ಕೋವಿಡ್ ಗೆದ್ದ ಕತೆ- ನಾನು ಕೊರೋನಾ ಗೆದ್ದೆ

ಪಶುವೈದ್ಯಕೀಯ ವೃತ್ತಿಯಲ್ಲಿರುವ ನಾನು ಪ್ರತಿದಿನವೂ ಸಾರ್ವಜನಿಕರೊಂದಿಗೆ ಬದುಕು ಸಾಗಿಸುತ್ತಾ, ನೂರಾರು ಜನರ ಸಂಪರ್ಕದ ನಡುವೆಯೂ ಕೊರೋನಾ ಮಹಾಮಾರಿ ನನ್ನ ಬಳಿ ಸುಳಿಯದಂತೆ ಕಳೆದ ಒಂದೂವರೆ ವರ್ಷದಿಂದ ಎಚ್ಚರವಹಿಸಿದ್ದೆ. ಆದರೆ ಕಳೆದ ತಿಂಗಳು ಅದರ ಅನಿರೀಕ್ಷಿತ ದಾಳಿಗೆ ಒಳಗಾಗಿ ಆರಂಭಿಕ ಹಿನ್ನಡೆ ಅನುಭವಿಸಿ 21 ದಿನಗಳವರೆಗೆ ಕ್ವಾರಂಟೈನ್ ನಲ್ಲಿ ಇರಬೇಕಾದ ಅಘಾತಕ್ಕೆ ಸಿಲುಕಿದೆ. ಕಳೆದ 14 ವರ್ಷಗಳ ನನ್ನ ವೃತ್ತಿ ಬದುಕಿನಲ್ಲಿ ರೈತಾಪಿ ಜನರ ಜೊತೆಯಲ್ಲಿ ಶ್ರಮ ವಹಿಸಿ ನಿರ್ಮಿಸಿದ ಮತ್ತು ನಿರ್ವಹಿಸಿದ್ದ ವ್ಯವಸ್ಥೆಯ ಮೇಲೆ ಉಂಟಾದ ಪರಿಣಾಮವನ್ನು ಕಂಡು ಪರಿತಪಿಸುವಂತಾಯಿತು. ಸೋಂಕು ತಗುಲಿದ ಕೆಲವೇ ದಿನಗಳಲ್ಲಿ ನನ್ನ ಆತ್ಮ ಸ್ಥೈರ್ಯವನ್ನು ಹೆಚ್ಚಿಸಿಕೊಂಡು, ನಿಮ್ಮೆಲ್ಲರ ಆಶೀರ್ವಾದ, ಬೆಂಬಲಗಳಿಂದ ಗುಣಮುಖನಾಗಿ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದೇನೆ. ಈ ನಡುವೆ ಕೊರೋನಾ ಕುರಿತ ನನ್ನ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಮನಸ್ಸಾಯಿತು.

ಅಂದು ಅಮ್ಮನ ಒತ್ತಾಯಕ್ಕೆ ಯುಗಾದಿ ಹಬ್ಬಕ್ಕೆಂದು ಕುಟುಂಬ ಸಮೇತನಾಗಿ ಊರಿಗೆ ಹೊರಟಿದ್ದೆ. “ಇರೋನು ಒಬ್ಬ ಮಗ ಮನೆಗೆ ಬರದೆ 8 ತಿಂಗಳಾಯ್ತು, ಊರಿಗಿಲ್ಲದ ನೌಕರಿ ನೀನೊಬ್ಬನೇ ಮಾಡೋದ ? ನನಗೂ ವಯಸ್ಸಾಯ್ತು ಕಣೋ , ಮನೆಗೆ ಬಂದೋಗು” ಎಂದಾಗ 2 ದಿನ ರಜಾ ಹಾಕಿ ಊರಿಗೆ ಹೊರಡುವ ತಯಾರಿ ಮಾಡಿದ್ದೆ. (ನನ್ನೂರು ಭದ್ರಾವತಿ ತಾಲೂಕಿನ ಹಿರಿಯೂರು ಎಂಬ ಗ್ರಾಮ) ದಿ: 12/04/2021 ರಂದು ಕೆಲಸ ಪೂರೈಸಿ ಸಂಜೆ 5 ಗಂಟೆಗೆ ಹೊರಡೋಣ ಎಂದಾಗ , ಮಕ್ಕಳು ಭದ್ರಾವತಿ ಅಜ್ಜನ ಮನೆಗೆ ಎಂದು ಕುಣಿದು ಕುಪ್ಪಳಿಸಿದ್ದವು. ಆದರೆ ನಡೆದಿದ್ದೇ ಬೇರೆ…. ಎರಡು ದಿನಗಳ ಹಿಂದೆ ತೀರ್ಥಹಳ್ಳಿಗೆ ಬಂದು ಭೇಟಿಯಾಗಿದ್ದ ಸ್ನೇಹಿತನ ಫೋನದು. ಆತನಿಗೆ ಜ್ವರ ಕಾಣಿಸಿಕೊಂಡ ಕಾರಣ ಟೆಸ್ಟಿಗೆ ಕೊಟ್ಟ ಸ್ಯಾಂಪಲ್ ವರದಿ positive ಎಂದು ತಿಳಿದ ಕೂಡಲೆ ನನಗೆ ಫೋನಾಯಿಸಿ ಹುಷಾರು ಮಾರಾಯ, ಎಚ್ಚರಿಕೆ ಎಂದಿದ್ದ. ಅಪರೂಪದ ಸ್ನೇಹಿತ ಸಿಕ್ಕಾಗ ಹೋಟೆಲ್ ಒಂದರಲ್ಲಿ ಕಾಫಿ ಕುಡಿಯುತ್ತಾ 15 ನಿಮಿಷ ಮಾತನಾಡಿದ್ದೆವು. ಇದರಿಂದಾಗಿ ನನಗೂ ಸೋಂಕು ತಗಲುವುದು ಬಹುತೇಕ ಖಚಿತವಾಗಿತ್ತು. ಕೂಡಲೆ ಅಮ್ಮನಿಗೆ ಫೋನ್ ಮಾಡಿ ವಿಷಯ ತಿಳಿಸಿದಾಗ ಅವರು ಗಾಬರಿ ಬಿದ್ದರು. ಅವರನ್ನು ಸಮಾಧಾನ ಪಡಿಸುತ್ತಾ, ನಾನು ತೆಗೆದುಕೊಂಡ ನಿರ್ಧಾರವೆಂದರೆ ಹೆಂಡತಿ ಮಕ್ಕಳನ್ನು ತವರಿಗೆ ಕಳುಹಿಸುವುದಾಗಿತ್ತು.

