

ಚಿಕ್ಕ ತಾಲೂಕು ಸಿದ್ಧಾಪುರದಲ್ಲಿ ವೈದ್ಯಕೀಯ ಅನುಕೂಲಗಳು ಇಲ್ಲದ ಸಮಯದಿಂದ ಹಿಡಿದು ಈವರೆಗೆ ಸಿದ್ಧಾಪುರ ಸರ್ಕಾರಿ ಆಸ್ಫತ್ರೆ ತನ್ನ ವೈಶಿಷ್ಟ್ಯದ ಕಾರಣಕ್ಕೆ ಪ್ರಸಿದ್ಧವಾಗಿದೆ. ಸಿದ್ಧಾಪುರದಲ್ಲಿ ಸರ್ಕಾರಿ ವೈದ್ಯರಾಗಿ ಡಾ.ಬಾಲಚಂದ್ರ ಮೇಸ್ತ, ಡಾ. ಶ್ರೀಧರ ವೈದ್ಯ, ಡಾ. ನಾಗೇಂದ್ರಪ್ಪ ಸೇರಿದಂತೆ ಅನೇಕರು ಅತ್ಯುತ್ತಮ ಸೇವೆ ನೀಡಿ ತಾಲೂಕಾ ಆಸ್ಫತ್ರೆಯನ್ನು ಪ್ರಖ್ಯಾತ ಮಾಡಿದ್ದರು. ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ರಾಜ್ಯದ ಅನೇಕ ಜಿಲ್ಲೆಗಳ ಕೆಲವೇ ಕೆಲವು ತಾಲೂಕು ಆಸ್ಫತ್ರೆಗಳಲ್ಲಿ ಸಿದ್ಧಾಪುರದ ತಾಲೂಕಾ ಆಸ್ಫತ್ರೆ ಜನಪರವಾಗಿರುವ ಹಿಂದೆ ತಾಲೂಕಿನ ಸಾರ್ವಜನಿಕರ ಸಹಕಾರವಿದ್ದರೆ ಇಲ್ಲಿ ಕೆಲಸ ಮಾಡಿದ ವೈದ್ಯರ ಸೇವೆಯ ಕೊಡುಗೆ ಹೆಚ್ಚಿನದಾಗಿತ್ತು.
ಈಗ ಡಾ. ಲೋಕೇಶ್ ನಾಯ್ಕ, ಡಾ.ಪುರಾಣಿಕ್, ಡಾ.ಲಕ್ಷ್ಮೀಕಾಂತ್ ನಾಯ್ಕ ಸೇರಿದಂತೆ ಅನೇಕ ವೈದ್ಯರು ಹೆಸರು ಮಾಡುವ ಜೊತೆಗೆ ತಾಲೂಕಿನ ಆರೋಗ್ಯ ಕ್ಷೇತ್ರಕ್ಕೆ ಅನುಪಮ ಸೇವೆ ಸಲ್ಲಿಸುತಿದ್ದಾರೆ. ಸಿದ್ಧಾಪುರದಲ್ಲಿ ವೈದ್ಯರಿಗೆ, ದಾದಿಯರಿಗೆ ವಸತಿ ಅನುಕೂಲಗಳಿಲ್ಲ, ರೈಲು, ವಿಮಾನ ಸೇರಿದ ಆಧುನಿಕ ಅನುಕೂಲತೆಗಳ ಅಲಭ್ಯತೆಗಳ ನಡುವೆ ಇಲ್ಲಿ ಸೇವೆ ಸಲ್ಲಿಸುತ್ತಿರುವ ಬಹುತೇಕ ವೈದ್ಯರು ತಮ್ಮ ಸೇವೆಯಿಂದಲೇ ಹೆಸರು ಮಾಡಿದ್ದಾರೆ. ಇಂಥ ಸ್ಥಿತಿಯಲ್ಲಿ ಡಾ. ಲೋಕೇಶ್ ನಾಯ್ಕ. ಡಾ.ಪುರಾಣಿಕ್ ಸೇರಿದಂತೆ ಕೆಲವರು ಸ್ವಯಂ ನಿವೃತ್ತಿಗೆ ಅರ್ಜಿ ಸಲ್ಲಿಸಿರುವ ವಿಷಯ ಉತ್ತರ ಕನ್ನಡ ಜಿಲ್ಲೆಯ ಮಟ್ಟಿಗೆ ಶುಭ ಸುದ್ದಿಯಲ್ಲ.
ಸಿದ್ದಾಪುರ ಆಸ್ಫತ್ರೆ, ವೈದ್ಯರು ದೋಷಗಳಿಂದ ಸಂಪೂರ್ಣ ಮುಕ್ತರಲ್ಲ ಆದರೆ ಎಲ್ಲಾ ತೊಂದರೆ, ರಗಳೆಗಳ ಮಧ್ಯೆ ಡಾ. ನಾಗರಾಜ್ ನಾಯ್ಕ,ಪುರಾಣಿಕ, ಲೋಕೇಶ್ ನಾಯ್ಕ ಸೇರಿದಂತೆ ಅನೇಕರ ಪ್ರಾಮಾಣಿಕ ಸೇವೆಯಿಂದ ಸಿದ್ದಾಪುರದ ಜನತೆಗೆ ಅನುಕೂಲವಾಗಿತ್ತು. ಈಗ ಸಿದ್ಧಾಪುರದಲ್ಲಿ ವೈದ್ಯಕೀಯ ತೊಂದರೆಗಳಾಗುತ್ತಿರುವುದಕ್ಕೆ ಕೇವಲ ಸರ್ಕಾರಿ ಆಸ್ಫತ್ರೆಯ ವಿದ್ಯಮಾನ ಮಾತ್ರ ಕಾರಣವಲ್ಲ. ಖಾಸಗಿ ವೈದ್ಯರಲ್ಲಿ ಡಾ. ಎಸ್.ಆರ್. ಹೆಗಡೆ ಯವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿಲ್ಲ. ಡಾ. ಶ್ರೀಧರ ವೈದ್ಯರಿಗೆ ಒಂದು ತಿಂಗಳ ವಿಶ್ರಾಂತಿ ಅನಿವಾರ್ಯತೆಯ ಹಿನ್ನೆಲೆಯಲ್ಲಿ ಅವರ ಆಸ್ಫತ್ರೆ ಹಿಂದಿನಂತಿಲ್ಲ.
ಸ್ಥಳೀಯರ ನೆಚ್ಚಿನ ವೈದ್ಯರಾಗಿದ್ದ ಡಾ. ಶೆಟ್ಟಿ ಶಿರಸಿಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಹೀಗೆ ಸರ್ಕಾರಿ, ಖಾಸಗಿ ವೈದ್ಯರ ಅನುಪಸ್ಥಿತಿ ಸಿದ್ಧಾಪುರಕ್ಕೆ ಬರವಾಗಿ ಕಾಡುತ್ತಿದೆ.
ಕರೋನಾ ಮೂರನೇ ಅಲೆ, ಸಹಜ ಪ್ರಾಕೃತಿಕ ವ್ಯತ್ಯಾಸ, ರಾಜಕೀಯ ಹಿತಾಸಕ್ತಿ,ನಾಯಕತ್ವ, ನೇತೃತ್ವಗಳ ಕೊರತೆ ಈ ಎಲ್ಲಾ ಕಾರಣಗಳಿಂದ ಹಿಂದುಳಿದ ತಾಲೂಕು ಸಿದ್ಧಾಪುರ ಈಗ ಆರೋಗ್ಯ ಕ್ಷೇತ್ರದಲ್ಲಿ ಕೂಡಾ ಹಿಂದುಳಿದ ತಾಲೂಕಾಗಿದೆ. ಈ ಸಮಸ್ಯೆ, ರಗಳೆಗಳಿಂದ ಬಾಧಿತರಾಗುವವರು ಜನಸಾಮಾನ್ಯರು.
ಗರ್ಭಿಣಿಯರು, ಮಕ್ಕಳೆನ್ನದೆ ವಾರಾಂತ್ಯದ ದಿನಗಳಲ್ಲಿ ಬೇರೆ ಊರು ಜಿಲ್ಲೆಗಳಿಗೆ ತಾಲೂಕಿನ ಬಡವರನ್ನು ಸಾಗಹಾಕಿ ಬಡವರು, ಅಸಹಾಯಕರಿಗೆ ಯಮಸ್ವರೂಪಿಗಳಾದ ಕೆಲವು ವೈದ್ಯರನ್ನು ಬಿಟ್ಟು ಜನಪರ ವೈದ್ಯರು ಸ್ವಯಂ ನಿವೃತ್ತಿಯಾಗುತ್ತಿರುವುದು, ವಯೋಸಹಜ ಅನಾರೋಗ್ಯ, ತೊಂದರೆಗಳಿಂದ ಜನರಿಗೆ ಲಭ್ಯರಿರದಿರುವುದು ಸಿದ್ಧಾಪುರದ ಜನಸಾಮಾನ್ಯರಿಗೆ ಹೊರೆಯಾಗುವ ಮುನ್ಸೂಚನೆಯಾಗಿದೆ.
