ಇದೊಂದು ಮುಖ್ಯ ಘಟನೆ: 2020ರ ಫೆಬ್ರವರಿ 12ರಂದು, “ಕರೊನವೈರಸ್ ಅತ್ಯಂತ ಅಪಾಯಕಾರಿ ಸಾಂಕ್ರಾಮಿಕ ಆಗುವ ಲಕ್ಷಣ ಇದೆ; ಅದನ್ನು ಎದುರಿಸಲು ಮುಂಜಾಗ್ರತೆವಹಿಸಿ ಸಮರೋಪಾದಿಯಲ್ಲಿ ಕ್ರಮಕೈಗೊಳ್ಳಬೇಕು,” ಎಂದು ಸರ್ಕಾರವನ್ನು ಮೊದಲು ಆಗ್ರಹಿಸಿದವರು ರಾಹುಲ್ ಗಾಂಧಿ!
ಕೇಂದ್ರ ಸರ್ಕಾರ ಆಗ, “ನಮಸ್ತೇ ಟ್ರಂಪ್” ಕಾರ್ಯಕ್ರಮದ ತೈಯ್ಯಾರಿಯಲ್ಲಿತ್ತು. ‘ಈ ರಾಜಕೀಯ ಎಳಸು, ಇಲ್ಲದ್ದನ್ನೆಲ್ಲಾ ಸೃಷ್ಠಿಸಿ ಸುಮ್ಮನೆ ದಿಗಿಲು ಹುಟ್ಟಿಸುತ್ತಿದೆ,‘ ಎಂದು ಆಳುವವರು ಅಪಹಾಸ್ಯ ಮಾಡಿ ನಕ್ಕರು. “ಇದು ವ್ಯಂಗ್ಯ ಮಾಡುವ ಅಥವಾ, ಕೆಸರೆರಚುವ ಸಮಯವಲ್ಲ; ಹಾಗೆ ಮಾಡಿದರೆ, ಸಾಂಕ್ರಾಮಿಕ-ವಿರೋಧೀ ಯುದ್ಧದಲ್ಲಿ ದೇಶ ಸೋಲುತ್ತದೆ; ಹಾಗಾಗಬಾರದು. ಬೇದಭಾವ ಮರೆತು, ನಾವೆಲ್ಲರೂ ಸೇರಿ ಈ ವಿಪತ್ತನ್ನು ಎದುರಿಸೋಣ; ಇದಕ್ಕೆ ತಜ್ಞರು ತಿಳಿಸಿದ ತಂತ್ರ ಬಳಸೋಣ,” ಎಂದು ರಾಹುಲ್ ವಿನಂತಿಸಿದರು.
ಅವರು ಹೇಳಿದ ಎಲ್ಲವನ್ನೂ ಸರ್ಕಾರ ಲೇವಡಿಮಾಡಿ ತುಚ್ಚೀಕರಿಸಿತು. ಸರ್ಕಾರ, ಕಾಲಿನಲ್ಲಿ ತೋರಿಸಿದ್ದನ್ನು ಶ್ರದ್ಧೆಯಿಂದ ಕಣ್ಣಿಗೊತ್ತಿಕೊಳ್ಳುವ ಪತ್ರಿಕೆ-ಟೀವಿ ಚಾನೆಲ್‍ಗಳು, ರಾಹುಲ್‍ರನ್ನು ಅಣಕಿಸಿ ನಕ್ಕವು. ಅದರ ಪರಿಣಾಮ ಈಗ ಕಣ್ಣೆದುರಿಗಿದೆ. ಇಂಡಿಯಾ, ವಿಸ್ತರಿಸಲ್ಪಟ್ಟ ಲಾಕ್ಡೌನ್ನಲ್ಲಿ ಈಗಲೂ ಇದೆ! ಕೊರೋನವೈರಸ್ ಭಾರತದಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚು ಜನರಿಗೆ ಅಂಟಿ ಮುನ್ನುಗ್ಗುತ್ತಿದೆ; ಮೂರು ಸಾವಿರಕ್ಕೂ ಮಿಕ್ಕಿ ಜನರನ್ನು ಬಲಿ ತೆಗೆದುಕೊಡಿದೆ. ಕೋಟ್ಯಾಂತರ ಜನ ಬೀದಿಗೆ ಬಿದ್ದಿದ್ದಾರೆ. ಹೊಟ್ಟೇಪಾಡಿಗಾಗಿ ದೂರದೂರುಗಳಲ್ಲಿ ಕೆಲಸ ಮಾಡುವವರು, ಮನೆ ಸೇರುವ ಆಶೆಯಲ್ಲಿ, ಹೊಟ್ಟೆಗೇನೂ ಸಿಗದ ರಸ್ತೆಯಲ್ಲಿ, ನಡೆದು ಹೋಗುತ್ತಿದ್ದಾರೆ; ನಡೆಯುತ್ತಲೇ ಅನೇಕರು ಸತ್ತುಹೋಗಿದ್ದಾರೆ. ವಯಸ್ಸಾದವರು ಏದುಸಿರು ಬಿಡುತ್ತಾ ಬಲಹೀನರಾಗಿ ಜೀವ ಕಳೆದುಕೊಂಡಿದ್ದಾರೆ. ಬಸುರಿ ಹೆಣ್ಣುಮಕ್ಕಳು ವೈದ್ಯಕೀಯ ನೆರವು ಸಿಗದೇ ಪ್ರಾಣ ಬಿಟ್ಟಿದ್ದಾರೆ; ಹುಟ್ಟಿದ ಕೂಸುಗಳು ಅಸುನೀಗಿವೆ. ರೈತರು, ಕಾರ್ಮಿಕರು, ಸಣ್ಣಪುಟ್ಟ ವ್ಯಾಪಾರಸ್ಥರು ಹೊಟ್ಟೆಗೆ ತಣ್ಣೀರು ಬಟ್ಟೆ ಕಟ್ಟಿಕೊಂಡು ಮನೆಯಲ್ಲೇ ಕುಳಿತಿದ್ದಾರೆ. ದೇಶದ ಆರ್ಥಿಕ ಸ್ಥಿತಿ ಸರಿಮಾಡಲಾಗದಷ್ಟು ಹಳ್ಳ ಹಿಡಿದಿದೆ!
ಕರೋನವೈರಸ್ ಕಾರಣಕ್ಕಾಗಿ ಪ್ರಜೆಗಳು ಅನುಭವಿಸಿದ ಆರ್ಥಿಕ ಮುಗ್ಗಟ್ಟನ್ನು ಸರಿದೂಗಿಸಲು 20 ಲಕ್ಷ ಕೋಟಿ ರೂಪಾಯಿಗಳ ಯೋಜನೆಯನ್ನು ಸರ್ಕಾರ ಘೋಷಿಸಿದೆ!? ಇದರ ಸಾಧಕ-ಬಾಧಕಗಳನ್ನು ವಿಮರ್ಶೆ ಮಾಡಿದ ರಾಹುಲ್, “ಇದೊಂದು ಕಣ್ಣೊರಿಸುವ ತಂತ್ರ; ವಾರ್ಷಿಕ ಬಜೆಟ್‍ನಲ್ಲಿನ ಅರ್ಧ ಕ್ಕಿಂತ ಹೆಚ್ಚು ವೆಚ್ಚವನ್ನು ಇದರಲ್ಲಿ ಮತ್ತೆ ಸೇರಿಸಿ ತೋರಿಸಲಾಗಿದೆ; ಹೆಚ್ಚೆಂದರೆ ಇದು, ಕಷ್ಟದಲ್ಲಿರುವ ಜನರಿಗೆ ಬ್ಯಾಂಕ್‍ಗಳಿಂದ ಸಾಲ ಕೊಡಿಸಿ ಬಡ್ಡಿ ವಸೂಲಿ ಮಾಡುವ ಯೋಜನೆಯಷ್ಟೇ; ಮೂರು-ನಾಲ್ಕು ತಿಂಗಳ ಕಾಲ ಕೆಲಸ ಇಲ್ಲದ, ಉದ್ಯೋಗ ಮಾಡದ, ವ್ಯಾಪಾರ-ವ್ಯವಹಾರ ನಡೆಸದ ಕಡುಬಡವರಲ್ಲಿ ಕೊಂಡು-ತಿನ್ನುವ ಶಕ್ತಿಯೇ ಇಲ್ಲದಾಗ ಹಣಕಾಸಿನ ಸಹಾಯ ಮಾಡುವುದು ಬಿಟ್ಟು, ಸಾಲ ಮಾಡಿ – ಹೊಟ್ಟೆಗೆ ತಿನ್ನಲು ಸರ್ಕಾರ ಹೇಳುತ್ತಿದೆ,” ಎಂದು ಕಿಡಿ ಕಾರಿದ್ದಾರೆ.
ಅದನ್ನು ಪುನಃ ಪರಿಶೀಲಿಸಿ ಜನಪರ ಯೋಜನೆ ರೂಪಿಸಲು ಆಗ್ರಹಿಸಿದ್ದಾರೆ. ಸರ್ಕಾರದ ಯೋಜನೆ ಪ್ರಕಟವಾಗುವ ಮೊದಲೇ ಅವರು, ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಮತ್ತು ರಿಸರ್ವ್ ಬ್ಯಾಂಕ್‍ನ ಮಾಜೀ ಗೌರ್ನರ ರಘುರಾಮ್ ರಾಜನ್ನರನ್ನು ಭೇಟಿಯಾಗಿ ಈ ಬಗ್ಗೆ ಚರ್ಚಿಸಿದ್ದು, ಅವರ ಕಾಳಜಿ ಮತ್ತು ಮುಂದಾಲೋಚನೆಯನ್ನು ಸೂಚಿಸುತ್ತದೆಯಲ್ಲವೇ?
ನಡೆ-ನುಡಿಯಲ್ಲಿನ ಬಿರುಕುಗಳು, ತಿರುಚುವ ಮಾತುಗಾರಿಕೆ, ಪ್ರಚಾರಪ್ರಿಯತೆ, ಬಂಡ ಸುಳ್ಳುಗಳೆಲ್ಲಾ ಇಂದಿನ ರಾಜಕೀಯದಲ್ಲಿ ರಾಷ್ಟ್ರೀಯ ಬಂಡುವಾಳವಾಗಿರುವಾಗ, ವಿರೋಧಿಗಳು ಅವಹೇಳನಕಾರಿ ಅಡ್ಡಹೆಸರುಗಳನ್ನು ಇಡುತ್ತಾರೆ; ಕೀಳು ಅಭಿರುಚಿಯಲ್ಲಿ ಅಪಹಾಸ್ಯ ಮಾಡುತ್ತಾರೆ. ಅವುಗಳೇನೇ ಇರಲಿ, ವಾಸ್ತವವನ್ನು ಮುಂಗಾಣುವ ಪ್ರಜ್ಞೆ ಮತ್ತೂ, ಸತ್ಯ ಹೇಳುವ ಧೈರ್ಯ ರಾಹುಲ್ ಗಾಂಧಿಯವರಿಗೆ ಇದೆ. ಭಾರತ ಅದನ್ನು ಗಮನಿಸುತ್ತಿದೆ!
19-06-1970ರಲ್ಲಿ ದೆಹಲಿಯಲ್ಲಿ ಹುಟ್ಟಿದ ರಾಹುಲ್ ಗಾಂಧಿ ಓದಿದ್ದು ದೆಹಲಿಯ ಸೈಂಟ್ ಕೊಲಂಬಿಯಾ ಮತ್ತು ಡೂನ್ ಸ್ಕೂಲ್‍ಗಳಲ್ಲಿ. 1984ರಲ್ಲಿ ಅಜ್ಜಿ ಇಂದಿರಾ ಹತ್ಯೆಯ ನಂತರ ಭದ್ರತೆಯ ಕಾರಣದಿಂದ, ಕೆಲವು ವರ್ಷ ಮನೆಯಲ್ಲಿಯೇ ಕಲಿಯುವುದು ರಾಹುಲ್ರಿಗೆ ಅನಿವಾರ್ಯವಾಯಿತು. ಸೈಂಟ್ ಸ್ಟೀಫನ್ ಕಾಲೇಜಿನಲ್ಲಿ ಒಂದು ವರ್ಷ ಕಲಿತ ನಂತರ ಹಾರ್ವರ್ಡ್‍ಗೆ ಹೋದರು. 1991ರಲ್ಲಿ ಅಪ್ಪ ರಾಜೀವ್ ಕೂಡ ಹತ್ಯೆಯಾದರು. ಆಗ, ಹಾರ್ವರ್ಡ್ ಬಿಟ್ಟು ಫ್ಲೋರಿಡಾದ ರೋಲಿನ್ಸ್ ಕಾಲೇಜ್ ಸೇರಿದರು. ಭದ್ರತೆಯ ಕಾರಣದಿಂದಲೇ ತಮ್ಮ ಹೆಸರನ್ನು ರಾಹುಲ್ ವಿನ್ಸಿ ಎಂದು ಅಲ್ಲಿ ನೊಂದಾಯಿಸಿದ್ದರು. ಅವರ ನಿಜವಾದ ಹೆಸರು ಕಾಲೇಜಿನ ಕೆಲವೇ ಅಧಿಕಾರಿಗಳಿಗೆ ಮಾತ್ರ ತಿಳಿದಿತ್ತು. ಅವರ ವಿರೋಧಿಗಳು ಇದನ್ನೇ ತಿರುಚಿ, ಪೋಸ್ಟ್ ಕಾರ್ಡ್ ರಾಜಕಾರಣ ಇಂದಿಗೂ ಮಾಡುತ್ತಿರುವುದು ಕೀಳು ಅಬಿರುಚಿಯಷ್ಟೆ!
