



ಆರ್.ವಿ.ದೇಶಪಾಂಡೆ ರಾಜ್ಯ ರಾಜಕಾರಣದ ಮಹತ್ವದ ಹೆಸರು. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ-ಮುಂಡಗೋಡು ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದ ಆರ್.ವಿ.ದೇಶಪಾಂಡೆ ತಿರುಗಿ ನೋಡಿದ್ದೇ ಇಲ್ಲ. ಕಾಂಗ್ರೆಸ್ ನಿಂದ ಜನತಾದಳ, ಲೋಕಶಕ್ತಿ,ಮರಳಿ ಕಾಂಗ್ರೆಸ್ ದೇಶಪಾಂಡೆ ಹೋದ ಕಡೆ ಅಧಿಕಾರ ಬರುತ್ತೋ,ಅಧಿಕಾರ ಅರಸಿ ದೇಶಪಾಂಡೆ ಹೋದಾಗಲೆಲ್ಲಾ ಅವಕಾಶ ದೊರೆಯುತ್ತೋ ಎನ್ನುವುದೇ ಒಗಟು. ಹಳಿಯಾಳದ ಯುವ ವಕೀಲ ರಘುನಾಥ ವಿಶ್ವನಾಥ ದೇಶಪಾಂಡೆ ೨೫ ರ ಹರೆಯದಲ್ಲೇ ರಾಜಕೀಯ ಪ್ರವೇಶಿಸಿದರು ಅಂದಿನಿಂದ ಈವರೆಗೆ ದೇಶಪಾಂಡೆ ೫ ದಶಕಗಳ ಕಾಲ ರಾಜ್ಯ ರಾಜಕಾರಣದ ಭಾಗವಾಗಿ ಈವರೆಗೆ ೮ ಬಾರಿ ಶಾಸಕರಾಗಿ, ಸಚಿವರಾಗಿ, ಪಕ್ಷದ ರಾಜ್ಯ ಅಧ್ಯಕ್ಷರಾಗಿ, ವಿರೋಧಪಕ್ಷದ ನಾಯಕರಾಗಿ ಚಾಪು ಮೂಡಿಸಿದ್ದಾರೆ.
೫೦ ವರ್ಷಗಳ ತಮ್ಮ ರಾಜಕೀಯದ ಸುದೀರ್ಘ ಅವಧಿಯಲ್ಲಿ ಹಲವು ಬಾರಿ ತಾವು ಬಯಸಿದ ಖಾತೆ ಪಡೆದು ಹೆಸರು ಮಾಡಿದ್ದಾರೆ. ಹಳಿಯಾಳ ಕ್ಷೇತ್ರ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಅಭಿವೃದ್ಧಿ ಕೆಲಸಗಳ ಕಾಮಗಾರಿ ಫಲಕಗಳ ಮೇಲೆ ತಮ್ಮ ಹೆಸರು ಛಾಪಿಸಿರುವ ದೇಶಪಾಂಡೆ ತಮ್ಮ ಗುರುವಿಗಾಗಿ ತಮ್ಮ ಕ್ಷೇತ್ರ-ಹುದ್ದೆಗಳನ್ನೆಲ್ಲಾ ಬಿಟ್ಟುಕೊಟ್ಟ ಧೀಮಂತ. ಜನತಾದಳದಿಂದ ರಾಮಕೃಷ್ಣ ಹೆಗಡೆಯವರನ್ನು ಉಚ್ಛಾಟಿಸಿದ್ದಾಗ ಗುರು ಹೆಗಡೆಯವರೊಂದಿಗೆ ಜನತಾದಳ ಬಿಟ್ಟುಬಂದ ದೇಶಪಾಂಡೆ ಗುರುವಿಗಾಗಿಮಿಡಿದ ಶಿಷ್ಯ.
ರಾಜಕೀಯ ಗರಡಿಯ ಬಿಗಿಪಟ್ಟುಗಳ ೫೦ ವರ್ಷದ ಸುವರ್ಣ ಅನುಭವಕ್ಕೂ ತಮ್ಮ ಬದುಕಿನ ಅಮೃತಮಹೋತ್ಸವಕ್ಕೂ ಸರಿಯಾಗಿ ೭೫ ವರ್ಷಗಳ ಅವಧಿಯಲ್ಲಿ ೫೦ ವರ್ಷ ನಿರಂತರ ರಾಜಕಾರಣ ಮಾಡಿರುವ ದೇಶಪಾಂಡೆ ಈಗಲೂ ದಣಿದಿಲ್ಲ. ಸರ್ಕಾರ ಬರಲಿ, ಅಧಿಕಾರ ಇರಲಿ, ಇಲ್ಲದಿರಲಿ ಸರ್ಕಾರ, ಪಕ್ಷದ ವಲಯದಲ್ಲಿ ವರ್ಚಸ್ವಿ ನಾಯಕರಾಗಿ ಹೆಸರುಮಾಡಿರುವ ಇವರ ವಿಶೇಶವೆಂದರೆ ಪಕ್ಷ,ಸಿದ್ಧಾಂತಗಳ ಬಗ್ಗೆ ಮಾತನಾಡುತ್ತಾರೆಯೆ ವಿನ: ದೇಶಪಾಂಡೆ ಯಾರ ವಯಕ್ತಿಕ ವಿಚಾರದಲ್ಲಿ ಮಾತನಾಡುವ ವ್ಯಕ್ತಿಯಲ್ಲ. ಜಿಲ್ಲೆಯ ತಂತ್ರಗಾರಿಕೆಯ ಮೇಲ್ವರ್ಗ, ಬಹುಸಂಖ್ಯಾತ ಹಿಂದುಳಿದ ವರ್ಗ ಎಲ್ಲರ ನಡುವೆ ಅಲ್ಪಸಂಖ್ಯಾತನಾಗಿ ಜನಪ್ರತಿನಿಧಿಯಾಗುತ್ತಾ ಎಲ್ಲರ ಅಚ್ಚರಿಗೆ ಕಾರಣವಾದ ದೇಶಪಾಂಡೆ ಈಗ ತಮ್ಮ ಮಗ ಪ್ರಶಾಂತ್ ದೇಶಪಾಂಡೆ ಮೂಲಕ ರಾಜಕೀಯ ಪ್ರಯೋಗಕ್ಕಿಳಿಯುವ ಯೋಚನೆಯಲ್ಲಿದ್ದಾರೆ. ನಿರಂತರ ಅಧಿಕಾರ,ಅನುಕೂಲಗಳ ಸುಖ ಕಂಡರೂ ಅದನ್ನು ಅಮಲಾಗಿಸಿಕೊಳ್ಳದ ದೇಶಪಾಂಡೆ ಈಗಲೂ ತಮ್ಮ ಸಂಸ್ಥೆ, ಟ್ರಸ್ಟ ಗಳ ಮೂಲಕ ಸಮಾಜಸೇವೆಯಲ್ಲಿದ್ದಾರೆ. ಕೋವಿಡ್ ಅವಧಿ, ಪ್ರವಾಹ ಪರಿಸ್ಥಿತಿಗಳಲ್ಲಿ ಪರ್ಯಾಯ ಸರ್ಕಾರದ ರೀತಿ ಕೆಲಸ ಮಾಡಿರುವ ದೇಶಪಾಂಡೆ ಅಪ್ಪ ಮಕ್ಕಳು ತಮ್ಮ ಕುಟುಂಬದ ೫ ದಶಕಗಳ ರಾಜಕೀಯ ಪರಂಪರೆಯ ಮುಂದುವರಿಕೆಗೆ ಪಣ ತೊಟ್ಟಂತಿದೆ. ಅಸಂಖ್ಯ ವರ್ಷಗಳ ರಾಜಕೀಯ ಶಕ್ತಿಯಿಂದ ತಮ್ಮ ವಲಯ ಬೆಳೆಸಿಕೊಂಡಿರುವ ಮಾಜಿ ಸಚಿವ ದೇಶಪಾಂಡೆ ಮಾರ್ಚ್ ೧೬ ರಂದು ತಮ್ಮ ೭೫ ನೇ ಜನ್ಮದಿನ ಆಚರಿಸಿಕೊಳ್ಳುತಿದ್ದಾರೆ.
