
ಸರ್ಕಾರ ನ್ಯಾಯ ಒದಗಿಸದಿದ್ದಾಗ ನ್ಯಾಯಾಲಯದ ಮೊರೆ ಹೋಗುವುದು ಜನಸಾಮಾನ್ಯರು,ಸಾರ್ವಜನಿಕರ ಆಯ್ಕೆ ಆದರೆ ನ್ಯಾಯಾಲಯದ ಆದೇಶವೇ ಜನರಿಗೆ ತೂಗುಗತ್ತಿಯಾದರೆ ಧರೆಹೊತ್ತಿ ಉರಿದೊಡೆ ಓಡುವುದೆತ್ತ ಎನ್ನುವ ಸ್ಥಿತಿ-ಪರಿಸ್ಥಿತಿ.
ಇಂಥ ಕಠಿಣ ಪರಿಸ್ಥಿತಿಗೆ ಎದುರಾಗಬೇಕಾದ ಅನಿವಾರ್ಯ ಸ್ಥಿತಿ ಈಗ ಉತ್ತರ ಕನ್ನಡ ಜಿಲ್ಲೆಯ ಅರಣ್ಯ ಅತಿಕ್ರಮಣದಾರರದ್ದಾಗಿದೆ.
ಅದೇನೆಂದರೆ ಜೂನ್ 7 ರಂದು ಹರಿಯಾಣ ರಾಜ್ಯದ ಫರಿದಾಬಾದ್ ಜಿಲ್ಲೆಯ ಹತ್ತು ಸಾವಿರ ಜನವಸತಿ ಇದ್ದ ಲುಕ್ಕಾರ್ಪುರಕೋರಿ ಎನ್ನುವ ಪ್ರದೇಶದ ಜನರನ್ನು ಸಾರಾಸಗಾಟು ಒಕ್ಕಲೆಬ್ಬಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಅರಣ್ಯಪ್ರದೇಶದಲ್ಲಿ ಅನಧೀ ಕೃತವಾಗಿ ಜನವಸತಿ ಮಾಡಿಕೊಂಡಿರುವ ಜನರಿಗೆ ಯಾವುದೇ ರಿಯಾಯತಿ ನೀಡದೆ ಶೀಘ್ರ ಒಕ್ಕಲೆಬ್ಬಿಸಲು ಸುಪ್ರೀಂಕೋರ್ಟ್ ಮಾಡಿರುವ ಆದೇಶ ಸಾವಿರಾರು ಮೈಲು ದೂರದ ಉತ್ತರ ಕನ್ನಡದ ಜನರನ್ನು ಕಂಗೆಡಿಸಲು ಪ್ರಬಲ ಕಾರಣವಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 85 ಸಾವಿರ ಕುಟುಂಬಗಳ 5 ಲಕ್ಷಕ್ಕಿಂತ ಹೆಚ್ಚು ಜನ ಅರಣ್ಯ ಅತಿಕ್ರಮಣದಾರರು.
ಇವರಲ್ಲಿ ಬಹುತೇಕರು ಕಳೆದ 40-50 ವರ್ಷ ಗಳಿಂದ ತಮ್ಮ ನೆಲದ ಹಕ್ಕಿಗಾಗಿ ಕಾದು ಕೂತಿದ್ದಾರೆ. ಈ ಅರಣ್ಯಭೂಮಿ ಸಾಗುವಳಿದಾರರ ಬಹುತೇಕ ಪ್ರಕರಣಗಳು ಕೆಳಹಂತದ ಹಂಗಾಮಿ ನ್ಯಾಯಾಲಯಗಳಿಂದ ಸುಪ್ರಿಂಕೋರ್ಟ್ ನಲ್ಲಿ ಕೂಡಾ ತನಿಖೆಯಲ್ಲಿವೆ. ಈ ಪ್ರಕರಣಗಳಿಗೆ ಹರಿಯಾಣ ಪ್ರಕರಣ ಆಧರಿಸಿ ತೀರ್ಪು ನೀಡಿದರೆ ಅರಣ್ಯ ಅತಿಕ್ರಮಣದಾರರು ನಿರ್ವಸತಿಗರು, ಭೂ ರಹಿತರು ಆಗುತ್ತಾರೆ.
ಈ ಬಗ್ಗೆ ಕಳೆದ ಮೂವತ್ತು ವರ್ಷಗಳಿಂದ ಹೋರಾಡುತ್ತಿರುವ ನ್ಯಾಯವಾದಿ ಎ. ರವೀಂದ್ರ ಈ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯನ್ನೂ ದಾಖಲಿಸಿದ್ದಾರೆ. ಈ ಅಂಶಗಳ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ಅರಣ್ಯಭೂಮಿ ಸಾಗುವಳಿದಾರರಿಗೆ ಕೇಂದ್ರ ಸರ್ಕಾರ ಹೊಸ ರಾಷ್ಟ್ರೀಯ ನೀತಿ ಜಾರಿ ಮಾಡುವ ಮೂಲಕ ರಕ್ಷಣೆ ನೀಡಬಹುದು. ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮುತುವರ್ಜಿಯಿಂದ ಜಿಲ್ಲೆಯ ಅರಣ್ಯ ಭೂಮಿ ಸಾಗುವಳಿದಾರರನ್ನು ರಕ್ಷಿಸಬೇಕೆಂದು ಎ.ರವೀಂದ್ರ ಆಗ್ರಹಿಸಿದ್ದಾರೆ.
ಅರಣ್ಯ, ಪರಿಸರದ ವಿಚಾರದಲ್ಲಿ ಬಿಗಿನಿಲುವು ತಳೆಯುವ ಸುಪ್ರೀಂಕೋರ್ಟ್ ಸರ್ಕಾರದ ವಿರೋಧ, ಸರ್ಕಾರದ ಹೊಸ ರಾಷ್ಟ್ರೀಯ ನೀತಿ ಇಲ್ಲದೆ ಅರಣ್ಯ ಅತಿಕ್ರಮಣದಾರರಿಗೆ ವಿನಾಯಿತಿ, ರಿಯಾಯತಿ ನೀಡುವ ಸಾಧ್ಯತೆಗಳು ಶೂನ್ಯ. ಹಾಗಾಗಿ ಉತ್ತರ ಕನ್ನಡ ಜಿಲ್ಲೆಯ ಒಟ್ಟೂ 16 ಲಕ್ಷ ಜನಸಂಖ್ಯೆಯಲ್ಲಿ ಮೂರರ ಒಂದು ಭಾಗ ಜನಸಂಖ್ಯೆ ಅರಣ್ಯ ಅತಿಕ್ರ ಮಣದಾರರಿರುವುದರಿಂದ ಜಿಲ್ಲೆಯ ಮುಂದಿನ ವಿದ್ಯಮಾನ ಊಹೆಗೆ ನಿಲುಕದ್ದು ಈಗಿರುವ ಉತ್ತರ ಕನ್ನಡ ಜಿಲ್ಲೆಯ ಲಕ್ಷಾಂತರ ನಿರಾಶ್ರಿ ತರೊಂದಿಗೆ ಅರಣ್ಯದಿಂದ ಒಕ್ಕಲೆಬ್ಬಿಸುವವರೂಸೇರಿದರೆ ಜಿಲ್ಲೆ ನಿರಾಶ್ರಿತರ ಜಿಲ್ಲೆಯಾಗುವ ಅಪಾಯಕ್ಕೂ ಒಡ್ಡಿಕೊಳ್ಳಲಿದೆ.
