ಹೆಸರು-ದ್ಯಾವಾ ನಾಯ್ಕ ಯಾನೆ,ಡಿ.ಕೆ. ನಾಯ್ಕ, ಊರು-ತೆಂಗಿನಮನೆ, ವೃತ್ತಿ- ಕೃಷಿ ಹವ್ಯಾಸ-ಸಾಮಾಜಿಕ ಕೆಲಸ, ರಾಜಕೀಯ
ಹೀಗೆ ಪರಿಚಯಿಸಬಹುದಾದ ಡಿ.ಕೆ.ನಾಯ್ಕರ ಮನೆಗೆ ಕಾರವಾರ ಆಕಾಶವಾಣಿಯ ರಾಮಡಗಿಯವರೊಂದಿಗೆ ತೆರಳಿದ್ದೆ. ರಾಮಡಗಿ ಮತ್ತು ನಮ್ಮ ತಂಡ ಕಂಡ ಡಿ.ಕೆ.ನಾಯ್ಕ ತಮ್ಮ ಎಂದಿನ ಸರಳತೆಯಲ್ಲಿ ನಮ್ಮನ್ನು ಕರೆದು ಉಪಚರಿಸಿದ್ದರು. ನಾಲ್ಕೈದು ಎಕರೆ ಜಾಗದ ಬಹುತೇಕ ಅಡಿಕೆ ಮರಗಳಲ್ಲಿ ನಳನಳಿಸುತಿದ್ದ ಕಾಳುಮೆಣಸಿನ ಬಳ್ಳಿಗಳ ಎಲೆ ಸವರಿ ಹ್ಯಾಗಿದೆ ನೋಡಿ ಈ ಬಳ್ಳಿಗಳಿಂದ 5-6 ಕ್ವಿಂಟಾಲ್ ಕಾಳು ಮೆಣಸು ಕೊಯ್ದಿದ್ದೇನಿ ಎಂದು ಖುಷಿಯಿಂದ ಹೇಳಿದ್ದರು.
ಕಾಳುಮೆಣಸು ಬೆಳೆಯುವ ಬಗೆಯನ್ನು ವಿವರಿಸಿದ್ದರು.
ತಾಲೂಕಿನ ಪ್ರಮುಖ ಕಾಳುಮೆಣಸು ಬೆಳೆಗಾರರಲ್ಲಿ ಒಬ್ಬರಾಗಿದ್ದ ಡಿ.ಕೆ.ನಾಯ್ಕರ ತೋಟ,ಕಾಳುಮೆಣಸು ನೋಡಿ ನಾವೂ ಖುಷಿಪಟ್ಟಿದ್ದೆವು. ಮತ್ತೊಮ್ಮೆ ಬನ್ನಿ ಎಂದು ನಮಗೆ ಆಹ್ವಾನ ನೀಡಿದ್ದ ಡಿ.ಕೆ.ನಾಯ್ಕರನ್ನು ಮತ್ತೊಮ್ಮೆ ಕಂಡು ಬರಬೇಕೆಂಬ ಆಸೆ ಫಲಿಸಿರಿರಲಿಲ್ಲ. ಕಳೆದ ವಾರ ವಾರದ ಓಡಾಟದಲ್ಲಿದ್ದ ನಮಗೆ ಮತ್ತೆ ಡಿ.ಕೆ.ನಾಯ್ಕರ ತೋಟ ನೆನಪಾಗಿ ಹಾರ್ಸಿಕಟ್ಟಾ ದಾರಿಯಲ್ಲಿ ಸಾಗಿ, ದೇವಾಸದಿಂದ ಅವರ ಮನೆ ತಲುಪಿದರೆ ಡಿ.ಕೆ.ನಾಯ್ಕ ತೋಟದ ಮನೆಯಲ್ಲಿದ್ದಾರೆ ಎನ್ನುವ ಉತ್ತರ ಅವರ ಮನೆಯವರದ್ದು,
ಜಿಟಿಜಿಟಿ ಮಳೆಯಲ್ಲಿ ಅವರಮನೆಯಿಂದಲೇ ಚತ್ರಿ ಪಡೆದು ಗುಡ್ಡದ ದಾರಿ ಏರಿ ಇಲಿಯುತಿದ್ದಾಗ ದೂ ರದಲ್ಲಿ ಉಪ್ಪಾಗೆ ಸಿಪ್ಪೆ ಆಯುತಿದ್ದ ಡಿ.ಕೆ. ಕಂಡರು.
