

ಸ್ವಲ್ಪ ದಿನಗಳ ಹಿಂದೆ ಟೈಂ ಪಾಸ್‌ಗಾಗಿ ಸೋಶಿಯಲ್ ಮೀಡಿಯಾ ಜಾಲಾಡುತ್ತಿದ್ದಾಗ ಫ್ರೆಂಡ್ ಒಬ್ಬರು ಬರೆದ ಪುಸ್ತಕದ ಶೀರ್ಷಿಕೆಯೊಂದು ಕಣ್ಣಿಗೆ ಬಿತ್ತು. ಬಹಳ ಚೆನ್ನಾಗಿರುವಪುಸ್ತಕ ಅಂತೆಲ್ಲ ಬರೆದಿದ್ದರು. ನಾನು ಬಿಡಲಿಲ್ಲ. ಅಂತರ್ಜಾಲವನ್ನೆಲ್ಲಾ ಜಾಲಾಡಿ ಸ್ವಪ್ನಾ ಪುಸ್ತಕಾಲಯದಿಂದ ಆ ಪುಸ್ತಕ ತರಿಸಿಯೇ ಬಿಟ್ಟೆ. ಪುಸ್ತಕದ ಹುಳ ನಾನು. ಬಿಡುತ್ತೀನಾ? ಆ ಪುಸ್ತಕವೇ “ಪುನರ್ವಸು”.
ಡಾ. ಗಜಾನನ ಶರ್ಮಾರಿಂದ ರಚಿತವಾಗಿ, ಅಂಕಿತಾ ಪುಸ್ತಕದಿಂದ ಪ್ರಕಾಶಿತವಾದ ಅತ್ಯದ್ಭುತ ಕಾದಂಬರಿ "ಪುನರ್ವಸು". 544 ಪುಟಗಳಲ್ಲಿ ಅಡಕವಾಗಿರುವ ಈ ಕಾದಂಬರಿಯನ್ನು ಓದಲು ಕೈಗೆತ್ತಿಕೊಂಡ ಕ್ಷಣದಿಂದ ಯಾರಿಗಾದರೂ ಈ ಪುಸ್ತಕ ಕೆಳಗಿಡುವುದೇ ಬೇಡ ಅನ್ನಿಸುವಷ್ಟು ಚೆನ್ನಾಗಿ ಬರೆದಿದ್ದಾರೆ ಲೇಖಕರು. ನಾನು ಈ ಲೇಖಕರು ಬರೆದ ಪುಸ್ತಕಗಳಲ್ಲಿ ಪ್ರಥಮವಾಗಿ ಓದಿದ ಪುಸ್ತಕ ಇದು. ಅವರ ಫ್ಯಾನ್ ಆಗಿಬಿಟ್ಟೆ. ಒಬ್ಬ ಇಂಜೀನಿಯರ್ ಇಷ್ಟೊಳ್ಳೆ ಪುಸ್ತಕ ಬರೆಯಬಲ್ಲರಾ ಅಂತ ವಿಚಾರ ಮಾಡಿದೆ. ಆದರೆ ನನ್ನ ಬುಡವಿಲ್ಲದ ವಿಚಾರಕ್ಕೆ ಈ ಪುಸ್ತಕವೇ ಸಾಕ್ಷಿ ಹೇಳುತ್ತದೆ.
ಜೋಗ್ ಜಲಪಾತದ ಹೆಸರು ಕರ್ನಾಟಕದಲ್ಲಿ ಕೇಳದವರಾರು? ಜೋಗದ ಸುತ್ತಮುತ್ತಲಿನ ಪರಿಸರದ ಸೌಂದರ್ಯ ಸವಿಯಲು ಇಷ್ಟಪಡದವರಾರು? ಲೇಖಕರು ಪರಿಸರದ ಸೌಂದರ್ಯದ ಬಗ್ಗೆ ಬರೆಯುತ್ತಾ ಅಲ್ಲಿನ ಹವ್ಯಕ, ಜೈನ, ನಾಯ್ಕ, ಮಡಿವಾಳ, ಹಸ್ಲರ್ ಮುಂತಾದ ಜನಾಂಗಗಳ ಜನಜೀವನ, ಒಗ್ಗಟ್ಟು, ಒಬ್ಬರಿಗೊಬ್ಬರ ಸಹಕಾರ, ಪ್ರೀತಿ ವಿಶ್ವಾಸ ಮುಂತಾದವುಗಳನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದಾರೆ. ನಾವು ಈಗ ಒಂದು ಬಟನ್ ಒತ್ತುವುದರ ಮೂಲಕ ವಿದ್ಯುತ್ ಶಕ್ತಿ ಉಪಯೋಗಿಸಿ ಎಷ್ಟೊಂದು ಕಷ್ಟಕರ ಕೆಲಸಗಳನ್ನು ಸುಲಭವಾಗಿಸಿಕೊಂಡಿದ್ದೇವೆ ಹಾಗೂ ನಮ್ಮ ರಾತ್ರಿಗಳನ್ನು ಬೆಳಕಿನಿಂದ ತುಂಬಿದ ಹಗಲಾಗಿಸಿಕೊಂಡಿದ್ದೇವೆ. ಆದರೆ ಅದರ ಹಿಂದೆ ಎಷ್ಟೋ ಸಾವಿರಾರು ಜನರ ಹಗಲು ಬೆಳಕೇ ಬತ್ತಿಹೋಗಿ ಅವರ ಜೀವನವೇ ಕರಾಳ ರಾತ್ರಿಯಾದ ಕಥೆಗಳಡಗಿವೆ ಅಂದರೆ ನೀವಾರು ನಂಬಲಾರಿರಿ. ಆದರೆ ಇದು ಸತ್ಯ ಎಂದು ನಿಮಗೆ ತಿಳಿಯುವುದು ಈ ಕಾದಂಬರಿ ಓದಿದ ನಂತರ.
ಹವ್ಯಕರ ಭಾರಂಗಿ ದತ್ತಪ್ಪ ಹೆಗಡೆ, ದೋಣಿ ಗಣಪಯ್ಯ, ಚೌಡ ನಾಯಕ, ತುಂಗಕ್ಕಯ್ಯ, ಮುರಾರಿ, ಮಾಣಿಚಿಕ್ಕಯ್ಯ, ಭವಾನಕ್ಕ, ಶರಾವತಿ, ಕ್ರಷ್ಣರಾವ್, ವಸುಧಾ ಮುಂತಾದ ಪಾತ್ರಗಳಿಂದ ಜೀವಂತಿಕೆ ತುಂಬಿದ್ದಾರೆ ಲೇಖಕರು. ಯಾವ ಪಾತ್ರ ಖಳನಾಯಕ, ಯಾವ ಪಾತ್ರ ನಾಯಕ ಅನ್ನಿಸುವುದೆ ಇಲ್ಲ. ಎಲ್ಲ ಪಾತ್ರಗಳು ಎಲ್ಲದು ಆಗುತ್ತವೆ ಸಂದರ್ಭಕ್ಕನುಸಾರವಾಗಿ.
ಜೋಗದ ಭೋರ್ಗರೆವ ಜಲಪಾತ ನೋಡಿದ ಸರ್ ಎಮ್ ವಿಶ್ವೇಶ್ವರಯ್ಯನವರು ಅಪಾರ ಶಕ್ತಿಯ ಉಪಯೋಗಕ್ಕಾಗಿ ವಿದ್ಯುತ್ ಉತ್ಪಾದನೆ ಮಾಡಲೆಂದು ಡ್ಯಾಂ ಕಟ್ಟುವ ಅಲೋಚನೆ ಮಾಡಿ ಮೈಸೂರು ರಾಜರ ಸಮಕ್ಷಮ ವಿಚಾರ ನಡೆಸುತ್ತಾರೆ. ಶಿವನಸಮುದ್ರ ಯೋಜನೆಯಿಂದಾದ ಲಾಭ, ಭದ್ರಾವತಿಯ ಕಾರ್ಖಾನೆಗಳು ನಡೆಸಲು ಬೇಕಾದ ವಿದ್ಯುತ್ , ಇದಲ್ಲದೇ ಭಾರತದ ಪ್ರಗತಿಗಾಗಿ ಜೋಗದ ಶರಾವತಿ ನದಿಗೆ ಆಣೆಕಟ್ಟು ಕಟ್ಟುವ ವಿಚಾರಕ್ಕೆ ಇಂಬು ಕೊಟ್ಟು ತಯಾರಿ ನಡೆಸುತ್ತಾರೆ. ಆಗ ಮತ್ತು ಮುಂದೆ ನಡೆಯುವ ಯುವ ಜನಾಂಗ ಹಾಗೂ ಸ್ಥಳೀಯ ಹಳೆಯ ಜನಾಂಗದ ಜನರ ಮನಸ್ಸಿನ ತಾರತಮ್ಯ, ಅಭಿವೃದ್ಧಿ ಹೆಸರಿನಲ್ಲಿ ನಡೆಯುವ ಶೋಷಣೆ ಮುಂತಾದವುಗಳನ್ನು ಕಣ್ಕಟ್ಟುವಂತೆ ಬರೆದಿದ್ದಾರೆ. ದಟ್ಟ ಕಾಡಿನ ಶರಾವತಿ ಕಣಿವೆಯಲ್ಲಿ ಆಣೆಕಟ್ಟು ಕಟ್ಟುವುದು ಆಗಿನ ಕಾಲಕ್ಕೆ ಬಹು ದೊಡ್ಡ ಸಾಹಸವೇ ಸೈ. ಈಗಿನ ಅತ್ಯಾಧುನಿಕ ಮಶೀನ್‌ಗಳಿಲ್ಲದ ಕಾಲ ಅದು. ಇಂಜೀನಿಯರ್ ಗಳು ಇಲ್ಲದ ಕಾಲ ಅದು. ಅತೀ ವಿರಳ ಜನಸಂಖ್ಯೆಯ, ಕೆಲಸಕ್ಕೆ ಜನರೇ ಸಿಗದ ಕಾಲಘಟ್ಟದಲ್ಲಿ ಆಣೆಕಟ್ಟು ನಿರ್ಮಾಣ ಸುಲಭವಲ್ಲ. ಅದನ್ನು ಸುಲಭವಾಗಿಸಲು ಬರುವ ಮೈಸೂರಿನ ಇಂಜೀನಿಯರ್, ಅವನ ಹಾಗೂ ಅವನ ಹೆಂಡತಿ ವಸುಧಾಳ ಕಥೆ ಅಲ್ಲಿನ ಸ್ಥಳಿಯ ಜನರ ಕಥೆಯೊಡನೆ ಬೆರೆತು ನಾವು ಆ ಕಥೆಯಲ್ಲಿ ಒಂದಾಗಿಬಿಡುತ್ತೇವೆ. ಲೇಖಕರು ಸೆಂಟಿಮೆಂಟ್‌ನೊಂದಿಗೆ ನಮ್ಮನ್ನು ಸೆಳೆಯುವಲ್ಲಿ ಅತ್ಯಂತ ಯಶಸ್ವಿಯಾಗಿದ್ದಾರೆ. ಪುಸ್ತಕದ ಕೊನೆಯಲ್ಲಿ ಓದಿದವರ ಕಣ್ಣಂಚಲಿ ನೀರು ಜಿನುಗಿದರೆ ಪುಸ್ತಕದ ಬಗ್ಗೆ ಬರೆದ ನಾನು ಜವಾಬ್ದಾರನಲ್ಲ.
ಊರುಗಳ ಮುಳುಗಡೆ, ತೋಟ, ಗದ್ದೆಗಳ ಮುಳುಗಡೆ, ಪರಿಹಾರ ಕೊಡುವಾಗ ಭ್ರಷ್ಟಾಚಾರ, ತಾರತಮ್ಯ, ಅಧಿಕಾರಿಗಳ ಕಿರುಕಳ, ತಾತ ಮುತ್ತಾತರ ಕಾಲದಿಂದ, ತಲೆತಲಾಂತರಗಳಿಂದ ನಂಬಿದ ಆಸ್ತಿಗಳ ಸರ್ವನಾಶ, ಊರಿಗೇ ಊರೇ ತೊರೆದು ಹೋಗುವಾಗಿನ ಜನರ ಮನಸ್ಥಿತಿ, ಆಣೆಕಟ್ಟು ನಿರ್ಮಾಣ ಹಂತದಲ್ಲಿ ಸಾವು,ನೋವು, ಆತ್ಮಹತ್ಯೆ ಎಲ್ಲವನ್ನೂ ವಿವರವಾಗಿ ನಮೂದಿಸಲ್ಪಟ್ಟ ಒಂದು ಕನ್ನಡದ ಅದ್ಬುತ ಕಾದಂಬರಿ.
ಇನ್ನೂ ಹೆಚ್ಚು ಬರೆದರೆ ಕಾದಂಬರಿಗೆ ಅನ್ಯಾಯವಾಗುತ್ತದೆ. ಆದರೆ ಒಂದಂತು ನಿಜ. ಈ ಕಾದಂಬರಿಗೆ ಹಿನ್ನುಡಿ ಬರೆದ ಜೋಗಿಯವರು ಬರೆದಂತೆ ಇದೊಂದು ತರ ಕಥಾಸಾಕ್ಷ್ಯಚಿತ್ರ. ಕನ್ನಡದಲ್ಲಿ ಒಂದು ವಿಶಿಷ್ಟ ಕಾದಂಬರಿ. ಇಂತಹ ಕಾದಂಬರಿ ಕನ್ನಡದಲ್ಲಿ ಅತೀ ಕಡಿಮೆ ಬರೆಯಲಾಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನೇನಿದೆ? ಕನ್ನಡ ಪುಸ್ತಕ ಹಣತೆತ್ತು ಕೊಳ್ಳಿ ಹಾಗೂ ಓದಿ. ಕನ್ನಡ ಸಾಹಿತ್ಯ ಬೆಳೆಯಲಿ. ಕನ್ನಡ ಸಾಹಿತ್ಯ ನಮ್ಮ ಜನಜೀವನದ ಹಾಸುಹೊಕ್ಕಾಗಲಿ. ಕನ್ನಡ ಉಳಿಸಲು ಮಾತನಾಡಿ,ಓದಿ, ಬರೆಯುವುದೊಂದೇ ದಾರಿ. ಓದುತ್ತಿರಲ್ಲವೆ?
ಜೈ ಕನ್ನಡ.
ಡಾ. ರಾಜು ಭಟ್ಟ
ಸಿದ್ದಾಪುರ.
