
ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಇನ್ನು ಪರಿಸ್ಥಿತಿ ತಿಳಿಯಾಗಿಲ್ಲ, ಹೀಗಿರುವಾಗ ಪರಿಸ್ಥಿತಿ ಕೋಮುವಾದಿಕರಣಗೊಳ್ಳುವುದನ್ನು ತಪ್ಪಿಸಲು ಪ್ರಯತ್ನ ನಡೆಸಬೇಕು.

ಬೆಂಗಳೂರು: ಭಜರಂಗ ದಳ ಕಾರ್ಯಕರ್ತ ಹರ್ಷ ಹತ್ಯೆಯ ನಂತರ ಶಿವಮೊಗ್ಗದಲ್ಲಿ ಇನ್ನು ಪರಿಸ್ಥಿತಿ ತಿಳಿಯಾಗಿಲ್ಲ, ಹೀಗಿರುವಾಗ ಪರಿಸ್ಥಿತಿ ಕೋಮುವಾದಿಕರಣಗೊಳ್ಳುವುದನ್ನು ತಪ್ಪಿಸಲು ಪ್ರಯತ್ನ ನಡೆಸಬೇಕು ಎಂದು ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಭೂಷಣ್ ಹೇಳಿದ್ದಾರೆ.
ಕೋಮುವಾದಿ ಶಕ್ತಿಗಳಿಗೆ ನ್ಯಾಯಾಲಯಗಳು ಏಕೆ ಲಗಾಮು ಹಾಕುತ್ತಿಲ್ಲ ಎಂದು ಪ್ರಶ್ನಿಸಿದ ಭೂಷಣ್, “ಈ ಹಿಂದೆ ಗುಜರಾತ್‌ನಲ್ಲಿ ನಡೆದ ಬಿಜೆಪಿಯ ಪ್ಲೇ ಬುಕ್ ಪ್ರಕಾರ ಕೊಲೆಯ ಕೋಮುವಾದೀಕರಣವನ್ನು ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದಾರೆ.
“ಪ್ರತಿಯೊಂದು ಕೊಲೆಯೂ ಭಯಾನಕವಾಗಿದೆ, ಆದರೆ ಅದನ್ನು ರಾಜಕೀಯಗೊಳಿಸಬಾರದು ಅಥವಾ ಕೋಮುವಾದಗೊಳಿಸಬಾರದು. ನ್ಯಾಯದ ಹಿತದೃಷ್ಟಿಯಿಂದ, ರಾಜಕೀಯ ಅಥವಾ ಕೋಮುವಾದಿ ಹೇಳಿಕೆಗಳು ವಾತಾವರಣವನ್ನು ಹಾಳುಮಾಡಬಹುದು ಮತ್ತು ತನಿಖೆಯ ಮೇಲೆ ಪರಿಣಾಮ ಬೀರಬಹುದು ಎಂದು ಜಸ್ಟೀಸ್ ಮದನ್ ಲೋಕುರ್ ಅಭಿಪ್ರಾಯ ಪಟ್ಟಿದ್ದಾರೆ.
ಕೋಮುವಾದದಿಂದ ಸಮಾಜಕ್ಕೆ ದೊಡ್ಡ ಅಪಾಯವಿದೆ. ಕರ್ನಾಟಕ ರಾಜ್ಯವು ಅಸ್ಥಿರವಾಗುತ್ತಿದ್ದು, ಇಂತಹ ಕೋಮು ಬಣ್ಣ ಬಳಿಯುವುದನ್ನು ವಿರೋಧಿಸಬೇಕು, ಇಲ್ಲದಿದ್ದರೆ ರಾಜ್ಯವು ದ್ವೇಷದ ಫ್ಯಾಕ್ಟರಿಯಾಗಿ ಬದಲಾಗುತ್ತದೆ. ಘಟನೆಗಳನ್ನು ರಾಜಕೀಯಗೊಳಿಸದಂತೆ ನೋಡಿಕೊಳ್ಳುವುದು ರಾಜಕೀಯ ವರ್ಗ ಮತ್ತು ಅಧಿಕಾರಶಾಹಿಯ ಕರ್ತವ್ಯ, ಎಂದು ಕಾನೂನು ಆಯೋಗದ ಮಾಜಿ ಅಧ್ಯಕ್ಷ ನ್ಯಾಯಮೂರ್ತಿ ಎ ಪಿ ಶಾ ಹೇಳಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಸುಳ್ಳು ಆರೋಪಗಳನ್ನು ಪುನರಾವರ್ತಿಸುವ ಮೂಲಕ ದ್ವೇಷದ ಅಜೆಂಡಾ ಬಿತ್ತುತ್ತಿದ್ದಾರೆ. ಇಂತದ ದ್ವೇಷದ ಕಾರ್ಯಸೂಚಿಗಳನ್ನು ನಿಲ್ಲಿಸಬೇಕು. ಪಕ್ಷಗಳಿಗೆ ತಮ್ಮ ಸಾಧನೆ ಮೂಲಕ ತೋರಿಸಲು ಸಾಧ್ಯವಾಗವುದಿಲ್ಲವೋ ಆಗ ದ್ವೇಷಕಾರ್ಯಗಳಲ್ಲಿ ತೊಡಗುತ್ತವೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಎಂಜಿ ದೇವಶ್ಯಾಮ್ ತಿಳಿಸಿದ್ದಾರೆ.
ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯಿರಿ ಮತ್ತು ಹರ್ಷನ ಹತ್ಯೆಯಲ್ಲಿ ಭಾಗಿಯಾದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿ. ನಿಷೇಧಾಜ್ಞೆ ಉಲ್ಲಂಘಿಸಿ ಮೆರವಣಿಗೆಯನ್ನು ಆಯೋಜಿಸಿದವರ ವಿರುದ್ಧ ಪರಿಣಾಮಕಾರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ನಿವೃತ್ತ ಪೊಲೀಸ್ ಅಧಿಕಾರಿ ಅಜಯ್ ಕುಮಾರ್ ಸಿಂಗ್ ಒತ್ತಾಯಿಸಿದ್ದಾರೆ. (kpc)
