ನಾಲ್ಕೇ ಕ್ಲಾಸು ಓದಿದವನು ಉಳಿಸಿಹೋದ ಪಾಠಗಳು.. ಇದು ಉಮೇಶ್ ನಾಯ್ಕರ ಪುಸ್ತಕದ ಬಗ್ಗೆ ವೆಂಕಟ್ರಮಣ ಗೌಡರ ಬರಹ

——————————————–ಅಪ್ಪ ಮತ್ತು ಅಮ್ಮ ಗೆಳೆತನದ ಮೊದಲ ಭಾಸವನ್ನು ಕರುಣಿಸುವವರಾಗಿ ಮಾತ್ರವಲ್ಲ ಎದುರಾಳಿಗಳಂತೆ ಕಾಣಿಸುವುದೂ ಇದೆ ಬಹಳ ಸಲ. ಸಾಮರಸ್ಯ, ಸಂಘರ್ಷವೆರಡೂ ಜೊತೆಜೊತೆಗೇ ಬೆರೆತುಕೊಂಡಿದ್ದು ಕಾಯುವ ಈ ಆಪ್ತತೆ ಅತ್ಯಂತ ತೀವ್ರತೆಯೊಂದಿಗೆ ನಮ್ಮನ್ನು ಕಾಡುವುದು ಬಹುಶಃ ಅವರು ಇಲ್ಲವಾದ ಮೇಲೆಯೇ.

ಇದರರ್ಥ, ಉಪಸ್ಥಿತಿಯಲ್ಲಿ ಅವರನ್ನು ಉಪೇಕ್ಷಿಸಿದೆವು ಎಂದಾಗಲೀ ಅನುಪಸ್ಥಿತಿಯಲ್ಲಿ ಉತ್ಪ್ರೇಕ್ಷಿಸುತ್ತೇವೆ ಎಂದಾಗಲೀ ಅಲ್ಲ. ಇದೆಲ್ಲವೂ ಸಹಜವಾಗಿಯೇ, ಅಪ್ರಜ್ಞಾಪೂರ್ವಕವಾಗಿಯೇ ಆಗುವುದನ್ನು ಅಲ್ಲಗಳೆಯಲಾಗದು. ಹಳ್ಳಿಯಲ್ಲಿ, ಕೃಷಿ ಕುಟುಂಬದಲ್ಲಿ ಬೆಳೆದ ನನ್ನಂಥವನ ಅನುಭವಕ್ಕೆ ಬರುವುದು ಅಪ್ಪ ಮತ್ತು ಅಮ್ಮನೊಡನೆಯ ಸಂಬಂಧದಲ್ಲಿ ಮಧುರತೆಗಿಂತ ಒರಟುತನ. ತೋರಿಕೆಯ ಪ್ರೀತಿಗಿಂತ ಒರಟುತನವೇ ಹೊರಗೆ ಕಾಣಿಸಿಕೊಂಡು ಆಳದಲ್ಲಿ ಪ್ರೇಮದ ಪಸೆ ಸದಾ ಆರ್ದ್ರವಾಗಿರುವುದು ಇಲ್ಲಿನ ಗುಣ. ಇಲ್ಲಿ ದಾಕ್ಷಿಣ್ಯವಿರುವುದಿಲ್ಲ. ನಿರ್ದಾಕ್ಷಿಣ್ಯದಿಂದಿರುವುದರಲ್ಲೇ ನಿರ್ವ್ಯಾಜ್ಯ ಪ್ರೀತಿಯೂ ಇರುವುದರ ಸಾಕಾರದಂತೆ ಈ ಬಾಂಧವ್ಯ. ಹೀಗೆ, ತೋರಬೇಕಾದ ಪ್ರೇಮವೆಲ್ಲ ಒಳಗೇ ಉಳಿದು, ದಿನನಿತ್ಯದ ಒಡನಾಟದಲ್ಲಿ ಕಿತ್ತಾಡಿಕೊಳ್ಳುತ್ತಿರುವಂತೆಯೇ ಅನ್ನಿಸುವ ಬಂಧವು ಕೊಂಡಿ ಕಳಚಿದ ಹೊತ್ತಲ್ಲಿ ಅಪಾರ ದುಃಖವಾಗಿ, ಪ್ರತಿ ಕ್ಷಣವೂ ನೆನೆಯುವಂಥ ಬಗೆಯಾಗಿ ಉಳಿದುಬಿಡುತ್ತದೆ. ಆವರೆಗೂ ನಮ್ಮೊಳಗೆ ಸುಪ್ತವಾಗಿದ್ದ ಕಥನವು ಮುನ್ನೆಲೆಗೆ ಬರುವುದು ಇಂಥ ಹಂತದಲ್ಲೇ. ನಮ್ಮೊಳಗೆ ಬದುಕಿನ ಅದೆಷ್ಟೋ ಕಥೆಗಳನ್ನು ಊಡಿದವರ ವ್ಯಕ್ತಿತ್ವದ ಪ್ರತಿ ಚಹರೆಯೂ ಇನ್ನಷ್ಟು ಗಾಢವಾಗುತ್ತ ದಕ್ಕುವ ರೂಪವು ರೂಪಕವೂ ಆಗುವುದು ನಮ್ಮೊಳಗಿನ ಕಥನದ ಸತ್ವದಿಂದಲೇ.

ಆದರೆ ಇದು ಎಲ್ಲರಿಗೂ ಒದಗಿಬರುವ ಸಹಯೋಗವೇನೂ ಅಲ್ಲ. ಅಪರೂಪದಲ್ಲಿ ಅಪರೂಪದ ಬಿಂದುವೊಂದರಲ್ಲಿ ಇಂಥ ಸಹಯೋಗ ನಿಕ್ಕಿಯಾಗುತ್ತದೆ. ಅಪ್ಪನನ್ನು ಎದುರಿಗಿಟ್ಟುಕೊಂಡು ನೋಡುತ್ತ, ಮುಗಿಯದಷ್ಟು ಪ್ರಶ್ನೆಗಳನ್ನು ಕೇಳಿಕೊಳ್ಳುವ ಮತ್ತು ಕನ್ಫೆಸ್ ಮಾಡಿಕೊಳ್ಳುತ್ತ ಪರಿತಪಿಸುತ್ತ ಶುದ್ಧಗೊಳ್ಳುವ ಇಂಥ ಸಹಯೋಗದ ಭಾಗ್ಯವನ್ನು ಪಡೆದವನೆಂಬ ಕಾರಣಕ್ಕೆ ಗೆಳೆಯ ಉಮೇಶ ನಾಯ್ಕನ ಬಗ್ಗೆ ಅಭಿಮಾನಪಡುತ್ತೇನೆ.

“ನಾಲ್ಕೇ ಕ್ಲಾಸು ಓದಿದವನು” ತನ್ನ ಅಪ್ಪನ ಬಗ್ಗೆ ಉಮೇಶ ನಾಯ್ಕ ಬರೆದ ಪುಸ್ತಕ. ತುಂಬು ಕುಟುಂಬದಲ್ಲಿನ ಮಗನೊಬ್ಬ, ಅತ್ಯಂತ ಸರಳವಾಗಿ ಬದುಕಿದ ಮತ್ತು ಆ ಸರಳತೆಯಲ್ಲಿಯೇ ಹೋರಾಟದ ಬಹುದೊಡ್ಡ ಹಾದಿಯನ್ನು ಮುಗಿಯದಷ್ಟು ಕನಸುಗಳನ್ನು ಕೂಡಿಸಿಕೊಳ್ಳುತ್ತ ನಡೆದ ತನ್ನ ಅಪ್ಪನ ಬಗ್ಗೆ ಅಭಿಮಾನ ಮತ್ತು ನೋವುಗಳೆರಡನ್ನೂ ಇಟ್ಟುಕೊಂಡೇ ಹೇಳಿರುವ ಕಥನ ಇದು. ಇಲ್ಲಿ ಅಭಿಮಾನ ಅಪ್ಪನ ದೃಢತೆಯ ಬಗೆಗಾದರೆ, ನೋವು, ಅಂಥ ಅಪ್ಪನ ದಾರಿಯನ್ನು ತುಳಿಯಲಾರದ ತನ್ನಂಥವನ ಅಸಹಾಯಕತೆ ಮತ್ತು ಸ್ವತಃ ಅಪ್ಪ ಕೂಡ ತನ್ನ ಕನಸಿನ ಆದರ್ಶ ನಿಧಾನವಾಗಿ ಅಪಮೌಲ್ಯಕ್ಕೊಳಗಾಗುತ್ತಿದೆ ಎಂಬುದನ್ನು ಅಸಹಾಯಕನಾಗಿ ನುಂಗಿಕೊಳ್ಳುತ್ತ ಕೊನೆಯ ದಿನಗಳನ್ನು ಕಳೆಯಬೇಕಾಯಿತು ಎಂಬುದರ ಕುರಿತದ್ದು.

ಉಮೇಶ ನಾಯ್ಕ ಕಾಲೇಜು ದಿನಗಳಿಂದ ನನ್ನ ಗೆಳೆಯ. ಅವರ ಕುಟುಂಬದಲ್ಲಿ ನಾನೂ ಒಬ್ಬನಾಗುವುದಕ್ಕೆ ಕಾರಣವಾದ ಒಡನಾಟ ಅದು. ಹಾಗಾಗಿ ನಾನು ಹಲವು ವರ್ಷಗಳ ಕಾಲ ಅತ್ಯಂತ ಹತ್ತಿರದಿಂದ ಬಲ್ಲ ವ್ಯಕ್ತಿಯಾಗಿದ್ದರು ಉಮೇಶನ ತಂದೆ ಕುಸ್ಲಪ್ಪ ನಾಯ್ಕರು. ಆತ್ಮೀಯ ಮುಗುಳ್ನಗೆ, ಅತ್ಯಂತ ಕಡಿಮೆ ಮಾತು, ಎಲ್ಲೆಲ್ಲೂ ಸೋಗಲಾಡಿಗಳೇ ತುಂಬಿಹೋದುದರ ಬಗ್ಗೆ ಸಣ್ಣದೊಂದು ತಿರಸ್ಕಾರದ ದನಿ ಅವರದಾಗಿರುತ್ತಿತ್ತು. ಅವರ ಕುಟುಂಬದೊಳಗಿನ ಆಗುಹೋಗುಗಳು ನನ್ನ ಗಮನಕ್ಕೂ ಬರುತ್ತಿದ್ದವು. ಅದೆಷ್ಟೋ ಖುಷಿಯ ಸಂದರ್ಭಗಳಲ್ಲಿ ಅವರ ಮನೆಯ ಊಟಕ್ಕೆ ನಾನೂ ಒಬ್ಬನಾಗಿರುತ್ತಿದ್ದೆ. ಆದರೆ ಈ ಕಥನದಲ್ಲಿ ಬರುವ ಅವರ ಅತ್ಯಂತ ಕಷ್ಟದ ದಿನಗಳ ಹೊತ್ತಲ್ಲಿ ಆಗೀಗೊಮ್ಮೆ ಮಾತು ಬಿಟ್ಟರೆ ದೂರವೊಂದು ತಲೆದೋರಿತ್ತು. ಕುಸ್ಲಪ್ಪ ನಾಯ್ಕರು ತೀರಿಕೊಂಡಾಗ ನಾನು ಹೈದರಾಬಾದಿನಲ್ಲಿದ್ದೆ. ಹೀಗೆ ಮನಸಿಗೆ ಹತ್ತಿರಾದವರೊಬ್ಬರ ಕುರಿತ ಕಥನವು ನಮ್ಮನ್ನು ನಾವೇ ವಿಮರ್ಶೆಗೆ ಹಚ್ಚಿಕೊಳ್ಳುವಂತೆ ಮಾಡುತ್ತದೆ. ಅದು ನಮ್ಮೆದುರು ಹಲವು ಪ್ರಶ್ನೆಗಳನ್ನು ಎತ್ತುತ್ತದೆ. ಬರೀ ಮಾತುಗಳಲ್ಲಿ ಮುಗಿದುಹೋಗುವ ನಮ್ಮ ತವಕಗಳನ್ನು ಅದು ಕೆಣಕುತ್ತದೆ. ಇದೇ ಅನುಭವ ಅವರ ಕಥನವನ್ನು ಬರೆಯುತ್ತಿದ್ದ ಮತ್ತು ಬರೆದು ಮುಗಿಸಿದ ಬಳಿಕವೂ ಉಮೇಶನನ್ನು ಕಾಡಿದೆ ಎಂಬುದರಲ್ಲಿ ನನಗೆ ಅನುಮಾನವಿಲ್ಲ. ಕುಸ್ಲಪ್ಪ ನಾಯ್ಕರಂಥವರ ವ್ಯಕ್ತಿತ್ವ ನಮ್ಮೊಳಗೆ ಎಷ್ಟು ದೊಡ್ಡ ಆತ್ಮಸ್ಥೈರ್ಯವನ್ನು ತುಂಬಬಲ್ಲುದು ಮತ್ತು ಅವರು ಎದುರಿಸಿದ ಅಸಹಾಯಕ ಸಂದರ್ಭಗಳು ಹೇಗೆ ಈ ಸಮಾಜದ ಅಥವಾ ವ್ಯವಸ್ಥೆಯ ಒಳಗಿನ ಜಡ್ಡುಗಟ್ಟಿದ ಸ್ಥಿತಿಯ ಪರಿಣಾಮವೇ ಆಗಿವೆ ಎಂಬುದು, ಈ ಕಥನದಿಂದಷ್ಟೇ ಅವರ ಬಗ್ಗೆ ಮೊದಲ ಬಾರಿಗೆ ತಿಳಿದುಕೊಳ್ಳುತ್ತಿರುವವರಿಗೂ ಮನವರಿಕೆಯಾಗುವಂತೆ ಈ ಕಥನವನ್ನು ಉಮೇಶ ನಿರೂಪಿಸಿದ್ದರೆ, ಅದರ ಹಿಂದಿರುವುದು ಆತನ ಆತ್ಮವಿಮರ್ಶಕ ಗುಣವೇ.ಈ ಇಡೀ ಕಥನವನ್ನು ಉಮೇಶ ಒಬ್ಬ ಮಗನಾಗಿ ಹೇಳಿದ್ದರೂ, ಅಪ್ಪನ ಬಗ್ಗೆಯಾಗಲೀ ಕುಟುಂಬದ ಬಗ್ಗೆಯಾಗಲೀ ಮಕ್ಕಳಾದ ತಮ್ಮ ಬಗ್ಗೆಯಾಗಲೀ ಎಲ್ಲಾದರೂ ಹೇಳಿದ್ದು ಹೆಚ್ಚಾದೀತೇನೋ ಎಂಬ ಅತ್ಯಂತ ಸಂಕೋಚ ತುಂಬಿದ ಅನುಮಾನವಿಟ್ಟುಕೊಂಡೇ, ಎಲ್ಲೂ ಹೇಳಿದ್ದು ಹೆಚ್ಚಾಗಕೂಡದು ಎಂಬ ನಿಷ್ಠುರತೆಯಿಂದಲೇ ಹೇಳಿರುವ ರೀತಿ ಗಮನಕ್ಕೆ ಬರುತ್ತದೆ. ಒಳಗೆ ಪ್ರಾಮಾಣಿಕವಾಗಿರುವ ಮನಸ್ಸಿಗೆ ಮಾತ್ರವೇ ಸಾಧ್ಯವಾಗುವ ಮಾನಸಿಕ ದೂರ ಇದು. ಹೀಗೆ ಒಳಗಿನವನಾಗಿದ್ದೂ ದೂರ ನಿಂತು ಕಥನಿಸುವುದು, ಆತ್ಮಕಥನಗಳಲ್ಲಿ ಲೋಲಾಡುವವರ ಕಪಟತನದ ವಿರುದ್ಧ ಕಟುವಾದ ನಿಲುವುಳ್ಳ ಗಟ್ಟಿತನ. ಈ ಕಾರಣದಿಂದಾಗಿಯೇ, ಬದುಕಿನುದ್ದಕ್ಕೂ ಪ್ರಾಮಾಣಿಕರಾಗಿಯೇ ಮನಃಸಾಕ್ಷಿಯ ಮಾತು ಕೇಳಿಸಿಕೊಳ್ಳುತ್ತಲೇ ಬದುಕಿದ್ದ ಕುಸ್ಲಪ್ಪ ನಾಯ್ಕರ ಕುರಿತ ಈ ಕಥನ ಪ್ರಾಮಾಣಿಕವಾಗಿ ಮೂಡಿದೆ. ಇದು ಕುಸ್ಲಪ್ಪ ನಾಯ್ಕರ ವ್ಯಕ್ತಿತ್ವಕ್ಕೆ ಸಂದ ದೊಡ್ಡ ಗೌರವ.ಗಾಢವಾಗಿ ತಟ್ಟುವುದು, ಓದಿದವನ ಲೆಕ್ಕಾಚಾರದ ಬದುಕಿಗಿಂತ ಬದುಕಿನ ಬಗೆಗೆ ಪ್ರೀತಿಯಿಟ್ಟುಕೊಂಡು, ಅಂಥ ಜೀವನ್ಮುಖೀ ದಾರಿಯಲ್ಲಿ ಅಮಾಯಕರಿಗೆ ಎದುರಾಗುವ ಆಘಾತಗಳ ಕುರಿತು ವ್ಯಗ್ರರಾಗಿ ಅದರ ವಿರುದ್ಧ ನಿಲ್ಲುವ ಮೂಲಕ ಅದೆಷ್ಟೆಲ್ಲ ಪಾಠಗಳನ್ನು ಇತರರಿಗಾಗಿ ಕಾಣಿಸಬಲ್ಲ ಬದುಕನ್ನು ಕುಸ್ಲಪ್ಪ ನಾಯ್ಕರು ರೂಪಿಸಿಕೊಂಡರಲ್ಲ ಎಂಬುದು. ವಿದ್ಯಾವಂತರ ಸಂಕುಚಿತ ಮನಃಸ್ಥಿತಿಯೇ ವಿನಾಶದ ಮೂಲವೂ ಆಗುತ್ತಿರುವ ಅಪಾಯವನ್ನು ನೋಡುತ್ತಿರುವ ಈ ಹೊತ್ತಲ್ಲಿ, ಕುಸ್ಲಪ್ಪ ನಾಯ್ಕರು ಮತ್ತು ಅವರಂಥವರು ತೆರೆದ ಮನಸ್ಸಿನ ದಾರಿ ಎಷ್ಟು ವಿಶಾಲವಾಗಿದೆಯಲ್ಲವೇ ಎಂಬ ಬೆರಗು ಉಳಿಯುತ್ತದೆ. ಕುಸ್ಲಪ್ಪ ನಾಯ್ಕರ ಬದುಕನ್ನು ಕಥನಿಸುವ ಉಮೇಶ ಕೂಡ ಈ ನೆಲೆಯನ್ನು ಗ್ರಹಿಸಿರುವುದು ಸ್ಪಷ್ಟ. ಹಾಗಾಗಿಯೇ ಈ ಕಥನದ ಶೀರ್ಷಿಕೆ ‘ನಾಲ್ಕೇ ಕ್ಲಾಸು ಓದಿದವನು’ ಎಂದಿರುವುದು. ಸುಶಿಕ್ಷಿತರೆನ್ನಿಸಿಕೊಂಡವರನ್ನು ಮೀರಿಸುವ ಹಾಗೆ, ಬರೀ ನಾಲ್ಕನೇ ಕ್ಲಾಸಿಗೇ ಶಾಲೆಯ ಓದು ಮುಗಿಸಿದ್ದ ಕುಸ್ಲಪ್ಪ ನಾಯ್ಕರು ಬದುಕಿ ತೋರಿಸಿದರು. ಮತ್ತು ಇಲ್ಲಿ ಬದುಕುವುದೆಂದರೆ ತಾನು ತನ್ನ ಮನೆ ತಮ್ಮ ಕುಟುಂಬ ತಮ್ಮ ಊಟ ಉಡುಗೆ ಇಷ್ಟೇ ಆಗಿರದೆ, ಎಲ್ಲರ ಒಳಿತಿನ ಹಾದಿಯನ್ನು ಹಂಬಲಿಸಿದ್ದ ನಿರಂತರ ಹೋರಾಟದ ಮನಃಸ್ಥಿತಿಯಾಗಿತ್ತು ಎಂಬುದು ಮುಖ್ಯ.

ವಿದ್ಯಾವಂತರ ಧೋರಣೆ ಸ್ವಾರ್ಥದ ಚಿಪ್ಪಿನೊಳಗೆ ಸೇರಿಕೊಂಡು ಸುರಕ್ಷಿತ ಭಾವವನ್ನು ಅನುಭವಿಸುವಾಗ, ನಾಲ್ಕೇ ಕ್ಲಾಸು ಕಲಿತವನೊಬ್ಬ ಸಮಾಜಮುಖಿ ನೆಲೆಯ ಚಿಂತನೆಗೆ ತನ್ನನ್ನು ತೆರೆದುಕೊಂಡರೆಂಬುದು ಸಣ್ಣ ಸಂಗತಿಯಲ್ಲ.“ಕೇವಲ ಭಾಷಣಕ್ಕಾಗಿ, ಬರಹಕ್ಕಾಗಿ, ಆ ಮೂಲಕ ಹೆಸರಿಗಾಗಿಯೇ ಬದುಕುವ ಢೋಂಗಿಗಳ ನಡುವೆ ನನ್ನ ತಂದೆ ಕುಸ್ಲಪ್ಪ ಹೊನ್ನಪ್ಪ ನಾಯ್ಕ ತನ್ನ ಮಾತು ಮತ್ತು ಬದುಕಿನ ನಡುವೆ ತೀರಾ ವ್ಯತ್ಯಾ ಸವಿಲ್ಲದಂತೆ, ವೈಚಾರಿಕತೆಯ ಪ್ರಖರ ಬೆಳಕಿನಂತೆ ಬದುಕಿದವರು. ಖಂಡಿತವಾಗಿಯೂ ಯಾವ ಶಿಕ್ಷಕರಲ್ಲೂ ಕಾಣದ, ಬಹಳಷ್ಟು ಕವಿಗಳು, ಸಾಹಿತಿಗಳಲ್ಲೂ ಸಿಗದ ಯೋಚನೆ-ವೈಚಾರಿಕತೆಗಳ ಜೊತೆಗೆ ನಂಬಿದ ತತ್ವಗಳಲ್ಲಿ ಬದ್ಧತೆ ಇದ್ದುದನ್ನು ಅವರಲ್ಲಿ ಕಂಡಿದ್ದೇನೆ” ಎಂದು ಕುಸ್ಲಪ್ಪ ನಾಯ್ಕರ ವ್ಯಕ್ತಿತ್ವದ ಬಗ್ಗೆ ಹೇಳುವ ಉಮೇಶ, ಪುಟ್ಟ ಪುಟ್ಟ ಅಧ್ಯಾಯಗಳಲ್ಲಿ ಅವರ ಶಕ್ತಿಯ ವಿವಿಧ ಮುಖಗಳ ಅನಾವರಣ ಮಾಡಿರುವುದು ಈ ಕಥನಕ್ಕೊಂದು ಸೊಗಸನ್ನು ಕೊಟ್ಟಿದೆ. ಕುಸ್ಲಪ್ಪ ನಾಯಕರ ಹೋರಾಟ, ಅವರು ನಂಬಿದ ರಾಜಕೀಯ ಆದರ್ಶಗಳು, ಅವರ ಸಂಪ್ರದಾಯ ವಿರೋಧಿ ನಿಲುವು, ಅವರ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮಿತ್ರರ ಜೊತೆಗಿನ ಒಡನಾಟ, ಅವರ ಕೃಷಿ ಬದುಕು, ಅವರೊಳಗಿನ ಕಲಾವಿದ ಇಂಥ ಹಲವು ವಿಚಾರಗಳು ಇಲ್ಲಿ ದಾಖಲಾಗಿವೆ.

ಅವರ ಕಡುಕಷ್ಟದ ದಿನಗಳ ಬಗ್ಗೆ ಬರೆಯುವಾಗಲೂ ಉಮೇಶ ತೋರಿರುವುದು ಎಷ್ಟು ಬೇಕೋ ಅಷ್ಟನ್ನೇ ಹೇಳುವ ಸಂಯಮ. ಬಹುಶಃ ಅದು ಕುಸ್ಲಪ್ಪ ನಾಯ್ಕರ ಬದುಕಿನಿಂದಲೇ ಸಿಕ್ಕ ಪಾಠವೂ ಹೌದು.ಹೇಗೆ ಕನಸುಗಾರನೊಬ್ಬನ ಬದುಕಿನಲ್ಲಿ ಅವನ ಕೈಮೀರಿದ ಸಂದರ್ಭವು ಆಟವಾಡುತ್ತದೆ ಎಂಬುದಕ್ಕೂ ಕುಸ್ಲಪ್ಪ ನಾಯ್ಕರ ಬದುಕಿನ ಕಥೆ ಸಾಕ್ಷಿಯಾಗುತ್ತದೆ. ಎಲ್ಲ ಆಡಂಬರಗಳಿಂದ ದೂರವಿದ್ದು ಬದುಕಬೇಕು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಬೇಕು, ಯಾವುದೇ ಮೌಢ್ಯ ಆಚರಣೆಗಳಿಗೆ ತನ್ನ ಮನೆ ನೆಲೆಯಾಗಬಾರದು ಎಂದೆಲ್ಲ ಹಂಬಲಿಸಿದ್ದ ಕುಸ್ಲಪ್ಪ ನಾಯ್ಕರು ಗ್ಯಾಂಗ್ರಿನ್ ಕಾರಣದಿಂದಾಗಿ ತಮ್ಮ ಕಡೆಯ ದಿನಗಳಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡು ಬಳಲಿಹೋಗುತ್ತಾರೆ. ಸ್ವಾಭಿಮಾನ, ಸ್ವಾವಲಂಬನೆ, ಕ್ರಾಂತಿಕಾರಿ ಆಲೋಚನೆಗಳು ಎಲ್ಲವೂ ಕೂಡಿಕೊಂಡಿದ್ದ ಅವರೊಳಗಿನ ನೋವು ಮತ್ತು ಸಂಕಟ ಕಣ್ಣಂಚಿಗೆ ಬಂದು ನಿಂತುಬಿಟ್ಟಿರುತ್ತದೆ. ತಾವು ನಂಬಿದ್ದ ಆದರ್ಶಗಳು ಅನಾಥವಾದಾವೆಂಬ ಕೊರಗೊಂದೇ ಕಡೆಯವರೆಗೂ ಕಾಡುತ್ತದೆ. ಇದೆಲ್ಲವನ್ನೂ ಕಟ್ಟಿಕೊಡುವ ಉಮೇಶ, ‘ವಿಚಿತ್ರವೆಂದರೆ ಅಪ್ಪನ ವಿಚಾರಗಳನ್ನು ಒಪ್ಪಿಕೊಳ್ಳುತ್ತಲೇ, ಯಾವುದನ್ನೂ ಪಾಲಿಸದೆ ಅವನ ಆಶಯಕ್ಕೆ ವಿರುದ್ಧದ ಪಾತ್ರಧಾರಿಗಳಾದವರು ನಾವು’ ಎಂದು ವಿಮರ್ಶಿಸಿಕೊಳ್ಳುವುದು ಕಠೋರ ಸತ್ಯವೊಂದನ್ನು ಬಿಚ್ಚಿಡುತ್ತದೆ.

ಈ ಕಥನದ ಕೊನೆಯಲ್ಲಿ ಉಮೇಶ ಹೇಳುವ ಮಾತು:“ವಿರೋಧಗಳು ಮತ್ತು ಅಪಹಾಸ್ಯಗಳ ನಡುವೆಯೇ ಮುಹೂರ್ತ ನೋಡದೆ, ಹೋಮ-ಹವನ-ಮಂತ್ರಗಳಿಲ್ಲದೆ, ಆಡಂಬರಗಳ ದೂರವಿಟ್ಟು ಮದುವೆಯಾದೆ. ಈಗ ಅಪ್ಪ ನನ್ನೊಂದಿಗಿದ್ದಾರೆ. ಬೆಳಕು ಚೆಲ್ಲಿ ನಡೆಸುತ್ತಿದ್ದಾರೆ. ಹೌದು, ಅಪ್ಪನ ವಿಚಾರಗಳೇ ಈಗ ನನ್ನ ಮನೆಯ ದೇವರು.”ನಾಲ್ಕೇ ಕ್ಲಾಸು ಓದಿದವನು ಕಲಿಸಿದ ಪಾಠವು ಉಳಿದುಕೊಂಡ ಪರಿ ಇದು. *ನನಗೆ ಕುಸ್ಲಪ್ಪ ನಾಯ್ಕರ ಬದುಕಿನ ಈ ಕಥನವನ್ನು ಗ್ರಾಮಭಾರತದ ಸತ್ಯ ಮತ್ತು ಸತ್ವದ ಮಾದರಿಯಾಗಿ ನೋಡಬೇಕೆನ್ನಿಸುತ್ತದೆ. ಈ ಕಥನವನ್ನು ಯಾಕೆ ಬರೆಯಬೇಕೆನ್ನಿಸಿತು ಎಂದು ಉಮೇಶ ವಿವರಿಸಿರುವುದರ ಬಗ್ಗೆ ಪ್ರಸ್ತಾಪಿಸುವುದರೊಂದಿಗೆ ಈ ಮಾತುಗಳನ್ನು ಮುಂದುವರಿಸುವೆ. ಇವತ್ತಿನ ಅಸಹಿಷ್ಣತೆಯ ಕಾಲದಲ್ಲಿ ಎಲ್ಲ ಧರ್ಮಸೂಕ್ಷ್ಮವನ್ನೂ ರಾಜಕೀಯಕ್ಕೆ ಬಳಸಿಕೊಳ್ಳುವ, ಎಲ್ಲದಕ್ಕೂ ಕೋಮುದ್ವೇಷದ ಲೇಪವನ್ನಿಡುವ ಹುನ್ನಾರವು ವ್ಯವಸ್ಥಿತವಾಗಿಯೇ ನಡೆಯುತ್ತಿರುವುದನ್ನು ಯೋಚಿಸುವಾಗ ಮತ್ತು ಡಿಗ್ರಿಗಳ ಮೇಲೆ ಡಿಗ್ರಿ ಪಡೆದು ಸುಶಿಕ್ಷಿತರೆನ್ನಿಸಿಕೊಂಡವರೇ ಅದನ್ನು ಸಮರ್ಥಿಸಿ ಮಾತನಾಡುವುದನ್ನು ನೋಡುವಾಗ, ಓದೇ ಗೊತ್ತಿರದಿದ್ದವರು ಮತ್ತು ಸಾಮಾನ್ಯರೆನ್ನಿಸಕೊಂಡಿದ್ದವರು ಇದೇ ನೆಲದಲ್ಲಿಯೇ ಕೂಡಿ ಬಾಳಿದ್ದರಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ಆಗ ಅಪ್ಪ ಮತ್ತವನ ಆಲೋಚನೆಗಳು ಎದೆಗೆ ಹತ್ತಿರವಾದವು ಎಂದು ಉಮೇಶ ಹೇಳುವುದು, ನಾವು ಎಲ್ಲಿಂದ ಏನನ್ನು ಹೆಕ್ಕಿಕೊಳ್ಳಬೇಕಾಗಿದೆ ಎಂಬುದನ್ನೂ ಸೂಚಿಸುತ್ತದೆ.

ಕೂಡಿ ಬಾಳುವ, ಕೊಡಕೊಳ್ಳುವ ಅನನ್ಯವೆನ್ನಿಸುವಂಥ ಭಾವನಾತ್ಮಕ ಮತ್ತು ಆರ್ಥಿಕ ತತ್ವದ ಬುನಾದಿಯಿದೆ ಗ್ರಾಮಭಾರತಕ್ಕೆ. ಮನಸ್ಸುಗಳಿಗೆ ವಿಷವುಣಿಸುವ ಹುನ್ನಾರಗಳೇನೂ ಅಲ್ಲಿ ಇಲ್ಲವೆಂದಲ್ಲ. ಆದರೆ ಅದನ್ನು ಮೀರಿದ ಆತ್ಮಬಲದ ಸೆಲೆಯಿರುವುದು ಆರ್ಥಿಕ ವ್ಯಾಮೋಹವನ್ನೂ ಮೀರಿ ಮಾನವೀಯವಾದುದರ ಕಡೆಗಿನ ಸೆಳೆತವನ್ನು ತನ್ನೊಳಗಿನ ಮಿಡಿತವಾಗಿ ಗ್ರಾಮಭಾರತ ಇವತ್ತಿಗೂ ಹೊಂದಿದೆ ಎಂಬುದರಲ್ಲಿ. ಬಿಸಿಲಲ್ಲಿ ಬಂದವರಿಗೆ ಚೂರು ಬೆಲ್ಲದ ಜೊತೆ ಮನಸ್ಸು ತೃಪ್ತಿಯಾಗುವಂತೆ ಗಟಗಟ ಕುಡಿಯಬಲ್ಲಷ್ಟು ನೀರು ಕೊಡುವ ಶೈಲಿಗೂ, ಫ್ರಿಜ್ಜಿನಲ್ಲಿಟ್ಟ ತಂಪು ಪಾನೀಯವನ್ನು ಗ್ಲಾಸಿನಲ್ಲಿ ಅರ್ಧ ಮಟ್ಟಕ್ಕೆ ಹಾಕಿಕೊಡುವ ಶೈಲಿಗೂ ಇರುವ ಅಜಗಜಾಂತರವನ್ನು ಇನ್ನೊಂದು ವಿಸ್ತಾರದಲ್ಲಿ ನಾವು ಅನ್ವಯಿಸಿಕೊಂಡು ನೋಡಿದರೆ ಗ್ರಾಮಭಾರತದ ಸತ್ಯ ಮತ್ತು ಸತ್ವ ಸ್ಫುಟವಾದೀತು. ಕುಸ್ಲಪ್ಪ ನಾಯ್ಕರಂಥ ವ್ಯಕ್ತಿತ್ವ ಗ್ರಾಮಭಾರತದ ಚೈತನ್ಯ ಎಲ್ಲಿ ಅಡಗಿದೆ ಎಂಬುದನ್ನು ನಿಶ್ಚಿತವಾಗಿ ಹೇಳಬಲ್ಲ ತಾಕತ್ತುಳ್ಳದ್ದು. ಆ ಚೈತನ್ಯದ ಕಾರಣದಿಂದಾಗಿಯೇ ಅಸಹಾಯಕತೆಯಲ್ಲೂ ಆದರ್ಶದ ಕೈಮೇಲಾಗುವುದೆಂಬುದರ ನಿರೂಪವಾಗಿ ‘ನಾಲ್ಕೇ ಕ್ಲಾಸು ಓದಿದವನು’ ನಮ್ಮ ಎದೆಗೆ ಹತ್ತಿರವಾಗುತ್ತದೆ. ಕುಸ್ಲಪ್ಪ ನಾಯ್ಕರಂಥವರು ಹೇಳಿಕೊಟ್ಟ ಪಾಠಗಳಲ್ಲಿ ನಾವು ಹೊಸ ಭಾರತವನ್ನು ಕಾಣುವುದು ಸಾಧ್ಯವಾಗಬೇಕು. -ವೆಂಕಟ್ರಮಣ ಗೌಡ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *