

‘ಯಾಕೆ ಇದ್ರಲ್ಲಿ ಕೆಲಸ ನಡೆಯುವುದಿಲ್ಲವಾ?’
ಎಂಬ ಗಾಂಧಿಯ ಪ್ರಶ್ನೆ
ಗಾಂಧೀಜಿಯವರನ್ನು ಕಾಣಲು ಬಂದವರು ತಮ್ಮ ಹೆಸರು, ಊರು, ಭೇಟಿಯ ಉದ್ಧೇಶಗಳನ್ನು ಒಂದು ಕಾಗದದಲ್ಲಿ ಬರೆದು ಗಾಂಧೀಜಿಯವರ ಸಹಾಯಕರ ಬಳಿ ಕಳಿಸಿಕೊಡಬೇಕಾಗಿತ್ತು. ಇಂತಹ ಕಾಗದವನ್ನು ಗಾಂಧೀಜಿಯವರ ಸಹಾಯಕರೇ ಒದಗಿಸುತ್ತಿದ್ದರು. ಆ ಕಾಗದ ಆಗಲೇ ಬೇರೆ ಉದ್ದೇಶಕ್ಕಾಗಿ ಬರೆದು ಉಪಯೋಗಿಸಿ ಉಳಿದ ಖಾಲಿ ಜಾಗವನ್ನು ಕತ್ತರಿಸಿ ಇಟ್ಟುಕೊಂಡಿದ್ದಾಗಿರುತಿತ್ತು. ‘ಇದಕ್ಕೆ ಒಳ್ಳೆಯ ಹಾಳೆಗಳನ್ನು ಇಟ್ಟುಕೊಳ್ಳಬೇಡವೇ’ ಎಂದು ಕೇಳಿದರೆ ಗಾಂಧೀಜಿಯವರು “ಭಾರತ ಬಡದೇಶ ಎಂದು ಗೊತ್ತಿಲ್ಲವೇನಪ್ಪಾ? ಯಾಕೆ ಇದ್ರಲ್ಲಿ ಕೆಲಸ ನಡೆಯುವುದಿಲ್ಲವಾ?” ಎಂದು ಪ್ರಶ್ನಿಸುತ್ತಿದ್ದರು.
ಇತ್ತೀಚೆಗೆ ಸಂಘಟನೆಯೊಂದರ ಜೊತೆಗೆ ಹಳ್ಳಿಗಳ ಅಧ್ಯಯನ ಮಾಡುವ ಕಾರಣದಿಂದ ಸೊರಬ ತಾಲ್ಲೂಕಿನ ಒಂದು ಹಳ್ಳಿಗೆ ಹೋದಾಗ ಈ ಪ್ರಸಂಗ ನೆನಪಾಯಿತು.
ಆ ಹಳ್ಳಿಯಲ್ಲಿ ಇದ್ದುದು ಕೇವಲ ಮೂರು ಮನೆಗಳು. ಆ ಮನೆಗಳು ಒಂದರ ಪಕ್ಕ ಒಂದು ಇರದೆ ಸುಮಾರು ಅರ್ಧ ಫರ್ಲಾಂಗ್ ದೂರದ ಅಂತರದಲ್ಲಿದ್ದವು. ಒಮ್ಮೆ ಆ ಹಳ್ಳಿಗೆ ಬಂದ ಜಿಲ್ಲಾ ಪಂಚಾಯ್ತಿ ಸದಸ್ಯರು ನಿಮ್ಮ ಹಳ್ಳಿಗೆ ಎಂಟು ಲಕ್ಷ ರೂಪಾಯಿಗಳ ಕಿರು ನೀರಾವರಿ ಯೋಜನೆ ಮಂಜೂರಾಗಿದೆ ಎಂದರು. ಇದನ್ನು ಕೇಳಿದ ಹಳ್ಳಿಯ ಜನರಿಗೆ ಖುಷಿಯೇನೂ ಆಗಲಿಲ್ಲ. ಏಕೆಂದರೆ ಮೂರು ಮನೆಗಳೂ ಸಾಕಷ್ಟು ಸ್ಥಿತಿವಂತವಾಗಿದ್ದು ಎಲ್ಲರ ಮನೆಗಳಲ್ಲೂ ಬೋರ್ವೆಲ್ಗಳಿದ್ದವು. ‘ನಮಗೆ ನೀರಿನ ಅಗತ್ಯವೇನೂ ಇಲ್ಲ. ಇದೇ ಹಣದಲ್ಲಿ ಮುಖ್ಯ ರಸ್ತೆಯಿಂದ ನಮ್ಮ ಹಳ್ಳಿಗೆ ಬರುವ ರಸ್ತೆಯನ್ನು ದುರಸ್ತಿಗೊಳಿಸಿಕೊಡಿ’ ಎಂದು ಆ ಮನೆಗಳವರು ತಮ್ಮ ಜಿಲ್ಲಾ ಪಂಚಾಯತ್ ಸದಸ್ಯರನ್ನು ಕೇಳಿಕೊಂಡರು. ಅದಕ್ಕೆ ಅವರು ‘ಈ ಯೋಜನೆ ಈಗಾಗಲೇ ಸರ್ಕಾರದಿಂದ ಮಂಜೂರಾಗಿ ಬಂದಿದ್ದು ಅದನ್ನು ಬದಲಾಯಿಸಲು ಸಾಧ್ಯವೇ ಇಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದರು. ಅಷ್ಡೇ ಅಲ್ಲ, ತಮ್ಮ ಆಪ್ತ ಗುತ್ತಿಗೆದಾರರೊಬ್ಬರಿಗೆ ಗುತ್ತಿಗೆ ನೀಡಿ ಹದಿನೈದು ದಿನಗೊಳಗಾಗಿ ಆ ಯೋಜನೆಯನ್ನು ಅನುಷ್ಟಾನಗೊಳಿಸಿದರು. ಕೆಮ್ಮಣ್ಣಿನ ಕೊರಕಲು ತುಂಬಿದ ರಸ್ತೆಯಲ್ಲಿ ನಿಂತು ಆ ಹಳ್ಳಿಯ ರೈತರೊಬ್ಬರು ಪುರಾತನ ಸ್ಮಾರಕದಂತೆ ನಿಂತ ಆ ನೀರಿನ ಟ್ಯಾಂಕನ್ನು ತೋರಿಸುತ್ತ ಅದರ ಈ ಹಿನ್ನೆಲೆಯನ್ನು ವಿಷಾದದಿಂದ ವಿವರಿಸಿದರು.
ಅದಕ್ಕೆ ಮಂಜೂರಾದ ಎಂಟು ಲಕ್ಷ ರೂಪಾಯಿಗಳು ಖರ್ಚಾಗಿದೆಯೇ ? ಅ ಕಿರು ನೀರಾವರಿ ಯೋಜನೆಯ ಗುಣಮಟ್ಟ ಹೇಗಿದೆ? ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಆ ಯೋಜನೆಯ ಅಗತ್ಯವೇ ಯಾರಿಗೂ ಇಲ್ಲ. ಇಲ್ಲಿಗೆ ಈ ಯೋಜನೆ ಮಂಜೂರು ಮಾಡಿದವರೂ , ನಿರ್ಮಿಸಿದ ಗುತ್ತಿಗೆದಾರರೂ, ಕಾಮಗಾರಿಯನ್ನು ‘ಪರಿಶೀಲಿಸಿ’ ತನ್ನ ಒಪ್ಪಿಗೆ ನೀಡಿದ ಇಂಜಿನಿಯರೂ ಎಲ್ಲರೂ ಯೋಜನೆಯ ಮುಕ್ಕಾಲು ಪಾಲು ಹಣವನ್ನು ನುಂಗಿಯೂ ಸುರಕ್ಷಿತ. ಪ್ರಶ್ನಿಸುವವರೇ ಇಲ್ಲದಿದ್ದಾಗ ಸಿಕ್ಕಿ ಬೀಳುವ ಪ್ರಶ್ನೆಯೇ ಇಲ್ಲ.
ಒಂದು ಊರಿನಲ್ಲಿ ಇದ್ದಕ್ಕಿದ್ದಂತೆ ರಸ್ತೆಯ ದುರಸ್ತಿ ,ಡಾಂಬರೀಕರಣ ಮತ್ತು ಕಲ್ಲುಚಪ್ಪಡಿಗಳನ್ನು ಬಳಸಿದ ಚರಂಡಿ ನಿರ್ಮಾಣವನ್ನು ಆರಂಭಿಸಲಾಯಿತು. ಆ ಊರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ಅದನ್ನು ಪ್ರಶ್ನಿಸಿದರು. ಏಕೆಂದರೆ ಮುಂದಿನ 2-3 ತಿಂಗಳುಗಳಲ್ಲೇ ಆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣ ಮಾಡುವ ಯೋಜನೆಗೆ ಮಂಜೂರಾತಿ ದೊರಕಿತ್ತು. ಅಗಲೀಕರಣದ ಸಂದರ್ಭದಲ್ಲಿ ಆ ಚರಂಡಿಯನ್ನು ಮುಚ್ಚಬೇಕಾಗುತ್ತಿತ್ತು. ರಸೆÀ್ತಯನ್ನು ಮೇಲ್ದರ್ಜೆಗೇರಿಸುವ ಸಂದರ್ಭದಲ್ಲಿ ಈಗ ಹಾಕಲಾಗುತ್ತಿರುವ ಡಾಂಬರನ್ನು ಕೀಳಬೇಕಾಗುತ್ತಿತ್ತು. ಸುಮಾರು ಐದು ಲಕ್ಷ ರೂಪಾಯಿಗಳ ದುರಸ್ತಿ, ಡಾಂಬರೀಕರಣ, ಚರಂಡಿ ನಿರ್ಮಾಣದ ಈ ತರಾತುರಿಯ ಹಿಂದೆ ಸಾರ್ವಜನಿಕ ಕಾಳಜಿ ಕಿಂಚಿತ್ತೂ ಇರಲಿಲ್ಲ. ಈ ಕಾಮಗಾರಿಯನ್ನು ಎಷ್ಟು ಕಳಪೆಯಾಗಿ ಮಾಡಿದರೂ ಅದರ ಗುಣಮಟ್ಟದ ಬಗ್ಗೆ ಯಾರೂ ತಕರಾರು ಎತ್ತುವಂತಿರಲಿಲ್ಲ. ಏಕೆಂದರೆ ಕೆಲವು ತಿಂಗಳುಗಳಲ್ಲೇ ಆ ರಸ್ತೆಯನ್ನು ಮೇಲ್ದರ್ಜೆಗೇರಿಸಿ ಅಗಲೀಕರಣ ಮಾಡುವ ಯೋಜನೆಯಡಿಯಲ್ಲಿ ಅದು ಮುಚ್ಚಿ ಹೋಗುತ್ತಿತ್ತು.
ಪ್ರಭಾವಿ ರಾಜಕಾರಣಿಗಳಿರುವ ಊರುಗಳಲ್ಲಿ ಇನ್ನೂ 40-50 ವರ್ಷಗಳ ಕಾಲ ಬಾಳಿಕೆ ಬರಬಹುದಾದ ಸಾರ್ವಜನಿಕ ಕಟ್ಟಡ ಇತ್ಯಾದಿಗಳನ್ನು ಧ್ವಂಸಗೊಳಿಸಿ ಕೋಟ್ಯಾಂತರ ರೂಪಾಯಿಗಳ ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತದೆ. ಮುಖ್ಯಮಂತ್ರಿಗಳ ಜಿಲ್ಲೆ, ಮಂತ್ರಿಗಳ ತಾಲ್ಲೂಕು ಎಂಬುದಕ್ಕಾಗಿ ಸಾವಿರಾರು ಕೋಟಿ ಆ ಪ್ರದೇಶಗಳಿಗೆ ಹರಿದು ಬರುತ್ತದೆ. ನಿಜಕ್ಕೂ ಈ ಯೋಜನೆಗಳಲ್ಲಿ ಅಗತ್ಯವಿದ್ದವೆಷ್ಟು? ಒಂದು ವೇಳೆ ಆ ಯೋಜನೆಗಳು ಅಗತ್ಯವಿವೆÉ ಎನಿಸಿzರೂ ಅಷ್ಟು ಪ್ರಮಾಣದ ಹಣ ಅಗತ್ಯವಿತ್ತೆ? ಜನರು ನಿತ್ಯ ಹೋಗಿ ಬರುವ ಅವರಿಗೆ ಕೊರತೆ ಎಂದೆನಿಸದ ಒಂದು ಸಾರ್ವಜನಿಕ ಉದ್ಯಾನವನವನ್ನು ಕೆಡವಿ ಕೋಟ್ಯಾಂತರ ರೂಪಾಯಿಗಳಲ್ಲಿ ಮತ್ತೆ ಕಟ್ಟಬೇಕೆ? ಉದ್ಯಾನವನಗಳಿಗಾಗಿ ಕೋಟಿ ಕೋಟಿ ವ್ಯಯಿಸುವಷ್ಟು ನಮ್ಮ ರಾಜ್ಯದ ಬೊಕ್ಕಸ ತುಂಬಿ ತುಳುಕುತ್ತಿದೆಯೇ? ಈ ಯೋಜನೆಗಳಿಗೆ ಬರುವ ಹಣದಲ್ಲಿ ನಿಜಕ್ಕೂ ಯೋಜನೆಗೆ ತಗಲುವ ವೆಚ್ಚವೆಷ್ಟು? ಆಭಿವೃದ್ಧಿಯ ಹೆಸರಿನಲ್ಲಿ ಬರುವ ಈ ಯೋಜನೆಗಳು ಎಷ್ಟು ವರ್ಷ ಸುಸ್ಥಿತಿಯಲ್ಲಿರುತ್ತವೆ?
ಈಗಲೂ ನಮ್ಮ ರಾಜ್ಯದ ಸಾವಿರಾರು ಹಳ್ಳಿಗಳಿಗೆ ಸಂಚರಿಸಲು ಯೋಗ್ಯವಾದ ರಸ್ತೆಗಳಿಲ್ಲ. ವಿಶ್ರಾಂತಿಗಾಗಿ ಬಸ್ ನಿಲ್ದಾಣಗಳಿಲ್ಲ. ಕನಿಷ್ಟ ಮಟ್ಟದ ಆಸ್ಪತ್ರೆಗಳಿಲ್ಲ. ಅಪೌಷ್ಟಿಕತೆಯಿಂದ ಸಾವಿರಾರು ಮಕ್ಕಳು ನರಳುತ್ತಿವೆ. ನೆರೆಸಂತ್ರ¸್ಥÀüರಿಗೆ ಮೂರು ವರ್ಷಗಳ ನಂತರವೂ ಒಂದು ಸಾಮಾನ್ಯ ಮನೆಯನ್ನು ಕಟ್ಟಿಸಿಕೊಡಲು ನಮ್ಮ ಸರ್ಕಾರಗಳಿಗೆ ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಸರ್ಕಾರ ಹಣಕಾಸಿನ ಕೊರತೆÉಯನ್ನು ಮುಂದುಮಾಡುತ್ತದೆ.
ಜನರು ಬಯಸದಿದ್ದರೂ ನೂರಾರು ಕೋಟಿ ಯೋಜನೆಗಳು ಒಂದು ಊರಿಗೆ ಬಂದು ಬೀಳುವುದರ ಮರ್ಮ ರಹಸ್ಯವಾಗೇನೂ ಇಲ್ಲ. ಮುಖ್ಯಮಂತ್ರಿಗಳ ಜಿಲ್ಲೆ, ಮಂತ್ರಿಗಳ ಊರು ಇತ್ಯಾದಿ ಊರಪ್ರೇಮದ ಮುಖವಾಡ ಹೊತ್ತು ಬರುವ ಬಹುಪಾಲು ಇಂತಹ ಈ ಯೋಜನೆಗಳು ಸೃಷ್ಟಿಯಾಗುವುದೇ ರಾಜಕಾರಣಿಗಳು ಹಾಗು ಅವರ ಹಿಂಬಾಲಕರ ಜೇಬು ತುಂಬಿಸಲು. ಉದ್ಯಾನವನದಲ್ಲಿ ಮುಖ್ಯವಾಗಿ ಇರಬೇಕಾಗಿರುವುದು ಮರಗಳು. ನಡೆದಾಡಲು ಸಾಮಾನ್ಯ ದಾರಿ ಸಾಕು. ಈ ದಾರಿಗೆ ಬೆಲೆಬಾಳುವ ಹೊಳೆಹೊಳೆಯುವ ಟೈಲ್ಸ್ಗಳೇಕೆ ಬೇಕು?
ಗಾಂಧೀಜಿ ಈಗ ಬದುಕಿದ್ದರೆ ಅವರ ಪ್ರತಿಕ್ರಿಯೆ ಹೇಗಿರುತಿತ್ತು? ದೇಶದ ಕೋಟ್ಯಾಂತರ ರೂಪಾಯಿ ಜನರ ತೆರಿಗೆಯ ಹಣ ಹೀಗೆ ವ್ಯಯವಾಗುತ್ತಿರುವುದನ್ನು ನೋಡಿದ್ದರೆ ಬಹುಷಃ ಅವರು ಎದೆಯೊಡೆದು ಸತ್ತುಬಿಡುತ್ತಿದ್ದರು ಎನಿಸುತ್ತದೆ.
ತÀಮ್ಮ ಊರಿಗೆ ಸಾವಿರಾರು ಕೋಟಿ ರೂಪಾಯಿ ಯೋಜನೆಗಳು ಬರುತ್ತಿರುವುದನ್ನು ಕಂಡು ಮುಗ್ಧವಾಗಿ ಸಂಭ್ರಮಿಸುವ ಜನರಿದ್ದಾರೆ. ಈ ಯೋಜನೆಗಳು ಎಷ್ಟು ಅಗತ್ಯವಿತ್ತು? ಈ ಯೋಜನೆಗಳು ನಿಜಕ್ಕೂ ಜನರ ಹಿತಕ್ಕಾಗಿ ಬಂದವುಗಳೇ? ಈ ಯೋಜನೆಗಳಿಗೆ ಬಿಡುಗಡೆಯಾಗುವ ಮೊತ್ತದಲ್ಲಿ ನಿಜವಾಗಿ ವ್ಯಯ ಮಾಡುವುದೆಷ್ಟು? ಯಾರ ಜೇಬಿಗೆ ಎಷ್ಟು ಹಣ ಹೋಗುತ್ತದೆ? ಎಂಬ ಪ್ರಶ್ನೆಗಳನ್ನು ಕೇಳುವ ವಿವೇಕ ಕಾಣೆಯಾಗಿದೆ. ಈ ಯೋಜನೆಗಳ ಅಸಲಿ ಮುಖಗಳು ನಿಚ್ಚಳವಾಗಿ ಗೊತ್ತಿದ್ದರೂ ಇವುಗಳು ನೀಡುವ ಅಗಾಧ ಪ್ರಮಾಣದ ಜಾಹೀರಾತುಗಳ ಕಾರಣದಿಂದ ಬಹುಪಾಲು ಮಾಧ್ಯಮಗಳು ಮೌನಕ್ಕೆ ಶರಣಾಗಿವೆ. ಇದಕ್ಕೆ ಇನ್ನೊಂದು ಮುಖವೂ ಇದೆ. ಈ ಯೋಜನೆಗಳನ್ನು ಪ್ರಶ್ನಿಸುವ ಮಾಧ್ಯಮ ಅಥವಾ ಜನರನ್ನು ‘ಇವರು ಊರಿನ ಅಭಿವೃದ್ಧಿಯ ವಿರೋಧಿಗಳು’ ಎಂಬ ಹಣೆಪಟ್ಟಿ ಹಚ್ಚಿ ಅವರನ್ನು ಹಿಮ್ಮೆಟ್ಟಿಸುವ ಪ್ರಯತ್ನವನ್ನು ಯೋಜನೆ ತರುವ ಹಿತಾಸಕ್ತಿಗಳು ಮಾಡುತ್ತಾರೆ. ಕೋಟಿ ಕೋಟಿ ಸಾರ್ವಜನಿಕ ಹಣ ಯಾರದೋ ಪಾಲಾಗುವುದು ನಮ್ಮ ಪ್ರಶ್ನೆಯಿಂದ ತಪ್ಪುವುದಾದರೆ ಇಂತಹ ಹಣೆಪಟ್ಟಿ ಬಂದರೂ ನಾವು ಹಿಂತೆಗೆಯಬೇಕಾಗಿಲ್ಲ.
ತಾಲ್ಲೂಕು ಪತ್ರಿಕೆಗಳಲ್ಲಿ ಮತ್ತು ಆಗಾಗ ಜಿಲ್ಲಾ ಪತ್ರಿಕೆಗಳಲ್ಲಿ ಅಲ್ಲಿನ ಶಾಸಕರನ್ನು, ಜಿಲ್ಲಾ ಪಂಚಾಯತ್ ಸದಸ್ಯರನ್ನು ಅಭಿನಂದಿಸಿ ಪ್ರತಿನಿತ್ಯವೆಂಬಂತೆ ದೊಡ್ಡ ದೊಡ್ಡ ಜಾಹೀರಾತುಗಳು ಪ್ರಕಟವಾಗುತ್ತವೆ. ಮೋರಿ, ರಸ್ತೆ, ಕುಡಿಯುವ ನೀರು, ಇತ್ಯಾದಿ ಕಾಮಗಾರಿಗಳನ್ನು ತಮಗೆ ಮಂಜೂರು ಮಾಡಿಸಿಕೊಟ್ಟ ಸದರಿ ಜನಪ್ರತಿನಿಧಿಗಳನ್ನು ಕಾಮಗಾರಿಗಳನ್ನು ಪಡೆದ ಗ್ರಾಮದ ಜನರು ಅಭಿನಂಧಿಸಿದಂತೆ ಈ ಜಾಹಿರಾತುಗಳು ಇರುತ್ತವೆ. ವಾಸ್ತವವಾಗಿ ನೂರಕ್ಕೆ ತೊಂಬತ್ತರಷ್ಟು ಇಂತಹ ಜಾಹೀರಾತುಗಳನ್ನು ಜನಪ್ರತಿನಿಧಿಗಳೇ ಪ್ರಕಟಿಸುತ್ತಾರೆ. ಈ ಜಾಹೀರಾತುಗಳಿಗೆ ಹಣ ಸಂದಾಯ ಮಾಡುವವರು ಮಾತ್ರ ಕಾಮಗಾರಿಗಳನ್ನು ಗುತ್ತಿಗೆ ಹಿಡಿದ ಗುತ್ತಿಗೆದಾರರು. ಈ ಜಾಹೀರಾತುಗಳ ಮುಖ್ಯ ಅಂಶವೇನೆಂದರೆ ಈ ಕಾಮಗಾರಿಗಳು ಎಷ್ಟು ಲಕ್ಷ , ಕೋಟಿ ರೂಪಾಯಿಗಳದ್ದು ಎಂಬುದನ್ನು ದೊಡ್ಡ ಅಕ್ಷರಗಳಲ್ಲಿ ಮುದ್ರಿಸಲಾಗಿರುತ್ತದೆ. ಎರಡು ಪ್ರಮುಖ ಗುಪ್ತ ಕಾರ್ಯಸೂಚಿಗಳನ್ನು ಈ ಜಾಹೀರಾತುಗಳು ತಮ್ಮ ಒಡಲಲ್ಲಿ ಇಟ್ಟುಕೊಂಡಿರುತ್ತವೆ. ಜನಪ್ರತಿನಿಧಿಯ ಮತಬ್ಯಾಂಕನ್ನು ಉಳಿಸಿಕೊಳ್ಳುವುದು ಮತ್ತು ಹೆಚ್ಚಿಸಿಕೊಳ್ಳುವುದು ಮೊದಲ ಉದ್ದೇಶ. ಇದೇನು ಅನೈತಿಕವೂ ಅಲ್ಲ, ಅಪಾಯಕಾರಿಯೂ ಅಲ್ಲ. ಆದರೆ ಗುಣಮಟ್ಟದ ಬಗ್ಗೆ ಪ್ರಶ್ನಿಸದೇ ಗುತ್ತಿಗೆದಾರರು ನಿರ್ಮಿಸುವ ಕಾಮಗಾರಿಯನ್ನು ಮೊದಲಿಗೇ ಒಪ್ಪಿಕೊಂಡುಬಿಡುವ ಮನಸ್ಥಿತಿಯನ್ನು ಗ್ರಾಮದ ಜನರಲ್ಲಿ ಇದು ಮೂಡಿಸಿಬಿಡುತ್ತದೆ. ಇದು ಬಹಳ ದೊಡ್ಡ ಅಪಾಯ. ಕೋಟ್ಯಾಂತರ ಹಣವೇನೋ ಹಳ್ಳಿಯ ಕಾಮಗಾರಿಗಳಿಗಾಗಿ ಹರಿದು ಬರುತ್ತವೆ. ಆದರೆ ನಿಜಕ್ಕೂ ಅದರಲ್ಲಿ ಬಳಕೆಯಾಗುವುದೆಷ್ಟು? ಕೆಲವು ಹಳ್ಳಿಗಳಲ್ಲಾದರೂ ಇದನ್ನು ಪ್ರಶ್ನಿಸುವ ಪ್ರಜ್ಞಾವಂತರು ಈಗಲೂ ಇದ್ದಾರೆ. ಹಾಗಾಗಿ ಕಳಪೆ ಕಾಮಗಾರಿಗಳ ವಿರುದ್ಧ ಹಳ್ಳಿಗಳಲ್ಲಿ ಆಗಾಗ ಪ್ರತಿಭಟನೆಗಳು ನಡೆಯುತ್ತಿರುತ್ತವೆ. ಜಿಲ್ಲಾ ಮತ್ತು ದೊಡ್ಡ ನಗರಗಳ ಪರಿಸ್ಥಿತಿ ಮಾತ್ರ ತೀರಾ ಶೋಚನೀಯವಾಗಿದೆ. ಇಲ್ಲಿ ಜನಪ್ರತಿನಿಧಿಗಳು ಮತ್ತು ಗುತ್ತಿಗೆದಾರರು ಸರ್ವಸ್ವತಂತ್ರರು! ಎಷ್ಟೋ ಯೋಜನೆಗಳು ಬರೀ ಕಡತಗಳಲ್ಲಿ ಮಾತ್ರ ಜೀವಂತವಾಗಿರುತ್ತವೆ. ಈ ‘ಅಭಿವೃದ್ಧಿ’ಗಳನ್ನು ತಡೆಯುವುದು ಹೇಗೆ?
ಕೆಲವು ತಿಂಗಳ ಹಿಂದೆ ಶಿವಮೊಗ್ಗ ನಗರಸಭೆಯಲ್ಲಿ ತಮಾಷೆಯೊಂದು ನಡೆಯಿತು. ನಗರಸಭಾಧ್ಯಕ್ಷರು ತಮ್ಮ ಅಧಿಕಾರದ ಅವಧಿ ಮುಗಿದ ನಂತರ ಒಪ್ಪಂದದಂತೆ ತಮ್ಮ ಅಧಿಕಾರವನ್ನು ತಮ್ಮ ಪಕ್ಷದ ಇನ್ನೊಬ್ಬರಿಗೆ ಬಿಟ್ಟುಕೊಡಬೇಕಿತ್ತು. ಆದರೆ ಅವರು ಅಧಿಕಾರ ಬಿಟ್ಟು ಕೊಡಲು ನಿರಾಕರಿಸಿದರು. ಅದಕ್ಕೆ ಕಾರಣವನ್ನು ಅವರು ಪ್ರಾಮಾಣಿಕವಾಗಿ ನೀಡಿದರು. ‘ನಗರಸಭೆಗೆ ರಾಜ್ಯ ಸರ್ಕಾರದಿಂದ 25 ಕೋಟಿ ಅನುದಾನ ಬಂದಿದ್ದು ಇದರ ಕಾಮಗಾರಿ ಮುಗಿದು ಹಣ ಖರ್ಚಾಗುವವರೆಗೆ ನಾನು ಅಧಿಕಾರ ಬಿಟ್ಟುಕೊಡುವುದಿಲ್ಲ’. ನಾವು ತಿಳಿಯಲಾದಂತೆ ಜನಪ್ರತಿನಿಧಿಗಳು ಯೋಜನೆಗಳನ್ನು ಕೇವಲ ರೂಪಿಸುತ್ತಿಲ್ಲ. ಅಧಿಕಾರಿಗಳ ಜವಾಬ್ದಾರಿಯಾದ (ಕಾರ್ಯಾಂಗದ) ಯೋಜನೆಗಳನ್ನು ಕಾರ್ಯಗತಗೊಳಿಸುವ ಕೆಲಸವನ್ನೂ ಅವರು ಮಾಡುತ್ತಿದ್ದಾರೆ. ಕಾರ್ಯಾಂಗದ ಕೆಲಸವನ್ನೂ ಬೇನಾಮಿ ಗುತ್ತಿಗೆದಾರರ ಹೆಸರಿನಲ್ಲಿ ಮಾಡಿಬಿಡುವ ಜನಪ್ರತಿನಿಧಿಗಳ ಅತ್ಯುತ್ಸಾಹಕ್ಕೆ ಕಾರಣ ಎಲ್ಲರಿಗೂ ತಿಳಿದಿರುವುದೇ ಆಗಿದೆ. ನಮ್ಮ ಕಾನೂನು ಇದನ್ನು ಕಾನೂನುಬಾಹೀರ ಎನ್ನುತ್ತದೆ. ಕಾನೂನು ಉಲ್ಲಂಘನೆಯನ್ನು ಈಗ ಜನಪ್ರತಿನಿಧಿಗಳು ‘ಕಾನೂನು ಪ್ರಕಾರವೇ’ ಮಾಡುತ್ತಿದ್ದಾರೆ. ಈ ಕಾರಣದಿಂದಲೇ ಜಿಲ್ಲಾ ಪಂಚಾಯತ್, ನಗರಸಭೆಗಳಂತಹ ಸ್ಥಳೀಯ ಆಡಳಿತ ವ್ಯವಸ್ಥೆಗಳಲ್ಲಿ 11-12-18 ತಿಂಗಳುಗಳ ಅವಧಿಗೆ ಆಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಅಧಿಕಾರವನ್ನು ಜನಪ್ರತಿನಿಧಿಗಳು ಹಂಚಿಕೊಳ್ಳುವ ಸಮಯ ಸಾರ್ವಜನಿಕ ಹಣವನ್ನು ಕೊಳ್ಳೆ ಹೊಡೆಯಲು ಅವರು ಪರಸ್ಪರ ಮಾಡಿಕೊಂಡಿರುವ ಒಪ್ಪಂದವೇನೋ ಎಂದು ಜನ ಅನುಮಾನಿಸುವಂತಾಗಿದೆ.
ಗ್ರಾಮ ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಗಳಲ್ಲಿನ ವ್ಯವಹಾರಗಳ ಮೇಲೆ ಕಣ್ಗಾವಲಿಡಲು ಕೇಂದ್ರ ಸರ್ಕಾರವೇ ನೇಮಿಸಿದ ಒಂಬುಡ್ಸ್ಮನ್ಗಳು ಪ್ರತಿಯೊಂದು ಜಿಲ್ಲಾ ಪಂಚಾಯತ್ ಕಛೇರಿಗಳಲ್ಲೂ ಇರುತ್ತಾರೆ. ಆದರೆ ಈ ಒಂಬುಡ್ಸ್ಮನ್ಗಳು ಕೇವಲ ನಾಮಕಾವಸ್ಥೆಗೆ ಅಷ್ಟೆ. ಇವರು ಪಂಚಾಯತ್ಗಳಲ್ಲಿನ ಅವ್ಯವಹಾರಗಳನ್ನು ಬಯಲಿಗೆಳೆದ ಕನಿಷ್ಟ ಉದಾಹರಣೆಗಳು ಸಿಗುವುದಿಲ್ಲ.
ನೇರವಾಗಿ ಶಾಸಕರಿಗೆ, ಸಂಸದರಿಗೆ ಇಂತಿಷ್ಟು ಲಕ್ಷವೆಂದು ಸರ್ಕಾರ ನಿಧಿ ಕೊಡಲು ಆರಂಭಿಸಿದಾಗ ಅದನ್ನು ಕೆ.ವಿ.ಸುಬ್ಬಣ್ಣ ಬಲವಾಗಿ ವಿರೋಧಿಸಿದ್ದರು. ಈಗ ಈ ನಿಧಿ ಶಾಸಕರಿಗೆ ಒಂದು ಕೋಟಿಯಿದ್ದರೆ ಸಂಸತ್ ಸದಸ್ಯರಿಗೆ ಐದು ಕೋಟಿ ರೂಪಾಯಿಗಳಾಗಿವೆ. ಶಾಸನವನ್ನು ರೂಪಿಸಿ ಜಾರಿಗೆ ತರುವುದಷ್ಟೆ ಜನಪ್ರತಿನಿಧಿಗಳ ಕೆಲಸ. ಕಾರ್ಯಾಂಗದ ಕೆಲಸವನ್ನೂ ಶಾಸಕರು,ಸಂಸದರಿಗೆ ನೀಡಿದರೆ ಆಗುವ ಅಪಾಯದ ಬಗ್ಗೆ ಸುಬ್ಬಣ್ಣ ಎಚ್ಚರಿಸಿದ್ದರು. ಒಬ್ಬ ಸಂಸದ ಅಥವಾ ಶಾಸಕ ತನ್ನ ನಿಧಿಯಲ್ಲಿ ನಿರ್ಮಿಸಿದ ಕಾಮಗಾರಿಯನ್ನು ಯಾವ ಅಧಿಕಾರಿ ತಾನೆ ಪ್ರಶ್ನಿಸಲು ಸಾಧ್ಯ ಎಂದವರು ಕೇಳಿದ್ದರು. ಸುಬ್ಬಣ್ಣನವರ ಅನುಮಾನ ನಿಜವಾಗಿದೆ. ಊದಾಹರಣೆಗಾಗಿ ಸಂಸದರ ನಿಧಿಯಲ್ಲಿ ಕಟ್ಟಿಸುವ ಒಂದು ಮಿ£ ಬಸ್ ನಿಲ್ದಾಣಕ್ಕೆ ಒಂದೂವರೆ ಲಕ್ಷ ಖರ್ಚಾದರೆ ಯೋಜನೆಯ ವೆಚ್ಚ ಆರೂವರೆ ಲಕ್ಷವಾಗಿರುತ್ತದೆ. ಶಾಸಕರು ಮತ್ತು ಸಂಸದರು ತಮ್ಮ ನಿಧಿಗೆ ಬಂದ ಹಣದಿಂದ ನಿರ್ಮಿಸಿದ ಕಾಮಗಾರಿಗಳನ್ನು ಪರಿಶೀಲಿಸುವ, ಖರ್ಚಾದ ಹಣಕ್ಕಿಂತಲೂ ಹೆಚ್ಚು ವ್ಯಯಿಸಿದ್ದರೆ ಪ್ರಶ್ನಿಸುವ, ಕಳಪೆಯಾಗಿದ್ದರೆ ಅದನ್ನು ವರದಿ ಮಾಡುವ ಅಧಿಕಾರಿಗಳು ಎಷ್ಟು ಜನರಿದ್ದಾರೆ? ಶಾಸಕರು ಮತ್ತು ಸಂಸದರು ಅಧಿಕಾರಿಗಳ ಪಾಲಿಗೆ ಸರ್ವಾಧಿಕಾರಿಗಳೇ. ಭ್ರಷ್ಟ ಅಧಿಕಾರಿವರ್ಗ ತಮ್ಮ ಪಾಲನ್ನು ತೆಗೆದುಕೊಂಡು ಸುಮ್ಮನಾಗುತ್ತದೆÉ. ಪ್ರಾಮಾಣಿಕ ಅಧಿಕಾರಿಗಳನ್ನು ಭ್ರಷ್ಟ ಶಾಸಕರು ತಮ್ಮ ಕ್ಷೇತ್ರದಲ್ಲಿ ಇರಿಸಿಕೊಳ್ಳುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಸರಳ ಬಹುಮತದÀ ಅತಂತ್ರ ಸರ್ಕಾರಗಳೇ ರಚನೆಯಾಗುತ್ತಿದ್ದು ಸರ್ಕಾರ ನಡೆಸುವವರಿಗೆ ಒಬ್ಬೊಬ್ಬ ಶಾಸಕ ಮತ್ತು ಒಬ್ಬೊಬ್ಬ ಸಂಸದನ ಮರ್ಜಿ ಕಾಯಬೇಕಾದ ಅನಿವಾರ್ಯ ಪರಿಸ್ಥಿತಿಯೂ ನಿರ್ಮಾಣವಾಗಿಬಿಟ್ಟಿದೆ.

ಸಂಸತ್ ಸದಸ್ಯರು, ಶಾಸಕರು, ಜಿಲ್ಲಾ ಪಂಚಾಯತ್ ಸದಸ್ಯರು ಹೀಗೆ ಯಾವ ಹಂತದ ಜನಪ್ರತಿನಿಧಿಗಾದರೂ ನೇರವಾಗಿ ಅನುದಾನ ನೀಡುವ ಪದ್ಧತಿಯನ್ನು ಪುನರ್ ವಿಮರ್ಶೆ ಮಾಡಬೇಕು. ಯಾವುದೇ ಬಗೆಯ ಅನುದಾನವಾದರೂ ಇರಲಿ,ಅವೆಲ್ಲವೂ ಜನರ ತೆರಿಗೆ ಹಣವೇ. ಈ ಹಣದ ಬಳಕೆಗೆ ಉತ್ತರದಾಯಿತ್ವವಿರಬೇಕು. ವಿವಿಧ ಅನುದಾನಗಳಿಂದ ಊರಿಗೆ ಮಂಜೂರಾಗುವ ಸಾರ್ವಜನಿಕ ಕಾಮಗಾರಿಗಳನ್ನು ಅದೇ ಊರಿನ ಗುತ್ತಿಗೆದಾರರಿಗೆ ವಹಿಸುವತ್ತ ಚಿಂತಿಸಬೇಕು. ತಮ್ಮ ಊರಿನ ಕಾಮಗಾರಿ ಚೆನ್ನಾಗಿರಬೇಕು ಅನ್ನುವ ಕಾಳಜಿ, ಅದೂ ಇಲ್ಲದಿದ್ದರೆ ಕಾಮಗಾರಿ ಕಳಪೆಯಾದರೆ ಊರ ಜನ ತನ್ನನ್ನು ಪ್ರಶ್ನಿಸುತ್ತಾರೆ ಎಂಬ ಭಯವಾದರೂ ಆತನನ್ನು ಕಾಡಬಹುದು.
ಒಂದು ಊರಿಗೆ ಮಂಜೂರಾಗುವ ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿ ಹಣ ಬಿಡುಗಡೆಗೆ ಒಪ್ಪಿಗೆ ಕೊಡುವ ಊರಿನ ವಿವಿಧ ಸಮುದಾಯಗಳನ್ನೊಳಗೊಂಡ ಸಮಿತಿಯನ್ನು ರಚಿಸಬಹುದು. ಹಳ್ಳಿಯ ಸರ್ಕಾರಿ ಶಾಲೆಯ ಅಭಿವೃದ್ಧಿಯ ಉಸ್ತುವಾರಿ ನೋಡಿಕೊಳ್ಳುವ ಶಾಲಾಭಿವೃದ್ಧಿ ಸಮಿತಿಯಿದ್ದಂತೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ನಾಗರಿಕರ ಸಮಿತಿಗಳಂತೆ ಈ ಸಮಿತಿಗಳ ರಚನೆ ಮಾಡಬಹುದು. ಮುಖ್ಯವಾಗಿ ಅಗತ್ಯವಾಗಿರುವ ಸಾರ್ವಜನಿಕ ಕಾಮಗಾರಿಗಳಿಗಾಗಿ ಒತ್ತಾಯಿಸುವ ರೀತಿಯಲ್ಲಿಯೇ ಸುಸ್ಥಿತಿಯಲ್ಲಿರುವ ಸಾರ್ವಜನಿಕ ರಸ್ತೆ,ಕಟ್ಟಡ ಇತ್ಯಾದಿಗಳನ್ನು ಧ್ವಂಸಗೊಳಿಸಿ ರಾಜಕಾರಣಿಗಳು ಹಾಗು ಅವರ ಹಿಂಬಾಲಕರ ಜೇಬು ತುಂಬಿಸಲು ಹೊಸ ಯೋಜನೆಗಳನ್ನು ಅನುಷ್ಟಾನಗೊಳಿಸುವುದರÀ ಕುರಿತೂ ಗಂಭೀರ ಚಿಂತನೆ ನಡೆಯಬೇಕಾಗಿದೆ. ಬಹುಮುಖ್ಯವಾಗಿ ಪ್ರತಿಯೊಂದನ್ನು ಕೆಡಹುವ ಮುನ್ನ ‘ಯಾಕೆ ಇದ್ರಲ್ಲಿ ಕೆಲಸ ನಡೆಯುವುದಿಲ್ಲವಾ?’ ಎಂಬ ಗಾಂಧಿಯ ಪ್ರಶ್ನೆ ನಮ್ಮನ್ನು ಕಾಡಬೇಕಾಗಿದೆ.
- ಸರ್ಜಾಶಂಕರ ಹರಳಿಮಠ




_______________________________________________________________
ಮಾನ್ಯರೆ, ನಮ್ಮ ಮಾಧ್ಯಮ ಕ್ಷೇತ್ರದ ಸಮಾಜಮುಖಿ ನಡೆ ಈಗ ಕಾಲು ಶತಮಾನ ದಾಟಿದೆ. ಈ ಪಯಣದಲ್ಲಿ samajamukhi.net ನ್ಯೂಸ್ ಪೋರ್ಟಲ್ samaajamukhi & samajamukhinews ಯೂಟ್ಯೂಬ್ ಚಾನೆಲ್ ಗಳು ಹಾಗೂ ಸಮಾಜಮುಖಿ & samaajamukhi.net ಫೇಸ್ಬುಕ್ ಪೇಜ್ ಗಳು ಸೇರಿವೆ. ಈ ಎಲ್ಲಾ ಘಟಕಗಳ ನಿರ್ವಹಣೆ & ನಿರಂತರತೆಗೆ ನಿಮ್ಮ ಸಹಕಾರ ಮುಖ್ಯ. ನಮ್ಮ ಸುದ್ದಿ, ವಿಡಿಯೋ, ಸ್ಟೋರಿ ಗಳನ್ನು like, share ಹಾಗೂ subscribe ಮಾಡಿ ಸಹಕರಿಸುತ್ತಾ ನಮ್ಮ ಈ ಮಾಧ್ಯಮ ಸಮೂಹದ ಸಿದ್ಧಾಪುರ ಕೆನರಾ ಬ್ಯಾಂಕ್ ಖಾತೆ samajamukhi 03082200081658 ಅಕೌಂಟ್ಗೆ ಮತ್ತು ನಮ್ಮ gpay & phone pay Acc No 9740598884 ಗೆ ಆರ್ಥಿಕ ನೆರವು ನೀಡುತ್ತಾ ನಮ್ಮ ಜೊತೆಯಾಗಲು ಕಳಕಳಿಯ ವಿನಂತಿ…….. ಇಂತಿ ನಿಮ್ಮ Kannesh Kolsirsi
_______________________________________________________________