ಕೃಷಿಕಾಯಕದ 65 ರ ವಯಸ್ಸಿನ ಡಿ.ಕೆ.ನಾಯ್ಕ ಆಳುಗಳಿಂದ ಉಪ್ಪಾಗೆ ಕೊಯ್ದು, ಆರಿಸುತಿದ್ದರು. ಎಂದಿನಂತೆ ನಮ್ಮನ್ನು ಮಾತನಾಡಿಸಿದ ಡಿ.ಕೆ.ನಾಯ್ಕರ ಕಾಳುಮೆಣಸಿನ ಕೃಷಿ ಬಗ್ಗೆ ಮಾತನಾಡುತ್ತಾ ಅವರ ತೋಟದ ಮೇಲಿನ ಎರಡ್ಮೂರು ಕೆರೆಗಳನ್ನು ವೀಕ್ಷಿಸಿದೆವು. ಒಂದರಮೇಲೆ ಒಂದರಂತೆ ಮೂರು ಕೆರೆಗಳನ್ನು ಕಟ್ಟಿಸಿದ ಡಿ.ಕೆ.ನಾಯ್ಕ ಈಗ ಕೆರೆಗಳ ಬಗ್ಗೆ ಮಾತನಾಡತೊಡಗಿದರು.
ಮಲೆನಾಡಿನಲ್ಲಿ ಬೆಟ್ಟ-ಗುಡ್ಡಗಳಿಂದ ಹರಿದು ಬರುವ ಮಳೆಯ ನೀರು ಎಲ್ಲೆಲ್ಲೋ ಹರಿದು ಸೇರುತ್ತದೆ. ಇಂಥ ಮಳೆ ನೀರನ್ನು ಮಳೆಗಾಲದಲ್ಲಿ ಸಂಗ್ರಹಿಸಿದರೆ ಬೇಸಿಗೆಯಲ್ಲಿ ನೀರಿನ ಕೊರತೆಯಾಗುವುದಿಲ್ಲ ಎಂದರು. ಅಡಿಕೆ ತೋಟದ ಬೆಟ್ಟದಲ್ಲಿ ಹೀಗೆ ಕೆರೆಗಳನ್ನು ನಿರ್ಮಿಸಿದರೆ ಬೇಸಿಗೆಯಲ್ಲಿ ನಮಗೆ, ನಮ್ಮ ಬೆಳೆಗಳಿಗೆ, ಕಾಡಿನ ಪ್ರಾಣಿಗಳಿಗೂ ಜೀವ ಜಲ ದೊರೆಯುತ್ತದೆಂದು ಈ ಕೆರೆ ನಿರ್ಮಿಸಿದ್ದೇನಿ ಎಂದರು.
ಬೆಟ್ಟದ ತುಂಬ ಉಪ್ಪಾಗೆ, ಮುರುಗಲ ಮರಗಳು ಅವುಗಳ ಕೆಳಗೆ ಸಣ್ಣಪುಟ್ಟ ಕೆರೆಗಳು ಅಲ್ಲಿಗೆ ಬರುವ ಪಕ್ಷಿ ಆ ಪರಿಸರದ ಜೀರುಂಡೆ ಶಬ್ಧ ನಮ್ಮನ್ನು ಅವರ ಮಾತುಗಳನ್ನು ಕೇಳಲು ಪ್ರೇರೇಪಿಸಬೇಕು ಅತಿಕ್ರಮಣ ಭೂಮಿ ಸಾಗುವಳಿ ಹಕ್ಕುದಾರರ ಸಮೀತಿಯ ಅಧ್ಯಕ್ಷರಾಗಿದ್ದಾಗ ತಾಲೂಕಿನ ನಾಲ್ಕೈದು ಕೆರೆಗಳನ್ನು ಅಭಿವೃದ್ಧಿ ಪಡಿಸಿದ್ದೆ. ಅದರಿಂದ ಬಾಲಿಕೊಪ್ಪ, ತ್ಯಾರ್ಸಿ ಕೆರೆಗಳು ಸೇರಿದಂತೆ ಕೆಲವು ಕೆರೆಗಳು ಮೈತುಂಬಿಕೊಂಡು ಜನರಿಗೆ ಅನುಕೂಲವಾಯಿತು. ಅಲ್ಲಿ ಸರ್ಕಾರದ ಹಣದಲ್ಲಿ ಮಾಡಿದ ಕೆಲಸವನ್ನು ಇಲ್ಲಿ ನಾನೇ ಮಾಡಿದೆ ಇದರಿಂದ ಫಲ ಪಡೆಯುತ್ತಾ ಸಂತೃಪ್ತನಾಗಿದ್ದೇನಿ ಎಂದರು.
ತೋಟ ಸುತ್ತಾಡಿ ತೋಟ-ಬೆಟ್ಟಗಳಲ್ಲಿ ಅವರು ಸಂರಕ್ಷಿಸಿದ ಪರಿಸರದ ವಿವರ ನೀಡಿದರು. ಕೊಟ್ಟಿಗೆಗಾಗಿ ಮಾಡಿಕೊಂಡ ತೋಟದ ಮನೆಯಲ್ಲಿ ಉಪ್ಪಾಗೆ ಸಂಸ್ಕರಿಸುವ ರೀತಿ ತೋರಿಸಿದರು. ಭೂಮಿ ತಾಯಿಗೆ ನಾವು ಗೊಬ್ಬರ, ನೀರು ಉಣಿಸಿದರೆ ನಮಗೆ ಪ್ರತಿಫಲ ಸಿಗುತ್ತದೆ ಎಂದು ತೋಟದ ಬೆಟ್ಟವನ್ನು ಮರಗಳಿಂದ ಶೃಂ ಗರಿಸದ್ದನ್ನು ತೋರಿಸಿದರು. ತಾವು ಸಾಮಾಜಿಕ ಬದುಕು, ರಾಜಕೀಯಗಳಿಂದ ನಿಧಾನಕ್ಕೆ ಮರಳಿ ಮಣ್ಣಿಗೆ ಬಂದದ್ದನ್ನು ವಿವರಿಸಿದರು.
ನಿವೃತ್ತ ಪ್ರಾಂಶುಪಾಲ ದಫೇದಾರ್ ರೊಂದಿಗೆ ತಮ್ಮ ಮಕ್ಕಳ ಶಿಕ್ಷಣ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಕಲಿತ ತಮ್ಮ ಮಕ್ಕಳಿಂದ ಅಲ್ಲಿಯ ಜನರೊಂದಿಗಿನ ಒಡನಾಟದ ಖುಷಿ ಹಂಚಿಕೊಂಡರು. ಮಡ್ಯಂದ ಕಾಮೇಗೌಡ ಅಭಿನಂದನೆಗೊಳಗಾಗಿ ಟ್ರೋಲ್ ಆಗಿರುವ ವಿದ್ಯಮಾನ ಪ್ರಸ್ತಾಪಿಸಿದ ದಫೇದಾರ ಇಂಥವರನ್ನು ಸರ್ಕಾರ ಗುರುತಿಸಬೇಕು ಎಂದರು.
ಅವರ ಅಭಿಪ್ರಾಯಕ್ಕೆ ದುಸರಾ ಮಾತನಾಡದಂತೆ ಡಿ.ಕೆ.ನಾಯ್ಕರ ಸಾಧನೆ ನಮ್ಮಗಂಟಲು ಕಟ್ಟಿಸಿತ್ತು. ಮಹಾನಗರ,ಸಾಧನೆ,ಸುಖ ಎಂದು ಪಟ್ಟಣ ಸೇರಿದರವರನ್ನು ನೋಡಿ ನಮಗೂ ಹಾಗಿದ್ದರೆ ಚೆಂದ ಎನಿಸಿತ್ತು ಆದರೆ ಈ ಕರೋನಾ ಕಾಲ ನಮ್ಮೂರೇ ನಮಗೆ ಪಾಡು ಎನ್ನುವ ಕಾಣ್ಕೆ ಕೊಟ್ಟಿದೆ ಎಂದರು.
ಡಿ.ಕೆನಾಯ್ಕರ ಸರಳ, ಸಹಜ ಕೃಷಿ ಬದುಕಿನೆದುರು ಮಹಾನಗರದ ಜೀವನ ತೃಣ ಸಮಾನ ಎನಿಸದೆ ಇರಲಿಲ್ಲ. ಡಿ.ಕೆ.ನಾಯ್ಕರ ನೀರಿಂಗಿಸುವಿಕೆ, ಸರಳ ಕೃಷಿ ಬದುಕು ಸನ್ಮಾನ, ಅಭಿನಂದನೆಗಳಿಗೂ ಅರ್ಹ ಎನಿಸಿ ಅವರಿಗೆ ನಮಿಸಿ ಅವರು ಬೀಳ್ಕೊಟ್ಟಾಗ ಅವರೊಂದಿಗೆ ಕಳೆದ ಸಮಯ ನಾಲ್ಕು ತಾಸು ಎನ್ನುವುದು ನಮ್ಮ ಗಮನ ಸೆಳೆಯಿತು. ಇನ್ನೆರಡು ತಾಸು ಮೊದಲೇ ಬರಬೇಕಿತ್ತೆಂಬ ದಫೇದಾರರ ನೋವಿಗೆ ಮಿಡಿಯದೆ ಇರಲಾಗಲಿಲ್ಲ.