

ನ್ಯಾಯಾಧೀಶ: ನೀನೇಕೆ ಮಾರುಕಟ್ಟೆಯಲ್ಲಿ ಆ ಮಹಿಳೆಯ ಪರ್ಸನ್ನುಕದ್ದೆ?
16 ವರ್ಷದ ಬಾಲಾಪರಾಧಿ: ನನ್ನ ತಾಯಿ ಹಸಿವೆಯಿಂದ ನರಳುವುದನ್ನು ನೋಡಲಾಗಲಿಲ್ಲ. ತಾಯಿಗೆ ಏನಾದರೂ ತಿನ್ನಲು ತರಲು ಹಣವಿಲ್ಲದೆ, ದುಡಿಮೆಯಿಲ್ಲದೆ ಬೇರೆ ದಾರಿ ಕಾಣದೆ ಪರ್ಸ್ ಕದ್ದೆ.ನ್ಯಾಯಾಧೀಶರು ಅಪರಾಧಿಯ ಬಿಡುಗಡೆಗೆ ಆಜ್ಞೆ ಮಾಡುತ್ತಾರೆ. ಅಷ್ಟೇ ಅಲ್ಲ, ಆತನಿಗೆ ದಿನಸಿ, ತರಕಾರಿ, ಬಟ್ಟೆಬರೆ ತಂದು ಕೊಡಲು ನ್ಯಾಯಾಲಯದ ಸಿಬ್ಬಂದಿಯೊಬ್ಬರಿಗೆ ಹಣವನ್ನು ಕೊಡುತ್ತಾರೆ. ನ್ಯಾಯಾಲಯದಲ್ಲಿ ನೆರೆದ ಹಲವರ ಕಣ್ಣು ಒದ್ದೆಯಾಗುತ್ತದೆ…ಇದು ಯಾವುದೋ ಹಳೇಯ ಕನ್ನಡ ಹಿಂದಿ ಸಿನಿಮಾದ ದೃಶ್ಯವಲ್ಲ. ಏಪ್ರಿಲ್ 17 ರಂದು ಬಿಹಾರಿನ ನಾಲಂದದ ಕೋರ್ಟೊಂದರಲ್ಲಿ ನಡೆದ ಅಪರೂಪದ ಘಟನೆ. ಕೆಲವು ವರ್ಷಗಳ ಹಿಂದೆ ಈ ಬಾಲಕನ ಅಪ್ಪ ತೀರಿಕೊಂಡ ನಂತರ ತಾಯಿ ಮತ್ತು 12 ವರ್ಷ ಪ್ರಾಯದ ತಮ್ಮನ ಜವಾಬ್ದಾರಿ ಇವನದಾಯಿತು. ತಾಯಿ ಮಾನಸಿಕವಾಗಿ ಅಸ್ವಸ್ಥಳು. ಯಾವುದೋ ಘಟನೆಯಲ್ಲಿ ಬಾಲಕನ ಕಾಲಿನ ಮೂಳೆ ಪೆಟ್ಟಾಗಿ ಕುಂಟಾಗಿದೆ. ಅದೂ ಸಾಲದೆಂಬಂತೆ ಕೆಲ ಸಮಯದ ಹಿಂದೆ ಕಲ್ಲು ತಾಗಿ ಇವನ ಬಲಗಣ್ಣು ಕುರುಡಾಗಿದೆ. ಹೀಗಿದ್ದರೂ ಸ್ಥಳೀಯ ಮಾರುಕಟ್ಟೆಯಲ್ಲಿ ಕೂಲಿನಾಲಿ ಮಾಡಿ ಹೇಗೋ ಕುಟುಂಬದ ಹೊಟ್ಟೆ ಹೊರೆಯುತ್ತಿದ್ದ. ಆದರೆ ಕೊರೋನಾ ಹಿನ್ನೆಲೆಯಲ್ಲಿ ಏಕಾಏಕಿ ಹೇರಲಾದ ಲಾಕ್ ಡೌನ್ ಅದನ್ನೂ ಇಲ್ಲವಾಗಿಸಿತು. ಕಳೆದ ತಿಂಗಳು ಮಾರುಕಟ್ಟೆಗೆ ಹೋದಾಗ ಒಬ್ಬ ಮಹಿಳೆಯ ಪರ್ಸನ್ನು ಕದ್ದ. ಸಿಸಿ ಟಿವಿಯ ಸಹಾಯದಿಂದ ಪೋಲಿಸರು ಇವನನ್ನು ಪತ್ತೆ ಹಚ್ಚಿ ಕೇಸು ಹಾಕಿ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ರ ಎದುರು ಹಾಜರು ಪಡಿಸಿದ್ದರು. ನ್ಯಾಯಾಧೀಶರ ಆಜ್ಞೆಯಂತೆ ಬಾಲಕನನ್ನು ಆತನ ಮನೆ ಮುಟ್ಟಿಸಲು ಹೋದ ಪೋಲಿಸರು ಆತನ ಮನೆಯ ಸ್ಥಿತಿ ನೋಡಿ ದಂಗಾದರು! ಮನೆ ಎಂದರೆ ಮುರುಕಲು ಗೋಡೆ, ಹರಿದ ಸೋಗೆಯ ಮಾಡು, ಅಷ್ಟೇ. ಮನೆಯಲ್ಲಿ ಚಾಪೆ ಇನ್ನಿತರ ವಸ್ತುಗಳು ಬಿಡಿ ಆಹಾರ ಬೇಯಿಸಲು ಇಂದು ಸ್ಟವ್ ಕೂಡಾ ಇಲ್ಲ! ತರಗೆಲೆ ಕಸಕಡ್ಡಿಗೆ ಬೆಂಕಿ ಹಾಕಿ ಅದರಲ್ಲಿ ಬೇಯಿಸಬೇಕು. ಆಧಾರ್, ರೇಷನ್ ಕಾರ್ಡ್ ಕೂಡಾ ಇಲ್ಲ. ನ್ಯಾಯಧೀಶರ ಆಜ್ಞೆಯ ಮೇರೆಗೆ ಸ್ಥಳೀಯಾಡಳಿತ ಬಾಲಕನ ಕುಟುಂಬಕ್ಕೆ ಜೀವನಾವಶ್ಯಕಗಳನ್ನು ಒದಗಿಸಲು ಈಗ ಮುಂದಾಗಿದೆ.(ಸಾಂದರ್ಭಿಕ ಚಿತ್ರ)

