
ಪ್ರಧಾನಿ ಮೋದಿ ಮತ್ತು ಶ್ರೀಮಂತ ಐಶಾರಾಮಿಗಳ ಆರೋಗ್ಯವನ್ನು ಕಾಪಾಡುವ ಅಣಬೆಗಳೆಂದರೆ ಎಲ್ಲರಿಗೂ ಇಷ್ಟ.
ನೈಸರ್ಗಿಕ ಅಣಬೆಗಳನ್ನು ವರ್ಷವಿಡಿ ಸಂಗ್ರಹಿಸಲು ಸಾಧ್ಯವಿಲ್ಲ ಹಾಗಾಗಿ ವರ್ಷವಿಡೀ ಬೆಳೆಯುವ ಕೃತಕ ಅಣಬೆಗಳು ಅಣಬೆಪ್ರೀಯರನ್ನು ಸಮಾಧಾನಪಡಿಸುತ್ತವೆ.
ಹೆಚ್ಚಿನ ಉಷ್ಣಾಂಶ,ನೀರು ಬಯಸುವ ಅಣಬೆ ಕೃಷಿ ಅಷ್ಟು ಸುಲಭಸಾಧ್ಯ ಕೆಲಸವೂ ಅಲ್ಲ. ಹೆಚ್ಚಿನ ಉಷ್ಣಾಂಶದ ಕರಾವಳಿ, ಬಯಲುಸೀಮೆಯಲ್ಲಿ ಬೆಳೆಯಲು ಯೋಗ್ಯವಾದ ಅಣಬೆಯನ್ನು ಸಿದ್ಧಾಪುರದಂಥ ಮಲೆನಾಡಿನ ತಂಪಿನ ವಾತಾವರಣದಲ್ಲಿ ಬೆಳೆದು ತೋರಿಸುವ ಮೂಲಕ ಹದಿನಾರನೇ ಮೈಲಿಕಲ್ಲು ಗಿಳಿಲಗುಂಡಿಯ ದಯಾನಂದ ನಾಯ್ಕ ಸಾಧನೆ ಮಾಡುತಿದ್ದಾರೆ.
ದಯಾನಂದ ನಾಯ್ಕರ ಕುಟುಂಬ ಕರಾವಳಿಯಿಂದ 30-35 ವರ್ಷಗಳ ಹಿಂದೆ ಇಲ್ಲಿಗೆ ಬಂದು ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಕೃಷಿ ಜೊತೆಗೆ ಈ ಕುಟುಂಬದ ಇಬ್ಬರು ಯುವಕರು ಸರ್ಕಾರಿ ನೌಕರಿಮಾಡುತ್ತಾರೆ. ವಿಶೇಶವೆಂದರೆ… ಈ ಇಬ್ಬರು ಸಹೋದರರಿಗಿಂತ ಹೆಚ್ಚು ಕಲಿತವರು ಮಧ್ಯದ ಸಹೋದರ ದಯಾನಂದ, ಎಂ.ಕಾಂ ಪದವಿಧರರಾದ ದಯಾನಂದರಿಗೆ ಎಲ್ಲರಂತೆ ಮೊದಲು ಆಕರ್ಷಿಸಿದ್ದು ಬೆಂಗಳೂರು.
ಬೆಂಗಳೂರಿನ ಅನ್ಯರ ಕೆಳಗಿನ ಕೆಲಸ ಹೆಚ್ಚುದಿನ ಬೇಡ ಎಂದು ತೀರ್ಮಾನಿಸಿದವರಿಗೆ ಕಾಲ್ ಸೆಂಟರ್ ಉದ್ಯೋಗ ಮಾಡುವ ಯೋಚನೆ ಬಂದು ಬೆಂಗಳೂರಿನಿಂದ ಕರಾವಳಿಯವರೆಗೆ 50-60 ಜನರಿಗೆ ಕೆಲಸಕೊಟ್ಟ ಇವರ ದುರಾದೃಷ್ಟಕ್ಕೆ ಕೇಂದ್ರಸರ್ಕಾರದ ಜಿಯೋ ಏಕಸ್ವಾಮ್ಯದ ಪರಿಣಾಮ ಕಾಲ್ ಸೆಂಟರ್ ಮುಚ್ಚುವ ಅನಿವಾರ್ಯತೆ ಬಂದೊದಗಿತು.
ಅಲ್ಲಿಂದ ಮನೆ ಸೇರಿದ ದಯಾನಂದರಿಗೆ ಕೃಷಿಯ ಒಲವು ಶುರುವಾಯಿತು. ಇದರ ಪರಿಣಾಮ ಈಗ ನೂರಾರು ಕೆ.ಜಿ. ಅಣಬೆ ಬೆಳೆಯುವ ಇವರಿಗೆ ಅಣಬೆ ಬೆಳೆಯುವ ಮೂಲಕ ಸ್ಥಳಿಯರ ಆರೋಗ್ಯದ ರಕ್ಷಣೆಯೊಂದಿಗೆತಮ್ಮ ಆರ್ಥಿಕ ಚೇತರಿಕೆಗೂ ಶ್ರಮಿಸುವ ಅವಕಾಶ.
ಕಳೆದ ಒಂದು ವರ್ಷದಲ್ಲಿ ನೂರಾರು ಕೆ.ಜಿ. ಅಣಬೆ ಬೆಳೆದು ವಾತಾವರಣ,ಮಾರುಕಟ್ಟೆ ಅಭ್ಯಸಿಸುತ್ತಿರುವ ದಯಾನಂದ ಹೊರಗೆ ಯಾರದೋ ಕಂಪನಿಗಾಗಿ ದುಡಿಯುವುದಕ್ಕಿಂತ ನಮಗೆ, ನಮ್ಮೂರಿನ ಜನರಿಗಾಗಿ ಶ್ರಮಿಸುವಲ್ಲಿ ಸುಖ ಕಾಣುವ ಹಂಬಲ.
ಈಗಾಗಲೇ ಶಿರಸಿ-ಸಿದ್ಧಾಪುರದಲ್ಲಿ ಮಾರುಕಟ್ಟೆ ಮಾಡಿಕೊಂಡಿರುವ ದಯಾನಂದ ಇನ್ನೂ ಹೆಚ್ಚಿನ ಅಣಬೆ ಬೆಳೆಯುವ ಮೂಲಕ ದೊಡ್ಡ ಮಾರುಕಟ್ಟೆ ಸೃಷ್ಟಿಸುವ ಉತ್ಸಾಹದಲ್ಲಿದ್ದಾರೆ. ಅಣಬೆ ಬೆಳೆಗೆ ಸರ್ಕಾರದಿಂದ ಬೆಂಬಲ-ಪ್ರೋತ್ಸಾಹಗಳಿದ್ದರೂ ಅಣಬೆ ಬೀಜ ಇನ್ನಿತರ ಅನುಕೂಲಕ್ಕಾಗಿ ಶಿವಮೊಗ್ಗ, ಬೆಂಗಳೂರುಗಳಿಗೆ ಧಾವಿಸಬೇಕು. ಸ್ಥಳಿಯವಾಗಿ ಉತ್ತಮ ಮಾರುಕಟ್ಟೆ, ಸರ್ಕಾರ, ಹಣಕಾಸು ಸಂಸ್ಥೆಗಳ ನೆರವು ದೊರೆತರೆ ಅಣಬೆ ಉದ್ಯಮ ಸಣ್ಣ ಉದ್ಯಮವಾಗಿ ಬೆಳೆಯಬಹುದೆನ್ನುವ ನಿರೀಕ್ಷೆಯಲ್ಲಿರುವ ದಯಾನಂದ ಆ ದಿಸೆಯಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಆರೋಗ್ಯವರ್ಧಕ,ನೈಸರ್ಗಿಕ ಅಣಬೆ ಕೃಷಿ ಬೆಳೆದರೆ ಜನರ ಆರೋಗ್ಯ ಸುಧಾರಿಸುತ್ತದೆ ಎನ್ನುವ ಯೋಚನೆಯಿಂದ ಮರಳಿಮಣ್ಣಿಗೆ ಬಂದಿರುವ ದಯಾನಂದರಂಥ ಯುವಕರು ಮಾಡುವ ಪ್ರಯೋಗಗಳಿಗೆ ಜನರ ಸಹಕಾರ ದೊರೆತರೆ ಅನುಕೂಲ.



