಏದುಸಿರು ಬಿಡುತ್ತಿದ್ದವ ಈಗ
ಅದರ ಜೊತೆಗೆ ಬಿಕ್ಕಳಿಸತೊಡಗಿದ. ಕಾಡಿನ ನಡುವೆ ದಾರಿ ತಪ್ಪಿದ್ದು ಒಂದೆಡೆಯಾದರೆ ಗಾಂಜಾ
ಗ್ಯಾಂಗ್‍ನ , ಕಾಡುಪ್ರಾಣಿಗಳ ಭಯ ಅವನನ್ನು ಕಾಡತೊಡಗಿತ್ತು. ಒಮ್ಮೆಲೆ ಮನೆ, ಮಕ್ಕಳ
ನೆನಪಾಗಿ ಗೋಳೋ ಎಂದು ಅಳತೊಡಗಿದ. ಆಗಿರುವ ದಣಿವು, ಒದಗಬಹುದಾದ ಅಪಾಯಗಳ
ಭೀತಿಯ ನಡುವೆಯೂ ಗಿರಿಧರ ಭಾರೀ ಸಂಧಿಗ್ದಕ್ಕೆ ಸಿಲುಕಿದ್ದ. ಹೋಗಬೇಕಾದ ದಾರಿ ತಪ್ಪಿದ್ದರೆ
ಸರಿ ದಾರಿಯನ್ನ ಹುಡುಕಬೇಕಿತ್ತು. ಬದುಕುವ ಆಸೆಯನ್ನ ಕಳೆದುಕೊಂಡಂತಿದ್ದ ಶಂಕರಶೆಟ್ಟಿಯನ್ನು
ಸುಧಾರಿಸಬೇಕಿತ್ತು. ಇತ್ತ ಬುಡದಲ್ಲೂ ಇಲ್ಲದ, ಅತ್ತ ಪೂರ್ತಿಯಾಗಿ ಮೇಲೂ ತಲುಪದ ಅತಂತ್ರ
ಸ್ಥಿತಿಯಲ್ಲಿ ಒಮ್ಮೆಲೇ ಮೈ,ಮನಸ್ಸುಗಳ ಮೇಲೆ ಎರಗಿದ ಒತ್ತಡದಿಂದ ಗಿರಿಧರ ತಾನೂ
ವಿಹ್ವಲನಾಗಿ ಶಂಕರಶೆಟ್ಟಿಯ ಪಕ್ಕ ಕುಸಿದು ಕುಳಿತ.
16
ಅದೆಷ್ಟೋ ಹೊತ್ತಿನ ತನಕ ಗಿರಿಧರ ಮತ್ತು ಶಂಕರಶೆಟ್ಟಿ ಆ ಘಟ್ಟದ ಮಧ್ಯಭಾಗದ ಮೆಟ್ಟಿಲುಗಳ
ಮೇಲೆ ಕುಕ್ಕರಿಸಿಕೊಂಡು ಕೂತಿದ್ದರು. ಹೇಗಿದ್ದರೂ ಬೆಳಕು ಮೂಡುವ ತನಕ ಅಲ್ಲಿಂದ
ಕದಲುವಂತೆಯೇ ಇಲ್ಲವಲ್ಲ. ಮೊದಲೇ ದಾರಿ ತಪ್ಪಿರುವ ಶಂಕೆ, ಹೋಗುವದಾದರೂ ಎಲ್ಲಿಗೆ?
ಹಠ ಹಿಡಿದು ಹತ್ತಿ ಹೋಗುವದಕ್ಕಿಂತ ನಸುಕಿನ ತನಕ ಇಲ್ಲೇ ಕೂತಿರುವದೇ ವಾಸಿ ಎನ್ನುವ
ತೀರ್ಮಾನದಲ್ಲಿ ಆ ಮೆಟ್ಟಿಲುಗಳ ಮೇಲೆ ಬೆಟ್ಟದ ದರೆಗೆ ಬೆನ್ನು ಒರಗಿಸಿ ಕುಳಿತುಬಿಟ್ಟರು.
ಬೆಳಗಿನಿಂದ ಆದ ಸುಸ್ತು, ಅಲ್ಲಿನ ತಣ್ಣಗಿನ ವಾತಾವರಣ ಅವರಿಬ್ಬರಿಗೂ ಅರೆ ಜೊಂಪು
ತಂದಿತ್ತು. ಹೊಟ್ಟೆಯಲ್ಲಿ ಚುರುಗುಡುತ್ತಿದ್ದ ಹಸಿವು, ಬಾಯಿ ಒಣಗಿಸುತ್ತಿದ್ದ ನೀರಡಿಕೆ ಅವರನ್ನು
ಮತ್ತಷ್ಟು ಹೈರಾಣವಾಗಿಸುತ್ತಿತ್ತು. ಶಂಕರಶೆಟ್ಟಿ ಅರೆ ಎಚ್ಚರದಲ್ಲಿ ಸಣ್ಣಗೆ ಕುಸುಗುಡುತ್ತಿದ್ದ.
ಗಿರಿಧರ ಮನಸ್ಸಿನಲ್ಲಿ ಕುದಿಯುತ್ತಿದ್ದ ಯೋಚನೆಗಳಿಂದಾಗಿ ಅತ್ತ ನಿದ್ರೆಯೂ ಬಾರದ, ಇತ್ತ
ಎಚ್ಚರವೂ ಇರದ ಅರೆ ಪ್ರಜ್ಞಾವಸ್ಥೆಯಲ್ಲಿ ಆವರೆಗೂ ಯೋಚಿಸಿರದ ರೀತಿಯಲ್ಲಿ ತನ್ನ ಬದುಕಿನ
ಆತ್ಮವಿಮರ್ಶೆಗೆ ತೊಡಗಿಕೊಂಡಿದ್ದ.
ಬೆಳಿಗಿನ ಬಿಸಿಲಿನಲ್ಲಿ ಫಳಫಳಿಸುತ್ತಿದ್ದ ಕೆಳಗಿನ ಗೊಂಡಾರಣ್ಯ ಈಗ ಕತ್ತಲಿನಲ್ಲಿ ಮಡುವಿನಲ್ಲಿ
ಮುಳುಗಿತ್ತು. ಆಕಾಶದ ನಕ್ಷತ್ರಗಳ ಬೆಳಕು ನೆಲಕ್ಕೆ ತಾಕದಂತೆ ಸಸ್ಯಸಮೂಹದ ಚಾವಣಿ ಮೇಲೆ
ಹೊದ್ದುಕೊಂಡಿತ್ತು. ಜೀರುಂಡೆ, ಕಾಡು ಜಿರಲೆ ಮುಂತಾದ ಅದೆಷ್ಟೋ ಕೀಟಗಳ ಕರ್ಕಶದೊಟ್ಟಿಗೆ
ಕಾಣದ ಹಕ್ಕಿ,ಪಕ್ಷಿಗಳ ಸ್ವರಗಳೇ ಸುತ್ತೆಲ್ಲ ನಿನಧಿಸುತ್ತಿತ್ತು. ಕೆಳಗಿನ ಕಾಡಿನಲ್ಲಿ ಒಮ್ಮೊಮ್ಮೆ
ಒಂದೊಂದು ದಿಕ್ಕಿನಲ್ಲಿ ಬೋರೆಂದು ಗಾಳಿ ಬೀಸುತ್ತಿತ್ತು. ಗುರುತಿಸಲಾಗದ ಹಕ್ಕಿಗಳ, ಪ್ರಾಣಿಗಳ
ಕೂಗು ಆ ಕಾಡಿನ ಆಳದಲ್ಲಿ ಆಗೊಮ್ಮೆ, ಈಗೊಮ್ಮೆ ಧ್ವನಿಸುತ್ತಿತ್ತು. ಈಡೀ ಕಾಡು ಕತ್ತಲಿನ
ಅಡಿಯಲ್ಲಿ ಚಲನಶೀಲವಾಗಿಯೇ ಇತ್ತು. ಶಂಕರಶೆಟ್ಟಿ, ಗಿರಿಧರ ಇಬ್ಬರೂ ವಾಚ್ ಕಟ್ಟುವ ರೂಡಿ
ಇಟ್ಟುಕೊಂಡಿರದ ಕಾರಣ ಸಮಯ ಎಷ್ಟಾಯಿತು ಎನ್ನುವದನ್ನೂ ತಿಳಿಯುವಂತಿರಲಿಲ್ಲ.
ಇದ್ದಕ್ಕಿದ್ದಂತೇ ಗಿರಿಧರ ಸಟ್ಟನೆ ಎಚ್ಚರಗೊಂಡ; ಅವನಿಗೆ ಅರಿವಿಲ್ಲದಂತೆ ಅವನ ಇಂದ್ರಿಯಗಳು
ಜಾಗೃತಗೊಂಡುಬಿಟ್ಟಿದ್ದವು. ಯಾವುದೋ ಅಪಾಯ ಹತ್ತಿರವಾಗುತ್ತಿದೆ ಎನ್ನುವ ಧಾವಂತ ಹೆಚ್ಚಾಗಿ
ಎದ್ದುನಿಂತ. ಕಾಡು ಹೇಗೆ ಸದಾ ಕಾಲ ಜಾಗೃತವಾಗಿರುತ್ತದೆ, ಅಲ್ಲಿನ ಪ್ರಾಣಿ, ಪಕ್ಷಿಗಳು
ಪ್ರತಿಕ್ಷಣದಲ್ಲೂ ಮುಂದೇನಾದೀತು ಎನ್ನುವ ಪ್ರತೀಕ್ಷೆಯಲ್ಲಿ, ಭಯದಲ್ಲಿ ಬದುಕುತ್ತವೆ ಎನ್ನುವದನ್ನು
ಓದಿದ್ದವನಿಗೆ ಅದು ಈಗ ಅನುಭವಕ್ಕೆ ಬರತೊಡಗಿತ್ತು.
ಮಂಪರಿನಲ್ಲಿದ್ದ ಕಣ್ಣುಗಳನ್ನು ಹೊಸಕುತ್ತ ಬೆಟ್ಟದ ಕೆಳÀಭಾಗದತ್ತ ನೋಡಿದವನಿಗೆ ಆ ಕಡುಗಪ್ಪಿನ
ಸಸ್ಯರಾಶಿಯ ಸಮೂಹದ ನಡುವೆ ಅದೆಷ್ಟೋ ದೂರದಲ್ಲಿ ಕ್ಷೀಣವಾದ ಬೆಳಕಿನ ಕೋಲುಗಳು
ಅತ್ತಿತ್ತ ಸರಿದಾಡುವಂತೆ ಕಂಡಿತು. ಒಮ್ಮೊಮ್ಮೆ ಕಾಣುತ್ತ, ಇನ್ನೊಮ್ಮೆ ಮರೆಯಾಗುತ್ತ ನಿಧಾನಕ್ಕೆ
ಬೆಟ್ಟದ ಬುಡಕ್ಕೆ ಬರುತ್ತಿದ್ದ ಎರಡು ಬೆಳಕಿನ ಬಿಂಬಗಳು ಇಡೀ ಕಾಡನ್ನು ಸೋಸುತ್ತಿರುವಂತೆ
ಭಾಸವಾಯಿತು. ನೋಡ ನೋಡುತ್ತಿರುವಂತೆ ಪ್ರಖರವಾಗುತ್ತಿದ್ದ ಬೆಳಕು ಹತ್ತಿರವಾಗುತ್ತಿದ್ದುದನ್ನು
ಸೂಚಿಸುತ್ತಿತ್ತು. ಯಾರೋ ಬೇಟೆಗಾಗಿ ಬಂದವರೇ? ಅಥವಾ ಹತ್ತಿರದ ಯಾವುದೋ ಊರಿಗೆ
ಹೊರಟವರೇ? ಎನ್ನುವ ಪ್ರಶ್ನೆಗಳ ನಡುವೆಯೇ ಇವರು ನಮ್ಮನ್ನು ಅರಸುತ್ತ ಬಂದ ಗಾಂಜಾ
ಗ್ಯಾಂಗ್‍ನವರು ಆಗಿರಬಾರದೇಕೆ? ಎಂದನ್ನಿಸಿದ್ದೇ ಗಿರಿಧರನ ಶರೀರ ಬಿಸಿಯಾಗಿಬಿಟ್ಟಿತು! ಈ
ಅಪರಾತ್ರಿಯಲ್ಲಿ ಬೇಟೆಗಾಗಲೀ, ಮತ್ತೊಂದು ಊರಿಗಾಗಲೀ ಹೋಗುವ ಧೈರ್ಯ ಮಾಡಿ ಯಾರೂ
ಬರಲಾರದ ಕಾಡು ಇದು. ಗಾಂಜಾ ಕಣಿವೆಯಿಂದ ಹೊರಟವರು ಹಾದಿ ತಪ್ಪಿ ಕಾಡಿನಲ್ಲಿ
ಎಲ್ಲಾದರೂ ಸಿಕ್ಕುಬೀಳುತ್ತಾರೆ ಎನ್ನುವ ಖಾತ್ರಿಯಿಂದ ನಮ್ಮ ಬೆನ್ನು ಹತ್ತಿ ಬಂದ ಗಾಂಜಾ ಗ್ಯಾಂಗ್
ಖದೀಮರೇ ಇವರು ಎನ್ನುವದು ಗಿರಿಧರನಿಗೆ ನಿಚ್ಛಳವಾಗಿಬಿಟ್ಟಿತು. ಇನ್ನೇನು? ಅವರು ನಾವು ಹತ್ತಿ
ಬಂದ ದಾರಿಯಲ್ಲೇ ಮೆಟ್ಟಿಲು ಹತ್ತಿ ಬಂದು ನಮ್ಮನ್ನು ಆಟಕಾಯಿಸಿಕೊಳ್ಳುತ್ತಾರೆ. ಇಲ್ಲಿ
ನೋಡಿದರೆ ಶಂಕರಶೆಟ್ಟಿ ಸೋತು ಮಲಗಿದ್ದಾನೆ. ಅವನನ್ನು ಎಬ್ಬಿಸಿ, ಏರು ಹಾದಿಯಲ್ಲಿ ಮೆಟ್ಟಿಲು
ಹತ್ತಿ ತಪ್ಪಿಸಿಕೊಳ್ಳುವದು ಹೇಗೆ? ದಾರಿ ತಪ್ಪಿರುವ ಶಂಕೆ ಬೇರೆ, ಸರಿದಾರಿಯನ್ನು ಈ ಕತ್ತಲೆಯಲ್ಲಿ
ಹುಡುಕುವದಾದರೂ ಹೇಗೆ? ಬೆನ್ನು ಹತ್ತಿ ಬಂದವರು ಒಬ್ಬಿಬ್ಬರಾದರೆ ಹೇಗೂ
ತಪ್ಪಿಸಿಕೊಳ್ಳಬಹುದು, ಎಷ್ಟು ಜನರಿದ್ದಾರೋ? ಬೆಳಕಿನ ಯಾವ ಸಾಧನವೂ ಇಲ್ಲದೇ
ಹೋಗುವದಾದರೂ ಯಾವ ಕಡೆ? ಒಂದಿಂಚು ಅತ್ತಿತ್ತ ಹೆಜ್ಜೆ ಇಟ್ಟರೂ ಆಳ ಪ್ರಪಾತಕ್ಕೆ ಬೀಳುವ
ಆ ದಾರಿಯಲ್ಲಿ ಇರುವ ಮಾರ್ಗ ಎರಡೇ! ಒಂದು ಕೆಳಕ್ಕೆ, ಇಲ್ಲಾ ಮೇಲಕ್ಕೆ. ಒಟ್ಟಿನಲ್ಲಿ ಸಾವು
ಅಥವಾ ಬದುಕು ಮುಂದಿನ ಕೆಲವೇ ಕ್ಷಣದಲ್ಲಿ ನಿರ್ಧಾರವಾಗುತ್ತದೆ ಎನ್ನಿಸಿಬಿಟ್ಟಿತು.
ಒಂದೇ ಸಮನೆ ತನ್ನ ಅಲುಗಾಡಿಸುತ್ತಿರುವ ಪರಿಗೆ ಶಂಕರಶೆಟ್ಟಿ ಕಣ್ತೆರೆದು ನೋಡಿದನಾದರೂ
ಸುತ್ತಲಿನ ನಸುಗತ್ತಲೆಯಲ್ಲಿ ಅವನಿಗೆ ತಾನೆಲ್ಲಿದ್ದೇನೆ ಎನ್ನುವದು ಅರೆಕ್ಷಣ ತೋಚಲೇ ಇಲ್ಲ.
ಹಿಂದಿನ ಘಟನೆಗಳೆಲ್ಲ ನೆನಪಿಗೆ ಬಂದಿದ್ದೇ ಮತ್ತೆ ಗೋಳು ಕರೆಯಲು ಶುರು ಹಚ್ಚಿದ.
“ನೋಡು ಶಂಕರಶೆಟ್ಟಿ, ಗಾಂಜಾ ಗ್ಯಾಂಗ್‍ನವರು ಘಟ್ಟದ ಬುಡಕ್ಕೆ ಬಂದಿದಾರೆ. ಈಗ ನಾವು
ಇಲ್ಲಿಂದ ಬಚಾವಾಗಿ ಮೇಲಕ್ಕೆ ಹೋಗಿ ತಪ್ಪಿಸಿಕೊಳ್ಳಬೇಕು. ಸಾಯುವದೋ, ಬದುಕುವದೋ
ನಮ್ಮ ಕೈಯಲ್ಲಿಲ್ಲ. ನಸೀಬಿದ್ದರೆ ಬದುಕ್ತೀವಿ. ನೀನು ಅಳ್ತಾ ಕೂತರೆ ಆಗೋದಿಲ್ಲ. ಆದಷ್ಟು ಬೇಗ
ಇಲ್ಲಿಂದ ಪಾರಾಗಬೇಕು” ಎಂದು ಸಿಟ್ಟಿನಿಂದ ಗದರಿದ.
ಅವನ ಕೋಪದ ಮಾತಿಗೋ ಅಥವಾ ಸಾವು ಹತ್ತಿರ ಬಂದ ಭಯಕ್ಕೋ ಶಂಕರಶೆಟ್ಟಿ
ಗಪ್‍ಚಿಪ್ಪಾದ.
ಶಂಕರಶೆಟ್ಟಿ ನಿಜಕ್ಕೂ ನಿರ್ಜೀವವಾಗಿಬಿಟ್ಟಿದ್ದ. ಸಂಜೆ ದಾರಿ ತಪ್ಪಿ ಘಟ್ಟದ ನಡುವಿನ ಬೆಟ್ಟದಲ್ಲಿ
ಕುಸಿದು ಕೂತ ಸಂದರ್ಭದಿಂದಲೇ ಆತ ಗಿರಿಧರನಿಗಿಂತ ಭಿನ್ನವಾಗಿ ಯೋಚಿಸತೊಡಗಿದ್ದ. ಇದು
ತಾನಾಗಿಯೇ ತಂದುಕೊಂಡ ಆಪತ್ತು; ತನಗೇಕೆ ಬೇಕಿತ್ತು ಈ ಉಸಾಪರಿ. ಈ ಗೊಂಡಾರಣ್ಯದಲ್ಲಿ
ಜೀವಕ್ಕೆ ಅಪಾಯವಾದರೆ ಮನೆಯಲ್ಲಿ ಹೆಂಡತಿ, ಮಕ್ಕಳ ಗತಿಯೇನು? ತಾನಿಲ್ಲಿ ಸತ್ತುಬಿದ್ದಿದ್ದು
ಅವರಿಗೆ ಗೊತ್ತಾಗುವದು ಸಾಧ್ಯವೇ ಇಲ್ಲ! ಈ ಗ್ಯಾಂಗಿನವರು ನಮ್ಮ ಹೆಣವನ್ನು ಯಾರಿಗೂ
ಸಿಗದಂತೆ ಯಾವ ಗುಂಡಿಗಾದರೂ ಹಾಕಿಯಾರು. ಕಷ್ಟವೋ, ಸುಖವೋ ದುಡಿದು ಬದುಕುವ
ತಾನು ಗುರುತು, ಪರಿಚಯವಿಲ್ಲದ ಕಾಡಿನಲ್ಲಿ ಕೊಲೆಯಾಗಿ, ಕೊಳೆತ ಹೆಣವಾಗುವ ಕಲ್ಪನೆ
ಅವನನ್ನು ಇನ್ನಷ್ಟು ಜರ್ಜರಿತನನ್ನಾಗಿಸಿತ್ತು.
ತನ್ನ ಇಷ್ಟದೈವಗಳನ್ನ, ದೇವರುಗಳನ್ನ ನೆನಪಿಸಿಕೊಳ್ಳುತ್ತ, ತನ್ನ ಕಾಪಾಡು ಎಂದು
ಮೊರೆಯಿಡುತ್ತ, ಹುಟ್ಟಿದ ನಂತರ ನೆನಪು ಅಂತ ಬಂದ ದಿನದಿಂದ ಈವರೆಗಿನ ಗತಕಾಲದ
ಎಲ್ಲವನ್ನೂ ಸ್ಮರಿಸಿಕೊಳ್ಳುತ್ತ ಗೊತ್ತಿಲ್ಲದಂತೆ ವಿಸ್ಮøತಿಗೆ ಒಳಗಾಗಿದ್ದ ಶಂಕರ ಶೆಟ್ಟಿ ಗಿರಿಧರ
ಎಚ್ಚರಿಸಿದ್ದೇ ಕುಮಟಿಬಿದ್ದು ಎದ್ದುನಿಂತಿದ್ದ.
17
ಅಷ್ಟರಲ್ಲಾಗಲೇ ಕತ್ತಲೆಯನ್ನು ಸೀಳಿಕೊಂಡು ಬರುತ್ತಿದ್ದ ಆ ಬೆಳಕು ಅವರಿಗೆ
ಹತ್ತಿರವಾಗತೊಡಗಿತ್ತು. ಕೆಳಭಾಗದಿಂದ ಮೇಲ್ಮುಖವಾಗಿ ರಾಚುತ್ತಿದ್ದ ಬೆಳಕಿನಲ್ಲಿ ಇವರಿಬ್ಬರೂ
ಕಂಡಿರಬೇಕು. ಯಾವುದೋ ಭಾಷೆಯಲ್ಲಿ ಕರ್ಕಶವಾಗಿ ಮಾತನಾಡಿದ್ದು ಮೇಲಿದ್ದ ಗಿರಿಧರ,
ಶಂಕರಶೆಟ್ಟಿಗೂ ಕೇಳಿಸಿತ್ತು.
ಇವರಿಗಿದ್ದ ಪ್ರತಿಕೂಲ ಸ್ಥಿತಿಯೆಂದರೆ ಆ ಕತ್ತಲೆಯಲ್ಲಿ ಅಪರಿಚಿತವಾದ ಆ ದಾರಿಯನ್ನು
ಹುಡುಕಿಕೊಂಡು ಸಾಗಬೇಕಿತ್ತು. ಗಾಂಜಾ ಗ್ಯಾಂಗ್‍ನವರಿಗಾದರೆ ಕೈಯಲ್ಲಿ ಕೋರೈಸುವ ಬೆಳಕಿತ್ತು.
ಅಲ್ಲದೇ ಅದೆಷ್ಟು ಸಾರಿ ಈ ಬೆಟ್ಟದ ಕಡಿದಾದ ದಾರಿಯಲ್ಲಿ ಓಡಾಟ ಮಾಡಿದ್ದರೋ? ಕಟ್ಟುತ್ತಿದ್ದ
ಉಸಿರನ್ನು ಎಳೆದುಕೊಳ್ಳುತ್ತ, ಮೆಟ್ಟಿಲುಗಳನ್ನು ಸವರಿ, ಗುರುತಿಸುತ್ತ ತಡವರಿಸುತ್ತಿದ್ದ ಹತ್ತುತ್ತಿದ್ದ
ಇವರನ್ನು ಗಾಂಜಾ ಗ್ಯಾಂಗ್‍ನವರು ನಿಧಾನಕ್ಕೆ ಸಮೀಪಿಸುತ್ತಿದ್ದರು.
ಸಾವು ಹತ್ತಿರವಾಗುತ್ತಿದೆ ಎನ್ನುವಾಗ ಪ್ರಾಯಶ: ಯಾವ ಪ್ರಾಣಿ ಕೂಡ ಬದುಕಿಕೊಳ್ಳುವ ಬಗ್ಗೆ
ಹೋರಾಟಕ್ಕೆ ಸಿದ್ಧವಾಗೇ ಆಗುತ್ತದೆ ಎನ್ನುವ ಮಾತಿಗೆ ನಿದರ್ಶನವಾಗಿ ತಮಗೆದುರಾದ ಪ್ರಾಣಾಂತಿಕ
ಸ್ಥಿತಿಯನ್ನು ಎದುರಿಸಲು ಗಿರಿಧರ, ಶಂಕರಶೆಟ್ಟಿ ಪರಸ್ಪರ ಮಾತನಾಡಿಕೊಳ್ಳದಿದ್ದರೂ ಮಾನಸಿಕವಾಗಿ
ಸನ್ನದ್ಧರಾಗಿಬಿಟ್ಟಿದ್ದರು. ಅಷ್ಟರತನಕ ಮನೆ, ಹೆಂಡತಿ,ಮಕ್ಕಳ ನೆನಪು ಮಾಡಿಕೊಳ್ಳುತ್ತ,
ಮನಸ್ಸಿನಲ್ಲೇ ಗೋಳು ಕರೆದುಕೊಳ್ಳುತ್ತ, ಕುಸಿದುಹೋಗಿದ್ದ ಶಂಕರಶೆಟ್ಟಿ ಏಕಾಏಕಿ
ರೋಷಾವೇಶದಿಂದ ಎದ್ದುನಿಂತಿದ್ದ. „ಕೈಯಲ್ಲೊಂದು ಕತ್ತಿ ಇದ್ದಿದ್ದರೆ ತೋರಿಸ್ತಿದ್ದೆ ನನ್ನ
ಪ್ರತಾಪಾನಾ‟ ಎನ್ನುವಷ್ಟರ ಮಟ್ಟಿಗೆ ಹುರಿಗಟ್ಟಿಕೊಳ್ಳತೊಡಗಿದ್ದ. ಹೇಗಾದರೂ ಸರಿ,
ಬದುಕಿಕೊಳ್ಳಬೇಕು ಎನ್ನುವ ನಿರ್ಧಾರ ಅವನ ಮನಸ್ಸಿನಲ್ಲಿ ಗಟ್ಟಿಯಾಗತೊಡಗಿತ್ತು.
ಏನನ್ನು ಹಂಚಿಕೆ ಹಾಕಿದನೋ, ಏನೋ? ತನಗಿಂತ ಹಿಂದೆ ಮೆಟ್ಟಿಲು ಹತ್ತುತ್ತಿದ್ದ ಗಿರಿಧರನನ್ನು
ಮುಂದೆ ಹೋಗುವಂತೆ ಹೇಳಿದ ಶಂಕರಶೆಟ್ಟಿ ತಾನು ಅವನ ಹಿಂದಿನಿಂದ ಏರತೊಡಗಿದ.
ತಪ್ಪಿಸಿಕೊಳ್ಳುವ ಅವಸರದಿಂದಾಗಿಯೋ, ಎಷ್ಟೇ ಧೈರ್ಯ ತಂದುಕೊಂಡರೂ ಆಗುತ್ತಿದ್ದ
ಭಯದಿಂದಾಗಿಯೋ? ಕಾಲುಗಳು ನಡುಗುತ್ತಿದ್ದ ಕಾರಣ ಹೆಜ್ಜೆಗಳು ಜಾರುತ್ತಿದ್ದವು. ಹತ್ತಿದ
ಮೆಟ್ಟಿಲನ್ನು ಜಾರುತ್ತಿದ್ದ ಗಿರಿಧರನನ್ನು ಆಗಾಗ್ಗೆ ಶಂಕರಶೆಟ್ಟಿ ಹಿಂದಿನಿಂದ ದೂಡಿ ಹತ್ತಿಸುತ್ತಿದ್ದ.
ಇವರಿಬ್ಬರೂ ಎಷ್ಟೇ ವೇಗವಾಗಿ ಮೇಲಕ್ಕೆ ಬರುತ್ತಿದ್ದರೂ ಕೆಳಗಿದ್ದವರು ಹತ್ತಿರವಾಗುತ್ತ
ಬರುತ್ತಿದ್ದರು. ಅವರ ಕೈಯಲ್ಲಿದ್ದ ಬ್ಯಾಟರಿ ಬೆಳಕು ಇವರನ್ನು ದಾಟಿ ಮುಂದಕ್ಕೆ ಹತ್ತು ಮಾರು
ದೂರದವರೆಗೂ ಪ್ರಕಾಶಿಸುತ್ತಿತ್ತು. ಒಂದು ರೀತಿಯಲ್ಲಿ ಆ ಬೆಳಕು ಮುಂದಿನ ದಾರಿಯನ್ನು
ತೋರಿಸಿಕೊಟ್ಟರೂ ಅವರ ಕಾಲುಗಳ ಶಕ್ತಿ ಕುಗ್ಗುತ್ತ ಬರುತ್ತಿತ್ತು. ಬಳಲಿದ ಶರೀರ ಅತ್ತಿತ್ತ
ತೂರಾಡತೊಡಗಿತ್ತು. ತೇಕಿ,ತೇಕಿ ಉಸಿರು ಗೊರಕೆಯ ರೀತಿಯಲ್ಲಿ ಸಶಬ್ದವಾಗಿ ಹೊರಬರುತ್ತಿತ್ತು.
ಬೆನ್ನು ಹತ್ತಿ ಬರುತ್ತಿದ್ದವರು ಮಾರು ದೂರದಷ್ಟೇ ಅಂತರದಲ್ಲಿದ್ದರು. ಅವರ ಬಿಸಿ ಉಸಿರು ಬೆನ್ನಿಗೆ
ಬಡಿಯುವಷ್ಟು ಹತ್ತಿರವಾಗುತ್ತ ಬಂದರು. ಒಂದು ಕೈಯಲ್ಲಿ ಬ್ಯಾಟರಿಯನ್ನು ಹಿಡಿದು, ಇನ್ನೊಂದು
ಕೈಯನ್ನು ಆಧರಿಸಿಕೊಂಡು ಅವರು ಮೆಟ್ಟಿಲು ಹತ್ತುತ್ತ ಸಮೀಪಿಸತೊಡಗಿದ್ದರು.
ಮುಂದೆ ಇದ್ದ ಅವರಲ್ಲೊಬ್ಬ ಮೇಲಿನ ಮೆಟ್ಟಿಲಲ್ಲಿದ್ದ ಶಂಕರಶೆಟ್ಟಿಯ ಎಡಕಾಲನ್ನು ಹಿಡಿದುಕೊಂಡ.
ಬೆವರು ಜಿನುಗುತ್ತಿದ್ದ ಕಾಲನ್ನು ಹಿಡಿದರೂ ಅದು ಒಮ್ಮೆ ತಪ್ಪಿಹೋಯಿತು. ಆದರೂ ಮತ್ತೆ
ಗಪ್ಪನೆ ಹಿಡಿದುಕೊಂಡ. ಆ ಬಿಸಿ ಹಸ್ತ ಸೋಕಿದ್ದೇ, ಅದರ ಸ್ಪರ್ಶ ಮಾತ್ರದಿಂದ ಆ ವ್ಯಕ್ತಿಯ
ಬಲಿಷ್ಠತೆಯನ್ನು ಶಂಕರಶೆಟ್ಟಿ ಅರ್ಥ ಮಾಡಿಕೊಂಡಿದ್ದ. ಒಮ್ಮೆಗೇ ಸಾವೇ ಸ್ಪರ್ಶಿಸಿದ
ಅನುಭವವಾಯ್ತು ಶಂಕರಶೆಟ್ಟಿಗೆ. ತನಗಾದ ಅನುಭವವನ್ನು ವಿಮರ್ಶಿಸುವ ಸಂದರ್ಭ ಅದಲ್ಲ
ಎನ್ನುವದೂ ಅಷ್ಟೇ ಕ್ಷೀಪ್ರವಾಗಿ ಆತನಿಗೆ ಮನದಟ್ಟಾಯ್ತು. ಇದು ಸಾವು, ಬದುಕಿನ
ನಿರ್ಧಾರವಾಗುವ ಕೊಟ್ಟಕೊನೆಯ ಕ್ಷಣ. ಈಗ ಸಾಧ್ಯತೆಗಳನ್ನು ಚಿಂತಿಸುವ ಸಂದರ್ಭ ದಾಟಿ
ಹೋಗಿದೆ. ಈಗೇನಿದ್ದರೂ ಕ್ರಿಯೆ ಮಾತ್ರ. ಅದರಲ್ಲಿ ಸಫಲವಾದರೆ ಬದುಕು, ಇಲ್ಲವಾದರೆ ಸಾವು.
ಅರೆಕ್ಷಣದಲ್ಲಿ ಮಾಡಬೇಕಾದ ಕ್ರಿಯೆಗೆ ಮುಂದಾಗಬೇಕಿತ್ತು.
ಕೆಳಗಿದ್ದ ಆ ವ್ಯಕ್ತಿ ಶಂಕರಶೆಟ್ಟಿಯ ಎಡ ಕಾಲನ್ನು ಹಿಡಿದು ಕೆಳಕ್ಕೆ ಎಳೆಯತೊಡಗಿದ್ದ. ತನ್ನ
ಮತ್ತೊಂದು ಕೈಯಲ್ಲಿದ್ದ ಬ್ಯಾಟರಿಯನ್ನು ಹಿಂದೆ ಇದ್ದ ಮತ್ತೊಬ್ಬನಿಗೆ ಕೊಟ್ಟಿರಬೇಕು; ಒಂದೇ
ಬ್ಯಾಟರಿ ಬೆಳಕು ಚೆಲ್ಲತೊಡಗಿತ್ತು. ತನ್ನÀನ್ನು ಕೆಳಕ್ಕೆಳೆದು ಬೀಳಿಸುವ ಹುನ್ನಾರವನ್ನು ಅರಿತ ಶೆಟ್ಟಿ
ಕೈಗೆ ಸಿಕ್ಕ ಗಿಡವೊಂದರ ಕಾಂಡವನ್ನು ಗಟ್ಟಿಯಾಗಿ ಹಿಡಿದುಕೊಂಡ. ಕೆಳಗಿದ್ದ ವ್ಯಕ್ತಿ ಎಷ್ಟೇ
ಗಟ್ಟಿಯಾಗಿ ಶಂಕರಶೆಟ್ಟಿ ಕಾಲನ್ನು ಹಿಡಿದಿದ್ದರೂ ಬೆವರಿನಿಂದ ಒದ್ದೆಯಾದ ಕಾರಣ ಹಿಡಿತ
ಜಾರುತ್ತಿತ್ತು. ಆ ಕಾಲನ್ನು ಹಿಡಿದಂತೆ ಮತ್ತೊಂದು ಮೆಟ್ಟಿಲು ಮೇಲೆ ಏರಿದ ಕೆಳಗಿದ್ದ ವ್ಯಕ್ತಿ.
ಅವನಿಗಿದ್ದ ತನ್ನ ಕಾಲಿನ ಹಿಡಿತ ತುಸು, ತುಸುವಾಗಿ ಜಾರುತ್ತಿದ್ದುದನ್ನೇ ಕಾಯುತ್ತಿದ್ದ ಶಂಕರಶೆಟ್ಟಿ
ತಾನು ಹಿಡಿದುಕೊಂಡಿದ್ದ ಗಿಡದ ಮೇಲೆ ಇಡೀ ಶರೀರದ ಭಾರವನ್ನು ಹಾಕಿ ಏಕದಂ ಬಲಗಾಲಿಂದ
ಆ ವ್ಯಕ್ತಿಯ ಮುಖದ ಮೇಲೆ ಜಾಡಿಸಿ ಒದ್ದುಬಿಟ್ಟ.
ಜಾರುತ್ತಿದ್ದ ಮೆಟ್ಟಿಲಿನ ಮೇಲೆ ಗಟ್ಟಿಯಾಗಿ ನಿಲ್ಲಲು ಕೆಳಗಿದ್ದ ವ್ಯಕ್ತಿಗೆ ಸಾಧ್ಯವಾಗುತ್ತಿರಲಿಲ್ಲ.
ಅದೂ ಅಲ್ಲದೇ ಒಂದು ಕೈಯಲ್ಲಿ ಶಂಕರಶೆಟ್ಟಿ ಕಾಲನ್ನು ಹಿಡಿದು, ಮತ್ತೊಂದು ಕೈಯಲ್ಲಿ
ಯಾವುದೋ ಗಿಡವನ್ನೋ,ಕಲ್ಲನ್ನೋ ಆಧರಿಸಿದ್ದ ಬೇರೆ. ಅವನಿಗೆ ಶಂಕರಶೆಟ್ಟಿ ಈ ರೀತಿಯಾಗಿ
ಎದುರೇಟು ಹಾಕಬಹುದು ಎನ್ನುವ ಕಲ್ಪನೆಯೂ ಇರಲಿಕ್ಕಿಲ್ಲ. ಭಯಗ್ರಸ್ತರಾದ ಇವರನ್ನು
ಸುಲಭವಾಗಿ ಬಲಿ ಹಾಕಬಹುದು ಎಂದು ಎಣಿಸಿರಬೇಕು? ಮುಖದ ಮೇಲೆ ಕಲ್ಲಿನಿಂದ ಜಜ್ಜಿದಂತೆ
ಪ್ರಹಾರವಾಗಿದ್ದೇ ಆ ವ್ಯಕ್ತಿಗೆ ಮೆದುಳಿಗೆ ಮಿಂಚು ಹೊಡೆದಂತಾಗಿತ್ತು. ತನಗೆ ಬಿದ್ದ ಹೊಡೆತ,
ಅನಿರೀಕ್ಷಿತ ಪ್ರತಿ ದಾಳಿಯಿಂದ ಅಪ್ರತಿಭನಾದ ಆ ವ್ಯಕ್ತಿಗೆ ಶಂಕರಶೆಟ್ಟಿಯ ಕಾಲಿನ ಹಿಡಿತ
ಜಾರಿದ್ದಲ್ಲದೇ, ಮತ್ತೊಂದು ಕೈಯಲ್ಲಿದ್ದ ಆಧಾರವೂ ತಪ್ಪಿಹೋಗಿತ್ತು. ತನಗಾದ ಬಲವಾದ ಘಾಸಿಗೆ
ಕರ್ಕಶವಾಗಿ ಕೂಗುತ್ತ, ಶಂಕರಶೆಟ್ಟಿ ಒದ್ದ ವೇಗಕ್ಕೆ ಹಿಮ್ಮುಖವಾಗಿ ಬಾಗಿ ಕೆಳಗಿದ್ದ ವ್ಯಕ್ತಿಯ
ಮೇಲೆ ಬಿದ್ದ. ದಪ್ ಎಂದು ತನ್ನ ಮೇಲೆ ಬಿದ್ದ ಭಾರಕ್ಕೆ ಅವನಿಗಿಂತ ಕೆಳಗಡೆ ಇದ್ದ
ಮತ್ತೊಬ್ಬನೂ ಆಯತಪ್ಪಿ ಕೆಳಕ್ಕೆ ಬಿದ್ದ. ಒಂದೇ ಕ್ಷಣದಲ್ಲಿ ಅಗೋಚರವಾದ ಆ ಕಾಡಿನ
ಕಂದಕದಲ್ಲಿ ಆಕ್ರಂದನ ಮಾಡುತ್ತ ಆ ಆಗಂತುಕರಿಬ್ಬರೂ ಉರುಳಿಹೋಗಿದ್ದರು. ಆ ಕಾಡಿನ ಸಶಬ್ದ
ಮೌನವನ್ನ, ಸ್ಥಾಯಿಯಾಗಿ ಕವಿದುಕೊಂಡಿದ್ದ ಕತ್ತಲನ್ನ ಆ ಅಪರಿಚಿತರ ಆಕ್ರಂದನ ಕಲಕಿಬಿಟ್ಟಿತ್ತು.
ಮರುಕ್ಷಣ ಏನೂ ಆಗದಂತೆ ಮುಚ್ಚಿಕೊಂಡಿತ್ತು.
ನಡೆದ ಘಟನೆ ನಿಜವೋ, ಸುಳ್ಳೋ ಎಂದು ಶಂಕರಶೆಟ್ಟಿ ಜೋತು ಬಿದ್ದಲ್ಲೇ ಗಲಿಬಿಲಿಗೊಂಡಿದ್ದ.
ಇದು ಮಾಯೆಯೋ, ಏನೋ? ಕಾಡಿನ ಕಣಿವೆಗಳಲ್ಲಿ ಪ್ರತಿಧ್ವನಿಸುತ್ತಿರುವ ಧ್ವನಿ ತನ್ನದ್ದೇ, ತಾನೇ
ಜಾರಿ ಬೀಳುತ್ತಿದ್ದೇನೆಯೇ? ಎಂದು ಒಂದುಕ್ಷಣ ಯೋಚಿಸಿದ್ದ ಕೂಡ. ತಾನು ಸುರಕ್ಷಿತವಾಗಿದ್ದೇನೆ
ಅನ್ನಿಸಿದ್ದೇ ಮೆಟ್ಟಿಲಿಗೆ ಕಾಲು ಆನಿಸಿ, ಹಿಡಿದ ಗಿಡವನ್ನು ಬಿಡದೇ ಅಲ್ಲೇ ಕಣ್ಣುಮುಚ್ಚಿ ನಿಂತ.
18
ಹಿಂದಿನಿಂದ ಶಂಕರಶೆಟ್ಟಿ ಹತ್ತಿ ಬರುತ್ತಿದ್ದಾನೆ ಎನ್ನುವ ಗುಂಗಿನಲ್ಲಿ ಜಾರುತ್ತಲೇ ಮೇಲಕ್ಕೆ
ಏರುತ್ತಿದ್ದ ಗಿರಿಧರನಿಗೆ ಇದ್ದಕ್ಕಿಂದ್ದಂತೇ ದಫ್ ಎಂದು ಸದ್ದಾದದ್ದೂ, ಅದರ ಬೆನ್ನಿಗೇ ವಿಕಾರವಾದ
ಕೂಗನ್ನೂ ಕೇಳಿ ಬೆಚ್ಚಿಬಿದ್ದ. ಮರುಕ್ಷಣದಲ್ಲೇ ದಡಫಡ ಸದ್ದಿನ ಜೊತೆಗೆ ಎರಡು ವಿಕೃತ ಸ್ವರಗಳು
ಅರಚಿಕೊಳ್ಳುತ್ತಿದ್ದುದು, ಆ ಆಕ್ರಂಧನ ನಿಧಾನಕ್ಕೆ ಕೆಳಗಿನ ಕತ್ತಲೆಯ ಗರ್ಭದಲ್ಲಿ ಅನುರಣಿಸುತ್ತ,
ನಂತರ ಕೇಳದಂತಾಗಿದ್ದು ಅವನಿಗೆ ಇನ್ನಿಲ್ಲದಂತೆ ಗಾಬರಿ ಹುಟ್ಟಿಸಿಬಿಟ್ಟಿತು. ಹಿಂದೆ ಬರುತ್ತಿದ್ದವರು
ಕೆಳಗಿನ ಪ್ರಪಾತದಲ್ಲಿ ಬಿದ್ದು ಹೋಗಿರುವದರಲ್ಲಿ ಸಂಶಯವೇ ಇರಲಿಲ್ಲ. ಆದರೆ ಬಿದ್ದವರ್ಯಾರು?
ಎನ್ನುವದೇ ಸಂದಿಗ್ಧವಾಗಿತ್ತು. ಎಲ್ಲವನ್ನೂ ಸದ್ದಿನಿಂದಲೇ ಗ್ರಹಿಸಬೇಕಿತ್ತೇ ಹೊರತು ಕಣ್ಣಿದ್ದರೂ
ಕುರುಡಾಗಿರಬೇಕಾದ ಸ್ಥಿತಿ ಅದಾಗಿತ್ತು. ಅಷ್ಟು ಹೊತ್ತಿನ ತನಕ ರಾಚುತ್ತಿದ್ದ ಬ್ಯಾಟರಿಯ ಬೆಳಕು
ಸಟಕ್ಕನೇ ಆರಿಹೋದದ್ದೂ ಕಣ್ಣಿಗೆ ಮಂಜು ಕವಿದಂತಾಗಿತ್ತು. ಶಂಕರಶೆಟ್ಟಿಗೇ ಅಪಾಯ ತಟ್ಟಿತೇ?
ಎನ್ನುವ ಆತಂಕದಲ್ಲಿ „ ಎಲ್ಲಿದ್ದೀಯಾ ಶಂಕರಶೆಟ್ಟಿ?‟ ಎಂದು ಅರಚಿದ.
ಕ್ಷಣದ ಹಿಂದೆ ನಡೆದಿದ್ದು ನಡೆದಿದ್ದು ಸತ್ಯವೋ, ಸುಳ್ಳೋ? ಎನ್ನುವ ಖಚಿತ ನಿರ್ಧಾರಕ್ಕೆ ಬಾರದೇ
ದಿಜ್ಮೂಢನಾಗಿ ನಿಂತಿದ್ದ ಶಂಕರಶೆಟ್ಟಿಗೆ ಗಿರಿಧರ ಕೂಗಿದ್ದು ಕೇಳಿಸಿತಾದರೂ ಮಾರುತ್ತರ ಕೊಡಲು
ಧ್ವನಿಯೇ ಹೊರಡಲಿಲ್ಲ. ಬಾಯಾರಿಕೆಯಿಂದ ಬತ್ತಿಹೋದ ಗಂಟಲಿನಿಂದ ಸ್ವರವೇ ಹೊರಡಲಿಲ್ಲ.
ಮತ್ತೊಮ್ಮೆ ಗಿರಿಧರ ಕೂಗಿದಾಗ ಉಗುಳು ನುಂಗಿಕೊಂಡು ಸಣ್ಣದಾಗಿ „ ನಾನಿಲ್ಲೇ ಇದೆನ್ರೋ‟
ಅಂದ. ಗುಹೆಯಾಳದಿಂದ ಕೇಳಿಬರುವಂತೆ ಅಸ್ಪಷ್ಟವಾಗಿ ಶಂಕರಶೆಟ್ಟಿಯ ದನಿ ಕೇಳಿಸಿದ್ದೇ
ಗಿರಿಧರನಿಗೆ ಹೋದ ಜೀವ ಬಂದಂತಾಗಿ ಒಂದುಕ್ಷಣ ನಿರಾಳವೆನ್ನಿಸಿತು. ಕೆಳಕ್ಕೆ ಬಿದ್ದವರು
ಬೆನ್ನುಹತ್ತಿ ಬಂದ ಗ್ಯಾಂಗಿನವರೇ ಎನ್ನುವದು ಗ್ಯಾರಂಟಿಯಾಗಿ ಅಲ್ಲೇ ಒರಗಿ ಕುಳಿತ.
ಸ್ವಲ್ಪ ತಡೆದು ಕೆಳಗಿನಿಂದ ಶಂಕರಶೆಟ್ಟಿ ಬಳಲಿಕೆಯ ಸ್ವರದಲ್ಲೇ ಕೂಗಿದ. „ ನೀವು ಅಲ್ಲೇ ಇರಿ,
ಕೆಳಕ್ಕೆ ಬರಬೇಡಿ, ನಾನೇ ಹೇಗಾದ್ರೂ ಅಲ್ಲಿಗೆ ಬರ್ತೇನೆ‟ ಎಂದವನು ಅಂತೂ, ಇಂತೂ
ತಡವರಿಸುತ್ತ, ತೆವಳುತ್ತ ಗಿರಿಧರ ಕೂತಲ್ಲಿಗೇ ಬಂದು ಮುಟ್ಟಿದ. ಆ ಕತ್ತಲೆಯಲ್ಲಿ ತಡವುತ್ತಲೇ
ಗಿರಿಧರ ಶಂಕರಶೆಟ್ಟಿಯ ತೋಳನ್ನು ಸವರಿ ತನಗಾದ ಆಹ್ಲಾದವನ್ನು ವ್ಯಕ್ತಪಡಿಸಿದ.
„ ನಾವು ಇಲ್ಲಿ ಕೂತಿರೋದು ಬ್ಯಾಡ್ರೀ, ದಾರಿ ತಪ್ಪಲಿ, ಬಿಡಲಿ, ಇದೇ ದಾರಿಯಲ್ಲಿ
ಹೋಗಿಬಿಡೋಣ. ಹೇಗಿದ್ದರೂ ಎಲ್ಲಿಗಾದರೂ ಹೋಗಿ ತಲುಪಲೇಬೇಕಲ್ಲ. ನಂಗಂತೂ
ಕೊಡಗಟ್ಟಲೇ ನೀರು ಕುಡಿಯುವಷ್ಟು ಬಾಯಾರಿಕೆಯಾಗಿಬಿಟ್ಟಿದೆ. ಎಲ್ಲಾದ್ರೂ ನೀರು ಹುಡುಕಲೇ
ಬೇಕು. ಇದೇ ರೊಚ್ಚಿನಲ್ಲೇ ನಡೆದುಬಿಡುವಾ‟ ಎಂದು ಶಂಕರಶೆಟ್ಟಿ ಅವಸರಿಸಿದ.
ತಮ್ಮ ಅತಿ ಸನಿಹಕ್ಕೆ ಬಂದ ಸಾವು ಸಣ್ಣದೊಂದು ಸುಳಿಗಾಳಿಯಂತೆ ಸವರಿಕೊಂಡು ಹೋದ
ಅನುಭವ ಅವರಿಬ್ಬರಿಗೂ ಆಗಿತ್ತು. ಅಷ್ಟಾದ ನಂತರದಲ್ಲಿ ಅವರಿಗೆ ಭಯವಾಗಲೀ, ಸುಸ್ತಾಗಲೀ
ಅಷ್ಟಾಗಿ ಕಾಡಲೇ ಇಲ್ಲ. ತಮಗಾದ ಅನುಭವವನ್ನು ಪರಸ್ಪರ ಹಂಚಿಕೊಳ್ಳುವ ತವಕ, ತಳಮಳ
ಅವರಿಗಾಗುತ್ತಿದ್ದರೂ ಒಣಗಿದ ಗಂಟಲು ಮಾತನಾಡಲು ಆಸ್ಪದ ಕೊಡುತ್ತಿರಲಿಲ್ಲ. ಹಾಗಾಗಿ
ತಮ್ಮೊಳಗೇ ಅನುಸಂಧಾನ ನಡೆಸುತ್ತ ನಿಧಾನಕ್ಕೆ ಮೆಟ್ಟಿಲು ಹತ್ತತೊಡಗಿದರು.
ನಾಳೆ ಇದನ್ನೆಲ್ಲ ಊರಿಗೆ ಹೋಗಿ ಯಾರ ಬಳಿಯಾದರೂ ಹೇಳಿದರೆ ಪಕಪಕ ನಕ್ಕುಬಿಟ್ಟಾರು
ಅನ್ನಿಸಿತು ಶಂಕರಶೆಟ್ಟಿಗೆ. „ಶಿರಸಿಗೆ ಹೋದಾಗ ನೋಡಿದ ಯಾವುದೋ ಡಬ್ಬಾ ತಮಿಳು ಪತ್ತೇದಾರಿ
ಸಿನೆಮಾ ನೆನಪು ಮಾಡಿಕೊಂಡು ಕತೆ ಹೇಳ್ತಿದೀಯಾ‟ ಅಂತ ಲೇವಡಿ ಮಾಡಿದರೂ ಮಾಡಿದರೇ!
ಏನಾದರಾಗಲೀ, ಬದುಕಿಕೊಂಡು ಬಂದೆವಲ್ಲ. ಅಷ್ಟೆಲ್ಲ ಧೈರ್ಯ ಮಾಡದಿದ್ದರೆ ಇಷ್ಟು ಹೊತ್ತಿಗೆ ಆ
ಕೊಲೆಗಡುಕರು ನಮ್ಮನ್ನು ಕೊಚ್ಚಿಹಾಕಿ ಬಿಡುತ್ತಿದ್ದರು. ಆ ಹೊತ್ತಿನಲ್ಲಿ ಯಾವ ದೇವರು ಶಕ್ತಿ
ಕೊಟ್ಟನೋ? ಎದುರಿಸುವ ಧೈರ್ಯ ತಂದನೋ?‟ ಎಂದು ತನ್ನೊಳಗೇ ಅಂದುಕೊಂಡ.
ಗಿರಿಧರನ ಮನಸ್ಥಿತಿಯೂ ಶಂಕರಶೆಟ್ಟಿಗಿಂತ ಭಿನ್ನವಾಗೇನೂ ಇರಲಿಲ್ಲ. ಘಟ್ಟದ ಮೆಟ್ಟಿಲು
ಹತ್ತುವಾಗ ಕತ್ತಲೆಯಲ್ಲಿ ನಡೆದ ಘಟನೆಯನ್ನು ಕಣ್ಣಾರೆ ಕಾಣದಿದ್ದರೂ ಶಂಕರಶೆಟ್ಟಿ ಕ್ಲುಪ್ತವಾಗಿ
ಹೇಳಿದ್ದ. ಶಂಕರಶೆಟ್ಟಿ ಪರಿಸ್ಥಿತಿಯನ್ನು ಎದುರಿಸಿದ ರೀತಿ ಗಿರಿಧರನಲ್ಲಿ ಒಂದು ತೆರನಾದ
ತರ್ಕವನ್ನು ಹುಟ್ಟಿಸಿತ್ತು. ವಾಸ್ತವವನ್ನು ಮುಖಾಮುಖಿಯಾಗಿ ಎದುರಿಸಿದ್ದ ಶಂಕರಶೆಟ್ಟಿ ಬುದ್ದಿಗಿಂತ
ಹೆಚ್ಚಾಗಿ ಭಾವನೆಗೆ ಆ ಕ್ಷಣದಲ್ಲಿ ಹೆಚ್ಚು ಮಹತ್ವವನ್ನು ಕೊಟ್ಟಿದ್ದ. ತನ್ನ ಮನೆ, ಮಡದಿ,ಮಕ್ಕಳು
ಎನ್ನುವ ಸೀಮಿತ ವಲಯದಲ್ಲಿ ಬದುಕುತ್ತಿದ್ದವನಂತೇ ಹೊರನೋಟಕ್ಕೆ ಕಾಣುವ ಆತ ಸಾವು,
ಬದುಕಿನ ಆಯ್ಕೆ ಎದುರಾದ ಸಂದರ್ಭದಲ್ಲಿ ವರ್ತಿಸಿದ ರೀತಿ ಬುದ್ದಿಯ ವರ್ತುಲದಲ್ಲಿ ಬಂಧಿಯಾದ
ತನ್ನಂಥವರಿಗಿಂತ ಹೆಚ್ಚು ಸ್ಪಷ್ಟವಾದದ್ದು. ಹೇಗೆ ನಮ್ಮ ಅನುಭವಗಳು ನಮ್ಮ ಆಯ್ಕೆಯನ್ನು,
ಪೂರ್ವನಿರ್ಧರಿತ ಸಿದ್ಧಾಂತಗಳನ್ನು ಬದಲಾಯಿಸಿಕೊಳ್ಳಬೇಕಾದ ಸ್ಥಿತಿಯನ್ನು ಉಂಟು
ಮಾಡುತ್ತವೆಯಲ್ಲ? ಅದರರ್ಥ, ನಾವು ಅನುಭವಗಳನ್ನು ಗ್ರಹಿಸಿಕೊಳ್ಳುವ ಕ್ರಮದಲ್ಲೇ
ತಪ್ಪಿದೆಯೋ? ಅಥವಾ ಅದರಿಂದ ಸೃಷ್ಟಿಸಿಕೊಳ್ಳುವ ವಿಚಾರದಲ್ಲಿ ನ್ಯೂನ್ಯತೆಯಿದೆಯೋ?….
“ ಇದು ನಮ್ಮ ಕಡೆಯ ಕಾಡಂತೆ ಅಲ್ಲಾ ಕಾಣ್ತದೆ ಮಾರಾಯ್ರೇ, ಒಂಥರಾ ಭೀತಿ ಬಡೀತದೆ.
ಪುಣ್ಯಕ್ಕೆ ಎಂತಾ ಹಾವು,ಹುಳ, ನರಿ,ಕರ್ಡಿ ಯಾವ್ದೂ ತೊಂದರೆ ಕೊಡ್ಲಿಲ್ಲಾ, ನಸೀಬು ಚಲೋ
ಇತ್ತೋ, ನಾವು ಹೊರಟ ಗಳಿಗೆ ಹಾಗಿತ್ತೋ?” ಎಂದು ಶಂಕರಶೆಟ್ಟಿ ಗೊಣಗಿದಾಗ ಗಿರಿಧರ ತನ್ನ
ಮನಸ್ಸಿನ ಗುಹೆಯಿಂದ ಹೊರಬಂದ.
19
ಅಷ್ಟರಲ್ಲಾಗಲೇ ಘಟ್ಟದ ಮೆಟ್ಟಿಲು ಮುಗಿಯುತ್ತ ಬಂದು ಗುಡ್ಡದ ಪಕ್ಕದ ಕಾಲುದಾರಿ
ಶುರುವಾಗಿತ್ತು. ಗುಡ್ಡದ ಮೇಲಿರುವದಕ್ಕೋ ಏನೋ, ಅಲ್ಲಿ ವಿರಳವಾದ ಮರಗಳಿದ್ದು
ಆಕಾಶದಲ್ಲಿದ್ದ ನಕ್ಷತ್ರಗಳ ಬೆಳಕು ಸುತ್ತಲಿನದನ್ನು ಸ್ಪಷ್ಟವಾಗಿಸುತ್ತಿತ್ತು. ಅಪಾಯದ ವಲಯವನ್ನು
ದಾಟಿ ಬಂದ ಭಾವನೆ ಇಬ್ಬರಲ್ಲೂ ಬಂದಿರಬೇಕು; ಅಷ್ಟರತನಕ ಕಾಡುತ್ತಿದ್ದ ಬಾಯಾರಿಕೆ, ಹಸಿವು
ಮರೆಯಾಗಿಬಿಟ್ಟಿತ್ತು.
ತನ್ನೆಲ್ಲ ಸುಸ್ತು, ಸಂಕಟಗಳನ್ನು ಮೀರಿ ತನಗನ್ನಿಸಿದ್ದನ್ನು ಹೇಳುವ ಜರೂರತ್ತು ಶಂಕರಶೆಟ್ಟಿಗೆ
ಒತ್ತರಿಸಿಬಂದಿರಬೇಕು. “ತಡೀರಾ, ಇನ್ನೇನೂ ಹೆದರಿಕೆಯಿಲ್ಲ. ಇಲ್ಲಂತೂ ಬಯಲಿದೆ. ಇಲ್ಲೇ ಒಂದು
ಕವಳ ಹಾಕ್ತೆ. ಸಂಜೆಯಿಂದ ಹಾಕದೇ ಮಂಡೆಯೆಲ್ಲಾ ಹಾಳಾಗಿಬಿಟ್ಟಿದೆ” ಎನ್ನುತ್ತಾ ಚೀಲದಲ್ಲಿದ್ದ
ಸಂಚಿ ಬಿಚ್ಚತೊಡಗಿದ.
ತಂಬಾಕಿನ ರಸ ನಾಲಗೆಗೆ ಸೋಂಕಿದ್ದೇ ಅರೆಗಳಿಗೆಯ ಹಿಂದಿನ ಘಟನೆ, ವಿಹ್ವಲ ಸ್ಥಿತಿಗಳನ್ನೆಲ್ಲ
ಮರೆತು ಮೊದಲಿನಂತೆ ಅಪ್ಪಟ ವಾಚಾಳಿ ಶಂಕರಶೆಟ್ಟಿಯಾಗಿಬಿಟ್ಟಿದ್ದ.
“ ಅಲ್ಲಾ, ನಾಳೆ ಇದನ್ನೆಲ್ಲ ಹೋಗಿ ಹೇಳಿದ್ರೆ ನಿಂಗೆ ತಲೆ ಕೆಟ್ಟಿದೆ ಅಂತಾ ಹೇಳದಿಲ್ಲೇನ್ರಾ?
ಇದು ನಡೆದದ್ದು, ನಾವೇ ಪ್ರತ್ಯಕ್ಷ ಅನುಭವಿಸಿದ್ದು ಎಂದರೂ ಯಾವನಾದ್ರೂ ನಂಬ್ತಾನನ್ರಾ?”
ಎಂದು ಕವಳ ದವಡೆಯಲ್ಲಿಟ್ಟುಕೊಂಡು ಕೇಳಿದ.
ಅವನಿಗೆ ನಡೆದ ಘಟನೆಗಳನ್ನು ತನಗೆ ತಾನೇ ನಂಬಿಸಿಕೊಳ್ಳುವದರ ಅಗತ್ಯ ಆ ಪ್ರಶ್ನೆಗಳ
ಹಿಂದಿರುವದನ್ನು ಗಿರಿಧರ ಊಹಿಸಿದ. ಯಾಕೆಂದರೆ ನಾವು ಅಪೇಕ್ಷಿಸಿರದ, ನಮ್ಮ ಕಲ್ಪನೆಗೂ
ಊಹಾತೀತವಾದ ಘಟನೆಗಳು ಸಂಭವಿಸಿದಾಗ ಅದನ್ನು ಸತ್ಯವೆಂದು ಒಪ್ಪಿಕೊಳ್ಳುವದು ಅಷ್ಟೊಂದು
ಸುಲಭವಲ್ಲವಲ್ಲ? ಅದರಲ್ಲೂ ಸಾವಿನ ಸುಳಿಗೆ ಸಿಕ್ಕು ಹೊರಬಂದ ದುರ್ಭರ ಸಂದರ್ಭವಾದರಂತೂ
ಮತ್ತೂ ಕಷ್ಟ. ತನಗಾದದ್ದನ್ನು ಈ ಮೂಲಕ ನಿಜವಾಗಿಸಿಕೊಳ್ಳಲು ಹೆಣಗಾಡುತ್ತಿರುವ ಶಂಕರಶೆಟ್ಟಿ
ಮಾತಿಗೆ ನಗುತ್ತಲೇ ಉತ್ತರಿಸಿದ.
“ ಹೇಳದೇ ಇರ್ತಾರಾ? ಹೇಳಿಕೇಳಿ ನಾವು ಹೋಗಿದ್ದು ಗಾಂಜಾ ಗಿಡ ಬೆಳೆಯೋದನ್ನ ಹುಡುಕಲಿಕ್ಕೆ.
ಅಲ್ಲೇ ಒಂದಿಷ್ಟು ಸೊಪ್ಪು ತಿಕ್ಕಿ ಸೇದಿರಬೇಕು, ಇಲ್ಲಾ ಪಾನಕ ಮಾಡಿ ಕುಡಿದಿರಬೇಕು. ಅದರ
ನಶೆ ಇನ್ನೂ ಇಳಿದಿಲ್ಲಾ ಅಂದ್ಕೋತಾರೆ ಅಷ್ಟೇ. ಅದು ಬಿಡು, ನಾವು ಮತ್ತೊಬ್ಬನ
ಅನುಭವವನ್ನು ಯಾವ ಅನುಮಾನವೂ ಇಲ್ಲದೇ ಯಾವತ್ತಾದ್ರೂ ಒಪ್ಕೊಂಡಿದೇವಾ? ಒಪ್ಕೊಂಡ್ರೂ
ಅರ್ಧ ಸತ್ಯ, ಇನ್ನರ್ಧ ಸುಳ್ಳು ಎಂದೇ ತಿಳಿತೇವೆ. ನಮ್ಮ ಕತೆಯೂ ಹಾಗೇ!”
“ ನಂಗೆ ನಿಮ್ಮ ಹಾಂಗೇ ದಪ್ಪ ದಪ್ಪ ಮಾತಾಡೋಕೆ ಬರೋದಿಲ್ಲ. ಆದ್ರೆ ಅರ್ಥ ಆಗ್ತದೆ.
ಹಾಗಾದ್ರೆ ನಾವು ಹೋಗಿದ್ದು, ಬಂದದ್ದು ಯಾರ ಹತ್ರವೂ ಹೇಳೋದೆ ಬೇಡ. ಸುಮ್ನೆ ಒಂದಿಷ್ಟು
ಗದ್ದಲ, ಗೌಜಿ ಏಳೋದಾದ್ರೆ ಹಲುಬೋದು ಯಾಕೆ ಬೇಕು? ಸತ್ಯಾನೋ, ಸುಳ್ಳೋ? ನಮಗಾದದ್ದು
ನಮ್ಮೊಳಗೇ ಉಳಿದುಕೊಳ್ಲಿ ಬಿಡ್ರಿ. ಬೇರೆಯವ್ರು ಹೌದು ಅಂದರೆ ಸಿಗೋದಾದ್ರೂ ಏನು?”
ಇದ್ದಕ್ಕಿದ್ದಂತೇ ಪರಮ ಲೌಕಿಕವಾದ ತೀರ್ಮಾನವನ್ನು ಶಂಕರಶೆಟ್ಟಿ ಘೋಷಿಸಿದ.
“ ಹಾಗೇ ಒಳಗಡೆ ಒತ್ತಿಟ್ಟುಕೊಂಡರೆ ಬೇರೆ ರೀತಿಯಲ್ಲಿ ಸಿಡಿದರೂ ಸಿಡಿಯಿತೇ ಮಾರಾಯಾ,
ಒಳಗಿರುವದು ತನಗೆ ಹೊರ ಚಿಮ್ಮಬೇಕೆಂದಾಗ ನನ್ನನ್ನೂ ಕೇಳೋದಿಲ್ಲ, ನಿನ್ನನ್ನೂ ಕೇಳೋದಿಲ್ಲ.
ಆಗ ಅದಕ್ಕೆ ಇನ್ನೊಬ್ಬರು ಒಪ್ಪಿಕೊಳ್ಳಬೇಕೆಂಬ ಹಂಗೂ ಇರೋದಿಲ್ಲ. ಹಠವೂ ಇರೋದಿಲ್ಲ” ಅಂದ
ಗಿರಿಧರ.
“ ಒಳ್ಳೇ ಕೆರೆಮನೆ ವೆಂಕಟಾಚಲ ಭಟ್ರು ಅರ್ಥ ಹೇಳ್ದಾಂಗೇ ಮಾತನಾಡಕೇ ಶುರು ಹಚ್ಚಿದ್ರಲ್ರೋ,
ನೀವು ಮಾತನಾಡೋದರ ಹಿಂದಿನ ಶಕ್ತಿಮದ್ದು ಭಂಗಿ ಪರಿಮಳದ್ದೋ, ಇಲ್ಲಾ ಬೆನ್ನು ಬಿದ್ದು
ಬಂದಿದ್ರಲ್ಲಾ, ಅವರು ಕೊಟ್ಟ ಉಪದ್ರವದ್ದೋ?” ಎಂದು ಕೀಟಲೆಯ ಧಾಟಿಯಲ್ಲಿ ಹೇಳಿದ
ಶಂಕರಶೆಟ್ಟಿ ಈಗ ಬೈಗುಳ ಗ್ಯಾರಂಟಿ ಎಂದುಕೊಂಡ.
ಅವನು ಊಹಿಸಿದ್ದಕ್ಕೆ ತದ್ವಿರುದ್ಧವಾಗಿ “ ಅದಿರ್ಲೀ, ನೀನು ಗಾಂಜಾ ಕಲ್ಲಿ ಚೀಲಕ್ಕೆ
ತುಂಬಿಕೊಂಡಿದೀಯೋ ಇಲ್ವೋ? ಯಾವತ್ತಾದ್ರೂ ಹೊಗೆ ಹಾರಿಸಲಾದ್ರೂ, ಅಥವಾ ಮಳೆಗಾಲದಲ್ಲಿ
ಭಂಗಿ ಪಾನಕ ಮಾಡಿ ಕುಡಿದು ಮಳ್ಳ ಹರಿಲಿಕ್ಕಾದ್ರೂ ಆಗ್ತಿತ್ತು?” ಎಂದ ಗಿರಿಧರ.
“ಬಿಡ್ತೀನೇನ್ರಾ, ಸಮಾ ಒಂದಿಷ್ಟು ಚೀಲದಲ್ಲಿ ತುರುಕಿಕೊಂಡಿದ್ದೆ; ಆ ಫಾರೆಸ್ಟನರಿಗೆ ಕಾಣದ ಹಾಂಗೆ.
ಇದ್ನ ಊರಿನ ತನಕ ಒಯ್ಯೋದೇ ಕಷ್ಟಾನೇನೋ” ಎನ್ನುವ ಕಳವಳ ವ್ಯಕ್ತಪಡಿಸಿದ ಶಂಕರಶೆಟ್ಟಿ.
“ ಎರಡು ಮಂದಿ ಗಾಂಜಾ ಗ್ಯಾಂಗಿನವರನ್ನೇ ಹೊಡೆದು ಹಾಕಿದೀಯಾ! ಈ ಫಾರೆಸ್ಟರಿಗೆ,
ಪೊಲೀಸರಿಗೆ ಹೆದರಿಕೆನಾ?” ಎಂದ ಗಿರಿಧರ.
“ಹೇಗಿದ್ರೂ ನೀವಿದ್ದೀರಲ್ಲಾ ನಂಜೊತೆಗೆ, ಜೈಲಿಗಾದ್ರೇ ಅಲ್ಲಿಗೆ” ಉಡಾಪೆಯ ದಾಟಿಯಲ್ಲಿ ಹೇಳಿದ
ಮರುಕ್ಷಣವೇ ಗಾಬರಿಯ ಧ್ವನಿಯಲ್ಲಿ “ ಎಲ್ಲಾದ್ರೂ ನಾನು ಅವರನ್ನು ತಳ್ಳಿ ಹಾಕಿದ್ದು ಅಂತ
ಹೇಳಿಬಿಟ್ಟೀರಾ, ಹಾಗೇನಾದ್ರೂ ಆದ್ರೆ ನಂಗೆ ಜೈಲು ಗ್ಯಾರಂಟಿ” ಎಂದ ಶಂಕರಶೆಟ್ಟಿಯ ಮಾತಿಗೆ
ಗಿರಿಧರ ಗಟ್ಟಿಯಾಗಿ ನಕ್ಕುಬಿಟ್ಟ.
ನಿಜಕ್ಕೂ ಶಂಕರಶೆಟ್ಟಿಗೆ ಆಶ್ಚರ್ಯ, ಅನುಮಾನ ಎರಡೂ ಒಟ್ಟಿಗೆ ಆಯಿತು. ಎಡವಟ್ಟು ಮಾತಿಗೆ
ಈ ರೀತಿ ಉತ್ತರಿಸುವ ಜಾಯಮಾನ ಗಿರಿಧರನದ್ದು ಅಲ್ಲವೇ ಅಲ್ಲ. ತಾನು ಮಾಡಿದ ಗೇಲಿಗೆ
ಇಷ್ಟು ಹೊತ್ತಿಗೆ ನಖಶಿಖಾಂತ ಉರಿದು, ಗದರಬೇಕಿತ್ತು! ಎಷ್ಟೋ ವರ್ಷಗಳಿಂದ ನೋಡುತ್ತ ಬಂದ
ಸ್ವಭಾವವಲ್ಲವೇ ಇವನದ್ದು. ಇಡೀ ದಿನ ಇಷ್ಟೆಲ್ಲಾ ಅನುಭವಿಸಿಯೂ ತನ್ನ ಮಾಮೂಲಿ ಮನಸ್ಥಿತಿಗೆ
ವಿರುದ್ಧವಾಗಿ ಬದಲಾಯಿಸಿಬಿಟ್ಟಿದ್ದಾನಲ್ಲ? ಎನ್ನುವ ತನ್ನ ಅನಿಸಿಕೆಯನ್ನು ಗಿರಿಧರನ ಬಳಿ ಹೇಳಿಯೂ
ಬಿಟ್ಟ.
“ ಕಾಡು ಅಂದರೆ ಹಾಗೇ ಶಂಕರಶೆಟ್ಟಿ, ಅದು ಎಂಥವನನ್ನೂ ಬದಲಾಯಿಸಿಬಿಡುತ್ತದೆ. ಇಲ್ಲಿನ
ಕಷ್ಟ, ಗಂಡಾಂತರ ಎಲ್ಲವುಗಳ ನಡುವೆಯೂ ಒಂದು ವಿಶಿಷ್ಠವಾದ ಶಕ್ತಿ ಇದೆ ಕಣೋ, ಇಲ್ಲೇ
ಬದುಕಿದ್ದರೆ ಎಂಥವನನ್ನೂ ಅದು ಬದಲಾಯಿಸಿ ಬಿಡುತ್ತದೆ. ನಾವಿದ್ದೇವಲ್ಲ, ನಮ್ಮಂಥ ಜನರ
ನಡುವಿನ ಜಗತ್ತಲ್ಲ ಇದು…”
“ ಹಾಗಿದ್ದರೆ ವರ್ಷಾನುಗಟ್ಟಲೇ ಇದೇ ಕಾಡಲ್ಲಿ ಇರ್ತಾರಲ್ಲಾ ಈ ಕೊಲೆಗಡುಕರು, ಅವರು
ಬದಲಾಗಬೇಕಿತ್ತಲ್ಲ?”
ಗಿರಿಧರನ ಗಂಭೀರವಾದ ಮಾತುಗಳನ್ನು ಅರ್ಧಕ್ಕೆ ತುಂಡರಿಸಿದ ಶಂಕರಶೆಟ್ಟಿ ಪ್ರಶ್ನಿಸಿದ.
ವಾಸ್ತವಿಕವಾಗಿ ಶಂಕರಶೆಟ್ಟಿಯೂ ತನ್ನ ಆಲೋಚನೆಯಲ್ಲಿ, ಅದನ್ನು ವ್ಯಕ್ತಪಡಿಸುವ ರೀತಿಯಲ್ಲಿ
ಬದಲಾಗುತ್ತಿದ್ದ. ಮೊದಲಾಗಿದ್ದರೆ ಇಂಥ ವಿಚಾರಗಳೆಲ್ಲ ಅವನ ಸನಿಹಕ್ಕೂ ಸುಳಿಯುತ್ತಿರಲಿಲ್ಲ.
“ ನಾನು ಸುಮ್ಮನೇ ತಾಳಮದ್ದಲೆ ಅರ್ಥ ಹೇಳ್ತಿದೀನಿ ಅಂತ ತಿಳಿಬೇಡ ಶಂಕರಶೆಟ್ಟಿ. ಕಾಡು
ನಮ್ಮೆದುರು ಕಾಣುವಂಥದ್ದು ಮಾತ್ರ ಅಲ್ಲ; ಅದು ನಮ್ಮೊಳಗೂ ಉಂಟು. ನಮ್ಮ ಬುದ್ದಿಯಲ್ಲಿ,
ನಡತೆಯಲ್ಲಿ ಚೂರು ವ್ಯತ್ಯಾಸವಾದರೂ ಸಾಕು, ಇಂಥ ನೂರಾರು ಪಾತಕಿಗಳು ನಮ್ಮ ಮನಸ್ಸಿನ
ಒಳಗಿಂದಲೇ ಹುಟ್ಟಿ, ನಮಗೇ ಎದುರು ನಿಂತು ಅಬ್ಬರಿಸುತ್ತಾರೆ. ಪುರಾಣದಲ್ಲಿ ಕತೆಯಿದೆಯಲ್ಲ,
ರಕ್ಕಸನೊಬ್ಬನ ಮೈ ರಕ್ತದ ಹನಿ ನೆಲಕ್ಕೆ ಬಿದ್ದರೆ ಸಾಕು; ನೂರಾರು ಮಂದಿ ಸೃಷ್ಟಿಯಾಗುತ್ತಿದ್ದರು
ಎಂದು. ಪ್ರತಿ ಕ್ಷಣ, ಪ್ರತಿ ನಿತ್ಯ ಕಾಡಿನೊಳಗೆ ನಡೆಯುವಂಥ ಘಟನೆಗಳು; ನಾವು
ಅನುಭವಿಸಿದೆವಲ್ಲ, ಇಂಥ ರೋಮಾಂಚಕಾರಿ ಹೋರಾಟಗಳು ನಮ್ಮೊಳಗೂ ನಡೆಯುತ್ತಿರುತ್ತವೆ.
ನಾವು ಗಮನಿಸೋದಿಲ್ಲ ಅಷ್ಟೇ. ನೀನು ಹೇಳಿದೆಯಲ್ಲ, ಬದಲಾವಣೆ ಎನ್ನುವದು ನಮ್ಮ
ಮನಸ್ಥಿತಿಯನ್ನ ಅವಲಂಬಿಸಿಕೊಂಡಿದೆ ಮಾರಾಯಾ” ಎಂದ ಗಿರಿಧರನಿಗೆ ತನ್ನದು ಉದ್ದದ
ಭಾಷಣದಂತಾಯಿತಲ್ಲ ಎನ್ನುವ ಮುಜುಗುರವಾಯಿತು.
ಯಾಕೋ, ಏನೋ ಶಂಕರಶೆಟ್ಟಿ ಆ ಮಾತುಗಳಿಗೆ ಪ್ರತಿಯಾಡಲಿಲ್ಲ.
ಒಂದು ಭೀಕರವಾದ ಅನುಭವವನ್ನು, ಬೇರೊಬ್ಬರ ಬಳಿ ಯಥಾವತ್ತಾಗಿ ವ್ಯಕ್ತಗೊಳಿಸಲಾಗದ
ಅನುಭೂತಿಯನ್ನು ಅವರಿಬ್ಬರೇ ಪಡೆದುಕೊಂಡ ಕಾರಣಕ್ಕಿರಬೇಕು? ಬೆಳಗ್ಗೆ ಹೊರಟ ಸಂದರ್ಭಕ್ಕಿಂತ
ಹೆಚ್ಚು ಆಪ್ತತೆ, ಆತ್ಮೀಯತೆ ಅವರ ನಡುವೆ ಸುಪ್ತವಾಗಿ ಕೊನರಿಕೊಂಡಿತ್ತು. ಪರಸ್ಪರ ಅನುಮಾನ,
ಅಪನಂಬಿಕೆ, ಅಸೂಯೆಯನ್ನು ಹುಟ್ಟಿಸುವ ಜನಾರಣ್ಯದ ನಡುವೆ ಹುಟ್ಟಲು ಸಾಧ್ಯವಾಗದ
ಪ್ರೀತಿಯೊಂದು ಆ ದಟ್ಟ ಕಾಡಿನ ನಡುವೆ ಕುಡಿಯೊಡೆದಿತ್ತು.
ನಡೆಯುತ್ತಿದ್ದ ಗಿರಿಧರ ಒಂದುಕ್ಷಣ ನಿಂತು ಹಿಂದಕ್ಕೆ ತಿರುಗಿ ನೋಡಿದ. ಮತ್ತೆ ಈ ಜನ್ಮದಲ್ಲಿ ಈ
ಕಾಡಿಗೆ ಬರುತ್ತೇನೋ ಇಲ್ಲವೋ? ಬಂದದ್ದು ಸಾರ್ಥಕವೆನ್ನಿಸುವ ಅನುಭವವನ್ನು ಈ ಕಾಡು
ನೀಡಿದೆ. ಸಾವಿನ ಹತ್ತಿರಕ್ಕೆ ಕರೆದೊಯ್ದು, ಮತ್ತೆ ಬದುಕಿಸಿ ಕಳುಹಿಸುತ್ತಿದೆ. ಬದುಕಿನುದ್ದಕ್ಕೂ
ಮರೆಯಲಾಗದ ನೆನಪನ್ನು ಜೊತೆ ಮಾಡಿಕೊಟ್ಟಿದೆ. ಮತ್ತೆ ಮರಳಲಿರುವ ನಾಡಿಗಿಂತ ಈ ಕಾಡು
ಹೆಚ್ಚು ಆಪ್ತವಾಗುತ್ತಿದೆ ಎಂದು ಮನಸ್ಸಿನಲ್ಲೇ ಅಂದುಕೊಂಡ.
“ ಅಲ್ಲಿ ಗೋವಿಂದ ಹೆಗಡೆ ಪರಿಸ್ಥಿತಿ ಏನಾಗಿರಬಹುದೋ?” ಎಂದ ಗಿರಿಧರನ ಪ್ರಶ್ನೆಗೆ ಒಂದಷ್ಟು
ಹೊತ್ತು ಮೌನವಾಗುಳಿದ ಶಂಕರಶೆಟ್ಟಿ “ ನಾವು ಪಟ್ಟ ತಾಪತ್ರಯ ನೆನಪು ಮಾಡಿಕೊಂಡರೆ
ಗೋವಿಂದ ಹೆಗಡೆ ಕಂಡಾಕ್ಷಣ ಬುರುಡೆಗೆ ತಟ್ಟಬೇಕು ಅಷ್ಟು ಸಿಟ್ಟು ಬರ್ತದೆ. ನೀವು ಹೇಳೋದನ್ನ
ಕೇಳಿದ್ರೆ ಅವರ ಪಾಡು ನಮಗಿಂತ ಘೋರವಾಗಿರಬಹುದು ಅನ್ನಿಸಿ ಬೇಜಾರಾಗ್ತದೆ. ಹೆಂಡತಿ,
ಮಗಳು ಇದಾರೆ. ಎಂತಾ ಅಂದ್ರೂ ಅವರಿಗೆ ಕಷ್ಟವೇ” ಎಂದು ನಿಟ್ಟುಸಿರುಬಿಟ್ಟ.
ಹೆನ್ನೆ ಎನ್ನುವ ಹಿಂದಿನ ದಿನದ ಬೆಳಿಗ್ಗೆ ಬಿಟ್ಟು ಬಂದ ಊರನ್ನು ಅರಸಿಕೊಂಡು ನಡೆಯುತ್ತಿದ್ದ
ಅವರ ಗಮನಕ್ಕೆ ಬಾರದಂತೇ ನಸುಕಾಗತೊಡಗಿತ್ತು. ಕಾಡಿನ ನಿಕಟ ಒಡನಾಟವಿದ್ದವರಿಗೆ ಮಾತ್ರ
ಅರಿವಾಗಬಹುದಾದ ಅಗೋಚರ ಬದಲಾವಣೆಗಳು ಅವರ ಸುತ್ತ ಆಗುತ್ತಿತ್ತು. ರಾತ್ರಿಯ ಕತ್ತಲಲ್ಲಿ
ಅದೃಶ್ಯ ಕೀಟಗಳು, ಹಕ್ಕಿಗಳು ತಮ್ಮ ಚಿರಿಪಿರಿ ಸದ್ದನ್ನು ಕೊಂಚ ಕೊಂಚವಾಗಿ ನಿಲ್ಲಿಸುತ್ತ
ಬಂದಂತೆ, ಬೇರೆ ತೆರನಾದ ಸದ್ದುಗಳು ಹೊಮ್ಮತೊಡಗಿದ್ದವು. ಸಣ್ಣದಾಗಿ ಬೀಸತೊಡಗಿದ ಗಾಳಿಗೆ
ಸ್ಥಬ್ದವಾಗಿದ್ದ ಮರಗಳ ಎಲೆಗಳು ಕಟಕಟ ಎಂದು ಮರ್ಮರಿಸತೊಡಗಿದ್ದವು. ಒಂದು
ಆಹ್ಲಾದಕರವಾದ ವಾತಾವರಣ ಗೊತ್ತೇ ಆಗದಂತೆ ಸುತ್ತೆಲ್ಲ ಆವರಿಸಿಕೊಳ್ಳುತ್ತಿತ್ತು.
20
ಮೌನವಾಗಿ ನಡೆಯುತ್ತಿದ್ದ ಗಿರಿಧರ ಇದ್ದಕ್ಕಿದ್ದಂತೇ “ ಶಂಕರಶೆಟ್ಟಿ, ನಿನಗೆ ಚಂದ್ರಗುತ್ತಿ ಗುಡ್ಡದ
ಸಾಲು ಗೊತ್ತಲ್ಲ?” ಎಂದ.
ಯಾತಕ್ಕೆ ಕೇಳುತ್ತಿದ್ದಾನೆ ಎನ್ನುವ ಗೊಂದಲದಲ್ಲೇ “ ಗೊತ್ತು, ಯಾಕೆ?” ಎಂದ ಶಂಕರಶೆಟ್ಟಿ.
“ ಆ ಹತ್ತಾರು ಮೈಲುಗಳ ಉದ್ದದ ಚಂದ್ರಗುತ್ತಿ ಗುಡ್ಡದ ಸಾಲು ಉಂಟಲ್ಲ, ಆ ಗುಡ್ಡಗಳ
ನಡುವೆ ಕಳ್ಳರ ಕಣಿವೆ ಅನ್ನೋದು ಇದೆಯಂತೆ. ಗುತ್ತಿ ಮೇಲಿನ ಕೋಟೆಯಿಂದ ಕಾಣುತ್ತದೆ
ಎಂದು ಯಾರೋ ಹೇಳಿದ್ದರು. ಹಿಂದೆ ರಾಜರ ಆಳ್ವಿಕೆ ಕಾಲದಲ್ಲಿ ಯಾರೋ ಒಬ್ಬ ದರೋಡೆಕೋರ
ಒಂದು ತಂಡವನ್ನಿಟ್ಟುಕೊಂಡು ಸುತ್ತೆಲ್ಲ ಲೂಟಿ ಮಾಡ್ತಿದ್ದನಂತೆ. ಎತ್ತರೆತ್ತರದ ಬಿಳೇಕಲ್ಲಿನ ಆ
ಗುಡ್ಡದ ಕಣಿವೆಯಲ್ಲಿ ಗುಹೆಗಳಿದ್ದು ಅಲ್ಲೆಲ್ಲಾ ಆತ ಸಂಗ್ರಹಿಸಿಟ್ಟ ಎಷ್ಟೋ ಸಂಪತ್ತುಗಳಿವೆಯಂತೆ.
ಆ ದರೋಡೆಕೋರನನ್ನು, ಅವನ ತಂಡವನ್ನು ಲೂಟಿ ಮಾಡಲು ಬಂದಾಗ ಬ್ರಿಟಿಷರು
ಅಟಕಾಯಿಸಿಕೊಂಡು ಕೊಂದು ಹಾಕಿದ ನಂತರದಲ್ಲಿ ಅವಕ್ಕೆಲ್ಲಾ ವಾರಸುದಾರರಿಲ್ಲದೇ, ಉಳಿದವರಿಗೆ
ಅವೆಲ್ಲಿವೆ ಎಂದು ಪತ್ತೆ ಹಚ್ಚಲೂ ಆಗದೇ ಉಳಿದಿದೆಯಂತೆ. ಈಗ ಅದರ ಮೇಲೆ ಖದೀಮರ
ಕಣ್ಣು ಬಿದ್ದಿದ್ದು ಅದನ್ನು ಎತ್ತೋ ಸ್ಕೆಚ್ ಹಾಕಿ ಚಾರ್ಟು, ಮ್ಯಾಪು, ಲ್ಯಾಪಟಾಪ್ ಇಟ್ಟುಕೊಂಡು
ಕೆಲವರು ಓಡಾಡ್ತಿದಾರಂತೆ. ನಿನ್ನೆ ರೇಂಜರ್ ಹೇಳಿದ್ರಲ್ಲ, ಹಳೇ ದೇವಸ್ಥಾನಗಳನ್ನ ಅಗೆದ ಸುದ್ದಿ.
ಅದನ್ನ ಕೇಳಿದಾಗ ಇದೂ ನೆನಪಾಯ್ತು” ಎಂದ ಗಿರಿಧರ.
“ ಗುತ್ತಿ ಗುಡ್ಡದಲ್ಲಿ ಅಂಥಾ ಕರಾಮತ್ತೆಲ್ಲ ನಡೀತಾ ಇದ್ರೆ ನಾವು ಮಾಡೋದಾದ್ರೂ ಏನು?”
ಶಂಕರಶೆಟ್ಟಿಗೆ ತಲೆಬುಡ ತೋಚಲಿಲ್ಲ.
“ ಆ ಕಣಿವೆಗೆ ಹೋಗೋದು ಇಲ್ಲೆಲ್ಲ ಬಂದಷ್ಟು ಸಲೀಸಲ್ಲವಂತೆ. ಈಗಲೂ ತೋಳ, ಕರಡಿ,
ಚಿರತೆ ಮುಂತಾದವು ಇದೆಯಂತೆ ಮಾರಾಯಾ, ಹೇಗಾದ್ರೂ ಒದ್ದಾಡಿ ಹೋದ್ರೂ ವಾಪಸ್ಸು
ಬರೋದಕ್ಕೆ ದಾರಿಯೇ ಸಿಕ್ಕೋದಿಲ್ಲವಂತೆ. ಎಲ್ಲ ಅಂತೆ ಕಂತೆ. ಏನೇ ಆದ್ರೂ ಒಂದು ಸಾರಿ ಅಲ್ಲಿಗೆ
ಹೋಗಿಬರಬೇಕು”
ಗಿರಿಧರ ಮಾತು ಮುಗಿಸುವ ಮುಂಚೆಯೇ ಶಂಕರಶೆಟ್ಟಿ ಕುಣಿದಾಡತೊಡಗಿದ್ದ. “ ನನಗೆ ಅನಿಸಿತ್ತು.
ನಿಮ್ಮ ಹುಚ್ಚು ಬಿಟ್ಟಿಲ್ಲ ಅಂತಾ. ಇದನ್ನೇ ಅರಗಿಸಿಕೊಂಡಿಲ್ಲ. ಅಷ್ಟರಲ್ಲೇ ಮತ್ತೊಂದು ಪತ್ತೇದಾರಿಗೆ
ಹೊರಟ್ರಲ್ಲ ಮಾರಾಯ್ರೇ, ನೋಡಿ, ನೀವೇಷ್ಟೇ ಹೇಳಿ, ನಾನು ಜನ್ಮಕ್ಕೂ ಇಂಥ ಕೆಲಸಕ್ಕೆ
ಬರೋನಲ್ಲ. ನಿಮ್ಮ ದಮ್ಮಯ್ಯ, ನನ್ನ ಕರೀಬೇಡಿ” ಎಂದು ಅರ್ಧ ಕೋಪದ, ಇನ್ನರ್ಧ ವ್ಯಾಕುಲದ
ಮಾತಿನಲ್ಲಿ ಅಸಹನೆ ವ್ಯಕ್ತಪಡಿಸಿದ. ಗಿರಿಧರ ತನ್ನ ಎಡಬಿಡಂಗಿತನದಿಂದ ಇಂಥದ್ದೇ ಅಪಾಯದ
ಕೆಲಸಕ್ಕೆ ಕೈ ಹಾಕಿ ಗಂಡಾಂತರ ತಂದುಕೊಳ್ಳುತ್ತಾನೆ ಎನ್ನುವ ಕಕ್ಕುಲಾತಿಯೂ ಅದರ ಹಿಂದೆ
ಇತ್ತೇನೋ?
“ ಸುಮ್ಮನೆ ಅನ್ನಿಸಿದ್ದನ್ನ ಹೇಳಿದೆ. ಹೇಳಿದಾಕ್ಷಣ ಹೋಗಲಿಕ್ಕಾಗ್ತದಾ?” ಎಂದ ಗಿರಿಧರನ ಮಾತಿಗೆ
“ ನಿಮ್ಮ ತಲೆಗೆ ಒಂದು ವಿಷಯ ಹೊಕ್ಕಿತು ಅಂದ್ರೆ ಅದನ್ನೇ ಬೆನ್ನು ಹತ್ತುತ್ತೀರಿ ಅಂತಾ ನಾನು
ನೂರಕ್ಕೆ ನೂರು ಹೇಳ್ತೇನೆ. ನಾಳೆ ಊರಿಗೆ ಹೋದವರೇ ಅಲ್ಲಿಗೆ ಹೋದರೂ ಹೋದ್ರೇ. ಈ
ಗಾಂಜಾ ಗಿಡ ಹುಡುಕಲು ಬಂದದ್ದೇ ಹತ್ತು ಕೆರೆ ನೀರು ಕುಡಿದಂಗಾಗಿದೆ. ಮತ್ತೆ ಯಾತರದ್ದೂ
ಸಾವಾಸ ಬ್ಯಾಡ ಅನ್ನಿಸ್ತದೆ. ಎಂಥಾ ಹುಚ್ಚು ಮಾರಾಯ್ರೇ ನಿಮ್ದು. ಎಂತಾ ಹುಡುಕ್ತಿರೋ,
ಏನ್ಮಾಡ್ತೀರೋ?” ಎಂದು ಶಂಕರಶೆಟ್ಟಿ ನಿಡುಸುಯ್ದ.
“ ನಿನಗೆ ನಿಜವಾಗಿ ಹೇಳಬೇಕೋ ಶಂಕರಶೆಟ್ಟಿ, ಎಲ್ಲರೂ ಒಂದಲ್ಲ ಒಂದು ಸೆಳೆತದಲ್ಲಿ
ಒದ್ದಾಡ್ತಿರೋರೇ. ಗಾಂಜಾ ಬೆಳೆಯೋನಿಗೆ ಹಣದ ಸೆಳೆತ, ಅದನ್ನು ಕಾಯೋರಿಗೆ ಬದುಕಿನ ಸೆಳೆತ.
ನಿನಗೆ ಮನೆ,ಹೆಂಡತಿ,ಮಕ್ಕಳ ಸೆಳೆತವಾದರೆ ನನಗೆ ಇಂಥ ಉಪದ್ವಾಪಗಳತ್ತಲೇ ಸೆಳೆತ. ಗೋವಿಂದ
ಹೆಗಡೆದು ಒಂಥರಾ, ಮತ್ತೊಬ್ಬನದು ಮತ್ತೊಂದು ಥರಾ, ಒಟ್ಟಿನಲ್ಲಿ ಈ ಜಗತ್ತೇ ಒಂದು ಗಾಂಜಾ
ಗ್ಯಾಂಗ್” ಕ್ಷೀಣವಾದ ಸ್ವರದಲ್ಲಿ ಹೇಳಿದ ಗಿರಿಧರ.
ಸ್ವಲ್ಪ ದೂರ ಬಂದದ್ದೇ ದೂರದಲ್ಲಿ ನಾಲ್ಕಾರು ಮಿಣುಕು ದೀಪಗಳು ಗೋಚರಿಸಿತು. ಗಮನವಿಟ್ಟು
ನೋಡಿದಾಗ ಬೀದಿ ದೀಪಗಳಂತೆ ಕಂಡವು. ಹಾಗೆಯೇ ನಾಯಿ ಬೊಗಳುವದು ಕೇಳತೊಡಗಿತು. ಆ
ಹೆಪ್ಪುಗಟ್ಟಿದ ಮೌನವನ್ನು ಕೋಳಿಯೊಂದರ ಕೂಗು ಸೀಳಿತು.
“ ಯಾವ್ದೋ ಊರು ಹತ್ರ ಬಂತ್ರೋ! ಕೋಳಿಯೂ ಕೂಗ್ತಾ ಇದೆ. ಹಾಗಾದ್ರೆ ಬೆಳಗಾಗ್ತಿದೆ
ಅಂತಾಯ್ತು” ಅರಬರೆ ಗೊಂದಲವಾಗುತ್ತಿದ್ದರೂ ಸಡಗರಪಟ್ಟ ಶಂಕರಶೆಟ್ಟಿ.
ಗಂಗಾಧರ ಕೊಳಗಿ
13 ಅಗಸ್ಟ 2014- ರಾತ್ರಿ 12.23.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *