ಉದಯಕುಮಾರ್ ಹಬ್ಬು ಅವರ `ಬೊಪ್ಪ ನನ್ನನ್ನು ಕ್ಷಮಿಸು’ ಶೀರ್ಷಿಕೆಯಿಂದಲೇ ಸೆಳೆದುಕೊಳ್ಳುವ ಕಥಾನಕ. ಆತ್ಮಕತೆಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುವ ಕೃತಿ. ಗಾಂಧೀಜಿ ಪ್ರಭಾವಕ್ಕೆ ಒಳಗಾಗಿದ್ದ ಶಾನುಭೋಗ ಹಬ್ಬು ಅವರ ತತ್ವನಿಷ್ಠ ಬದುಕು ಕರುಣಿಸಿದ ಬಡತನವನ್ನು ಎದುರಿಸಿ ಬದುಕು ಕಟ್ಟಿಕೊಂಡ ಸಾಹಸಗಾಥೆ. ತಂದೆ ತಾಯಿ ಅಣ್ಣ ತಮ್ಮಂದಿರ ತುಂಬು ಕುಟುಂಬದಲ್ಲಿದ್ದರೂ ಬಾಲ್ಯದ ದಿನಗಳನ್ನು ಕಂಡವರ ಮನೆಗಳಲ್ಲಿ ಕಳೆಯಬೇಕಾದ ಪರಿಸ್ಥಿತಿಯನ್ನು ಉದಯಕುಮಾರ್ ಎಳೆಎಳೆಯಾಗಿ ಬಿಡಿಸಿ ಕೊಟ್ಟಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ ಪಟೇಲರ ಮನೆಯಲ್ಲಿ, ನಂತರದ ಮೂರು-ನಾಲ್ಕು ವರ್ಷಗಳನ್ನು ಉಮ್ಮಚ್ಚಿ, ಹಳದೀಪುರ, ಬರಬಳ್ಳಿ ಎಂಬಲ್ಲಿ ಅಜ್ಜಿಯ ಮನೆ, ಸಂಬಂಧವೇ ಇಲ್ಲದ ಇನ್ನೊಬ್ಬ ಭಟ್ಟರ ಮನೆಯಲ್ಲಿ ಕಳೆದ ದಿನಗಳು ಮನಸ್ಸನ್ನು ಕಲಕುವ ಹೃದಯಸ್ಪರ್ಶಿ ಘಟನೆಗಳಿಂದ ಕೂಡಿವೆ. ಓದಿನ ನಿಮಿತ್ತ ಒಂಬತ್ತನೆಯ ವರ್ಷದಲ್ಲಿಯೇ ಅಪ್ಪ, ಅವ್ವ, ಅಣ್ಣ ತಮ್ಮ ಇದ್ದ ತುಂಬು ಕುಟುಂಬದಿಂದ ದೂರ ಹೋಗಿ ಪರ ಊರಿನಲ್ಲಿ ಪರದೇಸಿಯಂತೆ ಐದು ವರ್ಷಗಳನ್ನು ಕಳೆದಿದ್ದ ನನಗೆ ಹಬ್ಬು ಅವರ ಅಂದಿನ ದಿನಗಳ ಕಷ್ಟ ಕಾರ್ಪಣ್ಯಗಳು ನನ್ನದೇ ಅನುಭವಗಳನ್ನು ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದವು (ಬಹು ವರ್ಷಗಳ ಹಿಂದೆ ಓದಿದ್ದ ನೊಬಡಿಸ್ ಚೈಲ್ಡ್ ಇಂಗ್ಲಿಷ್ ಕೃತಿಯ ನೆನಪು ಕೂಡ ಬಂದಿತು).
ಬಡತನದ ಕಾರಣ ಎದುರಾಗುತ್ತಿದ್ದ ಅಪಮಾನ, ಅವಗಣನೆ, ತಿರಸ್ಕಾರಗಳ ನಡುವೆಯೂ ಶಿಕ್ಷಣವನ್ನು ಕೈಬಿಡಲಾಗದ ದಿಟ್ಟ ಸಂಕಲ್ಪ, ಅದಕ್ಕಾಗಿ ನೇಗಿಲು ಹಿಡಿದು ಗೆಯ್ಯುವ, ಅಂಗಡಿಯಲ್ಲಿ ದುಡಿಯುವ ಪರಿಸ್ಥಿತಿಗೆ ಒಯ್ಯುವುದನ್ನು ಅನುಕಂಪಕ್ಕೆ ಆಸ್ಪದ ಇಲ್ಲದ ರೀತಿಯಲ್ಲಿ ನಿರ್ಲಿಪ್ತ ಭಾವದಲ್ಲಿ ನಿರೂಪಿಸಿರುವುದು ಹಬ್ಬು ಅವರ ಬರವಣಿಗೆಯ ಹೆಚ್ಚುಗಾರಿಕೆ.
ಉದಯಕುಮಾರ್ ಅವರ ಸೋದರರಲ್ಲಿ ಒಬ್ಬರಾದ ಅರುಣ ಕುಮಾರ್ ಹಬ್ಬು ಪ್ರಜಾವಾಣಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದವರು. ನನ್ನೊಂದಿಗೆ ಒಂದೇ ಪಾಳಿಯಲ್ಲಿ ಕೆಲಸ ಮಾಡಿದ ಸಜ್ಜನರು. ಆದ್ದರಿಂದ ಈ ಕಥಾನಕ ಹೆಚ್ಚು ಆಪ್ತವಾಗಿ ನನ್ನನ್ನು ತಟ್ಟಿದೆ. ಉದಯಕುಮಾರ್ ಅವರು ಫೇಸ್ ಬುಕ್ ನಲ್ಲಿ ಹಾಕಿದ್ದ ದಾರಾಶಿಕೊ ಕುರಿತ ಕಾದಂಬರಿಯನ್ನು ಕುತೂಹಲದಿಂದ ಗಮನಿಸಿದ್ದವನಿಗೆ ಈ ಕೃತಿಯ ಬಗ್ಗೆ ಹೆಚ್ಚಿನ ಆಸಕ್ತಿ ಮೂಡಿತ್ತು. ಅವರ ಈ ಆತ್ಮಕತೆಯ ವಿವರಗಳು ಮನಸ್ಸನ್ನು ಕಲಕುವಷ್ಟು ಭಾವತೀವ್ರತೆಯಿಂದ ಕೂಡಿವೆ.
ಉಡುಪಿ ಜಿಲ್ಲೆಯ ಮುಂಡ್ಕೂರಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ಕೆಲಸ ಮಾಡಿ ನಿವೃತ್ತರಾಗಿರುವ ಉದಯಕುಮಾರ್ ಹಬ್ಬು ಸದ್ಯ ಕಿನ್ನಿಗೋಳಿಯಲ್ಲಿ ನೆಲೆಸಿ ಓದು ಬರವಣಿಗೆಯಲ್ಲಿ ನಿರತರಾಗಿ, ವರ್ತಮಾನದ ಸಂಗತಿಗಳಿಗೆ ಆರೋಗ್ಯಕರವಾಗಿ ಸ್ಪಂದಿಸುತ್ತಿರುವುದನ್ನು ಗಮನಿಸುತ್ತಿದ್ದೇನೆ. ಒಳ್ಳೆಯ ಓದಿನ ಕೃತಿಯನ್ನು ನೀಡಿದ ಹಬ್ಬು ಅವರಿಗೆ ಅಭಿನಂದನೆಗಳು..