ಹಲವು ರಾಮಾಯಣಗಳು: ಕ್ರೂರ ವ್ಯಂಗ್ಯ!

ಎ ಕೆ ರಾಮಾನುಜನ್‌ ಜನಪದ ರಾಮಾಯಣದ ಘಟನೆಯೊಂದರ ಬಗ್ಗೆ ಬರೆದಿದ್ದಾರೆ. ಅದರ ಪ್ರಕಾರ, ಕಾಡಿಗೆ ಹೊರಟು ನಿಂತ ರಾಮನು ಸೀತೆಗೆ ʼಅತ್ತೆ ಮಾವನ ಸೇವೆ ಮಾಡಿಕೊಂಡು ಅಯೋಧ್ಯೆಯಲ್ಲಿಯೇ ಇರುʼ ಎನ್ನುತ್ತಾನೆ. ಆಕೆ ಒಪ್ಪುವುದಿಲ್ಲ. ಜಗಳ ಹೆಚ್ಚಾಗುತ್ತದೆ. ಒಂದು ಹಂತದಲ್ಲಿ ಸೀತೆ ಹೇಳ್ತಾಳೆ- ʼ ರಾಮಾ, ನೀನು ಎಷ್ಟು ರಾಮಾಯಣ ಕೇಳಿರಬಹುದು, ಯಾವುದರಲ್ಲಾದ್ರೂ ಸೀತೆಯನ್ನು ಬಿಟ್ಟು ರಾಮ ಕಾಡಿಗೆ ಹೋದದ್ದುಂಟಾ?ʼ . ಬಾಯ್ಮುಚ್ಚಿದ ರಾಮ ತೆಪ್ಪಗೆ ಸೀತೆನ ಕರ್ಕೊಂಡು ಕಾಡಿಗೆ ಹೊರಡುತ್ತಾನೆ. ಭಾರತದಲ್ಲಿ ರಾಮನು ರಾಮಾಯಣಕ್ಕೆ ನಾಯಕನೂ ಹೌದು, ಪ್ರೇಕ್ಷಕನೂ ಹೌದು. ವಾಲ್ಮೀಕಿಯ ಆಶ್ರಮದಲ್ಲಿ ಲವಕುಶರು ಹಾಡಿದ ರಾಮಾಯಣಕ್ಕೆ ಮೊದಲು ಕಿವಿಕೊಡುವವ ಸ್ವತ: ಶ್ರೀರಾಮನೇ ಹೌದಲ್ಲ! ವಾಲ್ಮೀಕಿಯೂ ತನ್ನ ಕಾವ್ಯದ ನಾಯಕನಿಗೆ ತಾನೇ ಮುಖಾಮುಖಿಯಾಗುತ್ತಾನೆ. ಎಂಥಾ ಅದ್ಭುತ ಘಟನೆಯಿದು!

ರಾಮ ಭಾರತೀಯರ ಮನಸ್ಸಿಗೆ ಹತ್ತಿರವಾಗಲು ಏನು ಕಾರಣ ಎಂಬುದು ನಮಗಿನ್ನೂ ಸರಿಯಾಗಿ ಗೊತ್ತಿಲ್ಲ. ಅವನು ತಂದೆಯ ಮಾತನ್ನು ಪರಿಪಾಲಿಸಲು ಕಾಡಿಗೆ ಹೋದದ್ದು, ಕಾಡಲ್ಲಿ ಹೆಂಡತಿ ಕೇಳಿದ ತಕ್ಷಣ ಚಿನ್ನದ ಜಿಂಕೆಯನ್ನು ತರಲು ಹೊರಟದ್ದು, ಸೀತೆಯನ್ನು ಹುಡುಕಾಡುತ್ತಾ ದಂಡಕಾರಣ್ಯದಲ್ಲಿ ಅಲೆದಾಡಿದ್ದು, ಅಹಲ್ಯಾ ಶಾಪ ವಿಮೋಚನೆ ಮಾಡಿದ್ದು, ಶಬರಿ ಕೊಟ್ಟ ಹಣ್ಣನ್ನು ತಿಂದದ್ದು, ವಾನರರ ಸ್ನೇಹ ಮಾಡಿದ್ದು , ಇತ್ಯಾದಿ ಘಟನೆಗಳೊಂದಿಗೆ ನಾವು ರಾಮನನ್ನು ಜೋಡಿಸಿ ಸಂತೋಷಿಸುತ್ತೇವೆ. ಈ ನಡುವೆ ಅವನು ಅಯೋಧ್ಯೆಯಲ್ಲಿ ಹುಟ್ಟಿದ ಎಂಬುದು ಯಾರಿಗೂ ಮುಖ್ಯವಾಗಿರಲಿಲ್ಲ, ಏಕೆಂದರೆ ಅಯೋಧ್ಯೆಯನ್ನುಸೂರ್ಯವಂಶದ ಅರಸರೆಲ್ಲರೂ, ಅದರಲ್ಲೂ ಮುಖ್ಯವಾಗಿ, ಭಗೀರಥ, ದಿಲೀಪ, ರಘು, ನಹುಷ, ಯಯಾತಿ, ಅಜ, ದಶರಥ ಮೊದಲಾದವರೆಲ್ಲ ಆಳಿದ್ದರು. ಆದರೆ ಯಾರೂ ಶ್ರೀರಾಮನ ಹಾಗೆ ಪ್ರಖ್ಯಾತಿ ಪಡೆಯದೇ ಹೋದರು. ಏಕೆಂದರೆ, ಅವರ್ಯಾರೂ ರಾಮನ ಹಾಗೆ ಕಡಲ ತಡಿಯಲ್ಲಿ ನಿಂತು ಕಳಕೊಂಡ ಹೆಂಡತಿಗಾಗಿ ದು:ಖಿಸಿರಲಿಲ್ಲ!

ರಾಮಾಯಣ ಒಂದು ಕಾವ್ಯವಾಗಿರುವುದರಿಂದ ಧರ್ಮಶಾಸ್ತ್ರ ಗ್ರಂಥಗಳಲ್ಲಿ ಹೆಚ್ಚು ಸಲ ಕಾಣಿಸಿಕೊಂಡಿಲ್ಲ. ಧಾರ್ಮಿಕ ಭಾಷೆಯೊಳಗೆ ಬಂಧಿಯಾಗಲೂ ಇಲ್ಲ. ರಾಮನನ್ನು ರಾಮಣ್ಣ, ರಾಮಪ್ಪ, ರಾಮಕ್ಕ, ಎಂದೆಲ್ಲಾ ಮಾಡಿಕೊಂಡು ತಮ್ಮ ಕುಟುಂಬದಲ್ಲಿ ಒಬ್ಬನನ್ನಾಗಿ ಮಾಡಿಕೊಂಡರು. ೧೯೬೦-೭೦ರ ದಶಕದ ಕ್ಯಾಲೆಂಡರುಗಳಲ್ಲಿ ರಾಮ ಒಬ್ಬನೇ ನಿಂತದ್ದೇ ಕಡಿಮೆ. ನಗುಮುಖದ ಅವನೊಂದಿಗೆ ಸೀತೆ ಮತ್ತು ಲಕ್ಷಣ ಹಾಗೂ ಕಾಲಬುಡದಲ್ಲಿ ವಿನೀತನಾಗಿ ಕೈಜೋಡಿಸಿ ಕುಳಿತಿರುವ ಹನುಮಂತ ಇರಲೇಬೇಕು. ಈ ಕೌಟುಂಬಿಕ ರಾಮ ಎಲ್ಲರ ಮನೆಯ ಗೋಡೆಯಲ್ಲಿರುತ್ತಿದ್ದ. ʼರಾಮ ನಮ್ಮೂರಿಗೆ ಬಂದಿದ್ದ, ಅದು ಸೀತೆಯ ಸೆರಗಿನ ಗುರುತು, ಇದು ಸೀತೆ ಹಕ್ಕಿ, ಏಕೆಂದರೆ ಆ ಹೆಸರಿಟ್ಟದ್ದು ಸೀತೆʼ ಎಂದೆಲ್ಲ ಹೇಳಿಕೊಂಡು ರಾಮನನ್ನು ಜನರು ತಮ್ಮ ತಮ್ಮ ಊರಿಗೋ, ಕಾಡಿಗೋ ಅಂಟಿಸಿಕೊಂಡರು. ಹಾಗೇ ನೋಡಿದರೆ ಇಡೀ ದೇಶವೇ ಕಾಲ, ಪ್ರದೇಶ ಮತ್ತು ಸಮುದಾಯಗಳ ಆಶೋತ್ತರಗಳಿಗೆ ಅನುಗುಣವಾಗಿ ರಾಮಾಯಣವನ್ನು ತನಗೆ ಬೇಕಾದಂತೆ ಮತ್ತೆ ಮತ್ತೆ ಬರೆದುಕೊಂಡಿತು. ರಾಮಲೀಲಾ, ರಾಮನವಮಿ, ದೀಪಾವಳಿ ಯಕ್ಷಗಾನ, ಮತ್ತಿತರ ಸಂದರ್ಭಗಳಲ್ಲಿ ರಾಮಾಯಣದ ಕೆಲವು ಪಾತ್ರಗಳು ಪ್ರತಿವರ್ಷ ನವೀಕರಣಗೊಂಡು ಹೊಸದಾಗುತ್ತಲೇ ಹೋದುವು.

ರಾಮಾಯಣದ ಕಥೆಯನ್ನುಸಂಸ್ಕೃತ ನಾಟಕಕಾರರು ಬಳಸಿಕೊಂಡ ರೀತಿಯೂ ಮೋಹಕವಾಗಿದ್ದು ಅವು ವಾಲ್ಮೀಕಿ ರಾಮಾಯಣಕ್ಕಿಂತ ಬಹಳ ದೂರ ಸರಿದಿವೆ. ಇದಕ್ಕೆ ಭಾಸನ ಪ್ರತಿಮಾ ನಾಟಕ ಮತ್ತು ಅಭಿಷೇಕ ನಾಟಕ ಒಳ್ಳೆಯ ಉದಾಹರಣೆಗಳು. ಭವಭೂತಿಯ ಉತ್ತರ ರಾಮಚರಿತೆ ಬಹಳ ಪ್ರಸಿದ್ಧ ನಾಟಕ. ದಿಙ್ನಾಗನ ಕುಂದಮಾಲಾ, ಮುರಾರಿಯ ಅನರ್ಘ್ಯ ರಾಘವ, ರಾಜಶೇಖರನ ಬಾಲರಾಮಾಯಣ, ಶಕ್ತಿಭದ್ರನ ಆಶ್ವರ್ಯ ಚೂಡಾಮಣಿ ನಾಟಕಗಳು ಅನೇಕ ಹೊಸ ಘಟನೆಗಳನ್ನು ಹೊಂದಿದ್ದು ರಾಮಾಯಣದ ಕಥಾ ಭಿತ್ತಿಯನ್ನು ವಿಸ್ತರಿಸಿವೆ. ಇದನ್ನು ಗಮನಿಸಿಯೇ ಕುಮಾರವ್ಯಾಸನು –

ತಿಣಿಕಿದನು ಫಣಿರಾಯ ರಾಮಾ

ಯಣದ ಕವಿಗಳ ಭಾರದಲಿ ತಿಂ

ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ!

ಎಂದು ಉದ್ಘರಿಸಿ ಮಹಾಭಾರತದ ಕಡೆ ವಾಲಿಕೊಂಡನು. ಆದರೆ ಅವನ ಆನಂತರ ಬಂದ ತೊರವೆ ನರಹರಿಯು ʼತೊರವೆ ರಾಮಾಯಣʼವನ್ನೇ ಬರೆದ!

ಇವತ್ತು ನಮ್ಮ ದೇಶದ ಎಲ್ಲರಿಗೂ ಗೊತ್ತಿರುವ ರಾಮ ವಾಲ್ಮೀಕಿಯ ರಾಮನೇ ಆಗಿರಬೇಕೆಂದೇನೂ ಇಲ್ಲ. ಬೆರಳೆಣಿಕೆಯ ಕೆಲವು ವಿದ್ವಾಂಸರನ್ನು ಬಿಟ್ಟರೆ ವಾಲ್ಮೀಕಿ ರಾಮಾಯಣವನ್ನು ಪೂರ್ತಿಯಾಗಿ ಓದಿದವರೇ ಇಲ್ಲ. ನನಗೆ ವೈಯಕ್ತಿಕವಾಗಿ ಗೊತ್ತಿರುವ ರಾಮನ ಕತೆ ಯಕ್ಷಗಾನದಿಂದ ಬಂದದ್ದು. ಶೇಣಿ ಗೋಪಾಕೃಷ್ಣ ಭಟ್‌, ಕುಂಬಳೆ ಸುಂದರ ರಾವ್‌, ಕೆರೆಮನೆ ಶಂಭು ಹೆಗಡೆ , ಪ್ರಭಾಕರ ಜೋಷಿ, ಮೊದಲಾದ ಪ್ರತಿಭಾವಂತ ಕಲಾವಿದರು ರಂಗದ ಮೇಲೆ ಕಟ್ಟಿದ ಕತೆಯದು. ಈ ಕಲಾವಿದರು ಬದಲಾದಂತೆ ನನ್ನ ರಾಮಾಯಣದ ಗ್ರಹಿಕೆಯಲ್ಲೂ ಬದಲಾವಣೆ ಆಗಿದೆ. ೧೭ನೇ ಶತಮಾನದಲ್ಲಿ ಪಾರ್ತಿಸುಬ್ಬ ಬರೆದ ಯಕ್ಷಗಾನ ಪ್ರಸಂಗಗಳಲ್ಲಿ ರಾಮಾಯಣದ ಎಲ್ಲ ಪಾತ್ರಗಳೂ ಕುಣಿಯುತ್ತಿದ್ದವು. ಕೇರಳದ ಮಲಬಾರ್‌ ಪ್ರಾಂತ್ಯದಲ್ಲಿ ಬ್ಯಾರಿ ಭಾಷೆಯಲ್ಲಿ ಮಾಪಿಳ್ಳೆ ರಾಮಾಯಣವೂ ಇದೆ. ʼ ಗೊಂಡ ರಾಮಾಯಣವುʼ ಆದಿವಾಸಿಗಳು ಕಂಡ ರಾಮನ ವಿಶೇಷ ಕಥನ. ತುಳುವಿನಲ್ಲಿ ಮಂದಾರ ರಾಮಾಯಣವಿದೆ. ಹೀಗೆ ಅದ್ಭುತ ರಾಮಾಯಣ, ಅಧ್ಯಾತ್ಮ ರಾಮಾಯಣ, ಆನಂದ ರಾಮಾಯಣ, ಪವುಮ ಚರಿಯ, ಪದ್ಮಚರಿತ, ರಾಮಾಯಣ ದರ್ಶನಂ…ಇದೊಂದು ಕೊನೆಯಿಲ್ಲದ ಲೋಕ. ತಮಿಳು ಕವಿ ಕಂಬನ್‌ ಬರೆದ ರಾಮಾವತಾರಮ್, ಮತ್ತು ತುಲಸೀದಾಸರ ಶ್ರೀ ರಾಮಚರಿತ ಮಾನಸಂ ವಿಶ್ವಪ್ರಸಿದ್ಧಿ ಪಡೆದ ಎರಡು ಕೃತಿಗಳು. ಇವಲ್ಲದೆ, ಗುಜರಾತಿನ ಪ್ರೇಮಾನಂದ, ಬಂಗಾಲದ ಕೃತ್ತಿವಾಸ, ಒಡಿಯಾದ ಬಲರಾಮದಾಸ, ಮಹಾರಾಷ್ಟ್ರದ ಶ್ರೀಧರ, ಆಂಧ್ರಪದೇಶದ ರಂಗನಾಥ ಮೊದಲಾದವರೂ ಅವರವರ ತಾಯ್ನುಡಿಗಳಲ್ಲಿ ರಾಮ ಕತೆಯನ್ನು ಕಂಡರಿಸಿದ್ದಾರೆ. ಹಿಂದಿ, ಮೈಥಿಲೀ, ಅವಧಿ ಮುಂತಾದ ವಿವಿಧ ಭಾಷೆ ಮತ್ತು ಉಪಭಾಷೆಗಳಲ್ಲಿ ೫೦ಕ್ಕೂ ಹೆಚ್ಚು ರಾಮಾಯಣಗಳಿವೆ. ಉತ್ತರ ಭಾರತದಲ್ಲಿ ಪ್ರಚಲಿತವಾಗಿರುವ ರಾಮಾಯಣದ ಕಥೆಗಳು ದಕ್ಷಿಣ ಭಾರತಕ್ಕಿಂತ ಭಿನ್ನ ಎಂದು ನಾನು ಮತ್ತೆ ಹೇಳಬೇಕಾಗಿಲ್ಲ.

ಥೈಲೆಂಡ್, ಕಾಂಬೋಡಿಯ, ಮಲೇಷಿಯ, ಶ್ರೀಲಂಕಾ, ಲಾವೋಸ್‌, ವಿಯೆಟ್ನಾಂ, ಜಾವಾ, ಸುಮಾತ್ರಾ, ಇಂಡೋನೇಶಿಯಾಗಳಲ್ಲಿ ಪ್ರಚಲಿತವಾಗಿರುವ ರಾಮಾಯಣಗಳಲ್ಲಿ ರಾಮನಿಗಿಂತ ಲಕ್ಷ್ಮಣ ಹೆಚ್ಚು ಶಕ್ತಿವಂತ. ತುಳು ರಾಮಾಯಣದಲ್ಲಿ ಕಾಗೆಯನ್ನು ಹೊಡೆದುರುಳಿಸಿ ಸೀತೆಯನ್ನು ಗೆಲ್ಲುವವನು ಕೂಡಾ ಲಕ್ಷ್ಮಣ. ಮುದೇನೂರು ಸಂಗಣ್ಣನವರು ʼಕಾಗೆ ಹೊಡೆದವರಿಗೆ ಮಗಳುʼ ಹಾಡನ್ನು ಹೇಳುತ್ತಿದ್ದರು. ಆಮೇಲೆ ಲಕ್ಷ್ಮಣ ಸೀತೆಯನ್ನು ಅಣ್ಣನಿಗೆ ಒಪ್ಪಿಸುತ್ತಾನೆ. ರಾಮಾಯಣದ್ದೇ ಆದ ಒಂದು ಪ್ರಸಂಗ ʼಅಹಿರಾವಣ ಮತ್ತು ಮಹಿರಾವಣʼ ಕತೆಯಲ್ಲಿ ಹನುಮಂತನಿಗೆ ಮದುವೆಯೂ ಆಗುತ್ತದೆ. ಉಳಿದ ಕಡೆಗಳಲ್ಲಿ ಆತ ಬ್ರಹ್ಮಾಚಾರಿ ಮತ್ತು ಚಿರಂಜೀವಿ. ಕೆಲವು ರಾಮಾಯಣಗಳಲ್ಲಿ ಸೀತೆ ರಾವಣನ ಮಗಳು, ಮತ್ತೆ ಕೆಲವುಗಳಲ್ಲಿ ಲಕ್ಷ್ಮಣನಿಗೆ ೧೧ ಜನ ಹೆಂಡತಿಯರು, ರಾವಣ ಸಾಯುವುದು ಲಕ್ಷ್ಮಣನಿಂದ – ಇಂಥ ಭಿನ್ನ ವಸ್ತುಗಳಿಗೆ ಕೊನೆಯೇ ಇಲ್ಲ. ಉತ್ತರರಾಮಾಯಣಕ್ಕೆ ಆ ಮೇಲೆ ಸೇರಿಕೊಂಡ ಶೂದ್ರ ಶಂಭೂಕನ ವಧೆಯ ಕುರಿತು ಕುವೆಂಪು ಶೂದ್ರ ತಪಸ್ವಿ ಎಂಬ ಕ್ರಾಂತಿಕಾರಕ ನಾಟಕವನ್ನೇ ಬರೆದರು.

ಇವತ್ತಿನ ರಾಜಕೀಯ ವಾಲ್ಮೀಕಿ ರಾಮಾಯಣವನ್ನು ಅಮೂಲಾಗ್ರವಾಗಿ ಬದಲಿಸಿದೆ. ಕೆಲವು ವರ್ಷಗಳ ಹಿಂದೆ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ( ಅಭಾವಿಪ) ರಾಮಾಯಣದ ಭಿನ್ನ ಪಠ್ಯಗಳ ಅಧ್ಯಯನ ಕ್ರಮವನ್ನು ವಿರೋಧಿಸಿದರು. ಪರಿಣಾಮವಾಗಿ ಎ ಕೆ ರಾಮಾನುಜನ್‌ ಬರೆದ ʼಮುನ್ನೂರು ರಾಮಾಯಣಗಳುʼ ಲೇಖನ ಪಠ್ಯಕ್ರಮದಿಂದಲೇ ಹೊರಬಿತ್ತು. ʼ ಒಂದು ದೇಶ, ಒಂದು ಭಾಷೆ, ಒಂದು ಚುನಾವಣೆ ʼ ಎಂದೆಲ್ಲಾ ಕೂಗುತ್ತಿರುವವರಿಗೆ ಭಾರತದ ಬಹುತ್ವ ಅರ್ಥವಾಗುತ್ತಿಲ್ಲ. ಸುಮಾರು ಆರು ನೂರು ವರ್ಷಗಳ ಹಿಂದೆ ಭಾರತಕ್ಕೆ ಕಾಲಿರಿಸಿದ್ದ ಬ್ರಿಟಿಷರಿಗೂ ಭಾರತದ ಬಹುತ್ವ ತಿಳಿಯಲೇ ಇಲ್ಲ. ಇಲ್ಲಿನ ಅಪಾರ ವೈವಿಧ್ಯ , ಅನೇಕ ಭಾಷೆಗಳು, ಸಮುದಾಯಗಳು, ಆಚರಣೆಗಳು, ಭೌಗೋಳಿಕ ವ್ಯತ್ಯಾಸ ಇತ್ಯಾದಿಗಳನ್ನೆಲ್ಲ ಒಂದು ಬಲವಾದ ಚೌಕಟ್ಟಿನೊಳಗೆ ತಾರದ ಹೊರತು ಸ್ಥಿರವಾದ ಆಳ್ವಿಕೆ ಕೊಡುವುದು ಅಸಾಧ್ಯ ಎಂಬುದನ್ನು ಮನಗಂಡ ಬ್ರಿಟಿಷರು ಭಾರತವನ್ನು ಯಾವುದಾದರೂ ಒಂದು ನಿರ್ದಿಷ್ಟ ಪರಿಭಾಷೆಯಲ್ಲಿ ವಿವರಿಸಲು ಹೆಣಗುತ್ತಿದ್ದರು. ಭಾರತಕ್ಕೆ ಒಂದು ವ್ಯಾಕರಣ ಬರೆಯಬೇಕಾಗಿತ್ತು ಅವರಿಗೆ. ಇಂಥ ಪ್ರಯತ್ನದ ಪರಿಣಾಮವಾಗಿ ಸಾಹಿತ್ಯ ಕ್ಷೇತ್ರದಲ್ಲಿ ಅವರು ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದರು. ಲಭ್ಯವಿರುವ ಹಲವು ಪಠ್ಯಗಳಿಂದ ಒಂದು ಪಠ್ಯವನ್ನು ಸೃಷ್ಟಿಸಿ, ಅದನ್ನು ಅಧಿಕೃತಗೊಳಿಸುವುದು ವಸಾಹತು ಕಾಲದ ಗ್ರಂಥ ಸಂಪಾದನಾ ಶಾಸ್ತ್ರದ ಮುಖ್ಯ ಕೆಲಸ. ಅದೇ ಮಾದರಿಯ ಕೆಲಸಗಳನ್ನು ಈಗಣ ರಾಜಕೀಯವೂ ಮಾಡುತ್ತಿರುವುದು ಇತಿಹಾಸದ ಕ್ರೂರ ವ್ಯಂಗ್ಯಗಳಲ್ಲಿ ಒಂದು. -ಪುರುಷೋತ್ತಮ ಬಿಳಿಮಲೆ

_______________________________________________________________

ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್‌ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi

_______________________________________________________________

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್,...

atm ಗೆ ನುಗ್ಗಿದ ಖಾಸಗಿ ಬಸ್…..‌ ಬಚಾವಾದ ಅಂಗಡಿಕಾರರು!

ಸಿದ್ಧಾಪುರ,ಮೇ ೧೭- ಈ ವರ್ಷದ ಸಂಭವನೀಯ ಇನ್ನೊಂದು ಅಪಘಾತದಿಂದ ಸಿದ್ಧಾಪುರ ಪಾರಾಗಿದೆ. ಇದೇ ವರ್ಷದ ಇಲ್ಲಿಯ ಅಯ್ಯಪ್ಪ ಜಾತ್ರೆಯಲ್ಲಿ ಅನಾಹುತವಾದ ಮೇಲೆ ಇಂದು ಕೂಡಾ...

ನೌಕರರು ಗಮನಿಸಲೇಬೇಕಾದ ಮಾಹಿತಿ ಇದು… ( only for employees)

*In..come Tax Act 1961 ಸೆಕ್ಷನ್ 80CCD ಅಡಿಯಲ್ಲಿ ಉದ್ಯೋಗದಾತರ NPS ಕೊಡುಗೆಯ ಕಡಿತದ ಕುರಿತು..* *(Clarification of deductions available for NPS...

ಮಳೆ ಬಂತು… ಸಿದ್ಧರಾಗಿ… ಶಾಸಕರ ಸೂಚನೆ

ಸರ್‌, ನಾವು ಮುಗದೂರಿನ ಜನ ಸಿದ್ಧಾಪುರದಿಂದ ಕೂಗಳತೆ ದೂರದಲ್ಲಿದ್ದೇವೆ ಕಳೆದ ೧೫-೨೦ ವರ್ಷಗಳಿಂದ ಈ ಗ್ರಾಮದಲ್ಲಿ ಯಾವ ಅಭಿವೃದ್ಧಿ ಕೆಲಸಗಳೂ ಆಗಿಲ್ಲ, ಚರಂಡಿ ಸ್ವಚ್ಛತೆ,...

ಅಭಿವೃದ್ಧಿಯೇ ಉತ್ತರ ಎಂದ ಭೀಮಣ್ಣ…ಯಾರ ಹೆಸರನ್ನೂ ಹೇಳದೆ ರಾಜಕೀಯ ವಿರೋಧಿಸಿದ ಶಾಸಕ!

ಪಕ್ಷ, ರಾಜಕೀಯ ಚುನಾವಣೆಯ ಭಾಗ ಅಭಿವೃದ್ಧಿಗೆ ಪಕ್ಷ, ರಾಜಕೀಯ ಅಡ್ಡಿ ಆಗಬಾರದು ಎಂದು ಶಿರಸಿ-ಸಿದ್ಧಾಪುರ ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ಧಾಪುರದಲ್ಲಿ ಪ.ಪಂ. ನ...

Latest Posts

ಮತ್ತೆ ಅಮೇರಿಕಾ! ಅಮೇರಿಕಾ…. ಮತ್ತೆ ರಮೇಶ್!‌

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಅಮೆರಿಕಾ ಅಮೆರಿಕಾ 2’ ಚಿತ್ರದಲ್ಲಿ ಮತ್ತೆ ನಟ ರಮೇಶ್ ಅರವಿಂದ್! 1997ರಲ್ಲಿ ತೆರೆಕಂಡ ಅಮೆರಿಕಾ ಅಮೆರಿಕಾ ಚಿತ್ರದಲ್ಲಿ ರಮೇಶ್ ಅರವಿಂದ್, ಅಕ್ಷಯ್ ಆನಂದ್ ಮತ್ತು ಹೇಮಾ ಪಂಚಮುಖಿ ನಟಿಸಿದ್ದರು. ಈ ಚಿತ್ರವು ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ನಾಗತಿಹಳ್ಳಿ ಚಂದ್ರಶೇಖರ್ – ರಮೇಶ್ ಅರವಿಂದ್ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸದ್ಯ...

Recommended For You

About the Author: Kanneshwar Naik

Leave a Reply

Your email address will not be published. Required fields are marked *