ನಂತರ ಮನೆಯಲ್ಲಿ ಒಬ್ಬನೇ ಉಳಿದುಕೊಂಡೆನಾದರೂ (isolation ) ಮನಸ್ಸಿನಲ್ಲಿ ಏನೋ ತಳಮಳ. ಪರಿಚಯದ ವೈದ್ಯರ ಬಳಿ ವಿಚಾರಿಸಿ ಅಗತ್ಯ ಔಷಧಿಗಳನ್ನು ತಂದಿಟ್ಟುಕೊಂಡೆ. ದಿನಕ್ಕೆ ನಿಯಮಿತವಾಗಿ ಮೂರು ಬಾರಿ ಹದಬಿಸಿ ಇರುವ ಆವಿ (Steam) ತೆಗೆದುಕೊಳ್ಳಲಾರಂಭಿಸಿದೆ. ಇವೆಲ್ಲಾ ಮುಂಜಾಗೃತೆಯೂ ಸಾಮಾನ್ಯವಾಗಿ ಎಲ್ಲರೂ ಅನುಸರಿಸುವ ಪದ್ಧತಿಯಾಗಿದ್ದು ವಿಶೇಷವೇನೂ ಇಲ್ಲ ಬಿಡಿ. ಇದಾಗಿ ಮೂರು ದಿನಗಳ ನಂತರ ನನಗೂ ಜ್ವರ ಮೈಕೈ ನೋವು ಕಾಣಿಸಿಕೊಂಡಾಗ ತೀರ್ಥಹಳ್ಳಿಯ ತಾಲ್ಲೂಕು ಆಸ್ಪತ್ರೆಗೆ ಹೋಗಿ ನನ್ನ ಸ್ಯಾಂಪಲ್ ಪರೀಕ್ಷೆಗೆ ನೀಡಿ ಬಂದೆ. ವರದಿ ಕೈ ಸೇರಿ ನಾನು positive ಇರುವುದು ದೃಢಪಟ್ಟಿತು. ನನಗಿದ್ದ ರೋಗ ಲಕ್ಷಣಗಳು • ಅತಿಯಾದ ಜ್ವರ (102’F)• ಮೈಕೈ ನೋವು• ಗಂಟಲು ನೋವು• ಮೂಗು ಕಟ್ಟುವುದು• ಹಿಂದಲೆ ನೋವು• ರುಚಿ ಮತ್ತು ವಾಸನೆ ಇಲ್ಲದಿರುವುದು( ಬೆಳ್ಳುಳ್ಳಿ ಅಗಿದರೂ ಗೊತ್ತಾಗುತ್ತಿರಲಿಲ್ಲ )• ಮೈಮೇಲೆ ಕೆಂಪಗೆ ನವೆಯಂತಹ ಗುಳ್ಳೆಗಳು• ಹಸ್ತದ ತ್ವಚೆಯ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ• ನಿದ್ರಾಹೀನತೆ (ರಾತ್ರಿ 3 ಗಂಟೆಯವರೆಗೂ ನಿದ್ರೆ ಬರುತ್ತಿರಲಿಲ್ಲ)• ಅತಿಯಾದ ಸುಸ್ತು• ಸ್ವಲ್ಪ ಎದೆನೋವು• ತ್ವಚೆಯ ಸ್ಪರ್ಶ ಜ್ಞಾನ ಕಡಿಮೆಯಾಗಿರುವುದು (ಇದು ನನ್ನ ಸೂಕ್ಷ್ಮ ಅನುಭವ)

* ದೇಹದ ತೂಕದಲ್ಲಿ ಗಣನೀಯ ಇಳಿಕೆ ( ಸುಮಾರು 4 ಕೆಜಿ ಕಡಿಮೆ)* ಕಣ್ಣಿನ ಉರಿ* ಅತಿಯಾಗಿ ಬೆವರುವುದುನನ್ನ ಅನುಭವದಲ್ಲಿ ಹೇಳುವುದಾದರೆ ಕೊರೋನಾ ಸೋಂಕಿಗೊಳಗಾದಾಗ ಔಷಧೋಪಚಾರ ಎಷ್ಟು ಮುಖ್ಯವೋ “ಪರಿಸ್ಥಿತಿ ನಿರ್ವಹಣೆ”ಯೂ ಅಷ್ಟೇ ಮುಖ್ಯ . ಅವುಗಳಲ್ಲಿ ಮುಖ್ಯವಾದವು1. ಲಕ್ಷಣ ಕಂಡಾಗ ಸ್ಯಾಂಪಲ್ ಪರೀಕ್ಷೆಗೊಳಪಡಲು ಹಿಂದೇಟು ಹಾಕದಿರಿ- ಕೊರೋನಾ ಸೋಂಕು ಕಂಡಾಗ ಬಹುತೇಕರು ಸ್ಯಾಂಪಲ್ ಕೊಡಲು ಹಿಂದೇಟು ಹಾಕುತ್ತಾರೆ. ಇದಕ್ಕೆ ಮುಖ್ಯ ಕಾರಣ 17 ದಿನ ಕ್ವಾರಂಟೈನ್ ಗೆ ಒಳಗಾಗುವ ಭಯ, ನೆರೆ ಹೊರೆಯವರ ಕಿರಿಕಿರಿ ಎಂದು. ಆದರೆ ನಿಮ್ಮ ಅಭಿಪ್ರಾಯ ಖಂಡಿತಾ ತಪ್ಪು. ನಾವು ಟೆಸ್ಟಿಗೆ ನೀಡಿದ ವರದಿಯನ್ನು ಕೈಯಲ್ಲಿಟ್ಟುಕೊಂಡರೆ ಒಂದು ವೇಳೆ ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಾಗ ಉಪಯೋಗಕಾರಿಯಾಗುತ್ತದೆ. ಕಡೆಯ ಹಂತದಲ್ಲಿ ಪರೀಕ್ಷೆಗೊಳಪಡಿಸಿ ಫಲಿತಾಂಶಕ್ಕೆ ಕಾಯುವುದಕ್ಕಿಂತ ಮೊದಲೇ ರಿಪೋರ್ಟ್ ನಿಮ್ಮಲ್ಲಿ ಲಭ್ಯವಿದ್ದರೆ ಅವಶ್ಯಕತೆ ಇದ್ದಾಗ ಆಸ್ಪತ್ರೆಗೆ ಹಾಜರಾಗಲು , ವೈದ್ಯರಿಗೆ ಚಿಕಿತ್ಸೆ ನೀಡಲು ಕೂಡ ಸಹಯಕಾರಿಯಾಗುತ್ತದೆ.

*ಆರೋಗ್ಯ ಇಲಾಖೆಯು 17 ದಿನಗಳ ಕ್ವಾರಂಟೈನ್ ಗೆ ಒಳಪಡಿಸುವುದರಿಂದ ಸೋಂಕು ಸಾರ್ವಜನಿಕರಲ್ಲಿ ಹರಡದಂತೆ ತಡೆಯಬಹುದು . *ಸ್ಯಾಂಪಲ್ ನೆಗೆಟಿವ್ ಬಂದಲ್ಲಿ ಜ್ವರಕ್ಕೆ ಕಾರಣವಾಗುವ ಡೆಂಗೂ, ಚಿಕುನ್ ಗೂನ್ಯ, ಟೈಫಾಯ್ಡ್, ಇತ್ಯಾದಿ ಸೋಂಕುಗಳಿದ್ದಲ್ಲಿ ಅವುಗಳ ಬಗ್ಗೆಯೂ ವೈದ್ಯರು ಗಮನು ಹರಿಸಲು ಸಹಾಯಕಾರಿಯಾಗುತ್ತದೆ. * ಈಗ ಎಲ್ಲಾ ಕಡೆಯೂ ಸೋಂಕು ಮಾಮೂಲಿಯಾಗಿರುವುದರಿಂದ ಸೋಂಕಿತ ವ್ಯಕ್ತಿಯ ನೆರೆ ಹೊರೆಯವರು ಕಿರಿ ಕಿರಿ ಮಾಡುವ ಕಾಲ ಉಳಿದಿಲ್ಲ. ಬದಲಾಗಿ ನಿಮಗೆ ಮತ್ತಷ್ಟು ಅವಶ್ಯ ನೆರವು ನೀಡಲು ಮುಂದಾಗಬಹುದು.2) ಮಾನಸಿಕ ಮತ್ತು ದೈಹಿಕ ಸದೃಢತೆ : ನಾನು ಈ ಜ್ವರ,ಮೈ ಕೈ ನೋವನ್ನು ಚಿಕ್ಕವನಿದ್ದಾಗಿನಿಂದ ಹಿಡಿದು, ಕ್ರಿಕೆಟ್ ಟೂರ್ನಮೆಂಟ್ ಆಡಿ ಬಂದಾಗ ಇದರ ಅಪ್ಪನಂತಹದ್ದನ್ನು ಅನುಭವಿಸಿದ್ದೇನೆ. ನೀವು ಕೂಡ ಅನುಭವಿಸಿರುತ್ತೀರಿ. ಆದರೆ ಕೊರೋನಾ ಎಂಬ ಭಯ ನಮ್ಮನ್ನು ಆವರಿಸಿದಾಗ ಮಾನಸಿಕವಾಗಿ ಅದರಿಂದ ಹೊರಬರಲಾರದೆ ರೋಗ ಉಲ್ಬಣವಾಗಲು ಕಾರಣವಾಗುತ್ತದೆ ಎಂಬುದು ನನ್ನ ಅಭಿಪ್ರಾಯ. ನಾವು ಭಯಗೊಂಡಾಗ ಮಾನಸಿಕವಾಗಿ ಉಂಟಾಗುವ ಪರಿಣಾಮಗಳು ದೈಹಿಕ ಹತೋಟಿ ಕಳೆದುಕೊಳ್ಳಲು ಕಾರಣವಾಗುತ್ತದೆ. ಇದರಿಂದ ಕೊರೋನಾ ಸೋಂಕನ್ನು ಎದುರಿಸಲು ಮಾನಸಿಕ ಸದೃಢತೆ ಅತೀ ಮುಖ್ಯ ಎಂಬ ಅನುಭವ ನನಗಾಯಿತು.

ಟಿ.ವಿ ಯ ಕೆಲವು ನಿವ್ಸ್ ಚಾನಲ್ ಗಳಲ್ಲಿ ಸುಮಾರು ಒಂದೂವರೆ ವರ್ಷಗಳಿಂದ ಸೋಂಕಿತರ ನರಳಾಟ, ಹೆಣಗಳ ಸಾಲು, ಚಿತೆಯ ಉರಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕವಾಗಿ ಬಿಂಬಿಸುವ ಸಂದೇಶಗಳುಳ್ಳ ಪೋಸ್ಟ್ ಗಳು ಎಂಥಹವರಿಗೂ ಭಯವನ್ನು ಹುಟ್ಟುಹಾಕಿ ಆತ್ಮ ಸ್ಥೈರ್ಯವನ್ನು ಕಡಿಮೆ ಮಾಡುತ್ತದೆ. ಸೋಂಕಿತರಲ್ಲಿ ಶೇಕಡಾ 98 ಮಂದಿ ಮನೆಯಲ್ಲಿಯೇ ವಿಶ್ರಾಂತಿ ತೆಗೆದುಕೊಂಡು ಗುಣವಾಗುತ್ತಾರೆಂಬ ಧನಾತ್ಮಕ ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನನಗಿಷ್ಟವಾದ ಹವ್ಯಾಸ ಬರವಣಿಗೆ, ಪುಸ್ತಕ ಓದುವುದು, ಕೆಲವೊಮ್ಮೆ ಫೋನಿನಲ್ಲಿ ಸ್ನೇಹಿತರೊಂದಿಗೆ ಹರಟುವುದನ್ನು ಮಾಡಿ ದಿನ ಮುಂದೂಡಿದೆ. ಸೋಂಕು ತಗುಲಿ 10 ದಿನಗಳ ನಂತರ ಹೆಚ್ಚಿನವರಲ್ಲಿ ಸಮಸ್ಯೆ ಆಗಲಾರದು. ಸಾವು ನೋವುಗಳನ್ನು ವೈಭವೀಕರಿಸುವ ಕೆಲವು ನ್ಯೂಸ್ ಚಾನಲ್ ಗಳಿಂದ ದೂರವಾದೆ. ಜೊತೆಗೆ ಕಳೆದ ಒಂದು ವರ್ಷದಿಂದ ಕ್ರೀಡೆಯಲ್ಲಿ ಪಾಲ್ಗೊಂಡಿದ್ದಲ್ಲದೆ , ಮೂರು ವರ್ಷದಿಂದ ಪ್ರತಿದಿನವೂ ಸೂರ್ಯ ನಮಸ್ಕಾರ ಮಾಡುತ್ತಿದ್ದ ಕಾರಣ ಶಾರೀರಕವಾಗಿ ಫಿಟ್ ನೆಸ್ ಸಂಪಾದಿಸಿದ್ದು ಕೊರೋನಾದ ವಿರುದ್ಧ ಹೋರಾಡಲು ಸಹಾಯಕಾರಿಯಾಯಿತು. ಚಟುವಟಿಕೆಯಿಂದಿರುವ ವ್ಯಕ್ತಿಗಳಲ್ಲಿ , ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಭಾಗಗಳಲ್ಲಿ ಕೃಷಿ ಚಟುವಟಿಕೆ ಮಾಡುವ ವ್ಯಕ್ತಿಗಳಲ್ಲಿ ಶಾರೀರಿಕ ದೃಢತೆ ಇರುವುದರಿಂದ ಅವರು ಬೇಗ ಗುಣಮುಖರಾಗುತ್ತಾರೆ ಎಂಬುದು ನನ್ನ ಅಭಿಪ್ರಾಯ.

3) ವೈದ್ಯರೊಂದಿಗೆ ನಿರಂತರ ಸಂಪರ್ಕ : ನನಗೆ ಪರಿಚಯವಿದ್ದ ವೈದ್ಯರ ಸಲಹೆಗಳನ್ನು ಆಗಾಗ್ಗೆ ಪಡೆಯುತ್ತಿದ್ದೆ. ಡಾ.ವಿನಯ ಶ್ರೀನಿವಾಸ್, ಟ್ರಸ್ಟಿ, ಸುಬ್ಬಯ್ಯ ಮೆಡಿಕಲ್ ಕಾಲೇಜು, ಶಿವಮೊಗ್ಗ, ಡಾ. ತೇಜಸ್ವಿ, ಆರೋಗ್ಯಾಧಿಕಾರಿಗಳು, ಆರಗ, ಹಾಗೂ ಡಾ. ರವಿಶಂಕರ ಉಡುಪ ಆಯುಶ್ ಅಧಿಕಾರಿಗಳು ಇವರೊಂದಿಗೆ ನನ್ನ ಆರೋಗ್ಯ ಸಮಸ್ಯೆಗಳನ್ನು ಆಗಾಗೆ ಹೇಳಿಕೊಂಡು ಪರಿಹಾರ ಕಂಡುಕೊಂಡೆ.ಅವರೆಲ್ಲರಿಗೂ ನಾನು ಚಿರಋಣಿಯಾಗಿರುವೆ. ಬಹುತೇಕರಲ್ಲಿ ಕೊರೋನಾ ಓಡಿಸಲು ಕಷಾಯ ರಾಮಬಾಣ ಎಂಬ ಭ್ರಮೆಯಲ್ಲಿರುವಂತಿದೆ. ಮಾರುಕಟ್ಟೆಯಲ್ಲಿ ಸಿಗುವ ಕೆಲವು ಕಳಪೆ ದರ್ಜೆಯ ಕಷಾಯದ ಪುಡಿಗಳ ಬದಲಾಗಿ ಆಯುರ್ವೇದದ ವೈದ್ಯರು ( ಆಯುಷ್ ) ನೀಡುವ ಔಷಧೀಯ ಗುಣವಿರುವ ಕಷಾಯದ ಪುಡಿಯನ್ನು ಖರೀದಿಸುವುದು ಉತ್ತಮ. ಕಳಪೆ ದರ್ಜೆಯ ಕಷಾಯವನ್ನು ಕುಡಿದು ನಿಮ್ಮ ಜೀರ್ಣಾಂಗ ವ್ಯೂಹವನ್ನು ಹಾಳು ಮಾಡಿಕೊಳ್ಳಬೇಡಿ. ಜ್ವರ ಪರೀಕ್ಷಿಸಲು ಥರ್ಮೋಮೀಟರ್, ರಕ್ತದಲ್ಲಿ ಆಮ್ಲಜನಕದ ಪ್ರಮಾಣ, ನಾಡಿ ಮಿಡಿತ ತಿಳಿಯಲು ಪಲ್ಸ್ ಆಕ್ಸಿ ಮೀಟರ್ ಮನೆಯಲ್ಲಿ ಇಟ್ಟುಕೊಂಡು ದಿನಕ್ಕೆ 3 ಬಾರಿ ಪರೀಕ್ಷಿಸಿಕೊಳ್ಳುವುದು ಉತ್ತಮ. ಕೆಲವರು ಮಾನಸಿಕ ಒತ್ತಡಕ್ಕೆ ಒಳಗಾಗಿ 50-60 ಬಾರಿ ನೋಡಿಕೊಳ್ಳುತ್ತಾರೆ .ಉದ್ವೇಗಕ್ಕೆ ಒಳಗಾಗುವ ಅವಶ್ಯಕತೆ ಖಂಡಿತ ಇಲ್ಲ .ಗಾಬರಿ ಬಿದ್ದಷ್ಟು ಆರೋಗ್ಯವು ವ್ಯತ್ಯಾಸಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಆಕ್ಸಿಜನ್ ಸ್ಯಾಚುರೇಷನ್ 95 ರಿಂದ 90 ಅಥವಾ ಅದಕ್ಕೂ ಕಡಿಮೆ ಬಿದ್ದಾಗಲೂ ಒಮ್ಮಿಂದೊಮ್ಮೆಲೇ ಗಾಬರಿಯಾಗುವುದಕ್ಕೀಂತ 3-4 ಭಾರಿ ಪರೀಕ್ಷೆ ನಡೆಸಿ ಅದು 90 ಕ್ಕಿಂತೆ ಕಡಿಮೆ ಬಂದರೆ ಖಂಡಿತ ವೈದ್ಯರ ನೆರವು ಪಡೆಯುವುದು ಸೂಕ್ತ. ನನಗೂ ಒಮ್ಮೆ 90 ರಿಂದ 92 ರ ಆಸುಪಾಸಿಗೆ ಬಂದಾಗ ವಿಶ್ರಾಂತಿಗೆ ಮೊರೆ ಹೋದೆ , ನಂತರ ಅದು 95-97 ಕ್ಕೆ ಏರಿತು.4) ಆಪ್ತರಲ್ಲಿ ವಿಷಯ ಹಂಚಿಕೊಂಡೆ : ಕೊರೊನಾ ಎಂದೊಡನೆ ಮಾನಸಿಕವಾಗಿ ಕುಗ್ಗುವ ನಾವು ಆಪ್ತರಲ್ಲಿ ವಿಷಯ ಹಂಚಿಕೊಳ್ಳುವುದು ಒಳ್ಳೆಯದು. ನಾನು ನನ್ನ ಬಾಲ್ಯ ಸ್ನೇಹಿತರು, ಹಳೆಯ ಶಿಕ್ಷಕರು, FB ಸ್ನೇಹಿತರಲ್ಲಿ ವಿಷಯ ಹಂಚಿಕೊಂಡೆ. ಅವರು ದಿನವೂ ನನ್ನೊಂದಿಗೆ ಫೋನ್ ಮಾಡುತ್ತಾ ಧೈರ್ಯ ತುಂಬಿದರು. ಇದರಿಂದ ನನ್ನ ಆತ್ಮ ಸ್ಥೈರ್ಯ ಹೆಚ್ಚಿತು. ಧನಾತ್ಮಕ ವಿಷಯಗಳನ್ನು ಮೈಗೂಡಿಸಿಕೊಂಡು ಭಯದ ಗುಂಗಿನಿಂದ ಹೊರಬರಲು ಸಹಕಾರಿಯಾಯಿತು.

5) ಆಹಾರ ಪದ್ಧತಿ : ಸೋಂಕಿಗೆ ಒಳಗಾಗುತ್ತಿದ್ದಂತೆ ತರಕಾರಿ ಇರುವ ಹದಬಿಸಿ ಆಹಾರವನ್ನು ಸೇವಿಸಿದೆ. ಬೀನ್ಸ್, ಬೇಳೆಕಾಳುಗಳು, ಕ್ಯಾರೆಟ್, ಹೀರೆ, ಸೊಪ್ಪು, ಪ್ರಮುಖವಾದವು. ಜೊತೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಮತ್ತು ನಿಶಕ್ತಿಯಿಂದ ಹೊರ ಬರಲು ಸುಲಭವಾಗಿ ಜೀರ್ಣವಾಗಬಲ್ಲ ಪ್ರೊಟೀನ್ ಅತೀ ಮುಖ್ಯವಾದುದು ಎಂದು ಸ್ನೇಹಿತರು ತಿಳಿಸಿದರು. ಅದಕ್ಕಾಗಿ ಬೇಯಿಸಿದ ಮೊಟ್ಟೆ ಸೇವಿಸಿದೆ. ಒಂದು ವೇಳೆ ಸಸ್ಯಹಾರಿಗಳಾಗಿದ್ದಲ್ಲಿ ಮೊಳಕೆ ಕಾಳುಗಳು, ಸೋಯಾ ಅನುಕೂಲವಾಗಬಹುದು. ಕುಡಿಯಲು ಹದ ಬಿಸಿ ನೀರು, 5 ದಿನಗಳ ನಂತರ ಸಾಕಷ್ಟು ಹಣ್ಣುಗಳನ್ನೂ ಸಹ ಉಪಯೋಗಿಸಿದೆ. ಬಾಯಿಯ ರುಚಿ ಹೋಗಿದ್ದರು ಸಹ ಆಹಾರ ಅತೀ ಮುಖ್ಯವಾಗಿರುವ ಕಾರಣ ಸೇರದಿದ್ದರೂ ಸಮಾಧಾನವಾಗಿ ಸ್ವೀಕರಿಸಿದೆ. 6) ಒಂದೇ ಮನೆಯಲ್ಲಿದ್ದರೂ ಪತ್ನಿಗೆ ಸೋಂಕು ಹರಡದಂತೆ ತಡೆಯುವಲ್ಲಿ ಯಶಸ್ವಿಯಾದೆ : ನನಗೆ ಜ್ವರ ಪ್ರಾರಂಭವಾಗಿ 5-6 ದಿನಗಳ ನಂತರ ತೀವ್ರ ನಿತ್ರಾಣನಾದ ಕಾರಣ ಪತ್ನಿಗೆ ಬರ ಹೇಳಿದೆ. ಆದರೆ ಒಂದೇ ಮನೆಯಲ್ಲಿದ್ದರೂ ಆಕೆಗೆ ಸೋಂಕು ತಗಲದಂತೆ ಎಚ್ಚರವಾಗಿರಲು ಈ ಕೆಳಕಂಡ ಅಂಶಗಳನ್ನು ಅನುಸರಿಸಿದೆ.

• ಹತ್ತಿರದಲ್ಲಿ ನಿಂತು ಮಾತನಾಡುವುದು ನಿಲ್ಲಿಸಿದೆ, ಅವಶ್ಯಕತೆ ಇದ್ದಾಗ ದೂರದಲ್ಲಿ ಮಾಸ್ಕ್ ಧರಿಸಿ ಅಥವಾ ಬೇರೆ ರೂಮಿನಲ್ಲಿದ್ದು ವಿಷಯ ತಿಳಿಸುತ್ತಿದ್ದೆ. • ನಾನು ಬೇರೆಯ ಒಂದು ರೂಮಿಗೆ ಸೀಮಿತನಾದೆ. • ಟಿ.ವಿ. ನೋಡುವ ವೇಳೆ ನನಗಿಂತ 5-6 ಮೀಟರ್ ದೂರದಲ್ಲಿ ಆಕೆ ಕೂರುತ್ತಿದ್ದಳು. • ಕೈಯನ್ನು ಮುಖಕ್ಕೆ ಮುಟ್ಟಿಕೊಳ್ಳಬಾರದೆಂದು ಪದೇ ಪದೇ ನೆನಪಿಸುತ್ತಿದ್ದೆ. ಏಕೆಂದರೆ ಕೈಯಲ್ಲಿ ಹಿಡಿದ ವೈರಾಣುಗಳು ಮೂಗು ಬಾಯಿಗೆ ತಾಗಬಾರದೆಂಬ ಉದ್ದೇಶ ಇತ್ತು. • ನನ್ನ ತಟ್ಟೆ – ಲೋಟಗಳನ್ನು ಬೇರೆಯೇ ಇಟ್ಟುಕೊಂಡೆ, ಊಟದ ಸಮಯದಲ್ಲಿ ಒಂದು ಜಾಗದಲ್ಲಿ ಇಡುತ್ತಿದ್ದೆ. ಆಕೆ ಬಡಿಸಿದ ನಂತರ ಬೇರೆಡೆ ತೆಗೆದುಕೊಂಡು ಹೋಗಿ ಸೇವಿಸುತ್ತಿದ್ದೆ. • ನನ್ನ ಬಟ್ಟೆ, ಪಾತ್ರೆಗಳನ್ನು ನಾನೇ ತೊಳೆದುಕೊಂಡೆ. • ಕಸ ಗುಡಿಸುವ ವೇಳೆ ಧೂಳು ಮೇಲೆದ್ದು, ಧೂಳಿನ ಮುಖಾಂತರ ವೈರಾಣು ಅವಳ ದೇಹ ಪ್ರವೇಶಿಸಬಾರದು ಎಂಬ ಕಾರಣಕ್ಕೆ, ಮಾಸ್ಕ್ ಧರಿಸಲು ಸಲಹೆ ನೀಡಿದೆ. • ಬಚ್ಚಲು, ಶೌಚಾಲಯ ಬೇರೆ ಬಳಸಿದೆ, ಒಂದೇ ಬಚ್ಚಲು ಬಳಸಿದರೂ ಅದು ಅಷ್ಟೊಂದು ಸಮಸ್ಯೆಯಾಗಲಾರದೆಂದು ಕೆಲವು ವೈದ್ಯರು ಹೇಳಿರುವುದು ಕೇಳಿದ್ದೇನೆ. • ಇದಾದ 14 ದಿನಗಳ ನಂತರ ಊರಿನಲ್ಲಿದ್ದ 3 ವರ್ಷದ ಮಗಳು ನಮ್ಮನ್ನು ನೆನೆಸಿಕೊಂಡು ಹಟ ಹಿಡಿದಾಗ ಪತ್ನಿಗೆ ಸ್ಯಾಂಪಲ್ ಪರೀಕ್ಷೆಗೆ ನೀಡಲು ತಿಳಿಸಿ Negative ಎಂದು ದೃಢಪಡಿಸಿಕೊಂಡ ನಂತರವೇ ಊರಿಗೆ ಕಳಿಸಿದೆ.

7) ಹಿರಿಯರ , ಹಿತೈಷಿಗಳ ಆಶೀರ್ವಾದವೂ ಮುಖ್ಯ : ನಾವು ಸುಸ್ಥಿತಿಯಲ್ಲಿದ್ದಾಗ ಜನರೊಂದಿಗೆ ನಮ್ಮ ನಡೆ ನುಡಿಗಳು, ಸೇವೆ , ಆತ್ಮೀಯತೆ, ವಿನಯತೆ, ಇವೆಲ್ಲವೂ ಉತ್ತಮವಾಗಿದ್ದಲ್ಲಿ ನಮ್ಮ ಕಷ್ಟದ ಪರಿಸ್ಥಿತಿಗಳಲ್ಲಿ ಅಶೀರ್ವಾದದ ಮೂಲಕ ನಮ್ಮನ್ನು ಕಾಪಾಡುತ್ತವೆ. ನನ್ನ ಆರೋಗ್ಯ ಕೆಟ್ಟಾಗ ನನ್ನ ತಂದೆ ತಾಯಿಗಳ ಹಾರೈಕೆಯ ಜೊತೆಗೆ ವೀಣಕ್ಕನಂತಹ ನೂರಾರು ಜನ ಮಂದಿರಗಳಲ್ಲಿ ಪೂಜಿಸಿದರು. ತರಕಾರಿ ಬಾಯಮ್ಮ ಚರ್ಚ್ ನಲ್ಲಿ ನನಗೆ ಶೀಘ್ರ ಗುಣಮುಖವಾಗಲೆಂದು ಬೇಡಿಕೊಂಡರೆಂದು ಗೊತ್ತಾದಾಗ ಇವೆಲ್ಲವೂ ನಾನು ಗಳಿಸಿದ ಆಸ್ತಿ ಎಂದು ನನಗರಿವಾಯಿತು. ಖಂಡಿತ ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಬೇಗನೆ ಗುಣಮುಖನಾಗಿದ್ದೇನೆ. ಕೊನೆಯಲ್ಲಿ ನನಗೆ ಅನಿಸಿದ್ದು “ನನಗಲ್ಲದಿದ್ದರೂ ನಮ್ಮನ್ನು ನಂಬಿದ ವ್ಯವಸ್ಥೆಗಾಗಿ ” ಇನ್ನು ಮುಂದೆ ಜಾಗರೂಕನಾಗಿರಬೇಕು.*ಸಾಧ್ಯವಾದಷ್ಟು ಮನೆಯಲ್ಲೇ ಇರಿ, ಹೊರಬಂದಾಗ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ. *ಎಲ್ಲರಿಗೂ ಶುಭವಾಗಲಿ, ನಮಸ್ಕಾರಗಳು

-.ಡಾ. ಯುವರಾಜ ಹೆಗಡೆಪಶುವೈದ್ಯರು, ತೀರ್ಥಹಳ್ಳಿ

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ,...

ತರ್ತು ಪರಿಸ್ಥಿತಿ ಜಾರಿ ತಪ್ಪಲ್ಲ!

RSS ಕೂಡ ತುರ್ತು ಪರಿಸ್ಥಿತಿ ಬೆಂಬಲಿಸಿತ್ತು: MLC ಬಿ.ಕೆ. ಹರಿಪ್ರಸಾದ್ ಪ್ರಧಾನಿ ಮೋದಿಯವರು ಸಾಂವಿಧಾನಿಕ ಹುದ್ದೆಯನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ ವಿಚಾರ. ಬಿಕೆ...

dr.vaidya feliciated @ ದೇರಳಕಟ್ಟೆಯಲ್ಲಿ ಡಾ. ಶ್ರೀಧರ್‌ ವೈದ್ಯರಿಗೆ ಸನ್ಮಾನ

ಸಿದ್ದಾಪುರ: ದೇರಳಕಟ್ಟೆಯ ಕೆ. ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿ ಆಶ್ರಯದಲ್ಲಿ ವೈದ್ಯಕೀಯ ದಿನಾಚರಣೆ ಹಿನ್ನಲೆಯಲ್ಲಿ ಹೆಸರಾಂತ ವೈದ್ಯ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಮುಖ್ಯಸ್ಥ ಡಾ....

ಹಾಲು ಉತ್ಫಾದಕರ ಋಣ ತೀರಿಸಲು ಸಾಧ್ಯವಿಲ್ಲ… -ಪರಶುರಾಮ ನಾಯ್ಕ‌

ಹಾಲು ಒಕ್ಕೂಟದ ನನ್ನ ಸೇವೆ ಅನುಲಕ್ಷಿಸಿ ಎರಡನೇ ಬಾರಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಖುಷಿಯಾಗಿದೆ ಎಂದು ಧಾರವಾಡ ಗದಗ ಉತ್ತರಕನ್ನಡ ಹಾಲು ಒಕ್ಕೂಟದ ನೂತನ...

ಬಾಬಾ ಜಲಪಾತ ಎಲ್ಲಿದೆ ಗೊತ್ತೆ?

ಭೋರ್ಗರೆಯುತ್ತಿದೆ ಕುಂಬ್ವಾಡೆ ಜಲಪಾತ: ವೈಭವ ನೋಡಲು ಪ್ರವಾಸಿಗರ ದಂಡು ಬೆಳಗಾವಿಯಿಂದ ಸುಮಾರು 87 ಕಿಮೀ ದೂರದಲ್ಲಿ ಖಾಸಗಿ ಒಡೆತನದ ಭೂಮಿಯಲ್ಲಿ ಈ ಜಲಪಾತವಿದೆ. ಕುಂಬ್ವಾಡೆ...

ಕನ್ನಡ ಓದಲು, ಬರೆಯಲು ಬಾರದ ಸಚಿವ ಮಧು ಬಂಗಾರಪ್ಪ ಸರ್ಕಾರಕ್ಕೆ ಕಪ್ಪು ಚುಕ್ಕೆ: ಕುಂ ವೀರಭದ್ರಪ್ಪ ವ್ಯಂಗ್ಯ

11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿದೆ ಎಂಬ ಕಾರಣಕ್ಕೆ ಕನ್ನಡ ಶಾಲೆಗಳನ್ನು ಬಂದ್ ಮಾಡುವ...

Latest Posts

ಹೆಣ್ಣು ಮಗುವಿಗೆ ಮುದ್ದಾದ ಹೆಸರುಗಳು ಅ – ಅಂಕಿತಾ ಅನ್ವಿತಾ ಅಮೃತಾ, ಅಮೃತವರ್ಷಿಣಿ,

A -ಅನಿತಾ, ಅಸ್ಮಿತಾ, ಅಖಿಲಾ, ಆಕಾಂಕ್ಷಾ ಅಥಿತಿ, ಅ ಲೈಕಾ ಅಧಿತಿ, ಅರುಂಧತಿ, ಆರ್ವಿ, ಆತ್ರಿ, B- ಭವ್ಯ, ಭವಾನಿ, ಬಾಮಿನಿ, ಬರಣಿ, ಭುವಿ, ಬಿಂದು, ಬಿಂದುಶ್ರೀ ಭುವನಶ್ರೀ, c – ಚಿರಶ್ಮಿ, ಚಿತ್ರ, ಚಿತ್ರಪ್ರಭಾ, ಚಿಂತನಾ, ಚಿನ್ಮಯಿ, ಚಿಂಗಾರಿ, ಚಿತ್ತಾಕರ್ಶಿನಿ, ಚಿತ್ತಾಕರ್ಶಿಣಿ, D- ಧರಣಿ, ಧನ್ವಿತಾ, ಧ🎇ಮನಿ, dhanamani ಧಾರಿಣಿ, ದಮಯಂತಿ ,ಧೃತಿ,ದುರ್ಗಾ,...

Recommended For You

About the Author: Kanneshwar Naik

Leave a Reply

Your email address will not be published. Required fields are marked *