

ನಮ್ಮ ಖಾಸಗಿಯಾಗಿ ಇರುವವರೆಗೂ (- ಮಾಧವಿ ಭಂಡಾರಿ)

ನನ್ನ ನೆರಮನೆಯಲ್ಲಿ ಹಸಿದವರು ಇರುವಾಗ ಉಣಲಾರೆನೆಂಬುದೇ ಎದೆಯ ಬಯಕೆ’ ಇದು ಬರೀ ಕವಿಯ ಹಾಡಲ್ಲ; ಬದುಕಿದ ಪಾಡು. ತಾನು ಹಸಿವನ್ನು ಉಂಡು ಬೆಳೆದ ಮನುಷ್ಯನೊಬ್ಬನ ಮಾನವೀಯ ಹಂಬಲ. ಸದಾ ಸುತ್ತಲಿನ ಬಡತನಕ್ಕೆ ಮಿಡಿಯುತ್ತಾ ಅನ್ನ, ಅಕ್ಷರ, ಪ್ರೀತಿಯನ್ನು ಬದುಕಿನುದ್ದಕ್ಕೂ ಹಂಚುತ್ತ ಸಾಗಿದವರು ನಮ್ಮ ಅಂಬಾರಕೊಡ್ಲಿನ ಕವಿ ವಿಷ್ಣು ನಾಯ್ಕರು.
ಅವರೊಂದಿಗಿನ ನನ್ನ ಅಧಿಕೃತ ಭೇಟಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ನಡೆದ ಜಿಲ್ಲಾ ಬಂಡಾಯ ಸಾಹಿತ್ಯ ಸಮ್ಮೇಳನದಲ್ಲಿ. ನಾನಾಗ ಪ್ರೌಢಶಾಲಾ ವಿದ್ಯಾರ್ಥಿನಿ. ಅಣ್ಣ (ತಂದೆ ಆರ್. ವಿ. ಭಂಡಾರಿ) ಅವನೊಂದಿಗೆ ನನ್ನನ್ನೂ ಕರೆದೊಯ್ದಿದ್ದ. ವಿಷ್ಣು ನಾಯಕರು ಎದುರಾದಾಗ ಅಣ್ಣ ‘ನನ್ನ ಮಗಳು’ ಎಂದು ಪರಿಚಯಿಸಿದಾಗ ತುಟಿ ಬಿರಿದೂ ಬಿರಿಯದಂತಿರುವ ಅವರದೇ ಆದ ವಿಶಿಷ್ಟ ಗಾಂಭೀರ್ಯ ಶೈಲಿಯಲ್ಲಿ ನನ್ನನ್ನು ದಿಟ್ಟಿಸಿ ನೋಡಿದರು. ಆಗ ಅಣ್ಣ ‘ಹೆದರಬೇಡಿ, ಅವಳೇನೂ ಕವಿತೆ ಬರೆಯುತ್ತಿಲ್ಲ. ಮತ್ತೆ ಪುಸ್ತಕ ಪ್ರಕಟಿಸುವ ಸಂದಿಗ್ಧತೆ ನಿಮಗೆ ಬರಲಾರದು’ ಎಂದಾಗ ಮೂವರೂ ಮನಸಾರೆ ನಕ್ಕಿದ್ದೆವು. ಮಜಾ ಎಂದರೆ ಮುಂದೆ ನನ್ನ ಮೊದಲ ಕವನ ಸಂಕಲನ ‘ಹರಿದ ಸ್ಕರ್ಟಿನ ಹುಡುಗಿ’ ರಾಘವೇಂದ್ರ ಪ್ರಕಾಶನದ ಮೂಲಕವೇ ಪ್ರಕಟವಾಯಿತು. ಪ್ರೀತಿಯೇ ಅಕ್ಷರ ರೂಪ ತಳೆದಂತಿರುವ ಅವರ ಪ್ರಕಾಶನಾತಿಯ ಮಾತು ಕೃತಿಗೊಂದು ಅರ್ಥಪೂರ್ಣ ಪ್ರವೇಶಾತಿಯನ್ನು ನೀಡಿ ನನಗೆ ಸದಾ ಸ್ಪೂರ್ತಿದಾಯಕವೂ ಆಗಿತ್ತು. ಅಲ್ಲಿಂದ ಅಂಟಿದ ನಂಟು ಕುಂದಿಲ್ಲದೆ ಮುಂದುವರೆಯಿತು. ಆರ್. ವಿ. ಹಾಗೂ ಆರ್. ವಿ. ಯ ಮಕ್ಕಳೆಂದರೆ ಯಾವಾಗಲೂ ವಿಶೇಷ ಪ್ರೀತಿ ಕಾಳಜಿ. ‘ವಿಠ್ಠಲ್ ಆರ್. ವಿ. ಸಮಾಜಕ್ಕೆ ಕೊಟ್ಟ ಅತ್ಯುತ್ತಮ ಕೊಡುಗೆ’ ಎಂದು ಅವಕಾಶ ಸಿಕ್ಕಿದಾಗೆಲ್ಲ ಹೇಳುತ್ತಿದ್ದರು. ಕಾರ್ಯಕ್ರಮದ ನಿಮಿತ್ತ ಪರಿಮಳದ ಅಂಗಳಕ್ಕೆ ಹೋದಾಗ ಕಾರ್ಯಕ್ರಮ ಮುಗಿದ ಮೇಲೆ ‘ಆರ್ವಿ, ಇಲ್ಲೇ ಇರಿ, ಇಲ್ಲ ಅರ್ಜೆಂಟ್ ಕೆಲಸವಿದ್ದರೆ ನೀವು ಹೋಗಬಹುದು. ಮಗಳು ಇಲ್ಲೇ ಇರುತ್ತಾಳೆ, ನಾಳೆ ಕಳುಹಿಸಿಕೊಡುತ್ತೇನೆ’ ಎನ್ನುವ ಖಡಕ್ ಆದ ಆರ್ಡರ್ ಅದರ ಹಿಂದಿನ ಕಕ್ಕುಲಾತಿಯಿಂದಲೇ ನನ್ನನ್ನು ಕಟ್ಟಿ ಹಾಕುತ್ತಿತ್ತು. ಜೀವನದಲ್ಲಿ ಸಂತೋಷದ ಗಳಿಗೆ ಘಟಿಸಿದಾಗೆಲ್ಲ ಅಭಿನಂದನಾ ಪೂರ್ವಕವಾದ ಒಂದು ಕಾರ್ಡು ಮನೆಗೆ ಬರುತ್ತಿತ್ತು. ಅಣ್ಣನಿಂದ ಹಿಡಿದು ಮಕ್ಕಳೂ ಬರೆದ ಕಾರ್ಡಿನ ನೀಟಾದ ಪ್ರದರ್ಶನ ಅವರ ಮ್ಯೂಸಿಯಂನಲ್ಲಿ ಇತ್ತು. ಎಲ್ಲದರಲ್ಲೂ ಬಹುಶಿಸ್ತೀಯ ಬದುಕು ಅವರದು.
ಅವರ ಮನೆಯಲ್ಲಿ ಸವಿದ ಆತಿಥ್ಯ ಎಲ್ಲರ ಮನದಲ್ಲಿ ಮಾಸದೇ ಉಳಿಯುವಂತದ್ದು. ಅದರ ಹಿಂದೆ ಮುಗ್ಧ ಪ್ರೇಮಲ ಮನಸ್ಸಿನ ಅವರ ಸಂಗಾತಿ ಕವಿತಾ ಮೇಡಂ ಅವರ ಪಾತ್ರ ಬಹಳ ದೊಡ್ಡದು. ಅವರ ಹಠಾತ್ ಅಗಲುವಿಕೆ ಮಕ್ಕಳಾದ ಭಾರತಿ, ಅಮಿತರನ್ನೂ ವಿಷ್ಣು ನಾಯಕರನ್ನೂ ಮನೆ ಹೊಕ್ಕು ಬಳಸಿದ ಎಲ್ಲರನ್ನೂ ಘಾಸಿಗೊಳಿಸಿತ್ತು.
‘ಬಳಕೆಯಾಗಲಿ ಪೂರ್ತಿ ಮಾನವನ ಈ ಜನುಮ/ ಬೆಳಕು ಮೂಡಲಿ ಸಂಧಿ ಸಂಧಿಯಲ್ಲಿ/ ಸರ್ವರಿಗೂ ಸಮ ಬಾಳು ಸಿಗುವನಕ ನನ ಪಾಲು/ ನನದಲ್ಲ ಎಂದೆನುವ ಎಚ್ಚರಿರಲಿ’ ಎನ್ನುವ ಸದಾಶಯ ಹೊತ್ತ ವಿಷ್ಣು ನಾಯಕರು ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾಗಿ, ಪ್ರಕಾಶಕರಾಗಿ, ಪತ್ರಕರ್ತರಾಗಿ, ಅತ್ಯುತ್ತಮ ಸಂಘಟಕರಾಗಿ, ಸಮಾಜವಾದಿ ಚಿಂತಕರಾಗಿ, ಪ್ರಗತಿಪರ ವೈಚಾರಿಕ ಮಾನವೀಯ ನಿಲುವಿನ ವ್ಯಕ್ತಿಯಾಗಿ ತಮ್ಮ ಇಡೀ ಬದುಕನ್ನು ಸಮ ಸಮಾಜ ಕಟ್ಟುವಲ್ಲಿ ಬಳಸಿಕೊಂಡು ಈಗ ನಮ್ಮನ್ನು ಅಗಲಿದ್ದಾರೆ.

‘ಕಟ್ಟೆ ಕಟ್ಟುವೆ ನಾನು ತುಳಸಿ ಕಂಡಲ್ಲೆಲ್ಲ/ ನಿಷ್ಠೆ ಕಟ್ಟಿದ ಕಟ್ಟೆ ವ್ಯರ್ಥವಾಗಲಿಕ್ಕಿಲ್ಲ’ ಎಂದು ದೃಢವಾಗಿ ನಂಬಿದ ಇವರು ಉದಯೋನ್ಮುಖರ ಪುಸ್ತಕ ಪ್ರಕಟಿಸುತ್ತಾ ಮನೆಯಂಗಳದಲ್ಲಿ ಕಾವ್ಯ ಕಮ್ಮಟ ನಡೆಸುತ್ತಾ ಯುವ ಕವಿ ಪಡೆಯನ್ನೇ ಕಟ್ಟಿದ್ದರು. ವೈವಿಧ್ಯಪೂರ್ಣ ಕಾರ್ಯಕ್ರಮಗಳನ್ನು ನಡೆಸುತ್ತಾ ರಾಜ್ಯದ ದೂರದೂರದ ಅನೇಕ ಸಾಂಸ್ಕೃತಿಕ ಮನಸ್ಸುಗಳನ್ನು ಆಹ್ವಾನಿಸಿ ಜಿಲ್ಲೆಯ ಜನರಿಗೆ ದರ್ಶಿಸುತ್ತಾ ಉತ್ತರ ಕನ್ನಡಕ್ಕೊಂದು ಸಾಂಸ್ಕೃತಿಕ ಮೆರಗು ನೀಡಿದ ಅನುಕರಣೀಯ ವ್ಯಕ್ತಿ.
‘ಸುಡಬೇಡಿ, ದಮ್ಮಯ್ಯ, ಬಿಳಿ ಬಟ್ಟೆ ತಂದ ದಿನ/
ಮಣ್ಣೊಳಿಡಿ, ಹಣ್ಣಾಗಿ ಬರುವ ಬಯಕೆ/
ಮಲಗುವೆನು ನಿಶ್ಚಿಂತ ನೆಲತಾಯಿ ಮಡಿಲೊಳಗೆ/
ಗೊಬ್ಬರಾಗುವೆ ಹಣ್ಣ ಕೊಡುವ ಮರಕೆ’ ಎಂದು ತಮ್ಮ ಕೊನೆಯಾಸೆಯನ್ನೂ ಕವಿತೆಯ ಮೂಲಕವೇ ಹೇಳಿದ ವಿಷ್ಣು ನಾಯಕರು ಸದಾ ನೋವು ಪ್ರೀತಿಯ ಪ್ರಶ್ನೆಯಾಗೇ ನಮ್ಮನ್ನು ಕಾಡುತ್ತಾ ಇರುತ್ತಾರೆ. ‘ಸಹಯಾನ ಟ್ರಸ್ಟ್’ ಅಧ್ಯಕ್ಷರಾಗಿ ತನ್ನನ್ನು ಮುನ್ನಡೆಸಿದ ಅವರ ಸಹಕಾರವನ್ನು ಸದಾ ಸ್ಮರಿಸುತ್ತಾ ಇರುತ್ತದೆ.
ಹೇಗೆ ಹೇಳಲಿ ಅಂತಿಮ ನಮನವೆಂದು?
ಕೋವಿಡ್ ಕಾಲದಲ್ಲಿ ನೀವು ಮನೆಗೇ ಬಂದು ‘ದಿನಕರ ದೇಸಾಯಿ ಕಾವ್ಯ ಪ್ರಶಸ್ತಿ’ಯನ್ನು ನೀಡಿದ ಪ್ರಿಯ ಗಳಿಗೆಯನ್ನು ಎಂದೆಂದೂ ನನ್ನೆದೆಯ ಗೂಡಲ್ಲಿ ಬಚ್ಚಿಟ್ಟುಕೊಳ್ಳುವವರೆಗೂ
ನಿಮ್ಮ ಅರೆಖಾಸಗಿ
ನಮ್ಮ ಖಾಸಗಿಯಾಗಿ ಇರುವವರೆಗೂ
ಪರಿಮಳದಂಗಳ ಪಾರಿಜಾತದ ಘಮಲನ್ನು
ಪಸರಿಸುತ್ತಲೇ ಇರುತ್ತದೆ ಎದೆಯಿಂದ ಎದೆಗೆ. (-madhavi bhandari)
_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________