1994ರಲ್ಲಿ ರೋಲಿನ್ಸ್ ನಿಂದ ಪದವಿ ಪಡೆದ ಅವರು, 1995ರಲ್ಲಿ ಕೇಂಬ್ರಿಡ್ಜ್‍ನ ಟ್ರಿನಿಟಿಯಲ್ಲಿ ಎಂ.ಫಿಲ್ ಮಾಡಿದರು.
ರಾಹುಲ್‍ರ ತಂದೆ, ದಿವಂಗತ ರಾಜೀವ್ ಗಾಂಧಿ ಅಮೇಥಿಯನ್ನು ಪ್ರತಿನಿಧಿಸುತ್ತಿದ್ದರು. ಅದೇ ಕ್ಷೇತ್ರದಿಂದ 2004ರ ಮಾರ್ಚ್‍ನಲ್ಲಿ ಚುನಾವಣೆಗೆ ರಾಹುಲ್ ಸ್ಪರ್ಧಿಸಿದರು. ಅಮೇಥಿಯಲ್ಲಿ ಅವರು, ಒಂದು ಲಕ್ಷ ಮತಕ್ಕಿಂತ ಹೆಚ್ಚಿನ ಅಂತರದಲ್ಲಿ ಗೆದ್ದರು. 2006ರಲ್ಲಿ ತಾಯಿ ಸೋನಿಯಾ ಗಾಂಧಿಯವರು ರಾಯ್‍ಬರೈಲಿ ಲೋಕಸಭಾ ಕ್ಷೇತದಿಂದ ನಾಲ್ಕು ಲಕ್ಷ ಮತಗಳಿಗೂ ಹೆಚ್ಚಿನ ಅಂತರದಿಂದ ಗೆದ್ದು ಪುನರಾಯ್ಕೆಯಾದರು. ಕ್ಷೇತ್ರದ ಚುನಾವಣಾ ಪ್ರಚಾರವನ್ನು ಸಂಘಟಿಸಿದ್ದು ರಾಹುಲ್ ಮತ್ತು ಸಹೋದರಿ ಪ್ರೀಯಾಂಕ!
2007ರಲ್ಲಿ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆದ ರಾಹುಲ್, ಯೂತ್ ಕಾಂಗ್ರೆಸ್ ಮತ್ತು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಹೊಣೆ ಹೊತ್ತುಕೊಂಡರು. ಅಂದಿನಿಂದಲೇ ಈ ಎರಡೂ ಸಂಸ್ಥೆಗಳಲ್ಲಿ, ಪಕ್ಷದ ಸಿದ್ಧಾಂತನ್ನು ಗೌರವಿಸುವುದು, ಪಕ್ಷದ ಸಭೆಗಳಲ್ಲಿ ಪ್ರಜಾಸತ್ತಾತ್ಮಕ ನಡವಳಿಕೆ ಅನುಸರಿಸುವುದು, ಪ್ರತಿನಿಧಿಗಳಿಗೆ ಮಾತಾಡುವ ಅವಕಾಶ ಕೊಡುವುದು ಮುಂತಾದವುಗಳನ್ನು ರಾಹುಲ್ ರೂಢಿಗೆ ತಂದರು. ಇದರಿಂದ, ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ ಸದಸ್ಯತ್ವ 2 ಲಕ್ಷದಿಂದ 25 ಲಕ್ಷಕ್ಕೆ ಏರಿತು!
2013ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷರಾದ ಅವರು ನಂತರ, ಪಕ್ಷದ ಅದ್ಯಕ್ಷರೂ ಆದರು. ಆ ಬಳಿಕ, ಅವರು ಆಂತರಿಕ ಪ್ರಜಾಪ್ರಭುತ್ವಕ್ಕೆ ಹೆಚ್ಚು ಒತ್ತು ಕೊಟ್ಟರು. ಪಕ್ಷದ ಸಭೆಗಳಲ್ಲಿ ಕಾರ್ಯಕರ್ತರು ನಿರ್ಭಿಡೆಯಿಂದ ಮಾತಾಡಲು ಪ್ರೋತ್ಸಾಹಿಸಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಪಕ್ಷದ ಸಭೆಗಳಲ್ಲಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೊದಲು ಎಲ್ಲರ ಮಾತನ್ನೂ ಸಮಾಧಾನದಿಂದ ಆಲಿಸುತ್ತಿದ್ದರು. ಕಾರ್ಯಕರ್ತರು ಹೆದರಿಕೆಯಿಲ್ಲದೆ ಮಾತಾಡಲು ಇದು ಪ್ರೇರೇಪಿಸಿತು.
ನಂತರದ ದಿನಗಳಲ್ಲಿ ರಾಹುಲ್, ಇಂದಿನ ಸರ್ಕಾರದ ಕಾರ್ಯವೈಖರಿಯನ್ನು ಹೆಚ್ಚುಹೆಚ್ಚಾಗಿ ವಿಮರ್ಶಿಸತೊಡಗಿದರು. ಮೋದಿ ಸರ್ಕಾರವನ್ನು, ಸೂಟ್-ಬೂಟ್ ಸರ್ಕಾರ, ರೈತ-ಕೂಲಿಕಾರರ ವಿರೋಧೀ ಸರ್ಕಾರ, ಕಾರ್ಮಿಕ ವಿರೋಧೀ ಸರ್ಕಾರ ಎಂದು – ವಿವರಣೆಗಳೋಂದಿಗೆ – ಟೀಕಿಸತೊಡಗಿದರು.
ರಫೇಲ್ ಹಗರಣವನ್ನು ನೆನಪಿಸುತ್ತಾ, “ಚೌಕೀದಾರ್ ಚೋರ್ ಹೈ,” ಎಂದು ಮೊದಲು ಹೇಳಿದವರೂ ಅವರೇ! ಸಾರ್ವಜನಿಕ ಹಿತಾಶಕ್ತಿಗೆ ಸಂಭಂದಿಸಿದಂತೆ ಎಡಪಂಥೀಯ ದೋರಣೆಗಳಿಗೆ ಹತ್ತಿರವಾಗಿರುವ ಅವರು, ಕಾರ್ಪೋರೇಟ್ ಕಂಪನಿಗಳೊಟ್ಟಿಗಿನ ಸರ್ಕಾರದ ಅನೈತಿಕ ಸಂಬಂಧವನ್ನು ತೀವ್ರವಾಗಿ ವಿರೋಧಿಸುತ್ತಾ ಬಂದಿದ್ದಾರೆ. ಶ್ರೀಮಂತರ ಹೆಸರು ಹೇಳಿ, ಅವರ ತಪ್ಪನ್ನು ತೋರಿಸುವ ಪ್ರಾಮಾಣಿಕ ಧೈರ್ಯ ಅವರಲ್ಲಿದೆ.
ಕೋರ್ಟ್ ಮುಖಾಂತರ ಅಪರಾಧಿ ಎಂದು ಸಾಬೀತಾದ ಪ್ರಜಾಪ್ರತಿನಿಧಿಗಳ ಶಾಸಕತ್ವವನ್ನು ರದ್ದುಪಡಿಸಬೇಕು ಎಂಬುದು ಕಾನೂನು. ತಮ್ಮದೇ ಸರ್ಕಾರ ಕೇಂದ್ರದಲ್ಲಿದ್ದ ಸಂದರ್ಭದಲ್ಲಿ, ಅದನ್ನು ರದ್ದು ಮಾಡುವ ಸುಗ್ರೀವಾಜ್ಞೆ ತರಲು ಪ್ರಯತ್ನಿಸಿತು. ರಾಹುಲ್, ಇದೊಂದು ಅಸಂಬದ್ಧ ಬುದ್ಧಿಗೇಡಿ ಕೆಲಸ ಎಂದು ಸಾರ್ವಜನಿಕವಾಗಿ ಸಿಡಿದೆದ್ದರು. ಸರ್ಕಾರ ಹಿಂದೆ ಸರಿಯಿತು. ಇದರಿಂದ, ಲಾಲೂ ಪ್ರಸಾದ್ ಯಾದವ್, ಜಯಲಲಿತಾ ಮುಂತಾದ 11 ಘಟನುಘಟಿ ಜನಪ್ರತಿನಿದಿಗಳು ಜೈಲಿಗೆ ತಳ್ಳಲ್ಪಟ್ಟಿದ್ದು ಚರಿತ್ರೆ!
ಸರ್ಕಾರಿ ಬ್ರಷ್ಟಾಚಾರ ತಡೆಯಲು, ಲೋಕಪಾಲ್ ಅನ್ನು ಚುನಾವಣಾ ಆಯೋಗದಂತೆ ಒಂದು ಸಾಂವಿಧಾನಿಕ ಸಂಸ್ಥೆಯಾಗಿಸಬೇಕು ಮತ್ತು, ಅದು ಲೋಕಸಭೆಗೆ ಉತ್ತರದಾಯಿಯಾಗಿರಬೇಕು ಎಂಬುದು ರಾಹುಲ್ ಅಭಿಮತ. ಹಾಗೆಯೇ, ಮಹಿಳೆಯರಿಗೆ ಜನಪ್ರತಿನಿಧಿ ಸಭೆಗಳಲ್ಲಿ ಕನಿಷ್ಠ 33% ರಿಸರ್ವೇಷನ್ ಪ್ರತಿಪಾದಿಸಿದ್ದು ರಾಹುಲ್.
ಬಡತನ ಮತ್ತು ದಲಿತತೆಯನ್ನು ರಾಹುಲ್ ಅನುಭವಿಸದಿರಬಹುದು ಆದರೆ, ದಲಿತರೊಟ್ಟಿಗೆ ಕುಳಿತು ಊಟಮಾಡುವ, ರೈತರ ಸಮಸ್ಯೆಗಳನ್ನು ಆಲಿಸುವ, ಅಂಚಿನಲ್ಲಿರುವವರ ಬಗ್ಗೆ ಕಾಳಜಿ ತೋರುವ ಅವರ ಸಂವೇದನೆಯನ್ನು ಅನುಮಾನಿಸಲಾಗದು. ಬಡವರನ್ನು ಮತ್ತು ದೀನ-ದಲಿತ-ರೈತರನ್ನು ರಾಹುಲ್ – ಕೇವಲ ನಮಸ್ಕಾರದಿಂದಲ್ಲ – ಪ್ರೀತಿಯಿಂದ ಅಪ್ಪಿಕೊಳ್ಳುವಾಗಿನ ಸಹಜತೆಯನ್ನು ಗಮನಿಸಬಹುದು.
ಅವರ ಪ್ರಕಾರ, ಬಡತನ ಎಂಬುದು ಮನಸ್ಸಿನ ಒಂದು ಸ್ಥಿತಿ ಕೂಡ; ಇಚ್ಛಾಶಕ್ತಿಯಿದ್ದರೆ ಬಡತನದಿಂದ ಹೊರಬರುವ ಸಾಧ್ಯತೆ ಹೆಚ್ಚು. ನಿಜಕ್ಕೂ, ರಾಹುಲ್‍ರ ಈ ಅನ್ನಿಸಿಕೆಯಲ್ಲಿ ತಪ್ಪಿರಲಿಲ್ಲ. ಇಂದು ಇಂಡಿಯಾದಲ್ಲಿ ಕೆಲಸಕ್ಕೆ, ಆಹಾರಕ್ಕೆ, ಉದ್ಯೋದಕ್ಕೆ ಬರಗಾಲವಿಲ್ಲ; ಮೈಮುರಿದು ದುಡಿದು, ಮೇಲೆ ಬರುವ ಇಚ್ಚಾಶಕ್ತಿ ಬೇಕು. ಈ ಬಗ್ಗೆ ರಾಹುಲ್ ಹೇಳಿದ್ದನ್ನು ತಿರುಚಿ, ಅವರು ಬಡವರ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯಿತು.
ತಾನು ಹಿಂದೂ ಎಂಬುದನ್ನು ಅಳುಕದೆ ಅಪ್ಪಿಕೊಂಡು ಭಾರತದ ಸಂವಿಧಾನಾತ್ಮಕವಾದ ಬಹುತ್ವವನ್ನು ಎತ್ತಿಹಿಡಿಯುವ ಧೈರ್ಯ ತೊರಿದವರು ರಾಹುಲ್. ಅವರು ಹೇಳುವಂತೆ, ಬಿಜೆಪಿ ಪ್ರಚೋಧಿಸುತ್ತಿರುವ ನವ ಉಗ್ರವಾದಿ ಹಿಂದುತ್ವಕ್ಕೂ, ಹಿಂದೂ ಧರ್ಮಕ್ಕೂ ವ್ಯತ್ಯಾಸ ಇರುವುದು ನಿಜ. ರಾಹುಲ್ ಪ್ರಕಾರ, ಒಬ್ಬ ಹಿಂದೂ, ದ್ವೇಶ ಮತ್ತು ಪಂಥ ಮೀರಿ ಧರ್ಮವನ್ನು ಪಾಲಿಸುತ್ತಾನೆ; ಇತರರು ಯಾವುದೇ ಧರ್ಮವನ್ನು ಪಾಲಿಸಿದರೂ, ಅದನ್ನು ಖಂಡಿತಾ ಗೌರವಿಸುತ್ತಾನೆ; ಇದು, ಇಂದಿನ ಒಡೆದಾಳುವ ಅಥವಾ, ಓಲೈಸುವ ರಾಜಕೀಯ ದೊಂಬರಾಟಕ್ಕೆ ಸರಿಯಾದ ಪ್ರತ್ಯುತ್ತರ ಎನ್ನಿಸುತ್ತದೆ.
ಭಾರತದಲ್ಲಿ ಇಂದು, ಮುಸ್ಲಿಮ್ ಉಗ್ರವಾದಕ್ಕಿಂತ ಹಿಂದೂ ತೀವ್ರವಾದವೇ ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸುತ್ತಿದೆ; ಇದೇ, ನಾವು ಸಂವಿಧಾನದತ್ತವಾಗಿ ಒಪ್ಪಿಕೊಂಡು ಬಂದ ಬಹುತ್ವಕ್ಕೆ ಮಾರಕ,” ಎಂದು ಹೇಳುವ ಧೈರ್ಯ ತೋರಿದರು. “ಮುಸ್ಲಿಮ್ ಧರ್ಮದ – ಸಿಮಿ(ಎಸೈಎಮೈ)ಯಂತೆ, ಹಿಂದೂ ಧರ್ಮದ ಪೇಟೆಂಟ್ ಪಡೆದಂತೆ ವರ್ತಿಸುತ್ತಿರುವ ಆರೆಸ್ಸೆಸ್ ಕೂಡ ಜನವಿರೋಧಿಯಾಗಿದ್ದು, ಅವುಗಳನ್ನು ಪ್ರತಿಬಂಧಿಸಬೇಕು,“ ಎಂಬುದು ಅವರ ಅಭಿಮತ.
ಕೆಟ್ಟ ಅಭಿರುಚಿಯ ಅಪಹಾಸ್ಯ ಮತ್ತು ವ್ಯಂಗ್ಯಕ್ಕೆ ರಾಹುಲ್ ಸ್ಥಿತಪ್ರಜ್ಞೆಯಿಂದ ಕೂಡಿದ ಘನತೆಯಲ್ಲಿ, ತಟಸ್ಥರಾಗಿ ಪ್ರತಿಕ್ರಿಯೆ ತೋರುತ್ತಿರುವುದು ಅದ್ಭುತ! ಅವರು ಅತ್ಯುತ್ತಮ ಭಾಷಣಕಾರರಲ್ಲದಿರಬಹುದು ಆದರೆ, ಕಾವ್ಯಾತ್ಮಕ ಉದ್ಘೋಷಗಳಿಂದಷ್ಟೇ ಮನುಷ್ಯನ ವ್ಯಕ್ತಿತ್ವ ನಿರ್ಧಾರವಾಗಲಾರದು. ರಾಹುಲ್‍ರಲ್ಲಿ ನಾಟಕೀಯವಲ್ಲದ, ತೋರಿಕೆಯದಲ್ಲದ ನಮ್ರತೆ ಇದೆ. ಬೇರೆಯವರೊಟ್ಟಿಗೆ ಬೆರೆತು, ಅವರಲ್ಲಿರುವ ಒಳ್ಳೆಯದನ್ನು ಹೊರತರುವ ತುಡಿತವಿದೆ. ಅವರ ರಾಜಕೀಯದಲ್ಲಿ ದ್ವೇಷ ಮತ್ತು ಸ್ವಾರ್ಥಕ್ಕಾಗಿ ತಂತ್ರಗಾರಿಕೆ ನುಸುಳುವುದಿಲ್ಲ; ಬದಲಿಗೆ, ಧೈರ್ಯ ಮತ್ತು ಧೀಮಂತಿಕೆ ಕಾಣುತ್ತಿದೆ.
ಇಂದಿನ ವ್ಯವಸ್ಥೆ, ಬಡಿವಾರದಲ್ಲಿ, ಎದೆತಟ್ಟುವುದರಲ್ಲಿ, ಸ್ವ-ಪ್ರಚಾರದಲ್ಲಿ, ಸಂಪೂರ್ಣ ಮೋಸದಲ್ಲಿ ತೊಡಗಿದೆ. ಅದು ನಮ್ಮನ್ನು ಆಕರ್ಶಕವೆನ್ನುವ ರೀತಿಯಲ್ಲಿ ಕೆಳಗೆ ಬೀಳಿಸಿ ಗಹಗಹಿಸಿ ನಗುತ್ತಿದೆ. ಪ್ರತಿಯೊಬ್ಬನ ಜೀವನವನ್ನೂ ಆವರಿಸಿರುವ ರಾಜಕೀಯದಲ್ಲಿ, ಗುರಿಯಷ್ಟೇ ದಾರಿ ಕೂಡಾ ಮುಖ್ಯ; ಒತ್ತಡಕ್ಕೆ ಮನುಷ್ಯನ ನೈತಿಕತೆ ಬಾಗಬಾರದು ಮತ್ತು, ಜೀವನ-ತತ್ವಗಳು ಅಶಕ್ತವಾಗಬಾರದು. ಆದ್ದರಿಂದ, ನೈತಿಕ ಧೈರ್ಯ, ನೈಜತೆ ಮತ್ತು ನಮ್ರತೆ ಕಾಪಾಡಿಕೊಂಡಿರುವವ ನಾಯಕ ಇಂತಹ ಸಂದಿಗ್ಧ ಸಮಯದಲ್ಲಿ ನಮಗೆ ಬೇಕಾಗಿದೆ. ಒಳ್ಳೆಯ ನಡತೆ, ಸದ್ಗುಣ ಮತ್ತು ನೈತಿಕತೆ ಇರುವ ವ್ಯಕ್ತಿ, ಸಾರ್ವಜನಿಕ ಜೀವನವನ್ನು ಮುನ್ನಡೆಸಬೇಕಾಗಿದೆ. ರಾಹುಲ್‍ರಲ್ಲಿ ಇವುಗಳನ್ನು ಕಾಣಬಹುದು ಎನ್ನಿಸುತ್ತದೆ.
ಸೊಕ್ಕಿನ ರಾಜಕೀಯದಿಂದ ಭಾರತ ಗಾಯಗೊಂಡಿದೆ. ಇಂದು ಭಾರತ, ಸಹಾನುಭೂತಿ, ನಮ್ರತೆ, ನಂಬಿಕೆ, ಸ್ಥಿತಪ್ರಜ್ಞೆ ಮತ್ತು ಧೈರ್ಯಗಳನ್ನೊಳಗೊಂಡ ನಾಯಕತ್ವವನ್ನು ಎದುರನೋಡುತ್ತಿದೆ. ದೈರ್ಯವಂತರ ವಿರುದ್ಧ ಯಾವಾಗಲೂ ಸಂಚು ನಡೆಯುತ್ತಿದ್ದರೂ ಅದೃಷ್ಟ ಯಾವಾಗಲೂ ಅವರ ಪರ ಇರುತ್ತದೆ. ನಂಬಿಕೆ ಮತ್ತು ಧೈರ್ಯ ಮುಖ್ಯ. ರಾಹುಲ್‍ಗೆ ಗಾಯಗೊಂಡ ದೇಶವನ್ನು ಸದೃಢಗೊಳಿಸುನ ತಾಳ್ಮೆ ಮತ್ತು ಶಕ್ತಿಯ ಪಕ್ವತೆ ಬಂದಿದೆ ಎಂಬುದು ಅವರ ಕಾರ್ಯವೈಕರಿಯನ್ನು ಗಮನಿಸಿದಾಗ ಅರಿವಿಗೆ ಬರುತ್ತದೆ.
–0—(ಡಿ. ರಾಮಪ್ಪ ಸಿರಿವಂತೆ, ಅಂಕೋಲಾ)