ಕೂಗದಿರು, ಅಳಿಸೀತು..

ಕೂಗದಿರು, ಅಳಿಸೀತು..
-ಡಾ.ಎಚ್.ಎಸ್.ಅನುಪಮಾ

ನಿನ್ನೆ ಊರನ್ನೇ ತೊಳೆದುಬಿಡುವಂತೆ ಮಳೆ ಸುರಿದಿತ್ತು. ಆದರೆ ಒಂದು ಮಳೆ ಮಳೆಯಲ್ಲ. ಬೇಸಿಗೆಯನ್ನು ಅದು ಸ್ವಲ್ಪವೂ ತಣಿಸಿದ ಲಕ್ಷಣಗಳಿಲ್ಲ. ಮಳೆ ಸುರಿದ ಮರುಹಗಲೇ ಮತ್ತೆ ಬಿಸಿಲು. ಉಡುಗದ ಧೂಳು, ಹಬೆಯಲ್ಲಿ ಬೇಯಿಸುವಂತೆ ಕೆಟ್ಟ ಧಗೆಯ ರಾತ್ರಿ. ಎಲ್ಲೋ ಸುರಿಯಲಿರುವ ಮಳೆಯ ತಂಪುಗಾಳಿ ಆಗೊಮ್ಮೆ, ಈಗೊಮ್ಮೆ.

ನಿದ್ರೆ ಹತ್ತದ ವಿಲ್ಮಾಗೆ ಸುಮ್ಮನೆ ಮಲಗಲು ಕಷ್ಟವೆನಿಸಿತು. ಕಿವಿಯ ಮೇಲೇ ಬಡಿಯುವ ಟಿಕ್‍ಟಿಕ್ ಸದ್ದು. ಗಡಿಯಾರ ಗಂಟೆ ಹೊಡೆದು ರಾತ್ರಿ ಒಂದುಗಂಟೆ ಎಂದು ಸೂಚಿಸಿತು. ನೀರವ ರಾತ್ರಿಯಲ್ಲಿ ಪಕ್ಕ ಮಲಗಿರುವ ಸೈಮನ್ ಗೊರಕೆ ಸದ್ದು ಗರಗಸದಿಂದ ಕಿವಿಯನ್ನು ಅಡ್ಡ ಸೀಳುವಂತೆನಿಸಿ ಕಿರಿಕಿರಿಯೆನಿಸಿತು. ಹಜಾರದಲ್ಲಿ ಮೂರೂ ಹೆಣ್ಣುಮಕ್ಕಳು ಸದ್ದಿಲ್ಲದೆ ಮಲಗಿದ್ದಾರೆ. ಬೆವರುತ್ತಲೇ ಎಲ್ಲರೂ ಸುಖನಿದ್ರೆಗೆ ಜಾರಿದ್ದಾರೆ.

ನಿಧಾನ ಬಾಗಿಲ ತಾಳ ಸರಿಸಿ ಹೊರಬಂದಳು. ಹಾಯೆನುವ ತಂಗಾಳಿ ಮುಖ ಸವರಿ ಹೋಯ್ತು. ಅಂಗಳದಲ್ಲಿ ಅರಳಿ ಇಡೀ ಆವರಣ ತುಂಬಿದ ರಾತ್ರಿರಾಣಿಯ ಪರಿಮಳ ಉಸಿರಲ್ಲೂ ಸೇರಿ ಹಗುರವೆನಿಸಿತು. ನಿದ್ರೆ ಬರಲಿ, ಬಾರದಿರಲಿ ದುಬೈನಲ್ಲಿ ಹೀಗೆ ರಾತ್ರಿ ಎದ್ದು ಹೊರಬಂದು ನಿಲ್ಲುವುದು ಸಾಧ್ಯವೆ?! ನಿಂತರೂ ರಾತ್ರಿರಾಣಿಯ ಈ ಪರಿಮಳ ಎಂದೂ ಸುಳಿಯಲಾರದು. ಪುಟ್ಟ ಹಳ್ಳಿಯಿಡೀ ನಿದ್ರಿಸುತ್ತಿದೆ. ಮಳೆಗಾಲಕ್ಕೆ ಗಂಟಲು ಸರಿಮಾಡಿಕೊಳ್ಳುವ ಜೀರುಂಡೆಗಳು, ನೆಲದಾಳದ ಗೂಡುಗಳಿಂದ ಹೊರಬಂದು ಮಳೆಕರೆವ ಕಪ್ಪೆಗಳು, ಒಂದೂ ಮೋಡವಿಲ್ಲದ ಚಂದ್ರನಿಲ್ಲದ ಆಕಾಶ. ಬೆವರಿ ಹೊಳೆವಂತೆ ತೋರುವ ಅಸಂಖ್ಯ ನಕ್ಷತ್ರಗಳು. ಇಡಿಯ ಜಗತ್ತೇ ನಿದ್ರಿಸುತ್ತಿರುವಾಗ ತಾನು ಮಾತ್ರ ಎಚ್ಚರಿರುವ ಒಬ್ಬಂಟಿ ಎನಿಸಿ ಖಾಲಿತನ ಒಳಹೊರಗೆಲ್ಲ ತುಂಬಿದಂತಾಯಿತು.

ಮನೆಬಿಟ್ಟು ಸರಿಯಾಗಿ ಹತ್ತು ವರ್ಷವಾಯಿತು. ಇದು ಮೂರನೇ ಸಲ ಭಾರತಕ್ಕೆ ಬರುತ್ತಿರುವುದು. ಹೊರಹೊರಟಾಗ ಬ್ಲೆಸಿಗೆ ಮೂರು ವರ್ಷ. ಕಳೆದ ಸಲ ಚಿಕ್ಕಪುಟ್ಟವರಂತೆ ತೋರುತ್ತಿದ್ದ ಹೆಣ್ಮಕ್ಕಳು ಈಗ ಬೆಳೆದುನಿಂತಿದ್ದಾರೆ. ಎರಡನೆಯ ಸಲ ಬರುವುದರಲ್ಲಿ ದಾದಾ, ಮಾಯಿಯನ್ನು ಕಳೆದುಕೊಂಡಾಗಿದೆ. ತೆಂಗಿಗೆ ಫಸಲು ಬಂದಿದೆ. ಒಂದೊಂದು ಸಲ ಬಂದುಹೋಗುವುದರಲ್ಲಿ ಎಷ್ಟೆಲ್ಲ ಬದಲಾವಣೆಗಳು! ಅವನ್ನು ಅರಗಿಸಿಕೊಳ್ಳಲು ಬಂದಮೇಲೆ ಕೆಲವು ದಿನ ಹಿಡಿಯುತ್ತದೆ. ಹೊಂದಿಕೊಳ್ಳುವಷ್ಟರಲ್ಲಿ ಮತ್ತೆ ಹೋಗುವ ತಯಾರಿ ಶುರುವಾಗುತ್ತದೆ. ಮತ್ತದೇ ದುಬೈ ಸಾವುಕಾರರ ಮನೆ, ಹರುಕುಮುರುಕು ಅರಬಿಯಲ್ಲಿ, ಇಂಗ್ಲಿಷಿನಲ್ಲಿ ವಿರಳ ಮಾತು, ದಿನವಿಡೀ ಒರೆಸು-ತೊಳಿ-ಬಳಿ-ಬೇಯಿಸು-ಇಸ್ತ್ರಿ ಮಾಡು ಎಂಬಿತ್ಯಾದಿ ಮುಗಿಯದ ಕೆಲಸ.

ಯಾಕೋ ಬೇಸರ ಒಳಗಿ£ಂದ ಒತ್ತರಿಸಿ ಬಂದಂತಾಯಿತು. ಬಿಕ್ಕಳಿಕೆಯ ಜೊತೆಗೆ ದುಃಖದ ಚರಣಗಳನ್ನು ಎತ್ತೆತ್ತಿ ಕೊಡುವಂತೆ ಕೇಳಿಸುವ ಏನೇನೋ ಶಬ್ದಗಳು. ರಾತ್ರಿಯ ನೀರವತೆ ಬೆಚ್ಚಿಸುವಂತಿದ್ದರೂ ಮನೆಯೊಳಗೆ ಹೋಗುವ ಮನಸಾಗಲಿಲ್ಲ. ಭಯ ಹುಟ್ಟಿಸುವಂತಿದ್ದರೂ ಕತ್ತಲ ಬಯಲೇ ಆಪ್ಯಾಯಮಾನ ಎನಿಸಿತು. ಬದುಕಿನ ಪುಟಗಳು ಆಗಸದಗಲ ತೆರೆದುಕೊಂಡವು.. ..

ಏಳೇಳು ಹೆಣ್ಣುಮಕ್ಕಳು ಎಂದು ಕಳವಳಗೊಳ್ಳುತ್ತಿದ್ದ ದಾದಾ ಪಿಯುಸಿ ಮುಗಿದಿದ್ದೇ ಗೋವಾಗೆ ಕಳಿಸಿದ್ದ. ಅಲ್ಲಿ ಹತ್ತು ವರ್ಷ ದುಡಿದಿದ್ದಳು. ಇಬ್ಬರು ಅಕ್ಕಂದಿರು ಸರ್ವಿಸ್ ಸೇರಿ ಸಿಸ್ಟರ್ ಆಗಲು ಹೋದರು. ಒಂದಾದ ಮೇಲೊಂದು ಮದುವೆ, ಬಂಗಾರ, ಬಟ್ಟೆ ಎಂದು ಖರ್ಚು ಮಾಡಿ ದಣಿದಿದ್ದ ಅಪ್ಪ ಕಪ್ಪಗಿದ್ದ ಅವಳನ್ನು ತರಾತುರಿಯಲ್ಲಿ ಮದುವೆ ಮಾಡಿ ಕಳಿಸಿದ್ದ. ಕಷ್ಟಪಟ್ಟು ದುಡಿಯುವವ, ಚಟಗಳಿಲ್ಲದವ ಎಂದು ಆಸ್ತಿ, ಮನೆ ಎಂಥದೂ ಇರದ, ಏಳನೇ ಕ್ಲಾಸಿಗೆ ಶಾಲೆ ಬಿಟ್ಟ ಸೈಮನ್ನನಿಗೆ ತನ್ನ ಮಗಳನ್ನು ಕೊಟ್ಟಿದ್ದ.

ಮದುವೆಯಾಗಿ ಆರು ವರ್ಷಕ್ಕೆ ಮೂರು ಹೆಣ್ಣು ಮಕ್ಕಳು. ಅತ್ತೆಮಾವ ಗಂಡುಗಂಡು ಎನ್ನುತ್ತಿದ್ದರೂ ಇನ್ನು ಹೆರಲು ಸಾಧ್ಯವೇ ಇಲ್ಲವೆನಿಸಿ ಯಾರಿಗೂ ಹೇಳದೇ ಕ್ಯಾಂಪಿನಲ್ಲಿ ಕುಟುಂಬಯೋಜನೆ ಆಪರೇಷನ್ ಮಾಡಿಸಿಕೊಂಡಿದ್ದಳು. ಮಾಯಿಯದು ಮೌನಬೆಂಬಲ, ಉಳಿದವರಿಗೆ ಫಾದರ್ ಏನೆನ್ನುವರೋ ಎಂಬ ಭಯ. ಆದರೆ ಹೆರುತ್ತ ಹೋಗುವ, ಅಮ್ಮನಂತೆ ಬರೀ ಹೆಣ್ಣನ್ನೇ ಹೆರುತ್ತ ಹೋಗುವ ಹೆಂಗಸರ ಸಂಕಟ ಮೇರಿಯ ಮಗ, ಕರುಣಾಳು ಜೆಜುವಿಗಲ್ಲದೆ ಮತ್ತಾರಿಗೆ ಅರ್ಥವಾದೀತು ಎಂಬ ಧೈರ್ಯ ವಿಲ್ಮಾಗೆ. ರಥವೇನೋ ಹೀಗೆ ಸಾಗುತ್ತಿತ್ತು, ಆದರೆ ಸೈಮನ್ನನ ಕಲ್ಲು ಕೆಲಸದ ದುಡಿಮೆ ಅಲ್ಲಿಗಲ್ಲಿಗೇ ಎನ್ನುವಂತಾದಾಗ ತಾನೂ ಏನಾದರೂ ಕೆಲಸ ಮಾಡಬೇಕು, ದುಡಿದು ಸಂಪಾದಿಸಬೇಕು ಎಂಬ ಚಡಪಡಿಕೆ ಶುರುವಾಯಿತು. ಮಲ್ಲಿಗೆ ಗಿಡ ನೆಟ್ಟಳು, ಗೇರು ಬೀಜ ಹೆರೆದು ಕೊಟ್ಟಳು, ಟೈಲರಿಂಗ್ ಪ್ರಯತ್ನಿಸಿದಳು. ‘ಕೋಳಿಗೂಡಿನಲ್ಲಿ ಕೂತು ದೇವಲೋಕದ ಸ್ವಪ್ನ ಕಾಣಬಾರದು’ ಎಂದು ಮಾಯಿ ಮತ್ತೆಮತ್ತೆ ಹೇಳಿದರೂ ಸಮಾಧಾನ ದೂರದ ಮಾತಾಯಿತು.

ನನ್ ಆಗಿ ಬಿಹಾರದ ಸರ್ವಿಸ್ ಮುಗಿಸಿ ಜರ್ಮನಿಗೆ ಹೊರಟಿದ್ದ ಅಕ್ಕ, ಸಿಸ್ಟರ್ ಎನ್‍ರಿಟಾ ಹೋಗುವ ಮುಂಚೆ ಮನೆಗೆ ಬಂದಿದ್ದಳು. ವಿಲ್ಮಾಳ ಚಡಪಡಿಕೆ, ಕಡಿಮೆಯಾಗುತ್ತಿರುವ ಧಾರ್ಮಿಕತೆಯನ್ನು ಗುರುತಿಸಿ ಎಂಥ ಕಷ್ಟಕಾಲದಲ್ಲೂ ಪ್ರಾರ್ಥನೆ ಬಿಡಬಾರದೆಂದು, ಭಾನುವಾರದ ಪ್ರಾರ್ಥನೆಗಾದರೂ ತಪ್ಪದೇ ಹೋಗಬೇಕೆಂದು ಒತ್ತಾಯಿಸಿದ್ದಳು. ‘ದುಬೈಗೆ ಹೋಗುವುದಾದರೆ ಪ್ರಯತ್ನಿಸು. ಸೈಮನ್ ಎಸ್ಸೆಲ್ಸಿ ಮಾಡಿಲ್ಲ, ಅವ್ನಿಗೆ ಹೋಗಲಿಕ್ಕಾಗಲ್ಲ. ಮನೆ ಕೆಲ್ಸ ಮಾಡೋರಿಗೆ ಚಾನ್ಸ್ ಇದೆ, ರಿಸ್ಕಿಲ್ಲ. ಅವನು ಮನೇಲಿ ಮಕ್ಕಳ್ನ ನೋಡಿಕೊಳ್ಳೋದಾದ್ರೆ ನೀ ಹೋಗ್ಬಾ. ಬ್ಲೆಸಿ ಹೇಗೂ ಹಾಲು ಕುಡಿಯುವುದು ಬಿಟ್ಟಳಲ್ಲ’ ಎಂದೆಲ್ಲ ಮಾಹಿತಿ ನೀಡಿ, ವೀಸಾಗೆ ಇರಲೆಂದು ಐವತ್ತು ಸಾವಿರ ಕೊಟ್ಟು ಹೋದಳು. ಆಗಿನಿಂದ ವೀಸಾಗೆ ಮೂರು ಲಕ್ಷ ಹೇಗೋ ಹೊಂದಿಸಿ ದುಬೈಗೆ ಹೋಗುವ ಕನಸು ಶುರುವಾಯಿತು. ಒಂದು ವರ್ಷ ವಿಲ್ಮಾ ತಿರುಗದ ಜಾಗವಿಲ್ಲ, ಸಂಪರ್ಕಿಸದ ಏಜೆಂಟನಿಲ್ಲ. ಅಂತೂ ವೀಸಾ ಸಿಕ್ಕೇಬಿಟ್ಟಾಗ ಇನ್ನು ತನ್ನ ಸಂಸಾರದ ಎಲ್ಲ ಕಷ್ಟ ಕೊನೆಯಾಗಿ ದಡಮುಟ್ಟಿದ ಹಾಗೇ ಎಂದು ಭಾವಿಸಿದ್ದಳು. ಆದರೆ ಹೊಕ್ಕುಳಿಗಂಟಿಕೊಂಡು ನಮ್ಮ ಜೊತೆಯೇ ಹುಟ್ಟುವ ಕಷ್ಟಗಳು ಅಷ್ಟು ಸುಲಭಕ್ಕೆ ತೀರಿಬಿಡುತ್ತವೆಯೆ?

ಅರೆನಿದ್ರೆ ಎಚ್ಚರದ ನಡುವೆ ವಿಚಾರದಲ್ಲಿ ಮುಳುಗಿಹೋಗಿದ್ದ ವಿಲ್ಮಾ ಗಾಳಿ ಸೀಳಿ ಓಡಿಬರುತ್ತಿರುವ ರೈಲಿನ ಶಬ್ದಕ್ಕೆ ನೆಲಕ್ಕಿಳಿದಳು. ರೈಲು ಸುರಂಗ ಹೊಕ್ಕಿದೆ. ಬೆಟ್ಟಸೀಳಿ ಬರುತ್ತಿದೆಯೋ ಎಂಬ ಹಾಗೆ ಗಾಳಿ, ನೆಲ ಎಲ್ಲ ಅದುರುತ್ತಿದೆ. ದೂರದಲ್ಲಿ ಇದ್ದಕ್ಕಿದ್ದಂತೆ ಹುಟ್ಟಿದ ಶಬ್ದ, ಜರೀನಳ ಮನೆಯ ಉರಿಯುವ ದೀಪ ಅವಳ ಯೋಚನೆಯ ದಿಕ್ಕನ್ನು ಬದಲಿಸಿದವು.

ನಿಧಾನ ಒಳನಡೆದಳು.

ದುಬೈ ಮನೆಯ ದೊಡ್ಡಕೋಣೆಯಲ್ಲಿ ಒಬ್ಬಳೇ ಮಲಗಬೇಕು. ಇಲ್ಲಿ ಪುಟ್ಟ ಕೋಣೆಯಲ್ಲಿ ಇಬ್ಬರು. ಮೊದಲೆರೆಡು ಸಲ ಬಂದಾಗ ಪೂರ್ತ ಒಂದು ತಿಂಗಳು ರಾತ್ರಿ ಅರ್ಧನಿದ್ರೆ ಮಾಡಿದ್ದು ನೆನಪಾಯಿತು. ಅಷ್ಟು ದಿನದ ದಾಹವನ್ನು ಒಮ್ಮೆಲೇ ಹಿಂಗಿಸಿಕೊಳ್ಳುವನೇನೋ ಎನ್ನುವಂತೆ ಆಕ್ರಮಿಸುತ್ತಿದ್ದ ಸೈಮನ್ ನಿದ್ದೆ ಹಾರಿಸಿಬಿಡುತ್ತಿದ್ದ. ತಾನಿಲ್ಲದಾಗ ವರ್ಷಗಟ್ಟಲೆ ಏನು ಮಾಡುತ್ತಾನೆ ಹಾಗಾದರೆ? ಕೇಳಿದರೆ ‘ಈಗ್ಯಾಕೆ ಅದನ್ನ ನೆನಪು ಮಾಡ್ತಿ? ನೀ ಅಲ್ಲಿ ಹೆಂಗಿರತೀಯೋ ಹಂಗೆ ನಾ ಇಲ್ಲಿ ಇರತಿನಿ’ ಎನ್ನುತ್ತಿದ್ದ.

ಕಟ್ಟುಮಸ್ತಾದ ಕೈಚಾಚಿ ಆರಾಮ ಮಲಗಿದ್ದಾನೆ. ಅವನು ಏಳಬಾರದೇ ಎನಿಸುತ್ತಿದೆ. ಚಟಪಟ ಓಡಾಡಿ ಕೆಲಸ ಮಾಡುವನಾದರೂ ಅವನಲ್ಲೀಗ ಮೊದಲಿನ ದಾಹವಿಲ್ಲ. ಅವನಿಗೆಷ್ಟು ವರ್ಷ? ತನ್ನಷ್ಟೇ, ನಲವತ್ತಾರಲ್ಲವೆ? ಆದರೆ ಎದೆಮೇಲಿನ ಒಂದು ರೋಮವೂ ಬೆಳ್ಳಗಾಗಿಲ್ಲ. ಕಾಲಿನ ಮೀನಖಂಡಗಳು ಹುರಿಹುರಿಯಾಗೇ ಇವೆ. ಮೊದಲಿನಂತೆ ಬಿಸಿಲಿನ ಕೆಲಸವಿಲ್ಲದ್ದರಿಂದ ಕಪ್ಪುಚರ್ಮ ಹೊಳೆಯುತ್ತಿದೆ. ಹಾಗಾದರೆ ಅವ£ಗೆ ಹೆಣ್ಣಿನ ಹಂಬಲ ಕಡಿಮೆಯಾಯಿತೆ? ಅಥವಾ ತನ್ನ ಮೇಲೆ ಅನುಮಾನವೆ? ಅಥವಾ ಬೇರೆ ವ್ಯವಸ್ಥೆ ಮಾಡಿಕೊಂಡಿರುವನೆ?

ಕೊನೆಯ ಊಹೆಗೆ ನರನಾಡಿಗಳಲ್ಲೆಲ್ಲ ಉರಿಯ ಸಂಚಾರವಾಯಿತು. ಸೈಮನ್ನನನ್ನು ಮತ್ಯಾರದೋ ಪಕ್ಕ ಕಲ್ಪಿಸಿಕೊಳುವಾಗ ತಲೆ ಕೂದಲೂ ನೆಟ್ಟ ನಿಲ್ಲುತ್ತಿರುವ ಭಾವ. ಪಕ್ಕದ ತೋಟದ ಅಬುಸಾಹೇಬರ ಮನೆ ಜರೀನ್ – ಅವಳ ಗಂಡ ಕತಾರಿನಲ್ಲಿದ್ದಾನೆ – ‘ಅಕ್ಕಾ, ಗಣಸ್ರು ಎರಡು ವರ್ಷಗಟ್ಲೆ ಹೆಣ್ತಿ ಬಿಟ್ಕಂಡಿ ಸುಮ್ಮನಿರ್ತಾರಂತ ನಾನಂತೂ ನಂಬುದಿಲ್ಲ. ಅಲ್ಲೊಂದು ನಿಖಾ ಮಾಡ್ಕಂಡಿ ಅವನ್ನ ಇಲ್ಲಿಗೆ ಕರ್ಕಬರದಿದ್ರೆ ಸಾಕು ಅಷ್ಟೆ’ ಎಂದಿದ್ದಳು. ಅಲ್ಲಿ ಸಂಸಾರವಿದ್ದರೆ ಇರಲಿ, ಆದರೆ ಅದು ಇಲ್ಲಿಯ ತಮ್ಮ ಖಾತೆಗೆ ತಿಂಗಳು ತಿಂಗಳು ಹಣ ಜಮಾ ಆಗುವುದಕ್ಕೆ ಕಲ್ಲು ಹಾಕದಿರಲಿ ಎನ್ನುವುದು ಅವಳ ಪ್ರಾರ್ಥನೆ! ಪರದೇಶದಲ್ಲಿರುವ ಗಂಡಸರದು ಆ ಪಾಡಾಯಿತು, ಹೆಂಡತಿಯನ್ನು ಹೊರಕಳಿಸಿ ಎರಡು ವರ್ಷ ಇಲ್ಲೇ ಒಂಟಿ ಉಳಿವ ಗಂಡಸು? ಅಥವಾ ಹೊರಗಿರುವ ಹೆಣ್ಣು? ಅವರ ಬಗ್ಗೆಯೂ ಜನ ಹೀಗೇ ಯೋಚಿಸಬಹುದೆ? ಇದ್ದಕ್ಕಿದ್ದಂತೆ ಅಶ್ರಫ್ ನೆನಪಾದ. ಮನೆತುಂಬ ಜನರಿರುವ ದುಬೈನ ಆ ಮನೆಯಲ್ಲಿ ಅವಳಿಗೆ ಬೇಕಾದವ ಕಾರಿನ ಡ್ರೈವರ್ ಅಶ್ರಫ್ ಮಾತ್ರ. ಪಾಕಿಸ್ತಾನದವ. ಅವಳ ಸುಖದುಃಖಗಳ ವಾರಸುದಾರ. ಉಂಡೆಯಾ ಉಟ್ಟೆಯಾ ಎಂದು ಕಾಳಜಿ ತೋರುವ ಬಂಧು. ಮನೆಗೆ ದುಡ್ಡು ಕಳಿಸುವುದು, ಪತ್ರ ಅಂಚೆಗೆ ಹಾಕುವುದೆಲ್ಲ ಅವನೇ. ಏಳು ಮಕ್ಕಳ ತಂದೆ ಅಶ್ರಫ್ ರಂಜಾನಿಗೆ ಮನೆಗೆ ಹೋಗಿದ್ದಾನೆ. ಹಬ್ಬ ಮುಗಿಸಿ ವಾಪಸಾಗುವುದು ತನಗಿಂತ ಒಂದು ತಿಂಗಳು ತಡ. ದುಬೈನ ಮನೆಯವರು ದುಷ್ಟರಲ್ಲ, ದುಡ್ಡು ಕೊಡಲು ಪಿರಿಪಿರಿ ಇಲ್ಲ. ಆದರೆ ಮಾಡಬೇಕಾದ ಕೆಲಸ ಬಿಟ್ಟು ಮತ್ತಾವುದರ ಬಗ್ಗೆಯೂ ಅಲ್ಲಿ ಮಾತೇ ಇಲ್ಲ. ಎಸಿ, ಜನರೇಟರು, ಕಾರಿನ ಹಾಗೆಯೇ ಕೆಲಸದವರೂ ಒಂದು ಯಂತ್ರದಂತೆ ಬದುಕುವುದಾದರೆ ಅಲ್ಲಿ ಏನೇನೂ ಕಷ್ಟವಿಲ್ಲ. ಆದರೆ ಒಂದು ಆಪ್ತ ಮಾತು, ಕುಶಲೋಪರಿ, ಊರುಕೇರಿಯ ವಿಚಾರಣೆ – ಊಂಹ್ಞೂಂ, ಅಂಥ ಯಾವ ಮಾತಿಗೂ ಅಲ್ಲಿ ಅವಕಾಶವಿಲ್ಲ. ತಮ್ಮದೇ ಲೋಕದಲ್ಲಿ ಮುಳುಗಿಬಿಡುವ ಆ ಸೀಮೆಯ ಜನರೇ ಹಾಗೆ, ಅಷ್ಟು ಜನರ ನಡುವೆ ಇದ್ದೂ ಒಬ್ಬಂಟಿ ಎನಿಸುವಂತೆ ಮಾಡಿಬಿಡುತ್ತಾರೆ.

‘ನೀನಿದ್ದೀ ಎಂದು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ಇಲ್ಲದಿದ್ದರೆ ಇನ್ಸಾನಿಯತ್ ಇಲ್ಲದ ಈ ಊರಲ್ಲಿ, ಈ ಮನೇಲಿ ಇರ್ತಾನೇ ಇರಲಿಲ್ಲ’ ಎಂದ ಅಶ್ರಫ್ ಮಾತು ನೆನಪಾಯಿತು. ಹೇಗಿದ್ದಾನೋ, ಎಲ್ಲಿದ್ದಾನೋ? ಅವನ ವಿಳಾಸ, ಫೋನ್ ನಂಬರ್ ಯಾವುದೂ ತನ್ನಲ್ಲಿಲ್ಲ. ವ್ಯಾಖ್ಯಾನಕ್ಕೆ ಸಿಗದ ಅಂಥ ಸಂಬಂಧಗಳೇ ಮಳೆಯಿರದ ನಾಡಿನಲ್ಲೂ ಜೀವ ಪೊರೆಯುವುದಲ್ಲವೆ?

ಜೋರಾಗಿ ಬೀಸಿಬಂದ ಗಾಳಿ ಜೇನುಗೂಡನ್ನು ಅಲ್ಲಾಡಿಸಿತು.. ***

ಖಾಯಂ ಆದಾಯ ಮೂಲವಾಗಿ ಮನೆ ಹತ್ತಿರ ಸ್ವಲ್ಪ ಜಮೀನು ಕೊಳ್ಳುವ ಇರಾದೆ ವಿಲ್ಮಾದು. ತೋಟ, ಗದ್ದೆಯ ಹಸಿರಿನ ನಡುವೆ ಮನೆಯಿದ್ದರೆ ಅಲ್ಲಿ ದುಡಿಯುತ್ತ ಕೊನೆತನಕ ಜೀವನ ಸಾಗಿಸಬಹುದೆಂಬ ಕನಸು. ಆದರೆ ಸೈಮನ್‍ಗೆ ರೈತನಾಗುವುದು ಇಷ್ಟವಿಲ್ಲ. ರಸ್ತೆಬದಿಯ ಊರಿನಲ್ಲಿ ಸೈಟು ಕೊಂಡು ಮನೆ ಕಟ್ಟಿಸಿದರೆ ಮಕ್ಕಳ ಓದಿಗೆ ಅನುಕೂಲ. ಅಲ್ಲೇ ಏನಾದರೂ ಸಣ್ಣ ವ್ಯಾಪಾರ ಶುರುಮಾಡುವ ಅಥವಾ ರಿಕ್ಷಾ ಇಡುವ ಎನ್ನುತ್ತಾನೆ. ಇವತ್ತಿಡೀ ಮೂರ್ನಾಲ್ಕು ಕಡೆ ಸೈಟು ನೋಡಿ ಬಂದಾಯ್ತು. ಒಂದು ಗೇರುಗುಡ್ಡೆಯ ಮೇಲಿನ ಜಾಗ. ಪಾಳು ಬಿದ್ದ ಜಾಗದಂತಿದೆ. ಕಡಿಮೆ ರೇಟಿಗೆ ಹೆಚ್ಚು ಜಾಗವೇನೋ ಸಿಗುತ್ತೆ. ಆದರೆ ಅಲ್ಲಿ ನೀರಿಲ್ಲ, ಅದಕ್ಕೆ ಸೆಕೆಂಡ್ ವ್ಯಾಲ್ಯೂ ಇಲ್ಲ ಎನ್ನುವುದು ಸೈಮನ್ನನ ವಾದ. ಈ ಪುಟ್ಟ ಊರಿನಲ್ಲಿ ಸೈಟು ಎಷ್ಟು ತುಟ್ಟಿ! ಗುಂಟೆಗೆ ಐವತ್ತು ಸಾವಿರದಿಂದ ಲಕ್ಷದವರೆಗೆ ಇದೆ. ಬರೀ ಐದು ಗುಂಟೆ ಜಾಗ ಕೊಳ್ಳಲಿಕ್ಕೂ ತಾ ದುಡಿದು ತಂದದ್ದು ಸಾಕಾಗುವುದಿಲ್ಲ, ಮನೆ ಕಟ್ಟುವ ಮಾತು ದೂರ ಉಳಿಯಿತು.

‘ಕಮ್ತೀರ ಹತ್ರ ತಿಂಗಳಾ ಎರಡು ಬಡ್ಡಿಗೆ ಮೂರು ಲಕ್ಷ ಸಾಲ ತೆಗೆಯುವ. ಅದು ರಿಜಿಸ್ಟ್ರೇಷನ್, ಕಂಪೌಂಡ್, ಗುಂದ ಎಲ್ಲಕ್ಕೂ ಸಾಕಾಗ್ತದೆ. ರಂಜಾನ್ ತಿಂಗಳಲ್ಲಿ ಒಂದು ತಿಂಗಳ ಕೆಲಸಕ್ಕೆ ಮೂರು ತಿಂಗ್ಳ ಸಂಬ್ಳ ಕೊಡ್ತಾರಂತಲ ದುಬೈಲಿ? ಆ ಜರೀನ್ ಹೇಳ್ತಿತ್ತು ಹಂಗಂತ. ಈ ಸಲ ರಂಜಾನಿಗೇ ಹೋಗು. ಹೋದ ಮೇಲೆ ಅಡ್ವಾನ್ಸ್ ತಗೊಂಡ್ ಕಳಿಸು, ಮನೆ ಕೆಲಸ ಶುರುಮಾಡುವ’ ಎನ್ನುತ್ತ ಸೈಮನ್ ಹಾಸಿಗೆಗೆ ಮೈಚೆಲ್ಲಿದ.

ದುಬೈನಲ್ಲಿ ಎಲ್ಲೂ ಹೊರಹೋಗದೆ, ಬಟ್ಟೆ ಕೊಳ್ಳದೆ, ಒಂದು ಪೈಸೆ ಯಾವುದಕ್ಕೂ ಖರ್ಚು ಮಾಡದೇ ಪ್ರತಿ ತಿಂಗಳು ಮನೆ ಖರ್ಚು-ಮಕ್ಕಳ ಓದಿಗೆ ದುಡ್ಡು ಕಳಿಸುವುದು; ಉಳಿದ ಹಣ ಅವರ ಬಳಿಯೇ ಬಿಡುವುದು. ಈ ಸಲ ಬರುವಾಗ ಮೂರು ವರ್ಷದಿಂದ ಉಳಿದ ಮೂರೂವರೆ ಲಕ್ಷ ತಂದರೆ ಬಂದದ್ದೇ ಮಕ್ಕಳ ವಸ್ತು, ಒಡವೆ, ನೆಂಟರ ಉಪಚಾರ, ಮೊದಲು ತೆಗೆದುಕೊಂಡ ಕೈಸಾಲ ಎಂದು ಒಂದೂವರೆ ಲಕ್ಷ ಖರ್ಚಾಗಿಹೋಯಿತು. ಈಗ ಇಲ್ಲಿಂದ ಹೋಗುವ ಮೊದಲೇ ಸಾಲ ಕಟ್ಟಿಕೊಂಡು ಹೋಗಬೇಕು. ಮುಂಚಿನ ಸಾಲ, ಕಟ್ಟಲಿರುವ ಮನೆಯ ಸಾಲ, ಮನೆ ಖರ್ಚು, ಮಕ್ಕಳ ಓದು, ಅವರ ಮದುವೆ – ಓಹೋ..

ಖರ್ಚಿನ ದಾರಿಗಳ ನಡುವೆ ದಿಕ್ಕು ತಪ್ಪಿ ಅಲೆಯುತ್ತಿರುವ ಭಾಸವಾಯಿತು. ಕಳೆದ ಸಲ ಬಂದಾಗ ಸೈಮನ್ ಇದೊಮ್ಮೆ ಹೋಗಿ ವಾಪಸ್ ಬಂದುಬಿಡು, ಮತ್ತೆ ಹೋಗುವುದು ಬೇಡ ಎಂದಿದ್ದ. ಇಲ್ಲೇ ಒಟ್ಟಿಗೆ ಏನಾದರೂ ಬಿಸಿನೆಸ್ ಮಾಡುವ, ತನಗೆ ಒಬ್ಬನೇ ಇರಲು, ಮಕ್ಕಳ ನಿಭಾಯಿಸಲು ಸಾಧ್ಯವಿಲ್ಲ ಎಂದಿದ್ದ. ಆದರೆ ಈ ಸಲ ಎಕ್ಸ್‍ಟ್ರಾ ಸಂಬಳ ಸಿಗುತ್ತದೆ ಎಂದು ಒಂದು ತಿಂಗಳು ಮೊದಲೇ ಕಳಿಸುವ ಆಲೋಚನೆಯಲ್ಲಿದ್ದಾನೆ! ಹಾಸಿಗೆಗೆ ಮೈ ಚೆಲ್ಲುವಾಗ ಕಸಿವಿಸಿಯೊಂದು ಹುಟ್ಟಿ ಕೋಣೆಯಲ್ಲಷ್ಟೇ ಅಲ್ಲ, ಎದೆ, ಹೊಟ್ಟೆ, ತಲೆ ಎಲ್ಲೆಲ್ಲೂ ಶೂನ್ಯ ಆವರಿಸಿತು.

‘ಇತ್ತೀಚೆಗೆ ಯಾಕೋ ಸೊಂಟನೋವು. ಅಲ್ಲಿರುವಾಗಲೂ ಅಷ್ಟೇ. ಕೆಲವು ಸಲ ರಾತ್ರಿಯಾಗುವುದರಲ್ಲಿ ಸೊಂಟಕ್ಕೆ ದಬ್ಬೆ ಕಟ್ಕಂಡ ಹಂಗಾಗುತ್ತೆ..’

‘ಆಯ್ತಲ ನಿಂಗೂ ನನ್ನಷ್ಟೇ ವರ್ಷ. ಮುಟ್ಟು ಆಗ್ತಿದಿಯಾ, ನಿಂತು ಹೋಯ್ತಾ? ಅದು ಹೋಗುವಾಗ ಹಂಗೇ ಅಂತಲ. ಆ ಅಬು ಮನೆ ಜರೀನ್ ಕೂಡಾ ಹಂಗೇ. ಯಾವಾಗ್ ನೋಡಿರೂ ಸೊಂಟಸೊಂಟ ಅಂತಿರ್ತದೆ. ನಾಳೆ ಸ್ವಲ್ಪ ಆರಾಂ ತಗೊ, ಸರಿಯಾಗುತ್ತೆ. ಮಲಕ್ಕ.’

ಸೊಂಟದ ಮಾತಾಡುವ ತನಕ, ಮುಟ್ಟು ನಿಲ್ಲುವಾಗಿನ ತ್ರಾಸಿನ ಮಾತಾಡುವ ತನಕ ಬಂದಳೇ ಜರೀನ್? ಆರಾಮ ಮಾಡುವುದು ಹೇಗೆ? ನಾಳೆ ಬರಲಿರುವ ಇವನ ಮೂವರು ಅಕ್ಕಂದಿರ ಸಂಸಾರಕ್ಕೆ ಚಿಕನ್, ಮಟನ್ ಎಂದೆಲ್ಲ ಬೇಯಿಸಬೇಡವೇ? ಮುಟ್ಟು ನಿಂತಿದೆ ಎಂದು ಕಳೆದಸಲ ಬಂದಾಗಲೇ ಹೇಳಿದ್ದೆ, ಮರೆತೇಬಿಟ್ಟಿದ್ದಾನೆ.

‘ಮರ್ತಿದ್ದೆ ವಿಲ್ಮಾ. ನೀ ಹೊರಡುದು ಇಪ್ಪತ್ತಾರಕ್ಕೆ ಅಲ್ವಾ? ಅಷ್ಟರೊಳಗೆ ಶಾಸ್ತ್ರ ಆಗಲ್ಲ ಅಂದಿದಾರೆ ಫಾದರ್ರು. ನೀನು ಹೋಗುದ್ರಲ್ಲಿ ಸೈಟು ರಿಜಿಸ್ಟರ್ ಒಂದು ಹೆಂಗಾದ್ರೂ ಮಾಡಸಣ. ಆಮೇಲೊಂದಿನ ಫಾದರ್ನ ಕರೆಸಿ ಶಾಸ್ತ್ರ ಮಾಡ್ಸಿ ಕಲ್ಲು ಪಾಗಾರ ಹಾಕಿಸ್ತೀನಿ. ನೀನಿದ್ದಾಗ್ಲೇ ಮಾಡಿದ್ರೆ ಚಲೋ ಇತ್ತು, ಆದ್ರೆ ಟೈಮೇ ಇಲ್ಲಲ, ಇರ್ಲಿಬಿಡು, ಪರವಾಗಿಲ್ಲ.’

ಇರ್ಲಿಬಿಡು ಪರವಾಗಿಲ್ಲ! ಯಾರಿಗೆ ಪರವಾಗಿಲ್ಲ? ಸದ್ದಿಲ್ಲದೆ ಎದೆಯೊಳಗೊಂದು ಸ್ಫೋಟವಾಯಿತು. ಆಚೆ ತಿರುಗಿ ಗೊರೆಯತೊಡಗಿದ ಸೈಮನ್‍ಗೆ ಯಾವುದೂ ಕೇಳಲಿಲ್ಲ.

ಎಳವೆಯಲ್ಲಿ ಹಾಕಿಸಿಕೊಂಡಿದ್ದ ಹಚ್ಚೆಯ ಗುರುತು ಕೈಮೇಲೆ ಕಾಣಿಸಿತು. ಚಂದಾವರ ಪೇಸ್ತಿಗೆ ಹೋದಾಗ ಅಕ್ಕತಂಗಿಯರೆಲ್ಲ ಒಮ್ಮೆಲೇ ಕುರೋಸು ಹಚ್ಚೆ ಹುಯ್ಯಿಸಿಕೊಂಡಿದ್ದರು. ನೋವು ತಡೆಯಲಾಗದೇ ಉಳಿದವರಿಗಿಂತ ತಾನು ಹೆಚ್ಚು ಕೂಗಿಬಿಟ್ಟಿದ್ದೆ. ಹಚ್ಚೆ ಹಾಕುವವ ನೋವಾದರೂ ಕೂಗಬಾರದು, ಕೂಗಿದರೆ ಅದು ಅಳಿಸಿಹೋಗುವುದೆಂದು ಹೇಳಿದ್ದ. ಎಲ್ಲಿ ಅಳಿಸಿಹೋಗುವುದೋ ಎಂಬ ಭಯದಿಂದ ನೋವಾಗುತ್ತಿದ್ದರೂ ಅವುಡುಗಚ್ಚಿ ಸಹಿಸಿದ್ದಳು. ಸಹಿಸುವುದೇ ಬದುಕೆಂದುಕೊಂಡಿದ್ದಳು.

ಆದರೀಗ ಸುಮ್ಮನಿದ್ದರೂ ಹಚ್ಚೆ ಅಳಿಸಿಹೋಗುತ್ತಿದೆ, ಹೇಗೆ ಸಹಿಸುವುದು?

ಕಣ್ತೆರೆದು ಮಲಗುವವರಿಗೆ ಲೈಟಿನ ಅವಶ್ಯಕತೆಯಿಲ್ಲ. ಎದ್ದು ದೀಪವಾರಿಸಿದಳು. ದೇವರಗೂಡಿನ ದೀಪದ ಮಂದ ಬೆಳಕಿನಲ್ಲಿ ಪುಟ್ಟಮನೆ ಕಪ್ಪು ಬಿಳಿ ಚಿತ್ರವಾಯಿತು.


‘ಪಪ್ಪ ಪಪ್ಪ, ನನ್ನ ಬಿಳಿಬಣ್ಣದ ಸ್ಲಿಪ್ ಕೊಡು.’

ಬ್ಲೆಸಿ ಬಚ್ಚಲುಮನೆಯಿಂದಲೇ ಅಪ್ಪನನ್ನು ಕರೆಯುತ್ತಿದ್ದಳು. ಗಡ್ಡ ಹೆರೆಯುತ್ತ ಕುಳಿತ ಸೈಮನ್ ‘ತಡೆ ಮಗ’ ಎಂದವನೇ ಒಳಹೋಗಿ, ಕಪಾಟು ಕೆದರಿ, ಬಿಳಿಬಣ್ಣದ ಸ್ಲಿಪ್ ಹುಡುಕಿ ಎಳೆದು ಕೊಟ್ಟುಬಂದ. ಎಳೆಯವಳಾದರೂ ಒಳ್ಳೇ ದಷ್ಟಪುಷ್ಟ ಹುಡುಗಿಯಾದ ಅವಳಿಗೆ ಈ ಸಲ ಬರುತ್ತ ವಿಲ್ಮಾ ಒಳಗಿನದೆಲ್ಲ ಒತ್ತಿ ಹಿಡಿದಿಡುವಂಥ ಸ್ಲಿಪ್ ತಂದಿದ್ದಳು.

‘ಓ ಪಪ್ಪಾ….’

ಸೈಮನ್ ಕನ್ನಡಿಯೆದುರು ಕೂರುವುದರಲ್ಲಿ ಮತ್ತೆ ಕರೆ.

‘ಬಿಸಿ ನೀರೇ ಇಲ್ಲ’.
ಬ್ಲೆಸಿಯ ನಂತರ ಮೀಯಲು ಹೋದ ಸಾರಾ ತಂಗಿಯನ್ನು ನೀರು ಖಾಲಿ ಮಾಡಿದ್ದಕ್ಕೆ ಬೈಯತೊಡಗಿದಳು. ‘ಹತ್ತೇಹತ್ತು ನಿಮಿಷ ತಡಿ ಮಗಾ’ ಎಂದವನೇ ಅರ್ಧ ಗಡ್ಡ ಹೆರೆದುಕೊಂಡ ಸೈಮನ್ ಒಲೆಗೆ ಬೆಂಕಿ ಮಾಡಲು ಎದ್ದು ಹೋದ. ಹಾಫ್‍ಪ್ಯಾಂಟ್ ಹಾಗೂ ಸ್ಲಿಪ್‍ನಲ್ಲಿ ಬಂದ ಬ್ಲೆಸಿ ಅಡಿಗೆಮನೆ ಹೊಕ್ಕಳು. ‘ಪಪ್ಪ ಎಷ್ಟು ಚೆನ್ನಾಗಿ ಚಿಕನ್ ಫ್ರೈ ಮಾಡ್ತಾನೆ ಗೊತ್ತಾ ಮಮ್ಮಿ? ಅವತ್ತು ನೀನು ಪೇಸ್ತಿನ ದಿನ ಮಾಡಿದ್ದು ನಮಗ್ಯಾರಿಗೂ ಇಷ್ಟನೇ ಆಗ್ಲಿಲ್ಲ. ಜರೀನ್ ಆಂಟಿ ಬಿರಿಯಾನಿ ಸೂಪರ್ ಆಗಿ ಮಾಡ್ತಾರೆ. ತಿಂದು ಒಂದು ದಿನವಾದ್ರೂ ಕೈ ಮೂಸಿದ್ರೆ ವಾಸನೆ ಹಂಗೇ ಇರುತ್ತೆ ಅಂತಾನೆ ಪಪ್ಪ.’ ಹೇಳುತ್ತಹೇಳುತ್ತ ಆತುಕೊಂಡಳು. ಕುತ್ತಿಗೆಯ ಸರವನ್ನೆಳೆದು ನೋಡಿದವಳೇ, ‘ಇನ್ನೊಂದ್ಸಲ ಬರ್ತಾ ನೀ ಹಾಕ್ಕಂಡಿದೀಯಲ, ಇಂಥ ಸರನೇ ತರ್ಬೇಕು ನಂಗೆ, ಇಲ್ದಿದ್ರೆ ನೋಡು’ ಎಂದು ಮುಖ ದಪ್ಪ ಮಾಡಿಕೊಂಡು ಹೊರನಡೆದಳು. ಈಗ ಆಕಾರ ಪಡೆಯುತ್ತಿರುವ ಎಳೆಯ ಸೊಂಟ, ಎದೆ ನೋಡುವಾಗ ಅಕ್ಕ ಎನ್‍ರಿಟಾ ಹೇಳಿದ್ದು ನೆನಪಾಯ್ತು. ‘ಬ್ಲೆಸಿ ತುಂಬ ಚುರುಕು. ಅವಳನ್ನು ಸಿಸ್ಟರ್ ಕೋರ್ಸಿಗೆ ಕಳಿಸು. ಒಬ್ಬರನ್ನಾದರೂ ಸರ್ವೀಸ್‍ಗೆ ಕಳಿಸಬೇಕು. ಅವಳ ಎಜುಕೇಷನ್ನಿಗೂ ತೊಂದರೆಯಿರಲ್ಲ. ಆರಾಮ ಲೈಫು. ಎಲ್ಲ ಸವಲತ್ತೂ ಇರುತ್ತೆ.’

ಜೀವ ಪುಟಿಯುವ ಬ್ಲೆಸಿಯನ್ನು ಖಂಡಿತ ಸರ್ವೀಸ್‍ಗೆ ಕಳಿಸಬಾರದು. ಸೈಮನ್‍ಗೂ ಹೇಳಿಬಿಡಬೇಕು. ಏನು ಸವಲತ್ತೋ? ಏನು ಲೈಫೋ? ದುಬೈ ಚರ್ಚಿನಲ್ಲಿರುವ ಆಫ್ರಿಕದ ಫಾದರನ್ನು, ಸಿಸ್ಟರನ್ನು ನೋಡಿದರೆ ನಮ್ಮವರೆಂಬ ಭಾವನೆಯೇ ಬರುವುದಿಲ್ಲ. ಅವರಿಗೂ ಚರ್ಚಿಗೆ ಬರುವ ಬೇರೆ ದೇಶದವರಿಗೂ ನಂಟು ಹುಟ್ಟುವುದೇ ಇಲ್ಲ. ಯಾವ್ಯಾವುದೋ ದೇಶಕ್ಕೆ ಹೋಗಿ ಮಾಡುವ ಸರ್ವೀಸು ಸಂಬಳದ ಕೆಲಸಕ್ಕಿಂತ ಏನೂ ಬೇರೆಯಲ್ಲ. ಎನ್‍ರಿಟಾಗಿಂತ ಮೊದಲೇ ಸಿಸ್ಟರ್ ಆದ ಮತ್ತೊಬ್ಬ ಅಕ್ಕ ಫಿಲೋಮಿನಾಗೆ ಎಲ್ಲಿಯೂ ಸರಿಹೋಗುತ್ತಿಲ್ಲ. ಅವಳು ನನ್ನಂತೆ, ಕಪ್ಪು. ಸಂಕೋಚ ಸ್ವಭಾವದವಳು. ಫಿಲೋಮಿನಾಗೆ ಸೂಕ್ತ ಗೌರವ, ಜವಾಬ್ದಾರಿಯನ್ನೇ ಕೊಡುವುದಿಲ್ಲವಂತೆ. ಬರೀ ಅವರಿವರ ಕೈಕೆಳಗೆ ದುಡಿಯಲು ಕಳಿಸುತ್ತಾರೆ, ಪದೇಪದೇ ವರ್ಗಾವಣೆ ಮಾಡುತ್ತಾರೆ, ತಣ್ಣಗೆ ಅವಮಾನಗೊಳಿಸುತ್ತಾರೆ ಎಂದು ಬಂದಷ್ಟು ಸಲವೂ ಕಣ್ಣೀರು ಹಾಕಿ ಹೋಗುತ್ತಾಳೆ.

ಅಥವಾ ಆ ಬದುಕೇ ಸುಖವೇ? ಎನ್‍ರಿಟಾ ನೋಡಲಿಕ್ಕೂ ಚೆಂದ. ಮಾತು, ಕೆಲಸದಲ್ಲಿ ಮೊದಲಿ£ಂದ ಚೂಟಿ. ಅವಳು ಕಾನ್ವೆಂಟ್ ಸೇರಿದ ಮೇಲೆ ಓದಿದಳು, ಇಂಗ್ಲಿಷ್ ಕಲಿತಳು, ಡಾಕ್ಟರ್ ಕೋರ್ಸ್ ಮಾಡಿ ಬೇರೆಬೇರೆ ದೇಶ ತಿರುಗುತ್ತಾಳೆ. ಒಳ್ಳೆಯ ಸಂಬಳವಿದೆ. ಚರ್ಚಿನಲ್ಲಿ, ಊರಲ್ಲಿ ಗೌರವವಿದೆ. ಅದು ಮದುವೆಯಾಗಿದ್ದರೆ ಸಾಧ್ಯವಾಗುತ್ತಿತ್ತೆ? ಮದುವೆಯಾಗಿ ತನ್ನ ಬದುಕು ಏನು ಉತ್ತಮವಿದೆ? ಏನು ಸಾಧನೆ ಮಾಡಿದೆ? ಮದುವೆಗೆ ಮೊದಲೂ, ಈಗಲೂ ಮನೆಯಿಂದ ಹೊರಗೇ. ಯಾರಿಗಾಗಿ ದುಡಿಯುತ್ತೇವೋ ಆ ಜೀವಗಳ ಬೆಚ್ಚನೆಯ ಪ್ರೀತಿ, ಕಾಳಜಿಯ ಕಲ್ಪನೆಯಲ್ಲಿ ದೂರದೇಶದಲ್ಲಿ ದುಡಿಯುತ್ತಲೇ ಇರಬೇಕು. ಕಾಲು ಸೋತು ವಾಪಸು ಬಂದಮೇಲೆ ಅನುಭವಿಸಲು ಯಾವ ಸುಖ ಉಳಿದಿರುತ್ತದೆ?

ಅಬ್ಬಲಿಗೆ ಗಿಡಗಳ ನಡುವೆ ಸುಳಿದಾಡುವಾಗ ಮತ್ತೆಂಥದೋ ದುಗುಡ ಆವರಿಸಿಕೊಂಡಿತು. ತಾನು ದಂಡೆ ಕಟ್ಟಿ ಹೂವು ತುರುಬಿಗೆ ಮುಡಿದು ಎಷ್ಟು ದಿನವಾಯಿತು? ಬೇಸಿಗೆಯಲ್ಲಿ ಚಿಗುರಿ ಮೊಗ್ಗು ಕಚ್ಚಿದ ಅಬ್ಬಲಿಗೆ ತಾನು ಹೋಗುವ ದಿನ ಹತ್ತಿರ ಬಂದರೂ ಹೂ ಬಿಡುತ್ತಿಲ್ಲ. ಜಾಜಿಯೂ ಅಷ್ಟೇ. ಚಿಗುರುತ್ತ ನುಗ್ಗೆಮರದ ನೆರಳಿನಲ್ಲಿ ತಂಪಾಗಿ ಹರಡಿಕೊಳ್ಳುತ್ತಿದೆಯೇ ಹೊರತು ಹೂವಾಗುತ್ತಿಲ್ಲ. ಜರೀನ್ ಕೊಟ್ಟ ಹೂಗಿಡಗಳು. ಸೈಮನ್ ಗೊಬ್ಬರ, £ೀರು ಹಾಕಿ ಬೆಳೆಸಿದವು. ಚಿಗುರುತ್ತಿವೆ, ಸೊಕ್ಕುತ್ತಿವೆ, ಹೂವಾಗಲು ಅವಸರವಿಲ್ಲ.

ಮತ್ತೆ ನೆನಪಾದ ಅಶ್ರಫ್. ಹೂವು ಮುಡಿಯುವ ಭಾರತದ ಹೆಣ್ಣುಮಕ್ಕಳೆಂದರೆ ತನಗೆ ಇಷ್ಟವೆನ್ನುವವ. ಒಬ್ಬಳಿದ್ದರೂ ಒಂಟಿಯೆ£ಸದಂತೆ ಹಿಂದುಸ್ತಾ£ಯಲ್ಲಿ ಮಾತಾಡುವವ. ತಾ£ೀಗ ಒಂದು ತಿಂಗಳು ಮುಂಚೆ ಹೋಗುತ್ತಿದ್ದೇನೆ, ಆದರೆ ಅವ ಬರುವುದು ಎರಡು ತಿಂಗಳು ತಡ.

ಹೂವಿನಗಿಡ ನೋಡುತ್ತ ಎಲ್ಲೆಲ್ಲೋ ಹರಿಯುವ ಮನಸ್ಸು ‘ಅಕ್ಕಾ’ ಎಂಬ ಜರೀನ್ ಕೂಗಿಗೆ ಎಚ್ಚರಗೊಂಡಿತು. ಒಳಬಂದವಳೇ ಬುರ್ಖಾ ಕಳಚಿ ಬದಿಯ ಸಿಲಿಂಡರಿನ ಮೇಲಿಟ್ಟು, ‘ಅಕ್ಕ, ಅರ್ಧ ಕಪ್ ಚಾ ಮಾಡು. £ಮ್ಮ£ಗೆ ಇವತ್ತೇನೋ ನೆಂಟ್ರು ಬರ್ತಾರಂತಲ, ಚಾ ಕುಡಿದು ಅಡಿಗೆ ಶುರುಮಾಡುವ’ ಎಂದು ಸಡಗರಪಟ್ಟುಕೊಂಡಳು. ಅವಳ ಮನೆ ತುಂಬ ಜನ, ಮಕ್ಕಳು. ದಿನ£ತ್ಯ ಕೆಲಸ. ಹೊರಗೆಲ್ಲೂ ಹೋಗದೇ ಗೋಡೆಗಳ ನಡುವೆಯೇ ಇದ್ದರೂ ಅವಳಿಗೆಷ್ಟು ಜೀವನೋತ್ಸಾಹ! ಸ್ವಂತದ ಮೇಲೂ ಅಷ್ಟೇ ಅಕರಾಸ್ಥೆ. £ೀಟಾಗಿ ಕಾಮನಬಿಲ್ಲಿನಂತೆ ಹುಬ್ಬು ಕತ್ತರಿಸಿಕೊಂಡಿದ್ದಾಳೆ. ಕೈಗೆ ಚಿತ್ತಾರದ ಮೆಹಂದಿ. ಮುಡಿಯಲ್ಲಿ ಅವಳೇ ನೆಟ್ಟ ಗಿಡದ ಘಮಘಮಿಸುವ ದುಂಡುಮಲ್ಲಿಗೆ. ಮುಡಿದಿದ್ದನ್ನೇ ತೆಗೆದು ತನಗೂ ಒಂದು ದಂಡೆ ಕೊಟ್ಟು ಸೂಡಿಕೊಳ್ಳುವಂತೆ ಒತ್ತಾಯಿಸಿದಳು.

‘ಅಕ್ಕಾ, ಇಲ್ಲೇ ಹತ್ರದ ಪೇಟೆನಾಗೆ ನಾವು ನಾಕು ಗುಂಟೆ ಜಾಗ ತಗಳದು ಅಂತಾಗಿದೆ. ನಮ್ಮನೆ ಪಿರಿಪಿರಿ ಸಾಕಾಗಿದೆ, ಐದು ಮಕ್ಳ ಜೊತೆ ನಾನು ಹೊರಗೆ ಬರ್ತೀ£, ಅಲ್ಲಿ ಮನೆ ಕಟ್ಟಿಸಿದ್ರಾಯ್ತು ಅಂತ ನಮ್ಮನೇರ್ಗೂ ಹೇಳಿದೀ£. ಹಬ್ಬಕ್ಕೆ ಬರ್ತಾರೆ. ಆಯ್ತು ಅಂದಿದಾರೆ. £ಂ ಜನಕ್ಕೂ ಹೇಳಿದ್ದೆ ಅಕ್ಕಾ. £ೀವೂ ಹಾಗೇ ಮಾಡಿದ್ದು ಒಳ್ಳೇದಾಯ್ತು. ಈ ಹಳ್ಳಿಮನೇಲಿ ಗೇಯ್ದಿದ್ದು ಸಾಕು ನಾವು. ಎಲ್ಲ ಒಟ್ ಇರೋಣ..’

ಓಹ್! ಮೊದಲೇ ನೇಯಲಾಗಿದೆ ಬಣ್ಣಬಣ್ಣದ ಕನಸು..

ಸುಣ್ಣದಷ್ಟು ಬೆಳ್ಳಗಿನ ಜರೀನ್ ಹೇಳುತ್ತ, ಮಾತಾಡುತ್ತ ಎಷ್ಟು ಬೇಗ ಘಮಗುಡುವ ಚಿಕನ್ ಬಿರಿಯಾ£ ತಯಾರಿಸಿಬಿಟ್ಟಳು! ಸಾಮಾನು ಯಾವ್ಯಾವುದು ಎಲ್ಲಿದೆ ಅಂತ ಎಲ್ಲ ಗೊತ್ತಿದೆ ಅವಳಿಗೆ. ಪಾಯಸಕ್ಕೆ ಗೋಡಂಬಿ ಹುಡುಕತೊಡಗಿದಾಗ ಅವಳೇ ಎದ್ದು ಸ್ಟೀಲ್ ಡಬ್ಬಿಯಲ್ಲಿ ಮುಚ್ಚಿಟ್ಟಿದ್ದನ್ನು ತೆಗೆದುಕೊಟ್ಟಳು. ಸಾರಾ ಹುಟ್ಟುಹಬ್ಬದ ದಿನ ಮಾಡಿ ಉಳಿದಿದ್ದು ಆ ಡಬ್ಬಿಯಲ್ಲಿ ಹಾಕಿಟ್ಟಿದ್ದರಂತೆ. ನಮ್ಮನೆ ಮೂಲೆಯೆಲ್ಲ ಅವಳಿಗೆ ಪರಿಚಿತ. ಅಕ್ಕ, ಅಕ್ಕ ಎನ್ನುವ ಅವಳ ಮಾತು ಕೇಳುತ್ತ, ಚಲನವಲನ ನೋಡುವಾಗ ಅವಳ ಮೈ ಮನಸಿನ ಸಂಭ್ರಮ, ಲವಲವಿಕೆಗಳ ಜೀವಮೂಲ ಇಲ್ಲೇ ಎಲ್ಲೋ ಇದೆ ಎ£ಸಿಬಿಟ್ಟಿತು.


ಶುರುವಾಗಲಿರುವ ಮಳೆಗಾಲದ ಮುನ್ಸೂಚನೆ ಏರ್‍ಪೋರ್ಟಿನಲ್ಲಿ ಎದ್ದು ಕಾಣುತ್ತಿತ್ತು. ಮೋಡಕವಿದ ವಾತಾವರಣ. ಬಂದಾಗ ಎಷ್ಟೋ ಅಷ್ಟೇ ಸಂಭ್ರಮದಿಂದ ಹೋಗುವಾಗಲೂ ಮನೆಯವರು ಕಳಿಸಿಕೊಟ್ಟಿದ್ದರು. ಆದರೆ ತನಗೇ ಮನಸು ಭಾರ. ಬ್ಯಾಗುಗಳಂತೂ ಇನ್ನಷ್ಟು ಭಾರ. ಕುಸಿಯುತ್ತಿರುವ ಮನಸು ಸೂಟ್‍ಕೇಸುಗಳ ನಡುವೆ ಅಡಗಿಬಿಟ್ಟಿದೆ. ಹೊರಡುತ್ತಿರುವ ಗಳಿಗೆಯಲ್ಲಿ ಎಲ್ಲ ಮತ್ತಷ್ಟು ಭಾರವೆ£ಸುತ್ತಿದೆ.

ಎಲ್ಲವನ್ನೂ ಸೈಮನ್ ಚೆನ್ನಾಗಿಯೇ £ಭಾಯಿಸಿಕೊಂಡು ಹೋಗುತ್ತಿದ್ದಾನೆ. ಮಕ್ಕಳಿಗೂ ಅಮ್ಮನೇ ಬೇಕು ಎಂದಿಲ್ಲ. ಎಲ್ಲರಿಗೂ ಕನಸುಗಳಿವೆ. ಅವೆಲ್ಲದರ ಸಾಕಾರಕ್ಕೆ ಹಣ ಬೇಕಿದೆ. ದುಡಿಮೆಯ ದಾರಿಗಳೆಲ್ಲ ಸದ್ಯಕ್ಕೆ ತನ್ನ ಮುಂದೇ ತೆರೆದುಕೊಂಡಿವೆ. ಹಣ ಹರಿದುಬರುವ £ರಂತರ ಮೂಲ ತಾನಾಗಬಲ್ಲೆನಾದರೆ ಎಲ್ಲ ನೆಮ್ಮದಿಯಿಂದ ಇದ್ದಾರೆ. ಇನ್ನೊಂದು ಸಲ ಬರುವುದರಲ್ಲಿ ಸಾಧ್ಯವಾದರೆ ಮನೆ ಕಟ್ಟಿ ಮುಗಿಸಿರುತ್ತೇನೆ, ಅಲ್ಲಿ ಅವರಿಗೆ £ನ್ನ ಸಂಬಳ ಹೆಚ್ಚು ಮಾಡಲು ಹೇಳಿ ಅಡ್ವಾನ್ಸ್ ಕಳಿಸು ಎಂದಿದ್ದಾನೆ ಸೈಮನ್. ಮನೆ ಮುಗಿಯುವುದರೊಳಗೆ ನಾನು ಬರಬೇಕಾದ್ದಿಲ್ಲ ಎಂದು ಅವನಾಗಲೇ £ರ್ಧರಿಸಿದ್ದಾನೆ.

ದುಬೈಯಲ್ಲಿರಲಿ, ಊರಲ್ಲೇ ಇರಲಿ, ಎಲ್ಲಿದ್ದರೂ ದುಡಿಯುವುದು ಎಂದಮೇಲೆ ತಾನೇಕೆ ಅಲ್ಲಿ £ರಾಳವಾಗಿರಬಾರದು? ಈ ಮನೆ ತನ್ನ ಮನೆ ಅ£ಸಿದೆಯೆ? ಸಂಸಾರ ತನ್ನ ಸಂಸಾರ ಎ£ಸಿದೆಯೆ? ದುಡ್ಡು ಕಳಿಸುವುದು ಬಿಟ್ಟರೆ ಇಲ್ಲಿನ ದಿನ£ತ್ಯದ ಯಾವ ಗೋಳು, ಗೋಜಲಿಗೂ ಸಾಕ್ಷಿಯಲ್ಲದ ತನ್ನಮೇಲೆ ಅವರಿಗಾದರೂ ಹೇಗೆ ಅಂಟು ಬೆಳೆದೀತು? ಕಣ್ಣಿಂದ ದೂರವಿದ್ದಿದ್ದು ಮನಸಿ£ಂದಲೂ ದೂರ, ಹೊರದೇಶಕ್ಕೆ ಹೋಗುವುದು ಬೇಡವೇ ಬೇಡ ಎಂದು ಮಾಯಿ ಹೇಳುತ್ತಿದ್ದಳು. ಅವಳಿದನ್ನು ಮೊದಲೇ ಊಹಿಸಿದ್ದಳೇ?

ಹೊರಡುವ ಮುನ್ನ ದುಬೈ ಮನೆಯವರಿಗೆ ಫೋನು ಮಾಡಿದಳು. ‘ಇನ್ನು ಅಶ್ರಫ್ ಬರುವುದಿಲ್ಲ, ಸ್ವಲ್ಪ ಗಲಾಟೆಯಾಯಿತು, £ನಗೆ ಗೊತ್ತಿರುವ ಯಾರಾದರೂ ಡ್ರೈವರ್ ಇದ್ದರೆ ಕರಕೊಂಡು ಬಾ’ ಎಂದರು. ಏನು ಗಲಾಟೆ ಆಯಿತೆಂದು ಮತ್ತೆಮತ್ತೆ ಕೇಳಿದರೆ ಚಿನ್ನದ ಬಿಸ್ಕತ್ ನುಂಗಿ ಏರ್‍ಪೋರ್ಟಿನಲ್ಲಿ ಸಿಕ್ಕಿಬಿದ್ದ, ಅವ£ೀಗ ಜೈಲಿನಲ್ಲಿದ್ದಾನೆ ಎಂದಿದ್ದರು. ಅಶ್ರಫ್ ಅಷ್ಟು ದುರಾಸೆಯವನಂತೆ ಕಾಣುತ್ತಿರಲಿಲ್ಲ, ಹಾಗೇಕೆ ಮಾಡಿದ? ಯಾವ ಕಾರಣಕ್ಕೇ ಆಗಲಿ, ಇನ್ನು ಎಂದೆಂದೂ ಅವ ಬರುವುದಿಲ್ಲ ಎಂದುಕೊಳುವಾಗ ಕಣ್ಣು ಮಂಜಾಯಿತು. ವಿಮಾನದಲ್ಲಿ ನೂರಾರು ಜನರ ನಡುವೆ ಕುಳಿತಿದ್ದೂ ಒಂಟಿತನ ಉಸಿರಗೂಡ ಒಳನುಗ್ಗಿತು. ಕೊನೆಮೊದಲಿಲ್ಲದ ಆಗಸದ ಬಯಲಿನಲ್ಲಿ ವಿಮಾನ ಎಷ್ಟು ಒಂಟಿಯೋ ತಾನೂ ಹಾಗೇ.

ದಿನಾ ಕಾರು £ಲಿಸಬಂದಾಗ ಆಡುತ್ತಿದ್ದ ಎರಡು ಕುಶಲದ ಮಾತುಗಳಿಗಷ್ಟೇ ಅಲ್ಲವೇ ಅವನನ್ನು ನೆಚ್ಚಿದ್ದು? ಅವ£ಲ್ಲದಿದ್ದರೆ ತನಗೇಕೆ ಬೇಸರವಾಗಬೇಕು? ಏಕೆ ಒಂಟಿಯೆಂದುಕೊಳ್ಳಬೇಕು? ಅಡುಗೆಮನೆಯ ಪಾತ್ರೆಗಳು, ತೊಟ್ಟ ಬಟ್ಟೆಗಳ ಸುಕ್ಕು, ಇಸ್ತ್ರಿಪೆಟ್ಟಿಗೆಯ ಬಿಸಿ, ಅಳು ಹೀರಿಕೊಂಡ ದಿಂಬು, ಕೊಳೆಯಾದ ನೆಲ, ಪ್ರಾಣಿಪಕ್ಷಿಗಾಳಿಬಿಸಿಲು ಎಲ್ಲವೂ ನನಗಾಗೇ ಅಲ್ಲಿ ಕಾಯುತ್ತಿವೆ; ಕಟ್ಟಲಿರುವ ಮನೆಯು ದುಡಿದು ಕಳಿಸಲಿರುವ ಹಣಕ್ಕಾಗಿ ಇಲ್ಲಿ ಕಾಯುತ್ತಿದೆ. ಹೀಗಿರುವಾಗ ನಾ ಹೇಗೆ ಒಂಟಿ?

ಒಳಗೆ ತುಂಬಿದ್ದು ಹ£ಹ£ ತೊಟ್ಟಿಕ್ಕಿ ಹರಿಯತೊಡಗಿತು. ಎದೆಯಿಂದ ಕಣ್ಣಿಗೆ, ಕಣ್ಣಿಂದ ಮೂಗಿಗೆ ಇಳಿದ ದುಃಖವನ್ನು ಒರೆಸಿಕೊಂಡು ಕಣ್ಮುಚ್ಚಿ ಕುಳಿತಳು. ತಣ್ಣಗೆ ಏನೋ ಕೈಗೆ ತಾಗಿದಂತಾಯಿತು. ಕಣ್ಬಿಟ್ಟರೆ ಪಕ್ಕದ ಸೀಟಿನಲ್ಲಿ ಕೊಸರಾಡುತ್ತ ಕುಳಿತ ಮಗು ಅವಳ ಕೈಮೇಲಿನ ಹಚ್ಚೆಯನ್ನು ತನ್ನ ಬೆರಳಿ£ಂದ ಒತ್ತುತ್ತ ಮುಟ್ಟುತ್ತಿದೆ. ಏನರ್ಥವಾಯಿತು ಅದಕ್ಕೆ? ಕಚಗುಳಿಯಿಟ್ಟಂತೆ ನಕ್ಕು ಅವಳತ್ತ ಬರುತ್ತೇನೆಂದು ಕೊಸರಾಡುತ್ತಿದೆ.

ಪುಟ್ಟ ಮಗುವಿನ ಸ್ಪರ್ಶದ ಮೃದು ಅನುಭವಿಸುವಾಗ ಮೂರು ಮಕ್ಕಳ ಹೆತ್ತದ್ದು, ಅವರ ದೇಖರೇಖಿಗಾಗಿ ಒದ್ದಾಡಿದ್ದು ನೆನಪಾಯಿತು. ಅರೆಅರೆ, ಗೂಡಿನ ಮರಿಗಳ ರೆಕ್ಕೆ ಬಲಿವವರೆಗೆ ಅವನ್ನು ಗುಟುಕು ಕೊಟ್ಟು ಕಾಪಾಡುವುದು, ಗುಟುಕನರಸಿ ದೂರತೀರಗಳ ಎಡತಾಕುವುದೂ ಒಂದು ಸಾಧನೆಯೇ ಅಲ್ಲವೇ? ನಾನೊಬ್ಬಳೇ ಅಲ್ಲವಲ್ಲ ಹೀಗೆ ಹೊರಗಿದ್ದು ದುಡಿಯುತ್ತಿರುವುದು? ನಾನೇಕೆ ಏನೇನೋ ಯೋಚಿಸುತ್ತಿರುವೆ? ಇನ್ನು ನಾಕಾರು ವರ್ಷ ಗೇಯ್ದು ಬಂದರಾಯಿತು, ಬಂದಮೇಲೆ ಮತ್ತೆ ಮಕ್ಕಳು, ಮೊಮ್ಮಕ್ಕಳೆಂದು ಮೊದಲಿನಂತಾದೀತು ಎ£ಸಿ ಇದ್ದಕ್ಕಿದ್ದಂತೆ ಹೆಮ್ಮೆ ಬೆರೆತ ಜವಾಬ್ದಾರಿಯೂ, ತೃಪ್ತ ಭಾವವೂ ಹುಟ್ಟಿ ಹಗುರವಾಯಿತು.

ವಿಮಾನ ಟೇಕಾಫ್ ಆಯಿತು.

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *