

ಬಹುಜನ ಚಳವಳಿಗಳಿಗೆ ನಾರಾಯಣ ಗುರುಗಳು ಮತ್ತು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಚಿಂತನೆಗಳು ಪೂರಕ ಎಂದಿರುವ ಯುವ ಚಿಂತಕ ಲೋಹಿತ್ ನಾಯ್ಕ ಈಗಲೂ ಸೈದ್ಧಾಂತಿಕ ಹೋರಾಟಗಳ ಮೂಲಕ ಸುಧಾರಣೆ ಮಾಡುವ ಅನಿವಾರ್ಯತೆ ಇದೆ ಎಂದಿದ್ದಾರೆ. ತೀರ್ಥಹಳ್ಳಿಯಲ್ಲಿ ನಡೆದ ಬಿ.ಎ.ಎಂ.ಸಿ.ಎಫ್. ನ ದಕ್ಷಿಣ ಭಾರತದ ಅರ್ಧವಾರ್ಷಿಕ ಸಮಾಗಮ ದಲ್ಲಿ ಅವರು ಮಾತನಾಡಿದರು.
ಅಂಬೇಡ್ಕರ್ ಹಿಂದುಳಿದ ವರ್ಗಗಳಿಗೆ ಅರ್ಥವಾದರೆ ಕಷ್ಟ ಎಂದು ಗ್ರಹಿಸಿದ ಪಟ್ಟಭದ್ರರು ಅವರನ್ನು ದಲಿತರಿಗೆ ಸೀಮಿತ ಮಾಡಿದರು. ಡಾ. ಅಂಬೇಡ್ಕರ್, ನಾರಾಯಣಗುರುಗಳು ಯಾರಿಗೂ ಸೀಮಿತವಲ್ಲ ಅವರ ಚಿಂತನೆಗಳ ಆಧಾರದಲ್ಲಿ ಬಹುಜನಚಳವಳಿಗಳು ಗಟ್ಟಿಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ಪ್ರತಿಪಾದಿಸಿದರು.
ಅಂಬೇಡ್ಕರ್ ಕಾಂಗ್ರೆಸ್ ಜೊತೆ ಜಗಳಕ್ಕೆ ನಿಲ್ಲಲು ಅನೇಕ ಕಾರಣಗಳಿವೆ ಅವುಗಳಲ್ಲಿ ಹಿಂದೂ ಬಿಲ್ ಮತ್ತು ಹಿಂದುಳಿದವರ ಪ್ರಾತಿನಿಧ್ಯದ ಅಂಶಗಳು ಪ್ರಮುಖವಾದವು ಅಂಬೇಡ್ಕರ್, ನಾರಾಯಣ ಗುರುಗಳನ್ನು ಜಾತಿ, ಧರ್ಮಕ್ಕೆ ಸೀಮಿತಮಾಡುವವರ ಹಿಂದಿನ ಹುನ್ನಾರ ದೇಶಕ್ಕೆ ಅರ್ಥವಾಗಬೇಕಿದೆ ಎಂದು ಆಶಿಸಿದರು.
ಬಿ.ಎ.ಎಂ.ಸಿ.ಎಫ್ ಬಹುಜನರ ಪರವಾಗಿನ ಸಿದ್ಧಾಂತ ಬೋಧನೆ ಮತ್ತು ವಂಚಿತರ ಪರವಾಗಿನ ಹೋರಾಟ ಕಟ್ಟುವ ಕೆಲಸಮಾಡುತ್ತಿದೆ ಎಂದು ತಿಳಿಸಿದರು. ಈ ಸಮಾರಂಭದಲ್ಲಿ ಬಿ.ಎ.ಎಂ.ಸಿ.ಎಫ್ ಮುಖ್ಯಸ್ಥ ವಿಲಾಸ ಕಾರತ್, ಕೇರಳ ಮತ್ತು ತೆಲಂಗಾಣ ಉಸ್ತುವಾರಿಗಳು,ಆಯ್. ಎಂ. ಪಿ.ಎ. ಮುಖ್ಯಸ್ಥ ಡಾ. ಭಾನುಪ್ರಕಾಶ್, ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷ ಶಿವಮೂರ್ತಿ, ಸುಧೀರ್ ನಾಗ್, ಅಬ್ದುಲ್ ಅಜೀಜ್ ಸೇರಿದಂತೆ ಸಂಘಟನೆಯ ಪ್ರಮುಖರು ಪಾಲ್ಗೊಂಡಿದ್ದರು.
