ನಮ್ಮ ಸಮಸ್ಯೆಗಳಿಗೆಲ್ಲ ನಿಸರ್ಗದಲ್ಲೇ ಉತ್ತರವಿದೆ

ಈ ಫೊಟೊಗಳನ್ನು ಯಾರು ತೆಗೆದಿದ್ದು?

ಮಲೆನಾಡಿನ ಒಂದು ಕಾಡಂಚಿನ ಮನೆಯ ಕಿಟಕಿಯಲ್ಲಿ ಯಾರೋ ಕ್ಯಾಮರಾ ಹೂಡಿಟ್ಟು ಕ್ಲಿಕ್‌ ಮಾಡಿದ ದೃಶ್ಯಗಳು ಇವು. ಕಳಿತ ಪಪಾಯಿ ಹಣ್ಣನ್ನು ತಿನ್ನಲು ಮೊದಲು ಕಾಗೆ ಬಂತು, ಆಮೇಲೆ ಗಂಡು ಕೋಗಿಲೆ, ಅದರ ಹಿಂದೆ ಹೆಣ್ಣು ಕೋಗಿಲೆ. ಆಬಳಿಕ ಚಂದ್ರಮುಕುಟ ಬಂತು, ತದನಂತರ ಮಂಗಟ್ಟೆ ಪಕ್ಷಿ, ಅದಾದ ಬಳಿಕ ಬಾರ್ಬೆಟ್‌ ಪಕ್ಷಿ, ಆಮೇಲೆ ನೀಲಿ ಚಿಟ್ಟೆ, ಅದರ ಹಿಂದೆ ಅಳಿಲು, ಪಾಳಿಯಲ್ಲಿ ಕೊನೆಗೆ ಮಂಗಣ್ಣ ಬಂದ, ಇಡೀ ಕಾಯನ್ನೇ ಇಳಿಸಿ ಸಾಗಿಸಿದ.
ನೋಡನೋಡುತ್ತ ಅದೊಂದು ಬಗೆಯ ವಿಶಿಷ್ಟ ‘ಜೀವಿವೈವಿಧ್ಯ ದಾಖಲಾತಿ’ ಸಿದ್ಧವಾಯಿತು.

ಇವೊತ್ತು ಮೇ 22 ವಿಶ್ವ ಜೀವಿವೈವಿಧ್ಯ ದಿನ. International Day for Biological Diversity.
ನಮ್ಮ ಸುತ್ತಲಿನ ನಿಸರ್ಗದ ಅಸಲೀ ಸಂಪತ್ತು ಎಷ್ಟಿದೆ ಎಂಬುದನ್ನು ಗಣತಿ ಮಾಡಿ, ಬರೆದು ದಾಖಲೆ ಇಡಬೇಕಾದ ದಿನ. ನಮ್ಮೂರಿನ ಪ್ರಾಣಿ-ಪಕ್ಷಿಗಳ ಪ್ರಭೇದ ಎಷ್ಟು, ಸಸ್ಯಗಳು ಎಷ್ಟು, ಅಣಬೆ-ಕೀಟಗಳೆಷ್ಟು, ಜಲಜೀವಿಗಳು ಎಷ್ಟು, ಬರಿಗಣ್ಣಿನಲ್ಲಿ ಕಾಣುವುದು ಎಷ್ಟೆಷ್ಟು, ಬೈನಾಕ್ಯುಲರ್-ಭೂತಗನ್ನಡಿಗಳಿಗೆ ಕಂಡಿದ್ದೆಷ್ಟು ಎಂಬೆಲ್ಲ ಲೆಕ್ಕ ಇಡುವ ದಿನ.

ಈ ದಿನ ಕರ್ನಾಟಕದ ವಿವಿಧ ಜಿಲ್ಲೆಗಳ ಅಲ್ಲಲ್ಲಿ ಹಿರಿಕಿರಿಯ ಉತ್ಸಾಹಿಗಳು ಈ ಗಣತಿ ಕೆಲಸಕ್ಕೆ ಹೊರಡುತ್ತಿದ್ದಾರೆ. ಹಳ್ಳಿಗಳಲ್ಲಿ ಕೊರೊನಾ ಇಲ್ಲ, ಹಾಗಾಗಿ ಆ ಚಿಂತೆ ಇಲ್ಲ.

