ಗೋಡೆಗಳೇ ಇಲ್ಲದ ದೇವರೊಬ್ಬ ಉದಯಿಸಲಿ
ತುಂಬು ಹುಣ್ಣಿಮೆಯ ತಂಪು ಚಂದಿರನಂತೆ
ಕಂಡ ಕಣ್ಣಲಿ ಕನಸಿನ ಹೂಟೆಯ ಮೀಟಲಿ
ಗುಡಿಸಿಲಿನ ಅಂಗಳದ ಅಂಬುಮಲ್ಲಿಗೆಗೂ
ಅರಮನೆಯ ಕಳಸಕ್ಕೂ ಒಂದೇ ಬೆಳಕ ಚೆಲ್ಲಲಿ
ದೇವಾ! ನೀನು ಸೆರೆಮನೆಯ ಕೈದಿಗಳ ಕಣ್ಣಲ್ಲಿಳಿದು
ಕಣ್ಣೀರ ಕರೆ, ಕದಡಿದ ಮನಸ್ಸುಗಳು ತಿಳಿಗೊಳ್ಳಲಿ
ಅನಾಥ ಮಕ್ಕಳ ಕೈಯಲ್ಲಾಡುವ ಆಟಿಕೆಯಾಗು
ಅವು ನಿನಗೆ ಕೀಲಿಕೊಟ್ಟು ಕಿಲಕಿಲನೆ ಕುಣಿಯಲಿ
ಬಿಗಿದ ಮನದಿ ಕಚಗುಳಿಯಿಟ್ಟು ಮನಬಿಚ್ಚಿ ನಗಲಿ
ಏಸುವಿನ ಕರುಣೆಯನ್ನೂ ನೋವನ್ನೂ ರಕ್ತವನ್ನೂ
ಪೈಗಂಬರರ ಸಾಧುಸಂತರ ದರ್ವೇಶಿಗಳ
ಹಳೆಯ ಬೇರುಗಳಲ್ಲುಳಿದ ಅವಮಾನಗಳನ್ನು ನುಂಗಿ ಕಾಮನಬಿಲ್ಲಿನ ಬಣ್ಣದ ಹೂವಂತೆ ಮಾತು ಹಗುರಾಗಲಿ
ಅವು
ಬುದ್ಧನ ಮೌನದ ಮುಗುಳು ನಗೆಯನ್ನು ಮರೆಯದೆ ಪೋಣಿಸಿಕೊಳ್ಳಲಿ
ಕುವೆಂಪು ಟಾಲಸ್ಟಾಯರ ರವೀಂದ್ರರ ಧ್ಯಾನದಲ್ಲಿ
ಶೇಕ್ಷಪೀಯರನ ರಾಜರ ರಕ್ತದಾಹವನಿಂಗಿಸು
ಗೊಮ್ಮಟನ ನಿರ್ವಾಣದಲ್ಲಿ ದಾಯಾದಿಯ ದಿಕ್ಕರಿಸು
ಗಾಂಧಿಯ ನಡಿಗೆಯಲಿ ಬಡವನುದ್ಧರಿಸು
ದಿನವಿಡೀ ಹೊಲಮನೆಯಲ್ಲಿ ಗೇದು ದಣಿದು
ಮಲಗಿದ ರೈತನಿಗೆ ನಡುಹಗಲಲ್ಲಿ ಮರದ ನೆರಳಾಗು….,
ನಂಬಿದ ದೇವರ ನೆಟ್ಟು ಬೆಳೆಸಿದ ದೇವನವನು
ನಿನ್ನ ನೆರಳಲ್ಲಿ ಸೊಂಪು ನಿದ್ದೆ ಆವರಿಸಲಿ
ಹಸಿದ ಹೊಟ್ಟೆಯನ್ನರಿತು ಬೆಳೆಸಾಗಲಿ
ಬೆಳಸು ಬಾಡದಂತೆ ಮಳೆರಾಯನಿಗೆ
ಕನಸಾಗಲಿ
ದುಡಿವ ಜೀವಗಳ ತುಂಬಿದ ಹೊಟ್ಟೆ ನೆಮ್ಮದಿಯ
ಕರೆದು ನಿದ್ರೆ ಕಣ್ತುಂಬಿಕೊಳ್ಳಲಿ
ಹೆಚ್. ಆರ್. ಸುಜಾತಾ
೧೮.೫.೧೯
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