

ಈಗೆಲ್ಲಿವೆ ಚಿವ್, ಚಿವ್ ಗುಬ್ಬಿ ?
ಇತ್ತೀಚೆಗೆ ನಿಧನರಾದ ಮುಂಡಗೋಡ ಮೂಲದ ಶಿರಸಿಯ ಪಿ.ಡಿ.ಸುದರ್ಶನ್ ಒಮ್ಮೆ ಗುಬ್ಬಿಗಳ ಬಗ್ಗೆ ಮಾತನಾಡುತ್ತಾ ‘ಮೊಬೈಲ್ ಸಿಗ್ನಲ್, ಟಾವರ್‍ರೇಡಿಯೇಷನ್ ಗಳಿಂದಾಗಿ ಗುಬ್ಬಿಸಂತತಿನಶಿಸುತ್ತಿದೆ. ಪ್ರತಿಮನೆಯ ನೀರವತೆಯನ್ನು ಚಿಂವ್, ಚಿಂವ್ ಶಬ್ಧದಿಂದ ಜೀವಂತವಿರಿಸುತ್ತಿದ್ದ ಗುಬ್ಬಿಗಳ ಕಥೆ ವ್ಯಥೆಯೆನಿಸುತ್ತಿದೆ’ ಎಂದಿದ್ದರು.
ನನ್ನ ಮನಸ್ಸು ಬಾಲ್ಯಕ್ಕೆ ನೆಗೆದಿತ್ತು. ನಮ್ಮ ಮನೆಯ ಮಧ್ಯ ಕೋಣೆಯ ಸಾಲು ಸಾಲು ಧರ್ಮಸ್ಥಳದ ಮಂಜು, ಅಣ್ಣಪ್ಪ, ಇಡಗುಂಜಿ ಗಣಪ, ಮುರ್ಡೆಶ್ವರದ ಮಾತೋ(ಭಾ)ಬಾರ ಚಂದ್ರಗುತ್ತಿ ರೇಣುಕಮ್ಮ, ಕೊಡಲಿಯ ಪರಶುರಾಮ! ಇಂಥ ನಿಷ್ಪ್ರಯೋಜಕ, ಅಮಾಯಕರ ಚಿತ್ರಪಟದ ಪೊಟರೆಯಂಥ ಜಾಗವನ್ನು ಗುಬ್ಬಿಗಳು ತಮ್ಮಆವಾಸಸ್ಥಾನವನ್ನಾಗಿಸಿಕೊಂಡಿದ್ದವು.
ಜಗಲಿಯ ಚಿತ್ರಪಟಗಳ ಹಿಂದೆ ಕೆಲವು ಸಂದಿಗೊಂದಿಗಳಲ್ಲಿ ವಾಸಿಸುತ್ತ ಕೊಟ್ಟಿಗೆ, ಕಟ್ಟಿಗೆ ಮನೆ, ಹೊಡಸಲು ಎಲ್ಲೆಂದರಲ್ಲಿ ಕಂಡುಬರುತ್ತಿದ್ದ ಗುಬ್ಬಿಗಳ ರಗಳೆಗಳು ಮಾತ್ರ ನಮ್ಮ
ಜಗಲಿಯಲ್ಲೇ
ವಿಪರೀತವಾಗಿದ್ದವು, ಜನ,
ಶಬ್ಧವಿಲ್ಲದ ಸಮಯದಲ್ಲಿ ಚಿ..ಂವ್‍ಗುಟ್ಟುತ್ತ, ಮನುಷ್ಯ ಪ್ರಾಣಿ ಕಾಣುತ್ತಲೇ ಗೊಂದಲಗೊಂಡು ತುಸು ಹೆಚ್ಚೇ ಚಿಂವ್, ಚಿಂವ್ ಎನ್ನುತ್ತಿದ್ದವು. ಕೆಲವೊಮ್ಮೆ ಮನುಷ್ಯರಿಗೆ ಹೆದರಿ ಹಾರುತ್ತಾ ಗೂಡು, ಮೊಟ್ಟೆ, ಮರಿಗಳನ್ನೇ ನೆಲಕ್ಕೆ ಬೀಳಿಸಿಕೊಂಡು ಗೋಳಾಡುವಾಗ ನಮಗೆ ಪಾಪ ಎನಿಸಿದ್ದಿದೆ.
ಮಳೆಗಾಲದಲ್ಲಿಮಂದವಾಗಿ, ಚಳಿ, ಬೇಸಿಗೆಅವಧಿಯಲ್ಲಿ ದಿನವಿಡೀ ಚಿವ್‍ಗುಟ್ಟುತ್ತಿದ್ದ ಈ ಗುಬ್ಬಿಗಳು ಮೌನವಾಗಿರುತ್ತಿದ್ದವೋ ? ರಾತ್ರಿ ಸಮಯಕ್ಕೆ ಗುಳೆ ಹೋಗುತ್ತಿದ್ದವೋ?. ದಿನದಲ್ಲಿ ಆಗೀಗ ಚಿಂವ್, ಚಿರ್-ಪುರ್ ಮಾಡುತಿದ್ದ ಗುಬ್ಬಿಗಳು. ರಾತ್ರಿ ಮೌನ ವೃತಕ್ಕೆ ಶರಣಾಗುತಿದ್ದವೋ! ಗೊತ್ತಿಲ್ಲ.
ನಮ್ಮ ಸಂಗಾತಿಗಳಂತೆ ಜತೆಗಿದ್ದು, ಈಗ ನೌಕರಿಗಾಗಿ ಊರು ಬಿಟ್ಟಿರುವ ಸ್ನೇಹಿತರಂತೆ ಅದೃಶ್ಯವಾಗಿರುವ ಗುಬ್ಬಿಗಳು ರಜೆಗೆ ಬರುವ ಸ್ನೇಹಿತರಂತೆ ಆಗೀಗ ಬಂದು ಹೋಗುತ್ತಿದ್ದರೆ ಅವುಗಳು ಬದುಕಿವೆ ಎಂಬುದನ್ನಾದರೂ ಸಮಾಧಾನಕ್ಕೆ ಬಳಸಿಕೊಳ್ಳಬಹುದಿತ್ತು. ಆದರೆ, ಟಾರ್ ರಸ್ತೆ ಆಗುವ ಮುನ್ನವಿದ್ದ ಮನೆ ಮುಂದಿನ ದಾಸವಾಳದ ಗಿಡದಂತೆ, ಗುಬ್ಬಿಗಳು ನಾಪತ್ತೆ.
ಮರದ ಬಡ್ಡೆ ಬುಡದ ಮೇಲೆ ಶೋ ಹೂವಿನ ಗಿಡದ ಕೊಂಬೆಯಂತೆ ತಲೆಎತ್ತಿ ನಿಂತು. ತನ್ನ ಮೇಲಿನ ಕೊಂಬೆಯ ಮರೆಯಲ್ಲಿ ಮಳೆ, ಬಿಸಿಲು, ಗಾಳಿಗೆ ಬಚ್ಚಿಟ್ಟುಕೊಂಡಂತೆ ಸುಮ್ಮನೆ ಕೂತಿರುತ್ತಿದ್ದ ದಾಸವಾಳದ ರೆಂಬೆಯ ಗುಬ್ಬಿಗೂಡು ಈಗಿಲ್ಲ.
ಗುಬ್ಬಿಗಳು ಗಿಡಗಳ ಬೇಲಿ ಬೋನ್ಸಾಯಿಯಂತಹ ದಾಸವಾಳದ ಗಿಡಗಳು, ಇವೆಲ್ಲ ಜೀವಪ್ರಬೇಧಗಳ ಕ್ರಮೇಣ ನಾಶದ ಸಂಕೇತಗಳೆ ? ಅರ್ಥವಾಗುತ್ತಿಲ್ಲ.
ಮನೆ ಬೇಲಿಯ ನಿತ್ಯಪುಷ್ಪದ ಮೂರ್ನಾಲ್ಕು ದಾಸವಾಗಳು ಟಾರ್ ರಸ್ತೆ-ಗಟಾರಕ್ಕೆ ಬಲಿಯಾಗಿವೆ. ಅವುಗಳಲ್ಲಿರುತ್ತಿದ್ದ ಗುಬ್ಬಿ-ಗುಬ್ಬಿಗೂಡುಗಳು ಎಲ್ಲಿವೆ? ಎಂದು ಯಾರನ್ನು ಕೇಳೋಣ.
ಜಗತ್ತಿನಾದ್ಯಂತ ಬಹುತೇಕ ದೇಶಗಳಲ್ಲಿ ಜನವಸತಿ ಇರುವೆಡೆ ಮಾತ್ರ ಕಂಡುಬರುವ ಈ ಮನೆ ಗುಬ್ಬಿಗಳು ಮನಮೋಹಕವಾಗಿ ಕಾಣುವುದು, ಅವುಮಾಡುವ ನೀರುಸ್ನಾನ, ಧೂಳುಸ್ನಾನಗಳ ಸಮಯದಲ್ಲಿ.
ಅವು ನೈಸರ್ಗಿಕ ಅನುಕೂಲತೆಗಳಿಗಿಂತ ಹೆಚ್ಚಾಗಿ ಮಾನವ ನಿರ್ಮಿತ ಸರಳ ಜಾಗ, ನೈಸರ್ಗಿಕ ಗಿಡಗಂಟಿಗಳ ಮರೆಯಲ್ಲೇ ಗೂಡು ಕಟ್ಟುವುದನ್ನು ಬಯಸುತ್ತವೆ. ಸರಿಸುಮಾರು ಹದಿನೈದು ವರ್ಷ ಬದುಕುವ ಗುಬ್ಬಿಗಳು ಮಾನವನ ಆಸೆ, ಲೈಗಿಕತೆಯ ಸಂತ್ರಪ್ತತೆಯ ಸಂಕೇತವಂತೆ!
.ಜಾಗತೀಕರಣ, ಯಾಂತ್ರಿಕರಣ ಮನುಷ್ಯನ ಮನುಷ್ಯತ್ವ ಕೊಂದಿದೆ. ಮಾನವರ ನಡುವಿನ ನಂಬಿಕೆ, ಪ್ರೀತಿ, ವಿಶ್ವಾಸಗಳಿಗೆ ಕೂಡ ಜಾಗತೀಕರಣದ ಕೊಳ್ಳುಬಾಕತನ, ದುರಾಸೆ ದುಬಾರಿಯಾಗಿ ಪರಿಣಮಿಸಿದೆ. ಈ ಸಮಯದಲ್ಲಿ ಮನುಷ್ಯನ ಒಡನಾಡಿಗಳಾಗಿದ್ದ ಗುಬ್ಬಿಗಳು ಹೋದವೆಲ್ಲಿ? ಎಂದು ಯೋಚಿಸಿದರೆ.
ಅವುಗಳನ್ನು ಮೊಬೈಲ್, ಟಿ.ವಿಗಳ ರೇಡಿಯೇಷನ್ ಮನೆಯಿಂದ ದೂರಮಾಡುವಲ್ಲಿ ಯಶಸ್ವಿಯಾಗಿದೆ. ಟಿ.ವಿ ಮೊಬೈಲ್ ಸೇರಿದಂತೆ ಆಧುನಿಕ ಯಂತ್ರೋಪಕರಣಗಳ ಅತಿಯಾದ ಬಳಕೆ ಮನುಷ್ಯ ಸ್ನೇಹಿ ಗುಬ್ಬಿಗಳ ಮನುಷ್ಯ ಪ್ರೀತಿಯನ್ನು ದೂರವಾಗಿಸಿದೆ.
ಗುಬ್ಬಿಗಳ ಕಣ್ಮರೆಗೆ ಮುಖ್ಯಕಾರಣ ಮೊಬೈಲ್, ಟಿ.ವಿ, ಡಿಟಿಎಚ್. ರೇಡಿಯೇಷನ್‍ಗಳಾದರೆ, ಅವುಗಳೊಂದಿಗೆ ಏರುತ್ತಿರುವ ವಿಪರೀತ ಸೆಕೆ, ಅತ್ಯಧಿಕ ಕೀಟನಾಶಕ ಬಳಕೆ, ಗುಬ್ಬಿಗಳ ಪ್ರೀತಿಯ ಆಹಾರಗಳಾದ ಕಾಳು-ಕಡಿ, ಹುಳುಗಳ ಲಭ್ಯತೆ ಪ್ರಮಾಣದ ಇಳಿಕೆ. ಹೀಗೆ ನಮ್ಮ ಪ್ರೀತಿಯ (ಮನೆ) ಗುಬ್ಬಿಗಳನ್ನು ಸ್ಮರಿಸಲು ಈ ವರ್ಷದ ಮಾರ್ಚ್ 23ರ ‘ವಿಶ್ವ ಗುಬ್ಬಿದಿನ’ಕಾರಣವಾದಂತೆ.
ಅದನ್ನು ನೆನಪಿಸಿದ ‘ಗುಬ್ಬಿ ಪ್ರೀತಿ’ಗೂ ಸಲಾಂ-ನಮಸ್ತೆ ಎನ್ನಬೇಕು.
ನಮ್ಮ ಮನೆ, ಬದುಕಿನ ಅಂಗವಾದಂತಿದ್ದ ಗುಬ್ಬಿಕೂಗು, ಸಾಂಗತ್ಯ ಈಗಲೂ ಪ್ರತಿಧ್ವನಿ.ಮಾಸದ ನೆನಪು, ಜಾಗತಿಕ ತಾಪಾಮಾನ, ಯಾಂತ್ರೀಕರಣ ಏರಿಕೆ ದುಷ್ಪರಿಣಾಮಗಳ ಪರಿಣಾಮವಾಗಿ ಗುಬ್ಬಿ ಮಾಯವಾದಂತೆ ಜೀವವೈವಿಧ್ಯತಾ ಸರಣಿ ಮುಂದುವರೆದರೆ……
ಧರೆ ಹತ್ತಿ ಉರಿದೊಡೆ….
ಸಿರಿಯ ಗರ ಬಡಿದೊಡೆ……
_ಕೋಲ್‍ಶಿರ್ಸಿ ಕನ್ನೇಶ್. ( 07-04-14)