ಇಂದಿನಿಂದ ಎರಡು ವಾರ, ಅಂದರೆ ಜೂನ್ 5ರವರೆಗೆ ಜೀವಿವೈವಿಧ್ಯ ದಾಖಲಾತಿಯ ಆರಂಭಿಕ ಕೆಲಸಗಳು ಕೆಲವು ಕಡೆ ನಡೆಯಲಿವೆ. ಈ ವರ್ಷದ ವಿಶ್ವ ಪರಿಸರ ದಿನದ ಘೋಷವಾಕ್ಯವೂ ‘ಜೀವಿ ವೈವಿಧ್ಯ’ ಸಂರಕ್ಷಣೆಯೇ ಆಗಿದೆ. ಇದೇ ನೆಪದಲ್ಲಿ ನಾಡಿನ ಎಲ್ಲ ಗ್ರಾಮಪಂಚಯಾತಿಗಳಲ್ಲೂ ಜೀವಿಜಾಗೃತಿ ಮೂಡಿಸಬೇಕೆಂದು ಕರ್ನಾಟಕ ಜೀವಿವೈವಿಧ್ಯ ಮಂಡಳಿಯ ಆಶಯ.
ಪಂಚಾಯಿತಿಗಳಿಗೆ ಯಾಕೆ ಇದು ಮುಖ್ಯ?

ನಾಡಿನ ಬಹಳಷ್ಟು ಗುಡ್ಡ, ಕೊಳ್ಳ, ಕೆರೆದಂಡೆ, ಬಯಲು ಭೂಮಿಗಳಲ್ಲೂ ಸಸ್ಯ ವೈವಿಧ್ಯ ಕಡಿಮೆ ಆಗುತ್ತಿವೆ. ಆದರೆ ಇತ್ತ ಅಂಗಡಿಗಳಲ್ಲಿ ಮಾಲ್‌ಗಳಲ್ಲಿ ನೋಡಿದರೆ ಸಸ್ಯಮೂಲ nutraceuticals ಉತ್ಪನ್ನಗಳ ವೈವಿಧ್ಯ ದಿನೇದಿನೇ ಹೆಚ್ಚುತ್ತಿದೆ. ಹೊಸಹೊಸ ಕಂಪನಿಗಳು ರಂಗಕ್ಕೆ ಬರುತ್ತಲೇ ಇವೆ. ಆರೋಗ್ಯ, ಮೈಕಾಂತಿ, ಮುಖವರ್ಣ, ಕೇಶಕಾಂತಿ, ರೋಗನಿವಾರಣೆ, ರೋಮನಿವಾರಣೆ ಎಲ್ಲಕ್ಕೂ ಸಸ್ಯಮೂಲ ಉತ್ಪನ್ನಗಳು ಎಲ್ಲಿಂದ ಬರುತ್ತಿವೆ? ಸಾಚಾ ಎಷ್ಟು? ಯಾವ ಪಂಚಾಯತಿಗೆ ಅವು ಎಷ್ಟು ಹಣ ನೀಡಿ ಅಂಥ ಮೂಲದ್ರವ್ಯಗಳ ಸಂಗ್ರಹ ಮಾಡುತ್ತಿವೆ? ಯಾರಿಗೂ ಮಾಹಿತಿ ಇಲ್ಲ! ಪಂಚಾಯಿತಿಗಳಿಗೆ ತಂತಮ್ಮ ಗಿಡಮೂಲಿಕೆಗಳ ಸಂಪತ್ತಿನ ಪರಿಚಯ ಇದ್ದರೆ ಇಂಥ ಲೂಟಿಯನ್ನು ತಡೆಗಟ್ಟಿ ಅದನ್ನೇ ಒಂದು ಆದಾಯಮೂಲವನ್ನಾಗಿ ಮಾಡಿಕೊಳ್ಳಬಹುದು.

ನಮ್ಮ ನಾಡಿನಲ್ಲಿ ಈಗಲೂ ಸಾಕಷ್ಟು ಜೀವಿವೈವಿಧ್ಯ ಉಳಿದಿದೆ. ಆದರೆ ‘ಜೀವಿ ವೈವಿಧ್ಯ’ ಎಂದರೆ ಏನು ಎಂಬುದೇ ಅನೇಕರಿಗೆ ಸ್ಪಷ್ಟ ಕಲ್ಪನೆ ಇಲ್ಲ. ನೀವು ಮರುಭೂಮಿಯ ಓಯಸಿಸ್‌ ಪಕ್ಕದಲ್ಲಿ ಕೂತಿದ್ದರೆ ಹೆಚ್ಚೆಂದರೆ ನಾಲ್ಕೋ-ಆರೋ ಬಗೆಯ ಜೀವಿಗಳ ಗಣತಿ ಮಾಡಬಹುದು. ಹಿಮಬೆಟ್ಟದ ಕೆರೆಯ ಬಳಿ ಹತ್ತು-15 ಜೀವಿಗಳು. ಯುರೋಪ್‌ನ ಸುಂದರ ಸರೋವರದ ಬಳಿ 45-50 ಜೀವಿಗಳಿರಬಹುದು. ಮಾಗಡಿ ಸಮೀಪದ ಮಂಚನಬೆಲೆಯ ಕೆರೆಯಂಚಲ್ಲಿ ಸಲೀಸಾಗಿ ನೂರು ಬಗೆಯ ಜೀವಿಗಳನ್ನು ಲೆಕ್ಕ ಹಾಕಬಹುದು. ಪಶ್ಚಿಮಘಟ್ಟದ ಯಾವುದೇ ತೊರೆಯ ಬಳಿ ಜೀವಿಗಳ ಲೆಕ್ಕ ಮಾಡಲು ಕೂತರೆ ಒಂದು ನೋಟ್‌ಬುಕ್‌ ಸಾಲುವುದಿಲ್ಲ. ನೀರಲ್ಲಿ, ನೆಲದಲ್ಲಿ, ಪೊದೆಯಲ್ಲಿ, ಮರದಲ್ಲಿ, ಆಕಾಶದಲ್ಲಿ ವೈವಿಧ್ಯಮಯ ಜೀವಿಗಳು. ನಮ್ಮ ಭೂಮಿಗೆ ನಮ್ಮೋನಮಃ

ಆದರೆ ನೋಡನೋಡುತ್ತ ಅವೆಲ್ಲ ಹೋಗುತ್ತಿವೆ. ಕಳೆದ ಐದಾರು ದಶಕಗಳಲ್ಲೇ ಭೂಮಿಯ ಶೇಕಡಾ 55 ಜೀವಪ್ರಭೇದಗಳು ಕಣ್ಮರೆ ಆಗಿವೆ. ನಮ್ಮೆದುರೇ ಕಣ್ಮರೆ ಆದರೂ ನಮಗೆ ಗೊತ್ತಾಗುವುದಿಲ್ಲ. ಉದಾಹರಣೆಗೆ: ನಿಮ್ಮೂರಿನ ಕೆರೆಯಲ್ಲಿ 20 ಬಗೆಯ ಜೀವಿಗಳಿದ್ದವು ಅಂದುಕೊಳ್ಳಿ. ಆ ಕೆರೆಯನ್ನು ಮೀನು ಸಾಕಣೆಗೆಂದು ಯಾರೋ ಗುತ್ತಿಗೆ ಪಡೆದು ಅದರಲ್ಲಿ ಕ್ಯಾಟ್‌ಫಿಶ್ (ಮೀಸೆಮೀನು) ಮರಿಗಳನ್ನು ಬಿಟ್ಟರೆ ಆ ಕೆರೆಯ ಎಲ್ಲ ನೈಸರ್ಗಿಕ ಜೀವಿಗಳೂ ಮಟಾಷ್ ಆಗುತ್ತವೆ.

ನಮ್ಮೂರಿನ ಜೀವಿಗಳನ್ನು ನಾವು ರಕ್ಷಿಸಿಕೊಳ್ಳದಿದ್ದರೆ ಅದ್ಯಾರೋ ಜಪಾನ್‌ನಿಂದಲೋ ಕೆನಡಾದಿಂದಲೋ ಬಂದವರು ರಕ್ಷಿಸಲು ಸಾಧ್ಯವಿಲ್ಲ. ದಿಲ್ಲಿಯಲ್ಲೋ ಬೆಂಗಳೂರಿನಲ್ಲೋ ಇದ್ದವರೂ ರಕ್ಷಿಸಲು ಸಾಧ್ಯವಿಲ್ಲ.

ಜೀವಿಗಳ ರಕ್ಷಣೆಗೆಂದು ರಾಷ್ಟ್ರಮಟ್ಟದಲ್ಲಿ ‘‘ಜೀವಿ ವೈವಿಧ್ಯ ಮಂಡಳಿ’ ಇದೆ. ಪ್ರತಿ ರಾಜ್ಯದಲ್ಲೂ ಒಂದೊಂದು ಮಂಡಳಿ ಇದೆ. ಪ್ರತಿ ಜಿಲ್ಲೆ, ಪ್ರತಿ ತಾಲ್ಲೂಕಿನಲ್ಲೂ ಪ್ರತಿ ಪಂಚಾಯತಿಯಲ್ಲೂ ಒಂದೊಂದು ಸಮಿತಿ ಇರಬೇಕೆಂತಲೂ ಕಾನೂನು ಹೇಳುತ್ತದೆ. ಆದರೆ ಆ ಕಾನೂನು ಬಂದು ಹನ್ನೆರಡು ವರ್ಷಗಳೇ ಆದರೂ ಈಗಲೂ ಬಹಳಷ್ಟು ಪಂಚಾಯತ್‌ಗಳಲ್ಲಿ ಜೀವಿವೈವಿಧ್ಯ ಸಮಿತಿಯ ರಚನೆಯೇ ಆಗಿಲ್ಲ.

ಈಗ ನಮ್ಮ ರಾಜ್ಯಮಟ್ಟದ ಮಂಡಳಿಗೆ ಒಬ್ಬ ಪರಿಸರ ಹೋರಾಟಗಾರ, ಕ್ರಿಯಾಶೀಲ ವ್ಯಕ್ತಿ ಅಧ್ಯಕ್ಷರಾಗಿ ನೇಮಕವಾಗಿದ್ದಾರೆ. ಅನಂತ ಅಶೀಸರ. ಇವರು ಹಿಂದೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿ ಅನೇಕ ಉತ್ತಮ ಕೆಲಸಗಳನ್ನು ಅರಣ್ಯ ಇಲಾಖೆಯ ಮೂಲಕ ಮಾಡಿಸಿದ್ದರು. ಈಗ ಅವರು ಎಲ್ಲ 6068 ಪಂಚಾಯತಿಗಳಲ್ಲೂ ಸಮಿತಿಯನ್ನು ರಚಿಸುವಂತೆ ಪಿಡಿಓಗಳಿಗೆ ಆದೇಶ ಕಳಿಸಿದ್ದಾರೆ. ಅವರಿಗೆಲ್ಲ ಜೀವಿವೈವಿಧ್ಯ ಪರಿಚಯದ ತರಬೇತಿ ಕೊಟ್ಟು ಸಂರಕ್ಷಣೆಗೆ ಪ್ರೋತ್ಸಾಹಿಸುವುದು ಉದ್ದೇಶ.

ನಿಮಗೆ ಗೊತ್ತೆ, ಶಿವಮೊಗ್ಗದ ವಿನೋಬಾ ನಗರದ ಅಂಚಿನಲ್ಲಿ ‘ಆಲುಕೊಳ’ ಎಂಬ 14 ಎಕರೆ ಬರಡುಭೂಮಿಯ ಕತೆ? ಅದರಲ್ಲಿ ಪಶ್ಚಿಮಘಟ್ಟದ ಎಲ್ಲ ಮಹತ್ವದ ಸಸ್ಯಗಳನ್ನೂ ಬೆಳೆಸಿ ಈಗ ಅದೊಂದು ಜೀವಖಜಾನೆಯೇ ಆಗಿದೆ. ಆ ಚಂದದವನದಲ್ಲಿ ಇಂದು ಸಮೀಕ್ಷೆ ನಡೆಯಲಿದೆ. ಕುಂದಾಪುರದ ಕುಮ್ಕಿಬೆಟ್ಟ, ಕೊಪ್ಪಳದ ಜರಿಬೆಟ್ಟ, ಶಿಕಾರಿಪುರದ ಚಂದ್ರಕಲಾ ಕಾನು, ಗುಡಿಬಂಡೆಯ ಹಿಂಬದಿಬೆಟ್ಟ, ಕುಮಾರಧಾರಾ ಕೊಳ್ಳದ ಉರುಂಬಿ ಹಳ್ಳ, ಶರಾವತಿ ಕಣಿವೆಯ ಅಂಬಾರಗುಡ್ಡ, ಕಾನ್ಮನೆಯ ಸೊಪ್ಪಿನಬೆಟ್ಟ, ಇಲ್ಲೆಲ್ಲ ಇಂದಿನಿಂದ ಹಿಡಿದು ವಿಶ್ವ ಪರಿಸರ ದಿನ ದವರೆಗೆ ಪ್ರತಿದಿನವೂ ಪರಿಸರ ಸಂರಕ್ಷಣೆಯ ದಿನ ಎಂತಲೇ ಆಚರಿಸಲಿದ್ದಾರಂತೆ.

ಈ ಎರಡು ವಾರಗಳ ಕಾಲ ನಮ್ಮದೇ ಕುಲ, ಜಾತಿ, ಧರ್ಮ ಎಂಬುದನ್ನೆಲ್ಲ ಬದಿಗಿಟ್ಟು ಸಸ್ಯ ಮತ್ತು ಪ್ರಾಣಿಸಂಕುಲದ ಕುಲ, ಜಾತಿ, ಪ್ರಭೇದಗಳ ಗಣತಿ ಮತ್ತು ವರ್ಗೀಕರಣ ನಡೆಯಲಿದೆ.

ಈ ವರ್ಷದ Biodiversity Day ಘೋಷವಾಕ್ಯ ಏನು ಗೊತ್ತೆ “ನಮ್ಮ ಸಮಸ್ಯೆಗಳಿಗೆಲ್ಲ ನಿಸರ್ಗದಲ್ಲೇ ಉತ್ತರವಿದೆ” Our Solutions Are in Nature ಅಂತ.
ಸಮಸ್ಯೆ ಬಂದಿರೋದೇ ಅಲ್ಲಿ! ನಮ್ಮ ಎಲ್ಲ ಸಮಸ್ಯೆಗಳಿಗೂ ಪರಿಹಾರವನ್ನು ನಿಸರ್ಗದಲ್ಲೇ ಹುಡುಕುತ್ತ ಬಂದಿದ್ದರಿಂದಲೇ ಪ್ರಕೃತಿಗೆ ಈ ದುಃಸ್ಥಿತಿ ಬಂದಿದೆ. ಹಾಗಾಗಿ ಈಗ ನಾವು ನಿಸರ್ಗದ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಹೊರಡಬೇಕಾಗಿದೆ. ನಗರಗಳ, (ಕ್ವಾರಂಟೈನ್‌ ಮುಗಿದ ಮೇಲೆ) ಪಟ್ಟಣಗಳ, ಗ್ರಾಮಗಳ ಜನರು ಪ್ರಕೃತಿಯ ಕಡೆ ಮುಖಮಾಡಬೇಕಿದೆ.

ಕೊನೇ ಕುಟುಕು: ನಿಸರ್ಗವನ್ನು ಬಗ್ಗು ಬಡಿಯುವ ಯಂತ್ರವೈವಿಧ್ಯ (ಜೆಸಿಬಿ, ಬುಲ್ಡೋಝರ್, ಇಲೆಕ್ಟ್ರಿಕ್ ಗರಗಸ, ಹಾರ್ವೆಸ್ಟರ್, ಲಾಗ್‌ಲೋಡರ್, ಸ್ಟಂಪ್ ಗ್ರೈಂಡರ್…) ಹೆಚ್ಚುತ್ತ ಹೋದಂತೆ ಜೀವಿವೈವಿಧ್ಯ ಕಡಿಮೆ ಆಗುತ್ತ ಹೋಗುತ್ತಿದೆ.
ನಿಸರ್ಗದಲ್ಲಿ ವೈವಿಧ್ಯ ಕಡಿಮೆ ಆಗುತ್ತ ಹೋದಂತೆ ನಾವು ನಮ್ಮ ದೇಹಕ್ಕೆ ತಳ್ಳುವ ಕೆಮಿಕಲ್‌ಗಳ ವೈವಿಧ್ಯ ಹೆಚ್ಚುತ್ತ ಹೋಗುತ್ತದೆ. ಆರೋಗ್ಯಚಿಂತಕ ಡಾ. ಬಿ.ಎಂ. ಹೆಗ್ಡೆ ಹೇಳುವ ಪ್ರಕಾರ, ಅಮರಿಕದಲ್ಲಿ ಅದೇ ತಾನೆ ಹುಟ್ಟಿದ ಶಿಶುವಿನ ಹೊಕ್ಕಳು ಬಳ್ಳಿಯಲ್ಲಿ 242 ಬಗೆಯ ಕೃತಕ ಕೆಮಿಕಲ್ ಸಂಯುಕ್ತಗಳು ಪತ್ತೆಯಾಗಿವೆ.

ಇದೀಗ ಮೂಲಪ್ರಶ್ನೆ: ಪಪ್ಪಾಯಾ ಗಿಡದ ಜೀವಿವೈವಿಧ್ಯವನ್ನು ದಾಖಲಿಸಿದ ಆ ಫೋಟೊಗ್ರಾಫರ್ ಯಾರು? ನಾನು ‘ಕರ್ನಾಟಕ ದರ್ಶನ’ ಪುರವಣಿಯನ್ನು ನೋಡಿಕೊಳ್ಳುತ್ತಿದ್ದಾಗ ಈ ಸರಣಿ ಫೋಟೊಗಳನ್ನು ಪ್ರಕಟಿಸಿದ್ದೆ. ಈಗ ಫೋಟೋಗಳು ಉಳಿದಿವೆ. ಛಾಯಾಗ್ರಾಹಕರ ಹೆಸರು ಮಾಸಿಹೋಗಿದೆ. ದಯವಿಟ್ಟು ಮುಂದೆ ಬಂದು ನನ್ನ ತಪ್ಪನ್ನು ಕ್ಷಮಿಸಿ ನಿಮ್ಮ ಪರಿಚಯ ಹೇಳಿಕೊಳ್ಳಿ.

[ಕಮೆಂಟ್ ಮಾಡಬಯಸುವವರಿಗೆ ಸೂಚನೆ: ಸಾಧ್ಯವಾದಷ್ಟೂ ಈ ವಿಷಯಕ್ಕೆ ಸಂಬಂಧಿಸಿದ ಪೂರಕ ಮಾಹಿತಿ, ಲೋಗೋ, ಫೋಟೊ, ಜಾಣವಾಣಿ, ಕೊಟೇಶನ್ ಇತ್ಯಾದಿಗಳನ್ನು ಜೊತೆಗಿಟ್ಟರೆ ಒಳ್ಳೆಯದು.]

-ನಾಗೇಶ್ ಹೆಗಡೆ,ಬಕ್ಕೆಮನೆ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *