ಇವರು ಕೇವಲ ವೈದ್ಯರಲ್ಲ …ಡಾ.ರಹಮತ್ ತರಿಕೆರೆ

(ಬಹಳ ಹಿಂದೆ ಬರೆದ ಲೇಖನ -rt)

ಒಮ್ಮೆ ಒಂದು ದವಾಖಾನೆಗೆ ಹೋಗಿದ್ದೆ. ಟೀಪಾಯಿಯ ಮೇಲೆ, ರೋಗಿಗಳು ತಮ್ಮ ಪಾಳಿ ಬರುವವರೆಗೆ ನೋಡಲೆಂದು ಕೆಲವು ಪತ್ರಿಕೆ ಹರಡಲಾಗಿತ್ತು. ಅವು ಬಹುತೇಕ ನಂಜಿನವು. ವೈದ್ಯರು ಶರೀರದ ಬೇನೆಯೇನೊ ದುರಸ್ತಿ ಮಾಡುತ್ತಿದ್ದರು; ಆದರೆ ಮನಸ್ಸಿಗೆ ವಿಷವುಣಿಸುವ ಸಾಹಿತ್ಯವನ್ನು ಇಟ್ಟಿದ್ದರು. ದೃಷ್ಟಿದೋಷ ಸರಿಪಡಿಸುವರ ದೃಷ್ಟಿಯೇ ದೋಷಪೂರಿತವಾದರೆ ಏನು ಮಾಡುವುದು? ದೈಹಿಕ ನೋವನ್ನು ನಿವಾರಿಸಬಲ್ಲ, ಸಾವನ್ನು ಮುಂದೂಡಬಲ್ಲ ವೈದ್ಯರು, ಮಾನವೀಯವೂ ವೈಜ್ಞಾನಿಕವೂ ಆದ ವೈದ್ಯಶಾಸ್ತ್ರ ದ ಮನೋಧರ್ಮಕ್ಕೇ ಸಲ್ಲದ ಸಾಮಾಜಿಕ ಕಾಯಿಲೆಗಳಿಂದ ಪೀಡಿತರಾಗಿ ಇರುವುದುಂಟು. ಇದು, ಪದವಿ ಸ್ವೀಕಾರದ ಹೊತ್ತಲ್ಲಿ ಮಾಡಿದ ಪ್ರಮಾಣ ವಚನಕ್ಕೂ ವಿರುದ್ಧವಾದುದು. ಅನೇಕ ವೈದ್ಯುರ ನಾಜಿಗಳ ಕ್ರೂರ ಪ್ರಯೋಗಗಳಿಗೆ ನೆರವಾದರು. ಮತಧರ್ಮದ ಹೆಸರಲ್ಲಿ ಜನರನ್ನು ವಿಭಜಿಸುವ ತತ್ವಸಿದ್ಧಾಂತಗಳಿಗೆ ತಲೆಗೊಟ್ಟ ಅಧ್ಯಾಪಕರೂ ವಕೀಲರೂ ಇದ್ದಾರೆ. ಆದರೆ ವೈದ್ಯರು ಇವಕ್ಕೆ ತಲೆಗೊಡುವುದು ಹೆಚ್ಚು ವಿಷಾದ ಹುಟ್ಟಿಸುತ್ತದೆ.ಆದರೆ ಇನ್ನೂ ಕೆಲವರಿದ್ದಾರೆ.

ಇವರು ದೈಹಿಕ ಬೇನೆಗಳಿಗೆ ಮಾತ್ರವಲ್ಲ, ಲೋಕದ ಬೇನೆಗೂ ಮದ್ದರೆಯುವವರು; ತಮ್ಮ ಸಾರ್ವಜನಿಕ ವ್ಯಕ್ತಿತ್ವದಿಂದಾಗಿ ಕೇವಲ ವೈದ್ಯರಲ್ಲದವರು. ವೈದ್ಯಕೀಯದಾಚೆಗೂ ಬದುಕಿನ ವಿವಿಧ ಕ್ಷೇತ್ರಗಳಿಗೆ ತಮ್ಮನ್ನು ತೊಡಗಿಸಿಕೊಂಡವರು. ಕವಲಕ್ಕಿಯ ಡಾ.ಅನುಪಮಾ ಮತ್ತು ಡಾ. ಕೃಷ್ಣ. ಇವರು ಹೊನ್ನಾವರ ಸೀಮೆಯಲ್ಲಿ ಸಾಹಿತ್ಯ ವಿಚಾರ ಸಂಗೀತಕ್ಕೆ ಸಂಬಂಧಪಟ್ಟ ಕಾರ್ಯಕ್ರಮ ಏರ್ಪಡಿಸುವರು. ನಾನೊಮ್ಮೆ ಹೋದಾಗ ಅವರ ಗ್ರಂಥಭಂಡಾರ ಕಂಡು ಚಕಿತಗೊಂಡೆ. ಅವರು ಓದಿದ್ದ ಎಷ್ಟೊ ಲೇಖಕರನ್ನು ನಾನು ಓದಿರಲಿಲ್ಲ. ನನಗವರು ಡ್ಯಾಲ್‌ರಿಂಪಲನ `ವೈಟ್ ಮೊಗಲ್ಸ್’ ಪುಸ್ತಕವನ್ನು ಉಡುಗೊರೆ ಕೊಟ್ಟರು. ಡ್ಯಾಲ್‌ರಿಂಪಲ್, ಚರಿತ್ರೆಯನ್ನು ಕಾದಂಬರಿಯಂತೆ ಬರೆಯಬಲ್ಲ ವಿಶಿಷ್ಟ ಲೇಖಕ. `ವೈಟ್ ಮೊಗಲ್ಸ್’ನಲ್ಲಿ, ಹೈದರಾಬಾದ್ ನಿಜಾಮರ ಆಸ್ಥಾನದಲ್ಲಿ ಈಸ್ಟ್ ಇಂಡಿಯಾ ಕಂಪನಿ ರೆಸಿಡೆಂಟ್ ಆಗಿದ್ದ ಜೇಮ್ಸ್ ಕಿರ್ಕ್ಪ್ಯಾಟ್ರಿಕ್ (೧೮೦೦) ಹಾಗೂ ಅಲ್ಲಿನ ಪ್ರಧಾನಿಯ ಮಗಳೂ ಪರಮ ಸುಂದರಿಯೂ ಆದ ಖೈರುನ್ನೀಸಾಳ ಪ್ರೇಮಕಥೆಯಿದೆ.ಕವಲಕ್ಕಿಯಲ್ಲಿರುತ್ತ ಆಸುಪಾಸಿನ ಜನರೊಂದಿಗೆ ಮಾತಾಡುವ ಕಾಲಕ್ಕೆ, ಅನುಪಮಾ ವೈದ್ಯಕೀಯದ ತಾಯ್ತನ ಅರಿವಾಯಿತು. ತರುಣ ವೈದ್ಯರು ಹಳ್ಳಿಗಳಿಗೆ ಹೋಗಲು ಹಿಂದೇಟು ಹಾಕುತ್ತಾರೆ; ನಗರದ ಕಾರ್ಪೋರೇಟ್ ಆಸ್ಪತ್ರೆಗಳಲ್ಲಿರುವುದಕ್ಕೆ ಹಾತೊರೆಯುತ್ತಾರೆ. ಅನುಪಮಾರ ಆಸ್ಪತ್ರೆಗೆ ಬಂದಿದ್ದ ರೋಗಿಗಳನ್ನು ನೋಡುತ್ತ ನನಗೆ ಡಾ. ಬೆಸಗರಹಳ್ಳಿ ರಾಮಣ್ಣನವರ `ಗಾಂಧಿ’ ಮತ್ತು ತೇಜಸ್ವಿಯವರ `ಕುಬಿ ಮತ್ತು ಇಯಾಲ’ ಕತೆ ನೆನಪಾದವು. ಡಾ. ಕುಬಿಯಂತೆ ಮಾನವೀಯ ತಳಮಳವುಳ್ಳ ಅನುಪಮಾ, ಅನೇಕ ಇಯಾಲಗಳ ಕತೆಗಳನ್ನು ಬರೆದಿದ್ದಾರೆ.

ವೈದ್ಯರಿಗೆ ಮಾತ್ರ ಗೊತ್ತಾಗುವ ನಿಗೂಢ ಬೇನೆಗಳಿಂದ ನರಳಿದ ಜನರ ದಾರುಣ ಕತೆಗಳವು; ನಮ್ಮ ಜನರ ವೇದನೆ, ಮುಗ್ಧತೆ, ಹಾಸ್ಯ ಮತ್ತು ಜೀವನಪ್ರೀತಿಗಳನ್ನು ಸ್ವಾರಸ್ಯಕರವಾಗಿ ಕಾಣಿಸುವ ಬರೆಹಗಳನ್ನೂ ಅನುಪಮಾ ಮಾಡಿದ್ದಾರೆ.ಧಾರವಾಡದ ಡಾ. ಸಂಜೀವ ಕುಲಕರ್ಣಿ `ಒಂದು ಬೊಗಸೆ ಧ್ಯಾನ’ ಪುಸ್ತಕದ ಮೂಲಕ ಗುರುತಾದವರು. ನಮ್ಮಿಬ್ಬರಿಗೂ ಚಾರಣ, ಸೂಫಿಸಂ ಸಂಗೀತ, ಬೌದ್ಧಧರ್ಮ- ವಿಷಯಗಳಲ್ಲಿ ಸಮಾನ ಆಸಕ್ತಿಗಳಿವೆ. ಒಮ್ಮೆ ನಾವು ಒಂದು ಪುಟ್ಟ ಗುಂಪು ಕಟ್ಟಿಕೊಂಡು ಕರ್ನಾಟಕದಲ್ಲಿ ಬೌದ್ಧಸ್ಥಳಗಳ ೧೫ದಿನಗಳ ಪ್ರವಾಸ ಮಾಡಿದ್ದುಂಟು. ಧಾರವಾಡದ ಸಮೀಪ ಇರುವ ಅವರ ತೋಟದಲ್ಲಿ ಪ್ರತಿಮರಕ್ಕೂ ಅಲ್ಲಮ ಬುದ್ಧ ಸರ್ವಜ್ಞ ಇತ್ಯಾದಿ ಹೆಸರಿಟ್ಟು ಸಾಕಿದ್ದಾರೆ. ಒಮ್ಮೆ ಅವರ ತೋಟದಲ್ಲಿ ಸೂಫಿಗಾಯಕ ಮುಕ್ತಿಯಾರ್ ಅಲಿಯವರ ಹಾಡಿಕೆಯೂ ಏರ್ಪಾಡಾಗಿತ್ತು. ಅವರು ಮಕ್ಕಳು ಸಂತೋಷದ ಮುಕ್ತ ಪರಿಸರದಲ್ಲಿ ಕಲಿಕೆ ಮಾಡುವ ಶಾಲೆ ಕಟ್ಟಿದ್ದಾರೆ. ಸಹಜ ಕೃಷಿ ಮಾಡುತ್ತಾರೆ. ಮಣ್ಣುರಕ್ಷಣೆಯು ಅವರ ಇನ್ನೊಂದು ಕಾಳಜಿ. ಮಾತೃಭಾಷಾ ಚಳುವಳಿಯಲ್ಲಿದ್ದಾರೆ. ಖಾದಿಯನ್ನಷ್ಟೆ ಉಡುತ್ತಾರೆ.

ಮೈಸೂರಿನ ಮಿತ್ರ ವಿ.ಎನ್.ಲಕ್ಷ್ಮೀ ನಾರಾಯಣ ಅವರು ಜತೆಯಿದ್ದಾಗ ನನ್ನ ಕಿವಿಗೆ ಬಿದ್ದಿರುವುದು ಎರಡೇ ಸಂಗತಿ. ಸ್ವಚ್ಛಂದ ಅಟ್ಟಹಾಸದ ನಗು ಮತ್ತು ಮಾರ್ಕ್ಸನ ಹೇಳಿಕೆಗಳು. ಚಳುವಳಿಗಾರರಾದ ಅವರು ವಿಜ್ಞಾನಿಯಾದ ಜೀವನಸಂಗಾತಿ ಡಾ. ರತಿಯವರ ಜತೆಗೂಡಿ, ಸಾಮಾನ್ಯ ಜನರು ಕಷ್ಟಕ್ಕೆ ಒಳಗಾದ ಜಾಗಗಳಿಗೆ ಮುದ್ದಾಂ ಹೋಗುತ್ತಾರೆ. ಅವರ ಜತೆಗೊಮ್ಮೆ ದಲಿತರ ಮನೆಗಳನ್ನು ಸುಡಲಾದ ಒಂದು ಊರಿಗೆ ಸತ್ಯಶೋಧದ ತಂಡದಲ್ಲಿ ಹೋಗಿದ್ದೆ. ಬೀದಿ ಜನರ ಜತೆ ಸರಳವಾಗಿ ಬೆರೆವ, ದೊಡ್ಡಗಂಟಲಿನ ನೇರ ಮಾತಿನ ಮೂಲಕ ಜನರ ಭಾವನೆಯನ್ನು ಅರಿವ ಅವರ ರೀತಿಯೇ ವಿಶಿಷ್ಟ. ಸ್ವಲ್ಪ ಹಠಮಾರಿ. ಒಮ್ಮೆ ಮೈಸೂರಲ್ಲಿ- ಬೇಡವೆಂದರೂ ಕೇಳದೆ- ಜಂಬೂಸವಾರಿ ದಿನ ನಾಡಿನ ಸಮಸ್ಯೆಗಳನ್ನು ಚರ್ಚಿಸುವ ಕಾರ್ಯಕ್ರಮವನ್ನು ಅವರು ಏರ್ಪಡಿಸಿದ್ದರು-ದಸರಾ ಮೆರವಣಿಗೆ ಬರುವ ರಸ್ತೆ ಪಕ್ಕದ ಸಭಾಂಗಣದಲ್ಲಿ. ನಮ್ಮ ಭಯಂಕರ ಗಂಭೀರ ಚರ್ಚೆ ನಮಗೇ ಕೇಳಿಸದಂತೆ ರಸ್ತೆಯಿಂದ ನಾಗಸ್ವರ ಡೋಲು ತಮ್ಮಟೆಯ ಸದ್ದು ಹಾಲಿನೊಳಗೆ ನುಗ್ಗಿ ಬರುತ್ತಿತ್ತು. ಅತ್ತ ದಸರೆಯನ್ನೂ ನೋಡಗೊಡಲಿಲ್ಲ, ಇತ್ತ ಭಾಷಣಗಳನ್ನೂ ಆಲಿಸಲಾಗಲಿಲ್ಲ.ಇವರಂತೆಯೇ ರೈತಸಂಘದ ವೆಂಕಟರೆಡ್ಡಿ. ದೊಡ್ಡಬಳ್ಳಾಪುರ ಸುತ್ತಮುತ್ತಲಿನ ಸಮಸ್ತ ಬಡವರ ವೈದ್ಯರಿವರು. ಅವರ ಶಾಪಿಗೆ ಜನ ಸದಾ ಮುತ್ತಿಕೊಂಡಿರುತ್ತಾರೆ. ಅವರಿಗೆ ಜನರ ದೈಹಿಕ ಕಾಯಿಲೆಗಳಿಗಿಂತ, ಅವರ ಸಾಮಾಜಿಕ ಸುಖದುಃಖಗಳ ಬಗ್ಗೆಯೇ ಹೆಚ್ಚು ಕಾಳಜಿ. ಕೃಷಿ ವಿಶ್ವವಿದ್ಯಾಲಯವೊಂದರ ಹೊಲದಲ್ಲಿ ಸೂಕ್ತ ಅನುಮತಿಯಿಲ್ಲದೆ ಕುಲಾಂತರಿ ಬೆಳೆಯನ್ನು ಕಿತ್ತು ನಾಶಮಾಡುತ್ತಿರುವ ಅವಸ್ಥೆಯಲ್ಲಿ ಅವರನ್ನೊಮ್ಮೆ ನೋಡಿದೆ. ಇದೇ ತರಹ, ಮಂಗಳೂರಿನ ಡಾ. ಶ್ರೀನಿವಾಸ ಕಕ್ಕಿಲ್ಲಾಯ, ಬೆಂಗಳೂರಿನ ಡಾ. ವಾಸು. ಮಹಾರಾಷ್ಟ್ರ ದ ಗಡಿಗ್ರಾಮವಾದ ಎಕ್ಸಂಬಾದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಮಾಡುತ್ತ, ಕನ್ನಡ ಶಾಲೆ ನಡೆಸುತ್ತಿದ್ದ ಅನಿಲ್ ಕಮತಿ ಇದ್ದಾರೆ. ಕಾರಂತರಿಂದ ಹಿಡಿದು ಅಲ್ಲಿಗೆ ಬಾರದ ಲೇಖಕರೇ ಇಲ್ಲವೆನ್ನಬಹುದು. ಸಮಾಜದ ಸಮಸ್ಯೆಗಳ ಬಗ್ಗೆ ಅನಿಲ್ ಅವರಿಗಿರುವ ತಿಳುವಳಿಕೆ, ಸ್ಪಷ್ಟತೆ ಮತ್ತು ಕಾಳಜಿ, ಕ್ರಿಯಾಶೀಲತೆ ಅನನ್ಯ.ನನಗೆ ಹೊಸ ಅನುಭವ ಸಿಕ್ಕಿದ್ದು ಪಶುವೈದ್ಯ ಗೆಳೆಯರಿಂದ. ಡಾ. ರಮಾನಂದರ `ವೈದ್ಯನ ಶಿಕಾರಿ’ ಪುಸ್ತಕ ಓದಿ, ಅದರೊಳಗಿನ ನವಿರಾದ ವಿನೋದಲೇಪಿತ ಗದ್ಯಕ್ಕೂ ಅನುಭವದ ಪ್ರಖರತೆಗೂ ಮಾರುಹೋದವನು ನಾನು.

ರಮಾನಂದರು ಹೈದರಾಬಾದ್ ಕರ್ನಾಟಕದ ಹಳ್ಳಿಗಳಲ್ಲಿ ಕೆಲಸ ಮಾಡುತ್ತ ಪಡೆದ ಅನುಭವಗಳನ್ನು ಬರೆದಿದ್ದಾರೆ. ಸಮಾಜ ವಿಜ್ಞಾನಿಯ ಕಾಣ್ಕೆಯಿರುವ, ಜನರ ಮೇಲೆ ಪ್ರೀತಿ ಮತ್ತು ಬದ್ಧತೆಯಿರುವ ವೈದ್ಯರು ಮಾತ್ರ ಹೀಗೆ ಬರೆಯಬಲ್ಲರು. ಅವರು ಮಾಡಿರುವ ಸುತ್ತಾಟ ಅಸೂಯೆ ಹುಟ್ಟಿಸುತ್ತದೆ. ಸಮಸ್ತ ಜೀವಿಗಳಲ್ಲಿ ಪ್ರೀತಿಯನ್ನೂ ಕರುಣೆಯನ್ನೂ ತೋರುವ ಜೀವನದರ್ಶನ, ಅವರ ಬರೆಹದಲ್ಲಿದೆ. ಇನ್ನೊಬ್ಬ ಮಿತ್ರ ಮಿರ್ಜಾ ಬಶೀರ್. ಸಾವಿನಂಚಿನಲ್ಲಿರುವ ನಾಯೊಂದನ್ನು ಉಪಚರಿಸಲು ಹೋದ ವೈದ್ಯನೊಬ್ಬನ ಅನುಭವ ಕುರಿತ ಅವರ ಕತೆ ಓದಿಯೇ ನಾನು ಗೆಳೆಯನಾದವನು. ಲಂಕೇಶ್ ತೇಜಸ್ವಿ ಕುವೆಂಪು ಅವರನ್ನು ಚೆನ್ನಾಗಿ ಓದಿಕೊಂಡಿರುವ ಬಶೀರರ ಜತೆ ಚರ್ಚಿಸುವುದು ಒಂದು ಚೇತೋಹಾರಿ ಅನುಭವ. ಡಾ. ರಘುಪತಿಯವರದು ಇನ್ನೂ ಅನನ್ಯ ವ್ಯಕ್ತಿತ್ವ. ಹಳ್ಳಿಗಳಲ್ಲಿ ತಿರುಗಾಡುತ್ತ, ದನ ಕುರಿ ಎಮ್ಮೆಗಳ ಸುಖದುಃಖ ನೋಡುತ್ತ, ಖಾಸಗಿ ಜೀವನವೊಂದು ತಮಗಿದೆ ಎಂಬುದನ್ನೇ ಮರೆತಂತೆ ಬದುಕಿದವರು ಇವರು. ಪಶುಪಾಲಕರ ರೈತಾಪಿಗಳ ಸಮಸ್ಯೆಗಳನ್ನು ಚೆನ್ನಾಗಿ ಬಲ್ಲ ವೈದ್ಯ. ಬಾಯಿಲ್ಲದ ಜೀವಗಳಿಗೆ ಉಪಚರಿಸುತ್ತ ಅವರು, ಬಾಯಿಲ್ಲದ ಸಮುದಾಯಗಳ ದುಗುಡಕ್ಕೂ ಮಿಡಿವ ಮನಸ್ಸನ್ನು ಪಡಕೊಂದಂತಿದೆ. ಕುರಿಸಾಕಣೆ ಮತ್ತು ಕಂಬಳಿ ನೇಕಾರಿಕೆ ಬಗ್ಗೆ ಅವರು ಮಾಡಿರುವ ಸಂಶೋಧನೆ ಮತ್ತು ಬರವಣಿಗೆ. ಕಂಬಳಿ ನೇಕಾರಿಕೆಯ ಜಾಗಗಳಿಗೆ ಹೋಗಬೇಕೆಂಬುದು ನಾವಿಬ್ಬರೂ ಹಾಕಿಕೊಂಡಿರುವ ಯೋಜನೆ ಇನ್ನೂ ಈಡೇರಿಲ್ಲ. ಇಂತಹ ಇನ್ನೂ ಅನೇಕ ಜನರಿದ್ದಾರೆ.ಇವರೆಲ್ಲ ತ ಮ್ಮ ವೃತ್ತಿತ್ಯಾಗ ಮಾಡಿ ಸಮಾಜ ಪರಿವರ್ತನೆಗೆ ನಿಂತವರಲ್ಲ; ವೃತ್ತಿಯ ಜತೆಗೇ ಸಾಮಾಜಿಕ ಹೊಣೆಗಾರಿಕೆ ರೂಢಿಸಿಕೊಂಡವರು. ವಾರಾಂತ್ಯದಲ್ಲಿ ಸಾಮಾಜಿಕ ಕ್ರಿಯಾಶೀಲತೆ ತೋರುವವರಿಗೆ ಹೋಲಿಸಿದರೆ, ನಿತ್ಯಬೀದಿಯ ಸೆಣಸಾಟಗಳಿಗೆ ಓಗೊಡುವವರು. ಭೂಭಾರ ಹೊತ್ತವರಂತೆ ಮುಖ ಬಿಗಿಗೊಳಿಸಿಕೊಂಡವರಲ್ಲ; `ನಗೀಕ್ಯಾದಿಗಿ ಮುಡಿದು’ ಬದುಕನ್ನು ಲೀಲೆಯಂತೆ ಪರಿಭಾವಿಸಿದವರು. ಸಾಮಾಜಿಕ ಬದ್ಧತೆ ಇವರ ವಿನೋದಪ್ರಜ್ಞೆಯನ್ನು ಬತ್ತಿಸಿಲ್ಲ. ವೃತ್ತಿನಿಷ್ಠೆ, ಸಾಮಾಜಿಕ ಕಾಳಜಿ, ಜೀವನಪ್ರೀತಿ ಇವರಿಗೆ ಭಿನ್ನ ಜಗತ್ತುಗಳೇ ಅಲ್ಲ. ವೈದ್ಯವೃತ್ತಿಯಲ್ಲಿದ್ದೇ ತಮ್ಮ ವ್ಯಕ್ತಿತ್ವಕ್ಕೊಂದು ವಿಸ್ತರಣೆ ಕಲ್ಪಿಸಿಕೊಂಡಿರುವ ಇವರ ಕ್ರಿಯಾಶೀಲತೆ, ಅವರ ವೃತ್ತಿಗೆ ಹೊಸ ಮಾನವೀಯತೆಯನ್ನೂ ಜ್ಞಾನಕ್ಕೆ ದಾರ್ಶನಿಕತೆಯನ್ನೂ ಒದಗಿಸಿದೆ; ಇವರ ವೃತ್ತಿಜ್ಞಾನದಿಂದ ಇವರ ಸಾಮಾಜಿಕ ತಿಳಿವಳಿಕೆಗೂ ಹೊಸ ಆಯಾಮ ದಕ್ಕಿದೆ. ಸಾರ್ವಜನಿಕ ಬದುಕು ಮತ್ತು ಸುತ್ತಾಟಗಳು, ದಾರ್ಶನಿಕರಿಗೂ ಹೊಸ ಅನುಭವ ಹೊಸ ಕಾಣ್ಕೆ ಕೊಡಬಲ್ಲವು.ನಮ್ಮ ಒ ಳ್ಳೆಯ ಮೇಷ್ಟರು ಯಾರೆಂದು ನೆನಪಿಸಿಕೊಳ್ಳಿ. ಅವರು ತಮ್ಮ ಜ್ಞಾನಶಿಸ್ತಿನ ಸೀಮಿತ ಪರಿಧಿಯನ್ನು ಉಲ್ಲಂಘಿಸಿ ದೊಡ್ಡದನ್ನು ಕಲಿತವರು. ಲೇಖಕರು ಪತ್ರಕರ್ತರಾದರೆ ಬರೆಹಕ್ಕೆ ಹೊಸ ಆಯಾಮ ಬರುವುದನ್ನು ಲಂಕೇಶರಲ್ಲಿ ಕಂಡಿದ್ದೇವೆ. ಸಾಹಿತ್ಯಕ ಸಂವೇದನೆಯುಳ್ಳ ವಿಜ್ಞಾನದವರ ತಿಳುವಳಿಕೆಗೆ ಅಥವಾ ವಿಜ್ಞಾನದ ತಿಳುವಳಿಕೆ ಉಳ್ಳವರ ಸಾಹಿತ್ಯದ ಸಂವೇದನೆಗೆ ವಿಶಿಷ್ಟತೆ ಇರಬಲ್ಲದು ಎಂಬುದನ್ನು ತೇಜಸ್ವಿಯವರಲ್ಲೂ ಬಿಜಿಎಲ್ ಸ್ವಾಮಿಯವರಲ್ಲೂ ಕಂಡಿದ್ದೇವೆ. ಆದರೆ ರಾಜಕಾರಣಿಗಳಾಗಿ ಮಾರ್ಪಾಟಾದ ವೈದ್ಯರು ತಮ್ಮ ವೃತ್ತಿಜೀವನ ಮತ್ತು ಜ್ಞಾನಕ್ಷೇತ್ರಗಳ ಪ್ರೇರಣೆಯಿಂದ ವಿಶಿಷ್ಟ ರಾಜಕಾರಣ ಮಾಡಿದ ನಿದರ್ಶನಗಳು ಬಹಳ ಕಡಿಮೆ.ಜ್ಞಾನವಾಗಲಿ ವೃತ್ತಿಯಾಗಲಿ, ಇತರ ವೃತ್ತಿ ಮತ್ತು ಜ್ಞಾನಶಾಖೆಗಳಿಂದ ಸಂಬಂಧ ಕತ್ತರಿಸಿಕೊಂಡ ವಿಭಜಿತ ಲೋಕಗಳಲ್ಲ. ಕೆಲಮಟ್ಟಿಗೆ ಅವು ಹೋಳಾಗಿದ್ದೇ ಆಧುನಿಕ ಕಾಲದಲ್ಲಿ ಮತ್ತು ಪಡುವಣದ ನಕಲಿನಿಂದ.

ನಮ್ಮ ರೈತರು ಅವಸರ ಬಿದ್ದಾಗ ಕುಂಟೆ ನೇಗಿಲನ್ನು ಸರಿಪಡಿಸಿಕೊಳ್ಳುವ ಬಡಗಿಗಳಾಗುವುದು, ದನಗಳು ಕಾಯಿಲೆ ಬಿದ್ದಾಗ ಔಷಧಿಕೊಡಬಲ್ಲ ವೈದ್ಯರಾಗುವುದು ಸಾಧ್ಯವಾಗಿದೆ. ಒಂದು ಕ್ಷೇತ್ರದ ಜ್ಞಾನ ಇನ್ನೊಂದರ ಸಹವಾಸದಲ್ಲಿ ಹೊಸಜನ್ಮ ಪಡೆಯಬಲ್ಲದು. ನನ್ನ ವೈದ್ಯಮಿತ್ರರು ಸಾಮಾಜಿಕ ಪ್ರಜ್ಞೆಯುಳ್ಳವರಾಗಿರುವುದಕ್ಕೂ, ಅವರು ಸಾಹಿತ್ಯದ ಗಂಭೀರ ಓದುಗರೂ ಹಾಗೂ ಸ್ವತಃ ಲೇಖಕರೂ ಆಗಿರುವುದಕ್ಕೂ ಏನೋ ಸಂಬಂಧವಿರಬಹುದು. ಒಳ್ಳೆಯ ಬರೆಹಗಾರರಿಗೂ ಒಳ್ಳೆಯ ವೈದ್ಯರಿಗೂ ಬಹಳ ವ್ಯತ್ಯಾಸವಿಲ್ಲ. ಆದರೆ ಹೊಸ ಅನುಭವ ಮತ್ತು ಅರಿವಿಗಾಗಿ, ನಮ್ಮ ವೃತ್ತಿಕ್ಷೇತ್ರದ ಪರಿಧಿಯಾಚೆ ಎಷ್ಟು ದೂರದವರೆಗೆ ಸೀಮೋಲ್ಲಂಘನೆ ಮಾಡಬಹುದು? ಡಾ. ವಿನಾಯಕ ಸೇನ್ ಹಾಗೂ ಚೆಗೆವಾರ ನೆನಪಾಗುತ್ತಾರೆ. ಸೇನರು ವೈದ್ಯಸೇವೆ ಸಲ್ಲಿಸುತ್ತಲೇ ಬುಡಕಟ್ಟು ಜನರ ಹೈರಾಣಗೊಂಡ ಬದುಕಿನ ಭಾಗವಾದವರು; ಕಾಡಿನ ಜನರ ಮೇಲೆ ಪ್ರಭುತ್ವ ಸೃಷ್ಟಿಸಿರುವ ನರಕವನ್ನು ಖಂಡಿಸುತ್ತ ತಾವೂ ಪಾಡುಪಟ್ಟವರು. `ಚೆ’ ಹಿಡಿದ ಹಾದಿ ಇನ್ನೂ ಕಟುತರ. ಅಸಹನೀಯ ತುಳಿತಕ್ಕೆ ಒಳಗಾಗಿದ್ದ ದಕ್ಷಿಣ ಅಮೆರಿಕ ದೇಶಗಳ ಆರ್ಥಿಕ ರಾಜಕೀಯ ಸಂಕಟಗಳ ನಿವಾರಣೆಗಾಗಿ, ಸಾಮ್ರಾಜ್ಯಶಾಹಿಯ ವಿರುದ್ಧ ಸೆಣಸಾಡುತ್ತ ತುಪಾಕಿ ಹಿಡಿದವನಾತ; ಅವನ ಚಾರಿತ್ರಿಕ ಒತ್ತಡಗಳೇ, ವೈದ್ಯವೃತ್ತಿಗಿಂತ ಕ್ರಾಂತಿಯ ಹಾದಿಯನ್ನು ಹಿಡಿಯುವಂತೆ ಮಾಡಿದವು. ವೈದ್ಯನೊಬ್ಬ ಕ್ರಾಂತಿಕಾರಿಯಾಗಿ ಮತ್ತು ಲೇಖಕನಾಗಿ ರೂಪಾಂತರ ಪಡೆದ `ಚೆ’ದು ದಂತಕತೆ. ವೃತ್ತಿಸಂಬಂಧ ಜ್ಞಾನವು ಅತಿ ವಿಶೇಷೀಕರಣಗೊಂಡರೆ, ಇನ್ನೊಂದರ ಸಂಗಕ್ಕೆ ಹಾತೊರೆದು ಬದಲಾಗದಷ್ಟು ಸ್ವಕೇಂದ್ರಿತವಾದರೆ, ಜನಪರ ಕ್ರಿಯಾಶೀಲತೆಯ ಜತೆಗಾರಿಕೆ ಪಡೆಯದೆ ಹೋದರೆ, ಗೊಡ್ಡಾಗುತ್ತದೆ; ಜೀವಕರುಣೆ ಬೇಡುವ ವೈದ್ಯಕೀಯದಂತಹ ಕ್ಷೇತ್ರದಲ್ಲಿ ಈ ರೂಪಾಂತರ ಸಂಭವಿಸದಿದ್ದರೆ, ದೊಡ್ಡ ನಷ್ಟ. ದುರಂತವೆಂದರೆ,ಸಮಾಜದ ಕಾಯಿಲೆಗಳ ರೋಗಾಣುಗಳು ಅವರಿಗೆ ಸೋಂಕುತ್ತಿರುವುದು. ತಾಯ ಮೊಲೆವಾಲು ನಂಜಾದಂತೆ ಇದು. ರೋಗಪರಿಹಾರ ಆಗಬೇಕಾದ್ದು ರೋಗಿಗಳ ದೈಹಿಕ ನೆಲೆಯಲ್ಲಿ ಮಾತ್ರವಲ್ಲ. ವ್ಯವಸ್ಥೆಯ ನೆಲೆಯಲ್ಲೂ. ಕುವೆಂಪು ಅವರ `ಧನ್ವಂತರಿಯ ಚಿಕಿತ್ಸೆ’ ಕತೆ ಈ ಸತ್ಯವನ್ನು ನಾಟಕೀಯವಾಗಿ ಹೇಳುತ್ತದೆ. ಧನ್ವಂತರಿ, ರೈತನ ರೋಗವನ್ನು ಕಾಣುವುದು ದೇಹದಲ್ಲಲ್ಲ; “ಎದೆಯ ಮೇಲಿರುವ ರಾಜ್ಯದ ಭಾರವನ್ನು ತೆಗೆದು ಹಾಕಿದರೆ, ಕಾಯಿಲೆ ಸರಿಹೋಗುತ್ತದೆ’’ ಎಂದು ಸೂಚಿಸುತ್ತಾನೆ. ಯಾಕೆಂದರೆ, ಅವನು ಕೇವಲ ವೈದ್ಯನಾಗಿರಲಿಲ್ಲ.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ಮನುಷ್ಯನ ಒಳಿತನ್ನೇ ಧ್ಯಾನಿಸುತ್ತಾ……‌

ಒಂದು ಅಪರೂಪದ ಡೊಳ್ಳಿನ ಸ್ಫರ್ಧೆ ನೋಡಿದೆ. ನಮ್ಮದೇ ತಾಲೂಕಿನ ಅರೆಹಳ್ಳದ ತಂಡ ಎಷ್ಟು ಸೊಗಸಾಗಿ ಡೊಳ್ಳು ನೃತ್ಯ ಕುಣಿಯಿತು! ಕೊಡಗಿಬೈಲ್‌ ಎಂಬ ಹಳ್ಳಿಯ ಒಕ್ಕಲಿಗ...

ಶಿಕಾರಿಪುರ ಪ್ರಥಮ, ಸಿದ್ಧಾಪುರ ದ್ವಿತೀಯ, ಸಾಗರ ತೃತೀಯ

ಸಿದ್ದಾಪುರದಲ್ಲಿ ನಡೆದ ರಾಜ್ಯ ಮಟ್ಟದ ಹೊನಲು ಬೆಳಕಿನ ಮುಕ್ತ ರಾಜ್ಯ ಮಟ್ಟದ ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ಬೀರಲಿಂಗೇಶ್ವರ ಡೊಳ್ಳಿನ ಸಂಘ ಅಂಬಾರಗೊಪ್ಪ ಶಿಕಾರಿಪುರ ಪ್ರಥಮ,ಸಿದ್ದಿವಿನಾಯಕ...

ಮಕ್ಕಳಿಗೆ ಆಸ್ತಿಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾಗಿಸಿ

ಮಕ್ಕಳಿಗೆ ಆಸ್ತಿ,ಆಭರಣ ಮಾಡುವ ಬದಲು ಮಕ್ಕಳನ್ನೇ ಆಸ್ತಿಯನ್ನಾ ಗಿಸಿ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದ್ದಾರೆ. ಸಿದ್ಧಾಪುರ ಹಾಳದಕಟ್ಟಾ ಮತ್ತು ಕೊಳಗಿ ಪ್ರಾಥಮಿಕ ಶಾಲೆಗಳಲ್ಲಿ...

ಮಾಧ್ಯಮ ಪ್ರತಿನಿಧಿಗಳ ಸಂಘದ ಪದಾಧಿಕಾರಿಗಳ ಅಯ್ಕೆ

ಸಿದ್ದಾಪುರ: ತಾಲೂಕಿನಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಮಾಧ್ಯಮ ಪ್ರತಿನಿಧಿಗಳ ಸಂಘ (ರಿ) ಸಿದ್ದಾಪುರ ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಸಂಘದ ಅಧ್ಯಕ್ಷರಾಗಿ ಸಮಾಜಮುಖಿ...

ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು

ಉತ್ತರ ಕನ್ನಡ: ಮೂತ್ರ ವಿಸರ್ಜನೆಗೆ ತೆರಳಿದ್ದಾಗ ವಿದ್ಯುತ್ ಸ್ಪರ್ಶ; ಶಾಲಾ ಆವರಣದಲ್ಲೇ ಬಾಲಕಿ ಸಾವು ಶಾಲೆಯ ಶೌಚಾಲಯದ ಬಳಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *