

ಲೋಕಸಭೆ ಚುನಾವಣೆ ೨೪ ರ ಉತ್ತರ ಕನ್ನಡ ಜಿಲ್ಲೆಯ ಅಭ್ಯರ್ಥಿಗಳ ಪಟ್ಟಿ ಬಹುತೇಕ ಪಕ್ಕಾ ಆದಂತಿದೆ. ನಾಮಧಾರಿ, ದೀವರು ಅಥವಾ ಈಡಿಗರ ಜನಸಂಖ್ಯೆ ಆಧಾರದಲ್ಲಿ ಮಾಜಿ ಸಚಿವ ಕುಮಾರ ಬಂಗಾರಪ್ಪ ಉತ್ತರ ಕನ್ನಡದ ಬಿ.ಜೆ.ಪಿ. ಅಭ್ಯರ್ಥಿ ಎನ್ನುವ ಸಮೀಕರಣವೂ ಸೇರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಈಡಿಗರಿಗೆ ಆದ ಅವಮಾನದ ಬಗ್ಗೆ ಚರ್ಚೆಯಾಗುತ್ತಿದೆ.
ಉತ್ತರ ಕನ್ನಡ ಕ್ಷೇತ್ರದಲ್ಲಿ ಮರಾಠಿ ಮಾತನಾಡುವ ಮರಾಠಾ ಭಾಷಿಕರು ಬಹುಸಂಖ್ಯಾತರು ಅವರನ್ನು ಬಿಟ್ಟರೆ ಉತ್ತರ ಕನ್ನಡದ ಬಹುಸಂಖ್ಯಾತ ಸಮೂದಾಯ ಈಡಿಗರು, ದೀವರು, ಹಳೆಪೈಕರು, ನಾಮಧಾರಿಗಳೆಂದು ಕರೆಸಿಕೊಳ್ಳುವ ಇಲ್ಲಿಯ ಈಡಿಗರು ಉತ್ತರ ಕನ್ನಡ ಜಿಲ್ಲೆಯ ದೊಡ್ಡ ಸಂಖ್ಯೆಯ ಹಿಂದುಳಿದ ಸಮೂದಾಯ. ಇವರೊಂದಿಗೆ ಮುಸ್ಲಿಂರು,ಇತರ ಹಿಂದುಳಿದವರು, ಪರಿಶಿಷ್ಟರು ಸೇರಿ ಹತ್ತು ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ. ಈ ಸಮೂದಾಯದ ದೇವರಾಯ ನಾಯಕ ಹಿಂದಿನ ಕೆನರಾ ಕ್ಷೇತ್ರವನ್ನು ನಿರಂತರ ಮೂರು ಬಾರಿ ಪ್ರತಿನಿಧಿಸಿದ್ದರು. ಇವರ ನಂತರ ಅನಂತಕುಮಾರ್ ಹೆಗಡೆ ಬಿ.ಜೆ.ಪಿ.ಯ ಸಂಸದರಾಗಿ, ಸಚಿವರಾಗಿ ಈಗ ಟಿಕೇಟ್ ಸಿಗದೆ ಹತಾಶರಾಗಿ ಮೂಲೆ ಸೇರಿದ್ದಾರೆ.
ಈ ಕ್ಷೇತ್ರದ ಬಹುಸಂಖ್ಯಾತ ನಾಮಧಾರಿಗಳಿಗೆ ಉತ್ತರ ಕನ್ನಡ ಜಿಲ್ಲೆಯ ಸಂಸದರ ಕ್ಷೇತ್ರದ ಟಿಕೇಟ್ ಕೊಟ್ಟರೆ ಜಯ ಸುಲಭ ಎನ್ನುವ ಗ್ರಹಿಕೆ ಇದೆ. ಇದೇ ಲೆಕ್ಕಾಚಾರದಲ್ಲಿ ಕುಮಾರ ಬಂಗಾರಪ್ಪನವರಿಗೆ ಟಿಕೇಟ್ ಕೊಡಿಸುವ ಮೂಲಕ ಉತ್ತರ ಕನ್ನಡ ಜಿಲ್ಲೆಯ ನಾಮಧಾರಿಗಳ ಮತವನ್ನು ಬಿ.ಜೆ.ಪಿ. ಯತ್ತ ಸೆಳೆಯಬೇಕು ಎನ್ನುವ ಲೆಕ್ಕಾಚಾರ ಯಡಿಯೂರಪ್ಪನವರದ್ದು.
ಕಾಂಗ್ರೆಸ್ ಅಳೆದು ತೂಗಿ ಅಂಜಲಿ ನಿಂಬಾಳ್ಕರ್ ಗೆ ಟಿಕೇಟ್ ನೀಡಿದೆ. ಅಂಜಲಿ ನಿಂಬಾಳ್ಕರ್ ಮರಾಠರೆನ್ನುವುದು ಕಾಂಗ್ರೆಸ್ ಟಿಕೇಟ್ ನೀಡಿಕೆಯ ಹಿಂದಿನ ವಾಸ್ತವ. ಶಿವಮೊಗ್ಗದಲ್ಲಿ ಈಡಿಗರಿಗೆ ಟಿಕೇಟ್ ನೀಡಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಗೆ ಅವಕಾಶ ನೀಡಲಾಗಿದೆ ಎನ್ನುವ ವಿಷಯ ಚರ್ಚೆಯಲ್ಲಿದೆ.
ಈಗ ಈ ವರ್ಷ ಉತ್ತರ ಕನ್ನಡಜಿಲ್ಲೆಯ ಸಂಸದರ ಕ್ಷೇತ್ರದ ಟಿಕೇಟ್ ನಾಮಧಾರಿಗಳಿಗೆ ಸಿಗದಿರುವುದರಿಂದ ನಾಮಧಾರಿಗಳು ಒಂದಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ತೊಡೆ ತಟ್ಟಲಿರುವ ಮುನ್ಸೂಚನೆ ಸಿಗತೊಡಗಿದೆ. ಕಾಂಗ್ರೆಸ್ ಟಿಕೆಟ್ ಕೇಳಿದ್ದ ವಕೀಲ ಜಿ.ಟಿ.ನಾಯ್ಕ ಸ್ವತಂತ್ರವಾಗಿ ಸ್ಫರ್ಧಿಸುವ ಬಗ್ಗೆ ಅವರ ಅಭಿಮಾನಿ ಬಳಗ ಹೇಳಿದೆ.
ಅರಣ್ಯ ಹಕ್ಕು ಹೋರಾಟದ ಮೂಲಕ ಮನೆಮಾತಾಗಿರುವ ರವೀಂದ್ರ ನಾಯ್ಕ ಅಭಿಮಾನಿಗಳು ಕೂಡಾ ತಮ್ಮ ನಾಯಕರಿಗೆ ಕಾಂಗ್ರೆಸ್ ಟಿಕೇಟ್ ನೀಡದಿರುವುದರಿಂದ ಅವರನ್ನು ಸ್ವತಂತ್ರವಾಗಿ ಸ್ಫರ್ಧೆ ಗಿಳಿಸುವ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ್ದಾರೆ. ಹೀಗೆ ಜಿಲ್ಲೆಯ ಬಹುಸಂಖ್ಯಾತ ಮೂಲನಿವಾಸಿಗಳಿಗೆ ಕಾಂಗ್ರೆಸ್ ಅವಕಾಶ ತಪ್ಪಿಸಿದೆ ಎನ್ನುವ ಅಸಮಧಾನ ಬುಗಿಲೆದ್ದಿದೆ. ಈ ಅವಕಾಶ ಬಳಸಿಕೊಂಡು ಬಿ.ಜೆ.ಪಿ. ಕುಮಾರ ಬಂಗಾರಪ್ಪನವರನ್ನು ಉತ್ತರ ಕನ್ನಡದಿಂದ ಕಣಕ್ಕಿಳಿಸಿದರೆ ಅವರಿಗೆ ಗೆಲ್ಲುವ ಅವಕಾಶ ಹೆಚ್ಚಿದೆ. ಕುಮಾರ ಬಂಗಾರಪ್ಪ ಬಿ.ಜೆ.ಪಿ. ಅಭ್ಯರ್ಥಿಯಾದರೆ ನಾಮಧಾರಿಗಳು ಸ್ವತಂತ್ರ ಸ್ಫರ್ಧೆಗೆ ಮುಂದಾಗುವುದಿಲ್ಲ. ಬಿ.ಜೆ.ಪಿ.ಯಿಂದ ಕುಮಾರ ಬಂಗಾರಪ್ಪ ಬದಲು ವಿಶ್ವೇಶ್ವರ ಹೆಗಡೆ ಅಥವಾ ಸೂಲಿಬೆಲೆ ಚಕ್ರವರ್ತಿ ಅಭ್ಯರ್ಥಿಗಳಾದರೆ ಆಗ ನಾಮಧಾರಿಗಳ ಸ್ವತಂತ್ರ ಸ್ಫರ್ಧೆಗೆ ಅವಕಾಶವಿದೆ.
ಈ ಹಿನ್ನೆಲೆಯಲ್ಲಿ ಸ್ವತಂತ್ರ ಸ್ಫರ್ಧೆಗೆ ಅಣಿಯಾಗುತ್ತಿರುವ ಕಾಂಗ್ರೆಸ್ ಟಿಕೇಟ್ ವಂಚಿತ ಜಿ.ಟಿ. ನಾಯ್ಕ ಹಾಗೂ ಅರಣ್ಯ ಭೂಮಿ ಹಕ್ಕು ಹೋರಾಟಗಾರ ರವೀಂದ್ರ ನಾಯ್ಕ ರಲ್ಲಿ ಒಬ್ಬರ ಸ್ಫರ್ಧೆ ಬಿ.ಜೆ.ಪಿ. ಅಭ್ಯರ್ಥಿ ಘೋಷಣೆಯನ್ನವಲಂಬಿಸಿದೆ. ಕುಮಾರ ಬಂಗಾರಪ್ಪ ಬಿ.ಜೆ.ಪಿ. ಅಭ್ಯರ್ಥಿಯಾಗದಿದ್ದರೆ ನಾಮಧಾರಿಗಳು ಒಮ್ಮತದ ಸ್ವತಂತ್ರ ಅಭ್ಯರ್ಥಿ ನಿಲ್ಲಿಸಲಿದ್ದಾರೆ. ಹಾಗಾಗಿ ಎಲ್ಲರ ಕಣ್ಣು-ಮನಸ್ಸು ಬಿ.ಜೆ.ಪಿ. ಟಿಕೇಟ್ ಘೋಷಣೆಯತ್ತ ನೆಟ್ಟಿದ್ದು ಕಾಂಗ್ರೆಸ್ ಕೂಡಾ ಕುಮಾರ ಬಂಗಾರಪ್ಪ ಬಿ.ಜೆ.ಪಿ. ಅಭ್ಯರ್ಥಿಯಾದಿದ್ದರೆ ಸಾಕು ಎನ್ನುವ ನಿರೀಕ್ಷೆಯಲ್ಲಿದೆ.
