ಸ್ಟೈರೀನ್ ವಿಷಾನಿಲದ ದೂರದ ದುರಂತಗಳು

ವಿಶಾಖಾಪಟ್ಟಣದ ಅಂಚಿನಲ್ಲಿ ಎಲ್‌ಜಿ ಪಾಲಿಮರ್ಸ್‌ ಫ್ಯಾಕ್ಟರಿಯ ಅನಿಲ ಸೋರಿಕೆಯಾಗಿ 11 ಜನರು ಸತ್ತು ನೂರಾರು ಜನರು ಆಸ್ಪತ್ರೆಗೆ ಸೇರಿದ್ದಾರೆ. ಎಲ್ಲ ಚಾನೆಲ್‌ಗಳೂ ಅದನ್ನೇ ಚರ್ಚಿಸುತ್ತಿವೆ. ಈ ವಿಷಾನಿಲದಿಂದ ಕ್ಯಾನ್ಸರ್ ಬರುತ್ತದೆ, ನರಮಂಡಲಕ್ಕೆ ಧಕ್ಕೆ ಆಗುತ್ತದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅವರು ಹೇಳದೇ ಉಳಿದ ದೂರದ, ಖಾರದ ಸಂಗತಿಗಳು ಇಲ್ಲಿವೆ:

ಸ್ಟಯ್ರೀನ್ ದ್ರವದಿಂದ ಪಾಲಿಸ್ಟೈರೀನ್ ವಸ್ತುಗಳು ತಯಾರಾಗುತ್ತವೆ. ಹಗುರ ಥರ್ಮೊಕೊಲ್‌ ನಿಂದ ಹಿಡಿದು ತಟ್ಟೆ, ಲೋಟ, ನಾನಾ ಬಗೆಯ ಪ್ಯಾಕಿಂಗ್ ವಸ್ತು, ಮಕ್ಕಳ ಆಟಿಗೆ, ದಾರ, ವಸ್ತ್ರ, ಫೋಮ್ (ನೊರೆ) ಬೆಡ್ಡಿಂಗ್, ಸೋಫಾ ಸ್ಪಾಂಜ್‌… ಹೀಗೆ ಇದರ ಪಟ್ಟಿ ತುಂಬ ಉದ್ದ ಇದೆ. ನೀವು ಕೂತ ಕುರ್ಚಿಯ ಮೆದು ಹಿಡಿಕೆಯಲ್ಲಿ, ನಿಮ್ಮ ಫೆಲ್ಟ್ ಟಿಪ್ಡ್ ಪೆನ್ನಿನ ಮೂತಿಯಲ್ಲೂ ಇದೇ ವಸ್ತು ಇದೆ.
ಈ ಯಾವುದಾದರೂ ಹಳತಾದರೆ ಅದನ್ನು ಕರಗಿಸಿ ಹೊಸವಸ್ತುವನ್ನಾಗಿ ಮಾಡಲು ಸಾಧ್ಯವಿಲ್ಲ. ಸುಟ್ಟರೆ (ಇತರ ಪ್ಲಾಸ್ಟಿಕ್ ವಸ್ತುಗಳ ಹಾಗೆ) ಅದರಿಂದ ಹೊಮ್ಮುವ ಹೊಗೆಯಲ್ಲಿ ಡಯಾಕ್ಸಿನ್, ಫ್ಯೂರಾನ್, ಟಿಸಿಡಿಡಿ ಮುಂತಾದ ವಿಷ ಸಂಯುಕ್ತಗಳು ಇರುತ್ತವೆ. ಅವುಗಳಿಂದ ಕೆಲವರಿಗೆ ಕ್ಯಾನ್ಸರ್‌, ಕಿಡ್ನಿ ಸಮಸ್ಯೆ, ನರರೋಗ, ಕರುಳಿನ ಊತ ಮುಂತಾದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ.
ನಗರದ ಪೌರ ಕಾರ್ಮಿಕರು ದಿನವೂ ಅಲ್ಲಲ್ಲಿ ಬೀದಿಬದಿಯಲ್ಲಿ ಅಂಥವನ್ನು ಸುಡುತ್ತಿರುತ್ತಾರೆ. ಡಯಾಕ್ಸಿನ್ ವಿಶೇಷವಾಗಿ ನಮ್ಮ ದೇಹದ ಹಾರ್ಮೋನ್ ಜೊತೆ ಸೇರಿಕೊಂಡು, ನಮ್ಮ ರೋಗನಿರೋಧಕ ಶಕ್ತಿಯನ್ನು, ಸಂತಾನಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಮತ್ತು/ಅಥವಾ ಜನಿಸಿದ ಶಿಶುವಿನಲ್ಲಿ ಆರೋಗ್ಯವನ್ನು ಏರುಪೇರು ಮಾಡುತ್ತದೆ. ಈ ಹೊಗೆಯ ಇನ್ನಿತರ ಅಡ್ಡ ಪರಿಣಾಮಗಳ ಪಟ್ಟಿಯೂ ತುಂಬ ಉದ್ದ ಇದೆ ಬಿಡಿ.
ಸುಡದೇ ಇದ್ದರೆ ಅಂಥ ತ್ಯಾಜ್ಯವಸ್ತುಗಳು ನಿಧಾನಕ್ಕೆ ಚೂರುಚೂರಾಗಿ, ಅವುಗಳ ಸೂಕ್ಷ್ಮ ಕಣಗಳು ಗಾಳಿಯಲ್ಲಿ ತೇಲುತ್ತ ನಮ್ಮ ಶ್ವಾಸಕೋಶಕ್ಕೆ ಬರುತ್ತವೆ. ಅಥವಾ ನ್ಯಾನೊ ಕಣಗಳು ನೀರಿಗೆ, ಆಹಾರವಸ್ತುಗಳಿಗೆ ಸೇರಿ ನಮ್ಮ ನರಮಂಡಲಕ್ಕೂ ಬರುತ್ತವೆ.
ಅವೆಲ್ಲಕ್ಕಿಂತ ಹೆಚ್ಚಿನ ಅಪಾಯ ಏನೆಂದರೆ ಅವು ಹೊಳೆಹಳ್ಳ ಸೇರಿ, ಸಮುದ್ರಕ್ಕೂ ಹೋಗಿ ಪಶುಪಕ್ಷಿಗಳಿಗೆ ಜಲಚರಗಳಿಗೆ ಏನೆಲ್ಲ ಬಗೆಯ ಸಂಕಟಗಳನ್ನು ತಂದೊಡ್ಡುತ್ತವೆ. ಆಳ ಸಾಗರದಲ್ಲಿ ಚಕ್ರಮಡುವಾಗಿ ಸಾವಿರಾರು ಕಿಲೊಮೀಟರ್ ದೂರದವರೆಗೆ ಅವು ಹಾವಳಿ ಎಬ್ಬಿಸಿವೆ.
[ಶಾಂತಸಾಗರದಲ್ಲಿ ಜನವಸತಿಯಿಂದ 2200 ಕಿ.ಮೀ. ದೂರದ ‘ಮಿಡ್ವೇ ಐಲ್ಯಾಂಡ್’ ಎಂಬ ನಿರ್ಜನ ದ್ವೀಪದಲ್ಲಿ ವಾಸಿಸುತ್ತಿರುವ ಪಕ್ಷಿಗಳು ಹೇಗೆ ಸಂಕಟದಿಂದ ಸಾಯುತ್ತಿವೆ ಎಂಬ ಹೃದಯವಿದ್ರಾವಕ ಸಾಕ್ಷ್ಯಚಿತ್ರ ನೋಡಿ: https://www.youtube.com/watch?v=pUM58LIU2Lo ]

ನಿಮ್ಮ ಮಕ್ಕಳು ಸ್ಕೂಲ್ ಪ್ರಾಜೆಕ್ಟ್ ಮಾಡಲೆಂದು ಅಂಗಡಿಗೆ ಹೋಗಿ ಥರ್ಮೊಕೊಲ್ ಹಾಳೆಗಳನ್ನು ತರುವಾಗ ಈ ಸಾಕ್ಷ್ಯಚಿತ್ರವನ್ನು ತೋರಿಸಿ.
ಈ ಪಾಲಿಸ್ಟೈರೀನ್ ಹಾವಳಿ ಜಗತ್ತಿಗೆಲ್ಲ ವ್ಯಾಪಿಸಿದೆ. ಇದು ಜೀವಲೋಕಕ್ಕೆ ಕ್ಯಾನ್ಸರ್ ತರುತ್ತಿದೆ.
“ನಾವೇನು ಮಾಡೋಣ, ಬದಲೀ ವಸ್ತು ಬೇರೇನಿದೆ?” ಎಂದು ಪ್ರಶ್ನಿಸುತ್ತೀರಾ?
ಥರ್ಮೊಕೊಲ್ ತಟ್ಟೆಗಳಲ್ಲಿ ತಿಂಡಿ ಪೇಯಗಳನ್ನು ಕೊಟ್ಟರೆ ಬೇಡವೆನ್ನಿ. (IIScಯ ಪರಿಸರ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಮನೆಯಿಂದ ಆಚೆ ಹೋಗುವಾಗ ತಮ್ಮ ಚೀಲದಲ್ಲಿ ತಮ್ಮದೇ ಲೋಹದ ಲೋಟವನ್ನು ಒಯ್ಯುತ್ತಾರೆ. ಕಾಗದದ ಕಪ್‌ನಲ್ಲಿ ಕೂಡ ಸುತರಾಂ ಪೇಯ ಕುಡಿಯುವುದಿಲ್ಲ).
ಮುತ್ತುಗದ ಎಲೆಯನ್ನು ಅಥವಾ ಅಡಿಕೆ ಹಾಳೆಯನ್ನು ತಟ್ಟೆಲೋಟಗಳ ರೂಪದಲ್ಲಿ ತಯಾರಿಸುತ್ತಿದ್ದಾರೆ, ಅದನ್ನೇ ಬಳಸೋಣ; ಸ್ಥಳೀಯ ಕೃಷಿಕರಿಗೆ, ಕಿರು ಉದ್ಯಮಿಗಳಿಗೆ ಬದುಕಲು ಆಸರೆ ಸಿಗುತ್ತದೆಂದು ಸಲಹೆ ಕೊಡಿ.
ನೀವು ಖರೀದಿಸಿದ ಫ್ರಿಜ್, ಟಿವಿ, ಮೊಬೈಲ್ ಜೊತೆ ಇಂಥ ಪ್ಯಾಕಿಂಗ್ ವಸ್ತುಗಳು ಬಂದಾಗ ಅದನ್ನು ತಿಪ್ಪೆಗೆ ಎಸೆಯುವ ಬದಲು ತ್ಯಾಜ್ಯವಿಲೆವಾರಿ ಘಟಕಕ್ಕೇ ಕಟ್ಟುನಿಟ್ಟಾಗಿ ಕಳಿಸಿ. ಅಲ್ಲಿ ಅವರು ಹುಷಾರಾಗಿ ತಜ್ಞರ ನಿರ್ದೇಶನದ ಪ್ರಕಾರ ಸುಡುಗೂಡುಗಳಲ್ಲಿ ಸುಡುತ್ತಾರೊ ಅಥವಾ ಹೂಳುತ್ತಾರೊ, ಅವರಿಗೆ ಬಿಡಿ.
ಕಸದ ತೊಟ್ಟಿಗೆ ಎಸೆದರೆ ಮುಗ್ಧ ಪ್ರಾಣಿ ಪಕ್ಷಿಗಳ ಹೊಟ್ಟೆ ಸೇರಿ ಅದು ಏನೆಲ್ಲ ಸಂಕಟಕ್ಕೆ ಕಾರಣವಾಗುತ್ತದೆ ಎಂದು ಎಳೆಯ ಮಕ್ಕಳಿಗೆ ತಿಳಿಸಿ ಹೇಳಿ. ಶಿಕ್ಷಕರಿಗೂ ತಿಳಿಸಿ ಹೇಳಿ. ನೀವು ಪತ್ರಕರ್ತರಾಗಿದ್ದರೆ ನಮ್ಮ ಹಿತ್ತಿಲಿನ ಇಂಥ ದುರಂತಗಳನ್ನು ಅಪರೂಪಕ್ಕಾದರೂ ವರದಿ ಮಾಡುತ್ತಿರಿ. ನಮ್ಮ ಬದುಕನ್ನು ಆವರಿಸಿದ ಮೈಕ್ರೋಬೀಡ್ಸ್‌ ಬಗ್ಗೆ ತುಸು ಬೆಳಕು ಚೆಲ್ಲಿ.
ಪ್ಲಾಸ್ಟಿಕ್ ಟೆಂಟ್‌ಗಳಲ್ಲಿ ವಾಸಿಸುವ ಬಡ ಕಟ್ಟಡ ಕಾರ್ಮಿಕರು ಇಂಥ ತ್ಯಾಜ್ಯ ಪ್ಲಾಸ್ಟಿಕ್ಕನ್ನೇ ಅಡುಗೆ ಒಲೆಯ ಬೆಂಕಿ ಉರಿಸಲು ಬಳಸುತ್ತಿರುತ್ತಾರೆ. ಅಂಥ ದೃಶ್ಯ ಕಂಡರೆ ಅವರಿಗೆ ಅದರ ಅಪಾಯದ ಬಗ್ಗೆ ತಿಳಿಸಿ ಹೇಳಲು ಸಾಧ್ಯವೊ ನೋಡಿ. ಹೆಣ್ಣುಮಕ್ಕಳಿಗೆ ಅಸ್ತವ್ಯಸ್ತ ಋತುಚಕ್ರ, ಅಂಗವಿಕಲ ಮಕ್ಕಳ ಜನನ ಸಾಧ್ಯತೆ ಬಗ್ಗೆ ಕಾರ್ಮಿಕ ಮಹಿಳೆಗೆ ಹೆಚ್ಚಿನ ಕಾಳಜಿ ಇರುತ್ತದೆ.

ನೀವು ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿ ನಿಮ್ಮ ಸಂಪರ್ಕಕ್ಕೆ ಬಂದರೆ ಪ್ಲಾಸ್ಟಿಕ್ ಹಾವಳಿಯ ಬಗ್ಗೆ, ತ್ಯಾಜ್ಯ ವಿಲೆವಾರಿಯ ಬಗ್ಗೆ ಪ್ರಸ್ತಾಪ ಮಾಡಲು ಸಾಧ್ಯವೊ ನೋಡಿ.
ಪಾಲಿಸ್ಟಿರೀನ್ ಅಥವಾ ಥರ್ಮೊಕೊಲ್ ತಯಾರಿಕೆಯ ಘಟಕದಲ್ಲಿ ದುರಂತ ಸಂಭವಿಸಿದ್ದು ಇದೇ ಮೊದಲೇನಲ್ಲ. ಪಶ್ಚಿಮ ಬಂಗಾಳದಲ್ಲಿ ಇಂಥ ಫ್ಯಾಕ್ಟರಿಗಳಲ್ಲಿ ಹಿಂದೆ ಮೂರು ಬಾರಿ ಅಗ್ನಿದುರಂತ ಸಂಭವಿಸಿದೆ. ದಟ್ಟ ಕರೀ ಹೊಗೆ ಊರೆಲ್ಲ ವ್ಯಾಪಿಸಿದ ಚಿತ್ರಗಳು ನನ್ನ ಬಳಿ ಇವೆ.
ಸರಕಾರಿ ತಜ್ಞರಿಗೆ ಇವೆಲ್ಲ ಗೊತ್ತಿಲ್ಲವೆಂದೇನಲ್ಲ. ಅವರ ದೌರ್ಬಲ್ಯ ನಮಗೆಲ್ಲ ಗೊತ್ತೇ ಇದೆ. “ಇಂಥವಕ್ಕೆ ಅವಕಾಶ ಕೊಡಕೂಡದು, ಬದಲೀ ವಸ್ತುಗಳ ತಯಾರಿಕೆಗೆ ದಾರಿ ಹುಡುಕೋಣ” ಎಂದು ಅವರೇನಾದರೂ ಖಡಕ್ ಪ್ರತಿರೋಧ ಒಡ್ಡಿದರೆ, ಅವರು ಸರಕಾರಿ ತಜ್ಞರಾಗಿ ಉಳಿಯುವುದಿಲ್ಲ.
ವಿಶಾಖಾ ಪಟ್ಟಣದ ಬಳಿಯ ಈ ಎಲ್ಜಿ ಪಾಲಿಮರ್ಸ್ ಕಂಪನಿ ಕಾನೂನಾತ್ಮಕ ಪರಿಸರ ಪರಿಣಾಮ ಮೌಲ್ಯಮಾಪನ (EIA) ಮಾಡಿಸಿರಲೇ ಇಲ್ಲ ಎಂಬ ಆರೋಪಗಳಿವೆ.

ಕೇಂದ್ರ ಸರಕಾರ ಇದೇ EIA ಕಾನೂನನ್ನು ಇನ್ನಷ್ಟು ಸಡಿಲಗೊಳಿಸಲು ಹೊರಟಿದೆ. ಕಾರ್ಖಾನೆ ಸ್ಥಾಪಿಸಬಯಸುವವರಿಗೆ ಆದಷ್ಟೂ ಕಡಿಮೆ ಕಿರುಕುಳ ಕೊಡಬೇಕೆಂಬುದು ಅದರ ಉದ್ದೇಶವಾಗಿದೆ.
ಕಾರ್ಖಾನೆಗಳ ಸಂಸ್ಥಾಪಕರಿಗೆ ಕಿರುಕುಳ ಆಗಕೂಡದು. ಸುತ್ತ ವಾಸಿಸುವ ಮುಗ್ಧರಿಗೆ ಹಾಗೂ ದೂರ ಜಗತ್ತಿನಲ್ಲಿ ವಾಸಿಸುವ ಮುಗ್ಧಜೀವಿಗಳಿಗೆ ಕಿರುಕುಳ ಉಂಟಾದರೆ ಚಿಂತೆಯಿಲ್ಲ. ಅಪಾಯಕ್ಕೆ ಸಿಲುಕಿದ ಮುಗ್ಧ ಜನರಿಗೆ ತೆರಿಗೆದಾರರ ಹಣದಿಂದ ಧಾರಾಳ ಪರಿಹಾರ ಘೋಷಿಸಿದರೆ ಆಯಿತು. ಇತರ ಜೀವಿಗಳಿಗೆ ಮತದಾನದ ಹಕ್ಕೂ ಇಲ್ಲ. ಮೇಲಾಗಿ ಆಕ್ಷೇಪ ಎತ್ತಲು ಅವಕ್ಕೆ ದನಿಯೇ ಇಲ್ಲವಲ್ಲ.
ಏನೋ. ಅಂತೂ ಈ ಸ್ಟೈರೀನ್ ದ್ರವ ಅನ್ನೋದು ಸೋರಿಕೆ ಆಗದಿದ್ದರೂ ದುರಂತ; ಅನಿಲ ರೂಪದಲ್ಲಿ ಸೋರಿಕೆ ಆಗಿದ್ದಂತೂ ಪ್ರತ್ಯಕ್ಷ ಕಾಣುವ ದುರಂತ.

-nagesh hegde, bakkemane.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

samajamukhi.net news round….ಉಂಚಳ್ಳಿ ಜಲಪಾತದ ಬಳಿ ಎನ್.ಎಸ್.ಎಸ್.‌ ಶ್ರಮದಾನ,ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?

ಇನ್ಮುಂದೆ ವಿಧಾನಸೌಧ ವೀಕ್ಷಣೆಗೂ ಶುಲ್ಕ: ಎಷ್ಟು…?: ಇಲ್ಲಿದೆ ಮಾಹಿತಿ ಆಡಳಿತ ಶಕ್ತಿಕೇಂದ್ರ ವಿಧಾನಸೌಧಕ್ಕೆ ಶಾಶ್ವತ ವಿದ್ಯುತ್ ದೀಪಾಲಂಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಲೋಕಾರ್ಪಣೆಗೊಳಿಸಿದ ಬೆನ್ನಲ್ಲೇ...

ಸ್ತ್ರೀ & ಕವಿತೆ ಇಲ್ಲದಿದ್ದರೆ… ಬದುಕಿಲ್ಲ

ಕವಿತೆ ಜೀವಪರ ಕಾವ್ಯ ಕ್ಷಮಿಸುವ,ಸಹಿಸುವ,ಹೋರಾಟಕ್ಕೆ ಉತ್ತೇಜಿಸುವ ಶಕ್ತಿ ಹೊಂದಿದೆ ಎಂದು ಸಾಹಿತಿ ಕೆ.ಬಿ. ವೀರಲಿಂಗನಗೌಡ ಹೇಳಿದ್ದಾರೆ. ಸಿದ್ಧಾಪುರದ ಕ.ಸಾ.ಪ. ಇಲ್ಲಿಯ ಹೊಸೂರಿನ ಎಂ.ಕೆ. ನಾಯ್ಕ...

ಸೌಭಾಗ್ಯಲಕ್ಷ್ಮಿ -a small story of amruta preetam

(ಕರ್ಮಾವಾಲಿ) ‌  ಮೂಲಕತೆ: ಅಮೃತಾ ಪ್ರೀತಮ್‌ ಅನುವಾದ: ನಿವೇದಿತಾ ಎಚ್. ತಂದೂರಿ ಒಲೆಯಲ್ಲಿ  ಹದವಾಗಿ ಬೆಂದು ತಟ್ಟೆಗೆ ಬಂದು ಬೀಳುತ್ತಿದ್ದ ರೋಟಿಗಳು ಎಂತಹವರಲ್ಲೂ ಹಸಿವನ್ನು ...

ಅಕಾಲಿಕ ಮಳೆ, ಜಾತ್ರೆ, ವಾರ್ಷಿಕೋತ್ಸವಗಳಿಗೆ ಅಡ್ಡಿ… ಶಾಸಕರ ಮಿಂಚಿನ ಸಂಚಾರ!

ಮಲೆನಾಡು ಕರಾವಳಿಯ ಅಕಾಲಿಕ ಮಳೆ ಬೇಸಿಗೆಯ ಉಷ್ಣವನ್ನು ಶಮನ ಮಾಡಿದ್ದರೆ… ಪೂರ್ವನಿಶ್ಚಿತ ಧಾರ್ಮಿಕ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...

ಶನಿವಾರ…ಶಾಸಕರು,ಸಂಸದರ ಕಾರ್ಯಕ್ರಮಗಳು

ಇಟಗಿ ರಾಮೇಶ್ವರ ಮತ್ತು ಪರಿವಾರ ದೇವಾಲಯಗಳ ಅಷ್ಟಬಂಧ ಕಾರ್ಯಕ್ರಮದಲ್ಲಿ ಏ.೫ ರ ಶನಿವಾರ ಸಾಯಂಕಾಲ ಸಂಜೆ ನಾಲ್ಕರಿಂದ ಭರತನಾಟ್ಯ ರಕ್ಷಾ & ದೀಕ್ಷಾ ರಾವ್‌...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *