ರಾಜ್ಯ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರತಿನಿಧಿಸುವ ಶಿರಸಿ-ಸಿದ್ಧಾಪುರ ಕ್ಷೇತ್ರದಾದ್ಯಂತ ಅಸಮತೋಲನ,ಅಸಮರ್ಪಕ ಅನುದಾನ ಹಂಚಿಕೆ ನಡೆಯುತ್ತಿದೆ ಎಂದು ತಕರಾರು ಎತ್ತಿರುವ ಸಿದ್ಧಾಪುರ ಬ್ಲಾಕ್ ಕಾಂಗ್ರೆಸ್ ಈ ಬಗ್ಗೆ ಜನಾಂದೋಲನಕ್ಕೆ ಸಿದ್ಧವಾಗುತ್ತಿದೆ. ದೇಶದ ಒಕ್ಕೂಟ ಸರ್ಕಾರ ಮತ್ತು ರಾಜ್ಯ ಸರ್ಕಾರ ನಡೆಸುತ್ತಿರುವ ಬಿ.ಜೆ.ಪಿ. ಪಕ್ಷ ತಾನು ನಂಬುವ ಅಸಮಾನತೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ಬಿ.ಜೆ.ಪಿ. ಆಡಳಿತದ ಸರ್ಕಾರಗಳ ವಿಫಲತೆ, ಸ್ವಜನಪಕ್ಷಪಾತ ಸೇರಿದ ಅಂಧಾ ದರ್ಬಾರಿಗೆ ನಮ್ಮ ಬಳಿ ನೂರಾರು ದಾಖಲೆ, ಪ್ರಶ್ನೆಗಳಿವೆ. ಅವುಗಳಲ್ಲಿ ಕೆಲವನ್ನಾದರೂ ನಾವು ಸಾರ್ವಜನಿಕ ಹಿತಾಸಕ್ತಿಯಿಂದ ಕೇಳಲೇಬೇಕಾಗುತ್ತದೆ. ರಾಜ್ಯ, ದೇಶದ ವಿದ್ಯಮಾನಗಳಿಗಿಂತ ಮುಂಚಿತವಾಗಿ ಸಿದ್ಧಾಪುರ ತಾಲೂಕಿನ ಉತ್ತರ ಕನ್ನಡ ಜಿಲ್ಲೆಯ ಸಮಸ್ಯೆಗಳತ್ತ ಬೆಳಕು ತೋರುತಿದ್ದದೇವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರ ಪರವಾಗಿ ಕಾಂಗ್ರೆಸ್ ನಿಂದ ಶಾಸಕರಿಗೆ ಹತ್ತು ಪ್ರಶ್ನೆಗಳು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮಳಲವಳ್ಳಿ ತಕರಾರು ಎತ್ತಿದ್ದಾರೆ. ಅವರು ಹತ್ತು ಪ್ರಶ್ನೆಗಳು ಕೆಲವು ಕಂತುಗಳಲ್ಲಿ ಪ್ರಕಟವಾಗುತ್ತಿವೆ.
ಶಾಸಕರು, ಸಂಸದರು ತಮ್ಮ ಕ್ಷೇತ್ರವನ್ನು ಸಮಾನತೆಯ ಭಾವದಲ್ಲಿ ನೋಡಬೇಕು. ಈ ಸಾಮಾಜಿಕ, ಸಾರ್ವಜನಿಕ ಶಿಸ್ತು ಶಾಸಕ, ಸಂಸದರಿಗಿಂತ ಮುಖ್ಯಮಂತ್ರಿಗಳು,ವಿಧಾನಸಭಾ ಅಧ್ಯಕ್ಷರಿಗೆ ಅನ್ವಯಿಸುತ್ತದೆ. ರಾಜ್ಯ ವಿಧಾನಸಭಾ ಅಧ್ಯಕ್ಷರೂ, ಸ್ಥಳಿಯ ಶಾಸಕರೂ ಆದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರವಾಹ ಪರಿಹಾರ ಅನುದಾನದ ನಿಧಿಯ ೧೦ ಕೋಟಿ ರೂಪಾಯಿಗಳ ಕಾಮಗಾರಿಗಳನ್ನು ಅಣಲೇಬೈಲ್ ಜಿ.ಪಂ. ಕ್ಷೇತ್ರಕ್ಕೆ ಮಾತ್ರ ಬಹುತೇಕ ಹಂಚಿರುವುದ್ಯಾಕೆ?
ತಾಲೂಕಿನಲ್ಲಿ ನೀರಾವರಿ ಇಲಾಖೆಯ ಕಾಮಗಾರಿಗಳಿಂದ ನೀರಾವರಿ,ಕೃಷಿ ಅನುಕೂಲದ ಕೆಲಸಗಳನ್ನು ಮಾಡಬೇಕು ಆದರೆ ಶಾಸಕರು ೨-೩ ಮನೆಗಳಿರುವ ಕಡೆ ಬಾಂದಾರಗಳನ್ನು ನಿರ್ಮಿಸಿ,ಅವಶ್ಯವಿರುವ ಕಡೆ ಪ್ರಜ್ಞಾಪೂರ್ವಕ ಕುರುಡು ಪ್ರದರ್ಶಿಸುವುದೇಕೆ ಎಂದು ಪ್ರಶ್ನಿಸಿ, ಮಳೆಅನಾಹುತಗಳಾಗಲಿ,ನೀರಿನ ಅವಶ್ಯಕತೆಗಳಿರಲಿ ಈ ತೊಂದರೆಗಳು ಅಣಲೇಬೈಲ್ ಕ್ಷೇತ್ರಕ್ಕಿಂತ ದೊಡ್ಮನೆ ಮತ್ತು ಹಲಗೇರಿ ಕ್ಷೇತ್ರಗಳಲ್ಲಿ ಹೆಚ್ಚಿವೆ. ಹೆಚ್ಚು ಅನಿವಾರ್ಯವಿರುವ, ಗರಿಷ್ಠ ಜನರಿಗೆ ಅನುಕೂಲವಾಗುವ ದೊಡ್ಮನೆ, ಹಲಗೇರಿ ಜಿ.ಪಂ. ಕ್ಷೇತ್ರಗಳನ್ನು ಕಡೆಗಣಿಸಿ ಅಣಲೇಬೈಲ್ ಕ್ಷೇತ್ರಕ್ಕೆ ಮಾತ್ರ ಸಿಂಹಪಾಲು ನೀಡುವ ನಿಮ್ಮ ಪಕ್ಷಪಾತದಿಂದ ತಾಲೂಕಿನ ಜನರಿಗೆ ಅನ್ಯಾಯವಾಗುವುದಿಲ್ಲವೆ? ಎಂದು ಪ್ರಶ್ನಿಸಿದ್ದಾರೆ.