

ಭಾರತದಲ್ಲಿ ಕೊರೋನಾ ವಿಸ್ತರಿಸಲು ಆಡಳಿತ ಪಕ್ಷ ಬಿ.ಜೆ.ಪಿ.ಯ ರಾಜಕೀಯ ಕಾರಣ ಎಂದು ಆರೋಪಿಸಲಾಗುತ್ತಿದೆ. ವಿಮಾನಯಾನ ನಿಲ್ಲಿಸದಿರಲೂ ಮಧ್ಯಪ್ರದೇಶದ ಶಾಸಕರ ಹೊತ್ತೊಯ್ಯುವ ಪ್ರಬಲ ಕಾರಣ ಎನ್ನಲಾಗುತ್ತಿದೆ. ವಿಶೇಶವೆಂದರೆ…… ಬೆಂಗಳೂರಿನಿಂದ ಕಾಂಗ್ರೆಸ್ ಗೆ ರಾಜೀನಾಮೆ ನೀಡಿ ಬಿ.ಜೆ.ಪಿ.ಸರ್ಕಾರ ರಚನೆಯಾದ ನಂತರ ಇಲ್ಲಿಂದ ತೆರಳಿದ ವಿಶೇಶ ವಿಮಾನ ಮಧ್ಯಪ್ರದೇಶ ತಲುಪುತಿದ್ದಂತೆ ದೇಶದಾದ್ಯಂತ ವಿಮಾನಯಾನ ನಿಲ್ಲಿಸಲಾಗಿದೆ!


Gladson Almeida ಅವರ ಬರಹ
ಮಧ್ಯಪ್ರದೇಶದಲ್ಲಿ ಕೋವಿಡ್ ಪ್ರಕರಣಗಳು ವರದಿಯಾಗುವ ಮೊದಲೇ ಹಿಂದಿನ ಮುಖ್ಯಮಂತ್ರಿ ಕಮಲ್‍ನಾಥ್ ಲಾಕ್‍ಡೌನ್ ಘೋಷಿಸಲು ಉದ್ದೇಶಿಸಿ, ವಿಧಾನಮಂಡಲದ ಅಧಿವೇಶನವನ್ನು ಮುಂದೂಡಿದ್ದರು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಆದರೆ ಕಮಲ್‍ನಾಥ್ ಸರ್ಕಾರವನ್ನು ಉರುಳಿಸಿ, ಅಧಿಕಾರಕ್ಕೇರಲು ಹವಣಿಸುತ್ತಿದ್ದ ಬಿಜೆಪಿಯವರು, ಕೋರ್ಟ್ ಮುಖಾಂತರ ಆದೇಶ ತಂದು, ವಿಧಾನಮಂಡಲದ ಅಧಿವೇಶನ ನಡೆಸಿ, ಸರ್ಕಾರವನ್ನು ಬೀಳಿಸಿದ್ರು. ಇದಾಗಿ ನಾಳೆಗೆ 25 ದಿನಗಳಾಗುತ್ತಿವೆ.
ಮುಖ್ಯಮಂತ್ರಿಯಾಗಿ ಶಿವರಾಜ್ ಸಿಂಗ್ ಚೌಹಾನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದರೆ ಇದುವರೆಗೂ ಮಂತ್ರಿಮಂಡಲ ರಚಿಸಿಲ್ಲ. ಆರೋಗ್ಯ ಮಂತ್ರಿ ಇಲ್ಲ, ವೈದ್ಯಕೀಯ ಶಿಕ್ಷಣ ಮಂತ್ರಿ ಇಲ್ಲ, ಹಣಕಾಸು, ಗೃಹ… ಊಹೂಂ ಒಬ್ಬರೇ ಒಬ್ಬ ಮಂತ್ರಿಯಿಲ್ಲ. ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಲು, ಆದೇಶ ನೀಡಲೂ ಯಾರಿಲ್ಲ. ಮಂತ್ರಿಗಳನ್ನು ನೇಮಿಸದಿದ್ದರೂ, ಆರೋಗ್ಯ ಇಲಾಖೆಯ ಆಯುಕ್ತರಾಗಿದ್ದವರನ್ನು ಶಿವರಾಜ್ ಸಿಂಗ್ ವರ್ಗಾವಣೆ ಮಾಡಿ, ಆ ಜಾಗಕ್ಕೆ ಹೊಸಬರನ್ನು ನೇಮಿಸಿದ್ದಾರೆ.
ಈ ಮಧ್ಯೆ ಮಂತ್ರಿಗಳ ಅನುಪಸ್ಥಿತಿಯಲ್ಲಿ ಸ್ವತ: ಫೀಲ್ಡಿಗಿಳಿದು ಕೋವಿಡ್ ಸಮರದ ನೇತೃತ್ವ ವಹಿಸಿದ್ದ ರಾಜ್ಯ ಆರೋಗ್ಯ ಇಲಾಖೆಯ 32 ಅಧಿಕಾರಿಗಳು ಕೋವಿಡ್ ಪಾಸಿಟಿವ್ ಆಗಿ ಆಸ್ಪತ್ರೆ ಸೇರಿದ್ದಾರೆ. ಇದರಲ್ಲಿ ಇಲಾಖೆಯ ಮುಖ್ಯ ಕಾರ್ಯದರ್ಶಿ ಪಲ್ಲವಿ ಜೈನ್, ಆರೋಗ್ಯ ಇಲಾಖೆ ನಿರ್ದೇಶಕ ವಿಜಯ್ ಕುಮಾರ್, ಹೆಚ್ಚುವರಿ ನಿರ್ದೇಶಕಿ ವೀಣಾ ಸಿನ್ಹಾ ಮುಂತಾದ ಹಿರಿಯ ಅಧಿಕಾರಿಗಳೂ ಸೇರಿದ್ದಾರೆ. ಇವರು ಕೋವಿಡ್ ಸೋಂಕಿನ ಲಕ್ಷಣಗಳಿದ್ದರೂ ದಿನನಿತ್ಯ ಕಛೇರಿಗೆ ಬಂದು ಕೆಲಸ ಮಾಡಿದ ಕಾರಣ ಅನೇಕರಿಗೆ ಸೋಂಕನ್ನು ತಗಲಿಸಿದ್ದಾರೆ. ಹಾಗಾಗಿ ಆರೋಗ್ಯ ಇಲಾಖೆಗೆ ಮೊನ್ನೆಯಷ್ಟೆ ನಿಯುಕ್ತರಾಗಿದ್ದ ಹೊಸ ಆಯುಕ್ತ ಫೈಜ್ ಅಹ್ಮದ್ ಕಿದ್ವಾಯಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅನುರಾಗ್ ಜೈನ್ ಕ್ವಾರಂಟೀನ್‍ಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ.
ಮಂತ್ರಿಗಳಿಲ್ಲ, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕೋವಿಡ್ ಪಾಸಿಟಿವ್, ಆಯುಕ್ತರು ಕ್ವಾರಂಟೀನ್‍ಗೆ. ಹೀಗೆ ಮಧ್ಯಪ್ರದೇಶದ ಪರಿಸ್ಥಿತಿ ಚಿಂತಾಜನಕವಾಗಿದೆ. ಕೋವಿಡ್ ಕಾರ್ಯಾಚರಣೆಯ ನೇತೃತ್ವ ನೋಡಿಕೊಳ್ಳಲೂ ಯಾರೂ ಇಲ್ಲ. ಮುಖ್ಯಮಂತ್ರಿ ಶಿವರಾಜ್ ಸಿಂಗ್ ಹಾಗೂ ಮುಖ್ಯ ಕಾರ್ಯದರ್ಶಿ ಇಬ್ಬರೇ ಎಲ್ಲವನ್ನೂ ನೋಡಬೇಕಾದ ದಯನೀಯ ಸ್ಥಿತಿ. ರಾಜ್ಯದಲ್ಲಿ ಇದುವರೆಗೆ ಸುಮಾರು 550 ಪ್ರಕರಣಗಳು ದಾಖಲಾಗಿದ್ದು 36 ಮಂದಿ ಮರಣ ಹೊಂದಿದ್ದಾರೆ.
ಜಸ್ಟ್ ಇಮ್ಯಾಜೀನ್ ಇಂಥದೊಂದು ಪ್ರಕರಣ ಬಿಜೆಪಿಯೇತರ ರಾಜ್ಯಗಳಲ್ಲಾಗಿದ್ದರೆ?
ಇಂಥ ಸೂಕ್ಷ್ಮ ಸಮಯದಲ್ಲಿ ಇದ್ದ ಸರಕಾರವನ್ನು ಉರುಳಿಸಿ, ಶತಾಯಗತಾಯವಾಗಿ ಅಧಿಕಾರಕ್ಕೇರಲೇಬೇಕೆಂದವರ ಅಧಿಕಾರ ದಾಹ ಯಾವ ಮಟ್ಟದ್ದಾಗಿರಬಹುದು?
ಅದೂ ಸ್ವಂತ ಬಲವಿಲ್ಲದೆ, ಆಡಳಿತ ಪಕ್ಷದ ಶಾಸಕರನ್ನು ಹೈಜಾಕ್ ಮಾಡಿ, ವಾಮಮಾರ್ಗದಿಂದ ಸರಕಾರ ಮಾಡಲು ಇಷ್ಟೊಂದು ಆತುರವೇ?
ಎಲ್ಲಾ ರಾಜಕೀಯ ಪಕ್ಷಗಳೂ ಅಧಿಕಾರ ದಾಹಿಗಳೇ. ಆದರೆ ಸದ್ಯಕ್ಕೆ ನಮ್ಮ ದೇಶದಲ್ಲಿರುವುದು ಹಿಂದೆಂದೂ ಕಂಡಿರದ ಅಧಿಕಾರದ ಹಪಹಪಿತನ. ತೋಳ್ಬಲ, ಹಣಬಲದ ಪ್ರದರ್ಶನ.
ಆದರೆ ಇದನ್ನೂ ಸಮರ್ಥಿಸುವ ನಾಚಿಕೆಗೆಟ್ಟ ಮಾಧ್ಯಮಗಳು ಹಾಗೂ ವ್ಯಕ್ತಿಪೂಜೆಯಲ್ಲಿ ವಾಸ್ತವಕ್ಕೆ ಬೆನ್ನುಮಾಡಿ, ಭಾಷಣಗಳು, ಸಿನಿಮೀಯಾ ಡೈಲಾಗುಗಳು, ವ್ಯಕ್ತಿತ್ವಹರಣಕ್ಕೆ ಮಾರುಹೋಗಿರುವ ಬಾಲ್ಕನಿ ಕ್ಲಾಸ್.
ತಲೆಗೆ ಸುರಿದ ನೀರು ಬುಡಕ್ಕೆ ಬರಲೇಬೇಕು. ಅದು ಬಂದೇ ಬರುತ್ತೆ. ವಿಷಾದವೆಂದರೆ ಅಷ್ಟೊತ್ತಿಗೆ ಎಪ್ಪತ್ತು ವರುಷಗಳಲ್ಲಿ ಕಟ್ಟಿದ ದೇಶ ಎಲ್ಲಿಗೆ ಹೋಗಿರುತ್ತೋ?
