ಕರೋನಾ, ಅಕಾಲಿಕ ಮಳೆಗಳಿಲ್ಲದಿದ್ದರೆ… ಈ ಅವಧಿಯಲ್ಲಿ ಜಲಪಾತ ನೋಡಿ, ದಣಿದು ಬಸವಳಿಯುವುದಿದೆಯಲ್ಲಾ… ಅದರ ಅನುಭವಕ್ಕೆ ಅದೇ ಸಾಟಿ. ನಮ್ಮ ಜಿಲ್ಲೆಯ ಜಲಪಾತಗಳನ್ನು ಅಲೆದು ಅನುಭವ ಪೇರಿಸಿಕೊಂಡ ಹೊರಗಿನವರಿಗೆ ಹೋಲಿಸಿಕೊಂಡರೆ ನಮಗೆ ಈ ಪ್ರಕೃತಿಯ ಸೊಬಗಿನ ಬಗ್ಗೆ ಮರುಕವೋ? ವಿಸ್ಮೃತಿಯೋ ತಿಳಿಯದ ಗೊಂದಲ.
ಮೊನ್ನೆ ಕೃಷಿ ಅಧಿಕಾರಿ ಪ್ರಶಾಂತ್ ಮಾಹಿತಿ ಆಧರಿಸಿ ಹಂದಿಮನೆಯ ಹೊಳೆಯ ಚಿಕ್ಕ ಜಲಪಾತ ನೋಡಿದಾಗ ಅದೇನೋ ಅಲ್ಹಾದ ಉಂಟಾದಂತಾಯಿತು. ಅಲ್ಲಿ ನಮಗೆ ಸಿಕ್ಕ ಸ್ಥಳಿಯರು ಕಾಣಿಸಿದ ಈ ಗುಡುಂಕಲ್ ಜಲಪಾತಕ್ಯಾದಗಿಯಿಂದ ಕುಮಟಾ ಮಾರ್ಗದಲ್ಲಿ 2 ಕಿ.ಮೀ. ನಂತರ ಹಂದಿಮನೆಯ ಹೊಳೆ ಸೃಷ್ಟಿಸಿರುವ ಸೊಬಗು. ರೈತರು ಈ ಹೊಳೆ ಕಟ್ಟಿ ಒಡ್ಡು ಮಾಡುವ ಸಂಕ್ರಾಂತಿಯ ಮೊದಲು ಕುಟುಂಬ ಸಹಿತ ಹೋಗಿ ನೋಡಿಬರಬಹುದಾದ ಹಂದಿಮನೆ, ಗುಡುಂಕಲ್ ಜಲಪಾತದ ವಿಶೇಷವೆಂದರೆ… ಶ್ರಮವೂ ಬೇಡ, ಅಪಾಯವೂ ಇಲ್ಲ. ಇಂಥ ಜಲಪಾತವನ್ನು ಆ ಭಾಗದ ಎಸ್,ಆರ್. ನಾಯ್ಕ, ಕೆ.ಟಿ. ನಾಯ್ಕರಂಥವರು ಸರ್ವ ಋತು ಜಲಪಾತವನ್ನಾಗಿಸಬಹುದಿತ್ತೇನೋ?ಒಂದು ಬ್ಯಾರೇಜ್ ಮಾದರಿಯ ನೀರು ಸಂಗ್ರಹದ ಚಿಕ್ಕ ಆಣೆಕಟ್ಟೆಮಾಡಿ, ಮಳೆಗಾಲದಲ್ಲಿ ನೀರು ಹರಿಯಬಿಟ್ಟು ಮಳೆಯ ನಂತರ ನೀರು ಸಂಗ್ರಹಿಸಿದರೆ ಜಲಪಾತದ ಸೊಬಗು ವೃದ್ಧಿಸುತ್ತದೆ. ಜೊತೆಗೆ ಈ ಭಾಗದ ರೈತರಿಗೆ ಇದರಿಂದ ಅನುಕೂಲಗಳಾಗಬಹುದು.
ಇದು ಒಂದು ಸಲಹೆಯಾದರೆ ಈಗಿರುವ ಸ್ಥಿತಿಯಲ್ಲೇ ಈ ಜಲಪಾತಕ್ಕೆ ಸಣ್ಣ ರಸ್ತೆ, ಒಂದು ನಾಮಫಲಕ ಇಟ್ಟು ಮಕ್ಕಳಿಗೆ ಜಲಪಾತ ಭೇಟಿ, ವೀಕ್ಷಣೆಗೆ ಅನುಕೂಲ ಮಾಡಿಕೊಟ್ಟರೆ ಮಕ್ಕಳು ಖುಷಿಪಡುತ್ತಾರೆ. ಈ ಬಗ್ಗೆ ನಮ್ಮ ವಿಡಿಯೋದಲ್ಲಿ ವಿವರಿಸಿದ್ದೇನೆ. ಇದೇ ಪಂಚಾಯತ್ ನ ಬುರುಡೆ ಜಲಪಾತದ ತಲೆ-ಬುಡ, ಬುರುಡೆ ಕಾಣದಂತೆ ಪ್ರವಾಸೋದ್ಯಮ ಇಲಾಖೆ ಬುರುಡೆ ಜಲಪಾತದ ಮುಖ ಕಟ್ಟಿದೆ. ಈ ಜಲಪಾತದಲ್ಲಿ ಸಾವು-ನೋವುಗಳಾಗದಂತೆ ತಡೆಯಲು ಅವಶ್ಯ ಕೆಲಸ ಮಾಡುವುದನ್ನು ಬಿಟ್ಟು ಅಪೂರ್ಣ ಮೆಟ್ಟಿಲು ಮಾಡಿ ವೀಕ್ಷಣೆಗೆ ನಿರ್ಬಂಧ ಹೇರಿರುವ ಜಲಪಾತವನ್ನು ನೋಡಲು ಬರುವವರಿಗೆ ನಿರಾಸೆಯಾಗುವಂತೆ ಮಾಡಲಾಗಿದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತಂದು ನಮ್ಮ ನಾಡಿನ ಸೊಬಗನ್ನು ಹೊರಗಿನವರಿಗೆ ಪರಿಚಯಿಸಲು ಶ್ರಮಿಸಬೇಕಾದ ಜನಪ್ರತಿನಿಧಿಗಳು ಈ ಬಗ್ಗೆ ಉಪೇಕ್ಷೆ ಮಾಡುತ್ತಿರುವ ಬಗ್ಗೆ ಪ್ರವಾಸಿಗರೊಂದಿಗೆ ಸ್ಥಳಿಯರೂ ಬೇಸರಿಸಿದರು. ಸಿದ್ಧಾಪುರ, ಉತ್ತರ ಕನ್ನಡದ ಕಾಡು-ಜಲ ಗಳ ಸೊಬಗನ್ನು ಪರಿಸರಕ್ಕೆ ಪೂರಕವಾಗಿ ಅಭಿವೃದ್ಧಿ ಪಡಿಸಬೇಕಾದ ನಾಯಕತ್ವ ಈ ಜಿಲ್ಲೆಗೆ ಶಾಪ ಎಂದೆನಿಸದೇ ಇರಲಿಲ್ಲ. ಈ ಗುಡುಂಕಲ್ ಮಕ್ಕಳ ಜಲಪಾತ, ಚಾರಿತ್ರಿಕ,ಪರಿಸರ ಮಹತ್ವದ ವಿಶ್ವವಿಖ್ಯಾತ ಬುರುಡೆ ಜಲಪಾತ ಸ್ಥಳಿಯರೊಂದಿಗೆ,ಪ್ರವಾಸಿಗರಿಗೂ ಹತ್ತಿರವಾಗಬೇಕಿದೆ.